ಒಂದ್ಸಲ ಚಪ್ಪಲಿ ಕಿತ್ತೊದ್ರೆ ಹೊಲಿಗೆ ಹಾಕಿಸಿಕೊಂಡು ಮತ್ತೆ ಕಾಲಿಗೆ ಮೆಟ್ಟಿಕೊಳ್ಳಬಹುದು. ಅದೇ ಚಪ್ಪಲಿ ಎರಡನೇ ಸಲ ಕಿತ್ತೊದ್ರೆ ಇರಲಿ ಅಂತಾ ಮತ್ತೊಮ್ಮೆ ಹೊಲಿಗೆ ಹಾಕಿಸಿಕೊಂಡು ಬಳಸಬಹುದು. ಆದ್ರೆ ಪದೇ ಪದೇ ಚಪ್ಪಲಿ ಕಿತ್ತೊದ್ರೆ, ನಾವು ಒಂದಿನ ಬೇಸತ್ತು ಆ ಚಪ್ಪಲಿಗಳನ್ನು ಬಿಸಾಕಿ ಬಿಡ್ತೀವಿ ತಾನೇ? ಅದೇ ರೀತಿ ನಾವು ಸಂಬಂಧಗಳ ವಿಚಾರದಲ್ಲಿ ನಡೆದುಕೊಳ್ತೀವಿ.
ನಮ್ಮ ಸಂಬಂಧಗಳು ಸಹ ಒಂಥರಾ ಚಪ್ಪಲಿಗಳಿದ್ದಂತೆ. ಚಪ್ಪಲಿ ಎಂದಾಕ್ಷಣ ಮನದಲ್ಲಿ ಕೀಳು ಭಾವನೆ ತಳೆಯುವುದು ಬೇಡ. ಚಪ್ಪಲಿಗಳಿಗೆ ತಮ್ಮದೇ ಆದ ಒಂದು ಶ್ರೇಷ್ಠತೆ ಇದೆ. ರಾಮಾಯಣದಲ್ಲಿ ಭರತ ಸಿಂಹಾಸನದ ಮೇಲೆ ರಾಮನ ಚಪ್ಪಲಿಗಳನ್ನಿಟ್ಟು ರಾಜ್ಯಭಾರ ಮಾಡಿದ್ದು ನೆನಪಿರಲಿ. ಮಹಾಭಾರತದಲ್ಲಿ ದುರ್ಯೋಧನ ಒಂದಿನ ಕರ್ಣನ ಚಪ್ಪಲಿಗಳಿಗೆ ನಮಸ್ಕರಿಸಿ ತನ್ನ ಪಾಪವನ್ನು ಪರಿಹರಿಸಿಕೊಂಡ ಘಟನೆ ನಿಮಗೆ ಗೊತ್ತಿರಲಿ. ಚಪ್ಪಲಿಗಳಿಗೂ ಪ್ರಾಮುಖ್ಯತೆಯಿದೆ. ಚಪ್ಪಲಿಗಳ ಮಹತ್ವ ನಿಮಗೆ ಗೊತ್ತಾಗಬೇಕಾದರೆ ಒಂದಿನ ಚಪ್ಪಲಿಗಳನ್ನು ಧರಿಸದೆ ಬರಿಗಾಲಲ್ಲಿ ನಡೆದಾಡಿ. ಆಮೇಲೆ ತಾನಾಗೆ ನಿಮಗೆ ಚಪ್ಪಲಿಯ ಮಹತ್ವ ಮನದಟ್ಟಾಗುತ್ತದೆ. ಚಪ್ಪಲಿಗಳಿಲ್ಲದೆ ನಡೆಯಲಾಗುವುದಿಲ್ಲ. ಸಂಬಂಧಗಳಿಲ್ಲದೆ ಜೀವನ ಮುಂದೆ ಸಾಗಲ್ಲ.
ನಮ್ಮ ಸ್ನೇಹ ಹಾಗೂ ಪ್ರೀತಿಯ ಸಂಬಂಧಗಳು ಸಹ ಒಂದು ರೀತಿಯ ಚಪ್ಪಲಿಗಳೆ. ಹಲವು ಸಾರಿ ಸ್ನೇಹದಲ್ಲಿ ಬಿರುಕು ಮೂಡಿದಾಗ ಒಂದೆರಡು Sorry ಕೇಳ್ತೀವಿ. ಸರಿಹೋಗದಿದ್ದರೆ ಸಾಮಾನ್ಯ ಚಪ್ಪಲಿಯಂತ ತಿಳಿದು ನಮ್ಮೆದೆಯಿಂದ ತೆಗೆದು ಬಿಸಾಕ್ತೀವಿ. ಆದರೆ ಈ ಪ್ರೀತಿ ಪ್ರೇಮ ಅಂತಾ ಬಂದಾಗ ಯಾರು ಸಹ ಪ್ರೀತಿಯನ್ನು, ಸ್ನೇಹವನ್ನು ಬೀಸಾಕಿದಷ್ಟು ಸುಲಭವಾಗಿ ಬೀಸಾಕಲ್ಲ. ಯಾಕೆಂದರೆ ಪ್ರೀತಿ ಒಂಥರಾ ಬಂಗಾರದ ಚಪ್ಪಲಿಯಿದ್ದಂತೆ.
ಪ್ರೀತಿ ಎಂಬ ಬಂಗಾರದ ಚಪ್ಪಲಿಯನ್ನು ಪದೇಪದೇ ಹೊಲಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಸ್ನೇಹದಂತೆ ಸುಲಭವಾಗಿ ಬೀಸಾಕಿ ಬಿಡುವ ಧೈರ್ಯವೂ ಸಹ ನಮ್ಮಲಿಲ್ಲ. ಪ್ರೀತಿಯೆಂಬ ಬಂಗಾರದ ಚಪ್ಪಲಿ ಹರಿದುಹೋದ ಮೇಲೆ, ಅದನ್ನು ಸರಿಪಡಿಸಿಕೊಳ್ಳಲು ಶತ ಪ್ರಯತ್ನ ಮಾಡ್ತೀವಿ. ಮನಸ್ಸು ಮುರಿದವರ ಮುಂದೆ ನಮ್ಮ ಸ್ವಾಭಿಮಾನವನ್ನು ಬಿಟ್ಟು ಸಾವಿರ Sorryಗಳನ್ನು ಕೇಳ್ತಿವಿ. ಕೊನೆಗೆ ನಮ್ಮ ಪ್ರಯತ್ನ ಫಲ ಕೊಡದಿದ್ದಾಗ ಕತ್ತಲಲ್ಲಿ ಕುಂತು ಒಬ್ಬರೇ ಕಣ್ಣೀರಾಕ್ತೀವಿ. ಇಷ್ಟೆಲ್ಲ ಆದ್ರೂ ಪ್ರೀತಿಯನ್ನು ಬೀಸಾಕಲು ಮನಸ್ಸಾಗಲ್ಲ. ಯಾಕಂದರೆ ಪ್ರೀತಿ ಸ್ನೇಹದಂತೆ ಮಾಮೂಲಿ ಚಪ್ಪಲಿಯಲ್ಲ, ಪ್ರೀತಿ ಒಂದು ಬಂಗಾರದ ಚಪ್ಪಲಿ ಎಂಬ ಭಾವನೆ ನಮ್ಮೆಲ್ಲರದ್ದು.
ಎಷ್ಟೋ ಜನರಿಗೆ ಸ್ನೇಹ ಮುರಿದು ಬಿದ್ದಾಗ ಅದನ್ನು ಸರಿಪಡಿಸೋಕೆ ಸಂಯಮ, ಸಮಯ ಎರಡೂ ಇರಲ್ಲ. ಆದರೆ ಪ್ರೀತಿಯಲ್ಲಿ ಮನಸ್ಸು ಮುರಿದಾಗ ಮಾಡೋ ಕೆಲಸ ಬಿಟ್ಟು, ನಾಚಿಕೆ ಬಿಟ್ಟು ಸಿಗದವರ ಹಿಂದೆ Sorryಗಳ ಸುರಿಮಳೆ ಸುರಿಸುತ್ತಾರೆ. ಪ್ರೀತಿ ಚಿನ್ನ ಆದ್ರೆ ಸ್ನೇಹ ವಜ್ರ. ವಜ್ರದ ಬೆಲೆ ಚಿನ್ನಕ್ಕಿಂತಲೂ ಜಾಸ್ತಿಯೆಂಬುದು ತುಂಬಾ ಜನರಿಗೆ ಸಾಯೋತನಕ ಗೊತ್ತಾಗೋದೆ ಇಲ್ಲ. ಸ್ನೇಹವನ್ನು ಸಾಮಾನ್ಯ ಚಪ್ಪಲಿಯೆಂದು ಕಡೆಗಣಿಸಬೇಡಿ. ಪ್ರೀತಿಯನ್ನು ಬಂಗಾರದ ಚಪ್ಪಲಿಯೆಂದು ತಲೆ ಮೇಲಿಟ್ಟುಕೊಂಡು ಮೆರಸಬೇಡಿ. ಕೊನೆಗೆ ಒಂದು ಮಾತು, ಚಪ್ಪಲಿ ಬಂಗಾರದ್ದೆ ಆದರೂ ಅದನ್ನು ಕಾಲಿಗೇನೆ ಹಾಕಿಕೊಳ್ಳಬೇಕು. ಮುರಿದ ಪ್ರೀತಿಯನ್ನು ಮನಸ್ಸಲ್ಲಿಟ್ಟುಕೊಂಡು ಜೀವನಪೂರ್ತಿ ಕೊರಗುತ್ತೀರೊ ಅಥವಾ ಸ್ನೇಹದ ಸಂಜೀವಿನಿಯಿಂದ ಜೀವ ಉಳಿಸಿಕೊಂಡು ಸಂತೋಷವಾಗಿರುತ್ತೀರೊ ಎಂಬುದು ನಿಮಗೆ ಬಿಟ್ಟಿದ್ದು ..
ಈ ನನ್ನ ಅಭಿಪ್ರಾಯ ನಿಮಗೆ ತಪ್ಪು ಅಂತ ಅನಿಸಿದರೆ ಕ್ಷಮೆಯಿರಲಿ. ಈ ಅಂಕಣ ನಿಮಗೆ ಇಷ್ಟ ಆಗಿದ್ದರೆ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಪ್ರೇಮಕಥೆಗಳನ್ನು ಓದಲು ತಪ್ಪದೇ ನನ್ನ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ..
.jpg)


