ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada

ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada 

    ರಾಣಿ ಪದ್ಮಾವತಿ ರಜಪೂತರ ಪ್ರಸಿದ್ಧ ರಾಣಿ. ದಿಟ್ಟತನ ಹಾಗೂ ಪಾವಿತ್ರ್ಯತೆಗಾಗಿ ಇಂದಿಗೂ ಅವಳನ್ನು ನೆನೆಯಲಾಗುತ್ತದೆ.   ಅವಳನ್ನು ಪದ್ಮಿನಿ ಅಂತಲೂ ಕರೆಯುತ್ತಾರೆ. ಅವಳ ಬಗ್ಗೆ ಮಲಿಕ್ ಮಹಮದ ಜಯಸಿ ಬರೆದ ಪದ್ಮಾವತ್ ಎಂಬ ಗ್ರಂಥದಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಈಗ ಅವಳ ಜೀವನದ ಕಥೆ ಬಾಲಿವುಡನಲ್ಲಿ ಚಿತ್ರಕಥೆಯಾಗಿ ಬಿಡುಗಡೆಯಾಗುತ್ತಿದೆ.

        ರಜಪೂತರ ರಾಣಿಯಾಗುವ ಮುಂಚೆ ಪದ್ಮಾವತಿ ಸಿಂಹಳ ರಾಜ್ಯದ ರಾಜಕುಮಾರಿ. ಅವಳು ಅಪ್ರತಿಮ ಸುಂದರಿಯಾಗಿದ್ದಳು. ಅವಳ ಸೌಂದರ್ಯದ ಬಗ್ಗೆ ನಾಲ್ಕು ದಿಕ್ಕುಗಳಲ್ಲಿ ನಾನಾ ಬಗೆಯ ವರ್ಣನೆಗಳು ನಡೆಯುತ್ತಿದ್ದವು. ಯುವರಾಣಿ ಪದ್ಮಿನಿಯ ಬಳಿ ಹಿರಾಮಣಿ ಎಂಬ ಮಾತನಾಡುವ ಗಿಳಿಯಿತ್ತು. ಕಾಲ ಕೂಡಿ ಬಂದಾಗ ಸಿಂಹಳದ ರಾಜ ಪದ್ಮಿನಿಗೆ ಮದುವೆ ಮಾಡಲು ನಿರ್ಧರಿಸಿ ಯೋಗ್ಯ ವರನನ್ನು ಆರಿಸಲು ಸ್ವಯಂವರವನ್ನು ಏರ್ಪಡಿಸಿದನು.

ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada

      ಯುವರಾಣಿ ಪದ್ಮಿನಿಯ  ಮಾತನಾಡುವ ಗಿಳಿ ಹಿರಾಮಣಿಯಿಂದ ರಾಜಸ್ಥಾನದ ಚಿತ್ತೋರಿನ ರಾಜ ರತನಸಿಂಗನಿಗೆ ಅವಳ ಸೌಂದರ್ಯ ಹಾಗೂ ಸ್ವಯಂವರದ ವಿಷಯ ತಿಳಿಯಿತು. ಅವಳ ಸೌಂದರ್ಯದ ವರ್ಣನೆಗೆ ಮಾರುಹೋದ ರಾಜಾ ರತನಸಿಂಗ ಸಿಂಹಳಕ್ಕೆ ಧಾವಿಸಿದನು. ಸ್ವಯಂವರದಲ್ಲಿ ಭಾಗವಹಿಸಿ, ಸಾಕಷ್ಟು ಹರಸಾಹಸಗಳನ್ನು ಮಾಡಿ ಯುವರಾಣಿ ಪದ್ಮಿನಿಯನ್ನು ಗೆದ್ದು ವಿವಾಹವಾದನು.

     ರತನಸಿಂಗನನ್ನು ವರಿಸಿದ ನಂತರ ರಾಣಿ ಪದ್ಮಿನಿ ಪದ್ಮಾವತಿಯಾಗಿ ಚಿತ್ತೋರಗೆ ಆಗಮಿಸಿದಳು. ಅಲ್ಲಿ ಅವಳ ಸೌಂದರ್ಯಕ್ಕೆ ಎಲ್ಲರೂ ಬೆರಗಾದರು. ರಾಜಾ ರತನಸಿಂಗ ಪದ್ಮಾವತಿಯ ಸೇವೆಗಾಗಿ ಒಂದು ವಿಶೇಷವಾದ ಸೇವಕಿಯರ ತಂಡವನ್ನು ನಿಯೋಜಿಸಿದನು. ಅವಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರಾರಂಭಿಸಿದನು.

ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada 

       ರಾಣಿ ಪದ್ಮಾವತಿ ಹಾಗೂ ರಾಜಾ ರತನಸಿಂಗರ ದಾಂಪತ್ಯ ಜೀವನ ಸುಖಕರವಾಗಿ ಸಾಗಿತ್ತು.  ಒಂದಿನ ರಾಜಾ ರತನಸಿಂಗ ರಾಘವ ಚೈತನ್ಯ ಎಂಬ ರಾಜಪುರೋಹಿತನನ್ನು ರಾಜದ್ರೋಹದ ಆಪಾದನೆ ಮೇಲೆ ಗಡಿಪಾರು ಮಾಡಿದನು. ಆಗ ರಾಘವ ಚೈತನ್ಯ ರಾಜಾ ರತನಸಿಂಗನ ಮೇಲೆ ಸೇಡು ತೀರಿಸಿಕೊಳ್ಳಲು ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯೊಡನೆ ಕೈಜೋಡಿಸಿದನು. ಅಲ್ಲಾವುದ್ದೀನ್ ಖಿಲ್ಜಿಗೆ ರಾಣಿ ಪದ್ಮಾವತಿಯ ಸೌಂದರ್ಯವನ್ನು ನಾನಾ ಬಗೆಯಲ್ಲಿ ವರ್ಣಿಸಿ, ಅವಳ ಮೇಲೆ ಕಾಮದಾಸೆಯನ್ನು ಹುಟ್ಟಿಸಿದನು. ರಾಣಿ ಪದ್ಮಾವತಿಯ ಮೇಲೆ ಮೋಹಗೊಂಡ ಅಲ್ಲಾವುದ್ದೀನ್ ಖಿಲ್ಜಿ ಅವಳನ್ನು ಕಾಣಲು ಚಿತ್ತೋರಗೆ ಆಗಮಿಸಿದನು.

       ಅಲ್ಲಾವುದ್ದೀನ್ ಖಿಲ್ಜಿಯನ್ನು ಭೇಟಿಯಾಗಲು ಮೊದಲು ರಾಜಾ ರತನಸಿಂಗ ಹಾಗೂ ರಾಣಿ ಪದ್ಮಾವತಿ ಒಪ್ಪಿರಲಿಲ್ಲ. ಆಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಯುದ್ಧವಾಗಬಾರದೆಂಬ ಕಾರಣಕ್ಕೆ ರಾಣಿ ಕನ್ನಡಿಯಲ್ಲಿ ಅವನಿಗೆ ತನ್ನ ಮುಖವನ್ನು ತೋರಿಸಲು ಒಪ್ಪಿಕೊಂಡಳು. ಕನ್ನಡಿಯಲ್ಲಿ ರಾಣಿ ಪದ್ಮಾವತಿಯ ಸುಂದರವಾದ ಮುಖವನ್ನು ನೋಡಿ ಅಲ್ಲಾವುದ್ದೀನ್ ಖಿಲ್ಜಿ ಸಂಪೂರ್ಣವಾಗಿ ಅವಳ ಸೌಂದರ್ಯಕ್ಕೆ ಮಾರುಹೋದನು. ಅವಳನ್ನು ಪಡೆಯಬೇಕೆಂದು ರಾಜಾ ರತನಸಿಂಗನನ್ನು ಮೋಸದಿಂದ ಬಂಧಿಸಿದನು.

      ಅಲ್ಲಾವುದ್ದೀನ ಖಿಲ್ಜಿ ರಾಜಾ ರತನಸಿಂಗನ ಬಿಡುಗಡೆಯ ಆಮೀಷವೊಡ್ಡಿ ರಾಣಿ ಪದ್ಮಾವತಿಗೆ ನೇರವಾಗಿ ಒಂದು ರಾತ್ರಿ ಸಂಭೋಗದ ಬೇಡಿಕೆಯಿಟ್ಟನು. ಆದರೆ ರಾಣಿ ಪದ್ಮಾವತಿ ಅವನ ಕಾಮದಾಟದ ಕನಸಿಗೆ ತಣ್ಣೀರೆರಚಿ ಬಿಟ್ಟಳು. ತನ್ನ ಬುದ್ಧಿ ಉಪಯೋಗಿಸಿ ರಾಜಾ ರತನಸಿಂಗನನ್ನು ಖಿಲ್ಜಿಯ ಬಂಧನದಿಂದ ಬಿಡಿಸಿದಳು. ಇದರಿಂದ ಆಕ್ರೋಷಗೊಂಡ ಅಲ್ಲಾವುದ್ದೀನ್ ಖಿಲ್ಜಿ ನೇರವಾಗಿ  ಚಿತ್ತೋರಿನ ಮೇಲೆ ಯುದ್ಧ ಸಾರಿದನು.

     ಅನೇಕ ದಿನಗಳವರೆಗೆ ಯುದ್ಧ ಸಾಗಿತು. ಅಲ್ಲಾವುದ್ದೀನ್ ಖಿಲ್ಜಿಯ ಬಲಿಷ್ಟ ಸೈನ್ಯದ ಎದುರು ರತನಸಿಂಗನ ಸೈನಿಕರು ಬಹಳ ದಿನಗಳ ಕಾಲ ಹೋರಾಡಲು ಸಾಧ್ಯವಾಗಲಿಲ್ಲ.  ರಜಪೂತರ ಸೇನೆ ಸೋಲುವ ಎಲ್ಲ ಸಾಧ್ಯತೆಗಳು ಸಮೀಪಿಸಿದವು. ರಾಣಿ ಪದ್ಮಾವತಿಯ ಸೌಂದರ್ಯಕ್ಕೆ ಆಸೆಪಟ್ಟಿದ್ದ ಮತ್ತೊಬ್ಬ ವೈರಿ ರಾಜ ದೇವಪಾಲನಿಂದ ರಾಜಾ ರತನಸಿಂಗ ಕೊಲ್ಲಲ್ಪಟ್ಟನು. ಅಲ್ಲಾವುದ್ದೀನ್ ಖಿಲ್ಜಿ ತನ್ನ ಕುಟೀಲ ಪ್ರಯತ್ನದಲ್ಲಿ ಯಶಸ್ವಿಯಾದನು.

  ರಾಜಾ ರತನಸಿಂಗನ ಸಾವಿನ ಸುದ್ದಿ ಕೇಳಿ ರಾಣಿ ಪದ್ಮಾವತಿ ಕಂಗಾಲಾದಳು. ಹೆಣ್ಣುಬಾಕನಾದ ನೀಚ ಖಿಲ್ಜಿಗೆ ತನ್ನ ಮೈ ಮನಸನ್ನು ಒಪ್ಪಿಸುವುದು ರಾಣಿ ಪದ್ಮಾವತಿಗೆ ಒಂಚೂರು ಇಷ್ಟವಿರಲಿಲ್ಲ. ಅವನಿಗೆ ಸಂಕಟದಿಂದ ಸೆರಗು ಹಾಸುವ ಬದಲು ಸಂತಸದಿಂದ ಸಾಯುವುದು ಲೇಸು ಎಂಬ ನಿರ್ಧಾರಕ್ಕೆ ರಾಣಿ ಪದ್ಮಾವತಿ ಬಂದಳು. ಅಲ್ಲಾವುದ್ದೀನ್ ಖಿಲ್ಜಿ ಒಳ  ಬರುವ ಮುನ್ನವೇ ತಡಮಾಡದೆ ರಾಣಿ ಪದ್ಮಾವತಿ ಜೋಹರ ಪದ್ಧತಿಯ ಅನುಸಾರವಾಗಿ  ಒಂದು ದೊಡ್ಡ ಅಗ್ನಿ ಕುಂಡದಲ್ಲಿ ಹಾರಿ ತನ್ನ ಪ್ರಾಣ ತ್ಯಾಗ ಮಾಡಿದಳು. ಅವಳ ಜೊತೆಜೊತೆಗೆ ಯುದ್ಧದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡ ಸಾವಿರಾರು ರಜಪೂತ ಸ್ತ್ರೀಯರು ತಮ್ಮ ಪ್ರಾಣತ್ಯಾಗ ಮಾಡಿದರು.

ರಾಣಿ ಪದ್ಮಾವತಿಯ ಕಥೆ : Story of Rani Padmavati in Kannada

     ರಾಣಿ ಪದ್ಮಾವತಿ ಪವಿತ್ರಳಾಗಿ ಪ್ರಾಣಬಿಟ್ಟ ನಂತರ ಒಳಬಂದ ಅಲ್ಲಾವುದ್ದೀನ್ ಖಿಲ್ಜಿಗೆ ಭಾರೀ ನಿರಾಶೆ ಕಾದಿತ್ತು. ಯುದ್ಧದಲ್ಲಿ ಗೆದ್ದರೂ, ರಾಣಿ ಪದ್ಮಾವತಿಯನ್ನು ಪಡೆಯುವಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಕೊನೆಗೂ ಸೋತನು.... ಪ್ರಾಣ ಹೋಗುವ ಸ್ಥಿತಿ ಬಂದರೂ, ಮಾನ ಕಳೆದುಕೊಳ್ಳಬಾರದು ಎಂಬ ಜೀವನ ಸಂದೇಶ ನಮಗೆ ರಾಣಿ ಪದ್ಮಾವತಿಯಿಂದ ತಿಳಿದು ಬರುತ್ತದೆ.  ಇದಿಷ್ಟು ರಾಣಿ ಪದ್ಮಾವತಿಯ ಕಥೆ. ಇಷ್ಟ ಆದರೆ ಲೈಕ್ ಮತ್ತು ಶೇರ ಮಾಡಿ.

Story Source : Wikipedia 

Blogger ನಿಂದ ಸಾಮರ್ಥ್ಯಹೊಂದಿದೆ.