ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಅವಮಾನ ಆದಾಗ ತಾಳ್ಮೆ ಕಳೆದುಕೊಂಡು ಮಾನಸಿಕ ರೋಗಿಗಳ ಥರ ವರ್ತಿಸುವ ಅಗತ್ಯವಿಲ್ಲ. ಇವತ್ತಿನ ದಿನ ಅವಮಾನವಾದಾಗಲೇ ಮುಂದೊಂದು ದಿನ ಸನ್ಮಾನವಾಗುತ್ತದೆ.
ಹೇಗೆ ಸೋಲನ್ನು ಸವಾಲಾಗಿ ತೆಗೆದುಕೊಂಡು ಏನಾದರೂ ಒಂದನ್ನು ಸಾಧಿಸುತ್ತೇವೆಯೋ, ಅದೇ ರೀತಿ ಅವಮಾನವನ್ನು ಸಹ ಸವಾಲಾಗಿ ಸ್ವೀಕರಿಸಿ ನಮ್ಮ ಅಸಲಿ ಬೆಲೆಯನ್ನು ನಿರೂಪಿಸಿಬೇಕು. ಅವಮಾನವಾದಾಗ ನಮ್ಮ ಮೇಲೆ ನಾವೇ ಅನುಮಾನಪಡಬಾರದು. ತಾಳ್ಮೆ ಕಳೆದುಕೊಂಡು ಹುಚ್ಚರರಂತೆ ವರ್ತಿಸಬಾರದು. ಬಿದ್ದ ಜಾಗದಲ್ಲೆ ಎದ್ದು ನಿಂತು ಗೆದ್ದು ತೋರಿಸಬೇಕು. ಅವಮಾನವಾದಾಗ ನಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಜೊತೆಗೆ ಏನಾದರೂ ಒಂದನ್ನು ಸಾಧಿಸಿಯೇ ತೋರಿಸಬೇಕು ಎಂಬ ಕಿಚ್ಚು ಎದೆಯಲ್ಲಿ ಹೊತ್ತಿಕೊಳ್ಳುತ್ತದೆ.
ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವಮಾನವನ್ನು ಅನುಭವಿಸುತ್ತಾರೆ. ಅವಮಾನವಾದಾಗ ಕುಗ್ಗುವ ಅವಶ್ಯಕತೆಯಿಲ್ಲ. ಅವಮಾನವನ್ನು ಅನುಭವಿಸದ ವ್ಯಕ್ತಿ ಜಗತ್ತಿನಲ್ಲಿ ಎಲ್ಲೂ ಇಲ್ಲ. ನಮಗೆ ಬೆಲೆ ಸಿಗದ ಜಾಗದಲ್ಲಿ ನಮ್ಮ ಚಪ್ಪಲಿಗಳನ್ನು ಸಹ ನಾವು ಬಿಡಬಾರದು. ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಬಿಟ್ಟು ಬದುಕಬಾರದು. ಸಮಾಜದ ಹಲವು ರಂಗಗಳಲ್ಲಿ ಅವಮಾನಿತರಾಗಿ ಮಹತ್ತರವಾದದನ್ನು ಸಾಧಿಸಿ ಸನ್ಮಾನ, ವರಮಾನಗಳೆರಡನ್ನು ಸಂಪಾದಿಸಿದ ಅದೆಷ್ಟೋ ಸಾಧಕರು ನಮ್ಮ ಕಣ್ಮುಂದೆ ಇದ್ದಾರೆ.
"ಒಮ್ಮೆಯಾದರೂ ಆಗಲೇಬೇಕು ಅವಮಾನ,
ಆಗ ಸಿಡಿದೇಳುವುದು ನಿನ್ನ ಸ್ವಾಭಿಮಾನ.
ಎಚ್ಚೆತ್ತುಕೊಳ್ಳದಿದ್ದರೆ ಅಳುವುದು ಜಾಯಮಾನ,
ಹೆಸರುಳಿಸಲು ಹೋರಾಡುವುದು ನಿನ್ನ ಜೀವಮಾನ.
ಪರಿಶ್ರಮ ಕಾಪಾಡುವುದು ನಿನ್ನ ಮಾನ
ಜೀವನವೇ ನಿನಗೆ ಶಿರವೇರಿದ ಬಹುಮಾನ
ಆದಾಯದ ಸುರಿಮಳೆಯೆ ನಿನಗೆ ಸನ್ಮಾನ
ಐಶ್ವರ್ಯ ಅಂತಸ್ತೆ ನಿನ್ನ ವರಮಾನ.
ನೀನೀಗ ಸಮಷ್ಟಿಯ ಬಹುಮಹಡಿಗೆ ಸಮಾನ,
ನೀ ಸಾಧಿಸಲು ಕಾರಣವೇ ಅವಮಾನ
ಹಗೆತನವನ್ನು ಮರೆಯಲಿ ನಿನ್ನ ಮನ
ನಿನ್ನಾತ್ಮ ಪಡಲಿ ನಿನ್ನ ಮೇಲೆ ಅಭಿಮಾನ...."
ಅವಮಾನವನ್ನು ಒಂದು ಬಹುಮಾನವೆಂದು ತಿಳಿದು, ಅವಮಾನ ಮಾಡಿದವರ ಮಧ್ಯೆಯೇ ಬೆಳೆದು ನಿಲ್ಲಿ. ಸಾಧನೆಗಿಂತ ಸೂಕ್ತವಾದ ಸೇಡಿಲ್ಲ. ಅವಮಾನವಾದ ಜಾಗದಲ್ಲೇ ಸನ್ಮಾನಗಳು ನಿಮಗೆ ಸಿಗುವಂತೆ ಸಾಧನೆ ಮಾಡಿ. ನಿಮ್ಮ ಮೇಲೆ ನಿಮ್ಮ ಆತ್ಮ ಅಭಿಮಾನ ಪಡುವಂತೆ ಬಾಳಿ ಬದುಕಿ. ಒಳ್ಳೆಯದಾಗಲಿ...