ಆಲಿಸು ಓ ಗೆಳತಿ
ನೀ ನನ್ನ ಮರೆತು ದೂರಾದಾಗ...
ಕಣ್ಣೀರಲ್ಲಿ ನೆನೆಯದಿರಲಿ
ನಿನ್ನ ಕಣ್ಣ ಕಾಡಿಗೆ...
ಕತ್ತಲು ಕವಿಯದಿರಲಿ ನಿನ್ನ
ಕಪ್ಪು ಕಣ್ಣುಗಳಿಗೆ...
ಕಂಬನಿ ಚುಂಬಿಸದಿರಲಿ
ನಿನ್ನ ಸೊಂಪಾದ ಕೆನ್ನೆಗಳಿಗೆ...
ಮಂದಹಾಸ ಮರೀಚಿಕೆಯಾಗದಿರಲಿ
ನಿನ್ನ ಕೆಂಪಾದ ತುಟಿಗಳಿಗೆ...
ಕಣ್ಣೀರು ಬಾಡೆಂದು ಹೇಳದಿರಲಿ
ನಿನ್ನ ಹೊಳೆಯುವ ಮುಖಕಾಂತಿಗೆ...
ಕಂಬನಿ ಇಬ್ಬನಿಯಾಗದಿರಲಿ
ನಿನ್ನ ವಜ್ರದ ಹರಳಿನ ಮೂಗುತಿಗೆ...
ಅಳುವಿನ ಸಿಡಿಲು ಬಡೆಯದಿರಲಿ
ಸವಿಮಾತನ್ನಾಡುವ ನಿನ್ನ ಬಾಯಿಗೆ...
ಶೋಕ ಸಮಾಚಾರ ತಲುಪದಿರಲಿ
ಸಂಗೀತ ಕೇಳುವ ನಿನ್ನ ಕಿವಿಗೆ...
ಕಾರ್ಮೋಡ ಸೆಳೆಯದಿರಲಿ
ನಿನ್ನ ಸುಂದರ ಕೇಶರಾಶಿಗೆ...
ಬಾಡುವ ಯೋಚನೆ ಬರದಿರಲಿ
ನಿನ್ನ ಮುಡಿಯ ಹೂವಿಗೆ...
ನಾನಿಲ್ಲದೇ ಮರೆಯಾಗದಿರಲಿ
ನಿನ್ನ ಹಣೆಯ ಬಿಂದುಗೆ...
ವಿರಹದ ಬೇಗೆ ತಾಗದಿರಲಿ
ನಾ ಕೊಟ್ಟ ಬೆರಳ ಉಂಗುರಿಗೆ...
ಒಂಟಿತನದ ವೇದನೆ ಕಾಡದಿರಲಿ
ನಿನ್ನ ಕೈಬಳೆಗೆ...
ಹೆಣಕ್ಕೆ ಹೊದಿಸಿದ ಬಟ್ಟೆಯೆಂಬ
ಭಾವನೆ ಬರದಿರಲಿ ನೀನುಟ್ಟ ಸೀರೆಗೆ...
ತಟಸ್ಥವಾಗಿರುವ ಸ್ಥಿತಿ ಬರದಿರಲಿ
ನಿನ್ನ ಕಿವಿಯೊಲೆಗೆ...
ಮೌನ ಆವರಿಸದಿರಲಿ
ಸದ್ದು ಮಾಡುವ ನಿನ್ನ ಕಾಲ್ಗೆಜ್ಜೆಗೆ...
ಓಡಿಹೋಗುವ ಮನಸ್ಸಾಗದಿರಲಿ
ನಾ ಕಟ್ಟಬೇಕೆಂದಿರುವ ತಾಳಿಗೆ...
ಸಾಯುವ ಚಿಂತೆ ಬರದಿರಲಿ
ನಾ ಕೊಟ್ಟ ಬೆಳ್ಳಿ ಕಾಲುಂಗುರಿಗೆ...
ಕಲ್ಲುಹೃದಯವೆಂಬ ಕೆಟ್ಟ ಹೆಸರು
ಬಾರದಿರಲಿ ನಿನ್ನೆದೆ ಗೂಡಿಗೆ...
ನೀನಿಲ್ಲದೆ ಕೊರಗಿ ನಿಲ್ಲದಿರಲಿ
ನನ್ನೆದೆ ಗುಂಡಿಗೆ....