೧) ದಿನಾ ರಾತ್ರಿ ನೀ ನನ್ನ ಕನಸ್ಸಲ್ಲಿ ಬಂದು ಮುದ್ದಾಗಿ ಕಾಡುತ್ತೀಯಾ. ನೀ ನನ್ನ ಕನಸ್ಸಲ್ಲಿ ಬಂದೇ ಬರ್ತೀಯಾ ಎಂಬ ಭರವಸೆಯ ಮೇಲೆ ನಾ ದಿನಾ ಬೇಗನೆ ಮಲಗಿಕೊಳ್ಳುತ್ತೇನೆ. ನನಗೆ ಒಂದಿನಾದರೂ ನಿನ್ನ ಕನಸ್ಸಲ್ಲಿ ಬಂದು ನಿನ್ನ ಕಾಡುವಾಸೆ...
೨) ನೀನು ಮಹಾಮೌನಿ, ಜೊತೆಗೆ ಮುನಿಯುವ ಮುನಿ. ನಿನ್ನ ಮೌನವೊಂದು ಮಹಾರಹಸ್ಯ. ಆಕಾಶ ಭೂಮಿ ಒಂದಾಗೋ ಟೈಮ್ ಬಂದ್ರೂ ನೀನು ತುಟಿಬಿಚ್ಚಿ ಮಾತಾಡೋ ಟೈಮ್ ಬರಲ್ಲ ಅನಿಸುತ್ತೆ. ನೀನು ನಿನ್ನ ಮನಸ್ಸಲ್ಲಿ ನನ್ನ ಬಗ್ಗೆ ಏನು ಮಾತಾಡಿಕೊಳ್ತೀಯಾ ಎಂಬುದನ್ನು ನಿನ್ನೆದೆಗೆ ಕಿವಿಹಚ್ಚಿ ಕದ್ದು ಕೇಳೋವಾಸೆ...
೩) ನೀನು ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ಹಾಯಾಗಿರಬಲ್ಲೆ. ಆದರೆ ಟೆಕ್ಸ್ಟಬುಕ್ಕನ್ನು (Textbook) ಬಿಟ್ಟಿರಲು ನಿನ್ನಿಂದ ಸಾಧ್ಯವಿಲ್ಲ. ಬುಕ್ಕನ್ನು ಬಿಟ್ಟರೆ ಟಾಪರ್ ಸ್ಥಾನ ಬೇರೆಯವರ ಪಾಲಾಗುತ್ತೆ ಎಂಬ ಭಯ ನಿನಗೆ. ಅದಕ್ಕೆ ನೀನು ಮಲಗುವಾಗಲೂ ಸಹ ಬುಕ್ಕನ್ನು ಜೊತೆಯಾಗಿಯೇ ಇಟ್ಟುಕೊಳ್ಳುತ್ತೀಯಾ. So ನನಗೆ ಸದಾ ನಿನ್ನ ಕೈಯಲ್ಲಿರುವ ಟೆಕ್ಸ್ಟಬುಕ್ ಆಗೋವಾಸೆ...
೪) ನೀನು ಸುಂದರಿ ಎಂಬ ಸತ್ಯ ನಿನಗೆ ಗೊತ್ತಿದ್ದರೂ ನೀನು ಪದೇಪದೇ ಕನ್ನಡಿಯಲ್ಲಿ ಇಣುಕಿ ನೋಡುತ್ತಲೇ ಇರ್ತೀಯಾ. ನಿನ್ನ ಸೌಂದರ್ಯವನ್ನು ಸಂಪೂರ್ಣವಾಗಿ ಸವಿದಿರುವುದು ಕನ್ನಡಿ ಮಾತ್ರ. ಮುಂದಿನ ಜನ್ಮ ಅಂತ ಏನಾದ್ರೂ ಇದ್ರೆ ನನಗೆ ನಿನ್ನ ಕನ್ನಡಿಯಾಗಿ ಹುಟ್ಟೋವಾಸೆ...
೫) ಕದ್ದುಮುಚ್ಚಿ ಮಾಡಲು ಪ್ರೀತಿಯೇನು ಬ್ಲ್ಯಾಕ್ ಬ್ಯುಸಿನೆಸ್ಸಲ್ಲ. ಯಾರಿಗೂ ಹೇಳದೆ ಹೃದಯದಲ್ಲಿ ಹಾಗೇ ಬಚ್ಚಿಡಲು ಪ್ರೀತಿಯೇನು ಕಪ್ಪು ಹಣವಲ್ಲ. So ನನ್ನ ಮನಸ್ಸಲ್ಲಿರುವ ಪ್ರೀತಿಮಾತುಗಳನ್ನೆಲ್ಲ ನಿನ್ನ ಕಿವಿಯಲ್ಲಿ ಪಿಸುಗುಟ್ಟುವಾಸೆ....
೬) ನೀನು ನನ್ನ ನೋಡಿ ನಾಚಿಕೊಂಡಾಗ, ನಾಚಿಕೊಂಡ ನಿನ್ನ ಕೆನ್ನೆ ಮೇಲೆ ನನ್ನ ತುಟಿಗಳ ಅಚ್ಚಾಕೋವಾಸೆ...
೭) ನಾನು ನನ್ನಲ್ಲಿರುವ ದುಡ್ಡಿನಿಂದ ನೂರಾರು ಎಕರೆ ಜಾಗ ಖರೀದಿಸಬಲ್ಲೆ. ಆದರೆ ದುಡ್ಡಿನಿಂದ ನಿನ್ನ ಮನಸ್ಸನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನಿನ್ನ ಮುದ್ದಾದ ಮನಸ್ಸಲ್ಲಿ ನನಗಾಗಿ ಒಂದು ಪುಟ್ಟ ಸ್ಥಾನವನ್ನು ಪ್ರಾಮಾಣಿಕವಾಗಿ ಸಂಪಾದಿಸುವಾಸೆ....
೮) ಬಂಗಾರದ ಹಾಸಿಗೆಯ ಮೇಲೆ ಮಲಗಿದರೂ ಭದ್ರತೆಯ ಕೊರತೆ ಕಾಡುತ್ತದೆ. ಆದರೆ ನಿನ್ನ ಮಡಿಲಲ್ಲಿ ಮಲಗಿರುವಾಗ ನನಗ್ಯಾವ ಚಿಂತೆಯೂ ಕಾಡಲ್ಲ ಅನಿಸುತ್ತೆ. ನನ್ನ ನಿದ್ರೆಗೆ ನಿನ್ನ ಮಡಿಲೇ ಭದ್ರವಾದ ಜಾಗ. ನಿನ್ನ ಮಡಿಲು ನನ್ನ ನೆಚ್ಚಿನ ತಲೆದಿಂಬು. ಒಂದಿನವಾದರೂ ನಿನ್ನ ಮಡಿಲ ಮೇಲೆ ನಿಶ್ಚಿಂತೆಯಾಗಿ ಮಲಗುವಾಸೆ...
೯) ನನಗೆ ನೋವಾದಾಗ ನಿನ್ನ ಭುಜದ ಮೇಲೆ ತಲೆಯಿಟ್ಟು ಬಿಕ್ಕಿಬಿಕ್ಕಿ ಅಳೋವಾಸೆ...
೧೦) ನೀ ನನ್ನನ್ನು ಒಪ್ಪಿಕೊಂಡು ಬಾಳಸಂಗಾತಿಯಾಗಿ ಬಂದರೆ ಪ್ರತಿದಿನ ನಿನ್ನನ್ನು ನನ್ನ ಬಲಿಷ್ಟವಾದ ತೋಳುಗಳಲ್ಲಿ ಬಂಧಿಸುವಾಸೆ.... ನನ್ನ ಮೈಮನಸ್ಸನ್ನು ನಿನಗಾಗಿ ಮೀಸಲಿಡುವಾಸೆ...
೧೧) ನೀನಿಲ್ಲದ ಅರಮನೆ, ನನಗೆ ಸೆರೆಮನೆ. ನನ್ನ ಜೀವನದ ಎಲ್ಲ ಶುಭಘಳಿಗೆಗಳನ್ನು, ಸಿಹಿಕಹಿ ಕ್ಷಣಗಳನ್ನು ನಿನ್ನೊಂದಿಗೆ ಹೆಜ್ಜೆ ಹಾಕುತ್ತಾ ಕಳೆದು, ಕೊನೆಯ ಸಲ ನಿನ್ನನ್ನು ಕಣ್ತುಂಬ ನೋಡಿ ನೆಮ್ಮದಿಯಿಂದ ಕಣ್ಮುಚ್ಚುವ ಆಸೆ....