ನನ್ನ ಕನಸು, ಮನಸು ನೀನಾಗಿರುವಾಗ
ಏಕೆ ನಿನ್ನೀ ಹುಸಿ ಮುನಿಸು?
ರೆಪ್ಪೆ ಮುಚ್ಚಿದರೂ ನಿದ್ರೆ ಬಾರದಿರುವಾಗ
ನೀ ನನ್ನ ಕಣ್ಣಲ್ಲಿ ಬಂದು ವಿಶ್ರಮಿಸು...
ಮನದಲ್ಲಿ ವಿರಹ ನರ್ತಿಸುವಾಗ
ಪ್ರೀತಿಯಾಗಿ ನೀ ನನ್ನ ತಣಿಸು...
ಜೀವನವೇ ಹೊತ್ತಿ ಉರಿಯುವಾಗ
ಕೋಪಬಿಟ್ಟು ಬೇಗನೇ ಬಂದು ಓಲೈಸು...
ಹಸಿವಿದ್ದರೂ ಊಟ ಸೇರದಿರುವಾಗ
ಪಂಚಾಮೃತವಾಗಿ ನೀ ನನ್ನ ಉಣಿಸು...
ನಾ ದಾರಿತಪ್ಪುವ ಮೊದಲೇ
ನನ್ನ ದುಶ್ಚಟಗಳನ್ನೆಲ್ಲ ನೀ ಮರೆಸು...
ಮನದಾಳದಲ್ಲಿ ಪ್ರೀತಿಕೂಸು ಅಳುವಾಗ
ನೀ ಪ್ರೇಯಸಿಯಾಗಿ ಸಂತೈಸು...
ನನ್ನ ಜೀವಕ್ಕೆ ನೀನೇ ಉಸಿರಾಗಿರುವಾಗ
ನನ್ನ ಪ್ರೀತಿಯನ್ನು ನೀ ದಯಮಾಡಿ ಉಳಿಸು...
ನನ್ನ ಬದುಕಿಗೆ ನೀ ಸ್ಪೂರ್ತಿಯಾಗಿರುವಾಗ
ನನ್ನ ಕನಸ್ಸನ್ನು ನೀ ಮಾಡುವೆಯಾ ನನಸು?
ನಾ ಜೀವನದ ಜಾತ್ರೆ ಮುಗಿಸುವಾಗಲಾದರೂ
ನೀನೊಮ್ಮೆ ನನ್ನ ಪ್ರೀತಿಸು ಇಲ್ಲವೇ
ನೀನೇ ನನ್ನ ಬೇಗನೆ ಸಾಯಿಸು...