ನಿಜವಾದ ಪ್ರೀತಿ ಒಂದೇ ಸಲ ಆಗುತ್ತೆ ಅಂತಾರೆ. ಆದರೆ ಕ್ರಶ್ (Crush) ಸಾಕಷ್ಟು ಸಲ ಆಗುತ್ತೆ. ಈ ಕ್ರಶನ್ನು ಅಚ್ಚಗನ್ನಡದಲ್ಲಿ ಆಕರ್ಷಣೆ ಎನ್ನಬಹುದು. ಪ್ರೀತಿಯ ಪ್ರಭಾವ ಜೀವನಪೂರ್ತಿ ಇರಬಹುದು. ಆದರೆ ಕ್ರಶ್ ಸ್ವಲ್ಪ ದಿನ ಮಾತ್ರ ಕಾಡುತ್ತೆ. ಕ್ರಶ್ ಒಂಥರಾ ಕಿಕ್ ಇದ್ದಂತೆ. Yes, Crush is a kind of kick. ಕ್ರಶ್ ಆದ ಹುಡುಗಿಯನ್ನು ಅಥವಾ ಹುಡುಗನನ್ನು ಕಣ್ಣರೆಪ್ಪೆ ಮಿಟುಕಿಸದೆ ಒಂದೇ ಸಮನೆ ನೋಡುವುದು ಒಂಥರಾ ಮಜಾ ಕೊಡುತ್ತೆ. ಕ್ರಶ್ಶಾದ ಹುಡುಗಿಯನ್ನು ಕದ್ದುಮುಚ್ಚಿ ನೋಡುವುದರಲ್ಲಿ ಏನೋ ಒಂದು ಖುಷಿಯಿದೆ. ಕೆಲವು ಕಾಲೇಜು ಹುಡುಗರು ತಮ್ಮ ಕ್ರಶ್ಶನ್ನು ಕಣ್ತುಂಬಿಕೊಳ್ಳಲು ದಿನಾ ತಪ್ಪದೇ ಕಾಲೇಜಿಗೆ ಬರುತ್ತಾರೆ. ಹುಡುಗರ ಹಾರ್ಟು ಸುಮಾರಾಗಿರೋ ಹುಡುಗಿಯನ್ನು ನೋಡಿದರೂ ಹೆಚ್ಚಿಗೆ ಬಡಿದುಕೊಳ್ಳುತ್ತದೆ. ಕಾಲೇಜಿನಲ್ಲಿ ಆಗುವ ಕ್ರಶ್ಶಗಳಿಗೆ ಲೆಕ್ಕವಿಡಲು ಸಾಧ್ಯವಿಲ್ಲ. ಸುಂದರವಾಗಿರೋ ಪ್ರತಿಯೊಂದರ ಮೇಲೂ ಕ್ರಶ್ಶಾಗುತ್ತೆ.
ನನಗೆ ಹುಡುಗಿಯರ ಬಗ್ಗೆ ಹೆಚ್ಚಿಗೆ ಜನರಲ್ ನಾಲೇಡ್ಜ್ ಇಲ್ಲ. ಯಾಕೆಂದರೆ ನಾನು ಓದಿದ್ದು ಸರ್ಕಾರಿ ಕನ್ನಡ ಮಾಧ್ಯಮ ಗಂಡು ಮಕ್ಕಳ ಶಾಲೆಯಲ್ಲಿ. ಅಲ್ಲಿ ಹುಡುಗಿಯರ ನೆರಳು ಸಹ ಬೀಳುತ್ತಿರಲಿಲ್ಲ. ನಂತರ ಹೈಸ್ಕೂಲು ಅಷ್ಟೇ. ಅಲ್ಲಿಯೂ ಎಲ್ಲರೂ ಗಂಡುಗಲಿಗಳೇ. ಅಲ್ಲಿ ಹುಡುಗಿಯರು ಬರುವುದು ರಾತ್ರಿ ಕನಸಲ್ಲಿ ಮಾತ್ರ. ಹೀಗಾಗಿ ನನಗೆ ನಾಚಿಕೆ ಸ್ವಭಾವ ಹೆಚ್ಚಾಗಿ ನಮಗೂ ಹುಡುಗಿಯರು ಅಷ್ಟಕಷ್ಟೇ ಎಂಬಂತಾಯಿತು. ಆದರೆ ಕಾಲೇಜಿಗೆ ಕಾಲಿಟ್ಟ ಮೇಲೆ ಎಲ್ಲ ಹುಡುಗರ ಥರಾ ನನ್ನ ಸ್ಟೈಲ್ ಕೂಡ ಬದಲಾಯ್ತು.
ಹುಡುಗಿಯರೆಂದರೆ ದೂರ ಓಡುತ್ತಿದ್ದ ನಾನು ಎಲ್ಲ ಹುಡುಗಿಯರೊಡನೆ ಮುಕ್ತವಾಗಿ ಮಾತಾಡತೊಡಗಿದೆ. ನಮ್ಮ ಕಾಲೇಜಲ್ಲಿ ಸಾವಿರಾರು ಸುಂದರಿಯರಿದ್ದರು. ಆದರೆ ಒಬ್ಬರೂ ಸಹ ನನ್ನದೆಯ ಕದವನ್ನು ತಟ್ಟುವ ಪ್ರಯತ್ನ ಮಾಡಲಿಲ್ಲ. ನನಗೆ ಇಷ್ಟವಾದ ಹುಡುಗಿಯರಿಗೆ ನಾನು ಇಷ್ಟವಾಗುತ್ತಿರಲಿಲ್ಲ. ನನ್ನನ್ನು ಇಷ್ಟಪಡುತ್ತಿರುವ ಹುಡುಗಿಯರು ನನಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಕಾಲೇಜ ಲೈಫಲ್ಲಿ ಪ್ರೇಯಸಿ ಎಂಬ ವಿಚಿತ್ರಪ್ರಾಣಿ ಇಲ್ಲದೆ ಸ್ವಲ್ಪ ಬೋರಾದರೂ ನಾನು ತುಂಬಾ ಆರಾಮಾಗಿದ್ದೆ.
ಸ್ನೇಹಿತರೆಲ್ಲ ಅವರವರ ಗರ್ಲಫ್ರೆಂಡಗಳ ಜೊತೆ ಸಿನಿಮಾಗೋದರೆ ನಾನೊಬ್ಬನೇ ಹುಡುಗರ ಜೊತೆ ಸಿನಿಮಾಗೆ ಹೋಗುತ್ತಿದ್ದೆ. ಕೆಲವು ಸಲ ನನಗೂ ಒಬ್ಬಳು ಗರ್ಲಫ್ರೆಂಡ ಇರಬೇಕಿತ್ತು ಅಂತಾ ಅನ್ನಿಸುತಿತ್ತು. ಆದರೆ ನನ್ನ ಗೆಳೆಯರು ಅವರ ಗರ್ಲಫ್ರೆಂಡಗಳ ಆಸೆಗಳಿಗಾಗಿ ಇಡೀ ಕಾಲೇಜ ಅಷ್ಟೇ ಅಲ್ಲದೆ ಹಾಸ್ಟೇಲನಲ್ಲೂ ಸಾಲ ಮಾಡಿಕೊಂಡು ವಾಪಸ್ ಕೊಡೊಕ್ಕಾಗದೆ ಮುಖಮುಚ್ಚಿಕೊಂಡು ಓಡಾಡುವುದನ್ನು ನೋಡಿ ನನಗೆ ಗರ್ಲಫ್ರೆಂಡ ಬೇಡವೆ ಬೇಡ ಎಂದೆನಿಸಿತು. ಆದರೂ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಸ್ವಲ್ಪ ಬೇಜಾರಿತ್ತು. ಈ ಒಣ ಬೇಜಾರಿನ ಜೊತೆಗೆ ಬೇಸಿಗೆ ರಜೆಯನ್ನು ಕಳೆಯಲು ನಾನು ನಾಸಿಕಗೆ ( ನಾಸಿಕ ಮಹಾರಾಷ್ಟ್ರದ ಒಂದು ಜಿಲ್ಲೆ ಹಾಗೂ ದೊಡ್ಡ ನಗರ) ಹೋದೆನು.
ಕಾಲೇಜ ಲೈಫಲ್ಲಿ ಪ್ರೇಯಸಿ ಇಲ್ಲದಿದ್ದರೆ ಟೆನ್ಶನ್, ಅನಾವಶ್ಯಕ ತೊಂದರೆ, ಸಮಯದ ಹಾಗೂ ಹಣದ ವ್ಯರ್ಥ ಖರ್ಚು, ಮುಂಜಾನೆ ಮುಸ್ಸಂಜೆ ಮೆಸೇಜು, ಮಧ್ಯರಾತ್ರಿಯ ಮಿಸ್ಡಕಾಲು, ಓದಿಗೆ ಅಡ್ಡಗಾಲು ಯಾವುದೂ ಇರುವುದಿಲ್ಲ. ಆದರೆ ಜೊತೆಗೆ ನೆಮ್ಮದಿನೂ ಇರುವುದಿಲ್ಲ ಎಂಬುದು ನನಗೆ ಅರಿವಾಯಿತು. ಅರಿವಾದರೇನು ಪ್ರಯೋಜನ ಬಯಸಿದ ತಕ್ಷಣ ಪ್ರೇಯಸಿ ಸಿಗಬೇಕಲ್ಲವೇ? ಖಂಡಿತ ಸಿಗಲ್ಲ.
ಮೊದಮೊದಲು ನಮ್ಮ ಕಾಲೇಜಿನ ಥರಾ ನಾಸಿಕ ಕೂಡ ನರಕದ ರೀತಿ ಕಂಡಿತು. ಆದರೆ ಅದರ ಸುತ್ತಮುತ್ತಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟಾಗ ಅದು ಯಾವ ಸ್ವರ್ಗಕ್ಕೂ ಕಮ್ಮಿಯಿಲ್ಲ ಎಂದು ಗೊತ್ತಾಯಿತು. ಒಂದಿನ ನಾನು ನನ್ನ ಗೆಳೆಯ ವಿನಾಯಕನೊಂದಿಗೆ ಲಾವಣಿ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಒಂದು ರಂಗಮಂದಿರಕ್ಕೆ ಹೋದೆನು. ಲಾವಣಿ ಮಹಾರಾಷ್ಟ್ರದ ಪ್ರಖ್ಯಾತ ಜಾನಪದ ನೃತ್ಯವಾಗಿದೆ. ಲಾವಣಿ ಇಂದಿಗೂ ಅಲ್ಲಿ ಜೀವಂತವಾಗಿದೆ. ಥೀಯೆಟರಿಗೆ್ ಹೋಗಿ ಸಿನಿಮಾ ನೋಡದ ಜನ ಕೂಡ ನೂರಾರು ರೂಪಾಯಿ ಕೊಟ್ಟು ಲಾವಣಿ ಡ್ಯಾನ್ಸ್ ನೋಡಲು ಬಂದೇ ಬರುತ್ತಾರೆ. ಲಾವಣಿಯಲ್ಲಿ ಡೋಲ್ಕಿಯ ವೇಗದ ತಾಳಕ್ಕೆ ಸುಂದರ ತರುಣಿಯರು ಹೆಜ್ಜೆಹಾಕುವುದನ್ನು ನೋಡುವುದೇ ಒಂದು ಸೌಭಾಗ್ಯ.
ಲಾವಣಿ ನೃತ್ಯದ ಪ್ರದರ್ಶನ ಶುರುವಾದಾಗ ನೃತ್ಯಗಾರ್ತಿಯರ ಎನರ್ಜಿಯನ್ನು ನೋಡಿ ನಾನು ಬೆರಗಾದೆ. ಡೋಲ್ಕಿಯ ಅಷ್ಟೊಂದು ವೇಗದ ತಾಳಕ್ಕೆ ಒಂಚೂರು ಎಡವದೆ ಹೆಜ್ಜೆ ಹಾಕುವುದು ಸುಲಭದ ಕೆಲಸವಲ್ಲ. ಮೊದಮೊದಲು ಮಜಾ ಕೊಡುತ್ತಿದ್ದ ಪ್ರದರ್ಶನ ಮಧ್ಯದಲ್ಲಿ ಸ್ವಲ್ಪ ಬೋರ್ ಹೊಡೆಸಿತು. ಅರ್ಧಕ್ಕೆ ಬಿಟ್ಟು ಹೋರಬರಬೇಕೆನ್ನುವಷ್ಟರಲ್ಲಿ ಒಬ್ಬಳು ಸುಂದರ ಯುವತಿ ವೇದಿಕೆಗೆ ಬಂದಳು. ಅವಳಿಗೆ ಸುಮಾರು ಇಪ್ಪತ್ತು ವರ್ಷವಿರಬಹುದು. ಅವಳ ಕಾಲಲ್ಲಿನ ಗೆಜ್ಜೆ ಸದ್ದಿಗೆ ರಂಗಮಂದಿರ ಒಂದೆರಡು ಕ್ಷಣ ಸಂಪೂರ್ಣ ಮೌನವಾಯಿತು.
ಅವಳ ಆ ಎಂಟ್ರಿಗೆ ಎಲ್ಲರೂ ದಂಗಾಗಿ ಅವಳನ್ನೇ ಕಣ್ಣುಕಣ್ಣು ಬಿಟ್ಟು ನೋಡತೊಡಗಿದರು. ಅವಳ ಅಂದಚೆಂದ ವೈಯ್ಯಾರವೆಲ್ಲವು ಅಲ್ಲಿದ್ದರವರನ್ನು ಆಕರ್ಷಿಸಿತ್ತು. ಅವಳ ಮೇಲೆ ನನಗೆ ಹೆವ್ವಿ ಕ್ರಶ್ ಆಯಿತು. ಅವಳ ಹಾರಾಡುವ ಕೂದಲುಗಳು, ಕೊಲ್ಲುವ ಕಣ್ಣೋಟ, ಮುಂಜಾನೆ ಮಂಜಿನಂಥ ಮುಗುಳ್ನಗೆ, ಮತ್ತೇರಿದಂತೆ ಕುಣಿಯುತ್ತಿದ್ದ ಅವಳ ಕಾಲ್ಗಳು ನನ್ನನ್ನು ತುಂಬಾನೆ ಡಿಸ್ಡರ್ಬ್ ಮಾಡಿದವು. ಅವಳಿಗೆ ನಾನು ಬಹಳಷ್ಟು ಆಕರ್ಷಿತನಾಗಿದ್ದೆ. ಆ ಲಾವಣಿ ಪ್ರದರ್ಶನದಲ್ಲಿ ಅವಳದ್ದು ಗೆಸ್ಟ್ ಅಪೀಯರನ್ಸ್ ಆಗಿತ್ತು. ಆ ಶೋ ಮುಗಿದ ನಂತರ ನಾನು ಅವಳನ್ನು ಎಲ್ಲ ಕಡೆ ಹುಡುಕಾಡಿದೆ. ಅವಳು ಸಿಗದಿದ್ದಾಗ ಅವರ ತಂಡದ ಮ್ಯಾನೇಜರ ಹತ್ರ ವಿಚಾರಿಸಿದೆ. ಅವಳು ಅವರ ಲಾವಣಿ ತಂಡವನ್ನು ಬಿಟ್ಟು ಸಿನಿಮಾದಲ್ಲಿ ನಟಿಸುವ ಆಸೆಗಾಗಿ ಮುಂಬೈಗೆ ಹೋದಳೆಂದು ಮ್ಯಾನೇಜರ ಹೇಳಿದನು. ಅವಳನ್ನು ಭೇಟಿಯಾಗಿ ಮಾತನಾಡಿಸಲು ಮುಂದಾಗಿದ್ದ ನನಗೆ ನಿರಾಸೆಯ ಕಾರ್ಮೋಡ ಎದುರಾಯಿತು. ಬೇಜಾರನ್ನು ಕಳಿಯಲು ಬಂದಿದ್ದ ನನಗೆ ನನ್ನ ಮೊದಲ ಕ್ರಶನಿಂದ ಮತ್ತೊಂದು ಬೇಜಾರಾಯಿತು. ಬೇಜಾರುಗಳ ಬಜಾರಲ್ಲಿಯೇ ನಾನು ಮತ್ತೆ ಕಾಲೇಜಿನ ಗೂಡಿಗೆ ಮರಳಿದೆ.
ಎಲ್ಲರಂತೆ ನನಗೂ ಸಹ ನನ್ನ ಮೊದಲ ಕ್ರಶ್ ಒಂದು ಮರೆಯಲಾಗದ ಸವಿನೆನಪು. ನಾನಿನ್ನೂ ಸಾಧಿಸಿ ಬೆಳಕಿಗೆ ಬರಬೇಕು. ನನಗಿಂತ ಮುಂಚೆಯೇ ಅವಳು ಸಿನಿಮಾ ನಟಿಯಾಗಿ ಬೆಳಕಿಗೆ ಬರಬಹುದು ಎಂಬ ನಂಬಿಕೆ ನನ್ನದು. ಮತ್ತೆ ನನ್ನ ಮೊದಲ ಕ್ರಶ್ ಕಣ್ಣಿಗೆ ಬೇಗನೆ ಬೀಳಲಿ ಎಂಬ ಕಳ್ಳ ಆಸೆ ಮನಸ್ಸಿಗೆ.....