ಲೈಫಲ್ಲಿ ಪ್ರೇಯಸಿ ಎಂಬ ಮಾಯಾವಿ ಇರದಿದ್ದರೆ ಮೆದುಳು ನೆಮ್ಮದಿಯಿಂದ ಇರುತ್ತದೆ. ಆದರೆ ಮನಸ್ಸು ಒಳಗೊಳಗೆ ಮರಗುತ್ತಿರುತ್ತದೆ. ಒಂಟಿತನ ಚುಚ್ಚಿ ಚುಚ್ಚಿ ನೀನಿನ್ನೂ ಯಾಕೆ ಸಿಂಗಲಾಗಿರುವೆ ಎಂದು ಕೇಳುತ್ತದೆ. ಮನಸ್ಸು ಕೇಳುವ ಮೂರ್ಖ ಪ್ರಶ್ನೆಗಳಿಗೆಲ್ಲ ಉತ್ತರಿಸದಿದ್ದರೆ ಮಾನಸಿಕ ನೆಮ್ಮದಿ ಕೆಡುತ್ತದೆ. ಜೀವನದಲ್ಲಿ ಪ್ರೇಯಸಿಯಿರದಿದ್ದರೆ ಮಧ್ಯರಾತ್ರಿಯ ಪೋಲಿ ಮೆಸೇಜ್ಗಳು, ಮುಂಜಾನೆಯ ಮಿಸ್ಡ್ ಕಾಲ್ಗಳು, ಸ್ಮಾರ್ಟ್ ಆಗಿರಲು ಮಾಡುವ ಕಸರತ್ತುಗಳು, ಜೇಬು ಖಾಲಿಯಾದಾಗ ಆಗುವ ಜಿಗುಪ್ಸೆಗಳಾವುವು ಇರುವುದಿಲ್ಲ. ಜೊತೆಗೆ ಸಂತೋಷವೂ ಇರುವುದಿಲ್ಲ. ಪ್ರೇಯಸಿ ಇರದಿದ್ದರೆ ಇದ್ದವರಿಗಿಂತ ಹ್ಯಾಪಿಯಾಗಿರ್ತೀನಿ ಅಂತಾ ಸಲೀಸಾಗಿ ಹೇಳಿ ಬಿಡಬಹುದು. ಆದ್ರೆ ಸಿಂಗಲಾಗಿರುವುದು ಸಂತಸದ ವಿಷಯವೇನಲ್ಲ. ಅದೇನೆ ಇರಲಿ ನಾನು ಗಮನಿಸಿದಂತೆ ಪ್ರೇಯಸಿಗೆ ಕೆಲವು ಸ್ಪೆಷಲ್ ಗುಣಗಳಿವೆ...
೧) ಚಂದ್ರನ ನಗು, ನವಿಲಿನ ವಯ್ಯಾರ, ಗಿಳಿಗಳ ಮಾತು, ನದಿಗಳ ಚಂಚಲತೆ, ಹೂಗಳ ಕೋಮಲತೆ, ಮೋಹಿನಿಯ ಮಾದಕತೆಗಳೆಲ್ಲ ಸೇರಿ ಪ್ರೇಯಸಿ ಎಂಬ ಮಾಯಾವಿ ಸೃಷ್ಟಿಯಾಗಿದ್ದಾಳೆ.
೨) ಪ್ರೇಯಸಿ ಅತ್ಯಂತ ಸೂಕ್ಷ್ಮ ಸ್ವಭಾವದವಳು. ಜೊತೆಗೆ ಬಹಳಷ್ಟು ಭಾವುಕಳು. ಸಣ್ಣಪುಟ್ಟ ವಿಷಯಗಳಿಗೆಲ್ಲ ಅವಳು ಬಹಳಷ್ಟು ಖುಷಿ ಪಡ್ತಾಳೆ. ಕೆಲವು ಸಲ ಕಾರಣವಿಲ್ಲದೆ ನಗುತ್ತಾಳೆ, ಕಾರಣವಿಲ್ಲದೆ ಅಳುತ್ತಾಳೆ.
೩) ಪ್ರೇಯಸಿಯ ಕಣ್ಣಿರಿಗೆ ನನ್ನ ಕೋಪವನ್ನು ಕರಗಿಸುವ ಶಕ್ತಿಯಿದೆ. ಅವಳ ಮಹಾಮೌನಕ್ಕೆ ನನ್ನನ್ನು ನಿಶಬ್ದವಾಗಿ ಕೊಲ್ಲುವ ತಾಕತ್ತಿದೆ. ನನ್ನ ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಿ ನನ್ನನ್ನು ಸರಿ ದಾರಿಯಲ್ಲಿ ನಡೆಸುವ ಸಾದ್ವಿಕತೆ ಅವಳಲ್ಲಿದೆ. ಅವಳ ಮುಗುಳ್ನಗುವಿಗೆ ನನ್ನ ನೋವನ್ನೆಲ್ಲ ನಗುವಾಗಿಸುವ ನಮ್ರತೆಯಿದೆ.
೪) ಅವಳು ಮನಸ್ಸಬಿಚ್ಚಿ ಗಂಟೆಗಟ್ಟಲೆ ಮಾತನಾಡಲು ಬಯಸುತ್ತಾಳೆ. ಎಲ್ಲರೊಡನೆ ಫ್ರೆಂಡ್ಲಿಯಾಗಿ ಬೆರೆಯಲು ಬಯಸುತ್ತಾಳೆ. ಆದರೆ ಇದು ಅವಳಿಗೆ ಬಹಳಷ್ಟು ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ.
೫) ಅವಳು ತುಂಬಾ ಹಟವಾದಿ. ಎಲ್ಲದರಲ್ಲಿಯೂ ಆಕೆ ತನ್ನದೇ ಸರಿ, ತನಗೇನೆ ಪ್ರಾಮುಖ್ಯತೆ ಸಿಗಬೇಕೆಂದು ವಾದಿಸುತ್ತಾಳೆ. ಅವಳ ಮಾತಿಗೆ ಮನ್ನಣೆ ಸಿಗದಿದ್ದಾಗ ಸಿಟ್ಟಾಗಿ ರೆಗುತ್ತಾಳೆ.
೬) ಸೆನ್ಸ್ ಆಫ್ ಹ್ಯುಮರಗೆ ಆಕೆ ಬೇಗನೆ ಮನಸೋಲುತ್ತಾಳೆ. ಪರಿಶುದ್ಧ ಹಾಸ್ಯಕ್ಕೆ ಅವಳು ಹೂವಿನಂತೆ ಅರಳುತ್ತಾಳೆ.
೭) ಅವಳಿಗೊಂದು ಮೃದುವಾದ ಮನಸ್ಸಿದೆ. ಯಾರಾದರೂ ಅವಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಸಾಕು ಅವಳ ಮನಸ್ಸು ಅವರ ಕಡೆಗೆ ಆಕರ್ಷಿತವಾಗುತ್ತದೆ. ಚಿಕ್ಕ ಚಿಕ್ಕ ವಿಷಯಗಳಲ್ಲೂ ಕೇರ್ ತೆಗೆದುಕೊಂಡು ಅವಳ ಪ್ರತಿಯೊಂದು ಕೆಲ್ಸಕ್ಕೆ ಮೆಚ್ಚುಗೆ ಸೂಚಿಸುವವರನ್ನು ಆಕೆ ಇಷ್ಟಪಡುತ್ತಾಳೆ.
೮) ನ್ಯಾಚುರಲ್ ಆಗಿರುವ ಕಾಂಪ್ಲಿಮೆಂಟಗಳನ್ನು ಆಕೆ ಇಷ್ಟಪಡುತ್ತಾಳೆ. ಅವಳನ್ನು ಇಂಪ್ರೆಸ್ ಮಾಡುವುದಕ್ಕಾಗಿ ಹೇಳುವ ಗೊಳ್ಳು ಹೊಗಳಿಕೆಗಳನ್ನು ಆಕೆ ತಳ್ಳಿ ಹಾಕುತ್ತಾಳೆ.
೦೯) ಪ್ರೇಯಸಿ ಏನೇ ಮಾಡಿದರೂ ಸರಿ ಅವಳು ಮನದ ಮಹಾರಾಣಿಯೇ. ಅವಳ ಮೇಲಿನ ಪ್ರೀತಿ, ಕಾಳಜಿ, ಮಮಕಾರ, ವ್ಯಾಮೋಹ ಯಾವತ್ತೂ ಕಮ್ಮಿಯಾಗಲ್ಲ.
೧೦) ಅವಳು ಶ್ರೀಮಂತಿಕೆಯನ್ನು ಇಷ್ಟಪಡುತ್ತಾಳೆ. ಅದು ಅವಳ ತಪ್ಪಲ್ಲ. ಅದು ಮನುಷ್ಯನ ಸಹಜ ಸ್ವಭಾವವಷ್ಟೇ. ನಾನು ಅವಳ ಸೌಂದರ್ಯವನ್ನು ಇಷ್ಟಪಡುವಾಗ, ಅವಳು ನನ್ನ ಸಂಪತ್ತನ್ನು ಇಷ್ಟಪಡುವುದರಲ್ಲಿ ತಪ್ಪೇನಿದೆ?
೧೧) ಪ್ರೀತಿಯಲ್ಲಿ ಬೀಳಲು ಅವಳು ಬಹಳ ಸಮಯ ತೆಗೆದುಕೊಳ್ಳುತ್ತಾಳೆ. ಆದರೆ ಒಂದ್ಸಲ ಬಿದ್ದರೆ ಅವಳು ಯಾವ ಕಾರಣಕ್ಕೂ ಪ್ರೀತಿಸಿದವನನ್ನು ಸುಲಭವಾಗಿ ಬಿಟ್ಟುಕೊಡಲ್ಲ.
೧೨) ಕೆಲವೊಂದಿಷ್ಟು ಮಾತುಗಳನ್ನು ಅವಳಿಗೆ ನೇರವಾಗಿ ಹೇಳಲಾಗುವುದಿಲ್ಲ. ಅದಕ್ಕೆ ಆಕೆ ಸುತ್ತಿ ಬಳಸಿ ಮಾತಾಡುತ್ತಾಳೆ. ಅವಳ ಮೌನಕ್ಕೂ ಒಂದು ಮಹಾ ಮೌಲ್ಯವಿದೆ. ಅವಳ ಪ್ರತಿಯೊಂದು ಹೆಜ್ಜೆಗೂ ಒಂದೊಂದು ಒಳಾರ್ಥವಿದೆ.
೧೩) ಇದು ತುಂಬಾ ಖಾಸಗಿ ವಿಷಯ. ಇದನ್ನು ಬರೆಯುವಷ್ಟು ಧೈರ್ಯ ನನಗಿನ್ನೂ ಬಂದಿಲ್ಲ. So ಕೊನೆಯ ಗುಣ ಕತ್ತಲ ಕೋಣೆಯಲ್ಲಿಯೇ ರಹಸ್ಯವಾಗಿರಲಿ... ಇಲ್ಲಿ "ನಾನು" ಒಂದು ಕಾಲ್ಪನಿಕ ಪಾತ್ರವಷ್ಟೇ..