ಗರ್ಜಿಸುವ ಸಿಡಿಲೆದುರಾದರೂ ಸೋಲದ
ಸೆಲೆ ನನ್ನದಾಗಿರುವಾಗ, ನಿನ್ನ ಆ
ವಿರಹದ ಗುಡುಗನ್ನು ಬಿಗಿದಪ್ಪಿಕೊಳ್ಳುವ
ಕಲೆಯನ್ನು ಕಲಿಸಿ ದೂರ ಹೋಗಬಾರದಿತ್ತೆ..?
ಸಪ್ತ ಮಹಾಸಾಗರಗಳ ಆರ್ಭಟವನ್ನು
ಎದುರಿಸುವ ಧೀರ ನಾನಾಗಿರುವಾಗ,
ನಿನ್ನ ಆ ವಿರಹದ ಪ್ರವಾಹದಲ್ಲಿ ಈಜುವ
ಛಲವನ್ನು ಬೆಳೆಸಿ ಮರೆಯಾಗಬಾರದಿತ್ತೆ..?
ಕಾದ ದೈತ್ಯಧರೆಗೆ ಮಳೆ ಸುರಿಸಿ ತಂಪು
ನೀಡುವ ಆಸೆ ನನ್ನದಾಗಿರುವಾಗ, ನಿನ್ನ ಆ
ವಿರಹದ ಬೆಂಕಿಮಳೆಗೆ ಆಸರೆಯಾಗಿ ಒಂದು
ಪ್ರೀತಿಯ ಕೊಡೆಯನ್ನಾದರೂ ಕೊಡಬಾರದಿತ್ತೆ..?
ಸಾಗರದಷ್ಟು ಹಾಲಾಹಲ ವಿಷ ಪಾನಿಸಿದರೂ
ಬದುಕುವ ಹಟ ನನ್ನಲ್ಲಿರುವಾಗ, ನಿನ್ನ ಆ
ವಿರಹದ ವಿಷದಿಂದ ನನ್ನ ಉಳಿಸಲು
ನೀ ಮತ್ತೆ ಅಮೃತವಾಗಿ ಬರಬಾರದಿತ್ತೆ..?