ಮುಚ್ಚಿಡಬೇಕಾದ 5 ವಿಷಯಗಳು - 5 Things to be kept secretly in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮುಚ್ಚಿಡಬೇಕಾದ 5 ವಿಷಯಗಳು - 5 Things to be kept secretly in Kannada

Director Satishkumar

               ನಾವು ಸದಾಕಾಲ ಸಂತೋಷವಾಗಿರಬೇಕೆಂದರೆ ಕೆಲವು ವಿಷಯಗಳನ್ನು ಮುಚ್ಚಿಡಬೇಕು. ಯಾಕೆಂದರೆ ನಾವು ಅತಿಯಾಗಿ ಯಾರನ್ನು ನಂಬಿರುತ್ತೇವೇಯೋ ಅವರೇ ನಮಗೆ ನಂಬಿಕೆ ದ್ರೋಹ ಮಾಡುತ್ತಾರೆ. ಅಲ್ಲದೆ  ವಿಶ್ವಾಸಘಾತುಕರು ನಮ್ಮ ಜೊತೆಯಲ್ಲೇ ಇರುತ್ತಾರೆ. ಕೆಲವು ಸಂಗತಿಗಳು ರಹಸ್ಯವಾಗಿದ್ದರೆ ಮಾತ್ರ ನಾವು ಸುಖವಾಗಿರಬಹುದು. ಗುಟ್ಟುಗಳು ಗುಟ್ಟಾಗೆ ಇರಬೇಕು. ಗುಟ್ಟು ರಟ್ಟಾದರೆ ನಮ್ಮ ಜುಟ್ಟು ಬೇರೆಯವರ ಕೈಗೆ ಹೋದಂತೆ...



 ಮುಚ್ಚಿಡದಬೇಕಾದ ೫ ವಿಷಯಗಳು ಇಂತಿವೆ :

೧) ಸಾಚಾ ಅನ್ನಿಸಿಕೊಳ್ಳಲು ನೀವು ಮಾಡಿದ ಸಣ್ಣಪುಟ್ಟ  ಸಹಾಯಗಳನ್ನು ಊರತುಂಬ ಡಂಗುರ ಸಾರುವ ಅವಶ್ಯಕತೆ ಏನಿಲ್ಲ. ನೀವು ಮಾಡಿದ ಸಣ್ಣ ಸಹಾಯವನ್ನು ಎಲ್ಲರಿಗೂ ಹೇಳಿ, ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯ ಮಾನಹರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನೀವು ಒಂದು ಕೈಯಿಂದ ಕೊಟ್ಟಿರುವ ದಾನ ಮತ್ತೊಂದು ಕೈಗೆ ಗೊತ್ತಾಗದಿದ್ದರೆ ನಿಮ್ಮ ಘನತೆ ಮತ್ತಷ್ಟು ಹೆಚ್ಚಾಗುತ್ತದೆ. ನೀವು ಮಾಡಿದ ಸಹಾಯವನ್ನು ಎಲ್ಲರ ಮುಂದೆ ಬಡಾಯಿ ಕೊಚ್ಚಿಕೊಂಡಂತೆ ಹೇಳುವುದರಿಂದ ನಿಮ್ಮಲ್ಲಿ ಒಣಜಂಭ ತುಂಬಿಕೊಳ್ಳುತ್ತದೆ. ಈ ಒಣಜಂಭ ನಿಮ್ಮ ಅವನತಿಗೆ ನೇರ ಆಮಂತ್ರಣ ನೀಡುತ್ತದೆ. ಆದ್ದರಿಂದ ಮಾಡಿದ ಸಹಾಯ, ದಾನ ಮತ್ತು ತ್ಯಾಗಗಳನ್ನು ಗುಟ್ಟಾಗಿಡುವುದು ನಿಮಗೇ ಶ್ರೇಯಸ್ಸುಕರ...


೨) ನಿಮ್ಮ ಆಂತರಿಕ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ನಿಮಗೆ ಸಿಗುವುದಾದರೂ ಏನಿದೆ? ನಿಮ್ಮ ಆಂತರಿಕ ಭಾವನೆಗಳನ್ನು ಮತ್ತು ನಂಬಿಕೆಗಳನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ನೀವು ಅನಾವಶ್ಯಕವಾಗಿ ನಗೆಪಾಟಲಿಗೀಡಾಗುತ್ತೀರಿ. ನಿಮ್ಮ ಭಾವನೆಗಳಿಗೆ ಬೇರೆಯವರು ಬೆಲೆ ಕೊಡದಿದ್ದಾಗ ನೋವಾಗುವುದು ನಿಮಗೆ ತಾನೇ? ಬೇರೆ ವ್ಯಕ್ತಿ ಇಲ್ಲವೇ ವಸ್ತುವಿನ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಶೇರ್ ಮಾಡುವುದರಿಂದ ವಿನಾಕಾರಣ ವಾದ ಶುರುವಾಗುತ್ತದೆ. ಇದರಿಂದ ನಿಮ್ಮ ಸಮಯದ ಜೊತೆಗೆ ನಿಮ್ಮ ಮಾನಸಿಕ ನೆಮ್ಮದಿಯು ಹಾಳಾಗುತ್ತದೆ. ಬೇರೆಯವರ ಬಗ್ಗೆ ನಿಮಗಿರುವ ಭಾವನೆಗಳನ್ನು ಸೂಕ್ತವಲ್ಲದ ಜಾಗದಲ್ಲಿ ವ್ಯಕ್ತಪಡಿಸಿದಾಗ ನಿಮಗೆ ಶತ್ರುಗಳು ಹುಟ್ಟಿಕೊಳ್ಳುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಆದ್ದರಿಂದ ನಿಮ್ಮ ಭಾವನೆಗಳು ಮತ್ತು ನಂಬಿಕೆಗಳು ನಿಮ್ಮಲ್ಲೇ ಇದ್ದರೆ ಕ್ಷೇಮ...

೩) ನಿಮ್ಮ ಗುರಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಶ್ಯಕತೆ ಏನಿಲ್ಲ. ನಿಮ್ಮ ಕನಸುಗಳನ್ನು ಕೇಳಿ ಹೊಟ್ಟೆ ಉದುರಿಕೊಂಡು ನಿಮ್ಮ ದಾರಿಗೆ ಕಲ್ಲಾಕುವ ಜನರಿಗೇನು ಕೊರತೆಯಿಲ್ಲ. ನಿಮ್ಮ ಕನಸುಗಳು ನನಸಾದಾಗ ಎಲ್ಲರೂ ಸಹಾಯ ಕೇಳಿ ಮನೆಮುಂದೆ ಬಂದು ಕ್ಯೂ ಹಚ್ಚಿ ನಿಲ್ಲುತ್ತಾರೆ. ಆದರೆ ನಿಮ್ಮ ಕನಸುಗಳು ಕನಸಾಗಿರುವಾಗ ಎಲ್ಲರೂ ನಿಮ್ಮನ್ನು ನೋಡಿ ನಗುತ್ತಾರೆ.  ನಿಮ್ಮ ಗುರಿಗಳನ್ನು ಅನಾವಶ್ಯಕವಾಗಿ ಅಸೂಕ್ತ ವ್ಯಕ್ತಿಗಳೊಂದಿಗೆ ಶೇರ್ ಮಾಡುವುದರಿಂದ ನಿಮ್ಮನ್ನು ಜನ ಗೇಲಿ ಮಾಡುತ್ತಾರೆ. ಇದರಿಂದ ನಿಮ್ಮ ಮೇಲೆ ನಿಮಗಿರುವ ನಂಬಿಕೆ ಕಮ್ಮಿಯಾಗಬಹುದು. ಜನ ಗೇಲಿ ಮಾಡಲು ಪ್ರಾರಂಭಿಸಿದಾಗ ನೀವು ನಿಮ್ಮ ಗುರಿಯಿಂದ ವಿಚಲೀತರಾಗುತ್ತೀರಿ. ನಿಮ್ಮ ಪ್ಲ್ಯಾನಗಳನ್ನು ಶೇರ್ ಮಾಡಿ ಗೇಲಿ ಮಾಡಿಸಿಕೊಳ್ಳುವ ಬದಲು ನಿಮ್ಮ ಸಾಧನೆಯ ರಿಸಲ್ಟನ್ನು ತೋರಿಸಿ ಗೌರವಿಸಿಕೊಳ್ಳಿ....


೪) ನಿಮ್ಮ ಸಮಸ್ಯೆಗಳನ್ನು ಸುಮ್ಮನೆ ಎಲ್ಲರ ಜೊತೆ ಶೇರ್ ಮಾಡುವುದರಿಂದ ನಿಮಗೆ ಪರಿಹಾರ ಸಿಗಲ್ಲ. ನಿಮ್ಮ ಸಮಸ್ಯೆಗಳು ಜನರ ಕಿವಿಗೆ ಬಿದ್ದಾಗ ನಿಮ್ಮ ಘನತೆಗೆ, ಗೌರವಕ್ಕೆ ಕುತ್ತು ಬರುತ್ತದೆ. ನಿಮ್ಮ ಸಮಸ್ಯೆಗಳನ್ನು ಕೇಳಿ ಜನ ನಿಮಗೆ ಸಹಾಯ ಮಾಡುವ ಬದಲು ನಿಮ್ಮನ್ನು ಕೀಳಾಗಿ ಕಾಣುತ್ತಾರೆ. ನೀವು ಸಮಸ್ಯೆಗಳನ್ನು ಶೇರ್ ಮಾಡಿದಷ್ಟು ಜನರನ್ನು ಕಳೆದುಕೊಳ್ಳುತ್ತೀರಿ. ಸಮಸ್ಯೆಗಳನ್ನು ಶೇರ್ ಮಾಡುವುದರಿಂದ ನಿಮಗೆ ಸಿಂಪಥಿ ಸಿಗಬಹುದೇ ವಿನ: ಸೋಲುಷನ್ ಸಿಗಲ್ಲ. ನಿಮ್ಮ ಸಮಸ್ಯೆಗಳಿಗೆ ಫೇಸ್ಬುಕ್ನಲ್ಲಿ ನಿಮಗೆ ಲೈಕು ಕಮೆಂಟುಗಳು ಬರಬಹುದಷ್ಟೇ.  ನಿಮ್ಮ ಮನೆಯ ಸಮಸ್ಯೆಗಳನ್ನು ಬೀದಿಗೆ ತಂದರೆ ಜನರಿಗೆ ಬಿಟ್ಟಿ ಮನರಂಜನೆ ಸಿಗುತ್ತದೆಯೇ ಹೊರತು ನಿಮಗೆ ಸಮಾಧಾನ ಸಿಗಲ್ಲ...


೫) ನಿಮ್ಮ ಪರ್ಸನಲ ಲೈಫಿಗೆ ಪಬ್ಲಿಸಿಟಿ ಕೊಡುವ ಅವಶ್ಯಕತೆ ಇಲ್ಲ. ನಿಮ್ಮ ಆಂತರಿಕ ಜೀವನವನ್ನು ಜಗತ್ತಿಗೆ ತೆರೆದಿಟ್ಟಷ್ಟು ನಿಮಗೆ ಅಪಾಯಗಳು ಹೆಚ್ಚು. ಎಲ್ಲರಿಗೂ ಹೇಳಲು ನಿಮ್ಮ ಖಾಸಗಿ ಜೀವನವೇನು ಧಾರಾವಾಹಿಯೇ? ನಿಮ್ಮ ಖಾಸಗಿ ವಿಚಾರಗಳನ್ನು ಯಾರೊಂದಿಗೂ ಶೇರ್ ಮಾಡದಿದ್ದರೆ ತುಂಬಾನೆ ಒಳ್ಳೆಯದು. ನಿಮ್ಮ ಸೆಕ್ಸ್ ಲೈಫನ್ನು ಮತ್ತು ನಿಮ್ಮ ಸಂಗಾತಿಯ ಸೌಂದರ್ಯವನ್ನು ಬೇರೆಯವರೊಂದಿಗೆ ಶೇರ್ ಮಾಡಿ ಕಿರುಕುಳವನ್ನು ಅನುಭವಿಸುವ ಪ್ರಮೇಯವೇಕೆ? ನಿಮ್ಮ ಪ್ರೇಯಸಿ ಇಲ್ಲ ಮಡದಿಯ ಗುಣಗಳನ್ನು ಅಥವಾ ವಿಕನೆಸಗಳನ್ನು ನಿಮ್ಮ ಗೆಳೆಯರೊಡನೆ ಶೇರ್ ಮಾಡಿ ಅವಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಗೀಳೆಕೆ? ನಿಮ್ಮ ಪರ್ಸನಲ್ ಲೈಫ್ ಪ್ರೈವೇಟ್ ಆಗಿದಷ್ಟು ನಿಮಗೆ ಕ್ಷೇಮ. ಬೆಡ್ರೂಮಿನ ರಹಸ್ಯಗಳು ಬೀದಿಗೆ ಬರದಿದ್ದರೆ ಚೆಂದ...





Blogger ನಿಂದ ಸಾಮರ್ಥ್ಯಹೊಂದಿದೆ.