ಕೆಲವು ವಿಷಯಗಳನ್ನು ಬೇಗನೆ ತಿಳಿದುಕೊಳ್ಳಬಾರದು. ಇನ್ನು ಕೆಲವು ವಿಷಯಗಳನ್ನು ಲೇಟಾಗಿ ತಿಳಿದುಕೊಳ್ಳಬಾರದು. ನಮ್ಮ ಸಮಸ್ಯೆ ಏನೆಂದರೆ, ನಾವು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಸರಿಯಾದ ಸಮಯಕ್ಕೆ ತಿಳಿದುಕೊಳ್ಳಲ್ಲ. ಮತ್ತೆ ತಿಳಿದುಕೊಳ್ಳಬಾರದ ವಿಷಯಗಳನ್ನು ಬೇಗನೆ ತಿಳಿದುಕೊಂಡು ತಪ್ಪು ದಾರಿ ತುಳಿಯುತ್ತೇವೆ. ಆದ್ದರಿಂದಲೇ ಯಡವಟ್ಟುಗಳಾಗುತ್ತವೆ. ಭಾರತದಲ್ಲಿ ಲೈಂಗಿಕ ಶಿಕ್ಷಣದ ಕೊರತೆಯಿಂದಲೇ ಮಕ್ಕಳು ಹರೆಯದ ವಯಸ್ಸಲ್ಲಿ ಹಾದಿ ತಪ್ಪುತ್ತಿದ್ದಾರೆ ಎಂಬುದು ಗೊತ್ತಿದ್ದರೂ ಹಿರಿಯರು ಮಡಿವಂತಿಕೆಯ ನಾಟಕವಾಡುತ್ತಿದ್ದಾರೆ. ಅದಕ್ಕೆ ಕೆಲವು ಸಂಗತಿಗಳನ್ನು ಸ್ವತಃ ನಾವೇ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.
೧) ನಮ್ಮ ದೇಹ ನೂರಾರು ಬಗೆಯ ರಾಸಾಯನಿಕಗಳ ಪಾಕಶಾಲೆ. ಪ್ರೌಢಾವಸ್ಥೆಗೆ ಬಂದಾಗ ಹಾರ್ಮೋನುಗಳ ವೈಪರೀತ್ಯದಿಂದ ನಮ್ಮ ದೇಹದಲ್ಲಿ ಕೆಲವೊಂದಿಷ್ಟು ಗಂಭೀರ ಬದಲಾವಣೆಗಳಾಗುತ್ತವೆ. ಅವುಗಳಿಗೆ ಹೆದರುವ ಅವಶ್ಯಕತೆಯಿಲ್ಲ. ದೈಹಿಕ ಬದಲಾವಣೆಗಳು ಈ ವಯಸ್ಸಿಯಲ್ಲಿ ಸಹಜ ಮತ್ತು ನೈಸರ್ಗಿಕವಷ್ಟೇ...
೨) 16 - 18 ಹಾದಿ ತಪ್ಪಿಸುವ ವಯಸ್ಸು. ಆದರೆ ನಾವು ಹಾದಿ ತಪ್ಪಬಾರದು. 18ರಲ್ಲಿ 108 ನೀಲಿ ಕನಸುಗಳು ಸೆನ್ಸಾರಿಲ್ಲದೆ ಬೀಳುವುದು ಸಹಜ. ಹಾಗಂತಾ ನಾವು ನಮ್ಮ ಮನಸ್ಸನ್ನು ದಿಕ್ಕು ದೆಸೆಯಿಲ್ಲದೆ ಬೇಕಾಬಿಟ್ಟಿಯಾಗಿ ಹರಿಬಿಡಬಾರದು. ಮನಸ್ಸು ನಮ್ಮ ಹತೋಟಿ ಮೀರಿ ಹೋದರೆ ಅದಕ್ಕಿಂತ ದೊಡ್ಡ ಶತ್ರು ಬೇರೆ ಯಾರಿಲ್ಲ. ಅದೇ ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ಅದಕ್ಕಿಂತ ಒಳ್ಳೆಯ ಮಿತ್ರನಿಲ್ಲ. ಅದಕ್ಕಾಗಿ ನಮ್ಮ ಮನಸ್ಸನ್ನು ಮಿತ್ರನಂತೆ ನಮ್ಮ ಹತೋಟಿಯಲ್ಲಿಟ್ಟುಕೊಂಡರೆ ನಮಗೇ ಒಳ್ಳೆಯದು...
೩) ಓದುವ ವಯಸ್ಸಲ್ಲಿ ಪ್ರೀತಿ-ಗೀತಿ-ಇತ್ಯಾದಿಗಳನ್ನೆಲ್ಲ ಮಾಡಲೇಬೇಕು ಎಂಬ ನಿಯಮವೇನಿಲ್ಲ. ಪ್ರೇಮ-ಕಾಮಗಳ ಅವಶ್ಯಕತೆ ಇಲ್ಲ. ನಿಮ್ಮ ಮೊದಲ ಆದ್ಯತೆ ನಿಮ್ಮ ಗುರಿಯೆಡೆಗೆ ಇರಬೇಕು. ನಿಮ್ಮ ಕನಸುಗಳಿಗೆ, ಗುರಿಗಳಿಗೆ ಮೊದಲ ಪ್ರಾಮುಖ್ಯತೆ ಇರಬೇಕೆ ಹೊರತು ಡ್ರೀಮ್ ಬಾಯ್, ಡ್ರೀಮ್ ಗರ್ಲಗಳಿಗಲ್ಲ. ಮೋಜು, ಮಸ್ತಿ, ಮನರಂಜನೆ ಮಾಡಬೇಕು. ಆದರೆ ನಮ್ಮ ಮನರಂಜನೆಗಾಗಿ ಬೇರೆಯವರ ಜೀವನದಲ್ಲಿ ಆಟವಾಡಬಾರದು. ಬೇರೆಯವರ ಜೀವನವನ್ನು ಹಾಳು ಮಾಡಬಾರದು ಮತ್ತು ನಮ್ಮ ಜೀವನವನ್ನು ಸಹ ಹಾಳು ಮಾಡಿಕೊಳ್ಳಬಾರದು...
೪) 18ರ ಎಳೆ ವಯಸ್ಸಿನಲ್ಲಿರುವ ಯಾವ ಭಾವನೆಗಳು ಸಹ ಮ್ಯಾಚುರ್ಡ್ ಆಗಿರುವುದಿಲ್ಲ. ಈ ವಯಸ್ಸಿನಲ್ಲಿ ಸ್ನೇಹ ಪ್ರೀತಿ ಇತ್ಯಾದಿಗಳೆಲ್ಲ ತಾತ್ಕಾಲಿಕ ಭಾವನೆಗಳಾಗಿರುತ್ತವೆ. ಇಲ್ಲ ತಾತ್ಕಾಲಿಕ ಬೇಡಿಕೆಗಳಾಗಿರುತ್ತವೆ. ಆದ್ದರಿಂದ ತಾತ್ಕಾಲಿಕ ಬೇಡಿಕೆಗಳಿಗೆ ಮತ್ತು ಭಾವನೆಗಳಿಗೆ ಅತಿಯಾದ ಬೆಲೆ ಕೊಟ್ಟು ಶಾಶ್ವತವಾದ ಜೀವನಕ್ಕೆ ಕಲ್ಲಾಕಿಕೊಳ್ಳಬಾರದು. ದೇಹದ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅಡ್ಡದಾರಿ ಹಿಡಿಯಬಾರದು. ಲವ್ವರಗಿಂತ ಲೈಫ್ ತುಂಬಾ ಮುಖ್ಯ ಅನ್ನೋದು ಸದಾ ನೆನಪಲ್ಲಿರಬೇಕು...
೫) ಈ ವಯಸ್ಸಿನಲ್ಲಿ ಬೇರೆಯವರಿಂದ ಮತ್ತು ಬೇಡದವರಿಂದ ಬೇಕಾಬಿಟ್ಟಿಯಾಗಿ ಸಲಹೆಗಳನ್ನು ಕೇಳಬೇಕಾಗುತ್ತದೆ. ಬಹಳ ಕೇರಫುಲ್ಲಾಗಿ ಆಲಿಸಿ, ಯೋಚಿಸಿ ಈ ಸಲಹೆಗಳನ್ನು ಸ್ವೀಕರಿಸಬೇಕಾಗುತ್ತದೆ. ಈ ಟೈಮಲ್ಲಿ ನೆಗೆಟಿವ್ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಬಹಳ ಯೋಚಿಸಿ ನಮ್ಮ ಸಾಮರ್ಥ್ಯವನ್ನು ಅಳೆದು ತೂಗಿ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಣ್ಮುಚ್ಚಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಬಿಟ್ಟಿ ಸಲಹೆಗಳನ್ನು ಕೊಟ್ಟ ಜನ ಮುಂದೆ ಸಂಕಷ್ಟಗಳು ಬಂದಾಗ ಸಹಾಯ ಮಾಡಲು ಬರುವುದಿಲ್ಲ...
೬) ಕಲ್ಪನಾ ಲೋಕದಲ್ಲಿ ಜೀವಿಸುವುದನ್ನು ನಿಲ್ಲಿಸಬೇಕು. ಭ್ರಮಾಲೋಕದಿಂದ ಹೊರಬಂದು ವಾಸ್ತವಿಕ ಪ್ರಪಂಚವನ್ನು ಅರ್ಥಮಾಡಿಕೊಳ್ಳಬೇಕು. ಬದುಕು ಪಾಠ ಕಲಿಸುವ ಮುಂಚೆಯೇ ನಾವು ಬದಲಾಗಬೇಕು. ಬದುಕಿನ ಪಾಠವೆಂದರೆ ಒಂಥರಾ ಕ್ರೂರ ಶಿಕ್ಷೆಯೇ ಸರಿ. ಅದಕ್ಕಾಗಿ ಜೀವನದ ಪ್ರತಿಕ್ಷಣ ಬೆಸ್ಟ್ ಆಗಿರುವಂತೆ ಬದುಕಲು ನಾವು ಈಗಿನಿಂದಲೇ ಪ್ರಾರಂಭಿಸಬೇಕು.
೭) ಈ ವಯಸ್ಸಿನಲ್ಲಿ ತಪ್ಪುಗಳಾಗುವುದು ಸಹಜ. ಹಾಗಂತಾ ಬೇಕಂತಲೆ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಗೊತ್ತಾಗದೆ ಮಾಡಿದರೂ ಸಹ, ಮಾಡಿದ ತಪ್ಪುಗಳನ್ನು ಬೇಗನೆ ಒಪ್ಪಿಕೊಂಡು ಬದಲಾಗಬೇಕು. ಅವುಗಳಿಂದ ಒಳ್ಳೆಯ ಅನುಭವಗಳನ್ನು ಸಂಪಾದಿಸಬೇಕು. ನಮ್ಮ ಕಲೆಯನ್ನು ಕ್ಷುಲ್ಲಕ ಕಾರಣಗಳಿಗಾಗಿ ಕೊಲೆ ಮಾಡದೆ ಕೆಲಸ ಪ್ರಾರಂಭಿಸಬೇಕು. ನಮ್ಮ ಫ್ಯಾಷನನ್ನು ಪ್ರೋಫೆಷನ್ನಾಗಿ ಪರಿವರ್ತಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕುಂಟು ನೆಪಗಳನ್ನು ಹೇಳಿ ಜಾರಿಕೊಳ್ಳುವುದನ್ನು ನಿಲ್ಲಿಸಬೇಕು...
೮) ಹಳೆಯ ಕಹಿ ನೆನಪುಗಳಲ್ಲಿ ಕೊರಗುವುದು ಸರಿಯಲ್ಲ. ಫ್ಯುಚರ್ ಪ್ಲ್ಯಾನಗಳನ್ನು ಮಾಡುವುದು ತಪ್ಪಲ್ಲ. ಇವತ್ತು ನಾವು ಮಾಡುವ ಕೆಲಸದ ಮೇಲೆ ನಮ್ಮ ನಾಳೆ ಅವಲಂಬಿಸಿದೆ. ಭೂತವನ್ನು ಕೆದಕದೆ, ಭವಿಷ್ಯಕ್ಕೆ ಹೆದರದೆ, ಇವತ್ತನ್ನು ಎಂಜಾಯ್ ಮಾಡುತ್ತಾ ಮುಂದೆ ಸಾಗಬೇಕು. ಕಷ್ಟಪಟ್ಟರೆ ಮಾತ್ರ ನಾವು ಇಷ್ಟಪಟ್ಟಿದ್ದು ನಮಗೆ ಸಿಕ್ಕೆ ಸಿಗುತ್ತದೆ. ಕಂಡ ಕನಸುಗಳೆಲ್ಲ ನನಸಾಗೇ ಆಗುತ್ತವೆ. ನಾವು ಕನಸು ಕಾಣಲು ಹಿಂಜರಿಯಬಾರದು...
ತಿಳಿದುಕೊಳ್ಳಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಲೈಫ್ ಅವುಗಳನ್ನು ನಿಮಗೆ ಸಂದರ್ಭಾನುಸಾರವಾಗಿ ಸರಿಯಾಗಿ ಕಲಿಸುತ್ತದೆ. All the Best...