ತಲೆ ಕೆಡಿಸಿದ ಕವನ : Kannada Poetry - Kannada Kavana - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ತಲೆ ಕೆಡಿಸಿದ ಕವನ : Kannada Poetry - Kannada Kavana

Director Satishkumar

                                  ಅದು ಐದು ವರ್ಷದ ಹಿಂದಿನ ಮಾತು. ಆವಾಗ ನಾನು ನಮ್ಮೂರಲ್ಲಿ SSLC ಓದ್ತಿದ್ದೆ. ನಮ್ಮದು ಬರೀ ಬಾಲಕರ ಪ್ರೌಢಶಾಲೆ. ಅಲ್ಲಿ ಬಾಲಕಿಯರ ನೆರಳು ಸಹ ಬೀಳುತ್ತಿರಲಿಲ್ಲ. ಮುಂಜಾನೆಯ ಮಂಜಿನಂಥ ಕುರುಚಲು ಗಡ್ಡ, ಕುಡಿ ಮೀಸೆ ಮನಸಲ್ಲಿ ಇಲ್ಲಸಲ್ಲದ ಆಸೆಗಳನ್ನು ಹುಟ್ಟು ಹಾಕಿದ್ದವು. ನಮ್ಮ ಶಾಲೆಯಲ್ಲಿ  ಹುಡುಗಿಯರಿಲ್ಲದ ಕಾರಣ ನಾವಿನ್ನೂ ಬಾಲಕರಾಗೇ ಇದ್ದೆವು, ಹಿಂಬಾಲಕರಾಗಿರಲಿಲ್ಲ. 

                     ಕನಸ್ಸಲ್ಲಿ ಬಂದು ಕಾಡೋ ಕಲ್ಪನೆಯ ಹುಡುಗಿಯರು ಕಣ್ಮುಂದೆ ಬರಲು ಸಾಧ್ಯವೇ ಇರಲಿಲ್ಲ. ಆ ಸಮಯದಲ್ಲಿ ಸಿನಿಮಾದಲ್ಲಿ ತೋರಿಸುವ ಪೊಳ್ಳು ಸುಳ್ಳು ಪ್ರೀತಿಯನ್ನೇ ನಿಜವೆಂದು ನಂಬಿ ನಾ ನನ್ನದೇ ಆದ ಭ್ರಮಾಲೋಕದಲ್ಲಿ ಮೈಮರೆಯುತ್ತಿದ್ದೆ. ಅಂಥದರಲ್ಲಿ ನಮ್ಮ ಇಂಗ್ಲೀಷ್ ಪಠ್ಯಕ್ಕೆ ಅಳವಡಿಸಿದ್ದ "ದಿ ಬೆಗ್ಗರ್ ಮೇಡ್" (The Beggar Maid) ಪದ್ಯ ಮತ್ತಷ್ಟು ತಲೆಕೆಡಿಸಿತು. ಆಲ್ಫ್ರೆಡ್ ಲಾರ್ಡ್ ಟೆನ್ನಿಸನ್ (Alfred Lord Tennyson) ಬರೆದ ಆ 16 ಸಾಲಿನ ಪುಟ್ಟ ಕವನ, ಹದಿನಾರರ ಹರೆಯದಲ್ಲಿದ್ದ ನನ್ನ ಕಲ್ಪನಾ ಶಕ್ತಿಯನ್ನೇ ಬದಲಿಸಿ, ನನ್ನ ತಲೆ ಕೆಡಿಸಿತು. ಆದರೆ ಆ ಪದ್ಯವೇ ನನಗೆ ಹೆಣ್ಣಿನ ಸೌಂದರ್ಯಕ್ಕಿರುವ ಶಕ್ತಿಯನ್ನು ಪರಿಚಯಿಸಿದ್ದು...


 "ದಿ ಬೆಗ್ಗರ್ ಮೇಡ್" (ಭಿಕ್ಷುಕಿ ಕನ್ಯೆ ) ಪದ್ಯದ ಅನುವಾದ ಇಂತಿದೆ ;

  "ಒಂದಿನ ಒಬ್ಬಳು ಸುಂದರವಾದ ಭಿಕ್ಷುಕಿ ಕನ್ಯೆ, ತನ್ನೆರಡು ಕೈಗಳನ್ನು ತನ್ನ ಸ್ತನಗಳಿಗೆ ಅಡ್ಡಲಾಗಿ ಹಿಡಿದುಕೊಂಡು ಬರಿಗಾಲಲ್ಲಿ ಕೊಫೆಟುವಾ ರಾಜನ ಆಸ್ಥಾನಕ್ಕೆ ಬಂದಳು...


ಅವಳು ಪದಗಳಿಗೂ ಸಿಗದಷ್ಟು ಸುಂದರಿಯಾಗಿದ್ದಳು. ಅವಳನ್ನು ಸ್ವಾಗತಿಸಲು ಸ್ವತಃ ಕೊಫೆಟುವಾ ರಾಜನೇ ತನ್ನ ಸಿಂಹಾಸನವಿಳಿದು ಬಂದನು. ರಾಜನ ಈ ನಡವಳಿಕೆಯಲ್ಲಿ ಆಶ್ಚರ್ಯಪಡುವಂಥದ್ದು ಏನಿರಲಿಲ್ಲ. ಏಕೆಂದರೆ ಅವಳು ಹಗಲಿಗಿಂತಲೂ ಸುಂದರವಾಗಿದ್ದಳು....


ಹರಿದ ಬಟ್ಟೆಯಲ್ಲಿ ಅವಳು ಮೋಡಗಳಲ್ಲಿ ಮರೆಯಾದ ಚಂದ್ರನಂತೆ ಕಂಗೊಳಿಸುತ್ತಿದ್ದವು. ಒಬ್ಬ ಅವಳ ಕಾಲ್ಗೆಜ್ಜೆಗಳನ್ನು ವರ್ಣಿಸಿದರೆ, ಮತ್ತೊಬ್ಬ ಅವಳ ಕಂಗಳನ್ನು ವರ್ಣಿಸಿದನು. ಒಬ್ಬ ಅವಳ ಸುಂದರ ಕಪ್ಪು ಕೇಶರಾಶಿಯನ್ನು ಹೊಗಳಿದರೆ, ಮತ್ತೊಬ್ಬ ಅವಳ ಮುದ್ದಾದ ಮುಖವನ್ನು ಅಪ್ಸರೆಗೆ ಹೋಲಿಸಿದನು.


ಕೊಫೆಟುವಾ ರಾಜ ಅವನ ರಾಜ್ಯದಲ್ಲಿ ಇಂಥ ಸುಂದರಿಯನ್ನು ಮೊದಲೆಂದು ನೋಡಿರಲಿಲ್ಲ. ಅದಕ್ಕೆ ತಡಮಾಡದೆ ಕೂಡಲೇ ಆತ " ಈ ಭಿಕ್ಷುಕಿ ಕನ್ಯೆ ನನ್ನ ರಾಣಿ" ಎಂದು ರಾಜ ಪ್ರತಿಜ್ಞೆ ಮಾಡಿದನು..."


             ಜಗತ್ತನ್ನೇ ಗೆದ್ದ ವೀರನೂ ಸಹ ಒಂದು ಹೆಣ್ಣಿನ ಸೌಂದರ್ಯಕ್ಕೆ ಸುಲಭವಾಗಿ ಸೋತು ಶರಣಾಗುತ್ತಾನೆ. ಹೆಣ್ಣಿನ ಸೌಂದರ್ಯಕ್ಕೆ ಸನ್ಯಾಸಿಯನ್ನು ಸಹ ಸಂಸಾರಿಯನ್ನಾಗಿ ಮಾಡುವ ಮಾಯಾಶಕ್ತಿಯಿದೆ. ಅವಳ ಸೌಂದರ್ಯದಲ್ಲೊಂದು ಸೆಳೆತವಿದೆ. ಆ ಸೆಳೆತದಿಂದಲೇ ಸಾವಿರಾರು ವರ್ಷಗಳಿಂದ ಪ್ರೇಮ ಸಾಹಿತ್ಯ ಸೃಷ್ಟಿಯಾಗುತ್ತಾ ಸಾಗಿದೆ. ಅವಳಿಗಾಗಿ ಎಷ್ಟೋ ಜೀವಗಳು ಸಾಯೋವರೆಗೂ ಕೊರಗಿವೆ. ಅವಳಿಗಾಗಿ ಎಷ್ಟೋ ಯುದ್ಧಗಳಾಗಿವೆ, ರಕ್ತಪಾತಗಳಾಗಿವೆ. ಅದು ಹೆಣ್ಣಿನ ತಪ್ಪಲ್ಲ. ಅದು ಅವಳ ಸೌಂದರ್ಯದಲ್ಲಿರುವ ಸೆಳೆತದ ಪ್ರಭಾವವಷ್ಟೇ...Blogger ನಿಂದ ಸಾಮರ್ಥ್ಯಹೊಂದಿದೆ.