ಬದುಕು ಕಲಿಸಿದ 22 ಪಾಠಗಳು - Lessons Taught by Life in Kannada - Life Quotes in Kannada - baduku kannada quotes
ಬದುಕು ಎಲ್ಲರಿಗೂ ಬೇಡವೆಂದು ಬೇಡಿಕೊಂಡರೂ ಕೆಲವು ಪಾಠಗಳನ್ನು ಕಲಿಸೇ ಕಲಿಸುತ್ತದೆ. ಬದುಕಿನ ಪಾಠಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬದುಕಿನ ಪಾಠಗಳು ನಮಗೆ ಜಗತ್ತಿನ ಅಸಲಿಯತ್ತನ್ನು ಪರಿಚಯಿಸಿ ಹುಷಾರಾಗಿ ಹೆಜ್ಜೆ ಇಡಲು ಕಲಿಸುತ್ತವೆ. ಕಿವಿಯಿಂದ ಕೇಳಿದ್ದು ಸತ್ಯವಲ್ಲ, ಕಣ್ಣಿನಿಂದ ನೋಡಿದ್ದು ಸತ್ಯವಲ್ಲ. ಮೂರ್ಖ ಮನಸ್ಸನ್ನು ದೂರವಿಟ್ಟು ಪ್ರಶಾಂತ ಮೆದುಳಿನಿಂದ ಪರಾಮರ್ಶಿಸಿದ್ದು ಮಾತ್ರ ಸತ್ಯ. ಸದ್ಯಕ್ಕೆ ಈ ಬದುಕು ನನಗೂ ಕೆಲವು ಪಾಠಗಳನ್ನು ಕಲಿಸಿದೆ. ನಾನೀಗ ಸ್ವಲ್ಪ ಹುಷಾರಾಗಿ ಹೆಜ್ಜೆಯಿಡಲು ಕಲಿತಿರುವೆ...
೧) ಈ ಜಗತ್ತಿನಲ್ಲಿ ಎಲ್ಲರೂ ದ್ವಿಮುಖಿಗಳಾಗಿದ್ದಾರೆ. ಎಲ್ಲರಿಗೂ ಎರಡೆರಡು ಮುಖಗಳಿವೆ. ಎಲ್ಲರೂ ಮುಖವಾಡಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಎಲ್ಲರ ಹುಸಿನಗೆಯ ಹಿಂದೆ ಒಂದು ಹಗೆತನವಿದೆ. ಎಲ್ಲರೊಳಗೊಬ್ಬ ರಾಕ್ಷಸ ಇದ್ದೇ ಇರುತ್ತಾನೆ.
೨) ಒಳ್ಳೆಯವರಿಗೆ ತುಂಬಾ ಜನ ಒಳ್ಳೆ ಫ್ರೆಂಡ್ಸ್ ಸಿಗುವುದಿಲ್ಲ. ಜಗತ್ತಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಲು ಹೊರಟವರಿಗೆ ತಾನಾಗಿಯೇ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಒಳ್ಳೇ ಮನಸ್ಸಿರೋ ವ್ಯಕ್ತಿಗಳು ಸರಿಯಾದ ಸಂಗಾತಿ ಸಿಗದೆ ಸಿಂಗಲಾಗಿರುತ್ತಾರೆ. ಎಲ್ಲರಿಗೂ ಒಳ್ಳೆಯದನ್ನು ಬಯಸಿದವರಿಗೆ ಕೊನೆಗೆ ಕೆಟ್ಟದಾಗುತ್ತದೆ. ಅದಕ್ಕೆ ತುಂಬಾ ಒಳ್ಳೆಯವರಾಗಿರಬಾರದು. ಸ್ವಲ್ಪ ಕೆಟ್ಟವರಾಗಿರಬೇಕು.
೩) ಎಲ್ಲ ಸೆಂಟಿಮೆಂಟಗಳು ಸ್ವಾರ್ಥದಿಂದ ತುಂಬಿವೆ. ಸ್ವಾರ್ಥವಿರದ ಸೆಂಟಿಮೆಂಟ ಇರಲು ಸಾಧ್ಯವಿಲ್ಲ. ಎಲ್ಲ ಜನ ತುಂಬಾ ಸ್ವಾರ್ಥಿಗಳಾಗಿದ್ದಾರೆ. ತೊಟ್ಟಿಲಿನಿಂದ ಚಟ್ಟದವರೆಗೆ ನಮಗೆ ಸಿಗುವವರೆಲ್ಲ ಸ್ವಾರ್ಥಿಗಳೇ. ಹುಲಿಯ ಕಣ್ಣುಗಳಿಂದ ತಪ್ಪಿಸಿಕೊಂಡು ಪಾರಾಗಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಬೆಕ್ಕು ಹುಲಿಯ ಕಣ್ಣುಗಳನ್ನೇ ಪರಚಿ ಪರಾರಿಯಾಗುತ್ತದೆ. ತನ್ನನ್ನು ತಲೆಯೊಡೆದು ಸಾಯಿಸುತ್ತಾರೆ ಎಂಬ ಭಯದಲ್ಲಿ ಹಾವು ಕಾಲು ಕಚ್ಚಿ ಕಣ್ಮರೆಯಾಗುತ್ತದೆ. ಅದೇ ರೀತಿ ಎಲ್ಲರೂ ಅವರವರ ಜೀವ ಮತ್ತು ಜೀವನಕ್ಕೆ ಮೊದಲ ಪ್ರಾಮುಖ್ಯತೆ ಕೊಡುತ್ತಾರೆ. ಬೇರೆಯವರ ಬಗ್ಗೆ ಯಾರು ಬಹಳಷ್ಟು ಯೋಚಿಸಲ್ಲ...
೪) ಸದ್ಯಕ್ಕೆ ನಾವು ಬಳಸುವ ಪ್ರತಿಯೊಂದು ವಸ್ತು ಕಲಬೆರಕೆಯಾಗಿದೆ. ನಾವು ಸೇವಿಸುವ ಪ್ರತಿಯೊಂದು ವಸ್ತುವಿನಲ್ಲಿಯೂ ಕಲಬೆರಕೆಯಿದೆ. ನಮ್ಮ ಪ್ರತಿ ಸ್ನೇಹ, ಪ್ರೀತಿ, ಸಹಾಯ, ಪ್ರೋತ್ಸಾಹ ಎಲ್ಲದರಲ್ಲಿಯೂ ಕಲೆಬೆರಕೆಯಿದೆ. ಕಲಬೆರಕೆಯಿರದ ವಸ್ತು, ವ್ಯಕ್ತಿ ಸಿಗಲ್ಲ.
೫) ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರು ವಿಭಿನ್ನರು. ಪ್ರತಿಯೊಬ್ಬರ ಆಸೆ, ಆಕಾಂಕ್ಷೆ, ಆಲೋಚನೆಗಳು ಬೇರೆಬೇರೆಯಾಗಿರುತ್ತವೆ. ಅದಕ್ಕಾಗಿ ನಾವು ನಮ್ಮನ್ನು ಯಾರೊಂದಿಗೂ ಕಂಪೇರ (Compare) ಮಾಡಿಕೊಂಡು ಕೊರಗಬಾರದು.
೬) ನಮ್ಮ ಸಂತೋಷ ನಮ್ಮಲ್ಲೇ ಇದೆ. ಬೇರೆ ವ್ಯಕ್ತಿ ಮತ್ತು ವಸ್ತುಗಳಿಂದ ನಮಗೆ ಸಂತೋಷ ಸಿಗುವುದಿಲ್ಲ. ನಮ್ಮ ಮನಸ್ಸಿನ ಬೇಡಿಕೆಗಳ ಮೇಲೆ ಮತ್ತು ತೃಪ್ತಿಯ ಮೇಲೆ ನಮ್ಮ ಸಂತೋಷವಿದೆ. ನಮ್ಮ ಪ್ರತಿ ನೋವಿಗೆ, ನಲಿವಿಗೆ ನಾವೇ ಕಾರಣಕರ್ತರೇ ಹೊರತು ಬೇರೆಯವರಲ್ಲ.
೭) ಭೂತವನ್ನು ಬದಲಾಯಿಸಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲವೂ ತಾನಾಗಿಯೇ ಬದಲಾಗುತ್ತವೆ. ಯಾವುದಕ್ಕೂ ಕೊರಗುವ ಅವಶ್ಯಕತೆ ಇಲ್ಲ. ಸಾಯೋತನಕ ಯಾರು ಜೊತೆಗಿರಲ್ಲ.
೮) ಕಣ್ಣಿಗೆ ಕಾಣಿಸದ್ದು ಮನಸ್ಸಿಗೆ ಕಾಣಿಸುತ್ತದೆ. ಆದರೆ ಮನಸ್ಸಿಗೆ ಕಾಣಿಸಿದ್ದು ಕಣ್ಣಿಗೆ ಕಾಣಿಸಲ್ಲ. ನಮ್ಮ ಜೀವನ ನಾವು ಅಂದುಕೊಂಡಷ್ಟು ಕಠಿಣವಲ್ಲ. ನಮ್ಮಲ್ಲಿ ತಾಳ್ಮೆಯ ಜೊತೆಗೆ ಧೈರ್ಯವಿದ್ದರೆ ಎಲ್ಲವೂ ಸುಲಭಸಾಧ್ಯ.
೯) ಸಿನಿಮಾದಲ್ಲಿ ತೋರಿಸುವ ಸ್ನೇಹ ಪ್ರೀತಿಗಳು ಶುದ್ಧ ಸುಳ್ಳುಗಳು. ಸಿನಿಮಾದವರ ಕಲ್ಪನೆಯ ಪ್ರೀತಿಗೂ ನಮ್ಮ ನಿಜಜೀವನದಲ್ಲಿರುವ ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬರೂ ನಮಗೆ ಒಂದಲ್ಲ ಒಂದು ಪಾಠವನ್ನು ಕಲಿಸಿಯೇ ಹೋಗುತ್ತಾರೆ. ಯಾರು ಮತ್ತು ಯಾವುದು ಸಾಯೋತನಕ ಶಾಶ್ವತವಲ್ಲ.
೧೦) ನಮ್ಮ ಸಮಸ್ಯೆಗಳನ್ನು, ನೋವುಗಳನ್ನು ಬೇರೆಯವರೊಂದಿಗೆ ಶೇರ್ ಮಾಡುವುದರಿಂದ ನಮಗೆ ಪರಿಹಾರ ಸಿಗಲ್ಲ. ನಮ್ಮ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿಗಳೊಂದಿಗೆ ಮಾತ್ರ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಭಾವನೆಗಳಿಗೆ ಬೆಲೆ ಕೊಡುತ್ತಾಳೆ. ಮಿಕ್ಕವರೆಲ್ಲ ಸಮಯಸಾಧಕರು. ನಮ್ಮ ಜೀವನದಲ್ಲಿ ನಮ್ಮ ಏಳ್ಗೆಯನ್ನು ಬಯಸುವ ಏಕೈಕ ವ್ಯಕ್ತಿಯೆಂದರೆ ಸಂಗಾತಿ ಮಾತ್ರ. ಸ್ನೇಹಿತರೆಲ್ಲ ಸುಂದರ ಸುಳ್ಳುಗಳು ಅಷ್ಟೇ...
೧೧) ಸೋಲಿನ ರುಚಿ ನೋಡದೆ ಗೆದ್ದ ಮಹಾಶೂರ ಯಾವನು ಇಲ್ಲ. ಸೋಲದೆ ಗೆಲ್ಲಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ಪ್ರೀತಿಸಿದಷ್ಟು ಅವು ನಮ್ಮಿಂದ ದೂರ ಓಡುತ್ತವೆ. ಎಲ್ಲರನ್ನೂ ಎಲ್ಲ ಸಂದರ್ಭಗಳಲ್ಲಿ ಮೆಚ್ಚಿಸಲು ಸಾಧ್ಯವಿಲ್ಲ. ನಾವು ಹೋಗುವ ದಾರಿಯಲ್ಲಿ ಕಲ್ಲು ಮುಳ್ಳುಗಳು, ಕಷ್ಟಗಳು ಬರದಿದ್ದರೆ ನಾವು ದಾರಿ ತಪ್ಪಿದ್ದೇವೆ ಎಂದರ್ಥ.
೧೨) ನಾನು ಬರೆಯುವುದರಿಂದ ಸಮಸ್ಯೆ ಸರಿಹೋಗಲ್ಲ. ನಾನು ಬರೆಯುವುದರಿಂದ ನಾನು ಶ್ರೀಮಂತನಾಗಬಹುದು. ಆದ್ರೆ ಸಮಸ್ಯೆ ಸಮಸ್ಯೆಯಾಗೇ ಇರುತ್ತದೆ. ಸಮಸ್ಯೆ ಸಾಯಬೇಕು ಎಂದರೆ ಅದನ್ನು ಸೃಷ್ಟಿಸುವವರು ಸಾಯಬೇಕು. ಜನ ಜಾಗೃತರಾಗಬೇಕು.
೧೩) ಕೆಲವು ಜನರು, ವಸ್ತುಗಳು, ವ್ಯವಸ್ಥೆಗಳು ಬದಲಾಗಲ್ಲ. ಒಪ್ಪಿಕೊಳ್ಳಲಾಗದಿರುವುದನ್ನು ಬದಲಾಯಿಸಬೇಕು. ಬದಲಾಯಿಸಲಾಗದಿರುವುದನ್ನು ಸುಮ್ಮನೆ ಒಪ್ಪಿಕೊಳ್ಳಬೇಕು. ಅದೇ ಸೇಫ ಜೀವನ.
೧೪) ದೇಹದ ಸೌಂದರ್ಯ ಶಾಶ್ವತವಲ್ಲ. ಆದರೆ ಮನಸ್ಸಿನ ಸೌಂದರ್ಯ ಅಮರ. ಭಾವನೆಗಳು ಟೆಂಪರರಿ ಅಷ್ಟೇ. ಅವು ನಿರಂತರವಾಗಿ ಬದಲಾಗುತ್ತಿರುತ್ತವೆ.
೧೫) ನಾವು ಹೆಚ್ಚಾಗಿ ಯಾರನ್ನು ಹಚ್ಚಿಕೊಂಡು ಪ್ರೀತಿಸುತ್ತೇವೇಯೋ ಅವರೇ ನಮಗೆ ಹರ್ಟ ಮಾಡುತ್ತಾರೆ. ನಾವು ಪ್ರೀತಿ ತೋರಿಸುವುದನ್ನು ನಿಲ್ಲಿಸಬಹುದು. ಆದರೆ ಪ್ರೀತಿಸುವುದನ್ನು ನಿಲ್ಲಿಸಲಾಗುವುದಿಲ್ಲ.
೧೬) ನಾವು ಕಂಡ ಎಲ್ಲ ಕನಸುಗಳು ನನಸಾಗಲ್ಲ. ನಾವು ಇಷ್ಟಪಟ್ಟಿದ್ದನ್ನು ಒಂದಲ್ಲ ಒಂದಿನ ಕಳೆದುಕೊಳ್ಳುತ್ತೇವೆ.
೧೭) ಕಾಲೇಜ್ನಲ್ಲಿ ನಾವು ಕಲಿತಿರುವುದೆಲ್ಲವು ದೊಡ್ಡ ಶೂನ್ಯ. ನಿಜವಾದ ಕಲಿಕೆ ಕಾಲೇಜ ಬಿಟ್ಟ ನಂತರವೇ ಶುರುವಾಗುತ್ತದೆ. ಎಲ್ಲ ಗೆಳೆಯರು ಕಾಲೇಜ್ ಮುಗಿದ ನಂತರ ಅವರವರ ಬಾಳಲ್ಲಿ ಬ್ಯುಸಿಯಾಗುತ್ತಾರೆ.
೧೮) ಮನಸ್ಸು ಮಹಾ ಮೂರ್ಖ. ಅದು ಯಾವತ್ತೂ, ಯಾವುದೇ ಕಾರಣಕ್ಕೂ ಬುದ್ಧಿಯ ಮಾತನ್ನು ಕೇಳುವುದಿಲ್ಲ.
೧೯) ಹೊಲದಲ್ಲಿ ನಾವು ಬಿತ್ತಿದ್ದೇ ಬೆಳೆಯುವಂತೆ, ನಾವು ಬಯಸಿದ್ದೇ ನಮಗೆ ಸಿಗುತ್ತದೆ. ನಾವು ಮಾಡಿದ ಕರ್ಮವೇ ನಮ್ಮನ್ನು ಕಾಪಾಡುತ್ತದೆ ಇಲ್ಲವೇ ಕೊಲ್ಲುತ್ತದೆ. ನಮ್ಮ ನಿಜವಾದ ಶತ್ರು ಮತ್ತು ಮಿತ್ರ ನಾವೇ.
೨೦) ನಮ್ಮ ದೇಹಕ್ಕಿಂತ ಮೊದಲು ಮನಸ್ಸನ್ನು ಮುಟ್ಟಿದವರನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಪ್ರೀತಿ ಯಾವತ್ತು ನೋಯಿಸಲ್ಲ. ಪ್ರೀತಿಯ ನಿಜವಾದ ಅರ್ಥ ಗೊತ್ತಿರದವರು ಮಾತ್ರ ನೋಯಿಸುತ್ತಾರೆ.
೨೧) ಪ್ರೀತಿಗಾಗಿ, ಸ್ನೇಹಕ್ಕಾಗಿ ಭಿಕ್ಷೆ ಬೇಡಬಾರದು. ಸ್ನೇಹಪ್ರೀತಿಗಳು ಬೇಡಿ ಪಡೆಯುವ ವಸ್ತುಗಳಲ್ಲ. ನಮಗೆ ಬೇಡದಿರುವುದನ್ನು ನಾವು ಖುಷಿಯಿಂದ ಬಿಟ್ಟು ಕೊಡಬೇಕು. ನಮ್ಮದಲ್ಲದ ವಸ್ತುಗಳನ್ನು ಬಯಸಬಾರದು. ಬಯಸಿದರೆ ಅನಾವಶ್ಯಕವಾಗಿ ಸಾವು ನೋವುಗಳಾಗುತ್ತವೆ.