41+ ಚುಟುಕುಗಳು - Kannada Chutukugalu - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

41+ ಚುಟುಕುಗಳು - Kannada Chutukugalu

Director satishkumar

೧) ಯಾವುದು ಸುಲಭ?

ಹುಟ್ಟೋದು ಸುಲಭವಲ್ಲ, ಹುಟ್ಟಿಸೋದು ಸುಲಭವಲ್ಲ.
ಸಾಯೋದು ಸುಲಭವಲ್ಲ, ಸಾಯಿಸೋದು ಸುಲಭವಲ್ಲ.
ಬದುಕೋದು ಸುಲಭವಲ್ಲ, ಬದುಕಿಸೋದು ಸುಲಭವಲ್ಲ.
ಅಂದ್ಮೇಲೆ ಮನುಜನಿಗೆ ಯಾವುದು ಸುಲಭ??

Chutukugalu Thoughts in Kannada

೨) ಖಾಲಿಬಾನು

ಸ್ವತಃ ನಿನಗೆ ಅರ್ಥವಾಗದ
ನಿನ್ನ ಈ ವ್ಯರ್ಥ ಬಾಳು,
ರಾತ್ರಿಯಿಡಿ ತಾರೆಗಳಿಲ್ಲದೆ
ಮರುಗುವ ಖಾಲಿಬಾನು...

Chutukugalu Thoughts in Kannada

೩) ಶಾಂತಿ ಮಂತ್ರ

ಗಡಿಯಲ್ಲಿ ನಡೆಯುತ್ತಿದೆ ಕುತಂತ್ರ
ಎಷ್ಟೋ ಯೋಧರ ಬದುಕಾಗಿದೆ ಅತಂತ್ರ
ಸಾಮರ್ಥ್ಯವಿದ್ದರೂ ಹೂಡುತ್ತಿಲ್ಲ ರಣತಂತ್ರ
ಕಣ್ತೆರೆದು ಜಪಿಸುತ್ತಿದ್ದೇವೆ ಶಾಂತಿ ಮಂತ್ರ...

Chutukugalu Thoughts in Kannada

೪) ಮುಂಜಾನೆ

ನಮಸ್ಕಾರ ಮುಂಜಾನೆ
ಏಳಿ ಎದ್ದೇಳಿ ಬೇಗನೆ...
ಏಳುವಾಗ ಮಾಡದಿರಿ ನಟನೆ
ಶುಚಿಯಾಗಿ ಮಾಡಿರಿ ದೇವನಾಮ ಪಠನೆ
ಅನಂತರ ಮೂಡಲಿ ಕಾಯಕದ ಭಾವನೆ...

Good Morning Chutukugalu Thoughts in Kannada

೫) ಗಡವ-ಬಡವ

ದುಡಿಯುವ ಮನಸ್ಸಿಲ್ಲದ ಗಡವ
ಎಷ್ಟೇ ಆಸ್ತಿಯಿದ್ದರೂ ನಾಳೆ ಬಡವ.
ದುಡಿಯದವ ಅವನತಿ ಕಾಣುವ
ದುಡಿಯುವವ ಉನ್ನತಿ ನೋಡುವ...

Money Chutukugalu Thoughts in Kannada

೬) ರಂಗೋಲಿ

ಮನದಲಿ ಮೂಡಲಿ ತಾಳ್ಮೆಯ ರಂಗೋಲಿ
ಆಗದಿರಲಿ ಕೋಪದಲಿ ಬದುಕಿನ ಚೆಲ್ಲಾಪಿಲ್ಲಿ
ಇದು ಬದುಕು ಬಯಸುವ ಸುವ್ವಾಲಿ
ಇದನ್ನು ಕಲಿತು ನೀ ನಗುತಾ ನಲಿ...

Rangoli Chutukugalu Thoughts in Kannada

೭) ಹಟ

ಮನಸ್ಸಿಗೆ ಲಗಾಮಿದ್ದರೆ ಅದು ಗಾಳಿಪಟ
ನಿಯಂತ್ರಣ ತಪ್ಪಿದರೆ ಅದು ಧೂಳಿಪಟ
ಕೆಟ್ಟದನ್ನೇ ಯೋಚಿಸುವುದು ಅದರ ಚಟ
ಅದನ್ನು ಒಳ್ಳೆಯದೆಡೆಗೆ ಸೆಳೆಯುವುದೆ ನನ್ನ ಹಟ...

Motivational Chutukugalu Thoughts in Kannada

೮) ದಾರಿದೀಪ

ಬಳುವಳಿಯಾಗಿ ಬಂದ ಬಡತನವಲ್ಲ ಶಾಪ
ಅದು ಬದುಕನ್ನು ಪರಿಚಯಿಸುವ ದಾರಿದೀಪ
ಬಡತನದಲ್ಲೇ ಮೊಳಗುತ್ತದೆ ಸಾಧನೆಯ ಜಪ
ಬಡತನದಲ್ಲಿ ಹುಟ್ಟಿದ್ದು ಅಲ್ಲ ಪಾಪ
ಬಡತನದಲ್ಲಿ ಹುಟ್ಟಲು ಮಾಡಿರಬೇಕು ತಪ...

Chutukugalu Thoughts in Kannada

೯) ಮತ್ತೆ ಮಿಲನ

ಗಡಿಯಾರದ ಮುಳ್ಳು ತಿರುಗಿ ಬರೋದೆ
ಹಳೆಯ ನೆನಪುಗಳನ್ನು ಪುನ: ಸಂಯೋಜಿಸೋಕೆ
ಹೊಸವರುಷ ಹರುಷದಿ ಮತ್ತೆ ಬರೋದೆ
ನಮ್ಮೆಲ್ಲರನ್ನು ಮತ್ತೆ ಒಂದುಗೂಡಿಸೋಕೆ...

Time Chutukugalu Thoughts in Kannada

೧೦) ವಿವರ

ಈ ಜೀವನ ಸುಖದು:ಖಗಳ ಸಾಗರ
ಬಹುಪಾಲು ಅದು ಕಷ್ಟಗಳ ಆಗರ
ಸಂತಸದ ಕ್ಷಣಗಳು ವಿರಳ
ನಮ್ಮ ಬಯಕೆಗಳು ಸಾವಿರ
ಇವೆಲ್ಲದರ ಮಧ್ಯೆ ನಾವೇನು ಮಾಡಿದೆವು ಎಂಬುದೇ ನಮ್ಮ ವಿವರ...

Motivational Chutukugalu Thoughts in Kannada

೧೧) ಸಂದೇಶ

ನೀನಾನು ಜ್ಯೋತಿ
ಆಗಬೇಡ ಕೋತಿ...
ಬೆಳಗು ಬಾಳ ಹಣತಿ
ಆಗಬೇಡ ಬತ್ತಿದ ಪಣತಿ...

Chutukugalu Thoughts in Kannada೧೨) ಹಾರೈಕೆ

ನಿನಗೆಂದು ಎದುರಾಗದಿರಲಿ ಸೋಲು
ಎದುರಾದರೂ ನೀ ಧೈರ್ಯದಿಂದ ಗೆಲ್ಲು
ನಿನ್ನಲ್ಲಿರುವ ಭಯವನ್ನು ಕೊಲ್ಲು
ಗೆಲುವಿಗೆ ಸತತ ಪರಿಶ್ರಮವೇ ಬಿಲ್ಲು
ಸಾಧನೆಯೊಂದಿಗೆ ಸವಿನಗುವನ್ನು ಚೆಲ್ಲು
ಸೇರಲಿ ನಿನ್ನ ಹೆಸರು ಇತಿಹಾಸದ ಸಾಲು...

Chutukugalu Thoughts in Kannada

೧೩) ಏಕತೆ

ವಿವಿಧೆತೆಯಲಿ ಮೆರೆಯಲಿ ಏಕತೆ
ನಿಸ್ವಾರ್ಥತೆಯಲಿ ಅಳಿಯಲಿ ಅನೈತಿಕತೆ
ಸಾಮರಸ್ಯದಲ್ಲಿ ಬರದಿರಲಿ ಜಾತೀಯತೆ
ಆತ್ಮೀಯತೆಯಿಂದ ಸಾಗಲಿ ಏಕತೆ...

Chutukugalu Thoughts in Kannada

೧೪) ಮಳೆ

ಮಳೆ ಬಂತು ಮಳೆ
ತಂಪಾಯ್ತು ಕಾದ ಇಳೆ
ಮಾಯವಾಯ್ತು ಧರೆಯ ಕೊಳೆ
ಭುವಿಗೆ ಬಂತು ನವಕಳೆ...

Rain Chutukugalu Thoughts in Kannada

೧೫) ವಿದ್ಯಾರ್ಥಿ ವಾಣಿ

ಓದಬೇಕೆಂಬ ಆಸೆಯಿಂದ ಬೇಗನೆ ಎದ್ದೆ
ಆದರೆ ಆಸೆಯೇ ದು:ಖಕ್ಕೆ ಮೂಲವೆಂದು
ಮತ್ತೆ ಹಾಸಿಗೆಯ ಮೇಲೆ ಬಿದ್ದೆ
ಪರೀಕ್ಷೆಯಲ್ಲಿ ಉತ್ತರಗಳನ್ನು ಕದ್ದೆ
ಫಲಿತಾಂಶದಲ್ಲಿ ಬಂತು ಬರೀ ಮುದ್ದೆ...

Chutukugalu Thoughts in Kannada

೧೬) ಯುವವಾಣಿ

ಯುವಕರೇ ಏದ್ದೇಳಿ, ಸಂಸ್ಕೃತಿ ಕಾಪಾಡಿ
ನೀವಾಗಿರಿ ಸಂನ್ಯಾಸಿ, ಆಗಬೇಡಿ ಪರದೇಶಿ
ನೀವಾಗಿರಿ ಖಡ್ಗಗಳು, ಆಗಬೇಡಿ ಮೃಗಗಳು
ನೀವಾಗಿರಿ ಜ್ಯೋತಿ, ಆಗಬೇಡಿ ಕೋತಿ...

Chutukugalu Thoughts in Kannada

೧೭) ಚಿಂತೆ

ಸಾಯೋವಾಗ ಸಮಾಧಿಯ ಚಿಂತೆ ಎಲ್ಲರೂ ಮಾಡ್ತಾರೆ.
ಆದ್ರೆ ಸಾಯೋವಾಗಲೂ ಸಮಾಜದ ಚಿಂತೆ ಯಾರು ಮಾಡಲ್ಲ...

think Chutukugalu Thoughts in Kannada

೧೮) ಒಣ ವ್ಯಾಮೋಹ

ಸತ್ತಾಗ ಯಾರು ಹೊತ್ತುಕೊಂಡು ಹೋಗಲ್ಲ
ಬೆಳ್ಳಿ ಬಂಗಾರದ ಲೋಹ.
ಇದು ಗೊತ್ತಿದ್ದರೂ ಸ್ತ್ರೀಯರಿಗೆ ಹೋಗಲ್ಲ
ಅದರ ಮೇಲಿನ ಒಣ ವ್ಯಾಮೋಹ...

Chutukugalu Thoughts in Kannada

೧೯) ಉಪದೇಶ

ನಿನ್ನೆಯ ಸೋಲಿನ ಬಗ್ಗೆ ಹತಾಶೆ ಪಡಬೇಡ
ನಾಳೆಯ ಗೆಲುವಿನ ಬಗ್ಗೆ ಸಂತೋಷಪಡು
ಮೊದಲು ಸೋಲುವುದನ್ನು ಕಲಿ, 
ಆಮೇಲೆ ಗೆಲುವು ತಾನಾಗಿಯೇ ಲಭಿಸುತ್ತದೆ...

Motivational Inspirational Chutukugalu Thoughts in Kannada

೨೦) ಬೇಕು-ಬೇಡ

ರಕ್ತದಲ್ಲಿ ಸಾರಿದ ಶಾಸನಗಳು ಬೇಡವಾಗಿವೆ.
ಕರುಳಬಂಧ ಬೆಸೆಯುವ
ವಿಶಾಲ ಹೃದಯದ ಆಸನಗಳು ಬೇಕಾಗಿವೆ...

Chutukugalu Thoughts in Kannada

೨೧) ಜೀವನದ ಸಂತೆ

ಹಳೆ ಬಾಳಿನ ಉಪದೇಶವನ್ನು
ಮರೆಯುತ್ತಿದೆ ನಮ್ಮ ಹೊಸಗೀತೆ
ಅದನ್ನರಿಯದೇ ಸಾಗುತ್ತಿದೆ
ನಮ್ಮ ಜೀವನದ ಸಂತೆ...

Chutukugalu Thoughts in Kannada

೨೨) ಅನಗತ್ಯ

ಅನಗತ್ಯವಾದದ್ದನ್ನು ಬಯಸಿ ನಾವು
ತಂದುಕೊಳ್ತೇವೆ ಸಾವು-ನೋವು...

Chutukugalu Thoughts in Kannada

೨೩) ನಾವು?

ಶರಣರು ಬಾಳಿದರು
"ನಡೆದಂತೆ ನುಡಿದು".
ದಾಸರು ಬಾಳಿದರು
"ನುಡಿದಂತೆ ನಡೆದು".
ಆದರೆ ನಾವು....?

Chutukugalu Thoughts in Kannada

೨೪) ಕಲ್ಲು ದೇವರು

ದೇವರನ್ನು ಪೂಜಿಸ್ತಾರೆ ಕಲ್ಲಿನ ರೂಪದಲ್ಲಿ
ಕರುಣೆಯೇ ಇಲ್ಲ ಅವನ ಕಲ್ಲು ಹೃದಯದಲ್ಲಿ
ಒಳ್ಳೆಯವರಿಗೆ ನೀಡ್ತಾನೆ ಕಷ್ಟವನ್ನೇ ಬಾಳಲ್ಲಿ
ತಾ ಮಾತ್ರ ಸುಖದಿಂದಿರುತ್ತಾನೆ ಸ್ವರ್ಗದಲ್ಲಿ...

god Chutukugalu Thoughts in Kannada

೨೫) ಯುವಶಕ್ತಿ

ಯುವಕರಲ್ಲಿದೆ ಅಪರಿಮಿತ ಶಕ್ತಿ
ಭೋರ್ಗರೆಯುತ್ತಿದೆ ಅಜರಾಮರ ಯುಕ್ತಿ
ಪ್ರೀತಿಯಲ್ಲಿ ತೊಡಕಿದೆ ಅವರ ನಿಶ್ಚಲ ಭಕ್ತಿ
ದೇಶದ ಅಭ್ಯುದಯದಲ್ಲಿ ಅವರಿಗಿಲ್ಲ ಆಸಕ್ತಿ...

Chutukugalu Thoughts in Kannada

೨೬) ವಿಧಿನಿಯಮ

ಕೋಟಿ ಕನಸುಗಳು ಕೊಚ್ಚಿ ಹೋಗುವ ಸಮಯ
ಹೃದಯ ಒಡೆದು ಚೂರಾಗುವ ವಿಧಿ ನಿಯಮ...
ಕನಸು ನನಸಾಗಬೇಕಾದರೆ ಇರಬೇಕು ಸಂಯಮ
ಇಲ್ಲವಾದರೆ ಕರ್ಮಪಾಶ ತೂರ್ತಾನೆ ಯಮ...

destiny Chutukugalu Thoughts in Kannada

೨೭) ಸೌಧದ ಸಲ್ಲಾಪ

ಆಡಳಿತ ಸೌಧದಲ್ಲಿ ಹೇಗಿದೆ ಕಲಾಪ?
ಬರೀ ಪರವಿರೋಧಗಳ ಆಕ್ಷೇಪ
ಜನಪ್ರತಿನಿಧಿಗಳ ಕಚ್ಚಾಟದ ವಿಲಾಪ
ಇದರ ಮಧ್ಯೆಯೇ ಕೆಲವರು ನೋಡ್ತಾರೆ ಸರಸ ಸಲ್ಲಾಪ...

Chutukugalu Thoughts in Kannada

೨೮) ಆರ್ಶಿವಚನ

ಅಯ್ಯೋ ದೂರದರ್ಶನದಿಂದ ಬರುತ್ತಿದೆ
ಎಂಥ ಆರ್ಶೀವಚನ..!! ಈಗ
ಗಂಡಸರೆಲ್ಲ ರಾಜಕೀಯ ಪಂಡಿತರು,
ಹೆಂಗಸರೆಲ್ಲ ಸೀರಿಯಲ್ ಸುಂದರಿಯರು...

tv Chutukugalu Thoughts in Kannada

೨೯) ಧೃಢತೆ

ನಯನದಲಿ ಸುಳಿಯದಿರಲಿ ನಿರಾಸೆಯ ಮೋಡ
ಹತಾಶೆಯಲ್ಲಿ ಅನ್ನಿಸದಿರಲಿ ನಿನ್ನ ಬದುಕು ಜಡ
ಪರಿಶ್ರಮ ಮರೆತರೆ ನೀನೇ ನಿನಗೆ ಕಾರ್ಮೋಡ
ಏನಾದರೂ ಪ್ರಯತ್ನದಿಂದ ನೀ ವಿಚಲಿತನಾಗ್ಬೇಡ...

Chutukugalu Thoughts in Kannada

೩೦) ರಕ್ಷಕರು

ವಿದ್ಯೆ ಕಲಿಸುವಾಗ ಶಿಕ್ಷಣ ನೀಡುವವರು
ಲಜ್ಜೆಬಿಟ್ಟು ತಪ್ಪೆಗೆಸಿದಾಗ ಶಿಕ್ಷೆ ನೀಡುವವರು
ಎಡವಿ ಕಂಗೆಟ್ಟಾಗ ರಕ್ಷಣೆ ನೀಡುವವರು
ಅಜ್ಞಾನ ಅಶಿಸ್ತುಗಳ ಭಕ್ಷಕರು
ಅವರೇ ಶಿಕ್ಷಕರು ; ನಮ್ಮ ರಕ್ಷಕರು...

teachers Chutukugalu Thoughts in Kannada

೩೧) ಎರವಲು

ಬದುಕು ಬಯಸಲಿ ಪರಹಿತದ ಎರವಲು
ಬೆಳಕು ದಹಿಸಲಿ ಸ್ವಾರ್ಥಸುಖದ ಉರುವಲು
ಮಾನವೀಯತೆಯಾಗಲಿ ಜೀವನಕ್ಕೆ ಕಾವಲು
ವಿಶಾಲ ಹೃದಯವಾಗಲಿ ಸಮಾಜಕ್ಕೆ ಬೆಂಗಾವಲು

help Chutukugalu Thoughts in Kannada

೩೨) ವ್ಯಾಪಾರದ ಮಳಿಗೆ

ತತ್ತರಿಸಿದೆ ಯುವಪೀಳಿಗೆ
ಈ ಪ್ರೀತಿ ಪ್ರೇಮದ ಸುಳಿಗೆ,
ನನಗಿಲ್ಲ ಯಾರ ಮೇಲೆಯೂ ನಂಬಿಕೆ.
ಏಕೆಂದರೆ ಈಗ ಎಲ್ಲರ ಹೃದಯವಾಗಿದೆ ವ್ಯಾಪಾರ ಮಳಿಗೆ...

Chutukugalu Thoughts in Kannada

೩೩) ಕುಡುಕರ ಧರ್ಮ

ಕುಡಿಯುವುದು ಕುಡುಕರ ಧರ್ಮ
ಬಿಕ್ಕಿ ಅಳುವುದು ಹೆಂಡ್ತೀರ ಕರ್ಮ
ಹೆಂಡ ಸುಲಿಯುತ್ತೆ ಅಂತಸ್ತಿನ ಚರ್ಮ
ಯಾರು ಬಲ್ಲರು ಇದರ ಮರ್ಮ?

Chutukugalu Thoughts in Kannada

೩೪) ಫ್ಯಾಷನ್

ಶೋಕಿಗಾಗಿ ಕಾಲೇಜಿಗೆ ಹೋಗುವುದೇ
ಈಗಿನ ಹುಡುಗರ ಫ್ಯಾಷನ್.
ಏಕೆಂದರೆ ಈಗಿನ ಪಾಲಕರು ಕೇಳದೇ 
ಹಣ ಕೊಡುವ ಎ.ಟಿ.ಎಮ್. ಮಷಿನ್...

Chutukugalu Thoughts in Kannada

೩೫) ವಿಪರ್ಯಾಸ

 ಶ್ರೀಮಂತ ಸಂಪತ್ತಿನ ಭಾರಹೊತ್ತು 
ರೋಗಗಳಿಂದ ನರಳುವ ಹೇಸರಗತ್ತೆ.
ಬಡವ ಶ್ರಮದ ಭೋಗತೆತ್ತು 
ಆರೋಗ್ಯದಿಂದ ಕೊರಗುವ ಕತ್ತೆ..

Chutukugalu Thoughts in Kannada

೩೬) ಛಲ

ಸಾಯೋವಾಗ ಬೇಕಾಗಿಲ್ಲ ಗಂಗಾಜಲ
ಬದುಕಿರುವಾಗ ಬೇಕು ಸಾಧಿಸುವ ಛಲ...

Chutukugalu Thoughts in Kannada

೩೭) ಕ್ಲಾಸ್ ಬಿಟ್ಟು ತೊಲಗಿ

ಆಗೀನ ಯುವಕರು ಕೂಗಿ ಹೇಳಿದರು
 "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ".
 ಈಗಿನ ಯುವಕರು ಕೂಗಿ ಹೇಳುವರು
"ಶಿಕ್ಷಕರೇ, ಬೇಗನೆ ಕ್ಲಾಸ್ ಬಿಟ್ಟು ತೊಲಗಿ"

Chutukugalu Thoughts in Kannada

೩೮) ಜನ್ಮ ಪಾವನ

ನಾವು ಬಯಸಿ ಬಂದ ಈ ಜೀವನ
ನೋವು ನಲಿವುಗಳ ಒಂದು ಕವನ.
ಸಾರ್ಥಕತೆ ತೋರಿದ ಮಹಾನುಭಾವರಿಗೆ ನಮನ
ನಾನು ಸಾಧಿಸಿದರೆ ಮಾತ್ರ ನನ್ನ ಜನ್ಮ ಪಾವನ... 

Chutukugalu Thoughts in Kannada

೩೯) ನಿಲ್ಲದಿರು

ಗಡಿಯಾರದ ಮುಳ್ಳು ಓಡೋದನ್ನು ನಿಲ್ಲಿಸಿದರೂ,
ಬಾರ್ ಭಕ್ತಾದಿಗಳು ಕುಡಿಯೋದನ್ನು ನಿಲ್ಲಿಸಿದರೂ,
ಸೂರ್ಯ ಒಂದಿನ ಉದಯಿಸೋದನ್ನು ಮರೆತರೂ,
ಚಂದ್ರ ಒಂದಿನ ಬರೋದನ್ನು ಮರೆತರೂ
ನೀ ಸಾಧಿಸುವ ಛಲಬಿಟ್ಟು ನಡುದಾರಿಯಲ್ಲಿ ನಿಲ್ಲದಿರು...

Chutukugalu Thoughts in Kannada

೪೦) ಕಸಬರಗಿ

ನಿನಗ್ಯಾಕ ಬೇಕ ಗೆಳತಿ
ಈ ಊರ ಮಂದಿ ಒಣ ಉಸಾಬರಿ?
ಮೊದಲು ನಿನ್ನ ಮನದಂಗಳವನ್ನು
ಹಸನಾಗಿಸಲಿ ನಿನ್ನ ಕೈಯ್ಯಾಗಿನ ಕಸಬರಗಿ...

Chutukugalu Thoughts in Kannada

೪೧) ವಿನಾಕಾರಣ

ಜೀವನ ಒಂದು ಮುದ್ದಾದ ವ್ಯಾಕರಣ
ಅದರಲ್ಲಡಗಿವೆ ಸಾವಿರಾರು ಆವರಣ
ಅದರ ಸಾರಾಂಶ ಅರ್ಥವಾದರೆ 
ಅದು ಸುಲಭ ಸಮೀಕರಣ,
ಅದನ್ನು ಅರ್ಥಮಾಡಿಕೊಳ್ಳದೇ
ಹೆಣಗಾಡುತ್ತೀವಿ ವಿನಾಕಾರಣ...

Chutukugalu Thoughts in Kannada

Blogger ನಿಂದ ಸಾಮರ್ಥ್ಯಹೊಂದಿದೆ.