ನನ್ನವಳು - My Lover Romantic Love Poem in Kannada - Kannada Love Kavan - Love Kavanagalu - ಹೆಣ್ಣಿನ ಸೌಂದರ್ಯ ಕವನಗಳು
ನನ್ನವಳು ಸುಂದರಿನೇ, ಆದ್ರೆ ವಿಶ್ವಸುಂದರಿಯಲ್ಲ. ನನ್ನವಳು ಸ್ವಲ್ಪ ಅಹಂಕಾರಿನೇ, ಆದ್ರೆ ಶೂರ್ಪನಖಿಯಂಥ ದುರಂಹಕಾರಿಯಲ್ಲ. ನನ್ನವಳು ಸ್ವಲ್ಪ ಕೋಪಿಷ್ಟೇನೇ, ಆದ್ರೆ ಕೊಲೆಗಾರ್ತಿಯಲ್ಲ...
ಮನಸ್ಸಲ್ಲಿ ನೂರಾರು ನೋವುಗಳು ನರ್ತಿಸುವಾಗ ನಗುವುದನ್ನು ಕಲಿಸಿದಳು ನನ್ನವಳು... ಹೆಜ್ಜೆಹೆಜ್ಜೆಗೂ ಹರ್ಟಾದರೂ ಹೆದರದೆ ಹೆಜ್ಜೆ ಇಡುವುದನ್ನು ಕಲಿಸಿದವಳು ನನ್ನವಳು... "ಸಹನೆ ನಿನ್ನದಾದರೆ ಸಕಲವು ನಿನ್ನದು, ವಿನಯವು ನಿನ್ನದಾದರೆ ವಿಜಯವು ನಿನ್ನದು" ಎಂದು ಉಪದೇಶಿಸಿದವಳು ನನ್ನವಳು...
ನನ್ನವಳು ಮೈಗೆ ಔಷಧಿ ಕೊಡೋ ಡಾಕ್ಟ್ರಲ್ಲ, ಮನಸಿಗೆ ಔಷಧಿ ಕೊಡೋ ಡಾಕ್ಟರ್ ಅವಳು. ನನ್ನವಳು ಮನೆ ಕಟ್ಟೋ ಇಂಜಿನಿಯರ್ ಅಲ್ಲ, ಮನಸ್ಸು ಕಟ್ಟೋ ಇಂಜಿನಿಯರ್ ಅವಳು...
ನನ್ನವಳು ಗಾಳಿಸುದ್ದಿಗಳ ಗಾಳಿಪಟಗಳಿಗೆ ಬೆಲೆ ಕೊಡಲ್ಲ. ಅದೃಷ್ಟಕ್ಕಿಂತ ಆತ್ಮವಿಶ್ವಾಸಕ್ಕೆ ಜಾಸ್ತಿ ಬೆಲೆ ಕೊಡುವವಳು ನನ್ನವಳು... ನಾನು ಕಹಿ ಬೇವಾದರೆ, ಸಿಹಿ ಬೆಲ್ಲ ನನ್ನವಳು...
ಕಾರಣವಿಲ್ಲದೆ ನನ್ನನ್ನು ಸತಾಯಿಸುವುದು, ರೇಗಿಸುವುದು, ಕೆಣಕುವುದು, ಕಾಯಿಸುವುದು, ಅವಳಲ್ಲಿನ ಕೆಲವು ಕೆಟ್ಟ ಗುಣಗಳು. ಆದರೆ ಕಾಯಿಸಿದ ತಪ್ಪಿಗೆ ಕೆನ್ನೆಗೆರಡು ಮುತ್ತು ಕೊಟ್ಟು ಸಂತೈಸುವ ಸುಗುಣೆ ನನ್ನವಳು....
ನೀರು ಎಷ್ಟೇ ಬಿಸಿಯಾಗಿ ಕುದಿಯುತ್ತಿದ್ದರೂ, ಅದು ಬೆಂಕಿಯನ್ನು ಆರಿಸಬಲ್ಲದು. ಅದೇ ರೀತಿ ನನ್ನವಳು ನನ್ನ ಮೇಲೆ ಎಷ್ಟೇ ಕೋಪಿಸಿಕೊಂಡರೂ ಕೊನೆಗೆ ನನ್ನನ್ನು ಕಾಯುವಳು, ಮನ್ನಿಸುವಳು, ಮುದ್ದಿಸುವಳು...
ನನ್ನವಳು ನಕ್ಕರೆ 0°c ಕೂಲೆಸ್ಟ್ ಚಂದ್ರನ ಬೆಳದಿಂಗಳು. ಆದ್ರೆ ಕೋಪಿಸಿಕೊಂಡರೆ 6000°c ಹಾಟೆಸ್ಟ್ ಸೂರ್ಯನ ಕಂಗಳು. ನನ್ನವಳು ಸನಲೈಟೂ ಆಗ್ತಾಳೆ, ಮೂನಲೈಟು ಆಗ್ತಾಳೆ...
ನನ್ನವಳು ಕೆಲವು ಸಲ ಕಾರಣವಿಲ್ಲದೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಆದರೆ ನಾನು ಉತ್ತರಿಸುವ ಮೊದಲೇ ನಿದ್ರೆಗೆ ಜಾರಿರುತ್ತಾಳೆ. ಕನಸುಗಳ ಸವಾರಿ ಮಾಡಿ ದಿನಾ ನನಗಾಗಿ ಡ್ರೀಮಲ್ಯಾಂಡಲ್ಲಿ ಹುಚ್ಚಿಯಂತೆ ಕಾಯುತ್ತಾಳೆ. ನಾನು ಬರುವುದು ಸ್ವಲ್ಪ ತಡವಾದರೂ ಕನಸ್ಸಲ್ಲಿ ಬಂದು ಕಾಟ ಕೊಡುತ್ತಾಳೆ...
ನನ್ನವಳು ಬೈದಾಗ ನಾನು ಬೇಜಾರು ಮಾಡಿಕೊಳ್ಳಲ್ಲ. ಯಾಕೆಂದರೆ ಅವಳು ನನ್ನ ಒಳ್ಳೆಯದಕ್ಕೇನೆ ಬೈಯ್ಯುತ್ತಾಳೆ. ಅವಳು ಹೆಚ್ಚಾಗಿ ಇಂಗ್ಲೀಷನಲ್ಲೇ ಮಾತಾಡುತ್ತಾಳೆ. ಆದ್ರೆ ನನಗೆ ಬಯ್ಯೋವಾಗ ಮಾತ್ರ ಅಚ್ಚ ಕನ್ನಡದಲ್ಲಿಯೇ ಬೈಯ್ಯುತ್ತಾಳೆ. ಬಹುಶಃ ನನಗೆ ಅರ್ಥ ಆಗಲಿ ಅಂತಾ ಅಚ್ಚ ಕನ್ನಡದಲ್ಲಿ ಬೈಯ್ತಾಳೆ ಎಂದುಕೊಂಡಿದ್ದೆ. ಆದರೆ ಅವಳಿಗೆ ಇಂಗ್ಲೀಷ್ ಬೈಗುಳಗಳು ಬರೋದಿಲ್ಲ...
ನನ್ನವಳ ಸವಿವಾಣಿಯಲ್ಲಿ ಮೋಹಿನಿಯ ನೆರಳಿದೆ. ಅವಳ ಕಂಗಳಲ್ಲಿ ಕಾಮಿನಿಯ ಕಲೆಯಿದೆ. ನನ್ನವಳು ಇಂಗ್ಲೀಷನಲ್ಲಿ ಎಷ್ಟೇ ಮಾತನಾಡಿದರೂ, ಅವಳು ರಾತ್ರಿ ಕನಸು ಕಾಣುವುದು ಕನ್ನಡದಲ್ಲೇ...
ನನ್ನವಳಿಗೆ ನನ್ನ ಮೇಲಾಗಲಿ, ನನ್ನ ಪ್ರೀತಿ ಮೇಲಾಗಲಿ ಎಳ್ಳಷ್ಟೂ ಅನುಮಾನವಿಲ್ಲ. ಆದರೆ ಅವಳಿಗೆ ನಾನು ಕೃಷ್ಣನ ಜಾತಕದಲ್ಲಿ ಹುಟ್ಟಿದೀನಿ ಅನ್ನೋ ಅನುಮಾನವಿದೆ. ಯಾಕಂದ್ರೆ ಎಲ್ಲೋದ್ರು ನನಗೆ ಗೋಪಿಕೆಯರ ಕಾಟ ತಪ್ಪಿದಲ್ಲ ಎಂಬುದು ಗೊತ್ತು ಅವಳಿಗೆ...
ನನ್ನವಳು ದೇವರನ್ನು ಭಕ್ತಿಯಿಂದ ಪೂಜಿಸುತ್ತಾಳೆ, ಭಯದಿಂದಲ್ಲ. ಗುರುವನ್ನು ವಿನಯದಿಂದ ಗೌರವಿಸುತ್ತಾಳೆ, ವಿವೇಕದಿಂದಲ್ಲ. ನನ್ನನ್ನು ಸ್ನೇಹದಿಂದ ಪ್ರೀತಿಸುತ್ತಾಳೆ, ಮೋಹದಿಂದಲ್ಲ...
ನನ್ನವಳು ಒಂಥರಾ ಲಹರಿ ಮಹ್ಮದ ಇದ್ದಂಗೆ. ಅವಳು ಅವಳ ಲೋಕದಲ್ಲೇ ಕಳೆದು ಹೋಗಿರುತ್ತಾಳೆ. ರೋಮ್ಯಾನ್ಸಗೂ, ಸೆಕ್ಸಗೂ ಇರುವ ವ್ಯತ್ಯಾಸ ಚೆನ್ನಾಗಿ ಗೊತ್ತು ಅವಳಿಗೆ. ಸೆಕ್ಸಗಾಗಿ ರೋಮ್ಯಾನ್ಸನ್ನು ದುರುಪಯೋಗ ಮಾಡಿಕೊಳ್ಳುವಷ್ಟು ಸಮಯ ಸಾಧಕಿಯಲ್ಲ ನನ್ನವಳು...
ನನ್ನವಳಿಗೆ ನನಗಿಂತ ಜಾಸ್ತಿ ಬುದ್ಧಿಯಿದ್ದರೂ ಪೆದ್ದಿಯಂತಾಡುವಳು. ನಾನು ಬೇಡ ಅನ್ನೋದನ್ನೇ ಬೇಕು ಅಂತಾ ಮಾಡೋ ತುಂಟಿ ನನ್ನವಳು... ಸದಾ ಮುಗುಳ್ನಗು ಮತ್ತು ನಾಚಿಕೆ ನನ್ನವಳ ಆಭರಣಗಳು...
ನನ್ನವಳು "ನೀನು ಪೆನ್ ಹಿಡಿದು ರೈಟರ್ ಆಗೋದೇನ ಬೇಡ, ಗನ್ ಹಿಡಿದು ಕಿಲ್ಲರ್ ಆಗೋದು ಬೇಡ, ರೋಸ್ ಹಿಡಿದು ಲವ್ವರ್ ಆಗು ಸಾಕು" ಎಂದು ದಿನಾ ನನ್ನ ಕಾಡುವಳು. ಜೊತೆಗೆ "ಕರೆಂಟ ಇದ್ರು ಕ್ಯಾಂಡಲ್ ಹಚ್ಚಿ ಓದು ವಿಶ್ವೇಶ್ವರಯ್ಯ ಆದ್ರು ಆಗಬಹುದು. ಆದ್ರೆ ನೀನು ನನ್ನಷ್ಟು ಬ್ರಿಲಿಯಂಟ ಆಗಲ್ಲ" ಎಂದು ರೇಗಿಸುವಳು...
ನಾನು ಪೆದ್ದನಂತೆ ಆಡತೊಡಗಿದಾಗ ನನ್ನನ್ನು ಮುದ್ದು ಮಾಡಿ "ಬುದ್ಧನಿಗೆ ಬೋಧಿ ಮರದ ಕೆಳಗೆ ಜ್ಞಾನೋದಯವಾಯಿತು. ಸಿದ್ಧನಿಗೆ ಸುಡುಗಾಡಲ್ಲಿ ಜ್ಞಾನೋದಯವಾಯಿತು. ಇನ್ನೂ ನಿನಗೆ ಎಲ್ಲಿ? ಯಾವಾಗ ಜ್ಞಾನೋದಯವಾಗುತ್ತೋ ಯಾವಳಿಗೊತ್ತು? ಎಂದು ನನ್ನವಳು ವ್ಯಥಿಸುವಳು...
ನನ್ನಲ್ಲಿ ಅವಗುಣಗಳು ಅಧಿಕವಾದಾಗ ನನ್ನನ್ನು "ಪಾಂಡವರ ಮನೆಯಲ್ಲಿ ಹುಟ್ಟಿದ ಕೌರವ ನೀನು" ಎಂದು ಕೀಚಾಯಿಸುವಳು. "ನೀನು ಕಾಳಿದಾಸನಾಗಬೇಡ, ಕಿರಾತಕನಾಗಬೇಡ, ನನ್ನ ಪ್ರೀತಿಯಲ್ಲಿ ಪ್ರೇಮದಾಸನಾಗು ಸಾಕು" ಎಂದು ಸಲಹೆ ಕೊಡುವವಳು ನನ್ನವಳು...
ನನ್ನವಳು "ನೀನು ಕೃಷ್ಣನೇ, ಆದ್ರೆ ಕಳ್ಳ ಕೃಷ್ಣನಲ್ಲ. ಬೆಣ್ಣೆ ಕದಿಯೋ ಅವಶ್ಯಕತೆ ನಿನಗಿಲ್ಲ. ನಾರಿಯ ಸೀರೆ ಸೆಳೆಯೋವಷ್ಟು ಪೋಲಿ ನೀನಲ್ಲ. ಆದರೆ ನೀ ನನ್ನ ಮನಸ್ಯಾಕೆ ಕದ್ದೆ?" ಎಂದು ಪದೇಪದೇ ಕೇಳುವಳು...
ನನ್ನವಳು ನನಗಾಗಿ ತಪಸ್ಸು ಮಾಡಲು ಸಹ ತಯಾರಿರುವಳು. ಅವಳ ಹೆಸರಿನ ಮುಂದೆ ನನ್ನ ಹೆಸರನ್ನು ಸೇರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವಳು... "ನನ್ನ ಕತ್ತಿಗೆ ತಾಳಿ ಕಟ್ಟೋದ ಬಿಟ್ಟು, ಬೇಡದ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಚಿಂತೆ ಯಾಕ ಮಾಡ್ತೀಯಾ?" ಅನ್ನುವಳು... ಅವಳೇ ನನ್ನವಳು, ನನ್ನ ಉಸಿರವಳು...