"ಮುಂದೇನ ಮಾಡೋದು? ಮುಂದೇನ ಮಾಡೋದು...?" ಅಂತಾ ಕೆಲವೊಂದಿಷ್ಟು ಜನ ನನಗೆ ದಿನಾ ಕೇಳ್ತಾ ಇರ್ತಾರೆ. "ಮುಂದೇನ ಮಾಡೋದಂತ?" ಬರೀ ಯೋಚಿಸುತ್ತಾ ಕುಳಿತ್ತಿರುತ್ತಾರೆ. ಮತ್ತೇನು ಮಾಡುವುದಿಲ್ಲ. ಬರೀ ಯೋಚಿಸುವುದರಲ್ಲೇ ದಿನ ಕಳೆಯುತ್ತಾರೆ. "S.S.L.C. ಪಾಸಾದ್ಮೇಲೆ, P.U.C. ಪಾಸಾದ್ಮೇಲೆ, ಡಿಗ್ರಿ ಪಾಸಾದ್ಮೇಲೆ ಏನ ಮಾಡ್ಬೇಕು?" ಅಂತಾ ಹೇಳೋದಕ್ಕೆ ಸಾವಿರಾರು ಜನ ಖಾಲಿ ಕುಂತಿದ್ದಾರೆ. ಅದಕ್ಕಾಗಿ ಹಗಲುರಾತ್ರಿ ಅಡ್ವಟೈಜಗಳನ್ನ ಮಾಡ್ತಾರೆ. ಆದ್ರೆ "S.S.L.C. ಫೇಲಾದ ತಕ್ಷಣ, P.U.C. ಫೇಲಾದ ತಕ್ಷಣ, ಡಿಗ್ರಿ ಫೇಲಾದ ತಕ್ಷಣ ಏನು ಮಾಡಬೇಕು?" ಅಂತಾ ಹೇಳೊಕೆ ಯಾರು ತಯಾರಿಲ್ಲ. ಎಲ್ಲರೂ ಬಿಟ್ಟಿ ಸಲಹೆಗಳನ್ನು ಕೊಡ್ತಾರೆ ವಿನಹ ಸಹಕಾರವನ್ನು ಕೊಡಲ್ಲ. ಸರಿಯಾದ ಮಾರ್ಗದರ್ಶನವನ್ನು ಕೊಡಲ್ಲ...
ನೀವು ಯಾವುದರಲ್ಲಾದರೂ ಫೇಲಾದಾಗ ಮೊದಲು ಮಾಡಬೇಕಾದ ಕೆಲಸವೇನೆಂದರೆ ತಾಳ್ಮೆಯಿಂದಿರಬೇಕು. ಅದನ್ನು ಬಿಟ್ಟು ನೀವು ಆವೇಶದಲ್ಲಿ ಕೂಗಾಡಿದರೆ ಸಿಟ್ಟಿನಲ್ಲಿ ಶ... ಹರಿದುಕೊಂಡಂತಾಗುತ್ತದೆ. ಅದಕ್ಕಾಗಿ ಸೋತಾಗ ಶಾಂತಚಿತ್ತದಿಂದ ಸೋಲನ್ನು ಸಂತೋಷದಿಂದ ಒಪ್ಪಿಕೊಳ್ಳಬೇಕು. ನಂತರ ಆ ಸೋಲಿಗೆ ನಿಜವಾದ ಕಾರಣವೇನೆಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಸರಿ ಮಾಡಿಕೊಂಡು ಗೆಲುವಿನ ಸವಾರಿ ಮಾಡಲು ಸಜ್ಜಾಗಬೇಕು. Accept your failure with courage and prove your potential. ನಿಮ್ಮ ಸೋಲಿಗೆ ಕಾರಣಗಳನ್ನು ನೀವೇ ಹುಡುಕಬೇಕು. ನಿಮ್ಮ ಆತ್ಮವಿಮರ್ಶೆಯನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಸಮಸ್ಯೆಯನ್ನು ನೀವೇ ಪತ್ತೆ ಹಚ್ಚಿ ಪರಿಹಾರವನ್ನು ಕಂಡುಕೊಳ್ಳಬೇಕು. ಸಮಸ್ಯೆ ನಿಮ್ಮತ್ರ ಇದೆ ಅಂದ್ರೆ ಅದರ ಪರಿಹಾರವೂ ನಿಮ್ಮತ್ರಾನೇ ಇರುತ್ತೆ...
ಸೋಲಿಗೆ ಸಾವು ಪರಿಹಾರವಲ್ಲ. ಸೋಲಿಗೆ ಸರಿಯಾದ ಪರಿಹಾರವೆಂದರೆ ಸಾಧನೆ. ಸೋತ ನಂತ್ರ ಸಾಧಿಸಿ ತೋರಿಸಲೇಬೇಕು. ಎಲ್ಲಿ ಬಿದ್ದಿರುತ್ತಿರೋ ಅಲ್ಲೇ ಎದ್ದು ನಿಲ್ಲಬೇಕು. ಅವಮಾನವಾದ ಜಾಗದಲ್ಲೇ ಸನ್ಮಾನ ಮಾಡಿಸಿಕೊಳ್ಳಬೇಕು. ಸೋತಾಗ ಗೆದ್ದವರ ಕಡೆಗೆ ನೋಡಬೇಡಿ. ಸೋತು ಗೆದ್ದವರ ಕಡೆಗೆ ನೋಡಿ. ಸೋಲು ಅಂತಿಮವೂ ಅಲ್ಲ, ಶಾಶ್ವತವು ಅಲ್ಲ. It's just a moment. ಸೋಲು ಕೆಲವು ಕ್ಷಣಗಳವರೆಗೆ ಮಾತ್ರ ಇರುತ್ತೆ. ನೀವು ಸೋತಾಗ ಸೋತು ಗೆದ್ದವರ ಕಡೆಗೆ ನೋಡಿ. ನಿಮ್ಮ ನೆಚ್ಚಿನ ಸಾಧಕರು ಸೋಲನ್ನು ಸವಾಲಾಗಿ ಸ್ವೀಕರಿಸಿ ಹೇಗೆ ಗೆಲುವಿನ ನಗೆ ಬೀರಿದರೆಂಬುದನ್ನು ತಿಳಿದುಕೊಳ್ಳಿ. ಸಾಧಕರಿಂದ ಸ್ಪೂರ್ತಿ ಪಡೆದು ಕುಗ್ಗದೆ ನೀವು ಅವರಂತೆ ಮುನ್ನುಗ್ಗಿ ಯಶಸ್ಸನ್ನು ಪಡೆಯಿರಿ.
ಒಂದು ಮಹಾನ್ ಮಾತಿದೆ, ಅದು ನಿಮಗೂ ಕೂಡ ಗೊತ್ತಿದೆ. ಅದೇನೆಂದರೆ "ಯಾರಿಗೆ ಇತಿಹಾಸ ಗೊತ್ತಿದೇಯೋ ಅವರು ಒಂದಲ್ಲ ಒಂದಿನ ಇತಿಹಾಸವನ್ನು ಸೃಷ್ಟಿಸುತ್ತಾರೆ." ಸಾಧಕರ ಜೀವನ ಸಂದೇಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ಒಂದಲ್ಲ ಒಂದಿನ ನೀವು ಸಾಧಕರಾಗೇ ಆಗ್ತೀರಿ. ಅದಕ್ಕಾಗಿ "S.S.L.C. ಫೇಲಾಯ್ತು, P.U.C. ಫೇಲಾಯ್ತು, ಲವ್ವಲ್ಲಿ ಫೇಲಾಯ್ತು, ಲೈಫಲ್ಲಿ ಫೇಲಾಯ್ತು..." ಅಂತೆಲ್ಲ ಸಾಯೋಕ ಹೋಗ್ಬೇಡಿ. ಸೋತಾಗ ಸತ್ರೇ ಇಲ್ಲ ಹಿಂದೆ ಸರಿದ್ರೆ ನಿಮಗೇನು ಸಿಗಲ್ಲ. ಜನ ನಿಮ್ಮನ್ನು ಹೇಡಿ ಎಂದು ಉಗಿಯುತ್ತಾರೆ. ಧೈರ್ಯದಿಂದ ಬದುಕಿ ಸಾಧಿಸಿ ತೋರಿಸಬೇಕು. ಭಗವಂತ ಬದುಕು ಕೊಟ್ಟಿರೋದು ಬದುಕಕ್ಕೇನೆ ಅಂದ್ಮೇಲೆ ಯಾಕ ಸುಮಸುಮ್ನೆ ಸಾಯ್ತಿರಾ? ಎಲ್ಲವನ್ನೂ ಕೂಲಾಗಿ ತಗೊಳ್ಳಿ. ಶಾಂತಚಿತ್ತದಿಂದ ಇದ್ದು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ...
ಸಕ್ಸೆಸ್ ಹಾದಿಯಲ್ಲಿ ಸಾಗುವಾಗ ಸಂಕಷ್ಟಗಳು ಬಂದೇ ಬರುತ್ತವೆ. ಸಾಧನೆಯ ಹಾದಿ ಸುಲಭವಲ್ಲ. ಸಾಧನೆಯ ಹಾದಿಯೆಂದರೆ ಕಲ್ಲುಮುಳ್ಳುಗಳಿಗಿಂತ ಕಠಿಣವಾದ ದಾರಿ. ಅದರಲ್ಲಿ ಧೈರ್ಯದಿಂದ ನಡೆದವನು ಮಾತ್ರ ಗುರಿ ತಲುಪಿ ಸಾಧಕನಾಗುತ್ತಾನೆ. ಚೆನ್ನಾಗಿರೋ ಸೂಪರ ಹಾಯವೇ ರೋಡಲ್ಲಿ ಹೋದವನು ಸಾಧಕನಾಗಲ್ಲ. ಸತ್ಮೇಲೆ ಅವನು ಬದುಕಿರಲ್ಲ. ಸತ್ಮೇಲೂ ಬದುಕಿರಬೇಕೆಂದರೆ ಏನಾದರೂ ಒಂದನ್ನು ಸಾಧಿಸಲೇಬೇಕು. ನಮ್ಮ ಹುಟ್ಟಿಗೆ ಒಂದು ಅರ್ಥ ಕಟ್ಟಿಕೊಟ್ಟೇ ನಾವು ಚಟ್ಟವೇರಬೇಕು. ಸಾಧಿಸದೇ ಸಾಮಾನ್ಯರಂತೆ ಸಾಯಬಾರದು. ಸಾಧಿಸೋಕೆ ಏನು ಬೇಕು? ಸಾಧಿಸೋಕೆ ಮೊದಲು ಛಲ ಬೇಕು. ಆಮೇಲೆ ಬಲ ಬೇಕು. ತೋಳ್ಬಲವಿಲ್ಲದಿದ್ದರೂ ಬುದ್ಧಿಬಲ ಬೇಕು. ಸಾಧಿಸೋಕೆ ಹಣ ಬೇಕಾಗಿಲ್ಲ, ಸ್ವಲ್ಪ ಗುಣ ಬೇಕು. ಸಾಧಿಸೋಕೆ ಸೌಂದರ್ಯ ಬೇಕಾಗಿಲ್ಲ, ಸ್ವಇಚ್ಛೆ ಬೇಕು. ಅಂತರಂಗದಲ್ಲಿ "ಸಾಧಿಸಿಯೇ ಸಾಯುತ್ತೇನೆ, ಸತ್ಮೇಲು ಬದುಕಿರುತ್ತೇನೆ" ಎಂಬ ಧ್ವನಿ ಏಳಬೇಕು. ಹೊಟ್ಟೆಯಲ್ಲಿರುವ ಕಿಚ್ಚು ಎದೆಯಲ್ಲಿ ಅಸ್ತ್ರವಾಗಿ ಸಿಡಿದೇಳಬೇಕು...
ಯಾವುದೇ ವಿಷಯದಲ್ಲಿ ಸೋತಾಗ ಇಲ್ಲ ಪರೀಕ್ಷೆಯಲ್ಲಿ ಫೇಲಾದಾಗ ಗೆಲ್ಲೋದ್ರ ಕಡೆಗೆ ಗಮನ ಹರಿಸಬೇಕು. ಸೋಲನ್ನು ಮರೆತು ಬಿಡಬೇಕು. ಅಳು ಅನ್ನೋದು ದೂರ ಓಡುವಂತೆ ನಸುನಗಬೇಕು. ಪರೀಕ್ಷೆಯಲ್ಲಿ ಪಾಸಾದವರು ಮಾಡೋದೆಲ್ಲ ಒಂದಳ್ಳೇ ಕೆಲ್ಸ ಗಿಟ್ಟಿಸಿಕೊಂಡು ಹಾಯಾಗಿ ಮನೇಲಿರುವುದಕ್ಕೆ ಅಷ್ಟೇ. ಹೀಗಿರುವಾಗ ಫೇಲಾದವರು ಯಾಕ ಕೊರಗುತ್ತಿರಾ? ನೀವು ಪಾಸಾದವರಿಗಿಂತೇನು ಕಡಿಮೆಯಿಲ್ಲ. ನೀವು ಬ್ಯುಸಿನೆಸ್ ಮಾಡಿ. ಪಾಸಾದವರಿಗಿಂತ ಹೆಚ್ಚಿಗೆ ಸಂಪಾದಿಸಿ. ನಿಮ್ಮಲ್ಲಿರುವ ಕಲೆಗೆ ಬೆಲೆ ಕೊಟ್ಟು ನಿಮ್ಮ ತಲೆಗೆ ಬೆಲೆ ತಂದುಕೊಳ್ಳಿ. ನಿಮ್ಮಲ್ಲಿರುವ ಫ್ಯಾಷನನ್ನು ಪ್ರೋಫೆಶನ್ನಾಗಿ ಪರಿವರ್ತಿಸಿ ಮುಂದೆ ಬನ್ನಿ. ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ... ನಿಮ್ಮ ಮೇಲೆ ನಿಮಗೆ ಹೆಮ್ಮೆ ಇರಬೇಕು...
ನಿಮಗೆ ಯಾವುದು ಏಗದಿದ್ದರೆ ರಾಜಕೀಯಕ್ಕೆ ಬನ್ನಿ. ಅದರಲ್ಲಿ ತಪ್ಪೇನಿಲ್ಲ. 70 ವರುಷದ ಹಲ್ಲಿಲ್ಲದ ಮುದುಕರು ರಾಜಕೀಯದಲ್ಲಿರುವಾಗ 20 ವರ್ಷದ ನವತರುಣರಾದ ನೀವೇಕೆ ರಾಜಕೀಯಕ್ಕೆ ಬರಬಾರದು?. ದೇಶಕ್ಕೆ ಯುವಕರು ಬೇಕಾಗಿದ್ದರೆ, ಬುದ್ಧಿಯಿಲ್ಲದ ಮುದುಕರಲ್ಲ. ನೋಡಿ ಟೈಮಯಿದ್ರೆ ಸ್ವಲ್ಪ ಯೋಜನೆ ಮಾಡಿ. ಆದ್ರೆ ಯೋಚನೆ ಮಾಡಿ ಟೈಮ್ ವೇಸ್ಟ್ ಮಾಡಬೇಡಿ. ಏನಾದರೂ ಸಾಧಿಸದೇ ಸಾಯದಿರಿ. ನಿಮ್ಮಿಂದ ಎಲ್ಲವೂ ಸಾಧ್ಯವಿದೆ. ನಿಮಗೆ ಅಸಾಧ್ಯವಾದದ್ದು ಯಾವುದು ಇಲ್ಲ. ನಿಮ್ಮ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. Lets do it. Do your Best...
ನಿನ್ನೆ ರಾತ್ರಿ ಒಬ್ಬ ಹುಡುಗ ನನಗೆ "ಫ್ರೆಂಡ್, ನಾನು ಡಿಗ್ರಿ ಫೇಲಾಗಿದೀನಿ. So ಮುಂದೇನ ಮಾಡ್ಲಿ?" ಅಂತಾ ಕೇಳಿದ್ದ. ಅವನಿಗೆ ಧೈರ್ಯ ಹೇಳೊಕೆ ನನಗೆ ಧೈರ್ಯ ಸಾಲಲಿಲ್ಲ. ಯಾಕಂದರೆ ನಾನು ಸಹ ಸಾಕಷ್ಟು ಸಲ ಸೋತಿರುವೆ. ಸೋತರು ಗೆಲುವಿನ ಕಡೆಗೆ ಓಡುತ್ತಿರುವೆ. ನಾನಿನ್ನೂ ನನ್ನ ಗುರಿ ಮುಟ್ಟಿಲ್ಲ. ಮುಟ್ಟಿದ ಮೇಲೆ ಧೈರ್ಯವಾಗಿ ಈ ವಿಷಯದ ಮೇಲೆ ಖಂಡಿತ ಬರೆಯುವೆ. ನಿಮ್ಮ ಸುತ್ತಮುತ್ತ ಇರುವ ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡಿ. ಏಕೆಂದರೆ ಹಿರಿಯರ ಮಾರ್ಗದರ್ಶನದ ಕೊರತೆಯಿಂದಲೇ ಯುವಕರು ದಿಕ್ಕುದೆಸೆಯಿಲ್ಲದೆ ಗಾಳಿಯಂತೆ ತಿರುಗಾಡುತ್ತಿದ್ದಾರೆ. ಈ ಅಂಕಣ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಲೈಕ್ ಮಾಡಿ. ಜೊತೆಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ...