೧) ನನ್ನವನು ಕಪ್ಪಗಿದ್ದರೂ ಪರವಾಗಿಲ್ಲ. ಆದರೆ ಕಪ್ಪು ಮನಸ್ಸಿನವನಾಗಿರಬಾರದು. ನಾನು ಐಸಕ್ರಿಮಾದರೆ ಅವನು ಚಾಕೋಲೇಟಾಗಿ ನನ್ನೊಂದಿಗೆ ಇರಬೇಕು...
೨) ಗೀಜುಬಿ ಗಿಫ್ಟಗಳನ್ನು ಕೊಟ್ಟು ಪುಸಲಾಯಿಸಿ ನನ್ನ ಮೈಮುಟ್ಟೋ ಚೀಫ ಮೆಂಟ್ಯಾಲಿಟಿ ಅವನದ್ದಾಗಿರಬಾರದು. ಅವನು ನನ್ನ ಬಿಟ್ಟು ಬೇರೆ ಯಾವ ಹುಡುಗಿಯ ನೆರಳಲ್ಲಿಯೂ ನಲಿದಾಡಬಾರದು. ಅವನು ಕೃಷ್ಣನ ಜಾತಕದಲ್ಲಿ ಹುಟ್ಟಿದ್ದಾನೆಂಬ ಅನುಮಾನ ನನಗೆ ಬರದಂತೆ ಅವನಿರಬೇಕು...
೩) ಅವನು ನನಗೆ ಕಾಲ್ ಮತ್ತು ಮೆಸೇಜ್ ಮಾಡದಿದ್ದಾಗ ನಾನವನಿಗೆ ರೇಗಿದರೆ "ಆಯ್ತು ಮಹಾರಾಣಿಯವರೇ, ನಿಮ್ಮ ಆಜ್ಞೆಯನ್ನು ನಾನು ಶಿರಸಾವಹಿಸಿ ಪಾಲಿಸುವೆನು. ನೀವು ಹೇಳಿದಂತೆ ನಿಮಗೆ ದಿನಾಲು ತಪ್ಪದೆ ಕಾಲ್ ಮಾಡುವೆನು. ಮೊಬೈಲಿನ ಮೂಳೆ ಮುರಿಯುವ ತನಕ ಮೆಸೇಜ್ ಮಾಡುವೆನು. ಇಷ್ಟು ಸಾಕಾ? ಮತ್ತೇನಾದರೂ ಇದೆಯಾ?" ಎಂದು ಸಾವಿರಾರು ಸ್ವಾರಿಗಳ ಸುರಿಮಳೆ ಸುರಿಸಬೇಕು...
೪) ಷಹಜಹಾನ್ ಕಟ್ಟಿರೋ ಅದೇ ಹಳೇ ತಾಜಮಹಲಿನ ಮುಂದೆ ಎಲ್ಲ ಹುಡುಗರಂತೆ ಸಾಮಾನ್ಯವಾಗಿ ಪ್ರಪೋಸ್ ಮಾಡುವ ಕನಸನ್ನು ಕಾಣಬಾರದು. ನನಗಾಗಿ ಹೊಸ ಮಹಲನ್ನು ಕಟ್ಟುವ ಹಗಲುಗನಸ್ಸನಾದರೂ ಕಾಣಬೇಕು...
೫) ಅವನು ಪಕ್ಕದಲ್ಲಿರದಿದ್ರೆ ನನಗೆ ನಿದ್ರೆ ಬರಲ್ಲ ಅಂತಾ ಗೊತ್ತಿದ್ದರೂ ಆತ ನನಗೆ "Good Night Sexy Dreams" ಅಂತಾ ಮೆಸೇಜ್ ಮಾಡಬೇಕು. ನನ್ನ ಮೆಸೇಜ್ ಬಂದಾಗ ಆತ "ಬಡವನ ಮನೆಗೆ ಭಾಗ್ಯ ಬಂದಂತೆ" ಆಡಬೇಕು. ಅವನ ಮೊಬೈಲ್ ನನ್ನ ಮೆಸೇಜನಿಂದ ಪಾವನವಾಗಬೇಕು. ಅವನು ಪ್ರತಿದಿನ ಬೆಳಿಗ್ಗೆ ಸ್ನಾನಮಾಡದೆ ಎದ್ದ ತಕ್ಷಣವೇ ನನಗೆ "Good Morning....." ಎಂದು ಮೆಸೇಜ್ ಮಾಡಬೇಕು. ಅವನ ಪೋಲಿ ಮೆಸೇಜಗಳಿಂದ ನನ್ನ ಮೊಬೈಲ್ ಮೈಲಿಗೆಯಾಗಬೇಕು...
೬) ನಾನು ಬರಿಗಾಲಲ್ಲಿ ನಡೆದರೆ, ನನ್ನ ಅಂಗಾಲು ನೋವಿನಿಂದ ನರಳಬಾರದೆಂದು ಆತ ನನಗಾಗಿ ಅವನ ಚರ್ಮದಿಂದ ಚಪ್ಪಲಿ ಮಾಡಿಸಿಕೊಡಲು ಸಹ ಸಿದ್ಧನಿರಬೇಕು...
೭) ನಾನು ಅವನ ಕನಸ್ಸಲ್ಲಿ ಬಂದು ಕಾಟ ಕೊಡುವಾಗ ಆತ "ಕನಸಲ್ಲೇನಾದ್ರು ಬಂದು ಕಾಟ ಕೊಟ್ರೆ ಕೊಲೆ ಮಾಡಿ ಬಿಡ್ತೀನಿ,,, ಅಷ್ಟೇ ಆಮೇಲೆ" ಅಂತಾ ಬೆದರಿಸಬೇಕು... ಆತ ನನಗಾಗಿ ಗಂಟೆಗಟ್ಟಲೆ ಕಾಯುವುದನ್ನು ನಾನು ಕಣ್ತುಂಬ ನೋಡಿ ಖುಷಿಪಡಬೇಕು...
೭) ಅವನು ನನ್ನ ಹೃದಯ ಕದ್ದ ತಪ್ಪಿಗಾಗಿ ನನ್ನನ್ನು ಮದುವೆಯಾಗಿ, ಕೊನೆಯುಸಿರು ಇರುವ ತನಕ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕು. ನಾನು ಕೊಡುವ ಎಲ್ಲ ಕಷ್ಟಗಳನ್ನು ಸಹಿಸಬೇಕು...
೮) ನಾನು ಅವನ ಜೀವನಕ್ಕೆ ಕಾಲಿಟ್ಟಾಗ ಅವನು "ಅಮೃತವೇ ರೋಗಿಯ ಬಳಿಗೆ ಬಂದಷ್ಟು" ಖುಷಿಪಡಬೇಕು. ಅವನು ನನ್ನತ್ರ ಬಂದರೆ ಸಂಜೀವಿನಿಯೇ ಶವವನ್ನು ಹುಡುಕಿಕೊಂಡು ಬಂದಂತಾಗಬೇಕು...
೯) ಅವನಿಲ್ಲದೆ ಯಾವ ಮುಸ್ಸಂಜೆಯೂ ಮುಸ್ಸಂಜೆಯಾಗಿ ಉಳಿದು ಮರುಗಬಾರದು. ಅವನಿಂದಾಗಿ ನನ್ನ ಪ್ರತಿ ಮುಸ್ಸಂಜೆ "ಮುತ್ತು ಸಂಜೆ"ಯಾಗಬೇಕು. ಅವನು ನಿದ್ದೆಯಲ್ಲಿಯೂ ನಿದ್ದೆಯಿಲ್ಲದೆ ನಂದೇ ನಿರೀಕ್ಷಣೆ ಮಾಡಬೇಕು...
೧೦) ಮದುವೆಯಾದ ಮೇಲೆ ನಾನು ಅಡುಗೆ ಮಾಡಲು ಬರದೆ ಚಪಾತಿಯಲ್ಲಿ ಎಲ್ಲ ದೇಶದ ನಕ್ಷೆಗಳನ್ನು ಬಿಡಿಸಿದರೆ ಬೈಯ್ಯಬಾರದು. ನಾನವನಿಗೆ ಸಕ್ಕರೆಯಿಲ್ಲದ ಕಾಫಿ ಕೊಟ್ಟರೂ ಪ್ರೀತಿಯಿಂದ ಸುಮ್ಮನೆ ಕುಡಿಯಬೇಕು...
೧೧) ಅವನಿಗಾಗಿ ನಾನು ತಪಸ್ಸು ಮಾಡಿರುವಾಗ, ನನಗಾಗಿ ಒಂದಿನ ಉಪವಾಸ ಮಾಡಲು ಅವನು ಹಿಂದುಮುಂದು ನೋಡಬಾರದು. ಎಲ್ಲರ ಮೇಲಿನ ಸಿಟ್ಟನ್ನು ರಾತ್ರಿ ನನ್ನ ಮೇಲೆ ತೋರಿಸಬಾರದು...
೧೨) ಪ್ರತಿದಿನ ಕುಣಿದು ಬಂದು ನನ್ನ ಕೆನ್ನೆ ಮೇಲೆ ಅವನ ತುಟಿಗಳ ಚಿತ್ತಾರ ಮೂಡಿಸಿ ನಾನು ನಾಚಿಕೊಳ್ಳುವಂತೆ ಮಾಡಬೇಕು. ಅದನ್ನು ಬಿಟ್ಟು ದಿನಾ ರಾತ್ರಿ ಕುಡಿದು ಬಂದು ನನ್ನ ಕೆನ್ನೆ ಮೇಲೆ ಕೈಬೆರಳುಗಳ ಚಿತ್ತಾರ ಮೂಡಿಸಿ ನಾನು ನೊಂದುಕೊಳ್ಳುವಂತೆ ಮಾಡಬಾರದು...
೧೩) ಆತ ಬೇರೆಯವರ ಜೊತೆ ಫೋನಲ್ಲಿ ಮಾತಾಡುವಾಗ ನಾನು ಮಧ್ಯೆ ಮಾತಾಡಿದರೆ ಆತ ಕಾಲ್ ಹೋಲ್ಡ್ ಮಾಡಿ ಮೊದಲು ನನ್ನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡು ಆಮೇಲೆ ಮತ್ತೆ ಬೇರೆಯವರೊಂದಿಗೆ ಮಾತಾಡಬೇಕು. ಅವನು ಬ್ಯುಸಿನೆಸಮ್ಯಾನ (Business man) ಆದರೂ ಬ್ಯುಸಿಮ್ಯಾನ (Busy Man) ಆಗಿರಬಾರದು. ಲಕ್ಷದಲ್ಲಿರೋ ಬ್ಯುಸಿನೆಸ್ಸನ್ನು ಕೋಟಿಗಳನ್ನಾಗಿಸುವ ಕನಸ್ಸಲ್ಲಿ ನನ್ನನ್ನು ಕಡೆಗಣಿಸಬಾರದು...
೧೪) ನನ್ನ ಕೈಬಳೆಗಳು ಅವನನ್ನು ಕೈಬೀಸಿ ಕರೆಯುವ ಮುನ್ನವೇ ಅವನು ನನ್ನ ಕಣ್ಮುಂದೆ ಇರಬೇಕು. ಅವನಿಗೆ ಮೂಗಿನ ತುದಿಯಲ್ಲೇ ಕೇಜಿಗಟ್ಟಲೆ ಕೋಪವಿದ್ದರೂ ಬೆಟ್ಟದಷ್ಟು ತಾಳ್ಮೆಯಿರಬೇಕು. ಅವನು ಸಮಯಕ್ಕೆ ಸಾಕಷ್ಟು ಬೆಲೆ ಕೊಟ್ಟರೂ, ನನಗಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿರಬೇಕು...
೧೫) ನನಗೆ ಪ್ರೇಮಜ್ವರ ನೆತ್ತಿಗೇರಿದಾಗ ಅವನಿಗೆ ಚಳಿಜ್ವರ ಬರಬೇಕು. ನಾನು ಮುತ್ತು ಕೇಳಿದರೆ, ಅವನು ಮಗು ಕೇಳಿದಂಗೆ ದೂರ ಓಡಬಾರದು...
೧೬) ಅವನು ಅವನ ಸಮಸ್ಯೆಗಳನ್ನು ನನ್ನ ಬಿಟ್ಟು ಬೇರೆ ಯಾರೊಂದಿಗೂ ಶೇರ ಮಾಡಿ ಸಣ್ಣವನಾಗಬಾರದು. ಅವನಿಗೆ ಅಳಬೇಕು ಅಂತೆನಿಸಿದಾಗ ಆತ ಧಾರಾಳವಾಗಿ ನನ್ನ ಭುಜದ ಮೇಲೆ ತಲೆಯಿಟ್ಟು ಅಳಬೇಕು. ಅವನು ನನ್ನೊಂದಿಗೆ ನಾಟಕವಾಡಿದರೂ ನೈಜವಾಗಿರಬೇಕು...
೧೭) ನನ್ನ ನೋವುಗಳು ನನಗಿಂತ ಮುಂಚೆ ಅವನನ್ನು ನೋಯಿಸಬೇಕು. ನನ್ನ ನೋವುಗಳು ಅವನಿಗೆ ನನಗಿಂತ ಮುಂಚೆಯೇ ಅರ್ಥವಾಗಬೇಕು. ಅವನಿಗೆ ನೋವಾದರೆ ನಾನು ಅಳುವಾಗ, ನನಗೆ ನೆಗಡಿಯಾದರೆ ಅವನು ಸೀನಲೇಬೇಕು...
೧೮) ಪ್ರತಿ ತಿಂಗಳಾಂತ್ಯಕ್ಕೆ ನಾನು ನೈಸರ್ಗಿಕ ಋತುಚಕ್ರದ ಸಮಸ್ಯೆಯಿಂದ ಸುಮ್ಮಸುಮ್ಮನೆ ಅವನ ಮೇಲೆ ಸಿಟ್ಟಾದರೂ, ಆತ ಅದನ್ನು ಅರ್ಥ ಮಾಡಿಕೊಂಡು ಸುಮ್ಮನೆ ಇರಬೇಕು...
೧೯) ನಾನು ನನ್ನವನಿಗೆ ನನ್ನ ಮೈಮನಸ್ಸಿನ ಜೊತೆಗೆ ಸರ್ವಸ್ವವನ್ನು ಸಮರ್ಪಿಸಿರುವಾಗ ಅವನು ನನಗೆ ಯಾವುದೇ ಕೊರತೆ ಮಾಡಬಾರದು. ನಾನು ಅವನ ಮನದ ಬಾಗಿಲಿಗೆ ಪ್ರೀತಿಗಾಗಿ ಭಿಕ್ಷೆ ಬೇಡುತ್ತಾ ನಿಲ್ಲುವ ಪರಿಸ್ಥಿತಿ ಬರಬಾರದು. ಅವನಿಂದ ನನ್ನ ಮನಸ್ಸಿಗೆ ಯಾವತ್ತು ತಪ್ಪಿಯೂ ನೋವಾಗಬಾರದು...
೨೦) ಅವನು ನನ್ನೊಂದಿಗೆ ನಗಬೇಕೆ ಹೊರತು ನನ್ನ ನೋಡಿ ನಗಬಾರದು. ಅವನು ನಗುವುದಕ್ಕಿಂತ ಹೆಚ್ಚಾಗಿ ನನ್ನನ್ನು ನಗಿಸಬೇಕು. ನನ್ನ ನಗುವಲ್ಲಿ ನಮ್ಮ ಸಂಸಾರದ ನೋವುಗಳೆಲ್ಲ ಸುನಾಮಿಯಂತೆ ಕೊಚ್ಚಿಕೊಂಡು ಹೋಗಬೇಕು...
೨೧) ನಾನು ಗುಡ್ ನೈಟ್ ಹೇಳುವ ನೆಪದಲ್ಲಿ ಅವನನ್ನು ಸರಸಕ್ಕೆ ಕರೆಯುವಾಗ ಆತ ನನಗೆ "ನೀನು ಗುಡ್ ನೈಟ್ ಹೇಳದಿದ್ರು ನನಗೆ ನಿದ್ದೆ ಬರುತ್ತೆ, ಜೊತೆಗೆ ಸ್ವೀಟ ಸೆಕ್ಸಿ ಕನಸುಗಳು ಬೀಳ್ತವೆ. ನೀನು ಗುಡ್ ಮಾರ್ನಿಂಗ ಹೇಳದಿದ್ರೂ ಅಷ್ಟೇ ನನಗೆ ಬೆಳಗಾಗಿ ಎಚ್ಚರವಾಗುತ್ತೆ. ನೀನು ಹುಟ್ಟು ಕಲಾವಿದೆ ಅಂತಾ ನಂಗೊತ್ತು. ನಿನ್ನ ಸೆಂಟಿಮೆಂಟಲ್ ಡ್ರಾಮಾ ಮುಗಿಸಿ ಸುಮ್ಮನೆ ಮಲ್ಕೊಳೋ ಸಾಕು" ಎಂದು ಬೈಯ್ದು ಸಮಾಧಾನ ಮಾಡುವ ನೆಪದಲ್ಲಿ ನನ್ನನ್ನು ಬಂದು ಮೆಲ್ಲನೆ ಸೇರಬೇಕು. ಅವನ ಮುದ್ದಾದ ಪೋಲಿಯಾಟಕ್ಕೆ ಕತ್ತಲಲ್ಲೂ ನನ್ನ ಬೆನ್ನು ನಾಚಬೇಕು...
೨೨) ನಾನು ಸಂಪೂರ್ಣವಾಗಿ ಅವನ ಸ್ವತ್ತಾದಾಗ ಆತ ನನ್ನನ್ನು ಸುಖಿಸಿ ನನಗೆ ಕೈಕೊಟ್ಟು ಮೋಸ ಮಾಡಬಾರದು. ಕುಂಟು ನೆಪಗಳನ್ನು ಹೇಳಿ ಡೈವೊರ್ಸ ಕೊಟ್ಟು ನನ್ನ ಬಾಳನ್ನು ಕತ್ತಲಾಗಿಸಬಾರದು. "ಗಾಜಿನ ಬಳೆಗಳಲ್ಲಿ ಗಂಡನ ಪ್ರತಿಬಿಂಬ ಕಾಣಿಸಿ ಕಾಡುತ್ತದೆ" ಎಂದು ಗಾಜಿನ ಬಳೆಗಳನ್ನು ಒಡೆದಾಕಿ ಪ್ಲಾಸ್ಟಿಕ್ ಬಳೆಗಳನ್ನು ತೋಡುವ ಕೆಟ್ಟ ಕಾಲ ನನಗೆ ಕನಸ್ಸಲ್ಲು ಬರಬಾರದು...