ಆತ್ಮವಂಚಕಿ : ಒಂದು ಪ್ರೇಮಕಥೆ - Kannada Stories

Chanakya Niti in Kannada
ಆತ್ಮವಂಚಕಿ : ಒಂದು ಪ್ರೇಮಕಥೆ

              ಇಂಟರನಲ್ಸು, ಅಸೈನಮೇಂಟ್ಸು, ಅಟೆಂಡೆನ್ಸ ಶಾರ್ಟೇಜು, ಸೆಮಿಸ್ಟರ್ ಎಕ್ಸಾಮ್ಸು, ಸಪ್ಲಿಮೆಂಟರಿ ಎಕ್ಸಾಮ್ಸು ಅಂತಾ ಎರಡುವರೆ ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ. ಕಣ್ಮುಚ್ಚಿ ಕಣ್ತೆರೆದಂತೆ ಡಿಗ್ರಿ ಓದು ಕೊನೆಯ ಹಂತಕ್ಕೆ ಬಂದು ನಿಂತಿತ್ತು. ಅಕ್ಷತಾ ಮೊದಲ ಸೆಮೆಸ್ಟರನಿಂದಲೂ ಅಮೀತನನ್ನು ಗುಟ್ಟಾಗಿ ಪ್ರೀತಿಸುತ್ತಿದ್ದಳು. ಆದರೆ ಯಾವತ್ತೂ ಇರೋ ಪ್ರೀತಿಯನ್ನು ಬಾಯ್ಬಿಚ್ಚಿ ಹೇಳುವ ದುಸ್ಸಾಹಸ ಮಾಡಿರಲಿಲ್ಲ. ಆಕೆಗೆ ಮನೆಯವರ ಹೆದರಿಕೆ ಇತ್ತು. "ಪ್ರೀತಿ ಗೀತಿ ಇತ್ಯಾದಿ ಸಮಾಚಾರಗಳೆಲ್ಲ ಮನೆತನಕ ಬಂದ್ರೆ ಕಾಲೇಜ ಬಿಡಿಸಿ ಮದುವೆ ಮಾಡಿಸುವೆ" ಎಂದು ಬೆದರಿಸಿಯೇ ಅವರಪ್ಪ ಅವಳನ್ನು ಕಾಲೇಜಿಗೆ ಸೇರಿಸಿದ್ದರು. ಜೊತೆಗೆ ಅವಳ ಕಾವಲಿಗೆ ಅವಿನಾಶ ಎಂಬ ಪೊರ್ಕಿಯನ್ನು ನೇಮಿಸಿದ್ದರು. ಅವನು ಸಹ ಅವಳಿಗೆ ಸಹಪಾಠಿಯಾಗಿದ್ದನು. ಕಾಲೇಜ್ನಲ್ಲಿ ಆತ ಅವಳ ಪ್ರತಿಯೊಂದು ಹೆಜ್ಜೆಯ ಮೇಲೆ ಕಣ್ಣಿಟ್ಟಿರುತ್ತಿದ್ದನು. ಅದಕ್ಕಾಗಿ ಆಕೆ ಅಮೀತನಿಗೆ ತನ್ನ ಪ್ರೀತಿಯನ್ನು ಹೇಳಲಾಗದೆ ಒದ್ದಾಡುತ್ತಿದ್ದಳು.

ಆತ್ಮವಂಚಕಿ : ಒಂದು ಪ್ರೇಮಕಥೆ

               ಕಾಲೇಜನಲ್ಲಿ ಅಕ್ಷತಾ ಎಲ್ಲರ ಕಣ್ತಪ್ಪಿಸಿ ಅಮೀತನನ್ನು ಕದ್ದುಮುಚ್ಚಿ ನೋಡುತ್ತಿದ್ದಳು. ಅವನನ್ನು ನೋಡಿ ಸ್ಮೈಲ್ ಕೊಟ್ಟು ಸುಮ್ಮನಾಗುತ್ತಿದ್ದಳು. ಅವಳ ಏರುಯೌವ್ವನದ ಎದೆಯುಬ್ಬಿಗೆ, ಬೊಗಸೆ ಕಂಗಳ ಹುಬ್ಬಿಗೆ ಅವನು ಸಹ ಮನಸೋತಿದ್ದನು. ಆದರೆ ಅವನು ಅವಳ ರಹಸ್ಯಮಯ ನಡೆನುಡಿಗಳಿಂದ ಕನಫ್ಯೂಸಾಗಿದ್ದನು. ಅವಳ ನಗೆಯ ಸಂಚನ್ನು ಸ್ನೇಹವಾಗಿಸಿಕೊಳ್ಳಲು ಆತ ಅವಳ ಜೊತೆ ಮಾತಾಡಲು ಹಂಬಲಿಸಿದನು. ಆದರೆ ಅವಿನಾಶನ ಹದ್ದಿನ ಕಣ್ಣುಗಳಿಂದ ಅವನಿಗೆ ಅವಳ ಜೊತೆ ಮಾತಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆತ ಅವಳಿಗೆ ಫೇಸ್ಬುಕಲ್ಲಿ ಫ್ರೆಂಡ್ ರಿಕ್ವೇಸ್ಟ ಕಳುಹಿಸಲು ಮುಂದಾದನು. ಆದರೆ ಅವನಿಗಿಂತ ಮೊದಲೇ ಆಕೆ ಅವನಿಗೆ ಫ್ರೆಂಡ್ ರಿಕ್ವೇಸ್ಟ ಕಳುಹಿಸಿದ್ದಳು. ಅವನು ಅವಳ ಫ್ರೆಂಡ್ ರಿಕ್ವೇಸ್ಟ ಆ್ಯಕ್ಸೆಪ್ಟ ಮಾಡಿದನು. ಇಬ್ಬರ ನಡುವೆ ಹಗಲುರಾತ್ರಿ ಚಾಟಿಂಗ ಆಯಿತು. ಆದರೆ ಅವರ ಮಾತುಕತೆ ಮೀಟಿಂಗ ಮತ್ತು ಡೇಟಿಂಗ್ ತನಕ ಬರಲಿಲ್ಲ.  ಅದಕ್ಕಾಗಿ ಆತ ಅವಳ ಮನಸ್ಸಿನಾಳದಲ್ಲಿರುವ ಅಭಿಪ್ರಾಯವನ್ನು ನೇರವಾಗಿ ಕೇಳಲು ಅವಳ ಫೋನ್ ನಂಬರ ಕೇಳಿದನು. ಆದರೆ ಆಕೆ ಅವನಿಗೆ ಫೋನ್ ನಂಬರ್ ಕೊಡದೆ ಸತಾಯಿಸಿದಳು. ಸಾಲದಕ್ಕೆ ಅವರಿಬ್ಬರ ಚಾಟಿಂಗ್ ಡಿಟೇಲ್ಸನ್ನು ಸ್ಕ್ರೀನ್ ಶಾಟ್ ತೆಗೆದು ಅವಳ ಗೆಳತಿಯರಿಗೆ ತೋರಿಸಿ ಒಣ ಹವಾ ಮಾಡಿಕೊಂಡಳು.

ಆತ್ಮವಂಚಕಿ : ಒಂದು ಪ್ರೇಮಕಥೆ

          ಅಮೀತನಿಗೆ ಅಕ್ಷತಾ ಅರ್ಥವಾಗದ ಕಗ್ಗಂಟಾದಳು. ಅವನು ಅವಳನ್ನು ಮಾತಾಡಿಸಿ ಅವಳ ನಿರ್ಧಾರವನ್ನು ತಿಳಿದುಕೊಂಡು ಅವಳಿಂದ ದೂರ ಉಳಿಯಲು ತೀರ್ಮಾನಿಸಿದನು. ಒಂದಿನ ಆತ ಧೈರ್ಯಮಾಡಿ ಕಾಲೇಜ್ ಮುಗಿದ ನಂತರ ಪಾರ್ಕಿಂಗನಲ್ಲಿ ಅವಳನ್ನು ಮಾತಾಡಿಸಿದನು.

ಆತ್ಮವಂಚಕಿ : ಒಂದು ಪ್ರೇಮಕಥೆ

ಅಮೀತ : ನಿಮ್ಮ ಫೋನ್ ನಂಬರ ಸ್ವಲ್ಪ ಕೊಡ್ತೀರಾ?  ಚಾಟಿಂಗಲ್ಲಿ ಇರ್ತಿರಾ, ಮಾತಾಡಬೇಕು ಅನ್ನೋವಷ್ಟ್ರಲ್ಲಿ ಮಾಯವಾಗ್ತೀರಾ... ಸ್ವಲ್ಪ ನಿಮ್ಮ ಫೋನ್ ನಂಬರ್ ಕೊಡ್ತೀರಾ? 

ಅಕ್ಷತಾ : ಸ್ವಲ್ಪ ಯಾಕೆ? ಪೂರ್ತಿ ನಂಬರ್ ಬೇಡ್ವಾ? 

ಅಮೀತ : ಅಯ್ಯೋ ಕೊಡ್ರಿ... ನೀವಿಷ್ಟು ಒಳ್ಳೆಯವರಂಥ ನನಗೆ ಗೊತ್ತಿರಲಿಲ್ಲ.

ಅಕ್ಷತಾ : ಅಂದ್ರೆ ನಂಬರ ಕೊಡದಿದ್ರೆ ನಾನು ಒಳ್ಳೆಯವಳಲ್ವಾ? ಕೆಟ್ಟವಳಾ?

ಅಮೀತ : ನೀವು ಕೊಡೋ ನಂಬರ ನಿಮ್ದೇ ಅಂತ ಕನಫರ್ಮ ಆದ್ಮೇಲೆ ನೀವು ಒಳ್ಳೆಯವರಾ ಇಲ್ಲಾ ಕೆಟ್ಟವರಾ ಅಂತಾ ಹೇಳ್ತೀನಿ...

ಅಕ್ಷತಾ : ಅದ್ಯಾಕೋ ಅಷ್ಟೊಂದು ಬುದ್ಧಿವಂತಿಕೆ? ಇರ್ಲಿ ತಗೊಳ್ರಿ ನಂಬರ....

ಆತ್ಮವಂಚಕಿ : ಒಂದು ಪ್ರೇಮಕಥೆ

             ಅಮೀತ ಅವತ್ತು ಕಾಲೇಜಿಗೆ ಮೊಬೈಲ್ ತಂದಿರಲಿಲ್ಲ. ಅವಸರದಲ್ಲಿ ಮೊಬೈಲನ್ನು ಮನೆಯಲ್ಲಿ ಮರೆತು ಬಂದಿದ್ದನು. ಅವಳ ಫೋನ್ ನಂಬರ ಬರೆದುಕೊಳ್ಳಲು ಆತ ಪೆನ್ ಹುಡುಕಾಡಲು ಶುರು ಮಾಡಿದನು. ಆಕೆ ಅವಳ ಪೆನನಿಂದ ಅವನ ಕೈ ಮೇಲೆ ತನ್ನ ಫೋನ್ ನಂಬರ ಬರೆಯಲು ಮುಂದೆ ಬರುತ್ತಿದ್ದಳು. ಅಷ್ಟರಲ್ಲಿ ಅವಿನಾಶ ಬಂದನು. ಆಕೆ ತಾನು ಬಚಾವಾಗಲು ಅವನ ಕೆನ್ನೆಗೆ ಬಾರಿಸಿ ಅಲ್ಲಿಂದ ಸೀದಾ ಮನೆಗೆ ಹೋದಳು. ಅವನಿಗೆ ಆಕೆ ಮತ್ತೆ  ಕಗ್ಗಂಟಾದಳು. "ಇಷ್ಟೊತ್ತು ಚೆನ್ನಾಗಿಯೇ ಮಾತಾಡುತ್ತಿದ್ದವಳು ಯಾಕಿಂಗೆ ಮಾಡಿದಳು?" ಅಂತಾ ಅವನಿಗೆ ಅರ್ಥವಾಗಲಿಲ್ಲ. ಅವನು ಅವಳ ಅಂತರಂಗವನ್ನು ಅರಿಯಲು ಹೋಗಿ ಪ್ರೇಮರೋಗಿ ಆದನು. ಅವಳ ಮನಸ್ಸಲ್ಲಿನ ಭಾವನೆಯನ್ನು ಪತ್ತೆಹಚ್ಚಲು 4G ಕಾಲದಲ್ಲೂ ಅವಳಿಗೆ ಲೆಟರ್ ಬರೆದನು. ಆ ಲೆಟರನಲ್ಲಿ "Sorry...." ಬಿಟ್ಟರೆ ಬೇರೆನು ಇರಲಿಲ್ಲ. ಆ ಲೆಟರ್ ಅಕ್ಷತಾಳನ್ನು ತಲುಪಿತು. ಆದರೆ ಆಕೆ ಅದನ್ನು ಓದುವ ಮೊದಲೇ ಅವಿನಾಶ ಅದನ್ನು ಅವಳಪ್ಪನ ಕೈಗೆ ತಲುಪಿಸಿದನು.

ಆತ್ಮವಂಚಕಿ : ಒಂದು ಪ್ರೇಮಕಥೆ

                ಅಕ್ಷತಾಳ ಅಪ್ಪನಿಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ. ಅದರಲ್ಲಿ "Sorry..." ಬಿಟ್ಟರೆ ಬೇರೇನೂ ಇಲ್ಲ ಎಂಬುದು ಅವಳಪ್ಪನಿಗೆ ತಿಳಿಯಲಿಲ್ಲ. ಮಗಳು ದಾರಿ ತಪ್ಪಬಾರದು ಎಂಬ ಆತುರದಲ್ಲಿ ಅವಳಪ್ಪ ಅವಳನ್ನು ಗದರಿಸಿ ಅಮೀತನ ಬಗ್ಗೆ ಕೇಳಿದನು. ಅಕ್ಷತಾ ಅವರಪ್ಪನಿಗೆ ಹೆದರಿ "ಅವನಿಗೂ ನನಗೂ ಏನು ಸಂಬಂಧವಿಲ್ಲ. ಅವನ್ಯಾರಂತ ನನಗೆ ಗೊತ್ತಿಲ್ಲ..." ಎಂದೆಲ್ಲ ಸುಳ್ಳೇಳಿ ಜಾರಿಕೊಂಡಳು. ಅವಳಪ್ಪ ಕಾಲೇಜಿಗೆ ಬಂದು ಅವರಿಗೆ ಗೊತ್ತಿರೋ ಒಬ್ಬರು ಲೆಕ್ಚರರಗೆ ಈ ವಿಷಯ ತಿಳಿಸಿ ಅಮೀತನನ್ನು ಬೆಂಡೆತ್ತಲು ಹೇಳಿದರು. ಅದಕ್ಕೆ ಅವಿನಾಶ ಮತ್ತಷ್ಟು ಸುಳ್ಳುಗಳನ್ನು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದನು. ಯಾಕಂದ್ರೆ ಅವಿನಾಶ ಅಕ್ಷತಾಳನ್ನು ಗುಟ್ಟಾಗಿ ಮೋಹಿಸುತ್ತಿದ್ದನು. ಮತ್ತೆ ಅಮೀತನನ್ನು ನೇರವಾಗಿ ದ್ವೇಷಿಸುತ್ತಿದ್ದನು. ಅದಕ್ಕಾಗಿ ಆತ ಅವಳಪ್ಪನನ್ನು ಅಮೀತನ ಮೇಲೆ ಎತ್ತಿಕಟ್ಟಿದನು. 

ಆತ್ಮವಂಚಕಿ : ಒಂದು ಪ್ರೇಮಕಥೆ

            ಅಕ್ಷತಾಳ ಅಪ್ಪನ ಮತ್ತು ಅವಿನಾಶನ ಮಾತು ಕೇಳಿ ಕಾಲೇಜಿನಲ್ಲಿರುವ ಕೆಲವು ಲೆಕ್ಚರರಗಳು ಅಮೀತನನ್ನು ಪರ್ಸನಲ್ಲಾಗಿ ಕರೆದು ಅವನ ಮೇಲೆ ಹಲ್ಲೆ ಮಾಡಿದರು. ನಾಲ್ಕು ಜನರಿಗೆ ಹೊಡೆಯೋ ಕೇಪ್ಯಾಸಿಟಿ ಇರುವವನು ಎರಡು ಜನರ ಕಡೆಯಿಂದ ಚೆನ್ನಾಗಿ ಹೊಡೆಸಿಕೊಳ್ಳುವುದನ್ನು ಅಕ್ಷತಾ  ಸುಮ್ಮನೆ ನೋಡುತ್ತಾ ನಿಂತಿದ್ದಳು. ಅವನ ಬಾಯಿಂದ ರಕ್ತ ಸುರಿಯುವ ರೀತಿ ಅವನು ಹೊಡೆಸಿಕೊಂಡಿದ್ದನು. ಆದರೆ ಆಕೆ ಏನು ಆಗೇ ಇಲ್ಲ ಎನ್ನುವಂತೆ ಮೂಗಿನಲ್ಲಿ ಗೊನ್ನೆ ಗಣಿಗಾರಿಕೆ ಮಾಡುತ್ತಿದ್ದಳು. "ನನ್ನನ್ನು ಯಾಕೆ ಹೊಡೆಯುತ್ತಿದ್ದಾರೆ?" ಎಂಬುದು ಸಹ ಅವನಿಗೆ ಸರಿಯಾಗಿ ಗೊತ್ತಿರಲಿಲ್ಲ. ಯಾವುದೇ ತಪ್ಪಿಲ್ಲದಿದ್ದರೂ ಆತ ಹೊಡೆಸಿಕೊಂಡನು. ಸಹಾಯಕ್ಕಾಗಿ ಫೋನ್ ಕರೆ ಮಾಡಿ ಸಹಪಾಠಿಗಳನ್ನು ಕರೆದನು. ಆದರೆ ಯಾರು ಅವನ ಕರೆಯನ್ನು ರೀಸಿವ ಮಾಡಲಿಲ್ಲ. ಅವನ ಬೆಸ್ಟ ಫ್ರೆಂಡ್ಸೆಲ್ಲ ಈಗ ಒಂದೇ ಕ್ಷಣಕ್ಕೆ ಜಸ್ಟ ಫ್ರೆಂಡ್ಸಾದರು. ಅಮೀತನಿಗೆ ಮಾಂಜಾ ಕೊಡಿಸಿ ಅವಿನಾಶ ತನ್ನ ಗರ್ಲಫ್ರೆಂಡಗಳ ಜೊತೆಗೆ ಲಲ್ಲೆ ಹೊಡೆಯುತ್ತಾ ನಿಂತನು. ಇಷ್ಟೆಲ್ಲ ಆದರೂ ಅಕ್ಷತಾ ತನ್ನ ಮೌನ ಮುರಿಯದೇ ಮನಸ್ಸನ್ನು ಕಲ್ಲಾಗಿಸಿಕೊಂಡು ನಿಂತಿದ್ದಳು.

ಆತ್ಮವಂಚಕಿ : ಒಂದು ಪ್ರೇಮಕಥೆ

                          ಅಕ್ಷತಾಳಿಗೆ ಅಣ್ಣ, ತಮ್ಮ ಯಾರು ಇರಲಿಲ್ಲ. ಆದರೆ ಅಮೀತನಿಗೆ ಒಬ್ಬಳು ಅಕ್ಕ ಇದ್ದಳು. ಅವಳಿಗಿನ್ನೂ ಮದುವೆಯಾಗಬೇಕಿತ್ತು. ಅದಕ್ಕಾಗಿ ಅವನಪ್ಪ ಅವನನ್ನು ಬೈಯ್ದು ಮನೆಯಿಂದ ಆಚೆ ಹಾಕಿದರು. ಅಕ್ಷತಾ ಮಾಡಿದ ಅವಾಂತರಕ್ಕೆ ಅಮೀತ ಬೀದಿಪಾಲಾದನು. ಪಾರ್ಟಟೈಮ್ ಕೆಲಸ ಮಾಡಿ ಕಾಲೇಜನ್ನು ಮುಂದುವರೆಸಿದನು. ಅವಳಿಂದಾಗಿ ಅವನ ಲೈಫ್ ಬಾಲ ಸುಟ್ಟ ಬೆಕ್ಕಿನಂತಾಗಿತ್ತು. ಅವನಿಗೆ ಕನಸುಗಳಿದ್ದವು. ಆದರೆ ದಾರಿ ಕಾಣದಾಯಿತು. ಅದಕ್ಕಾಗಿ ಆತ ಅವಳ ಮೇಲೆ ಕೋಪಿಸಿಕೊಂಡನು.  ಡ್ರೀಮಗರ್ಲಗಿಂತ ಡ್ರೀಮೆ ಮುಖ್ಯವೆಂಬುದನ್ನು ಆತ ಕಂಡುಕೊಂಡನು. ಆದ್ದರಿಂದ ಆತ ಅವಳಿಗೆ ಫೇಸ್ಬುಕಲ್ಲಿ "ಮೊದಲು ನಿನ್ನ ಮನಸ್ಸಿಗೆ ಫೇರ್ ಆ್ಯಂಡ್ ಲವ್ಲಿ ಹಚ್ಚಿಕೋ, ಆಮೇಲೆ ಮುಖಕ್ಕೆ ಮೆತ್ತಿಕೊಳ್ಳುವಂತೆ... ನಿನ್ನ ಮನಸ್ಸಲ್ಲಿ ನನ್ಮೇಲೆ ಯಾವುದೇ ಭಾವನೆಗಳಿರದಿದ್ದರೆ ಯಾಕ ಸುಮಸುಮ್ನೆ ನನಗೆ ಸ್ಮೈಲ್ ಮಾಡ್ತಿದ್ದೆ? ಎಂದೆಲ್ಲ ನಾ ನಿನಗೆ ಕೇಳಲ್ಲ. ಯಾಕಂದ್ರೆ ನೀನು ಸರಿಯಿಲ್ಲ. ಇವತ್ತು ನನ್ನನ್ನು ಫೇಸ್ಬುಕಲ್ಲಿ ಬ್ಲಾಕ್ ಮಾಡು. ನಂತರ ನನ್ನ ಗೂಗಲನಲ್ಲಿ ಹುಡುಕು..." ಎಂದು ಮೆಸೇಜ್ ಮಾಡಿ ಅವಳನ್ನು ಬ್ಲಾಕ್ ಮಾಡಿದನು. ಅವನ ಮೆಸೇಜ್ ನೋಡಿ ಅವಳೆದೆ ಒಡೆದು ಚೂರಾಯಿತು. ಆದರೂ ಅವಳಿಗೆ ಅವಳ ಮನಸ್ಸಲ್ಲಿರೋ ಮಾತನ್ನು ಅವನಿಗೆ ಹೇಳುವ ಧೈರ್ಯ ಸಾಲಲಿಲ್ಲ. ಆಕೆ ಹಾಗೆಯೇ ಮೌನಿಯಾಗೆ ಉಳಿದಳು. 

ಆತ್ಮವಂಚಕಿ : ಒಂದು ಪ್ರೇಮಕಥೆ

         ಕಾಲೇಜ ಬಿಟ್ಟ ನಂತರ ನಾಲ್ಕು ಗಂಟೆ ಪಾರ್ಟಟೈಮ್ ಕೆಲಸ ಮಾಡಿ ಓದಲು ಅಮೀತನಿಗೆ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಆತ ಪಾರ್ಟಟೈಮ ಕೆಲಸ ಬಿಟ್ಟು ಸಿಟಿ ಟ್ಯಾಕ್ಸಿ ಓಡಿಸುತ್ತಾ ಓದಲು ಪ್ರಾರಂಭಿಸಿದನು. ಕೊನೆಯ ಸೆಮೆಸ್ಟರ್ ಪರೀಕ್ಷೆಗೆ ಇನ್ನು ಕೇವಲ ಮೂರು ತಿಂಗಳು ಬಾಕಿಯಿತ್ತು. ಆದರೂ ಆತ ಚೆನ್ನಾಗಿ ಓದಿ ಡಿಗ್ರಿ ಮುಗಿಸಲು ನಿರ್ಧರಿಸಿ ಟೈಮ್ ವೆಸ್ಟ್ ಮಾಡದೆ ಓದುವುದರ ಕಡೆಗೆ ಸಂಪೂರ್ಣ ಗಮನ ಹರಿಸಿದನು. ಸಾಸಿವೆ ಕಾಳಿನಲ್ಲಿ ಸಾಗರದಷ್ಟು ದು:ಖವನ್ನು ತುಂಬಿಕೊಂಡು ಅವನು ನಸುನಗುತ್ತಿದ್ದನು. ಆದರೆ ಅವನ ನಗುವಿನ ಹಿಂದಿರುವ ನೋವು ಅಕ್ಷತಾಳಿಗೆ ಮಾತ್ರ ಕಾಣುತ್ತಿತ್ತು. ಅದಕ್ಕಾಗಿ ಆಕೆ ಅವನನ್ನು ಸಂತೈಸಲು ಮುಂದಾದಳು. ಆದರೆ ಆತ ಅವಳನ್ನು ಅಪಾರ್ಥ ಮಾಡಿಕೊಂಡು ದೂರ ತಳ್ಳಿದನು. ಚೆನ್ನಾಗಿ ಓದಿ ಡಿಗ್ರಿ ಪಾಸ ಮಾಡಿದನು. ಡಿಗ್ರಿ ಮುಗಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆದು ಸುಸ್ತಾದನು. ಅವನಿಗೆ ಇಷ್ಟವಾಗುವ ಕೆಲಸ ಸಿಗಲಿಲ್ಲ. ಅದಕ್ಕಾಗಿ ಆತ ಸ್ವಂತ ಬ್ಯುಸಿನೆಸ್ ಮಾಡಲು ನಿರ್ಧರಿಸಿದನು.

ಆತ್ಮವಂಚಕಿ : ಒಂದು ಪ್ರೇಮಕಥೆ

            ಅಮೀತನಿಗೆ ಬ್ಯುಸಿನೆಸ ಮಾಡಲು ಎಲ್ಲಿಯೂ ಸಾಲ ಸಿಗಲಿಲ್ಲ. ಭಾರತದಲ್ಲಿ ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಸಾಲ ಸಿಗುವುದಿಲ್ಲ. ಅವನ ವಿಷಯದಲ್ಲೂ ಹಾಗೇ ಆಯಿತು. ಅವನ ಅದೃಷ್ಟಕ್ಕೆ ಅವನಿಗೆ ಒಂದು ಪುಟ್ಟ ಅಡ್ವಟೈಜಿಂಗ (Advertising) ಕಂಪನಿಯಲ್ಲಿ ಕಂಟೆಂಟ್ ರೈಟರ (Content Writer) ಆಗಿ ಕೆಲಸ ಸಿಕ್ಕಿತು. ಕಾಲೇಜ್ನಲ್ಲಿರುವಾಗ ಬರೆದ ಪೋಲಿ ಕವನಗಳು, ಪಂಚಿಂಗ್ ಲೈನಗಳು ಈಗ ಅವನ ಸಹಾಯಕ್ಕೆ ಬಂದವು. ಅವನು ಜಾಹೀರಾತುಗಳಿಗೆ ಸ್ಕ್ರಿಪ್ಟಗಳನ್ನು ಬರೆಯುತ್ತಾ ಆ್ಯಡ್ ಫಿಲ್ಮಮೇಕಿಂಗನ್ನು ಕಲಿತನು. ನಂತರ ಆ ಕೆಲಸವನ್ನು ಬಿಟ್ಟು ಕ್ಯಾಮೆರಾ ಇತ್ಯಾದಿ ಉಪಕರಣಗಳನ್ನು ಖರೀದಿಸಿ ತನ್ನದೆ ಆದ ಒಂದು ಸಣ್ಣ ಅಡ್ವಟೈಜಿಂಗ್ ಕಂಪನಿ (Advertising Company) ತೆಗೆದನು. 

ಆತ್ಮವಂಚಕಿ : ಒಂದು ಪ್ರೇಮಕಥೆ

                 ಪ್ರಾರಂಭದಲ್ಲಿ ಅವನ ಕಂಪನಿ ಬ್ರ್ಯಾಂಡಗಳಿಲ್ಲದೆ ಕುಂಟುತ್ತಾ ಸಾಗಿತು. ಅದಕ್ಕಾಗಿ ಆತ ಖಾಲಿ ಕೂಡುವ ಬದಲು  ಶಾರ್ಟಫಿಲ್ಮಗಳನ್ನು ಮಾಡಿ ಯ್ಯುಟೂಬನಲ್ಲಿ ಬಿಡಲು ಪ್ರಾರಂಭಿಸಿದನು. ಆ ಕಿರುಚಿತ್ರಗಳು ಅವನಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟವು. ನೋಡುನೋಡುತ್ತಿದ್ದಂತೆಯೇ ಅವನು ಯ್ಯುಟೂಬ್ ಸ್ಟಾರ್ (YouTube Star) ಆದನು. ನಂತರ ಅವನ ಕಂಪನಿಗೆ ದೊಡ್ಡ ದೊಡ್ಡ ಬ್ರ್ಯಾಂಡಗಳ (Brands) ಜಾಹೀರಾತುಗಳು ಸಿಗತೊಡಗಿದವು. ಒಂದು ವರ್ಷದ ಅಂತ್ಯಕ್ಕೆ ಅವನ ಕಂಪನಿ ಯಶಸ್ಸಿನ ಉತ್ತುಂಗಕ್ಕೇರಿತು. ನ್ಯೂಸ ಚಾನೆಲಗಳಲ್ಲಿ ಅವನ ಇಂಟರವ್ಯೂವಗಳು ಬರತೊಡಗಿದವು. ಅವನ ಖ್ಯಾತಿ ಅವನೂರಿನ ತನಕ ಬಂದು ತಲುಪಿತು.

ಆತ್ಮವಂಚಕಿ : ಒಂದು ಪ್ರೇಮಕಥೆ

          ಒಂದು ಕಾಲದಲ್ಲಿ ಅವನ ಫೋನ್ ಕರೆಯನ್ನು ಕಟ್ ಮಾಡಿದವರು ಇವತ್ತು ಅವನಿಗೆ ಫೋನ್ ಕರೆ ಮಾಡಲು ಕಾಯುತ್ತಿದ್ದರು. ಅಕ್ಷತಾಳಿಗೆ ಅವನೊಂದಿಗೆ ಮಾತಾಡಬೇಕು ಎಂಬ ಆಸೆಯಾಯಿತು. ಒಂದಾನೊಂದು ಕಾಲದಲ್ಲಿ ಅವಳೆದೆಯ ಅರಮನೆಯಲ್ಲಿ ಒಬ್ಬ ರಾಜಕುಮಾರನಿದ್ದನು. ಆದರೆ ಈಗ ಅವನು ಅಲ್ಲಿರಲಿಲ್ಲ. ಯಾಕೆಂದರೆ ಅವಳೇ ಅವನನ್ನು ಅವಮಾನ ಮಾಡಿ ಅಲ್ಲಿಂದ ಆಚೆ ಹಾಕಿದ್ದಳು. ಆಕೆ ಎಲ್ಲಿಂದಲೋ ಅವನ ಫೋನ್ ನಂಬರನ್ನು ಪಡೆದುಕೊಂಡು ಅವನಿಗೆ ಕರೆ ಮಾಡಿದಳು. ಆದರೆ ಅವನ ಬದಲಾಗಿ ಅವನ ಪರ್ಸನಲ್ ಅಸಿಸ್ಟೆಂಟ್ ಅವಳ ಕರೆಯನ್ನು ರಿಸೀವ ಮಾಡಿದಳು. ಆಕೆ ಅಮೀತನಿಗೆ ಕನೆಕ್ಟ ಮಾಡಲು ನಿರಾಕರಿಸಿದಳು. 

ಆತ್ಮವಂಚಕಿ : ಒಂದು ಪ್ರೇಮಕಥೆ

             ಅಕ್ಷತಾ ಈಗ ಅವನಿಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾಯಲು ಸಿದ್ಧಳಿದ್ದಳು. ಆದರೆ ಅಮೀತ ಅವಳತ್ರ ಬರುವ ಸಾಧ್ಯತೆಗಳಿರಲಿಲ್ಲ. ಅಮೀತನ ಅಪ್ಪನಿಗೆ "ತಮ್ಮ ಮಗ ತಮ್ಮ ಸಹಾಯವಿಲ್ಲದೆ ದೊಡ್ಡ ವ್ಯಕ್ತಿಯಾಗಿದ್ದಾನೆ" ಎಂಬ ಹೆಮ್ಮೆ ಮೂಡಿತು. ಅದಕ್ಕಾಗಿ ಅವನನ್ನು ಮನೆಗೆ ಕರೆದರು. ಅವರ ಮಾತಿಗೆ ಬೆಲೆಕೊಟ್ಟು ಅವನು ಓಡೋಡಿ ಮನೆಗೆ ಬಂದನು. ಅಕ್ಷತಾ ಏನೋ ಒಂದು ನೆಪಮಾಡಿಕೊಂಡು ಅವನನ್ನು ಭೇಟಿಯಾಗಲು ಪ್ರಯತ್ನಿಸಿದಳು. ಆದರೆ ಅವನ ಅಂಗರಕ್ಷಕರು ಅವಳನ್ನು ಅವನ ಮನೆಯೊಳಗೆ ಬಿಡಲಿಲ್ಲ. ಆಕೆ ಕಣ್ಣೀರಾಕುತ್ತಾ ತನ್ನ  ಮನೆಗೆ ಹಿಂತಿರುಗಿದಳು.

ಆತ್ಮವಂಚಕಿ : ಒಂದು ಪ್ರೇಮಕಥೆ

      ಡಿಗ್ರಿ ಮುಗಿದ ನಂತರ ಅಕ್ಷತಾ ತನ್ನ ಟ್ರ್ಯಾಕಿನಲ್ಲಿ ಸಾಗಿದ್ದಳು. ಅಮೀತ ತನ್ನ ಟ್ರ್ಯಾಕಿನಲ್ಲಿ ದೂರ ಹೋಗಿದ್ದನು. ಆದರೆ ಅವಳಿಗೆ ಮುಂದೊಂದಿನ ಸ್ಟೇಷನ್ ಇಲ್ಲ ಜಂಕ್ಷನಲ್ಲಿ ನಾವಿಬ್ಬರೂ ಒಂದಾಗಬಹುದು ಎಂಬ ಹುಚ್ಚು ನಂಬಿಕೆಯಿತ್ತು. ಅದೀಗ ಹುಸಿಯಾಯಿತು. ಅಕ್ಷತಾ ಅವಳ ಗೆಳತಿಯರಿಗೆ "ಅವನು ಕಾಲೇಜಿನಲ್ಲಿದ್ದಾಗ ನನ್ನನ್ನು ಪ್ರೀತಿಸುತ್ತಿದ್ದ" ಎಂದು ಹೇಳಿದಾಗ ಎಲ್ಲರೂ ಅವಳನ್ನು ಗೇಲಿ ಮಾಡಿಕೊಂಡು ನಕ್ಕರು. " L.K.G. ಮಕ್ಕಳಿಗೆ ಪಾಠ ಮಾಡೋ ನೀನೇಲ್ಲಿ? ಕೋಟ್ಯಾಂತರ ರೂಪಾಯಿ ಕಂಪನಿ ನಡೆಸೋ ಅವನೆಲ್ಲಿ?" ಎಂದು ಕೇಳಿ ಅವಳ ಭ್ರಮೆ ಬಿಡಿಸಿದರು. 

ಆತ್ಮವಂಚಕಿ : ಒಂದು ಪ್ರೇಮಕಥೆ

         ಈಗ ಅಕ್ಷತಾಳ ಕಣ್ಣಲ್ಲಿ ಅವನಿಗಾಗಿ ಕಣ್ಣೀರು ಚಿಮ್ಮುಚ್ಚಿತ್ತು. ಆದರೆ ಅದು ಅವನಿಗೆ ಕಾಣಿಸದೆ ವ್ಯರ್ಥವಾಗಿ ಹೋಯಿತು. ಇದೇ ಕಣ್ಣೀರು ನಾಲ್ಕು ವರ್ಷಗಳ ಮುಂಚೆ ಕಾಲೇಜಿನಲ್ಲಿರುವಾಗ ಬಂದಿದ್ದರೆ ಅವಳಿಗೆ ಅಮೀತ ಸಿಗಬಹುದಿತ್ತು. ಅವಳ ಮೌನ ಅವನನ್ನು ಅವಳಿಂದ ಕಿತ್ತುಕೊಂಡಿತು. ಈಗ ಅವಳ ಮೌನ ಮಾತಾಗಿತ್ತು. ಆದರೆ ಪ್ರಯೋಜನಕ್ಕೆ ಬರದೆ ಹೋಯಿತು. ಅವಳಪ್ಪ  ಹತ್ತಿರದ ಸಂಬಂಧಿಕರಲ್ಲಿನ ಒಬ್ಬ ಹುಡುಗನ ಜೊತೆ ಅಕ್ಷತಾಳ ಮದುವೆಯನ್ನು ನಿಶ್ಚಯಿಸಿದರು. "ನನಗೆ ಮದುವೆ ಇಷ್ಟವಿಲ್ಲ" ಎಂದು  ಅವಳೆಷ್ಟೇ ಕೂಗಾಡಿ ರಂಪಾಟ ಮಾಡಿದರೂ ಅವಳ ಕೂಗನ್ನು ಯಾರು ಕೇಳಿಸಿಕೊಳ್ಳಲಿಲ್ಲ. ಕೊನೆಗವಳು ಮೌನವಾಗಿ ಗಂಡನ ತಾಳಿಗೆ ಕೊರಳ ಚಾಚಿದಳು.

ಆತ್ಮವಂಚಕಿ : ಒಂದು ಪ್ರೇಮಕಥೆ

         ಅಕ್ಷತಾ ಇಷ್ಟವಿಲ್ಲದವನನ್ನು ಮದುವೆಯಾದ ನಂತರ ಫ್ಯಾನ್ ಗಾಳಿಗಾಗಿ ತಂಗಾಳಿಯನ್ನು ಕಳೆದುಕೊಂಡ ನತದೃಷ್ಟೆಯಾದಳು. ಅವಳ ಮಹಾಮೌನದಿಂದಾಗಿ ಅವಳ ಪ್ರೀತಿ ಮಲ್ಲಿಗೆ ಮುಡಿ ಸೇರದೆ ಬಾಡಿ ಹೋಯಿತು. ಅಷ್ಟರಲ್ಲಿ "ಅಮೀತನಿಗೆ ಒಬ್ಬಳು ಟಾಪ್ ನಟಿಯೊಂದಿಗೆ ಮದುವೆ ನಿಶ್ಚಯವಾಗಿದೆ" ಎಂಬ ಸುದ್ದಿ ಅವಳ ಕಿವಿಗೆ ಬಿತ್ತು. ಅವಳು ಎಲ್ಲವನ್ನೂ ಕಳೆದು ಕೊಂಡಂತಾದಳು. ಅಮೀತನ ಪ್ರೀತಿ ತೊಟ್ಟಿಲಿನಲ್ಲಿ ಮಗುವಾಗಿ ಮಲಗಬೇಕು ಎಂದು ಕನಸು ಕಾಣುತ್ತಿದ್ದವಳಿಗೆ, ಬೇಡದ ಗಂಡನ ಹಾಸಿಗೆಯ ಮೇಲೆ ನರಳುವ ದೌರ್ಭಾಗ್ಯ ಬಂದಿತು. ತಮ್ಮ ಅಮೂಲ್ಯ ಸಾಂಸಾರಿಕ ಜೀವನದ ಬಗ್ಗೆ, ಫ್ಯುಚರ ಪ್ಲ್ಯಾನಗಳ ಬಗ್ಗೆ ಏನನ್ನೂ ಚರ್ಚಿಸದೆ ಗಂಡ ಎಣಿಸಿಕೊಂಡವನು ಅವಳ ಸೆರಗಿಗೆ ಕೈಹಾಕಿದನು. ನಾಲ್ಕು ಜನರ ಮುಂದೆ ಅಂಥವನನ್ನು ಗಂಡನೆಂದು ಒಪ್ಪಿಕೊಂಡ ತಪ್ಪಿಗಾಗಿ ಅವಳು ಅಸಹಾಯಕತೆಯಿಂದ ತನ್ನನ್ನು ಅವನಿಗೆ ಸಮರ್ಪಿಸಿಕೊಂಡಳು. 

ಆತ್ಮವಂಚಕಿ : ಒಂದು ಪ್ರೇಮಕಥೆ

                    ಅವಳು ಅಮೀತನನ್ನು ನೆನೆಸಿಕೊಂಡು ಕಾಣುವಂತೆ ಕಣ್ಣೀರಾಕುತ್ತಿದ್ದಳು. ಆದರೆ ಕಾಮಾಂಧನಾದ ಗಂಡನಿಗೆ ಅವಳ ಕಣ್ಣೀರು ಕಾಣಿಸದೆ ಹೋಯಿತು. ಅವಳ ಮನಸ್ಸು ಕೂಡ ಕಣ್ಣೀರಲ್ಲಿ ಸ್ನಾನ ಮಾಡುತ್ತಿತ್ತು. ಆದರೆ ಅವಳ ಗಂಡನಿಗೆ ಅವಳ ಮನಸ್ಸು ಬೇಕಿರಲಿಲ್ಲ. ಅವನಿಗೆ ಬೇಕಾಗಿರುವುದನ್ನು ಆತ ಅನುಭವಿಸುತ್ತಿದ್ದನು. ಅವನ ಕ್ರಿಯೆಗೆ ಅವಳು ಏನನ್ನು ಪ್ರತಿಕ್ರಿಯಿಸದೆ ಸೆರಗು ಜಾರಿಸಿ ಶವದಂತೆ ಸುಮ್ಮನೆ ಮಲಗಿದ್ದಳು. ಆದ್ದರಿಂದ  ಅವಳ ಸುಂದರವಾದ ದೇಹಸಿರಿಯ ಮೇಲೆ ಬಹಳೊತ್ತು ಗಣಿಗಾರಿಕೆ ಮಾಡಲಾಗದೆ ಆತ ಸೋತು ನಿದ್ರೆಗೆ ಜಾರಿದನು. ಆಕೆ ತನ್ನನ್ನು ತಾನೇ ವಂಚಿಸಿಕೊಂಡು ಆತ್ಮವಂಚಕಿಯಾಗಿದ್ದಳು. ಮನಸ್ಸನ್ನು ಅಮೀತನಿಗೆ, ಮೈಯನ್ನು ಗಂಡನಿಗೆ ನೀಡಿ ಅವಳು ಎರಡು ದೋಣಿಗಳ ಮೇಲೆ ಬಾಳ ಪಯಣವನ್ನು ಸಾಗಿಸುವ ಹರಸಾಹಸ ಮಾಡಿದಳು.  ಆದರೆ ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾದಳು....

ಆತ್ಮವಂಚಕಿ : ಒಂದು ಪ್ರೇಮಕಥೆ

Note : All Commercial Rights of this story are reserved by Roaring Creations Films. This is fully imaginary story and does't belongs to anyone in anyway. This story is written for commercial purpose only. So please don't take it too seriously. 


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಆತ್ಮವಂಚಕಿ : ಒಂದು ಪ್ರೇಮಕಥೆ - Kannada Stories ಆತ್ಮವಂಚಕಿ : ಒಂದು ಪ್ರೇಮಕಥೆ - Kannada Stories Reviewed by Director Satishkumar on May 01, 2018 Rating: 4.5
Powered by Blogger.