ನರ ಮತ್ತು ನಾರಾಯಣರಿಬ್ಬರು ಸಾವಿರಾರು ವರ್ಷಗಳಿಂದ ಹಿಮಾಲಯದ ಬದ್ರಿನಾಥ ದೇವಸ್ಥಾನದಲ್ಲಿ ಧ್ಯಾನ ಮಗ್ನನಾಗಿ ಕುಳಿತಿದ್ದರು. ನರ ಎಂದರೆ ಅರ್ಜುನ ಮತ್ತು ನಾರಾಯಣನೆಂದರೆ ಶ್ರೀಕೃಷ್ಣ. ನರ ಮತ್ತು ನಾರಾಯಣರ ಕಠಿಣ ತಪಸ್ಸು ದೇವತೆಗಳ ರಾಜ ದೇವೆಂದ್ರನ ಅಸಮಾಧಾನಕ್ಕೆ ಕಾರಣವಾಯಿತು. ಏಕೆಂದರೆ ನರ ಮತ್ತು ನಾರಾಯಣರು ತಪಸ್ಸು ಮಾಡಿ ಇನ್ನು ಹೆಚ್ಚಿನ ದೈವಿಕ ಶಕ್ತಿ ಸಾಮರ್ಥ್ಯಗಳನ್ನು ಹೊಂದುವುದು ದೇವೆಂದ್ರನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಆತ ಅವರ ತಪಸ್ಸನ್ನು ಭಂಗಗೊಳಿಸುವುದಕ್ಕಾಗಿ ತನ್ನ ಆಸ್ಥಾನದ ಸುಂದರ ಅಪ್ಸರೆಯರಾದ ರಂಭೆ ಮತ್ತು ಮೇನಕೆಯರನ್ನು ಕಳುಹಿಸಿದನು. ಅವರ ಜೊತೆಗೆ ಇನ್ನು ಅನೇಕ ಅಪ್ಸರೆಯರನ್ನು ಕಳುಹಿಸಿದನು.
ನರ ಮತ್ತು ನಾರಾಯಣರು ಅಪ್ಸರೆಯರ ಅಂದಕ್ಕೆ ಮನಸೋತು ತಮ್ಮ ತಪಸ್ಸನ್ನು ನಿಲ್ಲಿಸುತ್ತಾರೆ ಎಂಬ ನಂಬಿಕೆಯಲ್ಲಿ ದೇವೇಂದ್ರ ನಿಶ್ಚಿಂತೆಯಿಂದ ಇದ್ದನು. ಏಕೆಂದರೆ ಅವನಿಗೆ ರಂಭೆ ಮತ್ತು ಮೇನಕೆಯರ ಸೌಂದರ್ಯದ ಮೇಲೆ ಗರ್ವವಿತ್ತು. ರಂಭೆ ಮೇನಕೆಯರನ್ನು ಸೇರಿ ಹಲವಾರು ಸುಂದರ ಅಪ್ಸರೆಯರು ಕಣ್ಮುಂದೆ ಸುಳಿದಾಡಿದರೂ ನರ ನಾರಾಯಣರು ಕಿಂಚಿತ್ತೂ ವಿಚಲಿತರಾಗಲಿಲ್ಲ. ಆಗ ಅಪ್ಸರೆಯರಾದ ರಂಭೆ ಮತ್ತು ಮೇನಕೆಯರು ಅಹಂಕಾರದಿಂದ ನರ ನಾರಾಯಣರಿಗೆ "ದೇವೇಂದ್ರ ನಮ್ಮನ್ನು ನಿಮಗೆ ಕಾಣಿಕೆಯಾಗಿ ನೀಡಿದ್ದಾನೆ. ನಮ್ಮನ್ನು ಸ್ವೀಕರಿಸಬೇಕೆಂದು ಕೇಳಿಕೊಂಡರು. ಅವರಿಗೆ ನಾವೇ ವಿಶ್ವ ಸುಂದರಿಯರು ಎಂಬ ಅಹಂ ಅಹಂಕಾರದಿಂದ ಮಾತಾಡುವಂತೆ ಮಾಡಿತ್ತು. ಅದಕ್ಕಾಗಿ ಅವರು ಜಂಭದಿಂದ ಮಾತಾಡಿದರು.
ಅಪ್ಸರೆಯರ ಸೊಕ್ಕನ್ನು ಮುರಿಯಲು ನಾರಾಯಣನು ಒಂದು ಹೂವನ್ನು ತೆಗೆದುಕೊಂಡು ತನ್ನ ತೊಡೆಗೆ ಅಪ್ಪಳಿಸಿದನು. ಆಗ ಅವನ ತೊಡೆಯಿಂದ ಓರ್ವ ಸುಂದರವಾದ ಕನ್ಯೆ ಜನ್ಮ ತಾಳಿದಳು. ಅವಳು ರಂಭೆ, ಮೇನಕೆಯರಿಗಿಂತ ಎಷ್ಟೋ ಪಟ್ಟು ಸುಂದರವಾಗಿದ್ದಳು. ದೇವಲೋಕದಿಂದ ಬಂದ ಅಪ್ಸರೆಯರು ಅವಳ ಸೌಂದರ್ಯದ ಮುಂದೆ ಸಣ್ಣವರಾಗಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತರು. ಆಗ ನಾರಾಯಣನು ಅಪ್ಸರೆಯರಾದ ರಂಭೆ ಮೇನಕೆಯರಿಗೆ "ದೈಹಿಕ ಸೌಂದರ್ಯ ಶಾಶ್ವತವಾದುದಲ್ಲ..." ಎಂಬುದನ್ನು ತಿಳಿ ಹೇಳಿದನು. ಅಪ್ಸರೆಯರ ಗರ್ವಭಂಗ ಮಾಡಿದ ಸುಂದರಿ ತನ್ನ ಉರ ಭಾಗದಿಂದ ಅಂದರೆ ತೊಡೆಯಿಂದ ಜನ್ಮತಾಳಿದ್ದರಿಂದ ನಾರಾಯಣ ಅವಳಿಗೆ ಊರ್ವಶಿ ಎಂದು ಹೆಸರಿಟ್ಟನು. ನಂತರ ಆತ ಅಪ್ಸರೆಯರಿಗೆ "ಊರ್ವಶಿಯನ್ನು ದೇವೇಂದ್ರನಿಗೆ ನಮ್ಮ ಕಡೆಯಿಂದ ಕಾಣಿಕೆಯಾಗಿ ಕೊಡುವಂತೆ" ಹೇಳಿ ಅವಳನ್ನು ಅವರೊಂದಿಗೆ ದೇವಲೋಕಕ್ಕೆ ಕಳುಹಿಸಿದನು.
ಅಪ್ಸರೆಯರ ಅಂದಕ್ಕೆ ಅಂಧರಾಗದೆ ನರ ನಾರಾಯಣರಿಬ್ಬರು ತಮ್ಮ ತಪಸ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇನ್ನು ಹೆಚ್ಚಿನ ದೈವಿಕ ಶಕ್ತಿಗಳನ್ನು ಪಡೆದುಕೊಂಡು ಮತ್ತಷ್ಟು ಬಲಿಷ್ಟವಾದರು. ತನ್ನ ಕುಟಿಲ ಉಪಾಯ ಕೈಗೂಡದಿದ್ದರಿಂದ ದೇವೇಂದ್ರ ಹತಾಶಭಾವದಲ್ಲಿದ್ದನು. ಅಪ್ಸರೆಯರೊಂದಿಗೆ ಬಂದ ಅಪರೂಪದ ಸುಂದರಿ ಊರ್ವಶಿಯನ್ನು ನೋಡಿ ಅವನ ಹತಾಶೆ ಹಠಾತ್ತನೆ ಮಾಯವಾಯಿತು. ದೇವೇಂದ್ರನ ಆಜ್ಞೆಯ ಮೇರೆಗೆ ಊರ್ವಶಿ ಅವನ ಆಸ್ಥಾನದ ಮುಖ್ಯ ನರ್ತಕಿಯಾಗಿ ಎಲ್ಲರನ್ನು ರಂಜಿಸಲು ಒಪ್ಪಿಕೊಂಡು ದೇವಲೋಕದ ಪ್ರಖ್ಯಾತ ಅಪ್ಸರೆಯಾದಳು...