ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada

Chanakya Niti in Kannada
ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು

                             ಒಂದಿನ ಇದ್ದಕ್ಕಿದ್ದಂತೆ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಒಬ್ಬ ಪಂಡಿತ ಆಗಮಿಸಿದನು. ಆತ ವಿನಯಪೂರ್ವಕವಾಗಿ ರಾಯರಿಗೆ ವಂದಿಸಿ "ನಾನು ಬಹುಭಾಷಾ ಪಂಡಿತ ನನಗೆ ಜಗತ್ತಿನ ಬಹುಪಾಲು ಭಾಷೆಗಳು ಸರಾಗವಾಗಿ ಬರುತ್ತವೆ. ನಾನು ಜಗತ್ತಿನ ಉದ್ದಗಲಕ್ಕೂ ಸಂಚರಿಸುವಾಗ ವಿಜಯನಗರ ಸಾಮ್ರಾಜ್ಯದ ವಿದ್ವಾಂಸರ ಬಗ್ಗೆ ಬಹಳಷ್ಟು ಕೇಳಿರುವೆ. ಅವರನ್ನು ಪರೀಕ್ಷಿಸುವ ಉದ್ದೇಶದಿಂದ ನಾನಿಲ್ಲಿಗೆ ಬಂದಿರುವೆ. ದಯವಿಟ್ಟು ನನಗೆ ಅನುಮತಿ ಕೊಡಬೇಕೆಂದು" ಕೇಳಿಕೊಂಡನು. ಅವನ ಕೋರಿಕೆಗೆ ರಾಯ ಖುಷಿಖುಷಿಯಿಂದ ಸಮ್ಮತಿಸಿದನು. ರಾಯನ ಅನುಮತಿ ಮೇರೆಗೆ ಬಹುಭಾಷಾ ಪಂಡಿತ ವಿಜಯನಗರ ಆಸ್ಥಾನದ ವಿದ್ವಾಂಸರನ್ನು ಪರೀಕ್ಷಿಸಲು ಪ್ರಾರಂಭಿಸಿದನು. ವಿದ್ವಾಂಸರು ಅವನಿಗೆ ಎಲ್ಲ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರು. ಆತ ಎಲ್ಲ ಭಾಷೆಗಳಲ್ಲಿಯೂ ನಿರ್ಗಳವಾಗಿ ಉತ್ತರ ನೀಡಿದನು. ಅವನಿಗೆ ಬರುವಷ್ಟು ಭಾಷೆಗಳು ಆಸ್ಥಾನದಲ್ಲಿ ಬೇರೆ ಯಾರಿಗೂ ಬರುತ್ತಿರಲಿಲ್ಲ. ವಿದ್ವಾಂಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ನಂತರ ಆ ಬಹುಭಾಷಾ ಪಂಡಿತ ಆಸ್ಥಾನಿಕರಿಗೆ ಒಂದು ಸವಾಲನ್ನು ಎಸೆದನು. "ನನ್ನ ಮಾತೃಭಾಷೆ ಯಾವುದೆಂದು ಹೇಳಬಲ್ಲಿರಾ...?" ಎಂದು ಕೇಳಿದನು. ಆ ಪಂಡಿತನ ಮಾತೃಭಾಷೆ ಯಾವುದು ಎಂಬುದನ್ನು ಕಂಡು ಹಿಡಿಯುವುದು ಎಲ್ಲ ವಿದ್ವಾಂಸರಿಗೆ ಕಷ್ಟವೇ ಆಯಿತು. ಏಕೆಂದರೆ ಆತ ಬಹಳಷ್ಟು ಭಾಷೆಗಳನ್ನು ಅತ್ಯಂತ ಸರಾಗವಾಗಿ ಮಾತನಾಡುತ್ತಿದ್ದನು. ಯಾವ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಸರಿಯಾಗಿಯೇ ಉತ್ತರಿಸುತ್ತಿದ್ದನು. ಅವನಿಗೆ ಎಲ್ಲಾ ಭಾಷೆಗಳ ಮೇಲೆ ಹಿಡಿತವಿತ್ತು. ಅದಕ್ಕಾಗಿ ಯಾವ ಭಾಷೆಯಲ್ಲಿ ಪ್ರಶ್ನೆ ಕೇಳಿದರೂ ಅದು ಅವನ ಮಾತೃ ಭಾಷೆಯೇ ಎನಿಸುತಿತ್ತು. ಹೀಗಾಗಿ ಆ ಬಹುಭಾಷಾ ಪಂಡಿತನ ಮಾತೃಭಾಷೆ ಯಾವುದು ಎನ್ನುವುದನ್ನು ಕಂಡು ಹಿಡಿಯುವುದು ಕಷ್ಟದ ಕೆಲಸವಾಯಿತು. ಆಸ್ಥಾನದಲ್ಲಿದ್ದ ವಿದ್ವಾಂಸರೆಲ್ಲ ಅವನ ಮಾತೃಭಾಷೆ ಯಾವುದೆಂದು ಕಂಡು ಹಿಡಿಯುವಲ್ಲಿ ವಿಫಲರಾದಾಗ ಸ್ವತಃ ಶ್ರೀಕೃಷ್ಣ ದೇವರಾಯನೇ ಪ್ರಯತ್ನಿಸಿದನು. ಆದರೆ ಅವನೂ ಸಹ ಎಲ್ಲರಂತೆ  ವಿಫಲವಾದನು.

ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು

                                                         ಆಸ್ಥಾನದ ಎಲ್ಲ ವಿದ್ವಾಂಸರ ಸಮೇತ ಸ್ವತಃ ತಾನೇ ವಿಫಲವಾದರೂ ಸಹ ಶ್ರೀಕೃಷ್ಣ ದೇವರಾಯ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಏಕೆಂದರೆ ಆತ ತೆನಾಲಿ ರಾಮಕೃಷ್ಣನನ್ನು ಬಲವಾಗಿ ನಂಬಿದ್ದನು. ಎಲ್ಲರು ವಿಫಲವಾದರೂ ಸಹ ತೆನಾಲಿ ರಾಮಕೃಷ್ಣ ಅವನ ಮಾತೃ ಭಾಷೆಯನ್ನು ಕಂಡು ಹಿಡಿಯಬಲ್ಲನು ಎಂಬ ನಂಬಿಕೆ ಅವನಿಗಿತ್ತು. ಅದಕ್ಕಾಗಿ ರಾಯ ತೆನಾಲಿ ರಾಮಕೃಷ್ಣನೆಡೆಗೆ ನೋಡುತ್ತಾ "ರಾಮಕೃಷ್ಣ ನಿನಗೆ ಏನೂ ಹೊಳೆಯಲಿಲ್ಲವೇ...?" ಎಂದು ಕೇಳಿದನು. ಆಗ ಆತ "ಮಹಾಪ್ರಭು ಇವನ್ಯಾರೋ ಬಹುಭಾಷೆಗಳನ್ನು ಬಲ್ಲ ಪಂಡಿತನಿದ್ದಾನೆ.  ನನಗೆ ಒಂದು ದಿನ ಕಾಲಾವಕಾಶ ಕೊಡಿ. ನಾನು ಅವನ ಮಾತೃಭಾಷೆಯನ್ನು ಕಂಡು ಹಿಡಿಯುತ್ತೇನೆ." ರಾಮಕೃಷ್ಣನ ಕೋರಿಕೆಯನ್ನು ಶ್ರೀಕೃಷ್ಣ ದೇವರಾಯ ಮನ್ನಿಸಿದನು. ರಾಮಕೃಷ್ಣನ ಸಲಹೆ ಮೇರೆಗೆ ಆ ಬಹುಭಾಷಾ ಪಂಡಿತನಿಗೆ ಭಕ್ಷ್ಯ ಭೋಜನಗಳನ್ನು ಬಡಿಸಲಾಯಿತು. ನಂತರ ಅವನಿಗೆ ಪ್ರವಾಸಿ ತಾಣದಲ್ಲಿ ತಂಗಲು ಸೂಕ್ತ ವ್ಯವಸ್ಥೆಯನ್ನು ಸಹ ಮಾಡಲಾಯಿತು. ರುಚಿಕಟ್ಟಾದ ಭೋಜನವನ್ನು ಹೊಟ್ಟೆ ತುಂಬಾ ಸವಿದ ನಂತರ ಆ ಬಹುಭಾಷಾ ಪಂಡಿತ ಪ್ರವಾಸಿ ತಾಣದಲ್ಲಿ ವಿಶ್ರಮಿಸಲು ಹೋದನು. ಸೆಕೆಯಾಗುತ್ತಿರುವುದರಿಂದ ಆತ ಕಿಟಕಿ ಬಾಗಿಲನ್ನು ತೆರೆದು ತನ್ನ ಮೇಲು ವಸ್ತ್ರವನ್ನು ಕಳಚಿ ಮಂಚದ ಮೇಲೆ ಹಾಯಾಗಿ ಮಲಗಿಕೊಂಡನು. ನಿದ್ರಾದೇವಿ ಅವನನ್ನು ಗಾಢವಾಗಿ ಆವರಿಸಿಕೊಂಡಳು.

ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು

                        ಮಧ್ಯರಾತ್ರಿಯ ಸಮಯವಾಗಿತ್ತು. ಆ ಪಂಡಿತ ಪ್ರವಾಸಿ ತಾಣದಲ್ಲಿ ಯಾವ ಚಿಂತೆಯೂ ಇಲ್ಲದೆ ಹಾಯಾಗಿ ನಿದ್ರಿಸುತ್ತಿದ್ದನು. ಈ ಸಮಯವನ್ನು ನೋಡಿಕೊಂಡು ರಾಮಕೃಷ್ಣ ಆ ಪಂಡಿತನ ಕೋಣೆಗೆ ನುಗ್ಗಿದನು. ಅವನ ಕೈಯಲ್ಲಿ ಒಂದು ಉದ್ದನೆಯ ಕೋಲಿತ್ತು. ಆ ಕೋಲಿನಿಂದ ರಾಮಕೃಷ್ಣ ಪಂಡಿತನ ಹೊಟ್ಟೆಯನ್ನು ಸ್ವಲ್ಪ ಜೋರಾಗಿ ತಿವಿದನು. ಆಗ ಪಂಡಿತ ಒಮ್ಮೆಲೇ ಎಚ್ಚರಗೊಂಡನು. ಅವನ ಸುಖ ನಿದ್ರೆ ಹಾಳಾಗಿದ್ದರಿಂದ ಆತ ಕೋಪದಲ್ಲಿ "ಎವಡ್ರಾ ಅದಿ..." ಎಂದು ಕೂಗಿಕೊಂಡನು. ಅವನೀಗ ಮಾತನಾಡಿದ ಭಾಷೆ ತೆಲುಗು ಆಗಿತ್ತು. ತೆಲುಗಿನಲ್ಲಿ "ಎವಡ್ರಾ ಅಧಿ" ಎಂದರೆ "ಯಾರೋ ಅದು.." ಎಂದರ್ಥವಾಗುತ್ತಿತ್ತು. ತಕ್ಷಣವೇ ರಾಮಕೃಷ್ಣ ಆ ಪಂಡಿತನಿಗೆ "ನಿನ್ನ ಮಾತೃಭಾಷೆ ತೆಲುಗು ಹೌದೋ ಅಲ್ಲವೋ?" ಎಂದು ಕೇಳಿದನು. ಅರೆ ನಿದ್ರೆಯಲ್ಲಿದ್ದ ಪಂಡಿತ "ಖಂಡಿತ ಹೌದು, ನನ್ನ ಮಾತೃಭಾಷೆ ತೆಲುಗು" ಎಂದೇಳಿ ಮತ್ತೆ ನಿದ್ರೆಗೆ ಜಾರಿದನು. ಈ ರೀತಿ ತೆನಾಲಿ ರಾಮಕೃಷ್ಣ ತನ್ನ ತಲೆ ಉಪಯೋಗಿಸಿ ಆ ಬಹುಭಾಷಾ ಪಂಡಿತನ ಮಾತೃಭಾಷೆಯನ್ನು ಕಂಡುಹಿಡಿದನು. ಮಾರನೇ ದಿನ ಆ ಬಹುಭಾಷಾ ಪಂಡಿತ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಬಂದು ತನ್ನ ಮಾತೃಭಾಷೆ ತೆಲುಗು ಎಂದು ಒಪ್ಪಿಕೊಂಡು ರಾಮಕೃಷ್ಣನ ಬುದ್ಧಿವಂತಿಕೆಯನ್ನು ಮನಸಾರೆ ಹೊಗಳಿದನು. ನಂತರ ರಾಯನಿಗೆ ವಿನಯಪೂರ್ವಕವಾಗಿ ವಂದಿಸಿ ತೆನಾಲಿ ರಾಮಕೃಷ್ಣನನ್ನು ಆತ್ಮೀಯತೆಯಿಂದ ಅಪ್ಪಿಕೊಂಡು ತನ್ನೂರಿಗೆ ಮರಳಿದನು. ನಂತರ ಆಸ್ಥಾನದಲ್ಲಿದ್ದ ಎಲ್ಲ ವಿದ್ವಾಂಸರು ತೆನಾಲಿ ರಾಮಕೃಷ್ಣನಿಗೆ ಮೆಚ್ಚುಗೆಗಳನ್ನು ಸಲ್ಲಿಸಿ ರಾಜ್ಯಸಭೆಯೆಡೆಗೆ ಗಮನ ಹರಿಸಿದರು. To Be Continued... 

ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು


  ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 


ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada ಮಾತೃ ಭಾಷಾ ಪರೀಕ್ಷೆ : ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada Reviewed by Director Satishkumar on October 15, 2018 Rating: 4.5
Powered by Blogger.