ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama in Kannada

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

                                ಮಹಾಭಾರತದ ಆದಿ ಪರ್ವದಲ್ಲಿ ಪಂಚ ಪಾಂಡವರು ದ್ರೌಪದಿ ಒಬ್ಬಳನ್ನೇ ಮದುವೆಯಾದರು. ಆವಾಗ ನಾರದ ಮಹರ್ಷಿಗಳು ಅವರಿಗೆ ಅವರ ನಡುವೆ ಕಲಹಗಳುಂಟಾಗಲು ಒಂದು ಹೆಣ್ಣು ಕಾರಣವಾಗಬಹುದು ಎಂದು ವಿವರಿಸುತ್ತಿದ್ದರು. ಆ ಸಮಯದಲ್ಲಿ ಪಾಂಡವರು ನಾರದರಿಗೆ ಹೇಗೆ ಹೆಣ್ಣು ನಮ್ಮ ನಡುವಿನ ಕಲಹಗಳಿಗೆ ಕಾರಣಳಾಗುತ್ತಾಳೆ ಎಂದು ಸವಾಲೆಸೆದಾಗ ಅವರು ಸುಂದ ಮತ್ತು ಉಪಸುಂದ ಎಂಬ ಅಸುರರ ಅವನತಿಯ ಕಥೆಯನ್ನು ವಿವರಿಸಿದರು. ಸುಂದ ಮತ್ತು ಅಸುಂದ ಎಂಬ ಸಹೋದರರು ವಿಂಧ್ಯ ಪರ್ವತದಲ್ಲಿ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನನ್ನು ಒಲಿಸಿಕೊಂಡರು. ನಂತರ ತಮಗೆ ಅಮರತ್ವ ನೀಡಬೇಕೆಂದು ಬ್ರಹ್ಮನ ಬಳಿ ಬೇಡಿಕೆಯಿಟ್ಟರು. ಅವರ ಬೇಡಿಕೆಯನ್ನು ತಳ್ಳಿ ಹಾಕಿದ ಬ್ರಹ್ಮ ಅವರಿಗೆ ಅಮರತ್ವವನ್ನು ನೀಡಲು ನಿರಾಕರಿಸಿ ಬೇರೆ ವರವನ್ನು ನೀಡಿದನು. ಅಮರತ್ವದ ಬದಲಾಗಿ ನಿಮ್ಮ ಸಾವು ನಿಮ್ಮಿಬ್ಬರ ಕಲಹದಿಂದ ಮಾತ್ರ ಸಾಧ್ಯ, ಬೇರೆಯವರಿಂದ ಅಸಾಧ್ಯವೆಂಬ ವರವನ್ನು ನೀಡಿದನು. ಬ್ರಹ್ಮ ಕೊಟ್ಟ  ವರದಿಂದ ಸುಂದ ಉಪಸುಂದರು ಬಹಳಷ್ಟು ಬೀಗಿದರು. ನಮ್ಮನ್ನು ಕೊಲ್ಲಲು ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೂ ಸಾಧ್ಯವಿಲ್ಲವೆಂದು ಕುಣಿದು ಕುಪ್ಪಳಿಸಿದರು. ಅದೇ ಅಹಂನಲ್ಲಿ ಅನೀತಿ ಅತ್ಯಾಚಾರಗಳನ್ನು ಪ್ರಾರಂಭಿಸಿದರು. ಸಾಧು ಸಜ್ಜನರ ಮೇಲೆ ದಾಳಿ ಮಾಡಿದರು. ದೇವಲೋಕದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ದೇವತೆಗಳ ಮೇಲೆ ಹಲ್ಲೆ ಮಾಡಿದರು. ಜೊತೆಗೆ ದೇವಲೋಕದಲ್ಲಿದ್ದ ಅಪ್ಸರೆಯರನ್ನು ತಮ್ಮಿಷ್ಟದಂತೆ ಬಳಸಿಕೊಂಡರು. ಅವರ ಕಿರುಕುಳವನ್ನು ತಾಳಲಾರದೆ ದೇವತೆಗಳೆಲ್ಲ ಬ್ರಹ್ಮನ ಮೋರೆ ಹೋದರು.

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

                                      ತಾನೇ ಕೊಟ್ಟ ವರ ತನಗೆ ಮುಳುವಾಯ್ತೆಂದು ಬ್ರಹ್ಮ ವ್ಯಥಿಸಿದನು. ದೇವಲೋಕದ ಮೇಲೆ ಅತ್ಯಾಚಾರ ಮಾಡಿದ ಅಸುರರಾದ ಸುಂದ ಉಪಸುಂದರನ್ನು ಉಪಾಯದಿಂದ ಸಂಹರಿಸುವುದಾಗಿ ಅಭಯಹಸ್ತ ನೀಡಿ ದೇವತೆಗಳನ್ನು ಸಂತೈಸಿದನು. ಬ್ರಹ್ಮ ದೇವಶಿಲ್ಪಿ ವಿಶ್ವಕರ್ಮನನ್ನು ಕರೆದು ಜಗತ್ತಿನಲ್ಲಿರುವ ಸುಂದರ ವಸ್ತುಗಳನ್ನೆಲ್ಲ ಸೇರಿಸಿಕೊಂಡು ಒಂದು ಸುಂದರವಾದ ಹೆಣ್ಣನ್ನು ಸೃಷ್ಟಿಸಲು ಆಜ್ಞಾಪಿಸಿದನು. ಅದೇ ರೀತಿ ದೇವಶಿಲ್ಪಿ ವಿಶ್ವಕರ್ಮ ಎಲ್ಲ ಸುಂದರ ವಸ್ತುಗಳ ಕಣಕಣದಿಂದ ಸೌಂದರ್ಯವನ್ನು ಸಾಣೆ ಹಿಡಿದು ಒಂದೆಡೆಗೆ ಸೇರಿಸಿ ಸುಂದರವಾದ ಸ್ತ್ರೀಯನ್ನು ಸೃಷ್ಟಿಸಿದನು. ಅವಳು ತನ್ನ ದೇಹದ ಕಣಕಣದಿಂದಲೂ ಉತ್ತಮವಾಗಿರುವುದರಿಂದ ಅವಳಿಗೆ ತಿಲೋತ್ತಮೆ ಎಂದು ಹೆಸರಿಟ್ಟರು. ಅವಳ ದೇಹದ ಪ್ರತಿ ಕಣಕಣದಿಂದಲೂ ಸೌಂದರ್ಯ ಪ್ರಖರಿಸುತ್ತಿತ್ತು. ಅವಳ ಸೌಂದರ್ಯದ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಯಾರಿಗೂ ಅವಳನ್ನು ಬಹಳ ಕ್ಷಣಗಳ ಕಾಲ ನೋಡಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವಳ ಅಂಗಾಂಗಗಳಿಂದ ಹೊರಹೊಮ್ಮುತ್ತಿದ್ದ ಸೌಂದರ್ಯದ ತೇಜಸ್ಸು ಅಷ್ಟೊಂದು ಪ್ರಕಾಶಮಾನವಾಗಿತ್ತು.

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

                           ತಿಲೋತ್ತಮೆಗೆ ಮಹಾ ಶಿವನನ್ನು ಸೆಳೆಯುವ ಆಸೆಯಾಯಿತು. ಅದಕ್ಕಾಗಿ ಅವಳು ಕೈಲಾಸ ಪರ್ವತದ ಸುತ್ತಮುತ್ತ ಸುಳಿದಾಡಲು ಶುರು ಮಾಡಿದಳು. ಶಿವ ಅವಳನ್ನು ನೋಡುವುದಕ್ಕಾಗಿ ಹರಸಾಹಸಪಟ್ಟನು. ಅವನ ಹರಸಾಹಸದ ಪ್ರಯತ್ನ ಪಕ್ಕದಲ್ಲಿದ್ದ ಪಾರ್ವತಿಗೆ ಗೊತ್ತಾದಾಗ ಅವಳು ಕೋಪದಲ್ಲಿ ತನ್ನ ಕೈಗಳಿಂದ ಶಿವನ ಎರಡು ಕಣ್ಣುಗಳನ್ನು ಮುಚ್ಚಿದಳು. ಶಿವನ ಕಣ್ಣುಗಳನ್ನು ಪಾರ್ವತಿ ಮುಚ್ಚಿರುವುದರಿಂದ ಜಗತ್ತಿನಲ್ಲಿ ಘಾಡವಾದ ಅಂಧಕಾರ ಆವರಿಸಿ ಆಹಾಕಾರ ಶುರುವಾಯಿತು. ಆಗ ಬೇರೆ ವಿಧಿಯಿಲ್ಲದೆ ಶಿವ ಮೂರನೇ ಕಣ್ಣನ್ನು ಸೃಷ್ಟಿಸಿಕೊಂಡು ಜಗತ್ತನ್ನು ಮತ್ತೆ ಮೊದಲಿನಂತೆ ಬೆಳಗಿದನು. ಹೀಗಾಗಿ ತಿಲೋತ್ತಮೆ ಶಿವನನ್ನು ಸೆಳೆಯುವ ಪ್ರಯತ್ನವನ್ನು ತ್ಯಜಿಸಿ ಬ್ರಹ್ಮನ ಬಳಿ ಹೋದಳು. ದೇವಲೋಕಕ್ಕೆ ಕಂಟಕವಾಗಿರುವ ಸುಂದ ಮತ್ತು ಉಪಸುಂದ ಎಂಬ ಅಸುರರನ್ನು ಕುಟಿಲತೆಯಿಂದ ಕೊಲ್ಲುವ ಜವಾಬ್ದಾರಿಯನ್ನು ಬ್ರಹ್ಮ ತಿಲೋತ್ತಮೆಯ ಹೇಗಲೇರಿಸಿದನು.

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

                  ಬ್ರಹ್ಮ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಾಗಿ ತಿಲೋತ್ತಮೆ ವಿಂದ್ಯಾ ಪರ್ವತದ ಮೇಲೆ ಆಕಾಶದಿಂದಿದಳು. ವಿಂಧ್ಯ ಪರ್ವತದಲ್ಲಿ ಸುಂದ ಮತ್ತು ಉಪಸುಂದರಿಬ್ಬರು ಸುರಪಾನ ಮಾಡಿ ಅಪ್ಸರೆಯರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಳಿದ ತಿಲೋತ್ತಮೆ ಮನಮೋಹಕ ನಗೆಯನ್ನು ಬೀರುತ್ತಾ ಅಲ್ಲಿದ್ದ ಹೂಗಳನ್ನು ಮೆಲ್ಲನೆ ಕೀಳುತ್ತಾ ಸಮಯ ಕಳೆಯುತ್ತಾ ನಿಂತಳು. ಅವಳ ಸೌಂದರ್ಯದ ಸೆಳೆತಕ್ಕೆ ಆ ಅಸುರ ಸಹೋದರರ ಗಮನ ಅವಳೆಡೆಗೆ ವಾಲಿತು. ಅವಳ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ಕೈಬೀಸಿ ಕರೆಯುವ ಕಿವಿಯೋಲೆ, ಅರೆಬರೆ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು ಅವರಿಬ್ಬರನ್ನು ಆಕರ್ಷಿಸಿತು. ತಕ್ಷಣವೇ ಸುಂದ ಉಪಸುಂದರಿಬ್ಬರು ಅವಳ ಎಡಬಲ ಭುಜಗಳನ್ನು ಬಳಸಿ ಅಪ್ಪಿಕೊಂಡು ಅವಳ ಕೈಹಿಡಿದು ಅವಳನ್ನು ತಮ್ಮ ಸ್ವತ್ತಾಗಿಸಿಕೊಳ್ಳಲು ಮುಂದಾದರು. ಇಬ್ಬರು ಅವಳ ಕೈಹಿಡಿದು "ನನ್ನನ್ನು ಮದುವೆಯಾಗು..." ಎಂದು ಒತ್ತಾಯಿಸಿದರು. ಅದಕ್ಕವಳು "ನಿಮ್ಮಿಬ್ಬರಲ್ಲಿ ಯಾರು ಬಲಿಷ್ಟರೋ ಅವರನ್ನು ನಾನು ಮದುವೆಯಾಗುತ್ತೇನೆ..." ಎಂದು ಹೇಳಿದಳು. ಅವಳನ್ನು ಮದುವೆಯಾಗುವುದಕ್ಕಾಗಿ ಸಹೋದರರಿಬ್ಬರು ಶತ್ರುಗಳಂತೆ ಕಿತ್ತಾಡಲು ಪ್ರಾರಂಭಿಸಿದರು. 

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

            ಈ ಮೊದಲು ಸಂಪತ್ತು, ಸಾಮ್ರಾಜ್ಯಗಳೆಲ್ಲವನ್ನು ಸಮನಾಗಿ ಅನುಭವಿಸಿದ ಸಹೋದರರು ಈಗ ಒಂದು ಹೆಣ್ಣಿಗಾಗಿ ಪರಸ್ಪರ ಹೊಡೆದಾಡಿಕೊಂಡು ಸತ್ತು ಶವವಾಗಿ ಅವಳ ಕಾಲಡಿಗೆ ಉರುಳಿದರು. ತನ್ನ ಕುಟಿಲತೆ ಕೈಗೂಡಿದ್ದರಿಂದ ತಿಲೋತ್ತಮೆ ನಸುನಗುತ್ತಾ ಬ್ರಹ್ಮನ ಬಳಿಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಿದಳು. ಅವಳ ಕಾರ್ಯಸಾಧನೆಯನ್ನು ಮೆಚ್ಚಿ ಬ್ರಹ್ಮ ಅವಳಿಗೆ ಮನ ಬಯಸಿದ ಕಡೆಗೆ ಸ್ವತಂತ್ರವಾಗಿ ಇರುವ, ತಿರುಗಾಡುವ ವರವನ್ನು ನೀಡಿ ಅವಳ ಮನತಣಿಸಿದನು. ಉಳಿದೆಲ್ಲ ಅಪ್ಸರೆಯರು ದೇವತೆಗಳ ಕಾಮದ ಕೈಗೊಂಬೆಯಾಗಿ ನರಳುತ್ತಿದ್ದರೆ ತಿಲೋತ್ತಮೆ ತಾನು ಸಾಧಿಸಿದ ಒಂದೇ ಒಂದು ಕುಟಿಲತೆಯ ಫಲವಾಗಿ ಮನಬಂದ ಕಡೆಗೆ ಸ್ವಚ್ಛಂದವಾಗಿ ಸಂಚರಿಸುತ್ತಿದ್ದಾಳೆ....

ತಿಲೋತ್ತಮೆಯ ಕುಟಿಲತೆ : ಪೌರಾಣಿಕ ಕಥೆ - Cunningness of Tilottama

Blogger ನಿಂದ ಸಾಮರ್ಥ್ಯಹೊಂದಿದೆ.