ಕಾಶ್ಮೀರಿ ಪಂಡಿತನ ಗರ್ವಭಂಗ - ತೆನಾಲಿರಾಮನ ಹಾಸ್ಯ ಕಥೆಗಳು - Stories of Tenali Ramakrishna in Kannada - tenali rama stories in kannada
ಒಮ್ಮೆ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಯಾವುದೇ ಮುನ್ಸೂಚನೆ ನೀಡದೆ ಒಬ್ಬ ಕಾಶ್ಮೀರಿ ಪಂಡಿತ ಬಂದನು . ಆತ ಬಹುಭಾಷಾ ಪಂಡಿತರಾಗಿದ್ದನು. ಅವನಿಗೆ ಹಲವಾರು ಭಾಷೆಗಳು ಬರುತ್ತಿದ್ದವು. ಅವನು ವೇದಗಳನ್ನು ಓದಿಕೊಂಡಿದ್ದನು. ವಿದ್ವಾಂಸನು ಕೂಡ ಆಗಿದ್ದನು. ಅವನು ಎಷ್ಟೋ ಬಿರುದುಗಳನ್ನು ಸಹ ಬಾಚಿಕೊಂಡಿದ್ದನು. ಜೊತೆಗೆ ಅನೇಕ ಪ್ರಶಸ್ತಿ ಪತ್ರಿಕೆಗಳನ್ನು ಸಹ ಮುಡಿಗೇರಿಸಿಕೊಂಡಿದ್ದನು. ರಾಜ ಮಹಾರಾಜರು ಅವನನ್ನು ಸನ್ಮಾನಿಸಿ ಅವನ ಪ್ರಶಂಸೆ ಮಾಡಿದ್ದರು. ಇಂತಹ ಪಂಡಿತ ತಮ್ಮ ಸ್ಥಾನಕ್ಕೆ ಬಂದಿದ್ದರಿಂದ ಶ್ರೀ ಕೃಷ್ಣ ದೇವರಾಯನಿಗೆ ಸಹಜವಾಗಿ ಸಂತೋಷವಾಗಿತ್ತು.
ಆದರೆ ಆ ಪಂಡಿತನನ್ನು ವಾದದಲ್ಲಿ ಸೋಲಿಸುವ ವಿದ್ವಾಂಸ ತಮ್ಮ ಆಸ್ಥಾನದಲ್ಲಿ ಯಾರೂ ಇಲ್ಲ ಎಂಬುದು ದೊರೆಗೆ ದುಃಖದ ವಿಷಯವಾಗಿತ್ತು. ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಪಂಡಿತರು ಕೇವಲ ಹೊಗಳು ಭಟ್ಟರಾಗಿದ್ದರು. ವಿದ್ಯಾ ಮದದಲ್ಲಿ ಮುಳುಗಿದ್ದರು. ಅವರು ಅಪ್ರತಿಮ ಬುದ್ಧಿವಂತರಾಗಿದ್ದರೂ ಸಹ ಶ್ರೀಕೃಷ್ಣ ದೇವರಾಯನಿಗೆ ಅವರ ಮೇಲೆ ಭರವಸೆ ಇರಲಿಲ್ಲ. ಅದಕ್ಕಾಗಿ ಆತ ಚಿಂತಿತನಾದನು.
ಶ್ರೀಕೃಷ್ಣ ದೇವರಾಯ ಕಾಶ್ಮೀರಿ ಪಂಡಿತನನ್ನು ಸತ್ಕರಿಸಿ ಅವನೊಂದಿಗೆ ವಾದ ಮಾಡಲು ಒಂದು ದಿನವನ್ನು ನಿಗದಿಪಡಿಸಿದನು. ವಾದದ ದಿನ ಹತ್ತಿರ ಬರುತ್ತಿದ್ದಂತೆ ರಾಯನ ಆಸ್ಥಾನದ ವಿದ್ವಾಂಸರು ನಡುಗಿ ಹೋದರು. ತಾವೇನಾದರೂ ಕಾಶ್ಮೀರಿ ಪಂಡಿತನ ಎದುರು ವಾದದಲ್ಲಿ ಸೋತರೆ ಮರ್ಯಾದೆ ಹೋಗುವುದರೊಂದಿಗೆ ರಾಯನ ಕೋಪಕ್ಕೆ ಗುರಿಯಾಗಬೇಕಾದೀತು ಎಂಬುದು ವಿದ್ವಾಂಸರಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿ ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ತೆನಾಲಿ ರಾಮಕೃಷ್ಣನ ಬಳಿ ಹೋದರು. ವಿದ್ವಾಂಸರು ರಾಮಕೃಷ್ಣನ ಬಳಿ ಕಾಶಿ ಪಂಡಿತರ ಮೇಲೆ ತಮಗಿರುವ ಭಯವನ್ನು ವ್ಯಕ್ತಪಡಿಸಿದರು. ಅದಕ್ಕೆ ರಾಮಕೃಷ್ಣ ನಗುತ್ತಾ "ಆಸ್ಥಾನದ ಮರ್ಯಾದೆಯನ್ನು ಕಾಪಾಡುವ ಜವಾಬ್ದಾರಿ ನನ್ನ ಮೇಲೇಯೂ ಇದೆ. ನೀವು ನಿಶ್ಚಿಂತರಾಗಿರಿ..." ಎಂದು ಹೇಳಿದನು. ತೆನಾಲಿ ರಾಮಕೃಷ್ಣ ವಿದ್ವಾಂಸರಿಗೆ ಬಂದಿರುವ ಅಪಾಯವನ್ನು ಉಪಾಯದಿಂದ ಬಗೆಹರಿಸುವುದಾಗಿ ಭರವಸೆ ನೀಡಿ ಅವರನ್ನು ಬೀಳ್ಕೊಟನು.
ಶ್ರೀಕೃಷ್ಣ ದೇವರಾಯ ನಿಗದಿಪಡಿಸಿದ್ದ ವಾದದ ದಿನ ಬಂದೇ ಬಿಟ್ಟಿತು. ವಿದ್ವಾಂಸರೆಲ್ಲ ಮುಂದೇನಾಗುತ್ತೋ ಎಂಬ ಭಯದಲ್ಲಿ ನಡುಗುತ್ತಿದ್ದರು. ಆದರೆ ಕಾಶ್ಮೀರಿ ಪಂಡಿತ ಮಾತ್ರ ತಾನೇ ಸರ್ವಶ್ರೇಷ್ಠ, ಸರ್ವೋತ್ತಮ ,ಸರಸ್ವತಿ ಪುತ್ರ ಎಂಬಂತೆ ಬೀಗುತ್ತಿದ್ದನು. ಅಷ್ಟ ಮದದಲ್ಲಿ ವಿದ್ಯಾ ಮದವೂ ಒಂದು ಎಂಬ ಮಾತು ಅವನ ನಡವಳಿಕೆಯಿಂದ ಪದೇಪದೇ ಸಾಬಿತಾಗುತ್ತಿತ್ತು. ವಾದದ ದಿನ ಕಾಶ್ಮೀರಿ ಪಂಡಿತ ಜಗತ್ತನ್ನೇ ಗೆದ್ದಂತೆ ಬೀಗುತ್ತಾ ತನ್ನ ಶಿಷ್ಯರೊಂದಿಗೆ ಆಸ್ಥಾನಕ್ಕೆ ಪ್ರವೇಶಿಸಿದನು. ಅವನ ಅಹಂಕಾರದ ಹೆಜ್ಜೆಗಳಿಂದ ವಿದ್ವಾಂಸರ ಎದೆಯಲ್ಲಿ ಆಗಲೆ ನಡುಕ ಶುರುವಾಗಿತ್ತು. ಕಾಶ್ಮೀರಿ ಪಂಡಿತ ವಿದ್ವಾಂಸರೆಡೆಗೆ ತಾತ್ಸಾರದಿಂದ ನೋಡುತ್ತಾ ಶ್ರೀ ಕೃಷ್ಣ ದೇವರಾಯನಿಗೆ ವಂದಿಸಿ ತನ್ನ ಆಸನದಲ್ಲಿ ಕುಳಿತುಕೊಂಡನು. ಇನ್ನೇನು ವಾದ ಪ್ರಾರಂಭವಾಗಲು ಕೆಲವೇ ಕೆಲವು ಕ್ಷಣಗಳು ಬಾಕಿ ಇದ್ದವು. ಆದರೂ ತೆನಾಲಿ ರಾಮಕೃಷ್ಣ ಬರದೇ ಇರುವುದರಿಂದ ವಿದ್ವಾಂಸರಲ್ಲಿ ಮತ್ತಷ್ಟು ಭಯ ಹೆಚ್ಚಾಯಿತು. ಅಷ್ಟರಲ್ಲೇ ತೆನಾಲಿ ರಾಮಕೃಷ್ಣ ದೊಡ್ಡ ವಿದ್ವಾಂಸನಂತೆ ವೇಷಭೂಷಣವನ್ನು ಧರಿಸಿ ಬಾಡಿಗೆ ಶಿಷ್ಯಂದಿರೊಂದಿಗೆ ಒಂದು ದೊಡ್ಡ ಗ್ರಂಥವನ್ನು ಹೊತ್ತುಕೊಂಡು ಆಸ್ಥಾನಕ್ಕೆ ಬಂದನು. ರಾಮಕೃಷ್ಣನ ಈ ಗತ್ತನ್ನು ನೋಡಿ ಶ್ರೀ ಕೃಷ್ಣ ದೇವರಾಯನಿಗೆ ನಗು ತಡೆದುಕೊಳ್ಳಲಾಗದೇ ಆತ ಗಂಭೀರವಾಗಿರುವ ರೀತಿ ನಟಿಸಿದನು. ಆಸ್ಥಾನದಲ್ಲಿ ರಾಮಕೃಷ್ಣನನ್ನು ನೋಡಿ ವಿದ್ವಾಂಸರಿಗೆ ಹೋದ ಜೀವ ಬಂದಂತಾಯಿತು. ರಾಮಕೃಷ್ಣ ಕಾಶ್ಮೀರಿ ಪಂಡಿತನೆಡೆಗೆ ವಾರೆಗಣ್ಣಿನಿಂದ ನೋಡುತ್ತಾ ರಾಯನಿಗೆ ಮನಸ್ಪೂರ್ವಕವಾಗಿ ನಮಿಸಿ ತನಗೆಂದು ನಿಗದಿಪಡಿಸಿದ್ದ ಆಸನದಲ್ಲಿ ಕೂತನು.
ಕಾಶ್ಮೀರಿ ಪಂಡಿತ ತೆನಾಲಿ ರಾಮಕೃಷ್ಣನೆಡೆಗೆ ವಕ್ರ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದನು. ಅಷ್ಟರಲ್ಲಿ ಶ್ರೀಕೃಷ್ಣ ದೇವರಾಯ ವಾದ ಪ್ರಾರಂಭವಾಗಲಿ ಎಂದು ಆದೇಶಿಸಿದನು. ಮೊದಲು ರಾಮಕೃಷ್ಣ ಕಾಶ್ಮೀರಿ ಪಂಡಿತನಿಗೆ "ಯಾವ ಗ್ರಂಥದ ಕುರಿತಾಗಿ ವಾದಿಸೋಣ..?" ಎಂದು ಕೇಳಿದನು. ಆಗ ಆತ "ಮೊದಲು ನಿಮ್ಮಿಂದಲೇ ವಾದ ಪ್ರಾರಂಭವಾಗಲಿ..." ಎಂದನು. ಆಗ ರಾಮಕೃಷ್ಣ ನಸು ನಗುತ್ತಾ "ನಿಮ್ಮಂಥ ದೊಡ್ಡ ಪಂಡಿತರೊಡನೆ ವಾದಿಸಲು ದೊಡ್ಡ ಗ್ರಂಥವನ್ನೇ ತರಬೇಕಾಯಿತು" ಎಂದೆನ್ನುತ್ತಾ ಒಂದು ದೊಡ್ಡ ಗ್ರಂಥವನ್ನು ತಂದು ಅವರಿಬ್ಬರ ಮಧ್ಯೆ ಇಟ್ಟನು. ಅದನ್ನು ನೋಡಿ ಕಾಶ್ಮೀರಿ ಪಂಡಿತ ದಂಗಾಗಿ "ಇದು ಯಾವ ಗ್ರಂಥ...?" ಎಂದು ತೊದಲುತ್ತಾ ಕೇಳಿದನು. ಆಗ ರಾಮಕೃಷ್ಣ ಇದು ಮಹಾನ್ ಗ್ರಂಥ. ಇದರ ಹೆಸರು "ತಿಲಕಾಷ್ಟ ಮಹಿಷ ಬಂಧನ" ಎಂದು ಹೇಳಿದನು. ಈ ಗ್ರಂಥದ ಹೆಸರನ್ನು ಕೇಳಿ ಕಾಶ್ಮೀರಿ ಪಂಡಿತ ನಿಂತ ಜಾಗದಲ್ಲೇ ಚಳಿಯಲ್ಲಿಯೂ ಕೂಡ ಬೆವತನು. ಏಕೆಂದರೆ ಆತ ಈ ಮೊದಲು ಈ ಗ್ರಂಥದ ಹೆಸರೇ ಕೇಳಿರಲಿಲ್ಲ. ಅವನಿಗೆ ಈ ಗ್ರಂಥ ಹೊಸದೆನಿಸಿತು. ಅವನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅದಕ್ಕಾಗಿ ಆತ ಒಂದು ದಿವಸದ ಸಮಯಾವಕಾಶವನ್ನು ಕೇಳಿ ಸಭೆಯಿಂದ ಹೊರ ನಡೆದನು. ಸಪ್ಪೆ ಮೋರೆ ಹಾಕಿಕೊಂಡು ಹೊರ ಹೋಗುತ್ತಿರುವ ಕಾಶ್ಮೀರಿ ಪಂಡಿತನನ್ನು ನೋಡಿ ರಾಮಕೃಷ್ಣ ಮನದಲ್ಲೇ ನಗಲು ಪ್ರಾರಂಭಿಸಿದನು. ಶ್ರೀಕೃಷ್ಣ ದೇವರಾಯನಿಗೆ ರಾಮಕೃಷ್ಣನ ಕರಾಮತ್ತು ಅರ್ಥವಾಯಿತು. ಕಾಶ್ಮೀರಿ ಪಂಡಿತ ತಾನು ತಂಗಿದ್ದ ಪ್ರವಾಸಿ ಸ್ಥಾನಕ್ಕೆ ತಲುಪಿ 'ತಿಲಕಾಷ್ಟ ಮಹಿಷ ಬಂಧನ' ಪುಸ್ತಕವನ್ನು ಹುಡುಕತೊದಡಗಿದನು. ರಾತ್ರಿಯೆಲ್ಲಾ ಹುಡುಕಿದರೂ ಅವನಿಗೆ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥ ಎಲ್ಲಿಯೂ ಸಿಗಲಿಲ್ಲ . ಕಾಶ್ಮೀರಿ ಪಂಡಿತನಿಗೆ ಈಗ ಏನು ಮಾಡುವುದು ಎಂಬುದು ತೋಚಲಿಲ್ಲ. ಹೀಗೆ ನಾಳೆ ರಾಜ್ಯಸಭೆಗೆ ಹೋಗಿ ರಾಮಕೃಷ್ಣನೊಂದಿಗೆ ವಾದಿಸಲು ಕುಳಿತರೆ ತನ್ನ ಮಾನ ಮರ್ಯಾದೆ ಹೋಗಬಹುದೆಂದು ಆತ ಮುಂಜಾನೆಯಾಗುವ ಮೊದಲೆ ಅಲ್ಲಿಂದ ಪರಾರಿಯಾದನು.
ಮಾರನೆ ದಿನ ಶ್ರೀಕೃಷ್ಣ ದೇವರಾಯನ ಸಹಿತ ಎಲ್ಲ ಆಸ್ಥಾನಿಕರು ಕಾಶ್ಮೀರಿ ಪಂಡಿತ ಮತ್ತು ತೆನಾಲಿ ರಾಮಕೃಷ್ಣರ ವಾದವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ತೆನಾಲಿ ರಾಮಕೃಷ್ಣ ಸರಿಯಾದ ಸಮಯಕ್ಕೆ ಆಸ್ಥಾನಕ್ಕೆ ಹಾಜರಾದನು. ಆದರೆ ಕಾಶ್ಮೀರಿ ಪಂಡಿತ ಸಮಯ ಮೀರಿ ಹೋದರೂ ಆಸ್ಥಾನಕ್ಕೆ ಹಾಜರಾಗಲೇ ಇಲ್ಲ. ಏಕೆಂದರೆ ಮುಂಜಾನೆಯೇ ಆತ ಹೇಳದೆ ಕೇಳದೆ ಪರಾರಿಯಾಗಿದ್ದನು. ರಾಮಕೃಷ್ಣನ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥಕ್ಕೆ ಹೆದರಿ ಕಾಶ್ಮೀರಿ ಪಂಡಿತ ರಾತ್ರೋರಾತ್ರಿ ಹೇಳದೆ ಕೇಳದೆ ಪರಾರಿಯಾಗಿದ್ದು ಗುಪ್ತಚರರಿಂದ ಶ್ರೀ ಕೃಷ್ಣ ದೇವರಾಯನಿಗೆ ತಲುಪಿತು. ಕಾಶ್ಮೀರಿ ಪಂಡಿತ ರಾತ್ರೋರಾತ್ರಿ ರಾಮಕೃಷ್ಣನ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥಕ್ಕೆ ಹೆದರಿ ಓಡಿ ಹೋಗಿದ್ದಾನೆ ಎಂಬುದು ತಿಳಿದ ನಂತರ ಆಸ್ಥಾನಿಕರೆಲ್ಲ ಆಶ್ಚರ್ಯಕ್ಕೆ ಒಳಗಾದರು. ಎಲ್ಲರಿಗೂ ರಾಮಕೃಷ್ಣ ತಂದ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥದಲ್ಲಿ ಏನಿದೆ ಎಂಬ ಕುತೂಹಲ ಹೆಚ್ಚಾಯಿತು. ಕುತೂಹಲ ತಾಳಲಾರದೆ ಶ್ರೀಕೃಷ್ಣ ದೇವರಾಯ "ಆ ಗ್ರಂಥದಲ್ಲಿ ಅಂಥದ್ದೇನಿದೆ?" ಎಂದು ರಾಮಕೃಷ್ಣನಿಗೆ ಕೇಳಿದನು. ಆಗ ಆತ ನಗುತ್ತಾ "ಮಹಾಪ್ರಭು ಈ ಗ್ರಂಥವನ್ನು ನೀವೇ ಮೊದಲು ತೆರೆದು ಓದಬೇಕಾಗಿ ವಿನಂತಿ" ಎಂದು ಹೇಳುತ್ತಾ ಅದನ್ನ ಅವನ ಕೈಗಿಟ್ಟನು. ರಾಯ ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಅದರಲ್ಲಿ ಗ್ರಂಥವಿರಲಿಲ್ಲ. ನಾಲ್ಕಾರು ಎಳ್ಳಿನ ಕಟ್ಟಿಗೆಗಳು ದನಕ್ಕೆ ಹಗ್ಗದಿಂದ ಕಟ್ಟಲ್ಪಟ್ಟಿದ್ದವು ಅಷ್ಟೇ. ರಾಯ ಅವನಿಗೆ "ಏನಿದು...?" ಎಂದು ಕೇಳಿದನು. ಆಗ ರಾಮಕೃಷ್ಣ ನಗುತ್ತಾ "ಪ್ರಭು ಇದೇ 'ತಿಲಕಾಷ್ಟ ಮಹಿಷ ಬಂಧನ' ಮಹಾಗ್ರಂಥ" ಎಂದನು. ರಾಯನಿಗೆ ಸಹಜವಾಗಿ ಇದು ಅರ್ಥವಾಗಲಿಲ್ಲ. ಆಗ ರಾಮಕೃಷ್ಣ "ಪ್ರಭು ತಿಲಕಾಷ್ಟ ಎಂದರೆ ಎಳ್ಳಿನ ಕಟ್ಟಿಗೆಗಳು, ಮಹಿಷ ಬಂಧನ ಎಂದರೆ ದನಕ್ಕೆ ಕಟ್ಟುವ ಹಗ್ಗ, ಎರಡೂ ಸೇರಿದಾಗ 'ತಿಲಕಾಷ್ಟ ಮಹಿಷ ಬಂಧನ' ಎಂದು ಹೇಳುತ್ತಾ ಮತ್ತೆ ಜೋರಾಗಿ ನಕ್ಕನು. ಎಲ್ಲರಿಗೂ 'ತಿಲಕಾಷ್ಟ ಮಹಿಷ ಬಂಧನ' ಗ್ರಂಥದ ನಿಜವಾದ ಮಹಿಮೆ ಅರ್ಥವಾಯಿತು ಎಲ್ಲರು ಜೋರಾಗಿ ನಗಲು ಪ್ರಾರಂಭಿಸಿದರು. ಕಾಶ್ಮೀರಿ ಪಂಡಿತ ತಂದಿಟ್ಟ ಅಪಾಯದಿಂದ ಪಾರಾದೆವಲ್ಲ ಎಂದು ಆಸ್ಥಾನದ ವಿದ್ವಾಂಸರೆಲ್ಲ ನಿಟ್ಟುಸಿರು ಬಿಟ್ಟರು. ವಿಜಯನಗರದ ಮಾನ ಮರ್ಯಾದೆಯನ್ನು ಕಾಪಾಡಿದ್ದಕ್ಕಾಗಿ ತೆನಾಲಿ ರಾಮಕೃಷ್ಣನಿಗೆ ಶ್ರೀಕೃಷ್ಣ ದೇವರಾಯ ಪ್ರಶಂಸಿಸಿದನು. ಜೊತೆಗೆ ಬಹುಮಾನ ಕೊಟ್ಟು ಸತ್ಕರಿಸಿದನು. ಈ ರೀತಿ ತೆನಾಲಿ ರಾಮಕೃಷ್ಣ ತನ್ನ ಜಾಣ್ಮೆಯಿಂದ ಕಾಶ್ಮೀರಿ ಪಂಡಿತನ ಗರ್ವಭಂಗ ಮಾಡಿ ಅವನನ್ನು ಓಡಿಸಿ ವಿಜಯನಗರ ಸಾಮ್ರಾಜ್ಯದ ಘನತೆಯನ್ನು ಎತ್ತಿ ಹಿಡಿದನು... To be Continued...