ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                                 ದೇವರಿಗೂ ಹಾಗೂ ದಾನವರಿಗೂ ನಿರಂತರವಾಗಿ ಪದೇಪದೇ ಯುದ್ಧವಾಗುತ್ತಲೇ ಇತ್ತು. ದೇವರುಗಳು ರಾಕ್ಷಸರನ್ನು ಸಂಹರಿಸಿದರೂ ರಾಕ್ಷಸರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದಕ್ಕೆ ರಾಕ್ಷಸರ ಗುರು ಶುಕ್ರಾಚಾರರಿಗೆ ಗೊತ್ತಿರುವ ಮೃತ್ಯು ಸಂಜೀವಿನಿ ವಿದ್ಯೆ ಕಾರಣವಾಗಿತ್ತು. ಈ ವಿದ್ಯೆಯಿಂದ ಶುಕ್ರಾಚಾರ್ಯರು ದೇವತೆಗಳಿಂದ ಸತ್ತ ರಾಕ್ಷಸರನ್ನು ಪುನ: ಬದುಕಿಸುತ್ತಿದ್ದರು. ಸತ್ತರೂ ಮತ್ತೆ ಹುಟ್ಟಿ ಬರುವ ರಾಕ್ಷಸರು ದೇವತೆಗಳಿಗೆ ದೊಡ್ಡ ತಲೆ ನೋವಾದರು. ಏಕೆಂದರೆ ಮೃತ್ಯು ಸಂಜೀವಿನಿ ವಿದ್ಯೆ ಇಡೀ ಜಗತ್ತಿನಲ್ಲಿ ಶುಕ್ರಾಚಾರ್ಯರಿಗಷ್ಟೇ ಗೊತ್ತಿತ್ತು. ದೇವತೆಗಳ ಗುರುವಾದ ಬ್ರಹಸ್ಪತಿಗೂ ಈ ಮೃತ್ಯು ಸಂಜೀವಿನಿ ವಿದ್ಯೆಯ ಜ್ಞಾನವಿರಲಿಲ್ಲ. ದೇವತೆಗಳ ಉಳಿವಿಗಾಗಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಹೇಗಾದರೂ ಮಾಡಿ ಕಲಿಯಲೇಬೇಕಾಗಿತ್ತು. ಅದಕ್ಕಾಗಿ ಬ್ರಹಸ್ಪತಿ ತಮ್ಮ ಮಗನಾದ ಕಚನನ್ನು ಶುಕ್ರಾಚಾರ್ಯರ ಬಳಿ ಉಪಾಯದಿಂದ ಕಳುಹಿಸಿದರು. ರಾಕ್ಷಸರ ಕಣ್ತಪ್ಪಿಸಿ ಶುಕ್ರಾಚಾರ್ಯರಿಂದ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯುವುದು ಸುಲಭದ ಮಾತಾಗಿರಲಿಲ್ಲ. ಶುಕ್ರಾಚಾರ್ಯರ ಮಗಳಾದ ದೇವಯಾನಿಯ ಮನಗೆದ್ದರೇ ಮೃತ್ಯು ಸಂಜೀವಿನಿ ವಿದ್ಯೆಯನ್ನು ಯಶಸ್ವಿಯಾಗಿ ಕಲಿತು ಬರಬಹುದು ಎಂಬ ಕಿವಿಮಾತನ್ನು ಕಚನಿಗೆ ಹೇಳಿ ಬ್ರಹಸ್ಪತಿ ಅವನನ್ನು ಬೀಳ್ಕೊಟ್ಟರು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                    ತನ್ನ ತಂದೆಯ ಆಜ್ಞೆಯಂತೆ ದೇವತೆಗಳ ಉಳಿವಿಗಾಗಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯಲು ಕಚ ಶುಕ್ರಾಚಾರ್ಯರ ಬಳಿ ಬಂದನು. ಈ ಸಮಯದಲ್ಲಿ ಶುಕ್ರಾಚಾರ್ಯರು ರಾಕ್ಷಸರ ರಾಜ ಪರ್ವರಾಜನ ಸಾಮ್ರಾಜ್ಯದಲ್ಲಿದ್ದರು. ಕಚ ಶುಕ್ರಾಚಾರ್ಯರ ಮನವೊಲಿಸಿ ಅವರ ಶಿಷ್ಯನಾದನು. ಅವನ ಕಲಿಕೆ ಕುಶಾಲವಾಗಿ ಸಾಗಿತ್ತು. ಅವನು ಸುಂದರ, ಸುಶೀಲ, ಸಜ್ಜನನಾಗಿರುವುದರಿಂದ ದೇವಯಾನಿಗೆ ಅವನು ಬಹಳ ಇಷ್ಟವಾದನು. ದೇವಯಾನಿ ರಾಕ್ಷಸರ ಗುರುವಾದ ಶುಕ್ರಾಚಾರ್ಯರ ಮಗಳು. ಒಬ್ಬಳೇ ಮಗಳೆಂಬ ಕಾರಣಕ್ಕೆ ಶುಕ್ರಾಚಾರ್ಯರು ಅವಳನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು. ಹೀಗಾಗಿ ದೇವಯಾನಿ ಹುಟ್ಟಿನಿಂದಲೇ ಹಠವಾದಿವಾಗಿದ್ದಳು. ಅವಳು ತನ್ನ ಹಠದಿಂದಲೇ ಬೇಡದ ಯಡವಟ್ಟುಗಳನ್ನು ಮಾಡಿಕೊಂಡು ಕೊರಗುತ್ತಿದ್ದಳು. ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಗರ್ವವೂ ಇತ್ತು. ಅಂಥವಳು ಕಚನ ಮೇಲೆ ಮೋಹಿತಳಾದಳು. ಅವನನ್ನು ಗುಟ್ಟಾಗಿ ಪ್ರೀತಿಸಲು ಪ್ರಾರಂಭಿಸಿದಳು. ಆದರೆ ಆಕೆ ಅವಳ ಪ್ರೀತಿಯನ್ನು ತಪ್ಪಿಯೂ ಯಾವತ್ತೂ ಕಚನಿಗೆ ಹೇಳುವ ಸಾಹಸ ಮಾಡಲಿಲ್ಲ. ಕಚ ತನ್ನ ಕಾರ್ಯ ಸಾಧನೆಗಾಗಿ ದೇವಯಾನಿಯೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದನು. ಹೀಗಾಗಿ ಆಕೆ ಕಚನೂ ಸಹ ತನ್ನನ್ನು ಪ್ರೀತಿಸುತ್ತಿದ್ದಾನೆಂದು ತಪ್ಪಾಗಿ ಭಾವಿಸಿದಳು. ಆಕೆ ಕಚನ ಕನಸುಗಳಲ್ಲಿ ಕಳೆದೋದರೆ ಆತ ತನ್ನ ಕಲಿಕೆಯಲ್ಲಿ ಮಗ್ನನಾಗಿರುದ್ದನು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                   ದೇವತೆಗಳ ಗುರು ಬ್ರಹಸ್ಪತಿಯ ಮಗನಾದ ಕಚನು ಶುಕ್ರಾಚಾರ್ಯರಿಂದ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯುತ್ತಿದ್ದಾನೆ ಎಂಬುದು ರಾಕ್ಷಸರಿಗೆ ಗೊತ್ತಾಯಿತು. ಕೋಪಗೊಂಡ ರಾಕ್ಷಸರು ಕಚನನ್ನು ಕೊಲ್ಲಲು ಮುಂದಾದರು. ಆದರೆ ಶುಕ್ರಾಚಾರ್ಯರ ಕೋಪಕ್ಕೆ ಹೆದರಿ ಹಿಂದೆ ಸರಿದರು. ಕೆಲ ದಿನಗಳ ನಂತರ ರಾಕ್ಷಸರು ರಹಸ್ಯವಾಗಿ ಕಚನನ್ನು ಕೊಂದರು. ತನ್ನ ಗುಪ್ತ  ಪ್ರಿಯಕರ ಕಚನ ಸಾವನ್ನು ದೇವಯಾನಿಯಿಂದ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆಕೆ ತನ್ನ ತಂದೆ ಶುಕ್ರಾಚಾರ್ಯರನ್ನು ಕಾಡಿಬೇಡಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಪ್ರಯೋಗಿಸಿ ಕಚನನ್ನು ಬದುಕಿಸಿದಳು. ಆದರೆ ಕೆಲ ದಿನಗಳು ಕಳೆದ ನಂತರ ಮತ್ತೆ ರಾಕ್ಷಸರು ಕಚನನ್ನು ಕೊಂದರು. ಮುದ್ದಿನ ಮಗಳ ಮಮಕಾರದಿಂದ ಶುಕ್ರಾಚಾರ್ಯರು ಮೃತ್ಯು ಸಂಜೀವಿನಿ ವಿದ್ಯೆಯಿಂದ ಮತ್ತೆ ಕಚನನ್ನು ಬದುಕಿಸಿದರು. ತಮ್ಮ ಶತ್ರು ಪದೇಪದೇ ಬದುಕಿ ಬರುತ್ತಿರುವುದನ್ನು ಕಂಡು ರಾಕ್ಷಸರು ಕೆರಳಿ ಕೆಂಡಾಮಂಡಲವಾದರು. ಅದೇ ಕೋಪದಲ್ಲಿ ಕಚನನ್ನು ಶಾಶ್ವತವಾಗಿ ಕೊಲ್ಲಲು ಯೋಜನೆ ರೂಪಿಸಿದರು. ಮೂರನೇ ಬಾರಿ ರಾಕ್ಷಸರು ಕಚನನ್ನು ಕೊಂದರು. ನಂತರ ಅವನ ಶವವನ್ನು ಸುಟ್ಟರು. ಅವನ ಅಂತ್ಯಕ್ರಿಯೆಯ ಬೂದಿಯನ್ನು ಮದ್ಯದಲ್ಲಿ ಬೆರೆಸಿ ತಮ್ಮ ಗುರು ಶುಕ್ರಾಚಾರ್ಯರಿಗೆ ಕೊಟ್ಟರು. ಇದರ ಅರಿವಿಲ್ಲದ ಶುಕ್ರಾಚಾರ್ಯರು ಕಚನ ದಹನವಿರುವ ಮದ್ಯವನ್ನು ಕುಡಿದರು. ತಮ್ಮ ಶತ್ರು ಶಾಶ್ವತವಾಗಿ ಸತ್ತನೆಂಬ ಖುಷಿಯಲ್ಲಿ ರಾಕ್ಷಸರೆಲ್ಲ ಸಂಭ್ರಮಾಚರಿಸಲು ತೆರಳಿದರು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                   ತಮ್ಮ ಶತ್ರು ಕಚ ಶಾಶ್ವತವಾಗಿ ಸತ್ತ ಖುಷಿಯಲ್ಲಿ ರಾಕ್ಷಸರೆಲ್ಲ ಕುಡಿದು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ದೇವಯಾನಿ ತನ್ನ ಪ್ರಿಯಕರ ಕಾಣದಿರುವುದಕ್ಕಾಗಿ ಚಿಂಚಿತಳಾದಳು. ಆಕೆ ಎಲ್ಲೆಡೆಗೆ ಕಚನನ್ನು ಹುಡುಕಿ ನಿರಾಶಳಾದಳು. ಕೊನೆಗೆ ಆಕೆ ತನ್ನ ತಂದೆಯ ಬಳಿ ಹೋಗಿ ಕಚನನ್ನು ಹುಡುಕಿ ಕೊಡುವಂತೆ ಬೇಡಿಕೆಯಿಟ್ಟಳು. ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಕಚನನ್ನು ಹುಡುಕಿದಾಗ ಆತ ಸತ್ತು ತಮ್ಮ ಹೊಟ್ಟೆ ಸೇರಿರುವ ವಿಷಯ ಗೊತ್ತಾಯಿತು. ಕಚನ ಭಯಾನಕ ಸಾವಿನ ಸುದ್ದಿ ಕೇಳಿ ದೇವಯಾನಿ ಬೆಚ್ಚಿ ಬಿದ್ದಳು. ಹೇಗಾದರೂ ಸರಿ ಕಚನನ್ನು ಬದುಕಿಸುವಂತೆ ದೇವಯಾನಿ ಹಠವಿಡಿದು ಕುಂತಳು. ತಮ್ಮ ಮಗಳ ಹಠದ ಬಗ್ಗೆ ಚೆನ್ನಾಗಿ ಅರಿತಿದ್ದ ಶುಕ್ರಾಚಾರ್ಯರು ಬೇರೆ ವಿಧಿಯಿಲ್ಲದೆ ಕಚನ ಆತ್ಮಕ್ಕೆ ಮೃತ್ಯು ಸಂಜೀವಿನಿ ವಿದ್ಯೆಯನ್ನು ಬೋಧಿಸಿದರು. ಕಚ ಶುಕ್ರಾಚಾರ್ಯರ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದನು. ಮತ್ತೆ ಬದುಕಿ ಬಂದ ಕಚನನ್ನು ಕಂಡು ದೇವಯಾನಿ ಆನಂದ ಭಾಷ್ಪಗಳನ್ನು ಸುರಿಸುವ ಮುಂಚೆಯೇ ಶುಕ್ರಾಚಾರ್ಯರು ಪ್ರಾಣ ಬಿಟ್ಟರು. ನಂತರ ಕಚ ತಾನು ಕಲಿತ ಮೃತ್ಯು ಸಂಜೀವಿನಿ ಮಂತ್ರದಿಂದ ಶುಕ್ರಾಚಾರ್ಯರನ್ನು ಬದುಕಿದನು. ತನ್ನ ತಂದೆ ಮತ್ತು ಪ್ರಿಯಕರರಿಬ್ಬರು ಬದುಕಿರುವುದನ್ನು ಕಂಡ ಖುಷಿಯಲ್ಲಿ ದೇವಯಾನಿ ತನ್ನ ಗುಪ್ತ ಪ್ರೀತಿಯನ್ನು ಬಹಿರಂಗಪಡಿಸಿದಳು. ಆದರೆ ಕಚ ಅವಳ ಪ್ರೀತಿಯನ್ನು ನಿರಾಕರಿಸಿದನು. ಏಕೆಂದರೆ ಆತ ಅವಳನ್ನು ಪ್ರೀತಿಸುತ್ತಿರಲಿಲ್ಲ. ಆತ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವಯಾನಿಯೊಡನೆ ಆತ್ಮೀಯವಾಗಿದ್ದನು ಅಷ್ಟೇ. ಹೀಗಾಗಿ ಆತ "ನಾನು ನನ್ನ ಗುರುಗಳಾದ ಶುಕ್ರಾಚಾರ್ಯರನ್ನು ಆದರಿಸುತ್ತೇನೆ. ಹೀಗಾಗಿ ನಾನು ಗುರುಪುತ್ರಿಯನ್ನು ವರಿಸಲಾರೆ. ಅಲ್ಲದೆ ನಾನು ಈ ಕ್ಷಣವಷ್ಟೇ ಅವರ ಹೊಟ್ಟೆಯಿಂದ ಮರುಜನ್ಮ ಪಡೆದಿರುವೆ. ಅವರು ನನ್ನ ತಂದೆ ಸಮಾನವಾಗುತ್ತಾರೆ. ನೀನು ನನಗೆ ಸೋದರಿಯಾಗುವೆ..." ಎಂದೇಳಿ ಕಚ ನಯವಾಗಿ ದೇವಯಾನಿಯನ್ನು ತಿರಸ್ಕರಿಸಿದನು. ತನ್ನ ಪ್ರೀತಿ ತನಗೆ ಸಿಗದೇ ಹೋಯಿತಲ್ಲ ಎಂಬ ಬೇಜಾರಲ್ಲಿ ದೇವಯಾನಿ ಕಚನಿಗೆ "ನೀನು ಕಲಿತ ಮೃತ್ಯು ಸಂಜೀವಿನಿ ವಿದ್ಯೆ ನಿನ್ನ ಪ್ರಯೋಜನಕ್ಕೆ ಬಾರದಿರಲಿ..." ಎಂಬ ಶಾಪವಿಟ್ಟಳು. ಅತ್ತ ಕಡೆ ಕಚನು ಸಹ "ನಿನ್ನಂಥ ಹಠಮಾರಿ ಹೆಣ್ಣಿಗೆ ಯಾವುದೇ ಬ್ರಾಹ್ಮಣ ಹುಡುಗ ಸಿಗದಿರಲಿ. ನಿನ್ನನ್ನು ಕೈಹಿಡಿಯುವವ ಚಾರಿತ್ರ್ಯಹೀನನಾಗಿರಲಿ..." ಎಂದು ಶಾಪ ಹಾಕಿ ದೇವಲೋಕಕ್ಕೆ ಹೊರಟು ಹೋದನು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                   ದೇವಲೋಕಕ್ಕೆ ಹೋದ ನಂತರ ಕಚ ನಡೆದ ಸಂಗತಿಗಳನ್ನೆಲ್ಲ ವಿವರಿಸಿ ತನ್ನ ತಂದೆ ಬ್ರಹಸ್ಪತಿಗೆ ಮೃತ್ಯು ಸಂಜೀವಿನಿಯನ್ನು ಬೋಧಿಸಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದನು. ಆದರೆ ಇತ್ತ ಕಡೆ ದೇವಯಾನಿ ಕಚನ ಪ್ರೀತಿ ತನಗೆ ಸಿಗಲಿಲ್ಲವೆಂಬ ಕೊರಗಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅನ್ನ ಆಹಾರವನ್ನು ತ್ಯಜಿಸಿದಳು. ಕೆಲ ದಿನಗಳು ಕಳೆದ ನಂತರ ದೇವಯಾನಿ ಕಚನನ್ನು ಮರೆತಳು. ನಂತರ ಅವಳು ಪರ್ವರಾಜನ ಮಗಳಾದ ಶರ್ಮಿಷ್ಟೆಯ ಆಪ್ತ ಸಖಿಯಾದಳು. ಅಂತಸ್ತಿನ ಅಡ್ಡಗೋಡೆಯಿಲ್ಲದೆ ದೇವಯಾನಿ ಹಾಗೂ ಶರ್ಮಿಷ್ಟೆ ಇಬ್ಬರು ಆತ್ಮೀಯ ಗೆಳತಿಯರಾದರು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                       ಒಂದಿನ ದೇವಯಾನಿ ಶರ್ಮಿಷ್ಟೆಯ ಕೋರಿಕೆಗೆ ಮೇರೆಗೆ ವನ ವಿಹಾರಕ್ಕೆ ಹೋದಳು. ನಾಲ್ಕಾರು ಆಪ್ತ ಸೇವಕಿಯರೊಂದಿಗೆ ಶರ್ಮಿಷ್ಟೆ ಮತ್ತು ದೇವಯಾನಿ ಕಾಡಿನಲ್ಲಿ ಮೋಜು ಮಾಡುತ್ತಾ ಜೋರಾಗಿ ಮಾತನಾಡುತ್ತಾ ಮುನ್ನಡೆದರು. ಅವರ ಕಣ್ಣಿಗೆ ಒಂದು ಸುಂದರವಾದ ಕೊಳ ಕಂಡಿತು. ಆಗ ಅವರೆಲ್ಲರು ಆ ಕೊಳದಲ್ಲಿ ಜಲಕ್ರೀಡೆಗಳನ್ನು ಆಡಲು ನಿರ್ಧರಿಸಿ ಕೊಳದಲ್ಲಿ ಇಳಿದರು. ಶರ್ಮಿಷ್ಟೆ ಹಾಗೂ ದೇವಯಾನಿ ಕೊಳದ ನೀರನ್ನು ಪರಸ್ಪರರ ಮೇಲೆ ಎರಚಿ ಜಲಕ್ರೀಡೆಗಳನ್ನು ಆಡುತ್ತಿದ್ದರು. ಆದರೆ ಅಚಾನಾಕಾಗಿ ಒಂದು ಸುಂಟರಗಾಳಿ ಅಲ್ಲಿಂದ ಸುಳಿದು ಹೋಯಿತು. ಅವರೆಲ್ಲರು ಹೆದರಿ ಕೊಳದಿಂದ ಆಚೆ ಬಂದು ತಮ್ಮತಮ್ಮ ಬಟ್ಟೆಗಳನ್ನು ಧರಿಸಲು ಆತುರಪಟ್ಟರು. ಗಾಳಿಯ ರಭಸಕ್ಕೆ ಎಲ್ಲರ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವಸರದಲ್ಲಿ ಶರ್ಮಿಷ್ಟೆ ಅರಿವಿಲ್ಲದೆ ದೇವಯಾನಿಯ ಬಟ್ಟೆಗಳನ್ನು ಧರಿಸಿದ್ದಳು. ಇಷ್ಟಕ್ಕೆ ದೇವಯಾನಿ ಶರ್ಮಿಷ್ಟೆಯೊಂದಿಗೆ ಜಗಳಕ್ಕಿಳಿದಳು. "ನೀನು ರಾಜಪುತ್ರಿಯಾಗಿರಬಹುದು. ಆದರೆ ಗುರುಪುತ್ರಿಯ ಬಟ್ಟೆಗಳನ್ನು ಮುಟ್ಟುವ ಯೋಗ್ಯತೆ ನಿನಗಿಲ್ಲವೆಂದು" ದೇವಯಾನಿ ಶರ್ಮಿಷ್ಟೆಯನ್ನು ಜರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಶರ್ಮಿಷ್ಟೆ "ನೀನು ಮತ್ತು ನಿನ್ನ ತಂದೆಯೆಲ್ಲರು ನನ್ನ ತಂದೆಯ ಸೇವಕರು..." ಎಂದು  ದೇವಯಾನಿಯನ್ನು ಹೀಯಾಳಿಸಿದಳು. ಹೀಗೆ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಕೋಪದಲ್ಲಿ ಶರ್ಮಿಷ್ಟೆ ದೇವಯಾನಿಯನ್ನು ಅಲ್ಲಿದ್ದ ಹಾಳು ಬಾವಿಗೆ ತಳ್ಳಿ ತನ್ನ ಸೇವಕಿಯರೊಡನೆ ಅರಮನೆಗೆ ತೆರಳಿದಳು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

        ಒಂದು ಸಣ್ಣ ವಿಷಯಕ್ಕೆ ದೊಡ್ಡ ಜಗಳ ಮಾಡಿಕೊಂಡು ದೇವಯಾನಿ ನೀರಿಲ್ಲದ ಹಾಳು ಬಾವಿಗೆ ಬಿದ್ದು ಒದ್ದಾಡಲು ಪ್ರಾರಂಭಿಸಿದಳು. ತನ್ನೆಲ್ಲ ಶಕ್ತಿ ಬಳಸಿ "ಕಾಪಾಡಿ ಕಾಪಾಡಿ..." ಎಂದು ಕೂಗಲು ಪ್ರಾರಂಭಿಸಿದಳು. ಅವಳು ಕೂಗು ಅಲ್ಲಿಗೆ ಬೇಟೆಯಾಡಲು ಬಂದಿದ್ದ ಯಯಾತಿಗೆ ಕೇಳಿಸಿತು. ಯಯಾತಿ ಹಸ್ತಿನಾಪುರದ ರಾಜ ನಹುಷನ ಮಗನಾಗಿದ್ದನು. ಆತ ಶಸ್ತ್ರ ಹಾಗೂ ಶಾಸ್ತ್ರಗಳೆರಡನ್ನು ಕರಗತ ಮಾಡಿಕೊಂಡು ರಾಜ್ಯಭಾರದ ಹೊಣೆಯನ್ನು ಹೊರಲು ಸಿದ್ಧನಾಗಿದ್ದನು. ಅದಕ್ಕಿನ್ನೂ ಸ್ವಲ್ಪ ಸಮಯವಿರುವುದರಿಂದ ದಿನಾಲು ಬೇಟೆಯಾಡಲು ಹೋಗುತ್ತಿದ್ದನು. ಇವತ್ತು ಅದೇ ರೀತಿ ಬೇಟೆಯಾಡಲು ಬಂದು ಬಾಯಾರಿಕೆಯಿಂದ ಬಳಲುತ್ತಿದ್ದನು. ಅಷ್ಟರಲ್ಲಿ ಅವನಿಗೆ ದೇವಯಾನಿಯ ಕೂಗು ಕೇಳಿಸಿತು. ಆತ ಓಡೋಡಿ ಬಂದು ಆ ಹಾಳು ಬಾವಿಯಲ್ಲಿ ಇಣುಕಿದನು. ವೀವಸ್ತ್ರಳಾಗಿರುವ ಸುಂದರಿಯನ್ನು ಕಂಡು ಬೆರಗಾದನು. ಆದರೆ ಕರ್ತವ್ಯ ಪ್ರಜ್ಞೆಯರಿತ ಯಯಾತಿ ದೇವಯಾನಿಯನ್ನು ಮೇಲೆತ್ತಿ ತನ್ನ ರಾಜ್ಯಕ್ಕೆ ಮರಳಿದನು. ಆದರೆ ದೇವಯಾನಿ ಆಶ್ರಮಕ್ಕೆ ಹಿಂತುರುಗದೇ ಶರ್ಮಿಷ್ಟೆಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹಠವಿಡಿದು ಅಲ್ಲೇ ಕಾಡಲ್ಲೇ ಕುಳಿತಳು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

              ಸಂಜೆಯ ಸಮಯವಾದರೂ ತಮ್ಮ ಮಗಳು ಮರಳಿ ಬರದಿರುವುದರಿಂದ ಶುಕ್ರಾಚಾರ್ಯರು ದೇವಯಾನಿಯನ್ನು ಹುಡುಕಿಕೊಂಡು ಕಾಡಿಗೆ ತೆರಳಿದರು. ದೇವಯಾನಿ ಮೊಸಳೆ ಕಣ್ಣೀರನ್ನು ಸುರಿಸುತ್ತಾ ಕಾಡಲ್ಲೇ ಕುಳಿತ್ತಿದ್ದಳು. ಮುದ್ದಿನ ಮಗಳ ಕಣ್ಣೀರಿಗೆ ಶುಕ್ರಾಚಾರ್ಯರು ಕರಗಿ ನೀರಾದರು. ಆಗ ದೇವಯಾನಿ ತಾನು ಮಾಡಿದ ತಪ್ಪನ್ನು ಬಚ್ಚಿಟ್ಟು ಶರ್ಮಿಷ್ಟೆಯ ಬಗ್ಗೆ ದೂರಿತ್ತಳು. ಶರ್ಮಿಷ್ಟೆ ಬಂದು ಕ್ಷಮೆ ಕೇಳುವವರೆಗೆ ನಾನು ಆಶ್ರಮಕ್ಕೆ ಬರವುದಿಲ್ಲವೆಂದು ಹಠವಿಡಿದು ಕುಂತಳು. ಮಗಳ ಹಠವನ್ನರಿತ ಶುಕ್ರಾಚಾರ್ಯರು ನೇರವಾಗಿ ಅರಮನೆಗೆ ತೆರಳಿ ಪರ್ವರಾಜನಿಗೆ ಶರ್ಮಿಷ್ಟೆಯ ಅಪರಾಧದ ಬಗ್ಗೆ ತಿಳಿಸಿದರು. ಆಕೆ ಬಂದು ಕ್ಷಮೆ ಕೇಳದಿದ್ದರೆ "ನಾನು ಈ ರಾಜ್ಯವನ್ನು ತೋರೆಯುತ್ತೇನೆ..." ಎಂದು ಖಡಾಖಂಡಿತವಾಗಿ ಹೇಳಿದರು. ಗುರುಗಳ ಆಜ್ಞೆಯಂತೆ ಪರ್ವರಾಜ ಶರ್ಮಿಷ್ಟೆಯೊಂದಿಗೆ ಕಾಡಿಗೆ ತೆರಳಿ ದೇವಯಾನಿಯ ಕ್ಷಮೆ ಕೇಳಿದನು. ಆದರೆ ಬರೀ ಅಷ್ಟಕ್ಕೆ  ದೇವಯಾನಿಯ ದುಷ್ಟ ಮನ ಕರಗಲಿಲ್ಲ. "ಶರ್ಮಿಷ್ಟೆ ಜೀವನ ಪರ್ಯಂತ ನನ್ನ ದಾಸಿಯಾಗಲು ಸಿದ್ಧಳಾದರೆ ಮಾತ್ರ ನಾನು ಮರಳಿ ಆಶ್ರಮಕ್ಕೆ ಕಾಲಿಡುವೆ..." ಎಂದು ಹೇಳಿದಳು. ಅವಳ ಬೇಡಿಕೆಯನ್ನು ಕೇಳಿ ಪರ್ವರಾಜ ಕುಸಿದು ಬಿದ್ದನು. ತನ್ನ ತಂದೆಯ ಸಾಮ್ರಾಜ್ಯದ ಉಳಿವಿಗೆ ಶುಕ್ರಾಚಾರ್ಯರ ಸಹಾಯ ಬೇಕೇ ಬೇಕು ಎಂಬುದನ್ನರಿತ ಶರ್ಮಿಷ್ಟೆ ದೇವಯಾನಿಯ ದಾಸಿಯಾಗಲು ಒಪ್ಪಿದಳು. ಆಗ ದೇವಯಾನಿ ವಿಕೃತವಾಗಿ ನಗುತ್ತಾ ಆಶ್ರಮಕ್ಕೆ ಮರಳಿದಳು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

           ಮರುದಿನ ಶರ್ಮಿಷ್ಟೆ ತನ್ನ ಸಾವಿರ ಸೇವಕಿಯರೊಂದಿಗೆ ದೇವಯಾನಿಯ ದಾಸಿಯಾದಳು. ದುಷ್ಟ ದೇವಯಾನಿ ಗೆಳತಿಯೆಂಬುದನ್ನು ನೋಡದೆ ರಾಜಪುತ್ರಿ ಶರ್ಮಿಷ್ಟೆಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಳು. ಆದಿನ ತನ್ನನ್ನು ಹಾಳು ಬಾವಿಯಿಂದ ಮೇಲೆತ್ತಿದ್ದ ರಾಜಕುಮಾರನ ಮೇಲೆ ದೇವಯಾನಿ ಮೋಹಿತಳಾಗಿದ್ದಳು. ಆಕೆ ಅವನ ನೆನಪುಗಳಲ್ಲಿ ಪದೇಪದೇ ಕಳೆದೋಗುತ್ತಿದ್ದಳು. ಯಯಾತಿ ಮತ್ತೆ ಆ ಕಾಡಿನ ಕೊಳಕ್ಕೆ ಬರಬಹುದು ಎಂಬ ನಂಬಿಕೆಯ ಮೇಲೆ ದೇವಯಾನಿ ಶರ್ಮಿಷ್ಟೆ ಸೇರಿ ಸಾವಿರ ಸೇವಕಿಯರೊಡನೆ ಕಾಡಿಗೆ ತೆರಳಿದಳು. ಅಲ್ಲಿದ್ದ ಉದ್ಯಾನವನದಲ್ಲಿ ರಾಣಿಯಂತೆ ಕುಳಿತು ತನ್ನ ದುರಹಂಕಾರವನ್ನು ಪ್ರದರ್ಶಿಸುತ್ತಿದ್ದಳು. ಆಕೆ ಈಗಲೂ ಸಹ ಶರ್ಮಿಷ್ಟೆಯನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ದೇವಯಾನಿ ಎಂದುಕೊಂಡಂತೆ ಯಯಾತಿ ಅಲ್ಲಿಗೆ ಬಂದನು. ಏಕೆಂದರೆ ದೇವಯಾನಿಯನ್ನು ಆದಿನ ವಸ್ತ್ರಹೀನವಾಗಿ ಕಂಡಾಗಿನಿಂದ ಅವನ ನಿದ್ರೆ ಹಾರಿ ಹೋಗಿತ್ತು. ಅವನು ಸಹ ಅವಳ ಮೇಲೆ ಮೋಹಿತನಾಗಿದ್ದನು. ರಾಜಾ ಯಯಾತಿ ದೇವಯಾನಿಯ ಬಗ್ಗೆ ತಿಳಿದುಕೊಂಡು ಅವಳನ್ನು ಮದುವೆಯಾಗುವ ಮನದಿಂಗಿತವನ್ನು ವ್ಯಕ್ತಪಡಿಸಿದನು. ಶುಕ್ರಾಚಾರ್ಯರ ಬಳಿ ಈ ಪ್ರೇಮ ಸಮಾಚಾರ ತಲುಪಿದಾಗ ಅವರು ಕಚನ ಶಾಪದಿಂದಾಗಿ ತಮ್ಮ ಮಗಳು ಬ್ರಾಹ್ಮಣನ ಬದಲಾಗಿ ಕ್ಷತ್ರಿಯನ  ಕೈಹಿಡಿಯುತ್ತಿರುವಳೆಂದು ಸಮಾಧಾನ ಮಾಡಿಕೊಂಡು ತಾವೇ ಮುಂದೆ ನಿಂತು ಮುದ್ದಿನ ಮಗಳು ದೇವಯಾನಿಯ ಮದುವೆಯನ್ನು ನೆರವೇರಿಸಿದರು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

               ದೇವಯಾನಿ ಯಯಾತಿಯೊಡನೆ ಹಸ್ತಿನಾಪುರಕ್ಕೆ ಬಂದು ಮಹಾರಾಣಿಯಾಗಿ ಮೆರೆದಳು. ಆದರೆ ಅವಳಂಥ ದುಷ್ಟಳೊಡನೆ ಸ್ನೇಹ ಬೆಳೆಸಿದ ತಪ್ಪಿಗಾಗಿ ಯುವರಾಣಿಯಾಗಿದ್ದ ಶರ್ಮಿಷ್ಟೆ ದಾಸಿಯಾಗಿ ಸವೆದಳು. ಯಯಾತಿ ಬಹಳಷ್ಟು ರಸಿಕ ರಾಜನಾಗಿದ್ದನು. ಆತ ಸದಾಕಾಲ ಚಿರಯೌವ್ವನದಲ್ಲೇ ಇರಬೇಕೆಂದು ಬಯಸುತ್ತಿದ್ದನು. ಸರ್ವಸುಖಗಳನ್ನು ಸವಿಯಲು ಸಾಯುತ್ತಿದ್ದನು. ಸದಾಕಾಲ ಸ್ತ್ರೀಯರನ್ನು ಸುಖಿಸಲು ಹಂಬಲಿಸುತ್ತಿದ್ದನು. ಕಚನ ಶಾಪದಂತೆ ದೇವಯಾನಿ ಚಾರಿತ್ರ್ಯಹೀನ, ಸ್ತ್ರೀಲಂಪಟ ಯಯಾತಿಯನ್ನು ಮದುವೆಯಾಗಿ ಶಾಪವನ್ನು ಮೈಮೇಲೆ ಎಳೆದುಕೊಂಡಳು. ರಸಿಕ ರಾಜ ಯಯಾತಿ ಸೌಂದರ್ಯವತಿಯಾದ ದೇವಯಾನಿಯನ್ನು ಮನಸೋಯಿಚ್ಛೆ ಅನುಭವಿಸಿದನು. ಆದರೆ ದೇವಯಾನಿಯಿಂದ ಅವನ ದೇಹದ ಹಸಿವು ತಣಿಯಲಿಲ್ಲ. ಅದಕ್ಕಾಗಿ ಆತ ದೇವಯಾನಿಯ ದಾಸಿಯರ ಮೇಲೆ ಕಣ್ಣಾಕಲು ಪ್ರಾರಂಭಿಸಿದನು. ಅವರಲ್ಲಿ ದೇವಯಾನಿಗಿಂತಲೂ ಸುಂದರವಾಗಿದ್ದ ಶರ್ಮಿಷ್ಟೆ ಸಹಜವಾಗಿ ಯಯಾತಿಗೆ ಇಷ್ಟವಾದಳು. ತನ್ನ ಪತ್ನಿಯ ದಾಸಿ ತನಗೂ ದಾಸಿಯೆಂಬ ದಬ್ಬಾಳಿಕೆಯ ಮೇಲೆ ಆತ ಶರ್ಮಿಷ್ಟೆಯನ್ನು ಗುಟ್ಟಾಗಿ ಸಂಭೋಗಿಸಿ ನಂತರ ಗುಟ್ಟಾಗಿ ಮದುವೆಯಾದನು. ದೇವಯಾನಿಯನ್ನು ಸಾಕಾಗುವಷ್ಟು ಸುಖಿಸಿದರೂ ಸಿಗದ ಸುಖ ಯಯಾತಿಗೆ ಶರ್ಮಿಷ್ಟೆಯಿಂದ ಸಿಕ್ಕಿತು. ಅದಕ್ಕಾಗಿ ಆತ ಸದಾ ಅವಳಿಗೆ ಅಂಟಿಕೊಂಡಿರಲು ಪ್ರಾರಂಭಿಸಿದನು. ಹಗಲು ರಾತ್ರಿಯೆನ್ನದೆ ಸದಾ ಶರ್ಮಿಷ್ಟೆಯ ಸೆರಗು ಸೋಕಿ ಯಯಾತಿ ದೇವಯಾನಿಯನ್ನು ಕಡೆಗಣಿಸಿದನು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                    ಯಯಾತಿ ಹಾಗೂ ಶರ್ಮಿಷ್ಟೆ ಸಂತೋಷವಾಗಿರುವುದನ್ನು ದೇವಯಾನಿಗೆ ಸಹಿಸಲಾಗಲಿಲ್ಲ. ಅದಕ್ಕಾಗಿ ಆಕೆ ತನ್ನ ತಂದೆ ಶುಕ್ರಾಚಾರ್ಯರ ಬಳಿ ಹೋಗಿ ತನ್ನ ಗಂಡ ಯಯಾತಿ ತನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರಿತ್ತಳು. ತಮ್ಮ ಮುದ್ದಿನ ಮಗಳಿಗೆ ಅನ್ಯಾಯವಾಯಿತಲ್ಲ ಎಂಬ ಕೋಪದಲ್ಲಿ ಶುಕ್ರಾಚಾರ್ಯರು ಯಯಾತಿಗೆ "ಸ್ತ್ರೀ ಲಂಪಟನಾದ ನೀನು ಈಗಲೇ ವೃದ್ಧನಾಗು..." ಎಂದು ಶಾಪವಿತ್ತರು. ಶುಕ್ರಾಚಾರ್ಯರ ಶಾಪದಿಂದ ಯಯಾತಿ ನಡು ಯೌವ್ವನದಲ್ಲಿಯೇ ವೃದ್ಧನಾದನು. ವೃದ್ಧನಾದ ಯಯಾತಿಯನ್ನು ದೇವಯಾನಿ ಕಡೆಗಣಿಸಿದಳು. ಆದರೆ ಶರ್ಮಿಷ್ಟೆ ಅವನನ್ನು ಅತ್ಯಂತ ಆದರದಿಂದ ನೋಡಿಕೊಳ್ಳಲು ಪ್ರಾರಂಭಿಸಿದಳು. ಸಣ್ಣ ವಿಷಯಗಳಿಗೆಲ್ಲ ಕೋಪ ಮಾಡಿಕೊಂಡು ರಾದ್ಧಾಂತ ಸೃಷ್ಟಿಸುವುದು ದೇವಯಾನಿಯ ಹುಟ್ಟುಗುಣವಾಗಿತ್ತು. ಯಯಾತಿ ವೃದ್ಧನಾಗಿದ್ದರೂ ಶರ್ಮಿಷ್ಟೆ ಅವನಿಗೆ ಹತ್ತಿರವಾಗಿರಿವುದನ್ನು ದೇವಯಾನಿಯಿಂದ ನೋಡಲಾಗಲಿಲ್ಲ. ಅಲ್ಲದೆ ನಾನು ಯಯಾತಿಗೆ ಯೌವ್ವನವನ್ನು ಕರುಣಿಸಿದರೆ ಆತ ಶರ್ಮಿಷ್ಟೆಯನ್ನು ಬಿಟ್ಟು  ಮತ್ತೆ ತನ್ನ ಬಳಿ ಬರಬಹುದು ಎಂಬಾಸೆ ದೇವಯಾನಿಯ ಮನದಲ್ಲಿ ಮೊಳಕೆ ಒಡೆಯಿತು. ಅದಕ್ಕಾಗಿ ಆಕೆ ಮತ್ತೆ ತನ್ನ ತಂದೆ ಶುಕ್ರಾಚಾರ್ಯರ ಬಳಿ ತೆರಳಿ ತನ್ನ ಗಂಡ ಯಯಾತಿಯ ಯೌವ್ವನ ಮರಳಿ ಬರಲೆಂದು ಪ್ರಾರ್ಥಿಸಿದಳು. ಆದರೆ ಅದಷ್ಟು ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಶುಕ್ರಾಚಾರ್ಯರು "ಯಯಾತಿಯ ಮಕ್ಕಳಲ್ಲಿ ಯಾರಾದರೂ ಅವನ ವೃದ್ಧಾಪ್ಯವನ್ನು ಸ್ವೀಕರಿಸಿದರೆ ಅವನಿಗೆ ನಾನು ಯೌವ್ವನವನ್ನು ಮರಳಿಸಬಹುದು..." ಎಂದೇಳಿದರು. ದೇವಯಾನಿ ಈ ವಿಷಯವನ್ನು ಯಯಾತಿಗೆ ತಿಳಿಸಿದಳು. ಖುಷಿಯಿಂದ ಯಯಾತಿ ತನ್ನೆಲ್ಲ ಮಕ್ಕಳಿಗೆ ತನ್ನ ವೃದ್ಧಾಪ್ಯವನ್ನು ಸ್ವೀಕರಿಸುವಂತೆ ಬೇಡಿಕೊಂಡರು. ಅವನ ಹಿರಿಯ ಮಕ್ಕಳೆಲ್ಲರು ಅವನ ಕೋರಿಕೆಯನ್ನು ತಳ್ಳಿ ಹಾಕಿದರು. ಆದರೆ ಅವನ ಕಿರಿಯ ಮಗ ಪುರು ಮನ್ನಿಸಿದನು. ಪುರು ತನ್ನ ಯೌವ್ವನವನ್ನು ತಂದೆ ಯಯಾತಿಗೆ ಕೊಟ್ಟು ತಾನು ವೃದ್ಧಾಪ್ಯವನ್ನು ಸ್ವೀಕರಿಸಿದನು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

                   ಮರಳಿ ಯೌವ್ವನ ಸಿಕ್ಕ ಖುಷಿಯಲ್ಲಿ ಯಯಾತಿ ಸುಖ ಸಾಗರದಲ್ಲಿ ಮುಳುಗಿದನು. ಮೊದಲಿನಿಂದಲೂ ಆತ ಯೌವ್ವನವನ್ನು ಪ್ರೀತಿಸುತ್ತಿದ್ದನು. ಸ್ತ್ರೀ ಸುಖಕ್ಕಾಗಿ ಹಂಬಲಿಸುತ್ತಿದ್ದನು. ಈಗ ಯೌವ್ವನ ಮರಳಿ ಬಂದಿರುವುದರಿಂದ ಯಯಾತಿ ಮತ್ತೆ ಸ್ತ್ರೀಯರನ್ನು ಸುಖಿಸಿತೊಡಗಿದನು. ಈಗಲೂ ಯಯಾತಿ ದೇವಯಾನಿಯನ್ನು ದೂರವಿರಿಸಿ ಶರ್ಮಿಷ್ಟೆಯನ್ನಷ್ಟೇ ಸುಖಿಸಿದನು. ಆಕೆ ಎಷ್ಟೇ ಹಠ ಸಾಧಿಸಿದರೂ ಅವಳಿಗೆ ಯಯಾತಿಯ ಪ್ರೀತಿ ಸಿಗಲಿಲ್ಲ. ಯಯಾತಿ ಸುಖಭೋಗಗಳಲ್ಲಿ ಮೈಮರೆತ್ತಿದ್ದನು. ಆದರೆ ಪುರು ವೃದ್ಧಾಪ್ಯವನ್ನು ಸಹಿಸಲಾಗದೆ ಒದ್ದಾಡುತ್ತಿದ್ದನು. ಅವನನ್ನು ನೋಡಿ ಅವನ ಸುಂದರ ಹೆಂಡತಿ ಸ್ವರ್ಣರೇಖೆ ಕಣ್ಣೀರಾಕುತ್ತಿದ್ದಳು. ಅವಳ ಕಣ್ಣೀರು ಯಯಾತಿಯ ಪಾಪಪ್ರಜ್ಞೆಯನ್ನು ಬಡಿದೆಬ್ಬಿಸಿತು. ತನ್ನ ತಪ್ಪನ್ನರಿತ ಯಯಾತಿ ಪುರುವಿಗೆ ಯೌವ್ವನವನ್ನು ಮರಳಿಸಿ ತನ್ನ ವೃದ್ಧಾಪ್ಯವನ್ನು ಪುನ: ಸ್ವೀಕರಿಸಿದನು. ನಂತರ ಯಯಾತಿ ಪುರುವಿಗೆ ರಾಜ್ಯಭಾರದ ಜವಾಬ್ದಾರಿಯನ್ನು ವಹಿಸಿ ಶರ್ಮಿಷ್ಟೆಯೊಡನೆ ಕಾಡಿಗೆ ತೆರಳಿದನು. ಈಗಲೂ ಸಹ ದೇವಯಾನಿಗೆ ತನ್ನ ಗಂಡನ ಪ್ರೀತಿ ಸಿಗಲಿಲ್ಲ. ಆಕೆ ಒಂಟಿಯಾಗಿಯೇ ಉಳಿದು ಅಳಿದಳು.

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada

              ಈ ರೀತಿ ಹಠಮಾರಿ ದೇವಯಾನಿಗೆ ಗೆಳೆಯ ಕಚನ ಪ್ರೀತಿಯೂ ಸಿಗಲಿಲ್ಲ, ಗಂಡ ಯಯಾತಿಯ ಪ್ರೀತಿಯೂ ಬಹುಕಾಲ ಸಿಗಲಿಲ್ಲ, ಕೊನೆಪಕ್ಷ ಗೆಳತಿ ಶರ್ಮಿಷ್ಟೆಯ ಸ್ನೇಹವೂ ಸಿಗಲಿಲ್ಲ. ದುಷ್ಟ ದೇವಯಾನಿ ಒಬ್ಬಳು ಪಾಪದ ಹೆಣ್ಣು ಎಂಬುದರಲ್ಲಿ ಎರಡು ಮಾತಿಲ್ಲ. ಗೆಳೆಯರೇ, ನಿಮ್ಮ ಜೀವನದಲ್ಲಿ ನಿಮಗೆ ಯಾರಾದರೂ ದೇವಯಾನಿಯರು ಸಿಕ್ಕಿದ್ದರೆ ಅವರ ಬಗ್ಗೆ ಕಮೆಂಟ್ ಬಾಕ್ಸಲ್ಲಿ ಬರೆಯಿರಿ ಮತ್ತು ಈ ಅಂಕಣವನ್ನು ನಿಮ್ಮೆಲ್ಲ ಗೆಳೆಯರೊಂದಿಗೆ ತಪ್ಪದೇ ಶೇರ್ ಮಾಡಿ....

ಕನ್ನಡ ಕಥೆ ಪುಸ್ತಕಗಳು - Kannada Story Books

ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada
Blogger ನಿಂದ ಸಾಮರ್ಥ್ಯಹೊಂದಿದೆ.