ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... : Don't Trust Your Friends Too Much in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... : Don't Trust Your Friends Too Much in Kannada

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                     ಮೊದಲಿನಿಂದಲೂ ಜಗತ್ತಿನಲ್ಲಿ ಹೆಣ್ಣು, ಮಣ್ಣು, ಹೊನ್ನಿಗಾಗಿ ಎಲ್ಲ ತರಹದ ಕಿತ್ತಾಟಗಳು ಆಗುತ್ತಲೇ ಬಂದಿವೆ. ಹಣಕ್ಕಾಗಿ ಮನುಷ್ಯ ಎಂಥ ನೀಚ ಕೃತ್ಯಕ್ಕೂ ಸಹ ಇಳಿಯಬಲ್ಲನು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಧಿಕಾರಕ್ಕಾಗಿ ವಿಭೀಷಣ ಸ್ವಂತ ಸಹೋದರ ರಾವಣನನ್ನು ರಾಮನಿಂದ ಕೊಲ್ಲಿಸಿದನು. ಅಧಿಕಾರಕ್ಕಾಗಿ ಪಾಂಡವ ಕೌರವರು ದಾಯಾದಿಗಳಂತೆ ಹೊಡೆದಾಡಿಕೊಂಡು ಸತ್ತರು. ಅಧಿಕಾರಕ್ಕಾಗಿ ಔರಂಗಜೇಬ ಸ್ವಂತ ತಂದೆಯನ್ನೇ ಜೈಲಲ್ಲಿಟ್ಟಿದ್ದನು. ಕೇವಲ 30 ಸೆಂಟಗಳಿಗಾಗಿ ಜುಡಸ್ ತನ್ನ ಗುರು ಜೀಸಸಗೆ ಮೋಸ ಮಾಡಿದನು. ರೋಮನ್ ಸಾಮ್ರಾಜ್ಯಕ್ಕಾಗಿ ಬ್ರೂಟಸ್ ತನ್ನ ಗೆಳೆಯ ಜೂಲಿಯಸ್ ಸೀಜರನನ್ನು ಮೋಸದಿಂದ ಕೊಂದನು. ಹೀಗೆ ಬರೆಯುತ್ತಾ ಹೋದರೆ ಪುಟಗಳು ಸಾಕಾಗುದಿಲ್ಲ. ಅಷ್ಟೊಂದು ಕೆಟ್ಟ ಘಟನೆಗಳು ಹಣಕ್ಕಾಗಿ ಸಂಭವಿಸಿವೆ. ಇವುಗಳಲ್ಲಿ ಹೆಚ್ಚಿಗೆ ವಂಚಿಸಿದವರು ಆತ್ಮೀಯ ಗೆಳೆಯರೇ ಎಂಬುದು ನನ್ನನ್ನು ಪದೇಪದೇ ನೋಯಿಸುವ ಸಂಗತಿ...

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                ನನಗೆ ಸ್ನೇಹದಲ್ಲಿ ನಂಬಿಕೆ ಇಲ್ಲವೆಂದಲ್ಲ. ನನಗೆ ಸ್ನೇಹದಲ್ಲಿ ನಂಬಿಕೆಯಿದೆ. ನನಗಿರುವುದು ಒಬ್ಬಳೇ ಒಬ್ಬಳು ಬೆಸ್ಟ ಫ್ರೆಂಡ್. ಮಿಕ್ಕವರೆಲ್ಲ ಅವಕಾಶವಾದಿ ಮಿತ್ರರು. ಜೊತೆಗಿದ್ದು ಬೆನ್ನಿಗೆ ಚೂರಿ ಹಾಕುವುದರಲ್ಲಿ ಗೆಳೆಯರು ಶತ್ರುಗಳನ್ನು, ಸಂಬಂಧಿಕರನ್ನು ಮೀರಿಸುತ್ತಾರೆ. ಈಗ ಪ್ರೀತಿಯಂತೆ ಸ್ನೇಹವೂ ಸ್ವಾರ್ಥಿಯಾಗಿದೆ. ಗೆಳೆಯರೇ ಗೋರಿ ಕಟ್ಟುತ್ತಿದ್ದಾರೆ. ಮನಸ್ಸುಗಳ ಮಧ್ಯೆ ಸೇತುವೆ ಕಟ್ಟುವ ಬದಲು ಗೋಡೆಗಳನ್ನು ಕಟ್ಟುತ್ತಿದ್ದಾರೆ. ಬೇಕಾದಾಗ ಸರಿಯಾಗಿ ಬಳಸಿಕೊಂಡು ಬೇಡವಾದಾಗ ಕಸದ ತೊಟ್ಟಿಗೆ ಬೀಸಾಕುತ್ತಿದ್ದಾರೆ. ಈಗ ಈ ಸ್ನೇಹ ಪ್ರೀತಿಗಳು ಬರೀ ಸಂಬಂಧಗಳಾಗಿ ಉಳಿದಿಲ್ಲ. ಅವು ಅನುಕೂಲಕ್ಕೆ ತಕ್ಕಂತೆ ಮಾಡುವ ಪಾರ್ಟಟೈಮ್ ಕೆಲಸಗಳಾಗಿವೆ. ಹಾಲಿಗಿಂತ ಸ್ನೇಹದಲ್ಲೇ ಹೆಚ್ಚಿನ ಕಲಬೆರಕೆಯಿದೆ. ಪ್ರೀತಿ ಒಂದು ಸಾರಿ ಮೋಸ ಮಾಡಿದರೆ ಸ್ನೇಹ ಪದೇಪದೇ ಮೋಸ ಮಾಡುತ್ತದೆ. ಏಕೆಂದರೆ ಸ್ನೇಹಿತರು ಸ್ವಾರ್ಥದ ಸಮಯ ಸಾಧಕರಾಗಿದ್ದರೆ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                ನನಗೆ ಈಗಿನ ಸ್ನೇಹದಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲ. ಏಕೆಂದರೆ ಕಷ್ಟ ಅಂತ ಮಧ್ಯರಾತ್ರಿ ಕರೆ ಮಾಡಿದಾಗ ನಾನು ನನ್ನ ಶತ್ರುಗಳಿಗೂ ಸಹಾಯ ಮಾಡಿರುವೆ. ಆದರೆ ನಾನು ಕಷ್ಟದಲ್ಲಿರುವಾಗ ನನ್ನ ಮಿತ್ರರೇ ನನಗೆ ಸಹಾಯ ಮಾಡಲಿಲ್ಲ ಎಂಬ ನೋವು ನನ್ನನ್ನು ಪದೇಪದೇ ನೋಯಿಸುತ್ತದೆ. ಕಾಲೇಜಿನಲ್ಲಿರುವಾಗ ನನ್ನೊಂದಿಗೆ ಇದ್ದುಕೊಂಡು ನನ್ನ ನೋಟ್ಸಗಳನ್ನೇ ಕಾಫಿ ಹೊಡೆದು, ನನ್ನ ನೋಟ್ಸಗಳಿಂದಲೇ ಸರ್ಕಾರಿ ನೌಕರಿ ಹಿಡಿದ ಗೆಳೆಯರು ಇವತ್ತು ನನ್ನನ್ನು ಮರೆತು ತಮ್ಮ ಸಂಸಾರದಲ್ಲಿ ಮುಳುಗಿದ್ದಾರೆ. ಒಂದು ಥ್ಯಾಂಕ್ಸ್ ಹೇಳುವ ಸಣ್ಣ ಸೌಜನ್ಯವೂ ಅವರಿಗಿಲ್ಲ. ಕಾಲೇಜಿನಲ್ಲಿರುವಾಗ ದಿನಕ್ಕೆ ಹತ್ತಾರು ಸಾರಿ ಫೋನ್ ಮಾಡುತ್ತಿದ್ದ ಕುಚೇಲರು ಇವತ್ತು "ಹೇಗಿದ್ದೀಯಾ?" ಎಂದು ಕೇಳುವುದಿಲ್ಲ. ಅವರ ಬಳಿ ಸಮಯವಿಲ್ಲ, ಬ್ಯುಸಿಯಾಗಿದ್ದಾರೆ ಎಂದಲ್ಲ. ಅವರ ಬಳಿ ಮಾತಾಡಲು ಮನಸ್ಸಿಲ್ಲ. ಅವರ ಮೈಮನದ ತುಂಬ ಬರೀ ಜಲಸಿ ತುಂಬಿಕೊಂಡಿದೆ. 

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                  ಎಲ್ಲ ಗೆಳೆಯರು ಕೆಟ್ಟವರೆಂದು ನಾನು ಹೇಳುತ್ತಿಲ್ಲ. ಆದರೆ ಗೆಳೆಯರೆಲ್ಲ ಒಳ್ಳೆಯವರೆಲ್ಲ ಎಂದಷ್ಟೇ ನಾನು ಸಾರಿ ಸಾರಿ ಹೇಳುತ್ತಿರುವುದು. ನಾನು ದು:ಖದಲ್ಲಿರುವಾಗ ನನ್ನ ನಕಲಿ ಗೆಳೆಯರೆಲ್ಲ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದರು. ಆದರೆ ನನ್ನ ಬೆಸ್ಟ ಫ್ರೆಂಡ್ ಮಾತ್ರ ದೀಪಾವಳಿ ಬಿಟ್ಟು ದಿವಾಳಿಯಾದ ನನ್ನ ದು:ಖದಲ್ಲಿ ಭಾಗಿಯಾಗಿ ನನ್ನನ್ನು ಸಂತೈಸಿದಳು. ಫ್ರೆಂಡಶೀಪ ಡೇ ದಿನ ಕೈಮೇಲಿದ್ದ ಬ್ಯಾಂಡಗಳಷ್ಟು ಕೈಗಳು, ನಾನು ಸಂಕಷ್ಟದಲ್ಲಿರುವಾಗ ನನ್ನ ಹೆಗಲ ಮೇಲೆ ಇರಲಿಲ್ಲ. ನನ್ನ ಹೆಗಲ ಮೇಲಿದ್ದುದ್ದು ಅವಳ ಕೈ ಮಾತ್ರ. ಊರ ತುಂಬ ಶತ್ರುಗಳಿದ್ದರೂ ಪರವಾಗಿಲ್ಲ. ಆದರೆ ಪ್ರಯೋಜನಕ್ಕೆ ಬಾರದ ಮಿತ್ರರಿರಬಾರದು ಎಂಬುದು ಅವತ್ತೇ ನನಗೆ ಮನದಟ್ಟಾಗಿದ್ದು.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                         ಒಬ್ಬ ಹುಡುಗ ಮತ್ತೊಬ್ಬ ಹುಡುಗನಿಗೆ ಬೆಸ್ಟ ಫ್ರೆಂಡ್ ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಹೆಣ್ಣಿಗೆ ಹೆಣ್ಣು ಶತ್ರುವಾಗಿರುವಂತೆ, ಗಂಡಿಗೆ ಗಂಡೇ ಶತ್ರು. ಹೇಗೆ ಒಂದು ಹೆಣ್ಣಿನ ಸೌಂದರ್ಯವನ್ನು ಮತ್ತೊಂದು ಹೆಣ್ಣು ಸಹಿಸುವುದಿಲ್ಲವೋ ಅದೇ ರೀತಿ ಒಬ್ಬ ಗಂಡಸಿನ ಸಕ್ಸೆನನ್ನು ಮತ್ತೊಬ್ಬ ಗಂಡಸು ಸಹಿಸುವುದಿಲ್ಲ. ಜೊತೆಗಿದ್ದುಕೊಂಡೆ ಹೊಟ್ಟೆ ಉರಿದುಕೊಂಡು ಬೆಣ್ಣೆಯಂಥ ಮಾತುಗಳನ್ನಾಡಿ ಬೆನ್ನಿಗೆ ಚೂರಿ ಹಾಕುತ್ತಾರೆ. ನಾನು ಫಸ್ಟ್ Rank ಬಂದಾಗ ನನ್ನ ಗೆಳೆಯರೇ ಹೆಚ್ಚಿನ ದು:ಖವನ್ನು ಅನುಭವಿಸಿದರು ಎಂಬುದು ದುರಾದೃಷ್ಟದ ಸಂಗತಿ. ಈಗ ಜೀವಕ್ಕೆ ಜೀವ ಕೊಡುವ ಗೆಳೆಯರಿಗಿಂತ ಜಲಸಿಯಿಂದ ಜೇವಕ್ಕೆ ಕುತ್ತು ತರುವ ಗೆಳೆಯರೇ ಅಧಿಕವಾಗಿದ್ದಾರೆ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                    ಫ್ರೆಂಚ್ ಫಿಲಾಸಾಫರಾದ ವಾಲ್ಟರ್ (Voltaire) "Lord, Protect me from my friends ; I can take care of my enemies" (ಓ ದೇವರೆ ನನ್ನ ಸ್ನೇಹಿತರಿಂದ ನನ್ನನ್ನು ಸಂರಕ್ಷಿಸು : ನನ್ನ ಶತ್ರುಗಳನ್ನು ನಾನು ನೋಡಿಕೊಳ್ಳುತ್ತೇನೆ)  ಎಂದೇಳುತ್ತಾನೆ. ಅವನ ಮಾತು ವಾಸ್ತವಕ್ಕೆ ಹತ್ತಿರದಲ್ಲಿದೆ. ಏಕೆಂದರೆ ಗೆಳೆಯರೇ ಗೋರಿ ಕಟ್ಟುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಸಲುಗೆಯಿಂದ ಮನೆಗೆ ಕರೆದ ಸ್ನೇಹಿತನ ಪತ್ನಿಯನ್ನೇ ಕೆಟ್ಟ ಕಣ್ಣಿನಿಂದ ನೋಡುವ ಸ್ನೇಹಿತರಿದ್ದಾರೆ. ನಂಬಿ ಬ್ಯುಸಿನೆಸ್ಸಲ್ಲಿ ಪಾರ್ಟನರಶೀಪ ಕೊಟ್ಟಾಗ ಸ್ನೇಹಿತನನ್ನೇ ಕಂಪನಿಯಿಂದ ಹೊರಹಾಕಿದ ಸ್ನೇಹಿತರಿದ್ದಾರೆ. ಹೆಣ್ಣು ಹೆಂಡ ಹಣಕ್ಕಾಗಿ ಸ್ವಂತ ಸ್ನೇಹಿತನನ್ನೇ ಸಂಚು ರೂಪಿಸಿ ಸಾಯಿಸಿದ ಸಮಯ ಸಾಧಕರು ನಮ್ಮ ಮಧ್ಯೆ ಈಗಲೂ ಇದ್ದಾರೆ. ಅದಕ್ಕಾಗಿ ಶತ್ರುಗಳಿಗಿಂತ ಸ್ನೇಹಿತರಿಂದ ಸುರಕ್ಷಿತವಾಗಿರುವ ಅವಶ್ಯಕತೆ ಹೆಚ್ಚಾಗಿದೆ. ರಾಬರ್ಟ್ ಗ್ರೀನ್ (Robert Greene) ಬರೆದ "48 Laws of Power" ಎಂಬ ಪುಸ್ತಕದಲ್ಲಿ "Don't trust your friends too much ; rather than use your enemies " (ನಿಮ್ಮ ಸ್ನೇಹಿತರನ್ನು ಅತಿಯಾಗಿ ನಂಬದಿರಿ. ಅದರ ಬದಲಾಗಿ ನಿಮ್ಮ ಶತ್ರುಗಳಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಿ) ಎಂಬ ಮಾತು ಪರಿಣಾಮಕಾರಿಯಾಗಿ ಉಲ್ಲೇಖವಾಗಿದೆ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                        ಸ್ನೇಹಿತರ ಬಳಿ ಸಲಹೆ ಕೇಳುವುದಕ್ಕಿಂತ ಶತ್ರುಗಳ ಫೀಡಬ್ಯಾಕನ್ನು ಸರಿಯಾಗಿ ಬಳಸಿಕೊಳ್ಳುವುದು ನಿಜವಾದ ಜಾಣತನ. ಏಕೆಂದರೆ ಸ್ನೇಹಿತರಿಗೆ ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ಧೈರ್ಯವಿರಲ್ಲ. ಧೈರ್ಯವಿದ್ದರೂ ಬಹಳಷ್ಟು ಸಲ ಅವರು ನಮ್ಮ ತಪ್ಪುಗಳನ್ನು ಅವರು ನಮಗೆ ತೋರಿಸಲ್ಲ. ಏಕೆಂದರೆ ಅವರು ಶಕುನಿಯಂತೆ ನಮ್ಮ ಅವನತಿಯನ್ನು ಬಯಸುತ್ತಿರುತ್ತಾರೆ. ಅದಕ್ಕಾಗಿ ಶತ್ರುಗಳಿಂದ ಬರುತ್ತಿರುವ ಸಂದೇಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸುರಕ್ಷಿತವಾಗಿರುವುದು ಸುಕ್ಷೇಮ. ಶತ್ರುಗಳು ನಮಗೆ ನಿಜವಾದ ಫೀಡಬ್ಯಾಕನ್ನು ಕೊಡುತ್ತಾರೆ, ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ ತಿದ್ದಿಕೊಳ್ಳಲು ನಮಗೆ ಅವಕಾಶ ನೀಡುತ್ತಾರೆ, ಸಾಲದಕ್ಕೆ ನಾವು ಸದಾಕಾಲ ಅಲರ್ಟಾಗಿರುವಂತೆ ನೋಡಿಕೊಳ್ಳುತ್ತಾರೆ. ಇಷ್ಟು ಸಾಕಲ್ಲವೇ ನಾವು ಸಕ್ಸೆಸಫುಲ್ ವ್ಯಕ್ತಿಗಳಾಗಲು. ಸುತ್ತಲೂ ಸ್ವಾರ್ಥ ಸ್ನೇಹಿತರಿರುವುದಕ್ಕಿಂತ ಒಬ್ಬ ಸಮರ್ಥ ಶತ್ರುವಿದ್ದರೆ ಸಾಕು ನಾವು ತಾನಾಗಿಯೇ ಸಕ್ಸೆಸಫುಲ್ ವ್ಯಕ್ತಿಗಳಾಗುತ್ತೇವೆ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                           ಶತ್ರುಗಳನ್ನು ನಂಬಿದರೂ ಕೆಲವು ಕಪಟಿ ಮಿತ್ರರನ್ನು ನಾವು ನಂಬಬಾರದು. ನಮ್ಮ ಸರಿಯಾದ ಶಕ್ತಿ ಸಾಮರ್ಥ್ಯ ನಮ್ಮ ಶತ್ರುಗಳಿಗೆ ಗೊತ್ತಿದ್ದರೂ ನಮ್ಮ ವಿಕನೆಸ್ ನಮ್ಮ ಸ್ನೇಹಿತರಿಗಷ್ಟೇ ಗೊತ್ತಿರುತ್ತದೆ. ನಿಮ್ಮ ವಿಕನೆಸ್ ಹೊರ ಜಗತ್ತಿಗೆ ಗೊತ್ತಾಗುವುದು ನಿಮ್ಮ ಸ್ನೇಹಿತರಿಂದಲೇ. ದೋಣಿ ಮಗುಚಿ ಬೀಳಲು ದೊಡ್ಡ ರಂಧ್ರಗಳು ಬೇಕಿಲ್ಲ. ಒಂದು ಸಣ್ಣ ರಂಧ್ರ ಸಾಕು. ದೊಡ್ಡ ಪರ್ವತಕ್ಕೆ ಯಾರು ಎಡವಿ ಬೀಳುವುದಿಲ್ಲ. ಎಲ್ಲರೂ ಚಿಕ್ಕ ಕಲ್ಲುಗಳಿಗೇನೆ ಎಡವಿ ಬೀಳುತ್ತಾರೆ. ಅದೇ ರೀತಿ ನಿಮ್ಮ ಸ್ನೇಹಿತರಿಂದ ಲೀಕ್ ಆಗುವ ನಿಮ್ಮ ಒಂದು ಸಣ್ಣ ವಿಕನೆಸ್ ನಿಮ್ಮನ್ನು ಮುಳುಗಿಸುತ್ತದೆ. ಅದಕ್ಕಾಗಿ ನಿಮ್ಮ ಗೆಳೆಯರನ್ನು ಅತಿಯಾಗಿ ನಂಬದಿರಿ. ನಿಮ್ಮ ಗೆಳೆಯರಿಂದ ಯಾವಾಗಲೂ ಎಚ್ಚರವಾಗಿರಿ. ಫೇಸ್ಬುಕ್ ಗೆಳೆಯರಿಗಿಂತ ಲೈಫ್ಬುಕ್ ಗೆಳೆಯರು ಮುಖ್ಯವಾದರೂ ಎಲ್ಲ ಗೆಳೆಯರು ಒಳ್ಳೆಯವರಲ್ಲ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

             ಜೀವನದಲ್ಲಿ ಮುಂದೆ ಬರಬೇಕೆಂದರೆ ಇವತ್ತೇ ನಕಲಿ ಗೆಳೆಯರಿಂದ ದೂರವಿರುವುದನ್ನು ರೂಢಿ ಮಾಡಿಕೊಳ್ಳಿ. ನಿಮ್ಮ ಗಡ್ಡಕ್ಕೆ ಬೆಂಕಿ ಬಿದ್ದಾಗ ಸಿಗರೇಟ್ ಹೊತ್ತಿಸಿಕೊಳ್ಳುವವನು ಯಾವತ್ತು ನಿಮಗೆ ಬೆಸ್ಟ ಫ್ರೆಂಡ್ ಆಗಲ್ಲ. ನಿಮ್ಮ ತಪ್ಪುಗಳನ್ನು ನಿಮಗೆ ಎತ್ತಿ ತೋರಿಸಿ ನಿಮ್ಮನ್ನು ಸಕ್ಸೆಸ್ಸಿನ ಸಮೀಪಕ್ಕೆ ಒಯ್ಯದವನು ನಿಜವಾದ ಸ್ನೇಹಿತನಾಗಲು ಸಾಧ್ಯವೇ ಇಲ್ಲ. ಈ ಕ್ಷಣದಿಂದಲೇ ಭ್ರಮಾಲೋಕದಿಂದ ಹೊರ ಬಂದು ವಾಸ್ತವವನ್ನು ಅರ್ಥಮಾಡಿಕೊಂಡು ನಿಮ್ಮ ಗುರಿ ಮುಟ್ಟುವುದರ ಕಡೆಗೆ ಗಮನ ಹರಿಸಿ.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

            ನನಗೆ ಜೀವನದಲ್ಲಿ ದುರ್ಯೋಧನನಂಥ  ಗೆಳೆಯನಿರಬೇಕು ಎಂದು ನಾನು ಆಸೆಪಟ್ಟಿದ್ದೆ. ಏಕೆಂದರೆ ಆತ ಮನಸ್ಸು ಮಾಡಿದ್ದರೆ ಕುರುಕ್ಷೇತ್ರ ಯುದ್ಧದ ಕೊನೆಯ ದಿನ ಅರ್ಧ ಸಾಮ್ರಾಜ್ಯವನ್ನು ಪಡೆದುಕೊಂಡು ಸುಖವಾಗಿರಬಹುದಿತ್ತು. ಆದರೆ ಜೀವದ ಗೆಳೆಯ ಕರ್ಣ ಬದುಕಿಲ್ಲ ಎಂಬ ಒಂದೇ ಕಾರಣಕ್ಕೆ ಆತ ಪಾಂಡವರೊಂದಿಗೆ ರಾಜಿಯಾಗದೆ ಹೋರಾಡಿ ಸತ್ತು ಸಮಾಧಿ ಸೇರಿದನು. ಒಮ್ಮೆ ಕರ್ಣ,  ತನ್ನ ಹೆಂಡತಿ ಭಾನುಮತಿಯ ಕೊರಳಿಗೆ ಕೈಹಾಕುವಾಗ ಕಣ್ಣಿಗೆ ಬಿದ್ದರೂ ದುಡುಕದೆ ವಾಸ್ತವವನ್ನು ಅರಿಯುವಷ್ಟು ತಾಳ್ಮೆ ತೋರಿದ ದುರ್ಯೋಧನನ ಸ್ನೇಹಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು. ನನಗೆ ಅವನಂಥ ಮಹಾನ್ ಗೆಳೆಯಬೇಕೆಂದು ನಾನು ಬಯಸಿದ್ದೆ. ಆದರೆ ನನಗೆ ಅವನಂಥ ಗೆಳೆಯ ಸಿಗಲಿಲ್ಲ. ಅದರ ಬದಲಾಗಿ ಶ್ರೀಕೃಷ್ಣನಂಥ ಬೆಸ್ಟಫ್ರೆಂಡ್ ಸಿಕ್ಕಳು. ಸ್ನೇಹದಲ್ಲಿ ಆಕೆ ಶ್ರೀಕೃಷ್ಣನಂತಾದರೆ ನಾನು ಸುಧಾಮನಂತಾಗುವೆ. ಆಕೆ ನನ್ನಿಂದ ಏನನ್ನು ಬಯಸುವುದಿಲ್ಲ. ಏಕೆಂದರೆ ಎಲ್ಲವೂ ಅವಳ ಬಳಿ ಕಾಲು ಕಟ್ಟಿಕೊಂಡು ಬಿದ್ದಿವೆ. ಅವಳು ಬಯಸುವುದು ನನ್ನ ಸಕ್ಸೆಸನ್ನಷ್ಟೇ. ಅವಳಂಥ ಮಹಾನ್ ಗೆಳತಿ ಇರುವಾಗ ನನಗೆ ಈ ಗೆಳೆತನದ ಇನ್ನೊಂದು ಮುಖದ ಬಗ್ಗೆ ಬರೆಯುವ ಆಸೆಯಿರಲಿಲ್ಲ. ಆದರೆ ನನ್ನ ಗೆಳೆಯರೇ ನನಗೆ ಪದೇಪದೇ ಮೋಸ ಮಾಡಿ ನನ್ನನ್ನು ಬೇಡ ಬೇಡವೆಂದರೂ ಹೀರೋ ಮಾಡುತ್ತಿರುವಾಗ ಈ ಅಂಕಣವನ್ನು ಬರೆಯಲೇಬೇಕಾಯಿತು.

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much

                      ನನ್ನ ಗೆಳೆಯರ ಬಗ್ಗೆ, ಗೆಳೆತನದ ನಾನು ಬರೆದಿರುವೆ. ನೀವು ಸಹ ನಿಮ್ಮ ಗೆಳೆಯರ ಬಗ್ಗೆ ತಪ್ಪದೇ ಕಮೆಂಟ್ ಮಾಡಿ. ಜೊತೆಗೆ ಇದನ್ನು ನಿಮ್ಮ ಬೆಸ್ಟಫ್ರೆಂಡಗಳೊಂದಿಗೆ ಮಾತ್ರ ಶೇರ್ ಮಾಡಿ. ಈಡೀ ಜಗತ್ತಿಗೆ ನೀವು ಮೋಸ ಮಾಡಿದರೂ ನಿಮ್ಮನ್ನು ನಂಬಿರುವ ನಿಮ್ಮ ಗೆಳೆಯರಿಗೆ ಯಾವತ್ತೂ ಮೋಸ ಮಾಡಬೇಡಿ ಎಂಬ ಕೋರಿಕೆ ನನ್ನದು. ಸಾಧ್ಯವಾದರೆ ಪ್ಲೀಸ್ ನಡೆಸಿಕೊಡಿ...

ನಿಮ್ಮ ಗೆಳೆಯರಿಂದ ಎಚ್ಚರವಾಗಿರಿ... Don't Trust Your Friends Too Much




Blogger ನಿಂದ ಸಾಮರ್ಥ್ಯಹೊಂದಿದೆ.