ಹಿಂದು ಪುರಾಣಗಳಲ್ಲಿನ ಅತ್ಯಂತ ಸುಂದರವಾದ ಹೆಣ್ಣೆಂದರೆ ಮೋಹಿನಿ ಮಾತ್ರ. ಮೋಹಿನಿಯ ಮೇಲೆ ಮೋಹಗೊಳ್ಳದ ದೇವತೆ ಅಥವಾ ದಾನವ ಇರಲಿಲ್ಲ. ಪ್ರತಿಯೊಬ್ಬರು ಮೋಹಿನಿಯ ಮಾಯೆಗೆ ಒಳಗಾಗಿದ್ದಾರೆ. ಸಮುದ್ರ ಮಂಥನ ಸಮಯದಲ್ಲಿ ಅಮೃತ ಸಿಕ್ಕಾಗ ದೇವತೆಗಳಿಗೂ ಮತ್ತು ದಾನವರಿಗೂ ಮತ್ತೆ ಘೋರ ಯುದ್ಧ ಶುರುವಾಯಿತು. ಏಕೆಂದರೆ ಅಮೃತವನ್ನು ಪಾನಿಸಿದರೆ ಅಮರತ್ವ ಸಿಗುವುದೆಂದು ಗೊತ್ತಾಗಿತ್ತು. ಅದಕ್ಕಾಗಿ ಅಮರತ್ವದ ಆಸೆಗಾಗಿ ಅಮೃತವನ್ನು ಪಾಣಿಸಲು ದೇವತೆಗಳಿಗೂ ಮತ್ತು ದಾನವರಿಗೂ ಕದನ ಶುರುವಾಯಿತು. ದಾನವರಿಗೆ ಅಮೃತವನ್ನು ಕೊಡುವ ಮನಸ್ಸು ದೇವತೆಗಳಿಗೆ ಇರಲಿಲ್ಲ. ಅದಕ್ಕಾಗಿ ಸಾಕ್ಷಾತ್ ಮಹಾ ವಿಷ್ಣುವೇ ಮೋಹಿನಿಯ ಅವತಾರ ತಾಳಿದನು. ಮೋಹಿನಿಯ ಸೌಂದರ್ಯಕ್ಕೆ ಸಾಟಿಯಾದದ್ದು ಯಾವುದು ಇರಲಿಲ್ಲ. ಮೋಹಿನಿಯನ್ನು ಕಂಡ ಕ್ಷಣದಲ್ಲೇ ದಾನವರ ಸಮೇತ ದೇವತೆಗಳು ಸಹ ಮರುಳಾದರು. ದಾನವರು ಮೋಹಿನಿ ಹೇಳಿದಂತೆ ಕೇಳತೊಡಗಿದರು. ಅಲ್ಲದೆ ಅವರು ಮೋಹಿನಿಯ ಸೌಂದರ್ಯದ ಸೆಳೆತಕ್ಕೆ ಒಳಗಾಗಿ ಅಮೃತವನ್ನು ಮರೆತು ಬಿಟ್ಟರು. ಮೋಹಿನಿ ನೃತ್ಯ ಮಾಡುತ್ತಾ ಬರೀ ದೇವತೆಗಳಿಗಷ್ಟೇ ಅಮೃತವನ್ನು ಪಾನಿಸಲು ಪ್ರಾರಂಭಿಸಿದಳು. ಅವಳ ವಂಚನೆ ರಾಹು ಎಂಬ ರಾಕ್ಷಸನಿಗೆ ಗೊತ್ತಾಯಿತು. ಆತ ಅಮೃತವನ್ನು ಪಾನಿಸುವುದಕ್ಕಾಗಿ ದೇವತೆಯ ವೇಷ ಧರಿಸಿ ದೇವತೆಗಳ ಸಾಲಿನಲ್ಲಿ ಬಂದು ಕುಳಿತು ಅಮೃತವನ್ನು ಪಾನಿಸಿದನು. ಆದರೆ ಅವನ ಕುಟಿಲತೆ ಮೋಹಿನಿಗೆ ಗೊತ್ತಾದಾಗ ಆಕೆ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಅವನ ಶಿರಛೇಧನ ಮಾಡಿದಳು. ಅದೇ ರೀತಿ ನೃತ್ಯ ಮಾಡುತ್ತಾ ಮೋಹಿನಿ ಅಮೃತವನ್ನೆಲ್ಲ ಬರೀ ದೇವತೆಗಳಿಗಷ್ಟೇ ಪಾನಿಸಿ ಅವರಿಗೆ ಅಮರತ್ವವನ್ನು ಕರುಣಿಸಿ ದೇವತೆಗಳನ್ನು ರಕ್ಷಿಸಿದಳು. ಇದು ಮೋಹಿನಿಯ ಮೊದಲ ಮಾಯೆ.
ಮೋಹಿನಿಯ ಮಾಯೆಗಳು ಸುಲಭವಾಗಿ ಮುಗಿಯುವಂಥದ್ದಲ್ಲ. ಮೋಹಿನಿ ಪುರುಷರಲ್ಲಿ ಪ್ರೀತಿಯ ಆಸೆಯನ್ನು ಬಿತ್ತಿ ಅವರನ್ನು ತನ್ನ ಕೈವಶ ಮಾಡಿಕೊಂಡು ಕೈಬೆರಳ ಸನ್ನೆಯ ಮೇಲೆ ಕುಣಿಸುತ್ತಾಳೆ. ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇಂದ್ರಿಯಗಳನ್ನು ಜಯಿಸಿದ ಶಿವನು ಸಹ ಮೋಹಿನಿಯ ಸೌಂದರ್ಯಕ್ಕೆ ಸೋತು ಅವಳನ್ನು ಬೆನ್ನಟ್ಟಿದನು. ಆತ ಅವಳನ್ನು ಮದುವೆಯಾಗಲು ಸಹ ಸಿದ್ಧನಿದ್ದನು. ಶಿವ ಮೋಹಿನಿಯನ್ನು ಬಲವಂತವಾಗಿ ಅಪ್ಪಿಕೊಂಡಾಗ ಮೋಹಿನಿ ತನ್ನ ನಿಜ ರೂಪವನ್ನು ಅವನಿಗೆ ಪ್ರದರ್ಶಿಸಿ "ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ..." ಎಂದೇಳಿ ಮಾಯವಾದಳು. ಕಾಮ ಎನ್ನುವುದು ದೇವಾನು ದೇವತೆಗಳನ್ನು ಸಹ ಬಿಟ್ಟಿಲ್ಲ ಎಂಬುದು ಮೋಹಿನಿಯ ಈ ಮಾಯೆಯಿಂದ ಸಾಬೀತಾಗುತ್ತದೆ.
ಒಬ್ಬ ರಾಕ್ಷಸ ಶಿವನನ್ನು ಕುರಿತು ಘೋರ ತಪಸ್ಸು ಮಾಡಿ "ನಾನು ಯಾರ ತಲೆ ಮೇಲೆ ಕೈಯಿಡುತ್ತೇನೆಯೋ ಅವರು ಸುಟ್ಟು ಭಸ್ಮವಾಸಬೇಕು" ಎಂಬ ವಿಚಿತ್ರ ವರವನ್ನು ಪಡೆದುಕೊಂಡನು. ಆ ರಾಕ್ಷಸ ಕಂಡಕಂಡವರ ತಲೆ ಮೇಲೆ ಕೈಯಿಟ್ಟು ಅವರನ್ನೆಲ್ಲ ಸುಟ್ಟು ಭಸ್ಮ ಮಾಡಲು ಪ್ರಾರಂಭಿಸಿದ್ದರಿಂದ ಅವನು ಭಸ್ಮಾಸುರನೆಂದು ಪ್ರಸಿದ್ಧನಾದನು. ದಿನ ಕಳೆದಂತೆ ಅವನ ಶತ್ರುಗಳೆಲ್ಲ ಸುಲಭವಾಗಿ ನಾಶವಾಗಿದ್ದರಿಂದ ಭಸ್ಮಾಸುರನಿಗೆ ಅಹಂಕಾರ ಹೆಚ್ಚಾಯಿತು. ಅದಕ್ಕಾಗಿ ಆತ ಶಿವನ ತಲೆ ಮೇಲೆ ಕೈಯಿಟ್ಟು ಶಿವನನ್ನು ಸುಟ್ಟು ಭಸ್ಮ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದನು. ಅವನಿಂದ ತಪ್ಪಿಸಿಕೊಂಡು ಶಿವ ಕೈಲಾಸ ಪರ್ವತದಿಂದ ಬೇರೆಡೆಗೆ ಓಡಿದನು. ಆತ ಶಿವನ ತಲೆ ಮೇಲೆ ಕೈಯಿಡುವುದಕ್ಕಾಗಿ ಅವನನ್ನು ಬೆನ್ನಟ್ಟಿದನು. ಭಸ್ಮಾಸುರನಿಗೆ ಹೆದರಿ ಓಡುತ್ತಿರುವ ಶಿವನನ್ನು ಕಾಪಾಡುವುದಕ್ಕಾಗಿ ಮೋಹಿನಿ ಭಸ್ಮಾಸುರನ ಎದುರು ಪ್ರತ್ಯಕ್ಷಳಾದಳು. ಮೋಹಿನಿಯ ಮೈಮಾಟಕ್ಕೆ ಭಸ್ಮಾಸುರ ಮರುಳಾಗಿ ಅವಳನ್ನು ಮದುವೆಯಾಗುವ ಮನದಾಸೆಯನ್ನು ವ್ಯಕ್ತಪಡಿಸಿದನು. ಆವಾಗ ಮೋಹಿನಿ ಅವನಿಗೆ ನೀನು ನೃತ್ಯದಲ್ಲಿ ನನ್ನನ್ನು ಮೆಚ್ಚಿಸಿದರೆ ನಾನು ನಿನ್ನನ್ನು ಮದುವೆಯಾಗುವೆ ಎಂದೇಳಿ ನೃತ್ಯ ಮಾಡಲು ಪ್ರಾರಂಭಿಸಿದಳು. ಮೋಹಿನಿಯನ್ನು ನೋಡಿ ಭಸ್ಮಾಸುರನು ಕುಣಿಯಲು ಪ್ರಾರಂಭಿಸಿದನು. ಮೋಹಿನಿ ಹಾಗೆಯೇ ಕುಣಿಯುತ್ತಾ ಸುಸ್ತಾಗಿ ಕೊನೆಗೆ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡಳು. ಅವಳ ಸೌಂದರ್ಯದ ಸೆಳೆತಕ್ಕೆ ಸೋತು ಹೋಗಿದ್ದ ಭಸ್ಮಾಸುರನು ಸಹ ತಲೆಯ ಮೇಲೆ ಕೈಯಿಟ್ಟುಕೊಂಡನು. ಕೂಡಲೇ ಭಸ್ಮಾಸುರ ಸುಟ್ಟು ಭಸ್ಮವಾದನು. ಈ ರೀತಿ ಮೋಹಿನಿ ಉಪಾಯದಿಂದ ಭಸ್ಮಾಸುರರನ್ನು ಕೊಂದು ಶಿವನನ್ನು ಕಾಪಾಡಿದಳು. ಈ ರೀತಿ ಮೋಹಿನಿಯ ಮಾಯೆಗಳು ರೋಚಕವಾಗಿ ಸಾಗುತ್ತವೆ.
ಇದಿಷ್ಟು ಮೋಹಿನಿಯ ಮಾಯೆಗಳು. ಮೋಹಿನಿ ಸೌಂದರ್ಯದ ಶಾರದೆಯಾಗಿದ್ದಾಳೆ. ಅವಳು ಪುರುಷನನ್ನು ಸೆಳೆದು ತನ್ನ ಕೈ ಸನ್ನೆಯ ಮೇಲೆ ಕುಣಿಸುತ್ತಾಳೆ. ರಾತ್ರಿ ಕನಸ್ಸಲ್ಲಿ ಬಂದು ಕಾಡುತ್ತಾಳೆ. ಅವಳ ಮಾಯೆಗಳು ಮುಗಿಯುವುದಿಲ್ಲ. ಈ ಅಂಕಣದ ಬಗ್ಗೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಜೊತೆಗೆ ಇದನ್ನು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...
ಕನ್ನಡ ಕಥೆ ಪುಸ್ತಕಗಳು - Kannada Story Books
ಕನ್ನಡ ಕಥೆ ಪುಸ್ತಕಗಳು - Kannada Story Books