ದಮಯಂತಿ ವಿದರ್ಭ ದೇಶದ ರಾಜ ಭೀಷ್ಮಕನ ಮಗಳು. ಅವಳು ಗುಣವತಿ, ರೂಪವತಿ ಎರಡೂ ಆಗಿದ್ದಳು. ಅಷ್ಟದಿಕ್ಕುಗಳಲ್ಲಿಯೂ ಅವಳ ಗುಣಗಾನ ಹಬ್ಬಿತ್ತು. ಅವಳನ್ನು ಮದುವೆಯಾಗಲು ಎಲ್ಲ ದೇಶದ ರಾಜಕುಮಾರರು ಸಿದ್ಧರಿದ್ದರು. ಆದರೆ ದಮಯಂತಿ ನಿಷಧ ದೇಶದ ರಾಜಕುಮಾರ ನಳನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅವಳ ಪ್ರೀತಿ ಪವಿತ್ರವಾಗಿತ್ತು. ಏಕೆಂದರೆ ಆಕೆ ನಳನನ್ನು ಮುಖ ನೋಡದೆ ಪ್ರೀತಿಸುತ್ತಿದ್ದಳು. ಹೇಗೆ ದಮಯಂತಿಯ ಸೌಂದರ್ಯದ ಖ್ಯಾತಿ ಎಲ್ಲೆಡೆಗೆ ಹಬ್ಬಿತ್ತೋ ಅದೇ ರೀತಿ ನಳ ಮಹಾರಾಜನ ಶೌರ್ಯ, ಸದ್ಗುಣಗಳ ಕೀರ್ತಿ ಎಲ್ಲೆಡೆಗೆ ಹಬ್ಬಿತ್ತು. ಒಂದಿನ ನಳ ಮಹಾರಾಜನು ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ಕೊಳದಲ್ಲಿನ ಒಂದು ಹಂಸವನ್ನು ಹಿಡಿದನು. ಆಗ ಆ ಹಂಸ "ದಯಾಳು ರಾಜನೇ, ದಯಮಾಡಿ ನನ್ನನ್ನು ಬಿಟ್ಟು ಬಿಡು. ನಾನು ದಮಯಂತಿಯ ಬಳಿ ಹೋಗಿ ನಿನ್ನ ಗುಣಗಾನ ಮಾಡುವೆ..." ಎಂದೇಳಿತು. ಅದಕ್ಕಾತ ಆ ಹಂಸವನ್ನು ಸುಮ್ಮನೆ ಬಿಟ್ಟನು. ನಂತರ ಆ ಹಂಸ ದಮಯಂತಿಯ ಬಳಿ ಹೋಗಿ ನಳ ಮಹಾರಾಜನ ಶೌರ್ಯ, ಸಾಹಸ, ಸದ್ಗುಣಗಳ ಪ್ರಶಂಸೆ ಮಾಡಿ "ನಿನಗೆ ಯೋಗ್ಯನಾದ ವರನೇಂದರೆ ನಳ ರಾಜನೇ..." ಎಂದೇಳಿತು. ಪ್ರೇಮ ಸಂದೇಶ ತಂದ ಆ ಹಂಸಕ್ಕೆ ದಮಯಂತಿ ಧನ್ಯವಾದಗಳನ್ನು ಅರ್ಪಿಸಿ ನಳನ ನೆನಪಲ್ಲಿ ಕಳೆದೋದಳು. ಈ ರೀತಿ ರಾಜಹಂಸದ ಮೂಲಕ ನಳ ದಮಯಂತಿಯರಿಬ್ಬರು ಪರಸ್ಪರ ಪರಿಚಿತರಾಗಿ ಪ್ರೇಮಪಕ್ಷಿಗಳಾದರು.
ದಮಯಂತಿ ನಳನ ನೆನಪುಗಳಲ್ಲಿ ಖುಷಿಯಾಗಿದ್ದಳು. ಆದರೆ ಶನಿ ನಳನನ್ನು ಕಾಡಲು ಕಾಯುತ್ತಿದ್ದನು. ಅಂಥ ಸಮಯದಲ್ಲಿಯೇ ಭೀಷ್ಮಕ ರಾಜ ದಮಯಂತಿಯ ಸ್ವಯಂವರವನ್ನು ಏರ್ಪಡಿಸಿದನು. ಈ ಸುದ್ದಿಯನ್ನು ಕೇಳಿದ ತಕ್ಷಣವೇ ನಳ ಸ್ವಯಂವರದಲ್ಲಿ ಭಾಗವಹಿಸಲು ವಿದರ್ಭ ದೇಶಕ್ಕೆ ಪ್ರಯಾಣ ಬೆಳೆಸಿದನು. ನಳ ಸರಿಯಾಗಿ ನಿಯಮ ಪಾಲನೆ ಮಾಡುತ್ತಾ ರಾಜ್ಯಭಾರ ಮಾಡುತ್ತಿದ್ದನು. ಹೀಗಾಗಿ ಅವನನ್ನು ಕಾಡುವುದು ಶನಿದೇವನಿಗೆ ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಆತ ದೇವೇಂದ್ರನಿಗೆ ದಮಯಂತಿಯ ಸ್ವಯಂವರಕ್ಕೆ ಹೋಗಲು ಪ್ರೇರೆಪಿಸಿದನು. ದಮಯಂತಿಯ ಸೌಂದರ್ಯದ ಬಗ್ಗೆ ಬಹಳಷ್ಟು ಕೇಳಿದ್ದ ದೇವೇಂದ್ರ ಅವಳನ್ನು ಮದುವೆಯಾಗುವ ಕನಸನ್ನು ಹೊತ್ತು ಸ್ವಯಂವರಕ್ಕೆ ಹೊರಡಲು ಸಿದ್ಧನಾದನು. ಶನಿದೇವನು ದೇವೆಂದ್ರನನ್ನು ದಮಯಂತಿಯ ಸ್ವಯಂವರಕ್ಕೆ ಕಳುಹಿಸುವ ಮೂಲಕ ತನ್ನ ಕಾಡಾಟವನ್ನು ಪ್ರಾರಂಭಿಸಿದನು.
ದೇವೇಂದ್ರ ಅಗ್ನಿ, ವರುಣ ಮತ್ತು ವಾಯುದೇವರ ಸಮೇತ ದಮಯಂತಿಯ ಸ್ವಯಂವರಕ್ಕೆ ಹೋದನು. ದಾರಿಮಧ್ಯೆದಲ್ಲಿ ಅವರಿಗೆ ಉತ್ಸಾಹದಿಂದ ಹೊರಟಿರುವ ನಳ ಮಹಾರಾಜ ಕಂಡನು. ಆಗ ದೇವೇಂದ್ರ ನಳನನ್ನು ಕರೆದು "ನೀನು ಪ್ರೇಮ ದ್ಯೂತನಾಗಿ ಹೋಗಿ ದಮಯಂತಿಗೆ ದೇವತೆಗಳಲ್ಲಿ ಯಾರಾದರೂ ಒಬ್ಬರನ್ನು ಮದುವೆಯಾಗುವಂತೆ ಹೇಳು..." ಎಂದೇಳಿ ದೇವತೆಗಳೊಂದಿಗೆ ಮಾಯವಾದನು. ನಳ ಮಹಾರಾಜ ದೇವೇಂದ್ರ ಹೇಳಿದಂತೆಯೇ ದಮಯಂತಿಗೆ ತಿಳಿಸಿದನು. ಆದರೆ ಆಕೆ ದೇವೇಂದ್ರನ ಕೋರಿಕೆಯನ್ನು ತಳ್ಳಿಹಾಕಿದಳು. ಮೊದಲೇ ಆಕೆ ಮುಖ ನೋಡದೆ ನಳನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಈಗ ನಳನೇ ಕಣ್ಣೆದುರಿಗೆ ಬಂದಾಗ ಅವನನ್ನು ಮದುವೆಯಾಗುವ ಮನದಾಸೆಗೆ ಶರಣಾದಳು. ಅವಳ ಪ್ರೀತಿಯನ್ನು ಒಪ್ಪಿಕೊಂಡು ನಳ ಅವಳನ್ನು ಮದುವೆಯಾಗಲು ನಿರ್ಧರಿಸಿದನು. ನಂತರ ದಮಯಂತಿಯ ನಿರ್ಧಾರವನ್ನು ದೇವತೆಗಳಿಗೆ ತಿಳಿಸಿ ನಳ ನಾಳೆಯ ಸ್ವಯಂವರಕ್ಕೆ ಸಿದ್ಧನಾಗತೊಡಗಿದನು.
ಮಾರನೇ ದಿನ ದಮಯಂತಿ ಮಾಲೆ ಹಿಡಿದುಕೊಂಡು ಸ್ವಯಂವರಕ್ಕೆ ಬಂದಾಗ ನಳನನ್ನು ಗುರ್ತಿಸಲಾಗದೆ ಕಕ್ಕಾಬಿಕ್ಕಿಯಾದಳು. ಏಕೆಂದರೆ ಸ್ವಯಂವರದಲ್ಲಿ ಭಾಗವಹಿಸಿದ್ದವರೆಲ್ಲರು ನಳನಂತೆಯೇ ಕಾಣಿಸುತ್ತಿದ್ದರು. ಅವಳಿಗೆ ಇದು ತನ್ನನ್ನು ಮದುವೆಯಾಗಲು ಬಯಸಿದ್ದ ದೇವತೆಗಳ ಕುಟಿಲತೆ ಎಂಬುದು ಅರ್ಥವಾಯಿತು. ಅದಕ್ಕಾಕೆ ಕೈಮುಗಿದು "ದೇವತೆಗಳೇ, ನಾನು ನಳನನ್ನು ಮನಸಾರೆ ಪ್ರೀತಿಸಿರುವೆ, ಅವನನ್ನು ಈಗಾಗಲೇ ಮಾನಸಿಕವಾಗಿ ಮದುವೆಯಾಗಿರುವೆ. ಅಲ್ಲದೆ ಮಾನವಳಾದ ನಾನು ದೇವತೆಗಳನ್ನು ಮದುವೆಯಾಗುವುದು ಸರಿಯಲ್ಲ. ಆದ್ದರಿಂದ ನೀವು ನಾನು ಮದುವೆಯಾಗಲು ಬಯಸಿರುವ ನಳನನ್ನು ದಯಮಾಡಿ ತೋರಿಸಿ..." ಎಂದು ಪ್ರಾರ್ಥಿಸಿದಳು. ದಮಯಂತಿಯ ಕೋರಿಕೆಗೆ ಮನಸೋತು ದೇವತೆಗಳು ತಮ್ಮ ನೈಜ ರೂಪದೊಂದಿಗೆ ಪ್ರತ್ಯಕ್ಷವಾದರು. ಜೊತೆಗೆ ಅವಳ ಪರಿಶುದ್ಧ ಪ್ರೇಮವನ್ನು ಮೆಚ್ಚಿ ನೀರು, ಬೆಂಕಿಗಳಿಲ್ಲದೇ ಪಾಕ ತಯಾರಿಸುವ ವಿದ್ಯೆಯನ್ನು ಕಲಿಸಿ ಹರಸಿ ಹೋದರು. ದಮಯಂತಿ ನಳರಾಜನ ಪತ್ನಿಯಾಗಿ ನಿಷಧ ದೇಶಕ್ಕೆ ಬಂದಳು. ನಳ ದಮಯಂತಿಯ ಸರಸ ಸಲ್ಲಾಪಗಳ ಫಲವಾಗಿ ಇಬ್ಬರು ಮುದ್ದಾದ ಮಕ್ಕಳು ಜನಿಸಿದರು. ಅವರಿಬ್ಬರ ಸಂಸಾರ ಸಂತೋಷದಿಂದ ಸಾಗಿತು.
ನಳನ ಸಂಸಾರ ಸುಸೂತ್ರವಾಗಿ ಸಾಗಿತ್ತು. ಆದರೆ ಶನಿಗೆ ಅವನನ್ನು ಕಾಡಲೇಬೇಕಿತ್ತು. ಹೀಗಾಗಿ ಶನಿ ಅವಕಾಶಕ್ಕಾಗಿ ಕಾಯುತ್ತಾ ಕುಳಿತ್ತಿದ್ದನು. ಅದೇ ಸಂದರ್ಭದಲ್ಲಿ ನಳರಾಜನು ತಪ್ಪಿ ಅಶುದ್ಧವಾದ ನೀರನ್ನು ಕುಡಿದನು. ಈ ಅವಕಾಶವನ್ನು ಅಸ್ತ್ರವಾಗಿ ಬಳಸಿಕೊಂಡು ಶನಿ ನಳನನ್ನು ಕಾಡಲು ಪ್ರಾರಂಭಿಸಿದನು. ನಳನ ಸಹೋದರನಾದ ಪುಷ್ಕರನನ್ನು ಪ್ರೇರೇಪಿಸಿ ಜೂಜಾಟ ಆಡುವಂತೆ ಮಾಡಿದನು. ಆ ಜೂಜಾಟದಲ್ಲಿ ಶನಿಯ ಅಪಕೃಪೆಯಿಂದ ನಳರಾಜ ಸೋತು ಎಲ್ಲವನ್ನೂ ಕಳೆದುಕೊಂಡು ಬರಿಗೈ ದಾಸನಾದನು. ಜೂಜಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾ ನಳರಾಜ ತನ್ನ ಮಕ್ಕಳನ್ನು ಕುಂಡಿನಪುರಕ್ಕೆ ಕಳುಹಿಸಿ ಪತ್ನಿ ದಮಯಂತಿಯೊಂದಿಗೆ ಕಾಡು ಸೇರಿದನು. ಮಹಾರಾಣಿಯಾಗಿ ಮೆರೆಯಬೇಕಿದ್ದ ದಮಯಂತಿ ನಳನೊಂದಿಗೆ ಕಾಡಿನಲ್ಲಿ ಆಹಾರಕ್ಕಾಗಿ ಅಲೆಯುವಂತಾಯಿತು.
ಕಾಡಿನಲ್ಲಿ ಅನ್ನ ನೀರಿಗಾಗಿ ಅಲೆದು ಸುಸ್ತಾಗಿದ್ದ ದಮಯಂತಿ ಒಂದು ತಂಪಾದ ಮರದ ಕೆಳಗೆ ನಿದ್ರೆಗೆ ಜಾರಿದಳು. ಆಗ ಅವಳ ಕಾವಲಿಗೆ ಕುಳಿತ್ತಿದ್ದ ನಳರಾಜನ ಕಣ್ಣಿಗೆ ಬಂಗಾರದ ಬಣ್ಣದ ಎರಡು ಪಕ್ಷಿಗಳು ಕಂಡವು. ಆಗ ಅವನ ಮನಸ್ಸಲ್ಲಿ "ಆ ಪಕ್ಷಿಗಳನ್ನು ಹಿಡಿದು ಮಾರಾಟ ಮಾಡಿದರೆ ದುಡ್ಡು ಸಿಗಬಹುದು..." ಎಂಬ ದೂರಾಲೋಚನೆ ಮೂಡಿತು. ಕೂಡಲೇ ಆತ ಆ ಪಕ್ಷಿಗಳನ್ನು ಹಿಡಿಯುವುದಕ್ಕಾಗಿ ತಾನು ಧರಿಸಿದ್ದ ಬಟ್ಟೆಗಳನ್ನು ಆ ಪಕ್ಷಿಗಳ ಮೇಲೆ ಎಸೆದನು. ಆದರೆ ಆ ಪಕ್ಷಿಗಳು ಬಟ್ಟೆಗಳ ಸಮೇತ ಹಾರಿಹೋದಾಗ ನಳರಾಜ ಅರೆಬೆತ್ತಲಾದನು. ನಳರಾಜನಿಗೆ ಅತೀವ ನಿರಾಸೆಯಾಯಿತು. ಅಲ್ಲದೆ ದಮಯಂತಿಯ ಬಗ್ಗೆ ಯೋಚಿಸಿ ದು:ಖವಾಯಿತು. "ನಾನು ದಮಯಂತಿಯನ್ನು ಹೀಗೆಯೆ ಕಾಡಿನಲ್ಲಿ ಬಿಟ್ಟು ಹೋದರೆ ಆಕೆ ಅತ್ತು ತನ್ನ ತಂದೆಯ ಮನೆಗೆ ಹೋಗಿ ಸ್ವಲ್ಪ ದಿನಗಳು ಕಳೆದ ನಂತರ ಸುಖವಾಗಿರುತ್ತಾಳೆ..." ಎಂದು ಭಾವಿಸಿ ನಳರಾಜ ದಮಯಂತಿಯ ಸೀರೆಯ ಸ್ವಲ್ಪ ಭಾಗವನ್ನು ಹರಿದು ಅದರಿಂದ ತನ್ನ ಮಾನ ಮುಚ್ಚಿಕೊಂಡು ಅವಳನ್ನು ಅಲ್ಲೇ ಬಿಟ್ಟು ಹೊರಟು ಹೋದನು.
ನಳ ಹೋದ ಕೆಲವು ಗಂಟೆಗಳ ನಂತರ ನಿದ್ರೆಯಿಂದೆದ್ದ ದಮಯಂತಿ ನಳನನ್ನು ಕಾಣದೇ ಅತ್ಯಂತ ದುಃಖಿತಳಾದಳು. ಆಕೆ ತನ್ನ ತವರು ಮನೆಗೆ ಹೋಗುವ ಬದಲು ಅದೇ ಕಾಡಲ್ಲಿದ್ದುಕೊಂಡು ನಳನನ್ನು ಹುಡುಕಲು ಪ್ರಾರಂಭಿಸಿದಳು. ಆದರೆ ಆಕೆ ಕಾಡಲ್ಲಿದ್ದ ಬೇಟೆಗಾರರ ವಶವಾದಳು. ಅದೃಷ್ಟವೆಂಬಂತೆ ಕಾಡಿನಿಂದ ಹೋಗುತ್ತಿದ್ದ ಕೆಲವು ವ್ಯಾಪಾರಿಗಳಿಂದ ಆಕೆ ರಕ್ಷಿಸಲ್ಪಟ್ಟಳು. ನಂತರ ಆಕೆ ಚೇದಿರಾಜನ ಆಸ್ಥಾನಕ್ಕೆ ತಲುಪಿ ಅಲ್ಲಿನ ಮಹಾರಾಣಿಯನ್ನು ಕಾಡಿಬೇಡಿ ಅಂತಃಪುರದ ದಾಸಿಯಾದಳು.
ದಮಯಂತಿ ಇಷ್ಟೋತ್ತಿಗೆ ಅವಳ ತವರಿಗೆ ತಲುಪಿ ಸುರಕ್ಷಿತವಾಗಿರುತ್ತಾಳೆ ಎಂಬ ಭ್ರಮೆಯಲ್ಲಿ ನಳರಾಜ ಕಾಡಲ್ಲಿ ಅಲೆಯುತ್ತಿದ್ದನು. ಆದರೆ ಅವಳು ತವರಿಗೆ ಹೋಗದೆ ಚೇದಿರಾಜನ ರಾಣಿಯ ದಾಸಿಯಾಗಿದ್ದಳು. ನಳನ ಲೆಕ್ಕಾಚಾರ ತಲೆಕೆಳಗಾಗಿತ್ತು. ಗೂಢಾಚಾರರ ಮೂಲಕ ದಮಯಂತಿಯ ತಂದೆ ಭೀಷ್ಮಕನಿಗೆ ತಮ್ಮ ಮಗಳು ಮತ್ತು ಅಳಿಯ ಎಲ್ಲವನ್ನು ಕಳೆದುಕೊಂಡು ಕಾಡು ಪಾಲಾಗಿರುವ ಸುದ್ದಿ ತಿಳಿಯಿತು. ಭೀಷ್ಮಕ ರಾಜ ಅತ್ಯಂತ ದು:ಖಿತನಾಗಿ ಮಗಳು ಮತ್ತು ಅಳಿಯನನ್ನು ಹುಡುಕಲು ಸೈನಿಕರನ್ನು ನಿಯೋಜಿಸಿದನು. ಅವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ನಳ ದಮಯಂತಿಯರನ್ನು ಹುಡುಕಲು ಪ್ರಾರಂಭಿಸಿದರು.
ಒಮ್ಮೆ ನಳರಾಜನು ಕಾಡಿನಲ್ಲಿ ಅಲೆಯುತ್ತಿರುವಾಗ ಅವನ ಕಣ್ಣಿಗೆ ಬೆಂಕಿಯಲ್ಲಿ ಬಿದ್ದು ಬೇಯುತ್ತಿದ್ದ ಕಾರ್ಕೋಟಕ ಸರ್ಪ ಬಿದ್ದಿತು. ನಳನನ್ನು ನೋಡಿ ಆ ಸರ್ಪ "ಮಹಾರಾಜ ನನ್ನನ್ನು ರಕ್ಷಿಸು..." ಎಂದು ಬೇಡಿಕೊಂಡಿತು. ನಳರಾಜ ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಆ ಕಾರ್ಕೋಟಕ ಸರ್ಪ ನಳರಾಜನನ್ನೇ ಕಚ್ಚಿತು. ಇದರಿಂದಾಗಿ ನಳನ ದೇಹ ವಿಕಾರವಾಯಿತು. ಆಗ ಕಾರ್ಕೋಟಕ ನಳನಿಗೆ "ನಳರಾಜ ಚಿಂತಿಸಬೇಡಿ. ಈ ವಿಕಾರ ಸ್ವರೂಪದಿಂದ ನಿನಗೆ ಲಾಭವಿದೆ. ನಿನಗೆ ಬೇಕಾದಾಗ ನೀನು ನನ್ನನ್ನು ಸ್ಮರಿಸಿ ನಿನಗೆ ಮೊದಲಿನ ಸುಂದರ ಸ್ವರೂಪ ಸಿಗುವುದು..." ಎಂದೇಳಿ ಮಾಯವಾಯಿತು. ನಂತರ ನಳರಾಜ ಬಾಹುಕನೆಂಬ ಹೆಸರಿಟ್ಟುಕೊಂಡು ಅಯೋಧ್ಯೆಯ ರಾಜ ಋತುಪರ್ಣನ ಆಶ್ರಯ ಪಡೆದುಕೊಂಡನು. ಅಲ್ಲಿ ನಳರಾಜ ಕುದುರೆಗಳನ್ನು ನೋಡಿಕೊಳ್ಳುವುದರ ಜೊತೆಗೆ ಅಡುಗೆ ಮನೆಯಲ್ಲಿನ ಕೆಲಸಗಳನ್ನು ಮಾಡುತ್ತಿದ್ದನು. ನಳನ ಪಾಕ ಕಲೆಗೆ ಮತ್ತು ಕೈರುಚಿಗೆ ಎಲ್ಲರೂ ಮನಸೋತಿದ್ದರು. ಅಷ್ಟರಲ್ಲಿ ಭೀಷ್ಮಕನ ಸೈನಿಕರು ಚೇದಿ ರಾಜ್ಯದಲ್ಲಿ ದಾಸಿಯಾಗಿದ್ದ ದಮಯಂತಿಯನ್ನು ಗುರ್ತಿಸಿ ಅವಳನ್ನು ಮರಳಿ ತವರಿಗೆ ಕರೆದುಕೊಂಡು ಹೋದರು. ನಂತರ ನಳನನ್ನು ಹುಡುಕುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ನಳನ ಪಾಕ ಕಲೆಗಳ ಪರಿಚಯವಿದ್ದ ದಮಯಂತಿಗೆ ಋತುಪರ್ಣನ ಆಸ್ಥಾನದಲ್ಲಿರುವ ಬಾಹುಕನೇ ನಳನೆಂಬ ಅನುಮಾನ ಹುಟ್ಟಿಕೊಂಡಿತು. ಹೀಗಾಗಿ ಆಕೆ "ದಮಯಂತಿಯ ಎರಡನೇ ಸ್ವಯಂವರ ನಡೆಯಲಿದೆ..." ಎಂಬ ಸುಳ್ಳು ಸುದ್ದಿಯನ್ನು ಋತುಪರ್ಣನಿಗೆ ಕಳುಹಿಸಿದಳು. ಈ ಸುದ್ದಿ ಬಾಹುಕನ ವೇಷದಲ್ಲಿದ್ದ ನಳಿನಿಗೂ ಸಹ ತಲುಪಿತು. ತಡಮಾಡದೆ ಬಾಹುಕ ಋತುಪರ್ಣನೊಂದಿಗೆ ವೇಗವಾಗಿ ರಥವನ್ನು ಓಡಿಸಿಕೊಂಡು ವಿದರ್ಭ ರಾಜ್ಯಕ್ಕೆ ಹೊರಟನು. ವೇಗವಾಗಿ ಕುದುರೆ ಓಡಿಸುತ್ತಿರುವ ಬಾಹುಕನ ಮೇಲೆ ಋತುಪರ್ಣನಿಗೆ ಬಹಳಷ್ಟು ಆಶ್ಚರ್ಯವಾಯಿತು. ಅದಕ್ಕಾಗಿ ಆತ ಬಾಹುಕನಿಗೆ "ಯಾರು ನೀನು? ನಿಜಹೇಳು" ಎಂದನು. ಆಗ ಬಾಹುಕ ತಾನೇ ನಳನೆಂದು ಒಪ್ಪಿಕೊಂಡನು. ಋತುಪರ್ಣ ನಳರಾಜನಿಗೆ ಅಕ್ಷವಿದ್ಯೆಯನ್ನು (ಜೂಜಾಡುವ ಕಲೆ) ಕಲಿಸಿದನು. ಅದಕ್ಕೆ ಬದಲಾಗಿ ನಳ ಅವನಿಗೆ ಅಶ್ವ ವಿದ್ಯೆಯನ್ನು (ಕುದುರೆ ಓಡಿಸುವ ಕಲೆ) ಕಲಿಸಿದನು. ನಂತರ ಅವರಿಬ್ಬರು ದಮಯಂತಿಯ ಸ್ವಯಂವರವನ್ನು ತಡೆಯಲು ವೇಗವಾಗಿ ಧಾವಿಸಿದರು.
ಬಾಹುಕ ವಿದರ್ಭಕ್ಕೆ ತಲುಪಿದ ನಂತರ ಅವನನ್ನು ಪರೀಕ್ಷಿಸುವುದಕ್ಕಾಗಿ ದಮಯಂತಿ ತನ್ನ ಮಕ್ಕಳನ್ನು ಅವನೆಡಗೆ ಕಳುಹಿಸಿದಾಗ ಅವಳಿಗೆ ಬಾಹುಕನೇ ನಳನೆಂಬುದು ಗೊತ್ತಾಯಿತು. ಆಗ ಬಾಹುಕ "ತನ್ನ ಕುರೂಪ ವೇಷವನ್ನು ನೋಡಿಯೂ ಮತ್ತೆ ನನ್ನನ್ನು ಪತಿಯಾಗಿ ಸ್ವೀಕರಿಸುವೆಯಾ?" ಎಂದು ಕೇಳಿದಳು. ಅದಕ್ಕೆ ದಮಯಂತಿ ನಿಮ್ಮ ಸೌಂದರ್ಯವನ್ನು ನೋಡಿ ನಾನು ನಿಮ್ಮನ್ನು ಪ್ರೀತಿಸಿಲ್ಲ. ನಿಮ್ಮ ಮುಖ ನೋಡದೇನೆ ನಿಮ್ಮನ್ನು ಪ್ರೀತಿಸಿ ಮದುವೆಯಾಗಿದ್ದನ್ನು ಮರೆತು ಹೋದಿರಾ?" ಎಂದು ಪ್ರಶ್ನಿಸಿದಳು. ದಮಯಂತಿಯ ಮಾತು ಬಾಹುಕನ ಮನಸ್ಸಿಗೆ ಮುದ್ದಾಗಿ ಚುಚ್ಚಿತು. ಆಗ ಬಾಹುಕ ಕಾರ್ಕೋಟಕನನ್ನು ಸ್ಮರಿಸಿ ತನ್ನ ಮೊದಲಿನ ಸುಂದರ ರೂಪವನ್ನು ಧರಿಸಿ ಮತ್ತೆ ನಳನಾದನು. ನಳ ದಮಯಂತಿಗೆ ಆಕೆಯ ಎರಡನೆಯ ಸ್ವಯಂವರದ ಬಗ್ಗೆ ಕೇಳಿದಾಗ ಆಕೆ ನಗುತ್ತಾ "ಇದು ನಿಮ್ಮನ್ನು ಇಲ್ಲಿಗೆ ಕರೆಸಲು ಮಾಡಿದ ಒಂದು ಸಣ್ಣ ಉಪಾಯವೆಂದು ಹೇಳಿ ಸುಮ್ಮನಾದಳು. ನಂತರ ನಳರಾಜ ತನ್ನ ಸೋದರ ಪುಷ್ಕರನೊಂದಿಗೆ ಜೂಜಾಡಿ ತಾನು ಕಳೆದುಕೊಂಡಿದ್ದೆಲ್ಲವನ್ನು ಮರಳಿ ಪಡೆದನು. ನಂತರ ಮುದ್ದಿನ ಮಡದಿ ದಮಯಂತಿಯೊಂದಿಗೆ ಸರಸವಾಡುತ್ತಾ, ಎರಡು ಮುದ್ದಾದ ಮಕ್ಕಳೊಂದಿಗೆ ತುಂಟಾಟವಾಡುತ್ತಾ ನಳರಾಜ ಸಂತೋಷದಿಂದ ರಾಜ್ಯಭಾರ ಮಾಡಿಕೊಂಡಿರಲು ಪ್ರಾರಂಭಿಸಿದನು...
ಈ ರೀತಿ ನಳ ದಮಯಂತಿಯರ ಅಮರ ಪ್ರೇಮಕಥೆ ಮುಕ್ತಾಯವಾಗುತ್ತದೆ. ಪ್ರಾಚೀನ ಪ್ರೇಮಕಥೆಗಳನ್ನು ಗಮನಿಸಿದರೆ ಈಗಿನ ಪ್ರೇಮಿಗಳ ಮೇಲೆ ದ್ವೇಷ ಹುಟ್ಟುತ್ತದೆ. ನಿಮಗೆ ಏನನ್ನಿಸುತ್ತದೆ ಎಂಬುದನ್ನು ತಪ್ಪದೆ ಕಮೆಂಟ ಮಾಡಿ. ಜೊತೆಗೆ ಈ ಅಂಕಣವನ್ನು ಎಲ್ಲೆಡೆಗೆ ಶೇರ್ ಮಾಡಿ...