ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

                ಗಾಧಿತನಯನಾದ ಕೌಶಿಕ ರಾಜ ಕುಶ ರಾಜ್ಯವನ್ನು ಆಳಿಕೊಂಡು ಖುಷಿಯಾಗಿದ್ದನು. ಶಾಸ್ತ್ರದ ಜೊತೆಗೆ ಸಕಲ ಶಸ್ತ್ರವಿದ್ಯೆಗಳನ್ನು ಕಲಿತು ಕೌಶಿಕ ಅತ್ಯಂತ ಪರಾಕ್ರಮಿಯಾದನು. ತನ್ನ ಪರಾಕ್ರಮದಿಂದ ಸುತ್ತಮುತ್ತಲಿನ ಸಾಮಂತರನ್ನೆಲ್ಲ ಸದೆ ಬಡಿದು ಸಾಮ್ರಾಜ್ಯವನ್ನು ವಿಸ್ತರಿಸಿ ಕೌಶಿಕ ಸಾಮ್ರಾಟನಾದನು. ಆತ ಒಮ್ಮೆ ಪರಿವಾರ ಸಮೇತನಾಗಿ ಬ್ರಹ್ಮರ್ಷಿಗಳಾದ ವಸಿಷ್ಟರ ಆಶ್ರಮಕ್ಕೆ ಹೋದನು. ಆಗ ವಸಿಷ್ಠರು ಸಕಲ ರಾಜ ಪರಿವಾರವನ್ನು ನಂದಿನಿಯ ಕರುಣೆಯಿಂದ ಉಪಚರಿಸಿದರು. ಕೇಳಿದ್ದನ್ನು ತಕ್ಷಣವೇ ಕೊಡುವ ಕಾಮಧೇನು ನಂದಿನಿಯನ್ನು ಕಂಡು ಕೌಶಿಕ ರಾಜನ ಮನ ಚಂಚಲವಾಯಿತು. ಅವನಿಗೆ ನಂದಿನಿಯನ್ನು ಹೊಂದುವ ಆಸೆಯಾಯಿತು. ಅದಕ್ಕಾಗಿ ಆತ ವಶಿಷ್ಟರಿಗೆ ನಂದಿನಿಯನ್ನು ಕೊಡುವಂತೆ ಬೇಡಿಕೆ ಇಟ್ಟನು. ಅವನಾಸೆಗೆ ವಸಿಷ್ಠರು ಒಪ್ಪದಿದ್ದಾಗ "ನಂದಿನಿಯ ಬದಲಾಗಿ ಕೋಟಿ ಗೋವುಗಳನ್ನು ಕೊಡುತ್ತೇನೆ..." ಎಂಬ ಆಮಿಷವನ್ನು ಒಡ್ಡಿದನು. ಈಗಲೂ ವಸಿಷ್ಟರು ಒಪ್ಪದಿದ್ದಾಗ ಕೌಶಿಕ ರಾಜ ಕ್ರೋಧಿತನಾದನು. ಆತ ಬಲವಂತದಿಂದ ನಂದಿನಿಯನ್ನು ಒಳೆದೊಯ್ಯಲು ತನ್ನ ಸೈನಿಕರಿಗೆ ಆದೇಶಿಸಿದನು. ಆದರೆ ವಸಿಷ್ಟರು ತಮ್ಮ ಬ್ರಹ್ಮದಂಡವನ್ನು ಮುಂದಿರಿಸಿಕೊಂಡು ತಪೋನಿರತರಾದಾಗ ಕೌಶಿಕನ ಎಲ್ಲ ಶಸ್ತ್ರಾಸ್ತ್ರಗಳನ್ನು ಅವರ ಬ್ರಹ್ಮದಂಡವು ನುಂಗಿತು. ನಂದಿನಿಯನ್ನು ಒಳದೊಯ್ಯಲಾಗದೆ ತಲೆ ತಗ್ಗಿಸಿ ಕೌಶಿಕ ರಾಜ ತನ್ನ ಅರಮನೆಗೆ ಮರಳಿದನು.

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

                ವಸಿಷ್ಠರ ಆಶ್ರಮದಲ್ಲಾದ ಅವಮಾನವನ್ನು ಕೌಶಿಕ ರಾಜ ಹಗುರವಾಗಿ ತೆಗೆದುಕೊಳ್ಳಲಿಲ್ಲ. ಅವನಿಗೆ ಕ್ಷತ್ರಿಯರ ಶಸ್ತ್ರ ಬಲಕ್ಕಿಂತ ಬ್ರಹ್ಮತೇಜದ ಬಲವೇ ಅತ್ಯಂತ ಶ್ರೇಷ್ಠ ಎಂದೆನಿಸಿತು. ಅದಕ್ಕಾಗಿ ಕೌಶಿಕ ರಾಜ ತನ್ನ ಸಾಮ್ರಾಜ್ಯವನ್ನೆಲ್ಲ ಮಂತ್ರಿಗಳಿಗೆ ಒಪ್ಪಿಸಿ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದನು. ಕೌಶಿಕ ರಾಜ ಕಠಿಣವಾದ ತಪಸ್ಸುಗಳನ್ನು ಆಚರಿಸಿ ಹಲವಾರು ಸಿದ್ಧಿಗಳನ್ನು ಸಾಧಿಸಿ ವಿಶ್ವಾಮಿತ್ರನೆಂದು ಪ್ರಸಿದ್ಧಿ ಪಡೆದನು. ಎಷ್ಟೇ ಸಿದ್ಧಿಗಳನ್ನು ಸಾಧಿಸಿದರೂ ವಿಶ್ವಾಮಿತ್ರನ ಮನ ಶಾಂತವಾಗಲಿಲ್ಲ. ಏಕೆಂದರೆ ವಶಿಷ್ಟರಿಂದ ಬ್ರಹ್ಮರ್ಷಿಯೆಂದು ಕರೆಯಿಸಿಕೊಳ್ಳುವ ಹಂಬಲ ವಿಶ್ವಾಮಿತ್ರನಿಗಿತ್ತು. ಅದಕ್ಕಾಗಿ ಆತ ಘೋರ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದನು. ಇದೇ ರೀತಿ ಘೋರ ತಪಸ್ಸನ್ನು ಆಚರಿಸಿ ಹೊಸದಾದ ಸೃಷ್ಟಿಯನ್ನು ರೂಪಿಸುವುದು ವಿಶ್ವಾಮಿತ್ರನ ಉದ್ದೇಶವಾಗಿತ್ತು. ವಿಶ್ವಾಮಿತ್ರನ ಘೋರ ತಪಸ್ಸಿನ ಸುದ್ದಿ ದೇವತೆಗಳ ರಾಜ ದೇವೆಂದ್ರನಿಗೆ ತಲುಪಿತು. ವಿಶ್ವಾಮಿತ್ರ ಹೀಗೆಯೇ ತಪಸ್ಸು ಮಾಡಿದರೆ ಈಡೀ ಸ್ವರ್ಗವನ್ನೇ ಕೇಳಬಹುದೆಂದು ದೇವೇಂದ್ರ ಚಿಂತಿತನಾದನು.

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

                           ಚಳಿ, ಮಳೆ, ಗಾಳಿ, ಬಿಸಿಲುಗಳ ಪರಿವಿಲ್ಲದೆ ವಿಶ್ವಾಮಿತ್ರನ ತಪಸ್ಸು ಯಶಸ್ವಿಯಾಗಿ ಸಾಗಿತ್ತು. ಆದರೆ ದೇವೆಂದ್ರನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಯಿತು. ಕೊನೆಗೆ ದೇವೇಂದ್ರ ಹೇಗಾದರೂ ಮಾಡಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸಿದನು. ಅದಕ್ಕಾಗಿ ಆತ ದೇವಲೋಕದ ಸುಂದರ ಅಪ್ಸರೆ ಮೇನಕೆಯನ್ನು ಕರೆದು ಅವಳಿಗೆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸುವ ಜವಾಬ್ದಾರಿಯನ್ನು ವಹಿಸಿದನು. ಮೇನಕೆ ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ಅಪರೂಪದ ಅಪ್ಸರೆಯಾಗಿದ್ದಳು. ಅವಳ ಸೌಂದರ್ಯದ ಮೇಲೆ ದೇವೇಂದ್ರನಿಗೆ ಅಭಿಮಾನವಿತ್ತು. ಅದಕ್ಕಾಗಿ ಆತ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ಮೇನಕೆಯನ್ನೇ ಭೂಮಿಗೆ ಕಳುಹಿಸಿದನು.

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

           ಕ್ರೂರ ಕಾಡು ಪ್ರಾಣಿಗಳ ಕೀರುಚಾಟದಲ್ಲಿ ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೇ ತಪಸ್ಸನ್ನು ಆಚರಿಸುತ್ತಾ ಕುಳಿತ ವಿಶ್ವಾಮಿತ್ರನನ್ನು ನೋಡಿ ಮೇನಕೆ ಆಶ್ಚರ್ಯ ಚಕಿತಳಾದಳು. ಅವನನ್ನು ನೋಡಿದ ಮೊದಲ ಕ್ಷಣದಿಂದಲೇ ಮೇನಕೆ ತನ್ನ ಕೆಲಸವನ್ನು ಪ್ರಾರಂಭಿಸಿದಳು. ಅವನ ತಪಸ್ಸನ್ನು ಭಂಗಗೊಳಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿದಳು. ಮೇನಕೆ ಪಕ್ಷಿಗಳ ಕಲರವದ ಜೊತೆಗೆ ತನ್ನ ಸುಮಧುರ ಧ್ವನಿಯನ್ನು ಜೊತೆಗೂಡಿಸಿ ಹಾಡಿದಳು, ತಂಗಾಳಿಯ ಹೆಜ್ಜೆಗಳನ್ನು ಅನುಕರಿಸುತ್ತಾ ಗೆಜ್ಜೆ ಕಟ್ಟಿ ಕುಣಿದಳು. ಆದರೂ ವಿಶ್ವಾಮಿತ್ರ ಅವಳನ್ನು ಗಮನಿಸಲಿಲ್ಲ. ಏಕೆಂದರೆ ಅವನಲ್ಲಿ ಭಾವನೆಗಳು ಬತ್ತಿ ಹೋಗಿದ್ದವು. ಕಠಿಣ ತಪಸ್ಸಿನಿಂದ ಅವನ ಮನಸ್ಸು ಕಲ್ಲಾಗಿದ್ದರೆ, ದೇಹ ಕಬ್ಬಿಣವಾಗಿತ್ತು. ಆದರೂ ಮೇನಕೆ ತನ್ನ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಮೇನಕೆ ತನ್ನ ಸೀರೆಯ ಸೆರಗನ್ನು ಗಾಳಿಯಲ್ಲಿ ತೇಲಿಬಿಟ್ಟು ವಿಶ್ವಾಮಿತ್ರನ ಸಮೀಪಕ್ಕೆ ಸುಳಿದಾಡಿದಳು. ಆಗ ವಿಶ್ವಾಮಿತ್ರ ಕಣ್ತೆರೆದನು. ಮೇನಕೆಯ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ಕೈಬೀಸಿ ಕರೆಯುವ ಕಿವಿಯೋಲೆ, ಎದೆಚುಚ್ಚುವ ತುಟಿಗಳು, ಅರ್ಧಂಬರ್ಧ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು, ಮಾದಕವಾದ ಮೈಮಾಟಗಳನ್ನೆಲ್ಲ ನೋಡಿ ವಿಶ್ವಾಮಿತ್ರ ಹುಚ್ಚನಾದನು. ಮೇನಕೆಯ ಸೌಂದರ್ಯದ ಸೆಳೆತಕ್ಕೆ ಸೋತು ವಿಶ್ವಾಮಿತ್ರ ತನ್ನ ತಪಸ್ಸನ್ನು ಅರ್ಧಕ್ಕೆ ಕೈಬಿಟ್ಟನು. ಈ ರೀತಿ ಕೊನೆಗೂ ಮೇನಕೆಯ ಕಾಮದ ನೆರಳು ವಿಶ್ವಾಮಿತ್ರನ ತಪಸ್ಸನ್ನು ಮುರಿಯುವಲ್ಲಿ ಸಫಲವಾಯಿತು.

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

                  ವಿಶ್ವಾಮಿತ್ರ ತನ್ನ ತಪಸ್ಸನ್ನು ಮರೆತು ಮೇನಕೆಯೊಂದಿಗೆ ಮೈಮರೆತನು. ಮೇನಕೆ ದೇವೇಂದ್ರ ತನಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದಳು. ವಿಶ್ವಾಮಿತ್ರನೊಂದಿಗೆ ಹುಸಿ ಪ್ರೇಮದ ನಾಟಕವಾಡುತ್ತಾ ಅವನನ್ನು ತನ್ನ ಸೌಂದರ್ಯದ ನೆರಳಲ್ಲಿ ನರಳುವಂತೆ ಮಾಡಿದಳು. ವಿಶ್ವಾಮಿತ್ರ ಹಗಲು ರಾತ್ರಿಗಳನ್ನು ಲೆಕ್ಕಿಸದೆ ಮೇನಕೆಯ ಸೆರಗು ಸೋಕಿ ತನ್ನ ಸಿದ್ಧಿಗಳನ್ನೆಲ್ಲ ಕಳೆದುಕೊಂಡನು. ಆದರೂ ಆತ ಮೇನಕೆಯನ್ನು ಬಿಡುವ ಮನಸ್ಸನ್ನು ಮಾಡಲಿಲ್ಲ. ಆತ ಅವಳ ಸೌಂದರ್ಯವನ್ನು ಮನಬಂದಂತೆ ಅನುಭವಿಸಿದನು. ಅವನ ಮನಸ್ಸು ಮೇನಕೆಯ ಸುಂದರವಾದ ಮೈ ಮೇಲಿತ್ತು. ಆದರೆ ಅವಳ ಮನಸ್ಸು ಸ್ವರ್ಗಲೋಕದ ಸುಖಗಳ ನೆನಪುಗಳಲ್ಲಿ ಸುತ್ತುತ್ತಿತ್ತು. ಮೇನಕೆ ದೇವೇಂದ್ರ ಹೇಳಿದಂತೆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ್ದಳು. ಅದಕ್ಕಾಗಿ ಆಕೆ ಬೇಗನೆ ಸ್ವರ್ಗಕ್ಕೆ ಹಿಂತಿರುಗಲು ಹಾತೊರೆಯುತ್ತಿದ್ದಳು. ಆದರೆ ಮತ್ತೆ ವಿಶ್ವಾಮಿತ್ರ ತನ್ನ ತಪಸ್ಸನ್ನು ಪ್ರಾರಂಭಿಸಬಹುದೆಂದು ಅವನೊಂದಿಗೆ ಅಲ್ಲಿಯೇ ಉಳಿದಳು. 

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

                             ಮೇನಕೆಯ ಅಸಹಾಯಕತೆಯ ಲಾಭ ಪಡೆದುಕೊಂಡು ವಿಶ್ವಾಮಿತ್ರ ಅವಳ ಸೌಂದರ್ಯವನ್ನು ಸರಿಯಾಗಿ ಬೇಟೆಯಾಡಿದನು. ಆತ ಅವಳನ್ನು ನಿಜವಾಗಿಯೂ ಪ್ರೀತಿಸಲು ಪ್ರಾರಂಭಿಸಿದನು. ಆದರೆ ಆಕೆ ಪ್ರೀತಿಸುವ ನಾಟಕವಾಡುತ್ತಿದ್ದಳು. ಅವರಿಬ್ಬರ ಮಾಯಾ ಪ್ರೀತಿಯ ಸಂಕೇತವಾಗಿ ಒಂದು ಹೆಣ್ಣು ಮಗು ಜನ್ಮ ತಾಳಿತು. ವಿಶ್ವಾಮಿತ್ರ ನಿರಂತರವಾಗಿ ಮೇನಕೆಯನ್ನು ಅನುಭವಿಸುತ್ತಾ ವರ್ಷಗಳನ್ನು ಕಳೆದನು. ಅವನ ಸರಸ ಸಲ್ಲಾಪದಲ್ಲಿ ಇನ್ಮುಂದೆ ನರಳಲು ಇಷ್ಟವಿಲ್ಲದೆ ಮೇನಕೆ ವಿಶ್ವಾಮಿತ್ರನನ್ನು ಬಿಟ್ಟು ಸ್ವರ್ಗಕ್ಕೆ ಹಿಂತಿರುಗಲು ಸಿದ್ಧಳಾದಳು. ಹತ್ತು ವರ್ಷಗಳು ಕಳೆದ ನಂತರ ಋಷಿ ವಿಶ್ವಾಮಿತ್ರನಿಗೆ ತನ್ನ ತಪ್ಪಿನ ಅರಿವಾಯಿತು. ಜೊತೆಗೆ ಮೇನಕೆಯನ್ನು ಮುಂದಿಟ್ಟುಕೊಂಡು ದೇವೇಂದ್ರ ಮಾಡಿದ ಕುಟಿಲತೆಯೂ ಅರ್ಥವಾಯಿತು. ಕೋಪದಲ್ಲಿ ವಿಶ್ವಾಮಿತ್ರ ಮೇನೆಕೆಗೆ ಶಾಪವಿಟ್ಟು ಮತ್ತೆ ತಪಸ್ಸನ್ನಾಚರಿಸಲು ಕಾಡಿಗೆ ಹೋದನು.

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

       ವಿಶ್ವಾಮಿತ್ರ ಮತ್ತು ಮೇನಕೆಯರ ಪ್ರೀತಿಯ ಫಲವಾಗಿ ಜನಿಸಿದ ಹೆಣ್ಣು ಮಗುವನ್ನು ಮೇನಕೆ ಕಣ್ವ ಮಹರ್ಷಿಗಳಿಗೆ ಕೊಟ್ಟು ಆಕೆ ಸ್ವರ್ಗಕ್ಕೆ ಹಿಂತಿರುಗಿದಳು. ಆ ಹೆಣ್ಣು ಮಗು ಕಣ್ವರ ಸಾಕು ಮಗಳಾದಳು. ಅವಳೇ ಮುಂದೆ ಶಕುಂತಲೆ ಎಂಬ ಹೆಸರಿನಿಂದ ಪ್ರಖ್ಯಾತಳಾದಳು. ಅತ್ತ ಕಡೆ ವಿಶ್ವಾಮಿತ್ರ ಮೇನಕೆಯ ಮೈಮಾಟಕ್ಕೆ ಮರುಳಾಗಿ ಮೈಮರೆತ ತಪ್ಪಿಗೆ ಪಶ್ಚಾತ್ತಾಪಪಟ್ಟು ಮತ್ತೆ ಘೋರ ತಪಸ್ಸನ್ನಾಚರಿಸಿ ತನ್ನ ಸಿದ್ಧಿಗಳನ್ನು ಪುನ: ಸಂಪಾದಿಸಿದನು. ವಿಶ್ವಾಮಿತ್ರನಂಥ ಮಹಾನ್ ತಪಸ್ಸಿಗಳೇ ಹೆಣ್ಣಿನ ಸೌಂದರ್ಯಕ್ಕೆ ದಾಸರಾಗಿ ತಮ್ಮ ಸಿದ್ಧಿಗಳನ್ನು ತ್ಯಜಿಸಿರುವಾಗ ಇನ್ನು ನಮ್ಮ ಕಾಲೇಜ ಹುಡುಗರು ಹುಡುಗಿಯರ ಹಿಂದೆ ಅಲೆದು ಓದನ್ನು ನಿರ್ಲಕ್ಷಿಸುವುದರಲ್ಲಿ ಅಚ್ಚರಿಯೇನಿಲ್ಲ ಅನಿಸುತ್ತೆ. ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ...

ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada

Blogger ನಿಂದ ಸಾಮರ್ಥ್ಯಹೊಂದಿದೆ.