ಬ್ರಹ್ಮನ ಮಗನಾದ ಅತ್ರಿಮುನಿಯ ಕಣ್ಣುಗಳಿಂದ ಹಾಲಿನಂಥ ಮೈಬಣ್ಣ ಹೊಂದಿದ ಚಂದ್ರ ಜನಿಸಿದನು. ಆತ ಪರಾಕ್ರಮಿಯಾಗಿರುವುದರಿಂದ ಬ್ರಹ್ಮ ಚಂದ್ರನನ್ನು ಗ್ರಹಗಳ ಹಾಗೂ ನಕ್ಷತ್ರಗಳ ರಾಜನನ್ನಾಗಿ ನೇಮಿಸಿದನು. ಆದರೆ ಪರಾಕ್ರಮಿಯಾದ ಚಂದ್ರ ಮೂರು ಲೋಕಗಳನ್ನು ಜಯಿಸಿ ರಾಜಸೂಯ ಯಾಗವನ್ನು ಮಾಡಿದನು. ಮೂರು ಲೋಕಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಚಂದ್ರನಲ್ಲಿ ಒಣ ಅಹಂಕಾರ ಹೆಚ್ಚಾಗಿತ್ತು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಯಾರಿಲ್ಲವೆಂದು ಆತ ಮೆರೆಯುತ್ತಿದ್ದನು. ಅಲ್ಲದೇ ಚಂದ್ರನಲ್ಲಿ ಪ್ರೇಮ ಕಾಮಗಳ ಪ್ರಖರತೆ ಮೊದಲಿನಿಂದಲೂ ಅತ್ಯಧಿಕವಾಗಿತ್ತು. ಆತನ ಹೊಳೆಯುವ ಕಂಗಳು, ಹಾಲಿನಂಥ ಮೈಬಣ್ಣ, ಕ್ಷಾತ್ರ ತೇಜಸ್ಸಿಗೆ ಯಾವ ಸ್ತ್ರೀಯಾದರೂ ಸುಲಭವಾಗಿ ಸೋಲುತ್ತಿದ್ದಳು. ಆತ 27 ನಕ್ಷತ್ರಗಳನ್ನು ವಿವಾಹವಾದನು. 27 ಜನ ಮಡದಿಯರಲ್ಲಿ ರೋಹಿನಿ ಅವನಿಗೆ ಹೆಚ್ಚು ಮುದ್ದಿನವಳಾಗಿದ್ದಳು.
ದಿನ ಕಳೆದಂತೆ ಚಂದ್ರನ ಅಹಂಕಾರ ಹೆಚ್ಚಾಗುತ್ತಲೇ ಹೋಯಿತು. ಆತ ದೇವತೆಗಳ ಗುರುವಾದ ಬ್ರಹಸ್ಪತಿಯ ಹೆಂಡತಿ ತಾರೆಯ ಮೇಲೆ ಮೋಹಿತನಾದನು. ಅವಳಂದಕ್ಕೆ ಆಕರ್ಷಿತನಾಗಿ ಆತ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಈ ಮೂರು ಲೋಕಗಳಲ್ಲಿ ಯಾರು ಇಲ್ಲ ಎಂಬ ಮೊಂಡು ಧೈರ್ಯದ ಮೇಲೆ ಚಂದ್ರ ತಾರೆಯನ್ನು ಬಲವಂತವಾಗಿ ಹೊತ್ತುಕೊಂಡು ಹೋದನು. ಬ್ರಹಸ್ಪತಿ ನಾನಾ ರೀತಿಯಲ್ಲಿ ತನ್ನ ಹೆಂಡತಿಯನ್ನು ಮರಳಿ ಕೊಡುವಂತೆ ಎಷ್ಟೇ ಕೇಳಿಕೊಂಡರು ಸಹ ಚಂದ್ರ ತಾರೆಯನ್ನು ಬಿಟ್ಟು ಕೊಡಲಿಲ್ಲ. ಆತ ತಾರೆಯನ್ನು ತನ್ನ ವಶದಲ್ಲೇ ಇಟ್ಟುಕೊಂಡನು. ಇದರಿಂದಾಗಿ ಗುರು ಮತ್ತು ಚಂದ್ರರ ನಡುವೆ ವೈಷಮ್ಯ ಬೆಳೆಯಿತು. ಶಿವನ ಸಹಿತ ದೇವತೆಗಳೆಲ್ಲರು ಗುರುವಿನ ಬೆಂಬಲಕ್ಕೆ ನಿಂತರು. ತಮ್ಮ ಗುರು ಶುಕ್ರಾಚಾರ್ಯರೊಂದಿಗೆ ರಾಕ್ಷಸರೆಲ್ಲ ಚಂದ್ರನ ಬೆಂಬಲಕ್ಕೆ ನಿಂತರು.
ತಾರೆಗಾಗಿ ಗುರು ಹಾಗೂ ಚಂದ್ರನ ನೇತ್ರತ್ವದಲ್ಲಿ ದೇವ ದಾನವರ ನಡುವೆ ಭಯಂಕರ ಯುದ್ಧ ಪ್ರಾರಂಭವಾಯಿತು. ಈ ಯುದ್ಧದ ಭೀಕರ ಪರಿಣಾಮವನ್ನು ನೋಡಲಾಗದೆ ಗುರುವಿನ ತಂದೆಯಾದ ಅಂಗೀರಸ ಮುನಿಗಳು ಬ್ರಹ್ಮನ ಬಳಿ ಹೋಗಿ ಹೇಗಾದರೂ ಮಾಡಿ ದೇವ ದಾನವರ ಯುದ್ಧವನ್ನು ನಿಲ್ಲಿಸಲು ಸೂಚಿಸಿದನು. ಆಗ ಸ್ವತಃ ಬ್ರಹ್ಮನೇ ಖುದ್ದಾಗಿ ಯುದ್ಧಭೂಮಿಗೆ ಬಂದು ಚಂದ್ರನಿಗೆ ಧಿಕ್ಕಾರ ಹಾಕಿ ತಾರೆಯನ್ನು ಬ್ರಹಸ್ಪತಿಯ ವಶಕ್ಕೆ ಒಪ್ಪಿಸಿದನು. ಆದರೆ ಅಷ್ಟೊತ್ತಿಗೆ ತಾರೆ ಗರ್ಭವತಿಯಾಗಿದ್ದಳು. ಈ ವಿಷಯ ತಿಳಿದು ಗುರು ಕೆರಳಿ ಕೆಂಡಾಮಂಡಲವಾದನು. "ನೀನು ಈ ಕ್ಷಣವೇ ಗರ್ಭಪಾತ ಮಾಡಿಕೋ ಇಲ್ಲವಾದರೆ ನಿನ್ನನ್ನು ಸುಟ್ಟು ಬಿಡುವೆ..." ಎಂದು ಗುರು ಗುಡುಗಿದನು. ಆದರೆ ಸ್ವಲ್ಪ ಸಮಯದ ನಂತರ ಗುರುವಿನ ಕೋಪ ತಣ್ಣಗಾದಾಗ "ಗಂಡು ಮಗುವಾದರೆ ನಿನ್ನನ್ನು ಕ್ಷಮಿಸುವೆ..." ಎಂದೇಳಿ ಶಾಂತನಾದನು.
ಗುರುವಿನ ಕೋಪವೇನೋ ತಣ್ಣಗಾಯಿತು. ಆದರೆ ಸ್ವಾಭಿಮಾನಿಯಾದ ತಾರೆ ತಾನು ಪವಿತ್ರಳೆಂದು ಸಾರಲು ತನ್ನ ಗರ್ಭವನ್ನು ಕಳಚಿ ಹಾಕಿದಳು. ಅವಳ ಗರ್ಭದಿಂದ ಹೊರಬಿದ್ದ ಮಗು ಚಂದ್ರನಂತೆ ಹೊಳೆಯುತ್ತಿತ್ತು. ಬೆಳ್ಳಿಯಂತೆ ಹೊಳೆಯುತ್ತಿರುವ ಮಗು ತಮಗೇ ಬೇಕೆಂದು ಚಂದ್ರ ಮತ್ತು ಗುರು ಇಬ್ಬರು ಕಿತ್ತಾಡಲು ಪ್ರಾರಂಭಿಸಿದರು. ಅವರಿಬ್ಬರಲ್ಲಿ ಮತ್ತೆ ಕದನ ಶುರುವಾಯಿತು. ಚಂದ್ರ ಹಾಗೂ ಗುರುಗಳ ಕಾದಾಟವನ್ನು ಬಿಡಿಸುವ ಬದಲು ಅಲ್ಲಿದ್ದ ದೇವ ದಾನವರೆಲ್ಲರೂ ಆ ಮಗುವಿನ ನಿಜವಾದ ತಂದೆ ಯಾರೆಂದು ಕೇಳತೊಡಗಿದರು. ಆದರೆ ತಾರೆ ನಾಚಿಕೆಯಿಂದ ತಲೆ ತಗ್ಗಿಸಿ ಸುಮ್ಮನೆ ನಿಂತಳು. ಅವರೆಲ್ಲ ಪದೇಪದೇ ಆ ಮಗುವಿನ ತಂದೆ ಯಾರೆಂದು ಚುಚ್ಚಿ ಚುಚ್ಚಿ ಕೇಳಿದಾಗ ತಾರೆ ಅಳತೊಡಗಿದಳು. ಆಗ ಬ್ರಹ್ಮ ಅವಳನ್ನು ಸಮಾಧಾನಿಸಿ ಅದೇ ಪ್ರಶ್ನೆಯನ್ನು ಕೇಳಿದಾಗ ತಾರೆ ನಾಚಿಕೆಯಿಂದ ಸುಮ್ಮನಾದಳು.
ತಾರೆಯ ಮಹಾಮೌನ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಆಗ ಆಗತಾನೇ ಜನಿಸಿದ ಮಗು ತಾರೆಗೆ "ಏ ನಡತೆ ಗೆಟ್ಟವಳೇ, ನಡೆದಿರುವುದನ್ನು ನಡೆದಂತೆ ಹೇಳು. ಯಾಕೆ ಸುಮ್ಮನಿರುವೆ?" ಎಂದು ಗದರಿಸಿತು. ಆ ಮಗುವಿನ ಮಾತಿನಿಂದ ತಾರೆಗೆ ಕೋಪ ಉಕ್ಕಿ ಬಂತು. ಆಗ ತಾರೆ ಕೋಪದಲ್ಲಿ ಚಂದ್ರನೇ ಆ ಮಗುವಿನ ತಂದೆ ಎಂದೇಳಿ ತನ್ನ ತಪ್ಪನ್ನು ಒಪ್ಪಿಕೊಂಡಳು. ತಾರೆ ಚಂದ್ರನ ಪ್ರೇಮ ಬಾಣಗಳಿಗೆ ವಿರುದ್ಧವಾಗಿ ಹೋರಾಡಲಾಗದೆ ತನ್ನ ಮೈಯೊಪ್ಪಿಸಿ ಶರಣಾಗಿದ್ದಳು. ಕೊನೆಗೆ ಬ್ರಹ್ಮ, ತಾರೆ ಮತ್ತು ಚಂದ್ರನೇ ಆ ಬುದ್ಧಿವಂತ ಮಗುವಿನ ಜನಕರೆಂದು ಸಾರಿದನು. ನಂತರ ಆ ಬುದ್ಧಿವಂತ ಮಗುವಿಗೆ ಬುಧನೆಂದು ಹೆಸರಿಟ್ಟರು. ಮುಂದೆ ತಾರೆ ನಡೆದಿದ್ದನ್ನೆಲ್ಲ ಮರೆತು ಗಂಡನಾದ ಬ್ರಹಸ್ಪತಿಯ ಸೇವೆ ಮಾಡಿ ಪತಿವ್ರತೆ ಎಂಬ ಹೆಸರನ್ನು ಸಂಪಾದಿಸಿದಳು. ಆದರೆ 27 ಹೆಂಡತಿಯರ ಗಂಡನಾದ ಚಂದ್ರ ತಾರೆಯಿಲ್ಲದೆ ವಿರಹಿಯಾಗಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲು ಪ್ರಾರಂಭಿಸಿದನು....
ಇದಿಷ್ಟು ನಮ್ಮ ಹಿಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಚಂದ್ರನ ಪ್ರೇಮಕಥೆ. ಈ ಕಥೆ ನಿಮಗಿಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...