ಜಗತ್ತಿನಲ್ಲಿ ಪ್ರೀತಿಯನ್ನು ಹರಡುವುದಕ್ಕಾಗಿ ಬ್ರಹ್ಮ ಕಾಮದೇವನನ್ನು ಸೃಷ್ಟಿಸಿದನು. ಕಾಮದೇವನು ಬಯಕೆ, ಪ್ರೇಮ, ಕಾಮಗಳ ದೇವರಾಗಿದ್ದಾನೆ. ಆತ ಗಿಳಿಯ ಮೇಲೆ ಸಂಚರಿಸುತ್ತಾ ತನ್ನ ಹೂಬಾಣಗಳಿಂದ ಜಗತ್ತಿನೆಲ್ಲೆಡೆ ಪ್ರೀತಿಯನ್ನು ಹರಡುತ್ತಾನೆ. ಒಂದಿನ ಬ್ರಹ್ಮ ದಕ್ಷ ಪ್ರಜಾಪತಿಗೆ ಕಾಮದೇವನಿಗಾಗಿ ಒಂದು ಸೂಕ್ತವಾದ ಹುಡುಗಿಯನ್ನು ಹುಡುಕುವಂತೆ ಹೇಳಿದನು. ಆಗ ದಕ್ಷ ಪ್ರಜಾಪತಿ ಬ್ರಹ್ಮನ ಮಾತನ್ನು ನಿರ್ಲಕ್ಷಿಸಿದನು. ಆಗ ಕೋಪದಲ್ಲಿ ಕಾಮದೇವ ತನ್ನ ಪುಷ್ಪ ಬಾಣಗಳನ್ನು ದಕ್ಷ ಪ್ರಜಾಪತಿ ಮತ್ತು ಬ್ರಹ್ಮನ ಮೇಲೆ ಚೆಲ್ಲಿದನು. ಆದರೆ ಆ ಬಾಣಗಳು ಗುರಿ ತಪ್ಪಿ ಬ್ರಹ್ಮನ ಮಗಳಾದ ಸಂಧ್ಯಾಳಿಗೆ ತಗುಲಿದವು. ಆಗ ಅವಳು ನಾಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇದರಿಂದ ಎಚ್ಚೆತ್ತ ದಕ್ಷ ಪ್ರಜಾಪತಿ ಕೂಡಲೇ ತನ್ನ ಮೈ ಬೆವರಿನಿಂದ ಒಂದು ಸುಂದರವಾದ ಕನ್ಯೆಯನ್ನು ಸೃಷ್ಟಿಸಿದನು. ಸರ್ವಾಂಗ ಸುಂದರನಾದ ಕಾಮದೇವನಿಗೆ ಸರ್ವಾಂಗ ಸುಂದರಿಯಾದ ರತಿ ಸೂಕ್ತ ಜೋಡಿಯಾದಳು.
ರತಿ ಹಾಗೂ ಕಾಮದೇವರು ಪರಸ್ಪರ ಆಕರ್ಷಿತರಾದರು. ಕಾಮದೇವನಂತೆ ರತಿ ಕೂಡ ಪ್ರೇಮದ, ಕಾಮದ, ಬಯಕೆಯ ದೇವತೆಯಾಗಿದ್ದಾಳೆ. ರತಿ ಹಾಗೂ ಕಾಮದೇವನ ಪ್ರೀತಿ ಅಮರಾಜರವಾಗಿದೆ. ಪ್ರೇಮವಿಲ್ಲದ ಕಾಮ ಅಪರಾಧವೆನ್ನುವುದು ರತಿಯ ವಾದವಾಗಿದೆ. ಪ್ರೇಮ ಮನಸ್ಸಿನ ಆಹಾರವಾದರೆ, ಕಾಮ ಮೈಯ ಆಹಾರ ಎನ್ನುವುದು ಕಾಮದೇವನ ಅಭಿಪ್ರಾಯವಾಗಿದೆ. ಅದಕ್ಕಾಗಿ ಅವರಿಬ್ಬರೂ ಪರಸ್ಪರ ಪ್ರೇಮಿಸುತ್ತಾ, ಕಾಮಿಸುತ್ತಾ ಈ ಜಗತ್ತಿಗೆ ಪ್ರೇಮಸೂತ್ರಗಳೊಂದಿಗೆ ಕಾಮ ಸೂತ್ರಗಳನ್ನು ಸಹ ಬೋಧಿಸಿದ್ದಾರೆ. ಅವರ ಪ್ರೇಮ ಪ್ರತೀಕವಾಗಿ ಎಷ್ಟೋ ಕಾಮದ ಭಂಗಿಗಳು ಈ ಜಗತ್ತಿಗೆ ಪರಿಚಯವಾಗಿವೆ. ರತಿ ಹಾಗೂ ಕಾಮದೇವ ಇಬ್ಬರು ಸೇರಿ ಪ್ರೇಮವನ್ನು ಜಗತ್ತಿನೆಲ್ಲೆಡೆ ಹರಡುತ್ತಾ ಸಂತೋಷವಾಗಿದ್ದರು. ಆದರೆ ಲೋಕ ಕಲ್ಯಾಣಕ್ಕಾಗಿ ಕಾಮದೇವ ಬಲಿಯಾದಾಗ ರತಿ ಸಹ ತನ್ನ ದೇಹ ತ್ಯಾಗ ಮಾಡಬೇಕಾದ ಕ್ರೂರ ಪರಿಸ್ಥಿತಿ ಎದುರಾಗಿ ಅವರ ಸರಸ ಸಲ್ಲಾಪಗಳಿಗೆ ಅರ್ಧವಿರಾಮ ಬಿದ್ದಿತು.
ದಕ್ಷ ಪ್ರಜಾಪತಿಯು ಲೋಕ ಕಲ್ಯಾಣಕ್ಕಾಗಿ ಒಂದು ಮಹಾಯಜ್ಞವನ್ನು ಮಾಡುತ್ತಿದ್ದನು. ಅದರಲ್ಲಿ ಭಾಗವಹಿಸಲು ದೇವಾನು ದೇವತೆಗಳೆಲ್ಲರು ಆಮಂತ್ರಿತರಾಗಿದ್ದರು. ಆದರೆ ಆಗ ಶಿವನನ್ನು ಆಮಂತ್ರಿಸಿರಲಿಲ್ಲ. ಏಕೆಂದರೆ ದಕ್ಷನ ಮಗಳು ದ್ರಾಕ್ಷಾಯಣಿ ಅವನ ವಿರುದ್ಧವಾಗಿ ಶಿವನನ್ನು ಮದುವೆಯಾಗಿದ್ದಳು. ಈ ಸಿಟ್ಟಿನಿಂದಾಗಿ ದಕ್ಷ ಶಿವನನ್ನು ಆಮಂತ್ರಿಸಿಲಿರಲಿಲ್ಲ. ಆದರೆ ದ್ರಾಕ್ಷಾಯಣಿಗೆ ತನ್ನ ತಂದೆ ಮಾಡುತ್ತಿರುವ ಯಜ್ಞದಲ್ಲಿ ಭಾಗವಹಿಸುವ ಮನಸ್ಸಾಯಿತು. ಶಿವ ಅವಳಿಗೆ ಎಷ್ಟೇ ತಿಳಿಸಿ ಹೇಳಿದರೂ ಆಕೆ ಕೇಳದೆ ದಕ್ಷನ ಯಜ್ಞಕ್ಕೆ ಹೋದಳು. ಆಗ ದಕ್ಷ ಪ್ರಜಾಪತಿ ಅವಳ ಕಣ್ಣೆದುರಿಗೆ ಶಿವನನ್ನು ಗೇಲಿ ಮಾಡಿ ಅವಮಾನಿಸಿದನು. ಶಿವನ ನಿಂದನೆಯನ್ನು ಕೇಳಿ ಕೋಪದಲ್ಲಿ ದ್ರಾಕ್ಷಾಯಣಿ ಅದೇ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಟ್ಟಳು. ತನ್ನ ಮಡದಿ ಬೆಂಕಿಗೆ ಆಹುತಿಯಾಗಿರುವುದನ್ನು ಕೇಳಿ ಶಿವ ಆ ಯಜ್ಞವನ್ನು ನಾಶಪಡಿಸಿ ವೈರಾಗಿಯಾದನು. ಆತ ದ್ರಾಕ್ಷಾಯಣಿಯನ್ನು ಕಳೆದುಕೊಂಡ ನಂತರದಿಂದ ವಿಲಾಸಿಯಾದನು. ಆತ ಎಲ್ಲವನ್ನು ತ್ಯಜಿಸಿ ಬರೀ ಧ್ಯಾನದಲ್ಲಿ ಕಾಲ ಕಳೆಯತೊಡಗಿದನು.
ಶಿವ ಜಗತ್ತನ್ನು ಮರೆತು ಧ್ಯಾನಾಸಕ್ತನಾಗಿರುವುದರಿಂದ ಜಗತ್ತಿನ ಕೆಲಸ ಕಾರ್ಯಗಳೆಲ್ಲ ಏರುಪೇರಾಗಿದ್ದವು. ಅದಕ್ಕಾಗಿ ಶಿವನ ತಪಸ್ಸನ್ನು ಭಂಗ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ ಅದೇ ಸಮಯಕ್ಕೆ ತಾರಕಾಸುರ ಎಂಬ ರಾಕ್ಷಸ ಬ್ರಹ್ಮನಿಂದ "ಸಾವು ಬಂದರೆ ಬರೀ ಶಿವ ಸುತನಿಂದ ಮಾತ್ರ ಬರಬೇಕು'' ಎಂಬ ವರವನ್ನು ಪಡೆದುಕೊಂಡು ಲೋಕ ಕಂಟಕನಾಗಿದ್ದನು. ಶಿವನ ಸತಿ ದ್ರಾಕ್ಷಾಯಣಿ ಸತ್ತಿರುವುದರಿಂದ ಶಿವನಿಗೆ ಸಂತಾನವಾಗುವುದಿಲ್ಲ, ನಾನು ಸಾಯುವುದಿಲ್ಲ ಎಂಬ ಕುರುಡು ಯೋಚನೆಯಲ್ಲಿ ತಾರಾಕಾಸುರ ಎಲ್ಲ ಅನೀತಿ ಅತ್ಯಾಚಾರಗಳನ್ನು ಮಾಡುತ್ತಾ ಮುಂದೆ ಸಾಗಿದನು. ದ್ರಾಕ್ಷಾಯಣಿ ಪರ್ವತರಾಜನ ಮಗಳು ಪಾರ್ವತಿಯಾಗಿ ಮರು ಜನ್ಮ ತಾಳಿದ್ದಳು. ಶಿವನ ತಪಸ್ಸನ್ನು ಭಂಗಗೊಳಿಸಿ ಪಾರ್ವತಿಯೊಂದಿಗೆ ವಿವಾಹ ಮಾಡಿಸಿದರೆ ಅವರ ಸಂತಾನದಿಂದ ತಾರಕಾಸುರನ ವಧೆಯಾಗುವುದು ಎಂಬ ನಂಬಿಕೆಯಲ್ಲಿ ದೇವತೆಗಳಿದ್ದರು. ಅದಕ್ಕಾಗಿ ಶಿವನ ತಪಸ್ಸನ್ನು ಮುರಿಯುವ ಪ್ರಯತ್ನವನ್ನು ಅವರು ಪ್ರಾರಂಭಿಸಿದರು.
ಶಿವನ ತಪಸ್ಸನ್ನು ಭಂಗಗೊಳಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿ ದೇವತೆಗಳೆಲ್ಲರು ಸೋತರು. ಗಾಳಿ, ಮಳೆ, ಬಿಸಿಲು ಸಹ ಶಿವನ ಧ್ಯಾನವನ್ನು ಕದಲಿಸುವಲ್ಲಿ ವಿಫಲವಾದವು. ಪಾರ್ವತಿ ಶಿವನನ್ನು ಪ್ರೀತಿಸುವುದರೊಂದಿಗೆ ಅವನನ್ನು ಪೂಜಿಸಲು ಸಹ ಪ್ರಾರಂಭಿಸಿದಳು. ಆದರೆ ಅವಳ ಪೂಜೆಯಾಗಲಿ, ಪ್ರೇಮವಾಗಲಿ ಶಿವನ ಧ್ಯಾನವನ್ನು ಮುರಿಯುವಲ್ಲಿ ಯಶಸ್ವಿಯಾಗಲಿಲ್ಲ. ಆಗ ದೇವತೆಗಳೆಲ್ಲರು ಸೇರಿ ಕಾಮದೇವನ ಸಹಾಯಕ್ಕಾಗಿ ಅಂಗಲಾಚಿದರು. ಕಾಮದೇವ ತನ್ನ ಮಡದಿ ರತಿಯೊಡನೆ ರಾಸಲೀಲೆಗಳಲ್ಲಿ ಮುಳುಗಿದ್ದನು. ಆದರೂ ಆತ ಲೋಕ ಕಲ್ಯಾಣಕ್ಕಾಗಿ ಶಿವನ ತಪಸ್ಸನ್ನು ಮುರಿಯುವ ಜವಾಬ್ದಾರಿಯನ್ನು ಸ್ವೀಕರಿಸಿದನು. ಶಿವನ ತಪಸ್ಸನ್ನು ಭಂಗಗೊಳಿಸಿದರೆ ಅವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಕಾಮದೇವನಿಗೆ ಗೊತ್ತಿತ್ತು. ಆದರೂ ಆತ ತನ್ನ ಹೂಬಾಣಗಳಿಂದ ಶಿವನ ತಪಸ್ಸನ್ನು ಭಂಗಗೊಳಿಸಿದನು. ಆದರೆ ತನ್ನ ತಪಸ್ಸು ಭಂಗವಾದ ಕೋಪದಲ್ಲಿ ಶಿವ ತನ್ನ ಮೂರನೇ ಕಣ್ಣಿನಿಂದ ಕಾಮದೇವನನ್ನು ಸುಟ್ಟು ಬೂದಿ ಮಾಡಿದನು. ತನ್ನ ಪ್ರಿಯಕರ ಸುಟ್ಟು ಬೂದಿಯಾದಾಗ ರತಿಯ ಅಳುವಿನ ಸೂತಕ ಮುಗಿಲು ಮುಟ್ಟಿತು. ಶಿವ ಶೋಕತಪ್ತ ರತಿಯನ್ನು ಸಂತೈಸಿ ಒಂದು ವರ್ಷದಲ್ಲಿ ನಿನ್ನ ಪತಿ ಮತ್ತೆ ದೇಹವನ್ನು ಪಡೆಯುತ್ತಾನೆ ಎಂಬ ವರ ನೀಡಿದನು.
ಕಾಮದೇವನಿಂದ ಶಿವನ ತಪಸ್ಸು ಭಂಗವಾಗಿರುವುದರಿಂದ ಶಿವ ಜಗತ್ತಿನ ಕಡೆಗೆ ಸ್ವಲ್ಪ ಕಾಳಜಿ ವಹಿಸಿದನು. ಅಷ್ಟರಲ್ಲಿಯೇ ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಘೋರ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದ್ದಳು. ಶಿವ ಅವಳ ಭಕ್ತಿಗೆ ಪ್ರಸನ್ನನಾಗಿ ಅವಳ ಪ್ರೇಮವನ್ನು ಒಪ್ಪಿಕೊಂಡು ಅವಳನ್ನು ವಿವಾಹವಾಗಲು ಒಪ್ಪಿದನು. ಅದರೆ ರತಿ ಶರೀರವಿಲ್ಲದ ಕಾಮದೇವನನ್ನು ಕಂಡು ಕಣ್ಣೀರಾಕಿದಳು. ಒಂದು ವೇಳೆ ಆಕೆ ಮನಸ್ಸು ಮಾಡಿದ್ದರೆ ಶರೀರವಿಲ್ಲದ ಕಾಮದೇವನನ್ನು ಬಿಟ್ಟು ಬೇರೆ ಯಾವುದೋ ದೇವರನ್ನು ಮತ್ತೆ ಮದುವೆಯಾಗಬಹುದಿತ್ತು. ಆದರೆ ಹಾಗೇ ಮಾಡದೆ ಕಾಮದೇವನಿಗಾಗಿ ಕಾಯಲು ಸಿದ್ಧಳಾದಳು. ಅವಳದ್ದು ನಿಜವಾದ ಪ್ರೀತಿ. ಮುಂದೆ ಶಿವ ಪಾರ್ವತಿಯನ್ನು ವಿವಾಹವಾದನು. ಅವರ ಸಂತಾನ ಕಾರ್ತಿಕೇಯ ತಾರಕಾಸುರನನ್ನು ಸಂಹರಿಸಿದನು. ಅದೇ ರೀತಿ ಶಿವನ ವರದಂತೆ ಕಾಮದೇವ ಶ್ರೀಕೃಷ್ಣನ ಮಗ ಪ್ರದ್ಯುಮ್ನನಾಗಿ ಜನಿಸಿದನು. ರತಿ ದೇಹತ್ಯಾಗ ಮಾಡಿ ಮಾಯಾವತಿಯಾಗಿ ಭೂಮಿಯ ಮೇಲೆ ಜನಿಸಿ ಪ್ರದ್ಯುಮ್ನನ ರೂಪದಲ್ಲಿರುವ ಕಾಮದೇವನನ್ನು ಸೇರಿದಳು. ಈ ರೀತಿ ರತಿ ಮತ್ತು ಮತ್ತೆ ಕಾಮದೇವ ಮತ್ತೆ ಮಿಲನವಾಗಿ ಜಗತ್ತಿನಲ್ಲೆಡೆ ಮತ್ತೆ ಪ್ರೇಮವನ್ನು ಪಸರಿಸಲು ಪ್ರಾರಂಭಿಸಿದರು. ಇವತ್ತು ಸಹ ಅವರಿಬ್ಬರು ಪ್ರತಿಯೊಬ್ಬರ ಮನಸ್ಸಲ್ಲಿದ್ದಾರೆ...