ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

                                 ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

                    ಊರ್ವಶಿ ಇಂದ್ರನ ಆಸ್ಥಾನದ ಅತ್ಯಂತ ಸುಂದರ ಅಪ್ಸರೆಯರಲ್ಲಿ ಒಬ್ಬಳು. ದಿನಾಲು ಇಂದ್ರನ ಆಸ್ಥಾನದಲ್ಲಿ ನೃತ್ಯ ಮಾಡಿ ದೇವತೆಗಳನ್ನು ರಂಜಿಸುವುದು ಊರ್ವಶಿಯ ಕೆಲಸವಾಗಿತ್ತು. ಸ್ವರ್ಗದ ಸುಖಗಳಲ್ಲಿ ತೇಲಾಡಿ ಅವಳಿಗೆ ಬೇಸರವಾಗಿತ್ತು. ಸ್ವಲ್ಪವೂ ಕಷ್ಟಗಳಿಲ್ಲದ ಸ್ವರ್ಗದ ನೀರಸ ಜೀವನ ಅವಳನ್ನು ಹಿಂಸಿಸುತ್ತಿತ್ತು. ಅದಕ್ಕಾಗಿ ಆಕೆ ಸ್ವರ್ಗವನ್ನು ಬಿಟ್ಟು ಸ್ವಲ್ಪ ದಿನ ಸುತ್ತಾಡಲು ಭೂಮಿಗೆ ಬಂದಳು. ಭೂಮಿ ಮೇಲಿನ ಜನರ ಜೀವನ ಅವಳಿಗೆ ಬಹಳಷ್ಟು ಹಿಡಿಸಿತು. ದಿನಾಲು ಹೊಸಹೊಸ ವಿಷಯಗಳಿಂದ ಕೂಡಿದ ಭೂಮಿಯ ಜನಜೀವನ ಅವಳನ್ನು ಸೆಳೆಯಿತು. ಜನರ ಜೀವನದಲ್ಲಿ ಬರುವ ಕಷ್ಟ-ನಷ್ಟಗಳು ಅವಳಿಗೆ ಸಾಹಸಗಳಂತೆ ಕಂಡವು. ಅವಳಿಗೆ ಸ್ವರ್ಗಕ್ಕಿಂತ ಭೂಮಿಯ ಮೇಲಿನ ಜೀವನವೇ ಹೆಚ್ಚಿಷ್ಟವಾಯಿತು. ಅವಳಿಗೆ ಮರಳಿ ಸ್ವರ್ಗಕ್ಕೆ ಹೋಗುವ ಮನಸ್ಸಿರಲಿಲ್ಲ. ಆದರೂ ಆಕೆ ಹೋಗಲೇಬೇಕಾದ ಸಂದರ್ಭ ಎದುರಾಯಿತು. ಅದಕ್ಕಾಗಿ ಆಕೆ ಒಲ್ಲದ ಮನಸ್ಸಿನಿಂದ ಸ್ವರ್ಗದೆಡೆಗೆ ತನ್ನ ಸವಾರಿ ಬೆಳೆಸಿದಳು.

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

                     ಊರ್ವಶಿ ಭೂಮಿ ಮೇಲಿನ ವಾತಾವರಣವನ್ನು ಪದೇಪದೇ ನೆನಪಿಸಿಕೊಳ್ಳುತ್ತಾ ಸ್ವರ್ಗದೆಡೆಗೆ ಸಾಗಿದ್ದಳು. ಆದರೆ ಅಷ್ಟರಲ್ಲಿ ಅವಳ ದುರಾದೃಷ್ಟವೆಂಬಂತೆ ಅವಳನ್ನು ಒಬ್ಬ ರಾಕ್ಷಸ ಅಡ್ಡಗಟ್ಟಿ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲು ಪ್ರಾರಂಭಿಸಿದನು. ಅವಳು ಸಹಾಯಕ್ಕಾಗಿ ಕೀರಚಲು ಪ್ರಾರಂಭಿಸಿದಳು. ಅವಳ ಹೆದರಿದ ಧ್ವನಿಯನ್ನು ಕೇಳಿ ಪುರುರವ ಬಂದನು. ಪುರುರವ ಭೂಮಿ ಮೇಲಿನ ಒಬ್ಬ ಪರಾಕ್ರಮಿ ರಾಜನಾಗಿದ್ದನು. ಆತ ಬುಧನ ಮಗ ಕೂಡ. ಅವನ ಪರಾಕ್ರಮ, ಶಕ್ತಿ ಸಾಮರ್ಥ್ಯ ಎಷ್ಟಿತ್ತೆಂದರೆ ಇಂದ್ರದೇವನು ರಾಕ್ಷಸರ ವಿರುದ್ಧ ಹೋರಾಡಲು ಪುರುರವನ ಸಹಾಯವನ್ನು ಪಡೆದುಕೊಳ್ಳುತ್ತಿದ್ದನು. ಅಂಥ ಸಾಹಸಿ ಪುರುರವ ಊರ್ವಶಿಯ ಸಹಾಯಕ್ಕೆ ಬಂದಿರುವುದು ಅವಳ ಅದೃಷ್ಟವಾಗಿತ್ತು. ಆತ ಊರ್ವಶಿಯನ್ನು ಆ ರಾಕ್ಷಸನಿಂದ ರಕ್ಷಿಸಿದನು. ಆದರೆ ಅವಳನ್ನು ರಕ್ಷಿಸುವಾಗ ಪುರುರವ ಊರ್ವಶಿಯನ್ನು ಸ್ಪರ್ಶಿಸಿದನು. ಅವನ ಸ್ಪರ್ಶ ಊರ್ವಶಿಯಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿತು. ಏಕೆಂದರೆ ಅವಳಿಗೆ ಮಾನವರ ಸ್ಪರ್ಶದ ಅನುಭವವಿರಲಿಲ್ಲ. ಪುರುರವನಿಗೂ ಅಷ್ಟೇ, ಅಪ್ಸರೆಯಾದ ಊರ್ವಶಿಯ ಸ್ಪರ್ಶ ಹೊಸಹೊಸ ಆಸೆಗಳನ್ನು ಹುಟ್ಟು ಹಾಕಿತು. ಆದರೆ ಪುರುರವನ ಜೊತೆ ಲಲ್ಲೆ ಹೊಡೆಯುವಷ್ಟು ಸಮಯ ಊರ್ವಶಿಯ ಬಳಿ ಇರಲಿಲ್ಲ. ಆಕೆ ಅವನಿಗೆ ಧನ್ಯವಾದಗಳನ್ನು ಅರ್ಪಿಸಿ ಸ್ವರ್ಗಕ್ಕೆ ಅವಸರದಿಂದ ಹೋದಳು.

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

         ಸ್ವರ್ಗಕ್ಕೆ ಹೋದ ಮೇಲೂ ಊರ್ವಶಿ ಪುರುರವನನ್ನು ನೆನಪಿಸಿಕೊಳ್ಳುತ್ತಿದ್ದಳು. ಅವನ ಸ್ಪರ್ಶ ಅವಳ ತಲೆ ಕೆಡಿಸಿತ್ತು. ಅದೇ ರೀತಿ ಪುರುರವನು ಸಹ ಊರ್ವಶಿಯ ನೆನಪುಗಳಲ್ಲಿ ನರಳುತ್ತಿದ್ದನು. ಒಮ್ಮೆ ಊರ್ವಶಿ ನಾಟಕದಲ್ಲಿ ಲಕ್ಷ್ಮೀದೇವಿಯ ಪಾತ್ರವನ್ನು ನಿಭಾಯಿಸುತ್ತಿದ್ದಳು. ಆವಾಗಾಕೆ ಪುರುಷೋತ್ತಮ ಎಂದೇಳುವ ಬದಲು ಪುರುರವ ಎಂದೇಳಿದಳು. ಆಗ ನಾಟಕವನ್ನು ನಿರ್ದೇಶಿಸಿದ್ದ ಭರತ ಮುನಿಗಳು ಕೋಪಿಸಿಕೊಂಡು ಅವಳಿಗೆ "ನೀನು ಸ್ವರ್ಗದ ಸುಖಗಳನ್ನು ಬಿಟ್ಟು ಭೂಮಿಯ ಹುಲು ಮನುಜನ ಬಗ್ಗೆ ಚಿಂತಿಸುತ್ತಾ ಅಪಚಾರವೆಸಗಿರುವೆ. ಅದಕ್ಕಾಗಿ ನೀನು ಭೂಮಿಗೆ ಹೋಗಿ ಮನುಷ್ಯಳಾಗಿರು..." ಎಂದು ಶಾಪವಿಟ್ಟರು. ಅವರ ಶಾಪವನ್ನು ಖುಷಿಯಿಂದ ಸ್ವೀಕರಿಸಿ ಊರ್ವಶಿ ಭೂಮಿಗೆ ಬಂದಳು. 

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

           ಕನಸಲ್ಲಿ ಕಾಡುತ್ತಿದ್ದ ಕನ್ಯೆ ಕಣ್ಮುಂದೆ ಬಂದಾಗ ಪುರುರವ ಆಶ್ಚರ್ಯ ಚಕಿತನಾದನು. ಜೊತೆಗೆ ತನ್ನ ಪ್ರೀತಿಯನ್ನು ಒಪ್ಪಿಕೊಂಡು ತನ್ನೊಂದಿಗೆ ಇರುವಂತೆ ಊರ್ವಶಿಯನ್ನು ಕೇಳಿಕೊಂಡನು. ಆಗ ಊರ್ವಶಿ ಅವನಿಗೆ "ನೀನು ನನ್ನ ಎರಡು ಮೇಕೆಗಳ ರಕ್ಷಣೆ ಮಾಡಬೇಕು, ನಾನು ಬರೀ ತುಪ್ಪವನ್ನಷ್ಟೇ ಸೇವಿಸುವೆ. ನೀನು ದಿನಾಲು ತಪ್ಪದೆ ನನಗೆ ತುಪ್ಪದ ವ್ಯವಸ್ಥೆ ಮಾಡಬೇಕು. ಮಿಲನದ ಸಂದರ್ಭ ಹೊರತು ಪಡಿಸಿ ನಾನು ನಿನ್ನನ್ನು ನಗ್ನವಾಗಿ ನೋಡಲು ಬಯಸುವುದಿಲ್ಲ. ಒಂದು ವೇಳೆ ನೀನು ಈ ನಿಯಮಗಳನ್ನು ಉಲ್ಲಂಘಿಸಿದರೆ ಅವತ್ತೇ ನಾನು ನಿನ್ನನ್ನು ಬಿಟ್ಟು ಮತ್ತೆ ಸ್ವರ್ಗಲೋಕಕ್ಕೆ ಹೋಗುವೆ" ಎಂಬ ಮೂರು ಷರತ್ತುಗಳ ಮೇರೆಗೆ ಆಕೆ ಅವನೊಂದಿಗೆ ಇರಲು ಒಪ್ಪಿದಳು.

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

          ಊರ್ವಶಿಯಂಥ ಸುಂದರ ಅಪ್ಸರೆ ತನ್ನ ಪ್ರೀತಿಯನ್ನು ಒಪ್ಪಿಕೊಂಡು ತನ್ನೊಂದಿಗೆ ಇರಲು ಒಪ್ಪಿದ್ದರಿಂದ ಪುರುರವ ಗಾಳಿಯಲ್ಲಿ ತೇಲಾಡತೊಡಗಿದನು. ಊರ್ವಶಿಗೆ ಮೊದಲೇ ಭೂಮಿಯ ಜನಜೀವನ ಇಷ್ಟವಾಗಿತ್ತು. ಈಗ ಆಕೆ ಪುರುರವನ ಪ್ರೇಯಸಿಯಾಗಿ ಅವನ ಅರಮನೆಯಲ್ಲಿ ಇರಲು ಪ್ರಾರಂಭಿಸಿದಾಗ ಅವಳಿಗೆ ಸ್ವರ್ಗ ಮರೆತೇ ಹೋಯಿತು. ಪುರುರವ ಊರ್ವಶಿಯ ಸೌಂದರ್ಯವನ್ನು ಆನಂದಿಸುತ್ತಿದ್ದನು. ಪುರುರವ ಹಾಗೂ ಊರ್ವಶಿ ಮೋಜು ಮಸ್ತಿ ಮಾಡುತ್ತಾ ವರ್ಷಗಳನ್ನು ಕಳೆದರು. ಊರ್ವಶಿ ಪುರುರವನ ಆಸರೆಯಲ್ಲಿ ಆನಂದವಾಗಿದ್ದಳು. ಅವಳಿಗೆ ಸ್ವರ್ಗ ಬೇಡವಾಗಿತ್ತು. ಆದರೆ ಅತ್ತ ಕಡೆ ಸ್ವರ್ಗ ಅವಳಿಲ್ಲದೆ ಬೀಕೋ ಎನ್ನುತ್ತಿತ್ತು. ಸ್ವರ್ಗವಾಸಿಗಳೆಲ್ಲ ಅವಳನ್ನು ಮತ್ತೆ ಸ್ವರ್ಗಕ್ಕೆ ಕರೆಯಿಸಿಕೊಳ್ಳಲು ಸಂಚು ರೂಪಿಸಿದರು. ಅದರ ಜವಾಬ್ದಾರಿಯನ್ನು ವಿಶ್ವಾವಸು ಎಂಬ ಗಂಧರ್ವನಿಗೆ ವಹಿಸಿದರು.

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

              ವಿಶ್ವಾವಸು ಒಂದು ಸರಿಯಾದ ರಾತ್ರಿ ತನ್ನ ಗಂಧರ್ವ ಗೆಳೆಯರೊಂದಿಗೆ ಪುರುರವನ ಅರಮನೆಗೆ ಬಂದಿಳಿದನು. ಆಗ ಊವರ್ಶಿ ಹಾಗೂ ಪುರುರವ ಮಿಲನ ಕ್ರಿಯೆಯಲ್ಲಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು ವಿಶ್ವಾವಸು ಊರ್ವಶಿಯ ಒಂದು ಮೇಕೆಯನ್ನು ಅಪಹರಿಸಿದನು. ಆ ಮೇಕೆಯ ಕೂಗನ್ನು ಕೇಳಿ ಊರ್ವಶಿ ಜಾಗೃತಳಾಗಿ ಪುರುರವನಿಗೆ ಮೇಕೆಯನ್ನು ಕಾಪಾಡುವಂತೆ ಹೇಳಿದಳು. ಆದರೆ ವಸ್ತ್ರಹೀನನಾದ ಪುರುರವ ಹಾಸಿಗೆಯಿಂದ ಮೇಲೆಳಲು ಹಿಂದೇಟು ಹಾಕಿದನು. ಹೀಗಾಗಿ ವಿಶ್ವಾವಸು ಮತ್ತೊಂದು ಮೇಕೆಯನ್ನು ಸಹ ಸುಲಭವಾಗಿ ಅಪಹರಿಸಿದನು. ತನ್ನ ಎರಡನೇ ಮೇಕೆಯು ಕಾಣೆಯಾದಾಗ ಊರ್ವಶಿ ಕೆರಳಿ ಕೀರುಚಿದಳು. ಆಗ ಪುರುರವ "ಈಗ ರಾತ್ರಿ ಕತ್ತಲಿರುವುದರಿಂದ ಊರ್ವಶಿ ನನ್ನನ್ನು ನೋಡಲಾರಳು" ಎಂಬ ಧೈರ್ಯದ ಮೇಲೆ ಆತ ಮೇಕೆಗಳನ್ನು ಕಾಪಾಡುವುದಕ್ಕಾಗಿ ಹಾಸಿಗೆಯಿಂದ ಮೇಲೆದ್ದನು. ಆಗ ವಿಶ್ವಾವಸು ತನ್ನ ಮಾಯಾಶಕ್ತಿಯಿಂದ ಅವನ ಮೇಲೆ ಹರಿತವಾದ ಬೆಳಕನ್ನು ಚೆಲ್ಲಿದನು. ಆಗ ಊರ್ವಶಿ ಪುರುರವನನ್ನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನೋಡಿದಳು. ಆತ ಮೇಕೆಗಳನ್ನು ರಕ್ಷಿಸಲು ಆ ಗಂಧರ್ವರನ್ನು ಹಿಂಬಾಲಿಸಿದನು. ಆದರೆ ಪುರುರವ ತನ್ನ ಎಲ್ಲ ನಿಯಮಗಳನ್ನು ಉಲ್ಲಂಘಿಸಿದನಲ್ಲ ಎಂಬ ಬೇಜಾರಲ್ಲಿ ಸ್ವರ್ಗಕ್ಕೆ ಹಿಂತಿರುಗಿದಳು.

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

                             ಪುರುರವ ಮೇಕೆಗಳು ಸಿಗದೆ ಮರಳಿ ಬರುವಷ್ಟರಲ್ಲಿ ಊರ್ವಶಿ ಅವನಿಗೆ ಒಂದು ಮಾತನ್ನು ಹೇಳದೆ ಸ್ವರ್ಗಕ್ಕೆ ಹಿಂತಿರುಗಿದ್ದಳು. ತನ್ನ ಪ್ರೇಯಸಿ ಹೇಳದೆ ಕೇಳದೆ ಕಾಣೆಯಾಗಿರುವುದರಿಂದ ಪುರುರವ ಅತೀವವಾಗಿ ನೊಂದನು. ಊರ್ವಶಿಗೂ ಸ್ವರ್ಗಕ್ಕೆ ಹೋಗುವ ಮನಸ್ಸಿರಲಿಲ್ಲ. ಆದರೆ ಸಂದರ್ಭ ಅವಳನ್ನು ದಾರಿ ತಪ್ಪಿಸಿತ್ತು. ಈ ರೀತಿ ಸ್ವರ್ಗವಾಸಿಗಳ ಸಂಚಿಗೆ ಊರ್ವಶಿ ಹಾಗೂ ಪುರುರವನ ಪ್ರೇಮಕಥೆ ಕಣ್ಣೀರಲ್ಲಿ ಕೊನೆಯಾಯಿತು. ಎಲ್ಲ ಮುರಿದ ಪ್ರೇಮಕಥೆಗಳಲ್ಲಿ ಯಾರಾದರೂ ಒಬ್ಬರು ಖಳನಾಯಕರು ಇದ್ದೇ ಇರುತ್ತಾರೆ. ಈ ಪ್ರೇಮಕಥೆಯನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...

ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada

Blogger ನಿಂದ ಸಾಮರ್ಥ್ಯಹೊಂದಿದೆ.