ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

            ಶಿವಾಜಿಯ ನಿಧನಾನಂತರ ಮರಾಠಾ ಸಾಮ್ರಾಜ್ಯ ಒಗ್ಗಟ್ಟಿನ ಕೊರತೆಯಿಂದ ಅವನತಿಯ ದಾರಿ ಹಿಡಿಯುವ ಆತಂಕದಲ್ಲಿತ್ತು. ಆದರೆ ಛತ್ರಪತಿ ಶಾಹು ಮಹಾರಾಜರ ದಕ್ಷ ಆಡಳಿತದಿಂದ ಮರಾಠಾ ಸಾಮ್ರಾಜ್ಯಕ್ಕೆ ಮತ್ತೆ ನವಕಳೆ ಬಂದಿತು. ಶಾಹು ಮಹಾರಾಜರಿಂದ ನೇಮಿಸಲ್ಪಟ್ಟ ಪೇಶ್ವೆಗಳು ಮರಾಠಾ ಸಾಮ್ರಾಜ್ಯದ ಬೆನ್ನೆಲುಬಾಗಿದ್ದರು. ಅಂಥ ಪೇಶ್ವೆಗಳಲ್ಲಿ ಬಾಲಾಜಿ ವಿಶ್ವನಾಥರು ಒಬ್ಬರು. ಪೇಶ್ವೆ ಬಾಲಾಜಿ ವಿಶ್ವನಾಥ ಹಾಗೂ ಅವರ ಧರ್ಮಪತ್ನಿ ರಾಧಾಬಾಯಿಯವರ ಮುದ್ದಿನ ಮಗನೇ ಬಾಜೀರಾವ. ಬಾಜೀರಾವನನ್ನು ಎಲ್ಲರೂ ಪ್ರೀತಿಯಿಂದ ರಾವ್ ಎಂದು ಕರೆಯುತ್ತಿದ್ದರು. ಬಾಜೀರಾವ್ ಚಿಕ್ಕ ವಯಸ್ಸಿನಿಂದಲೇ ತನ್ನ ತಂದೆಯ ಜೊತೆ ಸೇರಿ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳನ್ನು ಬಹಳ ಶ್ರದ್ಧೆಯಿಂದ ಕಲಿತಿದ್ದನು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮರಾಠಾ ಸಾಮ್ರಾಜ್ಯದ ಉಜ್ವಲ ಭವಿಷ್ಯ ಬಾಜೀರಾವನ ಬಾಲ್ಯದಲ್ಲಿ ಕಂಗೊಳಿಸುತ್ತಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                    ವೀರ ಮರಾಠಾ ಪೇಶ್ವೆ ಬಾಲಾಜಿ ವಿಶ್ವನಾಥರ ಅಕಾಲ ನಿಧನದ ನಂತರ ಛತ್ರಪತಿ ಶಾಹು ಮಹಾರಾಜರು ಅವರ ಮಗ ಬಾಜೀರಾವನನ್ನು ಮರಾಠಾ ಪೇಶ್ವೆಯಾಗಿ ಘೋಷಿಸಿದರು. ತನ್ನ ತಂದೆಯ ನಿಧನದ ನಂತರ ಅಖಂಡ ಮರಾಠಾ ಸಾಮ್ರಾಜ್ಯದ ಜವಾಬ್ದಾರಿ 20ರ ನವಯುವಕನಾಗಿದ್ದ ಬಾಜೀರಾವನ ಹೇಗಲೆರಿತು. ತನ್ನ ತಂದೆಯೊಂದಿಗಿನ ಆಪ್ತ ಒಡನಾಟದಿಂದ ಅವನಿಗೆ ಶಸ್ತ್ರಗಳ ಮೇಲೆ ಸಂಪೂರ್ಣ ಹಿಡಿತು ಸಿಕ್ಕಿತ್ತು. ಜೊತೆಗೆ ಹುಟ್ಟು ಬ್ರಾಹ್ಮಣನಾಗಿರುವುದರಿಂದ ಸಕಲ ಶಾಸ್ತ್ರಗಳ ಅರಿವು ಸಹ ಇತ್ತು. ಹಲವರ ವಿರೋಧದ ನಡುವೆಯು 20ರ ನವ ಯುವಕ ಮರಾಠಾ ಸಾಮ್ರಾಜ್ಯದ ಪೇಶ್ವೆಯಾಗಿರುವುದರಿಂದ ಮರಾಠಾ ಸೈನ್ಯದಲ್ಲಿ ಒಂದು ಮಿಂಚಿನ ಸಂಚಾರ ಶುರುವಾಯಿತು. ನೋಡು ನೋಡುತ್ತಿದ್ದಂತೆ ಬಾಜೀರಾವ ತನ್ನ ಪರಾಕ್ರಮದ ಪ್ರದರ್ಶನದಿಂದ ಬಾಜೀರಾವ ಬಲ್ಲಾಳ ಎಂದು ಹೆಸರುವಾಸಿಯಾದನು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                  ತೋಳಲ್ಲಿ ನೂರಾನೆ ತಾಕತ್ತು, ಕಣ್ಣಲ್ಲಿ ಕೆಂಡದಂಥ ಕೋಪ, ನಡೆಯಲ್ಲಿ ಚಿರತೆಯ ವೇಗದ ಜೊತೆಗೆ ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಿ ಅಖಂಡ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿ ಬಾಜೀರಾವನ ನಿದ್ದೆಗಳನ್ನು ಕಿತ್ತುಕೊಂಡವು. "ರಾತ್ರಿಗಳು ನಿದ್ರಿಸಲು ಮೀಸಲಾಗಿಲ್ಲ. ಶೂರರಿಗೆ ರಾತ್ರಿಗಳು ತಮ್ಮ ಶತ್ರುಗಳನ್ನು ಸದೆ ಬಡಿದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಸುವರ್ಣಾವಕಾಶಗಳಾಗಿವೆ" ಎಂಬುದು ಬಾಜೀರಾವನ ಬಲವಾದ ನಂಬಿಕೆಯಾಗಿತ್ತು. ಮೊಘಲರ ದೆಹಲಿಯ ಕೋಟೆಗಳ ಮೇಲೆ ಮರಾಠಾ ಭಗವಾ ಧ್ವಜಗಳು ರಾರಾಜಿಸುವಂತೆ ಮಾಡುವುದು ಬಾಜೀರಾವನ ಮಹಾಭಿಲಾಷೆಯಾಗಿತ್ತು. ಅವನ ಆರ್ಭಟಕ್ಕೆ ದೆಹಲಿ ಸುಲ್ತಾನರ ಸಿಂಹಾಸನಕ್ಕೆ ನಡುಕ ಉಂಟಾಗುತ್ತಿತ್ತು. ಆತ ತನ್ನ 20 ವರ್ಷಗಳ ಪೇಶ್ವೆ ಪದವಿಯಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತಾರಕ್ಕಾಗಿ ಸುಮಾರು 40ಕ್ಕೂ ಹೆಚ್ಚು ಯುದ್ಧಗಳನ್ನು ಮಾಡಿದನು. ಅದರಲ್ಲಿ ಆತ ಯಾವುದರಲ್ಲಿಯೂ ಸೋಲಿನ ರುಚಿ ನೋಡಲಿಲ್ಲ. ಹೆಜ್ಜೆಹೆಜ್ಜೆಗೂ ವಿಜಯಲಕ್ಷ್ಮಿ ಅವನಿಗೆ ಸಾಥ ಕೊಟ್ಟಿದ್ದಳು. ಆತ ನಿಜಕ್ಕೂ ಸೋಲಿಲ್ಲದ ಮರಾಠಾ ಶೂರ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                        1728ರಲ್ಲಿ ಮಹ್ಮದ ಖಾನ್ ಬಂಗಷನು ಬುಂದೆಲಖಂಡದ ಮೇಲೆ ದಾಳಿ ಅಲ್ಲಿನ ರಾಜಾ ಛತ್ರಸಾಲನನ್ನು ಕುಟುಂಬ ಸಮೇತವಾಗಿ ಸೆರೆಮನೆಗೆ ತಳ್ಳಿದನು. ರಾಜಾ ಛತ್ರಸಾಲನು ಅವನ ಕಣ್ತಪ್ಪಿಸಿ ಮರಾಠಾ ಪೇಶ್ವೆ ಬಾಜೀರಾವನಿಗೆ ಸಹಾಯ ಕೋರಿ ಒಂದು ಗುಪ್ತ ಪತ್ರವನ್ನು ಬರೆದನು. ಆದರೆ ಆ ಸಮಯದಲ್ಲಿ ಬಾಜೀರಾವ ಮಾಳ್ವಾ ಕದನದಲ್ಲಿ ನಿರತನಾಗಿದ್ದನು. ಬಾಜೀರಾವ ಮಾಳ್ವಾ ಕದನದಲ್ಲಿ ವಿಜಯವಾಗಿ ಕೂಡಲೇ ಬುಂದೇಲಖಂಡದ ಮೇಲೆ ದಾಳಿ ಮಾಡಿ ಬಂಗಷನನ್ನು ಸದೆ ಬಡಿದು ರಾಜಾ ಛತ್ರಸಾಲನನ್ನು ಬಂಧಮುಕ್ತಗೊಳಿಸಿದನು. ಈ ಖುಷಿಯಲ್ಲಿ ರಾಜಾ ಛತ್ರಸಾಲನು ಬಾಜೀರಾವನಿಗೆ ತನ್ನ ಸಾಮ್ರಾಜ್ಯದ ಒಂದು ಭಾಗದ ಜೊತೆಗೆ 33 ಲಕ್ಷ ಚಿನ್ನದ ವರಹಗಳನ್ನು ಸೇರಿ ಇನ್ನು ಕೆಲವು ಬೆಲೆ ಬಾಳುವ ಉಡುಗೊರೆಗಳನ್ನು ನೀಡಿದನು. ಆತ ಬಾಜೀರಾವನನ್ನು ಉಚಿತ ರೀತಿಯಲ್ಲಿ ಸತ್ಕರಿಸಿದನು. ಅವನನ್ನು ಬಿಳ್ಕೊಡುವಾಗ ರಾಜಾ ಛತ್ರಸಾಲನು ತನ್ನ ಮಗಳಾದ ಮಸ್ತಾನಿಯ ಕೈಯನ್ನು ಮದುವೆಯಾಗುವುದಕ್ಕಾಗಿ ಬಾಜೀರಾವನಿಗೆ ನೀಡಿದನು. 

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                    ರಾಜಾ ಛತ್ರಸಾಲನ ಅತಿಥಿಯನ್ನು ನಿರಾಕರಿಸುವ ಮನಸ್ಸಾಗದೆ ಬಾಜೀರಾವ ಮಸ್ತಾನಿಯೊಂದಿಗೆ ವಿವಾಹವಾಗಿ ಪುಣೆಯ ದಾರಿ ಹಿಡಿದನು. ಮಸ್ತಾನಿಯನ್ನು ನೋಡುವುದಕ್ಕಿಂತ ಮುಂಚೆ ಬಾಜೀರಾವ ಅವಳ ಬಗ್ಗೆ ಬಹಳಷ್ಟು ಕೇಳಿದ್ದನು. ಆಕೆ ಕೇವಲ ಸೌಂದರ್ಯದ ಸೆಲೆಯಾಗಿ ಉಳಿಯದೇ ಬಹುಮುಖ ಪ್ರತಿಭೆಯಾಗಿದ್ದಳು. ಆಕೆ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳ ಅಧ್ಯಯನ, ಯುದ್ಧನೀತಿ, ಕವಿತೆಗಳನ್ನು ಬರೆಯುವುದು, ಸಂಗೀತ ವಾದ್ಯ ಗಳನ್ನು ನುಡಿಸುವುದು, ನೃತ್ಯ ಮಾಡುವುದರಲ್ಲಿ ಪ್ರವೀಣೆಯಾಗಿದ್ದಳು. ಅವಳ ಸೌಂದರ್ಯಕ್ಕಿಂತ ಅಧಿಕವಾಗಿ ಅವಳ ಬಹುಮುಖ ಪ್ರತಿಭೆಗೆ ಮನಸೋತು ಬಾಜೀರಾವ ಮಸ್ತಾನಿಯನ್ನು ಮನಸಾರೆ ಪ್ರೀತಿಸಲು ಪ್ರಾರಂಭಿಸಿದನು. ಈ ನವ ಜೋಡಿ ಪ್ರೇಮ ಪಕ್ಷಿಗಳು ನೂರಾರು ರೊಮ್ಯಾಂಟಿಕ್ ಕನಸುಗಳನ್ನು ಕಟ್ಟಿಕೊಂಡು ಪುಣೆಗೆ ಆಗಮಿಸಿದರು. ಆದರೆ ಪುಣೆಯಲ್ಲಿ ಅವರಿಗೆ ಬೇರೆ ರೀತಿಯ ಅತಿಥ್ಯ ಕಾದಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                         ಮಸ್ತಾನಿ ಬಾಜೀರಾವ ಬಲ್ಲಾಳನ ಎರಡನೇ ಪತ್ನಿಯಾಗಿ ಪುಣೆಗೆ ಆಗಮಿಸಿದ್ದು ಅವನ ಮನೆಯವರಷ್ಟೇ ಅಲ್ಲದೆ ಇಡೀ  ಮರಾಠಾ ಸಾಮ್ರಾಜ್ಯಕ್ಕೆ ಕಸಿವಿಸಿ ಉಂಟು ಮಾಡಿತ್ತು. ಅಪ್ಪಟ ಬ್ರಾಹ್ಮಣರಾದ ಬಾಜೀರಾವನ ಮನೆಯವರು ಅರ್ಧ ಮುಸ್ಲಿಂ ಅರ್ಧ ಹಿಂದುವಾದ ಮಸ್ತಾನಿಯನ್ನು ಮನೆಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳ ತಂದೆ ರಾಜಾ ಛತ್ರಸಾಲನು ಹಿಂದುವಾಗಿದ್ದನು. ಆದರೆ ಅವಳ ತಾಯಿ ರುಹಾನಿಬಾಯಿ ಬೇಗಂ ಮುಸ್ಲಿಮಳಾಗಿದ್ದಳು. ಮಸ್ತಾನಿ ತಂದೆಯಂತೆ ಶ್ರೀಕೃಷ್ಣನ ಭಕ್ತಳಾಗಿದ್ದರೂ ಸಹ ತಾಯಿಯಂತೆ ಮುಸ್ಲಿಂ ಸಂಪ್ರದಾಯವನ್ನು ಅನುಸರಿಸಿದ್ದಳು. ಹೀಗಾಗಿ ಅರೆಹಿಂದುವಾದ ಮಸ್ತಾನಿಯನ್ನು ಮನೆ ಸೊಸೆಯಾಗಿಸಿಕೊಳ್ಳಲು ಬಾಜೀರಾವನ ತಾಯಿ ರಾಧಾಬಾಯಿ ಹಿಂದೇಟು ಹಾಕಿದರು. ಎಲ್ಲರ ವಿರೋಧದ ನಡುವೆಯು ಬಾಜೀರಾವ ಮಸ್ತಾನಿಯನ್ನು ಪುಣೆಯ ಶನಿವಾರವಾಡಾದಲ್ಲಿ ಇರಿಸಿದನು. ಆದರೆ ಅವನ ಮನೆಯವರು ಅವಳನ್ನು ಪ್ರತಿಕ್ಷಣ ಮಾತಿನಿಂದ ಕೊಲ್ಲಲು ಪ್ರಾರಂಭಿಸಿದರು. ಸಾಲದಕ್ಕೆ ಅವಳು ಬಾಜೀರಾವನ ಪತ್ನಿಯಲ್ಲ, ಇಟ್ಟುಕೊಂಡ ಉಪಪತ್ನಿ ಎಂದೆಲ್ಲ ಹೀಯಾಳಿಸಿ ಅವಮಾನ ಮಾಡಿದರು. ತನ್ನ ಪ್ರೇಯಸಿ ಈ ರೀತಿಯ ಚುಚ್ಚು ಮಾತುಗಳನ್ನು ಕೇಳಿ ಕೊರಗುತ್ತಿರುವುದನ್ನು ಕಂಡ ಬಾಜೀರಾವ ಅವಳಿಗಾಗಿ ಪ್ರತ್ಯೇಕವಾದ ಒಂದು ಅರಮನೆಯನ್ನು ಕಟ್ಟಿದನು. ಮಸ್ತಾನಿ ಶನಿವಾರವಾಡಾವನ್ನು ಬಿಟ್ಟು  ಅಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆ ಅರಮನೆಗೆ ಮಸ್ತಾನಿ ಮಹಲ ಎಂಬ ಹೆಸರು ಬಂದಿತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

               ಮಸ್ತಾನಿ ಶನಿವಾರವಾಡಾ ಬಿಟ್ಟು ಬೇರೆ ಮನೆಯಲ್ಲಿದ್ದರೂ ಬಾಜೀರಾವನ ಮನೆಯವರಿಗೆ ಅವಳ ಮೇಲಿನ ವೈಮನಸ್ಸು ಕಮ್ಮಿಯಾಗಿರಲಿಲ್ಲ. ಅವರು ಬಾಜೀರಾವನನ್ನು ಅವಳಿಂದ ದೂರವಿರಿಸಲು ಸಾಕಷ್ಟು ಕುಟಿಲತೆಗಳನ್ನು ಮಾಡಿದರು. ಆದರೆ ಬಾಜೀರಾವ "ನಾನು ಮಸ್ತಾನಿಯನ್ನು ಪ್ರೀತಿಸಿ ಮದುವೆಯಾಗಿರುವೆ. ಯಾವುದೇ ಕಾರಣಕ್ಕೂ ನಾನು ಅವಳ ಕೈಬಿಡಲ್ಲ" ಎಂದೇಳಿ ಎಲ್ಲರ ಬಾಯ್ಮುಚ್ಚಿಸಿದನು. ಆದರೆ ಅವನ ಮೊದಲ ಹೆಂಡತಿ ಕಾಶಿಬಾಯಿ ಅವನ ಮಾತುಗಳನ್ನು ಕೇಳಿ ಸುಮ್ಮನೆ ಕೂಡಲಿಲ್ಲ. ಆಕೆ ಅವನನ್ನು ಚುಚ್ಚು ಮಾತುಗಳಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಾರಂಭಿಸಿದಳು. ಕಾಶೀಬಾಯಿಗೆ ಮಸ್ತಾನಿಯ ಮೇಲೆ ಯಾವುದೇ ದೊಡ್ಡ ಕೋಪವಿರಲಿಲ್ಲ. ಆದರೆ ಆಕೆ ಮರಾಠಾ ಸಾಮ್ರಾಜ್ಯದ ಉನ್ನತಿಗಾಗಿ ಬದ್ಧವೈರಿಗಳಾದ ಮುಸ್ಲಿಮರನ್ನು ದ್ವೇಷಿಸುತ್ತಿದ್ದಳು. ಅವಳಿಗೆ ಮಸ್ತಾನಿ ಮೇಲಿನ ಕೋಪಕ್ಕಿಂತ ಮರಾಠಾ ಸಾಮ್ರಾಜ್ಯದ ಮೇಲಿನ ಪ್ರೀತಿಯೇ ಹೆಚ್ಚಾಗಿತ್ತು. ಅದಕ್ಕಾಗಿ ಆಕೆ ಮಸ್ತಾನಿಯ ವಿಷಯದಲ್ಲಿ ಮೌನ ತಾಳಿ ಬಾಜೀರಾವನೊಂದಿಗೆ ಸಂಸಾರ ಸಾಗಿಸಿ ಮೂರು ಮಕ್ಕಳ ತಾಯಿಯಾದಳು. ಆದರೂ ಅವಳು ತನ್ನ ಅತ್ತೆಗೆ ಹೆದರಿ ಮಸ್ತಾನಿಯನ್ನು ದ್ವೇಷಿಸುವಂತೆ ನಟಿಸುತ್ತಿದ್ದಳು. ಏಕೆಂದರೆ ಆವಾಗಿನ ಕಾಲದಲ್ಲಿ ರಾಜಮಹಾರಾಜರು ನಾಲ್ಕಾರು ಪತ್ನಿಯರನ್ನು ಹೊಂದುವುದು ಸಾಮಾನ್ಯ ಸಂಗತಿಯಾಗಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                     ಬಾಜೀರಾವನ ಮನೆಯವರನ್ನು ಸೇರಿ ಮರಾಠಾ ಪ್ರಮುಖರು ಮಸ್ತಾನಿಯನ್ನು ದ್ವೇಷಿಸುತ್ತಲೇ ಬಂದರು. ಆದರೆ ಬಾಜೀರಾವ ಮಾತ್ರ ಮಸ್ತಾನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಲೇ ಬಂದನು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಮಸ್ತಾನಿ ಓರ್ವ ಗಂಡು ಮಗುವಿಗೆ ಜನ್ಮವಿತ್ತಳು. ಮಸ್ತಾನಿ ಆ ಮಗುವಿಗೆ ಪ್ರೀತಿಯಿಂದ ಕೃಷ್ಣ ರಾವ್ ಎಂದು ಕರೆದಳು. ಆದರೆ ಪುಣೆಯಲ್ಲಿನ ಬ್ರಾಹ್ಮಣರು ಮಸ್ತಾನಿಯ ಮಗ ಕೃಷ್ಣನಿಗೆ ಉಪನಯನ ಮಾಡದೆ ತಮ್ಮ ಜಾತಿ ರಾಜಕಾರಣವನ್ನು ಹಾಗೆಯೇ ಮುಂದುವರೆಸಿದರು. ಇದರಿಂದ ಕೆರಳಿದ ಬಾಜೀರಾವ ಕೃಷ್ಣರಾವನ ಹೆಸರನ್ನು ಶಮಶೇರ್ ಬಹಾದ್ದೂರ ಎಂದು ಬದಲಿಸಿ ಬ್ರಾಹ್ಮಣರ ಹಠಕ್ಕೆ ತಕ್ಕ ತಿರುಗೇಟು ನೀಡಿದನು. ಈ ಘಟನೆ ಮರಾಠರಿಗೆ ಮಸ್ತಾನಿ ಮೇಲಿದ್ದ ವೈಮನಸ್ಸನ್ನು ಮತ್ತಷ್ಟು ಹೆಚ್ಚಿಸಿತು. ಮಸ್ತಾನಿಯ ವಿಷಯವಾಗಿ ಬಾಜೀರಾವನ ಮನೆಯಲ್ಲಿ ಪದೇಪದೇ ವಾಗ್ವಾದಗಳು ಆಗುತ್ತಲೇ ಹೋದವು. ಇದರಿಂದ ಬಾಜೀರಾವ ಮಾನಸಿಕವಾಗಿ ಕುಗ್ಗಿ ಹೋದನು. ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತ್ನಿ ಕಾಶೀಬಾಯಿ ಹಾಗೂ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಸ್ತಾನಿ, ಈ ಇಬ್ಬರ ಪ್ರೇಮದ ಮಧ್ಯೆ ಸಿಲುಕಿ ಬಾಜೀರಾವ ನಲುಗಿ ಹೋದನು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                ತಾನು ಪ್ರೀತಿಸಿ ಮದುವೆಯಾದ ಹೆಣ್ಣಿಗೆ ಮನೆಯಲ್ಲಿ, ಸಮಾಜದಲ್ಲಿ ಗೌರವ ತಂದು ಕೊಡಲಾಗಲಿಲ್ಲವೆಂಬ ಕೊರಗಿನಲ್ಲಿ ಬಾಜೀರಾವ ಪೇಶ್ವೆ ಪದವಿಯ ಮೇಲಿನ ನಿಷ್ಠೆಯನ್ನು ಕಡಿಮೆ ಮಾಡಿದನು. ಮರಾಠರಿಗೆ ತಮ್ಮ ಸಾಮ್ರಾಜ್ಯ ವಿಸ್ತರಣೆ ಮುಖ್ಯವಾಗಿತ್ತು. ಆದರೆ ಬಾಜೀರಾವನಿಗೆ ಸದ್ಯಕ್ಕೆ ಮಸ್ತಾನಿಯ ಆತ್ಮಸನ್ಮಾನ ಹಾಗೂ ಗೌರವ ಮುಖ್ಯವಾಗಿತ್ತು. ಮಸ್ತಾನಿ ಬಾಜೀರಾವನ ಜೊತೆ ಸೇರಿ ಎಷ್ಟೋ ಯುದ್ಧಗಳಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತರಣೆಗಾಗಿ ಹೋರಾಡಿದ್ದಳು. ಆದರೂ ಅವಳನ್ನು ಮನೆ ಸೊಸೆಯಾಗಿ ಆದರಿಸಲು ಬಾಜೀರಾವನ ಮನೆಯವರು ಒಪ್ಪಲಿಲ್ಲ. ಸತತ 20 ವರ್ಷಗಳ ಕಾಲ ಮರಾಠಾ ಸಾಮ್ರಾಜ್ಯ ವಿಸ್ತರಣೆಗಾಗಿ 41 ಯುದ್ಧಗಳನ್ನು ಗೆದ್ದ ಸೋಲಿಲ್ಲದ ಸರದಾರ ಬಾಜೀರಾವ ಮಸ್ತಾನಿಯ ವಿಷಯದಲ್ಲಿ ತನ್ನ ಮನೆಯವರ ಮನಸ್ಸನ್ನು ಗೆಲ್ಲುವಲ್ಲಿ ಹೀನಾಯವಾಗಿ ಸೋತನು. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ದೆಹಲಿಯ ಮೇಲೆ ದಾಳಿ ಅಖಂಡ ಹಿಂದು ಸಾಮ್ರಾಜ್ಯದ ವಿಜಯ ಪತಾಕೆಯನ್ನು ಹಾರಿಸಲು ಮರಾಠಾ ಸೈನ್ಯ ಸಮರ್ಥವಾಗಿ ಬಾಜೀರಾವನಿಗಾಗಿ ಕಾಯುತ್ತಾ ನಿಂತಿತ್ತು. ಛತ್ರಪತಿ ಶಾಹು ಮಹಾರಾಜರ ಆದೇಶದ ಮೇರೆಗೆ ಮರಾಠಾ ಸೈನ್ಯ ಬಾಜೀರಾವನ ನೇತೃತ್ವದಲ್ಲಿ ದೆಹಲಿಯ ಕಡೆಗೆ ವೀರಾವೇಶದಿಂದ ಸಾಗಿತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                      ಬಾಜೀರಾವ ಯುದ್ಧಕ್ಕೆ ಹೋಗಿರುವುದರಿಂದ ಮಸ್ತಾನಿ ತನ್ನ ಮಹಲಿನಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಬಾಜೀರಾವನ ತಮ್ಮ ಚಿಮಾಜಿ ಅಪ್ಪ ಮಸ್ತಾನಿಯನ್ನು ಗೃಹ ಬಂಧನದಲ್ಲಿ ಇರಿಸಿದನು. ಅತ್ತ ಕಡೆ ಬಾಜೀರಾವ ನರ್ಮದಾ ನದಿ ತೀರದ ರಾವರಖೇಡಿ ಎಂಬಲ್ಲಿ ದೇಹದ ಉಷ್ಣತಾ ಹೊಡೆತದಿಂದ ಸಾವನ್ನಪ್ಪಿದನು. ಆತ ಗತಿಸಿದ ಒಂದು ವರ್ಷದೊಳಗೆ ಮಸ್ತಾನಿ ಸಹ ದೇಹತ್ಯಾಗ ಮಾಡಿದಳು. ಅವಳ ಸಾವಿನ ಬಗ್ಗೆ ಸ್ಪಷ್ಟವಾದ ಲಿಖಿತ ಮಾಹಿತಿಯಿಲ್ಲ. ಆಕೆ ಬಾಜೀರಾವನ ಸಾವಿನ ಸುದ್ದಿ ಕೇಳಿ ಎದೆಯೊಡೆದು ಸತ್ತಳು ಎಂಬ ಮಾತಿದೆ. ಅದರ ಜೊತೆಗೆ ಆಕೆ ಬಾಜೀರಾವನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ತನ್ನ ವಜ್ರದುಂಗುರವನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಎಂಬ ಮಾತು ಇದೆ. ಮನಸಾರೆ ಪ್ರೀತಿಸಿ ಮದುವೆಯಾದ ಬಾಜೀರಾವ ಮಸ್ತಾನಿಯರು ಜಾತಿ ರಾಜಕಾರಣದ ವಿಷದಿಂದಾಗಿ ನೆಮ್ಮದಿಯಾಗಿ ಬಾಳಲಾರದೆ ಕಣ್ಣೀರಲ್ಲಿ ಕೈ ತೊಳೆದು ಕಣ್ಮರೆಯಾದರು. ಇಂದಿಗೂ ಅವರನ್ನು ಇತಿಹಾಸ ನೆನೆಯುತ್ತದೆ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                ಈ ಬಾಜೀರಾವ ಮಸ್ತಾನಿಯ ಪ್ರೇಮಕಥೆ ದಿನಾಲು ನನ್ನನ್ನು ಕಾಡುತ್ತದೆ. ಏಕೆಂದರೆ ಅವರಿದ್ದ ಪುಣೆ ನಗರದಲ್ಲಿ ನಾನು ವಾರಕ್ಕೊಮ್ಮೆ ಓಡಾಡುತ್ತೇನೆ. ಕಳೆದ ವರ್ಷ ನಾನು ಪುಣೆಯಲ್ಲಿ ಫ್ಯಾಷನ್ ಫೋಟೋಗ್ರಾಫಿ ಕಲಿಯಲು ಕಾಲೇಜು ಸೇರಿದಾಗ ಬಾಜೀರಾವನ ಶನಿವಾರವಾಡಾ ಹಾಗೂ ಮಸ್ತಾನಿಯ ಮಸ್ತಾನಿ ಮಹಲನ್ನು ದಿನಾ ನೋಡುತ್ತಿದ್ದೆ. ಏಕೆಂದರೆ ನಮ್ಮ ಕಾಲೇಜು ಅದೇ ಬೀದಿಯಲ್ಲಿತ್ತು. ಈಗಲೂ ಅಷ್ಟೇ ನಾನು ನನ್ನ ಬ್ಯುಸಿನೆಸ್  ನಿಮಿತ್ಯವಾಗಿ ವಾರಕ್ಕೊಮ್ಮೆ  ಪುಣೆಗೆ ಹೋದಾಗ ಅಲ್ಲಿಗೆ ಹೋಗಿಯೇ ಬರುವೆ. ಏಕೆಂದರೆ ಪುಣೆಗೆ ಹೋದ ಮೇಲೆ ಶನಿವಾರವಾಡಾ ಕಣ್ಣಿಗೆ ಬೀಳದೆ ಇರದು. ನೀವು ಯಾವತ್ತಾದ್ರೂ ಪುಣೆಗೆ ಹೋದರೆ ತಪ್ಪದೆ ಶನಿವಾರವಾಡಾ ಮತ್ತು ಮಸ್ತಾನಿ ಮಹಲನ್ನು ನೋಡಿಕೊಂಡು ಬನ್ನಿ. ಮಸ್ತಾನಿ ಮಹಲ ಸದ್ಯಕ್ಕೆ ದಿನನಾಥ ಕೇಳ್ಕರ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೇರಿಕೊಂಡಿದೆ. ಸದ್ಯಕ್ಕೆ ಅವುಗಳಲ್ಲಿ ಹೇಳಿಕೊಳ್ಳುವಂಥ ವೈಭವವೇನು ಉಳಿದಿಲ್ಲ. ಆದರೆ ಒಂದ್ಸಲ ನೋಡುವುದರಲ್ಲಿ ಅಡ್ಡಿಯೆನಿಲ್ಲ. ನನಗಿರುವ ಮತ್ತೊಂದು ಬೇಜಾರು ಏನೆಂದರೆ ಅವತ್ತು ಮಸ್ತಾನಿ ಮಹಲಿನ ನೆರಳಿನಂತೆ ಇದ್ದ ಬೀದಿ ಇವತ್ತು ಬುಧವಾರ ಪೇಠ ಎಂಬ ಹೆಸರಿನಿಂದ ವೈಷ್ಯವರ ಸ್ವರ್ಗವಾಗಿದೆ. ಬೆಳಿಗ್ಗೆ ಪುಸ್ತಕಗಳ ಮಳಿಗೆಯಾಗಿ ತೆರೆದುಕೊಳ್ಳುವ ಆ ಬೀದಿ ಸಂಜೆಯಾಗುತ್ತಿದ್ದಂತೆ ರೆಡಲೈಟ್ ಏರಿಯಾವಾಗಿ ಬಿಡುತ್ತದೆ. ಅದು ಬೇರೆ ವಿಷಯ ಬಿಡಿ. ಬಾಜೀರಾವ ಮಸ್ತಾನಿಯ ಈ ಪ್ರೇಮಕಥೆಯನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಪ್ರತಿದಿನ ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ ಇತ್ಯಾದಿಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

Blogger ನಿಂದ ಸಾಮರ್ಥ್ಯಹೊಂದಿದೆ.