ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

              ಇಟಲಿಯ ವೆರೊನಾ ನಗರದ ಎರಡು ಪ್ರಖ್ಯಾತ ಕುಟುಂಬಗಳಾದ ಮಾಂಟೆಗ್ಯೂ ಮತ್ತು ಕ್ಯಾಪುಲೆಟಗಳ ಮಧ್ಯೆ ಹಲವಾರು ವರ್ಷಗಳಿಂದ ಶೀತಲ ಸಮರ ನಡೆದುಕೊಂಡು ಬಂದಿತ್ತು. ಆ ಎರಡು ಕುಟುಂಬಗಳ ಮಧ್ಯೆ ಆಗಾಗ ನಡೆಯುವ ಕಲಹಗಳಿಂದ ವೆರೊನಾ ನಗರದ ಶಾಂತಿ ಹಾಳಾಗಿತ್ತು. ಹೀಗಾಗಿ ವೆರೊನಾದ ರಾಜ ಪ್ರಿನ್ಸ್ ಎಸ್ಕಾಲಸ್ ಆ ಎರಡು ಕುಟುಂಬಗಳ ಮುಖ್ಯಸ್ಥರಿಗೆ ಬಹಳ ಖಡಕ್ಕಾದ ಎಚ್ಚರಿಕೆಯನ್ನು ಕೊಟ್ಟನು. ಒಂದು ವೇಳೆ ನಿಮ್ಮ ಕಲಹದಿಂದಾಗಿ ನಗರದ ಶಾಂತಿ ಭಂಗವಾದರೆ ಯಾವುದೇ ಮುಲಾಜಿಲ್ಲದೆ ನಿಮಗೆ ಮರಣ ದಂಡನೆ ವಿಧಿಸುವುದಾಗಿ ಹೆದರಿಸಿ ಅವರನ್ನು ಸ್ವಲ್ಪ ಮಟ್ಟಿಗೆ ಶಾಂತವಾಗಿರಿಸಿದನು. ಈ ಶಾಂತ ಸಂದರ್ಭವನ್ನು ಗಮನಿಸಿ ಪ್ರಿನ್ಸ್ ಎಸ್ಕಾಲಸನ ಸೋದರ ಸಂಬಂಧಿಯಾದ ಕೌಂಟ್ ಪ್ಯಾರಿಸ್ ಕ್ಯಾಪುಲೆಟನ ಮಗಳಾದ ಜ್ಯೂಲಿಯಟಳನ್ನು ಮದುವೆಯಾಗುವ ಮನದಿಂಗಿತವನ್ನು ವ್ಯಕ್ತಪಡಿಸುತ್ತಾನೆ. ಆದರೆ ಕ್ಯಾಪುಲೆಟ್ ತನ್ನ ಮಗಳಿನ್ನು ಚಿಕ್ಕವಳಿರುವುದರಿಂದ ಅವನಿಗೆ  ಇನ್ನೆರಡು ವರ್ಷ ಕಾಯಲು ಹೇಳುತ್ತಾನೆ. ಕ್ಯಾಪುಲೆಟನ ಮಾತಿಗೆ ಕೌಂಟ್ ಪ್ಯಾರಿಸ್ ಒಪ್ಪಿಕೊಳ್ಳುತ್ತಾನೆ. ಅವನ ಹಾಗೂ ಜ್ಯೂಲಿಯಟಳ ಮದುವೆ ನಿಗದಿಯಾಗುತ್ತದೆ. ಈ ಖುಷಿಯಲ್ಲಿ ಕ್ಯಾಪುಲೆಟ್ ಒಂದು ಬಾಲರೂಮ್ ಡ್ಯಾನ್ಸ್ ಪಾರ್ಟಿಯನ್ನು ಆಯೋಜಿಸುತ್ತಾನೆ. ಆದರೆ ಜ್ಯೂಲಿಯಟಳಿಗೆ ಈ ಮದುವೆ ಇಷ್ಟವಾಗುವುದಿಲ್ಲ. ಅವಳ ತಾಯಿ ಹಾಗೂ ಅವಳ ನರ್ಸ್ ಅವಳನ್ನು ಈ ಮದುವೆಗೆ ಒಪ್ಪಿಕೊಳ್ಳುವಂತೆ ಪುಸಲಾಯಿಸುತ್ತಾರೆ. ಆದರೆ ಆಕೆ ತನ್ನ ನಿರ್ಧಾರವನ್ನು ತಿಳಿಸದೆ ಅಡ್ಡ ಗೋಡೆಯ ಮೇಲೆ ದೀಪವಿಡುತ್ತಾಳೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

    ಕ್ಯಾಪುಲೆಟನ ಕುಟುಂಬ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡುತ್ತಾ ಸಂತಸದ ಕಡಲಲ್ಲಿ ತೇಲಾಡುತ್ತಿತ್ತು. ಆದರೆ ಅವನ ಬದ್ಧವೈರಿ ಮಾಂಟೆಗ್ಯೂನ ಕುಟುಂಬ ಯಾವುದೇ ಸಡಗರವಿಲ್ಲದೆ ಶಾಂತವಾಗಿತ್ತು. ಮಾಂಟೆಗ್ಯೂವಿನ ಮಗ ರೋಮಿಯೋ ತನ್ನ ಅತ್ತೆ ಮಗಳಾದ ರೊಸಾಲಿನಳನ್ನು ಪ್ರೀತಿಸಿ ಅವಳಿಂದ ದೂರಾಗಿ ವಿರಹ ಯಾತನೆಯನ್ನು ಅನುಭವಿಸುತ್ತಿರುತ್ತಾನೆ. ರೋಮಿಯೊನ ಮನೋಯಾತನೆಗೆ ಕಾರಣವೇನೆಂಬುದು ಅವನ ಚಿಕ್ಕಪ್ಪ ಬೆನ್ವೊಲಿಯೋನಿಗೆ ಗೊತ್ತಾಗುತ್ತದೆ. ಆತ "ರೊಸಾಜಿನ ಕ್ಯಾಪುಲೆಟನ ಡ್ಯಾನ್ಸ್ ಪಾರ್ಟಿಗೆ ಖಂಡಿತ ಬಂದಿರುತ್ತಾಳೆ" ಎಂಬ ನಂಬಿಕೆಯ ಮೇಲೆ ರೋಮಿಯೋನನ್ನು ಕ್ಯಾಪುಲೆಟನ ಪಾರ್ಟಿಗೆ ಹೋಗಿ ಅವಳನ್ನು ಭೇಟಿಯಾಗಿ ಮಾತಾಡಿ ಅವಳ ಮನವೊಲಿಸಿ ರಾಜಿಯಾಗುವಂತೆ ಹೇಳುತ್ತಾನೆ. ಚಿಕ್ಕಪ್ಪನ ಮಾತಿಗೆ ರೋಮಿಯೋ ನಿರಾಕರಿಸಿದಾಗ ಅವನ ಗೆಳೆಯ ಮರ್ಕುಟಿಯೋ ಅವನನ್ನು ಒತ್ತಾಯ ಮಾಡಿ ರೊಸಾಲಿನಳನ್ನು ಭೇಟಿಯಾಗಲು ಕ್ಯಾಪುಲೆಟನ ಪಾರ್ಟಿಗೆ ಕಳುಹಿಸುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                        ರೊಸಾಲಿನಳನ್ನು ಭೇಟಿಯಾಗುವುದಕ್ಕಾಗಿ ರೋಮಿಯೋ ತಮ್ಮ ಬದ್ಧವೈರಿ ಕ್ಯಾಪುಲೆಟನ ಪಾರ್ಟಿಗೆ ಅನುಮತಿಯಿಲ್ಲದೆ ನುಗ್ಗುತ್ತಾನೆ. ಪಾರ್ಟಿಯಲ್ಲಿ ಎಲ್ಲರೂ ಬರೀ ಕಣ್ಣುಗಳಷ್ಟೇ ಕಾಣುವಂತೆ ಮುಖಕ್ಕೆ ಮುಖವಾಡಗಳನ್ನು ಹಾಕಿಕೊಂಡು ಮಧ್ಯ ಸೇವಿಸಿ ಕುಣಿಯುತ್ತಿರುತ್ತಾರೆ. ರೋಮಿಯೋ ಕೂಡ ಮುಖಕ್ಕೆ ಮುಖವಾಡವನ್ನು ಧರಿಸಿ ಆ ಪಾರ್ಟಿಯಲ್ಲಿ ರೊಸಾಲಿನಳನ್ನು ಹುಡುಕಲು ಪ್ರಾರಂಭಿಸುತ್ತಾನೆ. ಆತ ಎಷ್ಟೇ ಹುಡುಕಿದರೂ ಅವನಿಗೆ ರೊಸಾಲಿನ ಸಿಗುವುದಿಲ್ಲ. ಆದರೆ ಅವನಿಗೆ ಅವಳ ಬದಲಾಗಿ ಕ್ಯಾಪುಲೆಟನ ಮಗಳಾದ ಜ್ಯೂಲಿಯಟ್ ಸಿಗುತ್ತಾಳೆ. ರೋಮಿಯೋ ಜ್ಯೂಲಿಯಟಳ ಸುಂದರವಾದ ಕಣ್ಣುಗಳನ್ನು ನೋಡಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಅಷ್ಟರಲ್ಲಿ ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟ ರೋಮಿಯೊನನ್ನು ಗುರ್ತಿಸುತ್ತಾನೆ. ವೈರಿ ಕುಟುಂಬದ ಕುಡಿಯನ್ನು ಹೊಸಕಿ ಹಾಕಬೇಕು ಎಂಬ ಯೋಚನೆ ಟೈಲಾಬ್ಟನ ತಲೆಯಲ್ಲಿ ಬರುತ್ತದೆ. ಆದರೆ ಸಂತಸದ ಪಾರ್ಟಿಯಲ್ಲಿ ರಕ್ತದೊಕಳಿಯನ್ನು ಆಡುವುದು ಉಚಿತವಲ್ಲವೆಂದು ಆತ ಸುಮ್ಮನಾಗುತ್ತಾನೆ. ರೋಮಿಯೋ ಜ್ಯೂಲಿಯಟಳೊಂದಿಗೆ ಮಾತನಾಡಲು ಮುಂದಾಗುತ್ತಾನೆ. ಆದರೆ ಟೈಬಾಲ್ಟ ಮಧ್ಯ ಪ್ರವೇಶಿಸಿದಾಗ ರೋಮಿಯೋ ಅಲ್ಲಿಂದ ಫರಾರಿಯಾಗುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                   ರೋಮಿಯೋ ಜಗಳವಾಡಿಕೊಂಡು ದೂರಾದ ರೊಸಾಲಿನಳನ್ನು ಮರೆತು ಜ್ಯೂಲಿಯಟಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ಕಣ್ಣುಗಳಿಂದ ಬಳಿ ಸೆಳೆದ ಸುಂದರಿ ಜ್ಯೂಲಿಯಟಳನ್ನು ಕನಸುಗಳೊಳಗೆ ಬಿಟ್ಟುಕೊಂಡು ನಿದ್ರೆ ಬಾರದೆ ಒದ್ದಾಡುತ್ತಾನೆ. ಮರುದಿನ ರೋಮಿಯೋ ಜ್ಯೂಲಿಯಟಳನ್ನು ಭೇಟಿಯಾಗುವುದಕ್ಕಾಗಿ ರಹಸ್ಯವಾಗಿ ಅವಳ ಮನೆಗೆ ಹೋಗುತ್ತಾನೆ. ಅಷ್ಟರಲ್ಲಿ ಅವಳು ಸಹ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಅವನಿಗಾಗಿ ಕಾಯುತ್ತಿರುತ್ತಾಳೆ. ಆತ ಅವಳ ಮನೆ ಪಕ್ಕದಲ್ಲಿದ್ದ ಮರವನ್ನೇರಿ ಅವಳ ಮಹಡಿ ಮನೆಯನ್ನು ಪ್ರವೇಶಿಸುತ್ತಾನೆ. ರೋಮಿಯೋ ಜ್ಯೂಲಿಯಟಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಆಕೆ ಅವನ ಧೈರ್ಯಕ್ಕೆ ಮೆಚ್ಚಿ ಅವನ ಪ್ರೀತಿಯನ್ನು ಕ್ಷಣಾರ್ಧದಲ್ಲೇ ಒಪ್ಪಿಕೊಳ್ಳುತ್ತಾಳೆ. ಆನಂತರ ಅವರಿಬ್ಬರೂ ಎಲ್ಲರ ಕಣ್ತಪ್ಪಿಸಿ ಜ್ಯೂಲಿಯಟಳ ಮನೆ ಬಾಲ್ಕನಿಯಲ್ಲಿ ದಿನಾಲು ಭೇಟಿಯಾಗುತ್ತಾರೆ. ಅವರ ಕಣ್ಣಾಮುಚ್ಚಾಲೆ ಆಟ ಹೀಗೆಯೇ ಕೆಲವು ದಿನಗಳವರೆಗೆ ಸಾಗುತ್ತದೆ. ಅವರಿಗೂ ನಂತರ ತಾವಿಬ್ಬರೂ ಬದ್ಧವೈರಿಗಳ ಕುಟುಂಬದ ಕುಡಿಗಳು ಎಂಬುದು ಗೊತ್ತಾಗುತ್ತದೆ. ಆದರೆ ಅವರಿಗೆ ತಾವು ಶತ್ರುಗಳೆಂಬ ಸತ್ಯ ಗೊತ್ತಾಗುವಷ್ಟರಲ್ಲಿ ಅವರಿಬ್ಬರೂ ಅನ್ಯೋನ್ಯ ಪ್ರೇಮಿಗಳಾಗಿರುತ್ತಾರೆ. ತಮ್ಮ ಕುಟುಂಬಗಳ ಮಧ್ಯೆಯಿರುವ ದ್ವೇಷಕ್ಕೆ ಹೆದರಿ ರೋಮಿಯೋ ಹಾಗೂ ಜ್ಯೂಲಿಯಟರಿಬ್ಬರು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸರವರ ಸಹಾಯದಿಂದ ಗುಟ್ಟಾಗಿ ಮದುವೆಯಾಗುತ್ತಾರೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                          ಗುಟ್ಟಾಗಿ ಮದುವೆಯಾದ ನಂತರವೂ ರೋಮಿಯೋ ಜ್ಯೂಲಿಯಟರಿಬ್ಬರು ಎಲ್ಲರ ಕಣ್ತಪ್ಪಿಸಿ ಕದ್ದು ಮುಚ್ಚಿ ಭೇಟಿಯಾಗುತ್ತಲೇ ಇರುತ್ತಾರೆ. ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟನಿಗೆ ಇನ್ನೂ ರೋಮಿಯೋ ಮೇಲಿನ ಕೋಪ ತಣ್ಣಗಾಗಿರುವುದಿಲ್ಲ. ಅವನು ರೋಮಿಯೋನ ಮೇಲೆ ಎಗರಿ ಬೀಳಲು ಕಾಯುತ್ತಿರುತ್ತಾನೆ. ಒಂದಿನ ರೋಮಿಯೋ ತನ್ನ ಗೆಳೆಯ ಮರ್ಕುಟಿಯೋನೊಂದಿಗೆ ಬೀದಿಯಲ್ಲಿ ಹೊರಟಿರುವುದನ್ನು ಕಂಡ ಟೈಬಾಲ್ಟ ಅವರೊಂದಿಗೆ ವಾಗ್ವಾದ ನಡೆಸುತ್ತಾನೆ. ಜ್ಯೂಲಿಯಟಳ ಸಂಬಂಧಿ ಎಂಬ ಕಾರಣಕ್ಕೆ ರೋಮಿಯೋ ಸುಮ್ಮನಾಗುತ್ತಾನೆ. ಆದರೆ ಅವನ ಗೆಳೆಯ ಮರ್ಕುಟಿಯೋ ಟೈಬಾಲ್ಟನೊಂದಿಗೆ ಕೈಕೈ ಮಿಲಾಯಿಸುತ್ತಾನೆ. ಈ ಹೊಡೆದಾಟದಲ್ಲಿ ಟೈಬಾಲ್ಟ ಮರ್ಕುಟಿಯೋನನ್ನು ಸಾಯಿಸುತ್ತಾನೆ. ನಂತರ ರೊಚ್ಚಿಗೆದ್ದ ರೋಮಿಯೋ ಟೈಬಾಲ್ಟನನ್ನು ಸಾಯಿಸುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

             ಶಾಂತವಾಗಿದ್ದ ವೆರೊನಾ ನಗರ ಟೈಬಾಲ್ಟನ ಕೊಲೆಯಿಂದಾಗಿ ಮತ್ತೆ ಅಶಾಂತವಾಗುತ್ತದೆ. ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ನಡುವೆ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗುತ್ತದೆ. ನಗರದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಿನ್ಸ್ ಎಸ್ಕಾಲಸ್ ರೋಮಿಯೋನನ್ನು ಗಡಿಪಾರು ಮಾಡುತ್ತಾನೆ. ಒಂದು ವೇಳೆ ರೋಮಿಯೋ ಮರಳಿ ಬಂದರೆ ಅವನನ್ನು ನೇರವಾಗಿ ಗಲ್ಲಿಗೇರಿಸಲಾಗುವುದೆಂದು ಘೋಷಿಸುತ್ತಾನೆ. ರೋಮಿಯೋ ಮಾಡಿಕೊಂಡ ಯಡವಟ್ಟಿನಿಂದಾಗಿ ಜ್ಯೂಲಿಯಟ್ ಕಂಗಾಲಾಗುತ್ತಾಳೆ. ಅವತ್ತಿನ ರಾತ್ರಿ ರೋಮಿಯೋ ಜ್ಯೂಲಿಯಟಳನ್ನು ರಹಸ್ಯವಾಗಿ ಭೇಟಿಯಾಗುತ್ತಾನೆ. ಅವರಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಾರೆ. ನಂತರ ಅವರಿಬ್ಬರೂ ತಮ್ಮ ಮೊದಲ ರಾತ್ರಿಯ ಮಿಲನವನ್ನು ಆಚರಿಸುತ್ತಾರೆ. ಇನ್ಮುಂದೆ ತನಗೆ ರೋಮಿಯೋ ಸಿಗಲ್ಲವೆಂದು ಭಾವಿಸಿ ಜ್ಯೂಲಿಯಟ್ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ. ಸೂರ್ಯ ಕಣ್ಣು ಬಿಡುವಷ್ಟರಲ್ಲಿಯೇ ರೋಮಿಯೋ ಜ್ಯೂಲಿಯಟಳಿಗೆ ಬಾಯ್ ಹೇಳಿ ವೆರೊನಾ ನಗರ ಬಿಟ್ಟು ಸಮೀಪದ ನಗರ ಸೇರುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                ರೋಮಿಯೋ ವೆರೊನಾ ನಗರದಿಂದ ಶಾಶ್ವತವಾಗಿ ದೂರಾದಾಗ ಜ್ಯೂಲಿಯಟ್ ದು:ಖದಿಂದ ತತ್ತರಿಸುತ್ತಾಳೆ. ಅವಳ ತಾಯಿಗೆ ಅವಳ ಅಳುವಿನ ಹಿಂದಿರುವ ಅಸಲಿ ಕಾರಣ ಗೊತ್ತಾಗುತ್ತದೆ. ಅವರು ಅವಳಿಗೆ ಕೌಂಟ್ ಪ್ಯಾರಿಸನನ್ನು ಸದ್ಯಕ್ಕೆ ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ಆದರೆ ಆಕೆ ತಾಯಿಯ ಒತ್ತಾಯಕ್ಕೆ ಮಣಿಯುವುದಿಲ್ಲ. ಏಕೆಂದರೆ ಆಕೆ ಈಗಾಗಲೇ ರೋಮಿಯೋನನ್ನು ಮದುವೆಯಾಗಿ ಅವನೊಂದಿಗೆ ತನ್ನ ಮೈ ಮನಸ್ಸುಗಳೆರಡನ್ನು ಹಂಚಿಕೊಂಡಿರುತ್ತಾಳೆ. ಮನೆಯವರ ಭಯಕ್ಕೆ ಜ್ಯೂಲಿಯಟ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸನನ್ನು ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಾಳೆ. ಆಗ ಆತ ಅವಳಿಗೆ "ಈ ಡ್ರಗ್ಸನ್ನು ತೆಗೆದುಕೋ, ಇದನ್ನು ಸೇವಿಸಿದ ನಂತರ ನೀನು ಎರಡ್ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗುವೆ. ನೀನು ಸತ್ತಂತೆ ನಾಟಕವಾಡು. ಅಷ್ಟರಲ್ಲಿ ನಾನು ರೋಮಿಯೋನನ್ನು ನಿನ್ನ ಬಳಿಗೆ ಕಳುಹಿಸುವೆ. ನೀನು ಪ್ರಜ್ಞೆ ಬಂದ ನಂತರ ರೋಮಿಯೋನೊಂದಿಗೆ ದೂರ ಓಡಿ ಹೋಗಿ ಹಾಯಾಗಿ ಬದುಕು" ಎಂದೇಳಿ ಒಂದು ಔಷಧಿಯನ್ನು ಕೊಡುತ್ತಾನೆ.  ಅವನು ಕೊಟ್ಟ ಔಷಧಿಯನ್ನು ತೆಗೆದುಕೊಂಡು ಜ್ಯೂಲಿಯಟ್ ಮನೆಗೆ ಬರುತ್ತಾಳೆ ಮತ್ತು ಆ ಔಷಧಿಯನ್ನು ಸೇವಿಸುತ್ತಾಳೆ. ಪಾದ್ರಿ ಹೇಳಿದಂತೆ ಅವಳು ಪ್ರಜ್ಞಾಹೀನಳಾಗುತ್ತಾಳೆ. ಅವಳು ಸತ್ತಳೆಂದು ತಿಳಿದು ಅವಳ ಮನೆಯವರು ಗೋಳಿಡುತ್ತಾರೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

               ಪ್ರಜ್ಞಾಹೀನಳಾಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ತಿಳಿದು ಅವಳ ಮನೆಯವರು ಅವಳ ಅಂತ್ಯ ಸಂಸ್ಕಾರದ ಸಿದ್ಧತೆಗಳಿಗೆ ಮುಂದಾಗುತ್ತಾರೆ. ಅವರ ಸಂಪ್ರದಾಯದಂತೆ ಅವಳ ಶವವನ್ನು ಒಂದು ಕೋಫಿನಿನಲ್ಲಿ ಹಾಕಿ ಅವರ ಮನೆಯ ರಹಸ್ಯ ನೆಲಮಾಳಿಗೆಯಲ್ಲಿ ಇಡುತ್ತಾರೆ. ಅವಳು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಮಾತು ಕೇಳಿ ಇಷ್ಟೆಲ್ಲ ಮಾಡಿಕೊಂಡಿರುತ್ತಾಳೆ. ಅವಳಿಗೆ ತಿಳಿಸಿದಂತೆ ಅವಳ ಬಳಿ ರೋಮಿಯೋನನ್ನು ಕಳುಹಿಸುವುದಕ್ಕಾಗಿ ಒಬ್ಬ ದ್ಯೂತನನ್ನು ಕಳುಹಿಸುತ್ತಾನೆ. ಆದರೆ ಆ ದ್ಯೂತ ರೋಮಿಯೋನ ಬಳಿ ಹೋಗಿ ಫ್ರಿಯರ್ ಲಾರೆನ್ಸನ ಪ್ಲ್ಯಾನ್ ತಿಳಿಸುವ ಮುಂಚೆಯೇ ರೋಮಿಯೋ ವೆರೋನಾ ನಗರಕ್ಕೆ ವಾಪಸ್ಸು ಬಂದು ಬಿಡುತ್ತಾನೆ. ಜ್ಯೂಲಿಯಟಳ ಹುಸಿ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಗಡಿಪಾರಾದ ರೋಮಿಯೋನನ್ನು ತಲುಪಿರುತ್ತದೆ. ಅವಳ ಹುಸಿ ಸಾವಿನ ಸುದ್ದಿಯನ್ನು ನಿಜವೆಂದು ನಂಬಿ ರೋಮಿಯೋ ಬಿಕ್ಕಿ ಬಿಕ್ಕಿ ಅಳುತ್ತಾನೆ. ನಂತರ ಹತಾಷೆಯಲ್ಲಿ ಒಂದು ವಿಷದ ಬಾಟಲಿಯನ್ನು ಖರೀದಿಸಿ ಜ್ಯೂಲಿಯಟಳನ್ನು ನೋಡಲು ಹೋಗುತ್ತಾನೆ. ಜ್ಯೂಲಿಯಟಳ ಶವವನ್ನು ಇರಿಸಿದ್ದ ರಹಸ್ಯ ನೆಲಮಾಳಿಗೆಗೆ ರೋಮಿಯೋ ಪ್ರವೇಶಿಸಿರುತ್ತಾನೆ. ಅಷ್ಟರಲ್ಲಿ ಕೌಂಟ್ ಪ್ಯಾರಿಸ್ ಅವಳ ಮೃತ ಶರೀರದ ದರ್ಶನಕ್ಕಾಗಿ ಅಲ್ಲಿಗೆ ಬರುತ್ತಾನೆ. ಜ್ಯೂಲಿಯಟಳ ಸಾವಿಗೆ ಅವನೇ ಕಾರಣನೆಂದು ಕೋಪದಲ್ಲಿ ರೋಮಿಯೋ ಅವನೊಂದಿಗೆ ಕಾದಾಡಿ ಅವನನ್ನು ಸಾಯಿಸುತ್ತಾನೆ. ನಂತರ ಪ್ರಜ್ಞಾಹೀನಳಾಗಿ ಮಲಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ಭಾವಿಸಿ ಅವಳ ಹಣೆಗೆ ಮುತ್ತಿಟ್ಟು ರೋಮಿಯೋ ತಾನು ತಂದಿದ್ದ ವಿಷವನ್ನು ಕುಡಿದು ಪ್ರಾಣ ಬಿಡುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                     ರೋಮಿಯೋ ಸತ್ತ ಕೆಲವು ಗಂಟೆಗಳ ನಂತರ ಜ್ಯೂಲಿಯಟಳಿಗೆ ಪ್ರಜ್ಞೆ ಬರುತ್ತದೆ. ಆಗ ಆಕೆ ರಕ್ತಸಿಕ್ಕವಾದ ರೋಮಿಯೋನ ಚೂರಿಯನ್ನು ಕಂಡು ಗಾಬರಿಯಾಗುತ್ತಾಳೆ. ಜೊತೆಗೆ ಸತ್ತ ರೋಮಿಯೋನನ್ನು ನೋಡಿ ಎದೆ ಬಡಿದುಕೊಂಡು ಅಳುತ್ತಾಳೆ. ಅವಳಿಂದ ಅವನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಯಾರೊಂದಿಗೆ ನಾನು ಓಡಿಹೋಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದುಕೊಂಡಿದ್ದೇನೋ ಈಗ ಅವನೇ ಸತ್ತು ಮಲಗಿರುವಾಗ ಬದುಕಿ ನಾನೇನು ಸಾಧಿಸಲಿ?" ಎಂಬ ಹತಾಷೆಯಲ್ಲಿ ಜ್ಯೂಲಿಯಟ್ ಚೂರಿಯಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. ಅವಳು ನಿಜವಾಗಿಯೂ ಸತ್ತ ನಂತರ ಅವಳ ಮನೆಯವರು ಆ ರಹಸ್ಯ ನೆಲ ಮಾಳಿಗೆಗೆ ಬರುತ್ತಾರೆ. ಅವರು ಅಲ್ಲಿನ ಪ್ಯಾರಿಸನ ಕೊಲೆ, ರೋಮಿಯೋ ಜ್ಯೂಲಿಯಟರ ಆತ್ಮಹತ್ಯೆ ಎಲ್ಲವನ್ನೂ ನೋಡಿ ಬೆಚ್ಚಿ ಬೀಳುತ್ತಾರೆ. ಅಷ್ಟರಲ್ಲಿ ಪ್ರಿನ್ಸ್ ಎಸ್ಕಾಲಸ್ ಸಹ ಬರುತ್ತಾನೆ. ಅವನ ಬೆನ್ನಿಂದೆ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಬಂದು ಅವರಿಬ್ಬರ ಮನೆಯವರಿಗೆ ಅವರ ಪ್ರೇಮಕಥೆಯನ್ನು, ರಹಸ್ಯ ವಿವಾಹವನ್ನು ಮತ್ತು ಸತ್ತಂತೆ ನಾಟಕವಾಡಿ ಓಡಿ ಹೋಗುವ ಯೋಜನೆಯನ್ನು ವಿವರಿಸುತ್ತಾನೆ. ರೋಮಿಯೋ ಜ್ಯೂಲಿಯಟರ ದಾರುಣ ಸಾವಿಗೆ ಅವರಿಬ್ಬರ ಮನೆಯವರು ಮರಗುತ್ತಾರೆ. ನಂತರ ಪ್ರಿನ್ಸ್ ಎಸ್ಕಾಲಸ್ ಅವರಿಬ್ಬರ ಮನೆಯವರಿಗೆ ಬುದ್ಧಿ ಹೇಳಿ ರಾಜಿಯಾಗುವಂತೆ ಆದೇಶಿಸುತ್ತಾನೆ. ಈ ರೀತಿ ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ಮಧ್ಯೆ ಎಷ್ಟೋ ವರ್ಷಗಳಿಂದ ಇದ್ದ ಸೇಡು, ದ್ವೇಷ ಎಲ್ಲವೂ ರೋಮಿಯೋ ಜ್ಯೂಲಿಯಟರ ಸಾವಿನೊಂದಿಗೆ ಅಂತ್ಯವಾಗುತ್ತದೆ. 

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                                 ದೂರ ಓಡಿ ಹೋಗಿ ಒಂದಾಗಿ ಬಾಳಬೇಕೆಂದಿದ್ದ ಪ್ರೇಮಿಪಕ್ಷಿಗಳು ಸಾವಿನಲ್ಲಿ ಒಂದಾಗಿ ಎರಡು ಬದ್ಧವೈರಿಗಳನ್ನು ಒಂದಾಗಿಸುತ್ತವೆ. ಇದಿಷ್ಟು ರೋಮಿಯೋ ಜ್ಯೂಲಿಯಟರ್ ಪ್ರೇಮಕಥೆ. ಈ ಕಥೆ ನಿಮಗಿಷ್ಟವಾಗಿದ್ದರೆ ಇದನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ಈ ಪ್ರೇಮಕಥೆಯ ಬಗ್ಗೆ ನಿಮಗನ್ನಿಸಿದ್ದನ್ನು ಕಮೆಂಟ್ ಮಾಡಿ. ಶೇಕ್ಸ್‌ಪಿಯರ್ ಸತ್ತ ಮೇಲೂ ಬದುಕಿದ್ದಾನೆ ಎಂಬುದನ್ನು ನಿರೂಪಿಸಲು ಈ ಪ್ರೇಮಕಥೆ ಸಾಕು. ಇದೇ ರೀತಿ ಪ್ರತಿದಿನ ಪ್ರೇಮಕತೆಗಳನ್ನು ಓದಲು ನನ್ನನ್ನು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವಿಟರ್ ಇತ್ಯಾದಿಗಳಲ್ಲಿ ತಪ್ಪದೆ ಫಾಲೋ ಮಾಡಿ....
ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

Blogger ನಿಂದ ಸಾಮರ್ಥ್ಯಹೊಂದಿದೆ.