ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Short Stories in Kannada

Roaring Creations Kannada
ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Short Stories in Kannada

                ಆಕೆ ನಿಜಕ್ಕೂ ಸುಂದರಿ. ಅವಳು ಸುಂದರಿ ಎನ್ನುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಅವಳಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಗರ್ವವಿತ್ತು. ಆಕೆ ಪದೇಪದೇ ಕನ್ನಡಿಯಲ್ಲಿ ತನ್ನ ಸೌಂದರ್ಯವನ್ನು ನೋಡಿಕೊಂಡು ಖುಷಿಪಡುತ್ತಿದ್ದಳು. ತನಗೆ ಕಣ್ಣು ಕುಕ್ಕುವಂಥ ಸೌಂದರ್ಯವನ್ನು ಕೊಟ್ಟಿದ್ದಕ್ಕಾಗಿ ಆಕೆ ಆ ದೇವರಿಗೆ ಚಿರಋಣಿಯಾಗಿದ್ದಳು. ಆದರೆ ಬಡತನದ ಬದುಕು ಕೊಟ್ಟಿರುವುದಕ್ಕಾಗಿ ಆಕೆ ಆ ದೇವರನ್ನು ಅಷ್ಟೇ ದ್ವೇಷಿಸುತ್ತಿದ್ದಳು. ಆಕೆಗೆ ಎಲ್ಲ ಹುಡುಗಿಯರಂತೆ ಹೊಸಹೊಸ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂಬ ಆಸೆಯಿತ್ತು. ಆದರೆ ಹೊಟ್ಟೆ ತುಂಬ ಊಟ ಸಿಗುವುದು ಕಷ್ಟಕರವಾದಾಗ ಬಯಸಿದ ಬಟ್ಟೆ ಸಿಗುವುದು ಹೇಗೆ? ಎಲ್ಲ ನನ್ನ ಹಣೆಬರಹ ಎಂದುಕೊಂಡು ಆಕೆ ಎಲ್ಲವನ್ನೂ ಅಡ್ಜಷ್ಟ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಚೆನ್ನಾಗಿ ಓದಿದರೇ ಮಾತ್ರ ನಾನು ಬಡತನವನ್ನು ಸಾಯಿಸಿ ಅಂದುಕೊಂಡಂತೆ ಬದುಕಬಹುದು ಎಂಬುದು ಆಕೆಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಆಕೆ ಶ್ರದ್ಧೆಯಿಂದ ಓದುತ್ತಿದ್ದಳು. ಆದರೆ ಅವಳ ಅಂದ ಎಷ್ಟೋ ಹುಡುಗರ ನಿದ್ದೆಗೆಡಿಸಿತ್ತು. ಅದಕ್ಕಾಗಿ ಕೆಲವರು ಅವಳಿಂದೆ ಬಿದ್ದಿದ್ದರು. ಅವಳನ್ನು ಒಲಿಸಿಕೊಳ್ಳುವುದಕ್ಕಾಗಿ ಅವಳಿಗೆ ಹೊಸ ಬಟ್ಟೆ, ಗಿಫ್ಟ, ರಿಂಗ್, ಮೊಬೈಲ್ ಇತ್ಯಾದಿಗಳನ್ನು ಕೊಡಲು ಮುಂದಾಗುತ್ತಿದ್ದರು. ಆದರೆ ಆಕೆ ಯಾವುದನ್ನು ಎಡಗೈಯಿಂದಲೂ ಮುಟ್ಟುತ್ತಿರಲಿಲ್ಲ. ಅಷ್ಟೊಂದು ಸ್ವಾಭಿಮಾನಿ ಆಕೆ. ಆಕೆ ಬಡವಳಾಗಿದ್ದಳು. ಆಕೆಗೆ ಹಲವಾರು ಕನಸುಗಳಿದ್ದವು. ಆದರೆ ಆಕೆ ಯಾರ ಬಳಿಯೂ ಕೈಚಾಚುವಷ್ಟು ದುರ್ಬಲಳಾಗಿರಲಿಲ್ಲ.

ಸೌಂದರ್ಯದ ಶಾಪ : Curse of Beauty : Short Stories in Kannada

               ಎಲ್ಲರೂ ಅವಳ ಸೌಂದರ್ಯವನ್ನು ಪ್ರೀತಿಸಿ ಅವಳ ಸ್ನೇಹ ಬೆಳೆಸಲು ಹಾತೊರೆಯುತ್ತಿದ್ದರು. ಆದರೆ ಆಕೆ ಯಾವುದಕ್ಕೂ ಕೇರ್ ಮಾಡದೇ ಚೆನ್ನಾಗಿ ಓದುತ್ತಿದ್ದಳು. ಚೆನ್ನಾಗಿ ಓದಿ ಸ್ವಂತ ಕಾಲ ಮೇಲೆ ತಾನು ನಿಲ್ಲಬೇಕೆಂದು ಕನಸು ಕಾಣುತ್ತಿದ್ದಳು. ಆದರೆ ಅವಳ ಹೆತ್ತವರಿಗೆ ಆಕೆ ಭಾರವಾಗಿದ್ದಳು. ಬೇಗನೆ ಅವಳ ಮದುವೆ ಮಾಡಿ ತಮ್ಮ ಭಾರವನ್ನು ಕಡಿಮೆ ಮಾಡಿಕೊಳ್ಳಲು ಅವರು ಮುಂದಾದರು. ಹೇಳಿಕೊಳ್ಳುವಂತೆ ಅವಳ ಮದುವೆ ಮಾಡಿಸುವಷ್ಟು ಶ್ರೀಮಂತಿಕೆಯೂ ಅವಳ ಹೆತ್ತವರಿಗೆ ಇರಲಿಲ್ಲ. ಅವರ ದುರ್ಬಲತೆಯನ್ನು ಚೆನ್ನಾಗಿ ಅರಿತಿದ್ದ ಒಬ್ಬ ವಯಸ್ಸು ಮೀರಿ ಹೋದ ನಯವಂಚಕ ಅವಳನ್ನು ಮದುವೆಯಾಗಲು ಮುಂದೆ ಬಂದ. ತನ್ನ ಖರ್ಚಿನಲ್ಲಿಯೇ ಅವಳನ್ನು ಮದುವೆಯಾಗುವುದರ ಜೊತೆಗೆ ಅವಳ ಮನೆಯವರಿಗೆ ಐವತ್ತು ಸಾವಿರ ಹಣವನ್ನು ಸಹಾಯಧನವಾಗಿ ನೀಡಿದ. ತಮ್ಮ ಮಗಳು ಈ ಬಡತನದಿಂದ ಬಚಾವಾಗಿ ಒಳ್ಳೇ ಮನೆ ಸೇರಿದಳೆಂಬ ಖುಷಿಯಲ್ಲಿ ಅವಳ ಹೆತ್ತವರು ಖುಷಿಯ ಕಣ್ಣೀರಿನೊಂದಿಗೆ ಆಕೆಯನ್ನು ಅವನೊಂದಿಗೆ ಮದುವೆ ಮಾಡಿಸಿ ಸೀಟಿಗೆ ಕಳುಹಿಸಿ ಕೊಟ್ಟರು.

ಸೌಂದರ್ಯದ ಶಾಪ : Curse of Beauty : Short Stories in Kannada

                   ಅವಳಿಗೆ ಇನ್ನೂ ಸರಿಯಾಗಿ ಹದಿನೆಂಟು ತುಂಬಿರಲಿಲ್ಲ. ಅಂಥದ್ದರಲ್ಲಿ ಅವಳು ಅರ್ಧ ಮುದುಕನನ್ನು ಕಟ್ಟಿಕೊಂಡು ಅಪರಿಚಿತ ಸೀಟಿಗೆ ಬಂದಳು. ಅವಳಿಗೆ ಓದಿ ಸ್ವತಂತ್ರಳಾಗಬೇಕು ಎಂಬಾಸೆಯಿತ್ತು. ಆದರೆ ಮದುವೆ ಅವಳ ಓದಿಗೆ ಕೊಡಲಿ ಬೀಸಿ ಅವಳನ್ನು ಶಾಶ್ವತವಾಗಿ ಅತಂತ್ರಳನ್ನಾಗಿ ಮಾಡಿತು. ಅವಳು ಪತಿಯನ್ನೇ ಪರದೈವವೆಂದುಕೊಂಡು ಸುಮ್ಮನಾದಳು. ಆದರೆ ಆತ ಅವಳ ಪಾಲಿಗೆ ಭೂತವಾದನು. ಅವಳ ಸೌಂದರ್ಯದ ಶಿಕಾರಿ ಮಾಡುವ ರಾಕ್ಷಸನಾದನು. ಹಸಿಮೈ ಹುಡುಗಿಯನ್ನು ಹಗಲು ರಾತ್ರಿ ಬಳಸಿಕೊಂಡು ಆತ ತನ್ನ ಹಾಸಿಗೆಯನ್ನು ಬಿಸಿ ಮಾಡಿಕೊಂಡನು. ಆತ ಹಳ್ಳಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುವಂತೆ ದೊಡ್ಡ ನೌಕರಿಯಲ್ಲೇನು ಇರಲಿಲ್ಲ. ಚಿಕ್ಕ ಖಾಸಗಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಬಿದ್ದಿದ್ದನು. ತನಗೆ ಯಾರಾದರೂ ಬೇಗನೆ ಹೆಣ್ಣು ಕೊಡಲಿ ಎಂಬ ಕಾರಣಕ್ಕೆ ಆತ ಇಲ್ಲದ ಬಡಾಯಿಗಳನ್ನು ಕೊಚ್ಚಿಕೊಂಡು ಶ್ರೀಮಂತನಂತೆ ನಾಟಕವಾಡುತ್ತಿದ್ದನು. ಅವನು ಮದುವೆಯಾಗಲು ಹೆಣ್ಣಿನ ಹುಡುಕಾಟದಲ್ಲಿ ಹಳ್ಳಿಗೆ ಬಂದಿದ್ದಾಗ ಅವಳು ಅವನ ಕಣ್ಣಿಗೆ ಬಿದ್ದಿದ್ದಳು. ಆತ ಅವಳನ್ನು ಆಕೆ ಕಾಲೇಜಿನಿಂದ ಮನೆಗೆ ಬರುವಾಗ ನೋಡಿದ್ದನು. ಆತ ಅವಳನ್ನು ಮನೆವರೆಗೂ ಹಿಂಬಾಲಿಸಿದಾಗ ಅವಳ ದುರ್ಬಲತೆ ಅವನಿಗೆ ಗೊತ್ತಾಯಿತು. ಹರಿದ ಹಳೇ ಬಟ್ಟೆಯಲ್ಲಿ ಮನೆಯೆದುರು ಪಾತ್ರೆ ತೊಳೆಯುತ್ತಾ ಕುಳಿತ್ತಿದ್ದ ಅವಳನ್ನು ನೋಡಿ ಆತನಿಗೆ ಹುಣ್ಣಿಮೆ ಚಂದ್ರನ ನೆನಪಾಗಿತ್ತು. ಆತ ಅವಳ ತಂದೆತಾಯಿಗಳನ್ನು ಹಣ ತೋರಿಸಿ ಯಾಮಾರಿಸಿ ಅವಳನ್ನು ಮದುವೆಯಾಗಿ ಸೀಟಿಗೆ ಬಂದಿದ್ದನು. ಆಕೆ ಯಾವ ಬಡತನವನ್ನು ದ್ವೇಷಿಸುತ್ತಿದ್ದಳೋ ಅದಕ್ಕಿಂತ ಪರವಾಗಿಲ್ಲ ಅನ್ನೋ ಬಡತನಕ್ಕೆ ಆಕೆ ಬಂದು ಬಿದ್ದಳು.


ಸೌಂದರ್ಯದ ಶಾಪ : Curse of Beauty : Short Stories in Kannada

                  ತಿಂಗಳಿಗೆ ಸರಿಯಾಗಿ ಹತ್ತು ಸಾವಿರ ಗಳಿಸುವ ಯೋಗ್ಯತೆ ಇಲ್ಲದ ಸುಳ್ಳು ಶ್ರೀಮಂತ ಗಂಡನ ಸುಖಕ್ಕೆ ಸೆರಗು ಹಾಸಿ ಅವಳ ಸೀರೆ ಹರಿದು ಹೋಯಿತು. ಮನೆ ಬಾಡಿಗೆ ಕಟ್ಟಿ ಮನೆ ಖರ್ಚನ್ನು ನಿಭಾಯಿಸುವುದಕ್ಕೆ ಒದ್ದಾಡುತ್ತಿದ್ದ ಗಂಡನತ್ರ ಹೊಸ ಸೀರೆ ಕೊಡಿಸುವಂತೆ ಕೇಳುವ ಧೈರ್ಯವು ಅವಳಲ್ಲಿ ಇರಲಿಲ್ಲ. ಅವಳು ಎಲ್ಲ ನನ್ನ ಕರ್ಮ ಎಂದುಕೊಂಡು ಹರಿದ ಹಾಸಿಗೆಯನ್ನು ಹೊಲಿದುಕೊಂಡು ಅದರಲ್ಲೇ ಕಾಲು ಮಡಚಿಕೊಂಡು ಮಲಗಲು ನಿರ್ಧರಿಸಿದಳು. ಆಕೆ ಬಡತನವನ್ನು ದ್ವೇಷಿಸುತ್ತಿದ್ದಳು. ಆದರೆ ಅದರ ಹತ್ತು ಪಟ್ಟು ತನ್ನ ಸೌಂದರ್ಯವನ್ನು ಪ್ರೀತಿಸುತ್ತಿದ್ದಳು. ಅವಳ ಸೌಂದರ್ಯವೇ ಅವಳಿಗೆ ಶಾಪವಾಗಬಹುದು, ಅವಳ ಸೌಂದರ್ಯವೇ ಅವಳ ಶತ್ರುವಾಗಬಹುದು ಎಂಬ ಕಲ್ಪನೆ ಅವಳಿಗಿರಲಿಲ್ಲ.  ಅವಳ ಮನೆಯಿದ್ದ ಪಕ್ಕದ ಬೀದಿಯಲ್ಲಿ ಮೈಮಾರಿಕೊಳ್ಳುವ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಅದರ ಬಗ್ಗೆ ಅವಳಿಗೇನು ಗೊತ್ತಿರಲಿಲ್ಲ. ಅವಳೊಂದಿನ ತರಕಾರಿ ತೆಗೆದುಕೊಂಡು ಮನೆಗೆ ಬರುವಾಗ ದಾರಿ ತಪ್ಪಿ ಆ ಬೀದಿಯೊಳಗೆ ಕಾಲಿಟ್ಟಿದ್ದಳು. ಅಲ್ಲಿನ ವಾತಾವರಣವನ್ನು ನೋಡಿ ಅವಳಿಗೆ ಅದು ಎಂಥ ಬೀದಿ ಎಂಬುದು ಅರ್ಥವಾಯಿತು. ಅವಳು ಮುಜುಗುರಪಟ್ಟುಕೊಳ್ಳುತ್ತಾ ಅಲ್ಲಿಂದ ಬೇಗನೆ ನಡೆದು ತನ್ನ ಮನೆ ಸೇರಿದಳು. ಆದರೆ ಆ ಬೀದಿಯ ವಾರಸುದಾರನ ದೃಷ್ಟಿ ಅವಳ ಮೇಲೆ ಬಿದ್ದಿತು. ಮೊದಲ ನೋಟದಲ್ಲೇ ಆಕೆ ಅವನ ಚಿತ್ತವನ್ನು ಚಂಚಲಗೊಳಿಸಿದ್ದಳು. ಆಕೆಯನ್ನು ಇಟ್ಟುಕೊಂಡು ಚೆನ್ನಾಗಿ ಹಣ ಮಾಡಬಹುದು ಎಂಬ ದುರಾಲೋಚನೆ ಅವನ ತಲೆಯಲ್ಲಿ ಬಂತು. ಆತ ಅವಳನ್ನು ಹಿಂಬಾಲಿಸಿ ಅವಳ ಮನೆಯನ್ನು ನೋಡಿಕೊಂಡು ಹೋದನು.


ಸೌಂದರ್ಯದ ಶಾಪ : Curse of Beauty : Short Stories in Kannada

             ರಾತ್ರಿರಾಣಿಯರ ಬೀದಿಯ ವಾರಸುದಾರ ಅವಳನ್ನು ದುಡ್ಡಿನ ಅವಶ್ಯಕತೆಗಾಗಿ ಗುಟ್ಟಾಗಿ ಸೆರಗು ಹಾಸಿ ಮರ್ಯಾದೆಯಿಂದ ಜೀವನ ಸಾಗಿಸುವ ಅಮಾಯಕಿ ಎಂದುಕೊಂಡನು. ಆಕೆಗೆ ಹಣದ ಅವಶ್ಯಕತೆ ಬಿದ್ದಾಗ ಮತ್ತೆ ಆಕೆ ಹೆದರುತ್ತಾ ನಮ್ಮ ಬೀದಿಗೆ ಬರುತ್ತಾಳೆ, ಆವಾಗ ಅವಳೊಂದಿಗೆ ಮಾತುಕತೆ ನಡೆಸೋಣ ಎಂದು ಸುಮ್ಮನಾದನು. ಆದರೆ ಅರ್ಧ ತಿಂಗಳು ಕಳೆದರೂ ಆಕೆ ಆ ಬೀದಿಯ ಕಡೆಗೆ ಸುಳಿಯಲಿಲ್ಲ. ಆತ ಅವಳ ಮನೆಯ ಅಕ್ಕಪಕ್ಕದ ಜನರತ್ರ ಅವಳ ಬಗ್ಗೆ ವಿಚಾರಿಸಿದಾಗ ಅವನ ಲೆಕ್ಕಾಚಾರ ತಲೆ ಕೆಳಗಾಯಿತು. ಆಕೆ ಸಭ್ಯ ಗೃಹಿಣಿ, ತಾನೆಂದುಕೊಂಡಿದ್ದು ತಪ್ಪು ಎಂಬುದು ಅವನಿಗೆ ತಿಳಿಯಿತು. ಆದರೂ ಅವನ ಮನಸ್ಸು ಅವಳ ಮಾದಕ ಮೈಮಾಟದ ಮೋಡಿಯಿಂದ ಹೊರಬರಲು ಹಿಂಜರಿಯಿತು. ಆತ ಹೇಗಾದರೂ ಮಾಡಿ ಅವಳ ಮನವೊಲಿಸಿ ಅವಳನ್ನು ತಮ್ಮ ದಂಧೆಗೆ ಎಳೆದು ಚೆನ್ನಾಗಿ ದುಡ್ಡು ಮಾಡಬೇಕು ಎಂದು ನಿರ್ಧರಿಸಿದನು. ಅದಕ್ಕಾಗಿ ಅವಳ ಮನೆಗೋಗಿ ಅವಳನ್ನು ಮಾತನಾಡಿಸಿದನು. ಆದರೆ ಅವಳ ಒಳ್ಳೆತನ, ಪ್ರಾಮಾಣಿಕತೆ ನೋಡಿ ಅವನ ಬಾಯಿಯಿಂದ ಶಬ್ದಗಳು ಹೊರ ಬರಲಿಲ್ಲ. ಆತ ಹೆಚ್ಚಿಗೆ ಏನು ಮಾತಾಡದೇ ಹೊರ ಬಂದನು. ಅಷ್ಟರಲ್ಲಿ ಅವಳಿಗೆ ತನ್ನ ಮನೆಯಿಂದ ಫೋನ್ ಕರೆ ಬಂದಿತು. ಅಪ್ಪನಿಗೆ ಹುಷಾರಿಲ್ಲ, ಹೇಗಾದರೂ ಮಾಡಿ ಹತ್ತು ಸಾವಿರ ರೂಪಾಯಿ ಹಣ ಕಳಿಸುವೆಯಾ? ಎಂದು ಅಮ್ಮ ಫೋನಲ್ಲಿ ಗೋರ್ಗರೆಯುತ್ತಿದ್ದಳು. ಅದಕ್ಕಾಕೆ ಸರಿ ಕಳಿಸುವೆ ಎಂದು ಫೋನಿಟ್ಟಳು. 


ಸೌಂದರ್ಯದ ಶಾಪ : Curse of Beauty : Short Stories in Kannada

                          ಸಂಜೆ ತನ್ನ ಗಂಡ ಮನೆಗೆ ಬರುತ್ತಿದ್ದಂತೆಯೇ ಆಕೆ ಇರೋ ವಿಷಯ ತಿಳಿಸಿ ಹತ್ತು ಸಾವಿರ ಕೊಡುವಂತೆ ಬೇಡಿಕೊಂಡಳು. ಅವಳು ಬೇಡಿದ ಹಣ ಅವನ ಒಂದು ತಿಂಗಳ ಸಂಬಳವಾಗಿತ್ತು. ಅಷ್ಟು ಹಣ ಕೊಟ್ಟರೆ ಮನೆ ನಡೆಸುವುದು ಅಸಾಧ್ಯವಾಗಿತ್ತು. ಹೀಗಾಗಿ ಆತ ಹಣ ಕೊಡಲು ನಿರಾಕರಿಸಿದನು. ಅವರಿಬ್ಬರಿಗೂ ದೊಡ್ಡ ಜಗಳವಾಯಿತು. ಆಕೆ ಜಗಳವಾಡುತ್ತಾ "ದೊಡ್ಡ ಶ್ರೀಮಂತನ ಥರ ಫೋಸ್ ಕೊಟ್ಟು ಸುಳ್ಳೇಳಿ ಮದುವೆಯಾಗಿ ಈಗ ಹಣ ಕೊಡಲ್ಲ ಎನ್ನುವುದಕ್ಕೆ ನಾಚಿಕೆಯಾಗಲ್ವಾ?" ಎಂದು ಕೇಳಿದಳು. ಅದಕ್ಕಾತ "ನಾನೇನು ನಿನ್ನ ಮದುವೆ ಮಾಡಿಕೊಂಡು ಇಲ್ಲಿಗೆ ತಂದಿಲ್ಲ. ನಿಮ್ಮಪ್ಪನಿಗೆ ಐವತ್ತು ಸಾವಿರ ರೂಪಾಯಿ ನೀಡಿ ನಿನ್ನನ್ನು ಕೊಂಡುಕೊಂಡು ಬಂದಿರುವೆ" ಎಂದೆಲ್ಲ ಕೀಳಾಗಿ ಮಾತನಾಡಿದನು. ಅವನ ಸೊಂಟದ ಕೆಳಗಿನ ಮಾತುಗಳನ್ನು ಕೇಳಿ ಆಕೆ ನಾಚಿ ನೀರಾದಳು. ತನ್ನ ಅಪ್ಪನನ್ನು ಉಳಿಸಿಕೊಳ್ಳುವುದಕ್ಕಾಗಿ ಆಕೆ ತಾನೇ ಕೆಲಸ ಮಾಡಿ ಹಣ ಹೊಂದಿಸಲು ಮುಂದಾದಳು. ಮರುದಿನ ಎಲ್ಲ ಕಡೆಗೆ ಕೆಲಸಕ್ಕಾಗಿ ಕೈಚಾಚಿದಳು. ಆದರೆ ಯಾರು ಅವಳಿಗೆ ಕೆಲಸ ಕೊಡಲು ಮುಂದೆ ಬರಲಿಲ್ಲ. ಕೆಲವರು ಕೆಲಸ ಕೊಡುವ ನೆಪದಲ್ಲಿ ಆಕೆಯನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿದರು. ಅವಳ ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಉಡುಗಿ ಹೋಯಿತು.

ಸೌಂದರ್ಯದ ಶಾಪ : Curse of Beauty : Short Stories in Kannada

                ಆಕೆ ಬೇಸರದಿಂದ ಒಂದು ಗುಡಿ ಮುಂದೆ ಕುಳಿತ್ತಿದ್ದಳು. ದೇವರು ಗರ್ಭಗುಡಿಯಿಂದ ಎದ್ದು ಬಂದು ಏನಾದರೂ ಸಹಾಯ ಮಾಡುತ್ತಾನೆ ಎಂದವಳು ಎದುರು ನೋಡುತ್ತಿದ್ದಳು. ಆದರೆ ದೇವರು ಬರಲಿಲ್ಲ. ಅವನ ಬದಲಾಗಿ ರಾತ್ರಿರಾಣಿಯರ ಬೀದಿಯ ಯಜಮಾನ ಬಂದನು. ಆತ ಅವಳ ಕಣ್ಣಿರಿಗೆ, ಕಷ್ಟಕ್ಕೆ ಕರಗಿದನು. ಆದರೆ ಪುಕ್ಸಟ್ಟೆಯಾಗಿ ಸಹಾಯ ಮಾಡುವ ದೊಡ್ಡ ಮನಸ್ಸು ಅವನಿಗಿರಲಿಲ್ಲ. ಅವನಿಗೆ ಅವನ ದಂಧೆಯೇ ಮುಖ್ಯ ವಿನ: ಅವಳಲ್ಲ. ಆತ ಅವಳನ್ನು ಪುಸಲಾಯಿಸಿ ತನ್ನ ದಂಧೆಗೆ ಎಳೆದು ಭರ್ಜರಿ ದುಡ್ಡು ಮಾಡಿಕೊಳ್ಳಲು ಕಾಯುತ್ತಿದ್ದನು. ಅದಕ್ಕಾಗಿ ಈಗ ಸಿಕ್ಕ ಸಮಯವನ್ನೇ ಸರಿಯಾಗಿ ಬಳಸಿಕೊಂಡನು. ಆತ ಅವಳಿಗೆ "ನೋಡು ನಿನ್ನ ಕಣ್ಣೀರಿಗೆ ಈ ಸೀಟಿಯಲ್ಲಿ ಯಾರು ಕರಗುವುದಿಲ್ಲ. ಏಕೆಂದರೆ ಎಲ್ಲರೂ ಹೊಟ್ಟೆಪಾಡಿಗೇನೆ ಈ ಸುಡುಗಾಡಿಗೆ ಬಂದು ಸೇರಿದ್ದಾರೆ. ಎಲ್ಲರೂ ಶ್ರೀಮಂತರಂತೆ ತೋರಿಸಿಕೊಳ್ಳುತ್ತಾರೆ, ಆದರೆ ಎಲ್ಲರೂ ಶ್ರೀಮಂತರಲ್ಲ. ನಿನಗಿರುವ ಸೌಂದರ್ಯಕ್ಕೆ ನೀನು ಗಂಟೆಗೆ ಎರಡು ಸಾವಿರ ಸಂಪಾದಿಸಬಹುದು. ನೀನು ಗುಟ್ಟಾಗಿ ಮೈಮಾರಿಕೊಂಡು ಗೌರವದಿಂದ ಸಹಜ ಜೀವನ ನಡೆಸಬಹುದು. ಇದು ಸೀಟಿ. ಇಲ್ಲಿ ಯಾರ ವಿಷಯ ಯಾರಿಗೂ ಗೊತ್ತಾಗಲ್ಲ. ಗೊತ್ತಾದರೂ ಯಾರು ತಲೆ ಕೆಡಿಸಿಕೊಳ್ಳಲ್ಲ. ನಿನಗೆ ಇಷ್ಟವಿದ್ದರೆ ನೀನಿ ದಂಧೆಗೆ ಇಳಿಯಬಹುದು. ನಾನೆಲ್ಲವನ್ನೂ ನೋಡಿಕೊಳ್ಳುವೆ. ನನ್ನ ಕಡೆಯಿಂದ ಬಲವಂತವೇನು ಇಲ್ಲ" ಎಂದೇಳಿ ಹೋದನು.


ಸೌಂದರ್ಯದ ಶಾಪ : Curse of Beauty : Short Stories in Kannada

                    ಅವನು ಹೋದ ನಂತರ ಆಕೆ ಬಹಳಷ್ಟು ಯೋಚಿಸಿದಳು. ಮೈಮಾರಿಕೊಳ್ಳಲು ಅವಳ ಮನಸಾಕ್ಷಿ ಒಪ್ಪಲಿಲ್ಲ. ಆದರೆ ಅವಳಿಗಿರುವ ದುಡ್ಡಿನ ಅವಶ್ಯಕತೆ ಅವಳನ್ನು ಒಪ್ಪುವಂತೆ ಮಾಡಿತು. ಆಕೆ ತನ್ನ ಸ್ವಾಭಿಮಾನವನ್ನು ಸಾಯಿಸಿ ಸೆರಗು ಹಾಸುವ ದಂಧೆಗೆ ಇಳಿಯಲು ಸಿದ್ಧಳಾದಳು. ಅವತ್ತು ಮನೆಯಲ್ಲಿ ಅವಳ ಗಂಡ ವಿನಾಕಾರಣ ಅವಳನ್ನು ಗೋಳಿಡಿದುಕೊಂಡು ಕಾಡಿದನು. ಇಲ್ಲಸಲ್ಲದ ನೆಪಗಳನ್ನು ಹುಟ್ಟಾಕಿ ಅವಳನ್ನು ನಿಂದಿಸಿದನು. ಅವಳು ಎದುರು ಮಾತನಾಡಿದ್ದಕ್ಕಾಗಿ ಅವಳ ಮೇಲೆ ಕೈ ಮಾಡಿದನು. ಅವಳನ್ನು ಕೆಟ್ಟ ತರದಲ್ಲಿ ದೈಹಿಕವಾಗಿ ಬಳಸಿಕೊಂಡನು. ಅವನ ಈ ವರ್ತನೆಗೆ ಅವಳ ಹೃದಯ ಕಲ್ಲಾಯಿತು. ಅವಳಿಗೆ ಅವನ ಮೇಲಿನ ಗೌರವ, ಕಾಳಜಿ, ಸಂಬಂಧ ಎಲ್ಲವೂ ಕಳೆದು ಹೋಯಿತು. ಆಕೆ ಮಾರನೇ ದಿನದಿಂದಲೇ ತನ್ನ ಸೌಂದರ್ಯವನ್ನು ಮಾರಿಕೊಳ್ಳಲು ಪ್ರಾರಂಭಿಸಿದಳು. ರಾತ್ರಿರಾಣಿಯರ ಯಜಮಾನ ಹೇಳಿದಂತೆ ಕೇಳಿಕೊಂಡು ಹಣ ಗಳಿಸಲು ಶುರು ಮಾಡಿದಳು. ಆತ ಹೇಳಿದ ಕಡೆಗಳಲ್ಲಿ ಹೇಳಿದ ಸಮಯಕ್ಕೆ ಸೆರಗು ಜಾರಿಸಿದಳು. ಆತ ತನ್ನ ಕಮಿಷನನ್ನು ತೆಗೆದುಕೊಂಡು ಮಿಕ್ಕಿದ ಹಣವನ್ನು ಅವಳಿಗೆ ನಿಯತ್ತಾಗಿ ನೀಡುತ್ತಿದ್ದನು. ಆಕೆ ಗಂಟೆಗೆ ಎರಡು ಸಾವಿರ ಸಂಪಾದಿಸುತ್ತಿದ್ದಳು. ಅದರಿಂದ ಬಂದ ಹಣವನ್ನೆಲ್ಲ ಆಕೆ ತನ್ನ ಮನೆಗೆ ಕಳುಹಿಸಿ ಕೊಡುತ್ತಿದ್ದಳು. ಆಕೆಗೆ ಈಗಲೂ ತನ್ನ ಸೌಂದರ್ಯದ ಮೇಲೆ ಅಭಿಮಾನವಿತ್ತು. ಆಕೆ ಮೈಮಾರಿಕೊಂಡರೂ ತನ್ನ ಸ್ವಾಭಿಮಾನಕ್ಕೆ ಅಡಿಯಾಳಾಗಿದ್ದಳು. ಯಾರ ಅಂತಸ್ತಿಗೆ ಆಸೆ ಪಡದೆ, ಯಾರನ್ನು ಯಾಮಾರಿಸದೇ ಆಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಳು. ಆದರೆ ಅವಳ ಒಳ್ಳೆತನದ ಫಲ ಒಳ್ಳೆಯದಾಗಿರಲಿಲ್ಲ.


ಸೌಂದರ್ಯದ ಶಾಪ : Curse of Beauty : Short Stories in Kannada

                 ಅವಳು ತನ್ನ ಮನೆಯವರಿಗೆ ಹಣ ಸಹಾಯ ಮಾಡುವುದಕ್ಕಾಗಿ ಈ ಕೆಲಸಕ್ಕೆ ಕಾಲಿಟ್ಟಿದ್ದಳು. ಎರಡು ತಿಂಗಳುಗಳಲ್ಲಿ ಅವಳೆಂದುಕೊಂಡಂತೆ ಅವಳು ತನ್ನ ಮನೆಯವರಿಗೆ ಬೇಕಾಗಿದ್ದಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸಿ ಕಳುಹಿಸಿ ಕೊಟ್ಟಿದ್ದಳು. ಜೊತೆಗೆ ತನ್ನ ಖರ್ಚಿಗೂ ಸಾಕಾಗುವಷ್ಟು ಹಣವನ್ನು ಸಂಗ್ರಹಿಸಿದ್ದಳು. ಅವಳಿಗೆ ಈಗ ಈ ದಂಧೆಯ ಅವಶ್ಯಕತೆ ಇರಲಿಲ್ಲ. ಅವಳು ಇದನ್ನು ಬಿಟ್ಟು ಬೇರೆ ಏನಾದರೂ ಮಾಡಿ ಗೌರವಯುತವಾಗಿ ಬದುಕಲು ತಿರ್ಮಾನಿಸಿದಳು. ಆದರೆ ಅವಳ ಈ ತಿರ್ಮಾನ ರಾತ್ರಿರಾಣಿಯರ ಯಜಮಾನಿಗೆ ಹಿಡಿಸಲಿಲ್ಲ. ಏಕೆಂದರೆ ಆತ ಇವಳನ್ನು ಇಟ್ಟುಕೊಂಡು ಈಗಾಗಲೇ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದ್ದನು. ಅವನಿಗೆ ಇನ್ನು ಹೆಚ್ಚಿನ ಹಣವನ್ನು ಗಳಿಸುವ ಹಂಬಲವಿತ್ತು. ಅದಕ್ಕಾಗಿ ಆತ ಅವಳಿಗೆ ತನ್ನ ನಿರ್ಧಾರವನ್ನು ಬದಲಾಯಿಸುವಂತೆ ಒತ್ತಡ ಹೇರಿದನು. ಆದರೆ ಆಕೆ ತನ್ನ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. ಅದಕ್ಕಾಗಿ ಕೊನೆಗೆ ಆತ ತನ್ನ ಅಸಲಿ ಮುಖವನ್ನು ತೋರಿಸಿದನು.


ಸೌಂದರ್ಯದ ಶಾಪ : Curse of Beauty : Short Stories in Kannada

              ಅವಳ ಹಾಲಿನಂಥ ಮೈಬಣ್ಣ, ಬೆಣ್ಣೆಯಂಥ ತ್ವಚೆ, ಮಗುವಿನಂಥ ಮುಗ್ಧತೆ, ಮಾದಕ ನಗೆ, ಹುಚ್ಚಿಡಿಸುವ ಮೈಮಾಟಕ್ಕೆ ಸೋತು ಎಷ್ಟೋ ಜನ ಅವಳೊಂದಿಗೆ ಹಾಸಿಗೆ ಹಂಚಿಕೊಳ್ಳಲು ಅಡವಾನ್ಸಾಗಿ ಸಾವಿರಾರು ರೂಪಾಯಿಗಳನ್ನು ನೀಡಿದ್ದರು. ನಗರದ ಕೆಲ ಶ್ರೀಮಂತರು ಅವಳೊಂದಿಗೆ ಪೂರ್ತಿ ರಾತ್ರಿಯನ್ನು ಕಳೆಯಲು ಹಣ ಕೊಟ್ಟಿದ್ದರು. ಆದರೆ ಅವಳ ಆತುರದ ನಿರ್ಧಾರ ರಾತ್ರಿರಾಣಿಯರ ಯಜಮಾನನ ಜೀವನಕ್ಕೆ ಸಂಚಕಾರ ತರುವಂತಿತ್ತು. ಅದಕ್ಕಾಗಿ ಆತ ಅವಳಿಗೆ ನಾನೊಂದು ಗಿರಾಕಿಯಿಂದ ಅಡವಾನ್ಸ ತೆಗೆದುಕೊಂಡಿರುವೆ, ನಾನೇನು ಮಾಡುವ ಸ್ಥಿತಿಯಲ್ಲಿಲ್ಲ, ದಯವಿಟ್ಟು ಇದೊಂದು ಸಲ ನೀನು ಸೆರಗು ಜಾರಿಸಿ ಹೋಗು. ನಾನು ನಿನ್ನ ತಡೆಯಲ್ಲ ಎಂದೇಳಿ ಅವಳನ್ನು ಮರುಳು ಮಾಡಿದನು. ಕಷ್ಟಕಾಲದಲ್ಲಿ ಕೆಲಸ ಕೊಟ್ಟ ಯಜಮಾನ ಎಂಬ ಒಂದೇ ಕಾರಣಕ್ಕೆ ಆಕೆ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡು ಅವನು ಹೇಳಿದ ಜಾಗಕ್ಕೆ ಹೋದಳು. ಆದರೆ ಅಲ್ಲಿ ಆತ ಹೇಳಿದಂತೆ ಗಿರಾಕಿ ಯಾರು ಇರಲಿಲ್ಲ. ಅದರ ಬದಲಾಗಿ ಅವನೇ ಅಲ್ಲಿ ಅವಳಿಗಾಗಿ ಕಾಯುತ್ತಿದ್ದನು. ಆತ ಅವಳಿಗೆ ಗಿರಾಕಿ ಬರುವ ತನಕ ಜ್ಯೂಸ ಕುಡಿಯಲು ಹೇಳಿದನು. ಅದನ್ನು ಕುಡಿದ ನಂತರ ಆಕೆ ಪ್ರಜ್ಞೆ ತಪ್ಪಿದಳು.  ಆತ ಬೇಕಂತಲೆ ಅವಳಿಗೆ ಮತ್ತು ಬರುವ ಮಾತ್ರೆ ಬೆರೆಸಿದ ಜ್ಯೂಸನ್ನು ಕೊಟ್ಟಿದ್ದನು. ಆನಂತರ ಅಶ್ಲೀಲವಾಗಿ ಅವಳ ವಿಡಿಯೋವನ್ನು ಚಿತ್ರಿಸಿದನು. ಆನಂತರ ಅವಳನ್ನು ಬ್ಲ್ಯಾಕ್ಮೇಲ ಮಾಡಿ ತಾನು ಅಡವಾನ್ಸ ತೆಗೆದುಕೊಂಡಿದ್ದ ಗಿರಾಕಿಗಳನ್ನೆಲ್ಲ ಪುಕ್ಸಟ್ಟೆಯಾಗಿ ಖುಷಿಪಡಿಸಲು ಹೇಳಿದನು. ಅವಳನ್ನು ಹೆದರಿಸಿ ಆತ ಲಕ್ಷಾಂತರ ರೂಪಾಯಿ ಸಂಪಾದಿಸಿದನು. ಆದರೆ ಅವಳಿಗೆ ಒಂದು ಪೈಸೆ ಕೂಡ ಕೊಡಲಿಲ್ಲ. ಆಕೆ ಮರ್ಯಾದೆಗೆ ಹೆದರಿ ಗುಟ್ಟಾಗಿ ಮೈಮಾರಿಕೊಳ್ಳುತ್ತಿದ್ದಳು. ಆದರೆ ಈಗ ಆ ಗುಟ್ಟನ್ನು ಗುಟ್ಟಾಗಿಡುವುದಕ್ಕಾಗಿ ಆಕೆ ಪುಕ್ಸಟ್ಟೆಯಾಗಿ ಎಲ್ಲರೊಂದಿಗೆ ಮಲಗಬೇಕಾದ ಪರಿಸ್ಥಿತಿ ಎದುರಾಯಿತು. ಆಕೆಯೂ ಎಲ್ಲರಂತೆ ಫುಲಟೈಮ್  ರಾತ್ರಿರಾಣಿಯಾದಳು.


ಸೌಂದರ್ಯದ ಶಾಪ : Curse of Beauty : Short Stories in Kannada

          ಒಂದಿನ ಅವಳ ಯಜಮಾನನ ಸ್ನೇಹಿತನೊಬ್ಬ ಬಂದಿದ್ದನು. ಆತ ವಿದೇಶಿದಲ್ಲಿ ಇದೇ ಹಲ್ಕಾ ಕೆಲಸವನ್ನು ಮಾಡುತ್ತಿದ್ದನು. ಅವನ ಕಣ್ಣು ಅವಳ ಮೇಲೆ ಬಿದ್ದಿತು. ಆತ ಅವಳನ್ನು ಹತ್ತು ಲಕ್ಷಕ್ಕೆ ಖರೀದಿಸಿ ವಿದೇಶಕ್ಕೆ ಕರೆದುಕೊಂಡು ಹೋದನು. ಆಕೆ ಪರಿಚಯವಿಲ್ಲದ ದೇಶಕ್ಕೆ ಹೋಗಿ ಪರದೇಶಿಯಾದಳು. ಆಕೆಗೆ ತಾನೆಲ್ಲಿರುವೆ ಎಂಬುದು ಗೊತ್ತಿರಲಿಲ್ಲ. ಆಕೆಯಂತೆ ಎಷ್ಟೋ ಜನ ಅಮಾಯಕ ಹುಡುಗಿಯರು ಅಲ್ಲಿ ಬಂದು ಸಿಕ್ಕಿಹಾಕಿಕೊಂಡಿದ್ದರು. ಅವಳ ಕೂಗನ್ನು ಕೇಳುವವರು, ಅವಳ ಕಣ್ಣೀರನ್ನು ಒರೆಸುವವರು ಅಲ್ಲ್ಯಾರು ಇರಲಿಲ್ಲ. ಅವಳು ಬಹಳಷ್ಟು ರೋಧಿಸಿದಳು. ಬೇರೆಯವರೊಂದಿಗೆ ಹಾಸಿಗೆ ಹಂಚಿಕೊಳ್ಳಲು ವಿರೋಧಿಸಿದಳು. ಆದರೆ ಅಲ್ಲಿನ ಪಾಪಿಗಳು ಅವಳಿಗೆ ನಾನಾ ತರಹದ ಚಿತ್ರ ಹಿಂಸೆಗಳನ್ನು ನೀಡಿ ಅವಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಕೈಗೊಂಬೆಯಾಗಿಸಿಕೊಂಡರು. ಅವಳಿಗೆ ಅವರು ಸಂಬಳ ಕೊಡುವುದಿರಲಿ ಸರಿಯಾಗಿ ಎರಡೊತ್ತು ಊಟವನ್ನು ಕೊಡುತ್ತಿರಲಿಲ್ಲ. ಅವರ ಮಾತನ್ನು ಧಿಕ್ಕರಿಸಿದರೆ ಅವಳಿಗೆ ಸಾಕಷ್ಟು ಒದೆ ಸಿಗುತ್ತಿದ್ದವು ಅಷ್ಟೇ. ಅವಳಿಗೆ ಯಾಕಾದರೂ ಈ ದಂಧೆಗೆ ಬಂದೇ ಎಂದು ಪಶ್ಚಾತ್ತಾಪವಾಗತೊಡಗಿತು. ಅವಳು ಹಣಕ್ಕಾಗಿ  ಮೈಮಾರಿಕೊಳಲು ಹೋಗಿ ಮೋಸಹೋಗಿದ್ದಳು. ಈಗ ಅವಳಿಗೆ ಏನು ಮಾಡಬೇಕೆಂಬುದು ತೋಚದಾಗಿತ್ತು.


ಸೌಂದರ್ಯದ ಶಾಪ : Curse of Beauty : Short Stories in Kannada

               ಕಾಮದ ಕೆಟ್ಟ ವಾಸನೆಯಿಂದ ಕೊಳೆತು ನಾರುತ್ತಿರುವ ಅಲ್ಲಿನ ಕತ್ತಲ ಕೋಣೆಗಳಲ್ಲಿ ಅವಳ ಮೌನ ರೋಧನೆ ಮುಗಿಲು ಮುಟ್ಟಿತು. ಅವಳಂತೆ ಎಷ್ಟೋ ಜನ ಅಮಾಯಕ ಭಾರತೀಯ ಹೆಣ್ಣು ಮಕ್ಕಳು ಅಲ್ಲಿದ್ದರು. ಬರೀ ಭಾರತದಿಂದಷ್ಟೇ ಅಲ್ಲ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಇಂಡೊನೇಷ್ಯಾ ಮುಂತಾದ ಬಡ ರಾಷ್ಟ್ರಗಳ ಅಮಾಯಕ ಹುಡುಗಿಯರು ಅಲ್ಲಿದ್ದರು. ಅವರೇನು ಸ್ವ ಇಚ್ಛೆಯಿಂದ ಬಂದವರಲ್ಲ. ಅವರನ್ನು ಬಲವಂತವಾಗಿ ಅಪಹರಿಸಿಕೊಂಡು ಅಲ್ಲಿಗೆ ಕರೆ ತರಲಾಗಿತ್ತು. ಅವರನ್ನು ಹೆದರಿಸಿ ಬೆದರಿಸಿ ಅಲ್ಲಿಡಲಾಗಿತ್ತು. ಸ್ವಲ್ಪವೂ  ಕರುಣೆಯಿಲ್ಲದ ಕ್ರೂರಿಗಳ ಬಂಧನದಲ್ಲಿ ಸಿಲುಕಿ ಅವರು ನಿಸ್ಸಾಯಕರಾಗಿ ನರಳುತ್ತಿದ್ದರು. ಸಂಬಳವಿಲ್ಲದಿದ್ದರೂ, ಸರಿಯಾಗಿ ಬಟ್ಟೆಯಿಲ್ಲದಿದ್ದರೂ ಎರಡೊತ್ತು ಊಟಕ್ಕಾಗಿ ಅವರು ಪರಿತಪಿಸುತ್ತಿದ್ದರು. ಒಂದಿನವಾದರೂ ನೆಮ್ಮದಿಯ ನಿದ್ದೆಗಾಗಿ ಹಂಬಲಿಸುತ್ತಿದ್ದರು. ವೈದ್ಯಕೀಯ ಸೌಲಭ್ಯಕ್ಕಾಗಿ ಎದುರು ನೋಡುತ್ತಿದ್ದರು. ಅಲ್ಲಿದ್ದ ಯಾರಿಗೂ ತಮ್ಮ ಮಾತೃ ಭಾಷೆಯನ್ನು ಬಿಟ್ಟರೆ ಬೇರೆ ಯಾವ ಭಾಷೆಯು ಬರುತ್ತಿರಲಿಲ್ಲ. ಆದರೆ ಅವರಿಗೆ ಎಲ್ಲರ ಭಾವನೆಗಳು ಅರ್ಥವಾಗುತ್ತಿದ್ದವು. ಅಲ್ಲಿದ್ದ ಎಲ್ಲ ಹುಡುಗಿಯರಿಗೂ ಒಂದೊಂದು ಕಣ್ಣೀರ ಕಥೆಗಳಿದ್ದವು. ಆದರೆ ಅವುಗಳನ್ನು ಕೇಳುವವರು ಯಾರು ಅಲ್ಲಿರಲಿಲ್ಲ.

ಸೌಂದರ್ಯದ ಶಾಪ : Curse of Beauty : Short Stories in Kannada

           ಬಡತನ ಕೊಟ್ಟಿದ್ದಕ್ಕಾಗಿ ದೇವರನ್ನು ಶಪಿಸುತ್ತಿದ್ದಾಕೆ ಈಗ ಸೌಂದರ್ಯವನ್ನು ಕೊಟ್ಟಿದ್ದಕ್ಕಾಗಿ ಅವರನ್ನು ಶಪಿಸುತೊಡಗಿದಳು. ತನ್ನ ಸೌಂದರ್ಯದ ಮೇಲೆ ಹೆಮ್ಮೆಪಡುತ್ತಿದ್ದವಳು ಈಗ ಅದರ ಮೇಲೆ ಅಸಹ್ಯಪಡತೊಡಗಿದಳು. ನನ್ನ ಸೌಂದರ್ಯವೇ ನನಗೆ ಶಾಪವಾಯಿತಲ್ಲ ಎಂದು ಹಣೆ ಚಚ್ಚಿಕೊಳ್ಳತೊಡಗಿದಳು. ಏಕೆಂದರೆ ಅಲ್ಲಿಗೆ ಬರುವ ಗಿರಾಕಿಗಳೆಲ್ಲವು ಮೊದಲಿಗೆ ಅವಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವಳಿಗಾಗಿ ಸರತಿಯಂತೆ ಕಾಯುತ್ತಿದ್ದರು. ಈ ಬಿಳಿಯರು ಭಾರತೀಯ ಗಿರಾಕಿಗಳಂತಲ್ಲ ಎಂಬುದು ಅವಳಿಗೆ ಮೊದಲ ದಿನವೇ ಚೆನ್ನಾಗಿ ಅರ್ಥವಾಗಿತ್ತು. ಹತ್ತಾರು ಸಲ ಮದುವೆ ಮಾಡಿಕೊಂಡರೂ ಆಸೆ ತೀರದ ಬಿಳಿ ಮುದಿಯರ ಕಾಟಕ್ಕೆ ಆಕೆ ಬೇಸತ್ತಿದ್ದಳು. ಇನ್ನೂ ಯುವಕರ ಹುಚ್ಚಾಟಗಳಿಗೆ ರೋಸಿ ಹೋಗಿದ್ದಳು. ಈ ಪಾಪಿಗಳು ನಮಗೆ ಸರಿಯಾಗಿ ಊಟ ಹಾಗೂ ಚಿಕಿತ್ಸೆ ಕೊಡಿಸದೇ ದುಡಿಸುವ ಬದಲು ನಮ್ಮನ್ನು ವಿಷ ಕೊಟ್ಟು ಸಾಯಿಸಿದರೆ ಎಷ್ಟೋ ಚೆನ್ನಾಗಿರುತ್ತೆ ಅಂತಾ ಅವಳ ಎಷ್ಟೋ ಸಲ ಅಂದುಕೊಂಡಿದ್ದಳು.


ಸೌಂದರ್ಯದ ಶಾಪ : Curse of Beauty : Short Stories in Kannada

           ಬರೀ ನೋವು, ನರಳಾಟ, ಕಣ್ಣೀರುಗಳ ನಡುವೆ ಅವಳ  ಬೆತ್ತಲೆ ಜೀವನ ಆರು ವರ್ಷಗಳ ತನಕ ಸಾಗಿತು. ಸೌಂದರ್ಯ ಮಾಸಿದ ಮೇಲೆ ಅಲ್ಲಿ ಹುಡುಗಿಯರಿಗೆ ಯಾವ ಬೆಲೆಯೂ ಇರುವುದಿಲ್ಲ. ಅದಕ್ಕಾಗಿ ಆ ಪಾಪಿಗಳು ಕಾರಿನಲ್ಲಿ ಕರೆದುಕೊಂಡೊಗಿ ಅವಳನ್ನು ಒಂದು ರಾತ್ರಿ ಒಂದು ದೊಡ್ಡ ಪಟ್ಟಣದಲ್ಲಿ ಬಿಸಾಕಿ ಹೋದರು. ಬೆಳಿಗ್ಗೆ ಆಕೆ ಕಣ್ಣು ಬಿಟ್ಟಾಗ ಒಂದು ದೊಡ್ಡ ರಸ್ತೆ ಬದಿಯಲ್ಲಿ ಬಿದ್ದಿದ್ದಳು. ಅವಳಿಗೆ ಅಲ್ಲಿನ ಭಾಷೆ ಗೊತ್ತಿರಲಿಲ್ಲ. ಅಲ್ಲಿನ ಜನಜೀವನ ಗೊತ್ತಿರಲಿಲ್ಲ. ಹಾರ್ನ ಮಾಡುತ್ತಾ ಸಾಗಿದ್ದ ಸಾವಿರಾರು ವಾಹನಗಳಿಂದ ಆಕೆಯ ತಲೆ ಸಿಡಿದು ಹೋಗುವ ಹಂತಕ್ಕೆ ತಲುಪಿತ್ತು. ಆಕೆ ಎದ್ದು ಹಾಗೆಯೇ ರಸ್ತೆ ಬದಿಯಿಂದ ನಡೆಯುತ್ತಾ ಸಾಗಿದಳು. ಅವಳಿಗೆ ಹೊಟ್ಟೆ ಹಸಿವಾಗಿತ್ತು. ಆದರೆ ಅವಳತ್ರ ಬಿಡಿಗಾಸು ಇರಲಿಲ್ಲ. ಅವಳಿಗೆ ಭಿಕ್ಷೆ ಬೇಡುವುದನ್ನು ಬಿಟ್ಟರೆ ಬೇರೆ ಮಾರ್ಗವಿರಲಿಲ್ಲ. ಯೌವ್ವನದಲ್ಲಿ ಅಂದವಿದೆ ಎಂದು ಮೆರೆದಾಡಿದ ಸುಂದರಿಯರು ಭಿಕ್ಷೆ ಬೇಡುತ್ತಿರುವುದು ಅವಳ ಕಣ್ಣಿಗೆ ಕಾಣಿಸಿತು. ಆದರೆ ಭಿಕ್ಷೆ ಬೇಡಿಕೊಂಡು ಬದುಕಲು ಅವಳ ಮನಸಾಕ್ಷಿ ಒಪ್ಪಲಿಲ್ಲ. ಅವಳಿಗೆ ಹಣದ ಅವಶ್ಯಕತೆ ಇದ್ದಾಗ ಅವಳು ಮೈಮಾರಿಕೊಂಡಿದ್ದಳೇ ವಿನ: ಸ್ವಾಭಿಮಾನವನ್ನು ಬಿಟ್ಟಿರಲಿಲ್ಲ. ಈಗ ಭಿಕ್ಷೆ ಬೇಡಿ ತಿನ್ನಲು ಅವಳ ಸ್ವಾಭಿಮಾನ ಬಿಡಲಿಲ್ಲ. ಮುಂದೇನು ಅಂತಾ ಯೋಚಿಸುತ್ತಾ ಆಕೆ ಒಂದು ಬಸಸ್ಟಾಪಲ್ಲಿ ಕುಳಿತ್ತಿದ್ದಳು. ಅವಳಿಗೆ ಏನು ಮಾಡಬೇಕು ಎಂಬುದು ತಿಳಿಯದಾಗಿತ್ತು. ಏಕೆಂದರೆ ವಾಸಿಯಾಗದ ಕಾಯಿಲೆಗಳನ್ನಿಟ್ಟುಕೊಂಡು ಬದುಕುವುದು ಹೇಗೆ? ಎಂಬ ಚಿಂತೆ ಅವಳನ್ನು ಕಾಡುತ್ತಿತ್ತು. ಭಾಷೆ ಬರದ ದೇಶದಲ್ಲಿ ನನಗೆ ಯಾರು ಕೆಲಸ ಕೊಡ್ತಾರಾ? ಕೊಟ್ಟರು ನಾನು ಹೇಗೆ ಮಾಡುವೆ? ನಾನು ಬದುಕ್ಕಿದ್ದು ಮಾಡುವುದಾದರೂ ಏನಿದೆ? ಎಂಬೆಲ್ಲ ಗೊಂದಲಗಳ ನಡುವೆ ಆಕೆ ಮೌನವಾಗಿ ಕುಳಿತ್ತಿದ್ದಳು.


ಸೌಂದರ್ಯದ ಶಾಪ : Curse of Beauty : Short Stories in Kannada

         ವಾಸಿಯಾಗದ ಕಾಯಿಲೆಗಳ ಜೊತೆಗೆ ಒದ್ದಾಡುವುದಕ್ಕಿಂತ ನೆಮ್ಮದಿಯಾಗಿ ಸಾಯುವುದೇ ಲೇಸು ಎಂದಾಕೆ ಯೋಚಿಸುತ್ತಿದ್ದಳು. ಅಷ್ಟರಲ್ಲಿ ಅವಳ ಕಣ್ಣಿಗೆ ಅಲ್ಲೇ ಕುಳಿತ್ತಿದ್ದ ಒಬ್ಬಳು ಕುರೂಪಿ ಯುವತಿ ಕಣ್ಣಿಗೆ ಕಾಣಿಸಿದಳು. ಆಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸೌಂದರ್ಯ ವರ್ಧಕದ ದೊಡ್ಡ ಜಾಹೀರಾತನ್ನು ನೋಡಿ ನಾನು ಸುಂದರವಾಗಿರಬೇಕಿತ್ತು ಎಂದು ಮನಸ್ಸಲ್ಲೇ ಕೊರಗುತ್ತಿದ್ದಳು. ಅವಳನ್ನು ನೋಡಿ ಆಕೆ "ನನಗೆ ಸೌಂದರ್ಯವನ್ನು ಕೊಟ್ಟು ಈ ರೀತಿ ನರಕಯಾತನೆಯನ್ನು ಅನುಭವಿಸುವಂತೆ ಮಾಡುವುದಕ್ಕಿಂತ ಅವಳಂತೆ ಕುರೂಪಿಯನ್ನಾಗಿ ಮಾಡಿದ್ದರೆ ಎಷ್ಟೋ ಚೆನ್ನಾಗಿರುತ್ತಿದ್ದೆಂದು" ಆಕೆ ದೇವರನ್ನು ಶಪಿಸುತ್ತಿದ್ದಳು. ಆಕೆ ದೈಹಿಕ ನೋವು, ಮಾನಸಿಕ ಒತ್ತಡದಿಂದ ನಿಶಕ್ತಳಾಗಿ ಕುಳಿತ ಜಾಗದಲ್ಲಿಯೇ ಕುಸಿದು ಬಿದ್ದಳು. ಅವಳನ್ನು ನೋಡಿ ಅಲ್ಲಿದ್ದ ಜನ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಪೋಲಿಸರು ಬಂದು ಅವಳನ್ನು ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಚಿಕಿತ್ಸೆ ನೀಡಿದಾಗ ಅವಳ ಹಿನ್ನೆಲೆಯಲ್ಲ ಹೊರ ಬಂದಿತು. ಅವಳನ್ನು ಲೈಂಗಿಕ ಕಾರ್ಯಕರ್ತೆಯರ ಆಶ್ರಯ ತಾಣಕ್ಕೆ ಸೇರಿಸಲಾಯಿತು. ಅಲ್ಲಿ ತನ್ನಂಥ ನೂರಾರು ಅಮಾಯಕಿಯರನ್ನು ನೋಡಿ ಆಕೆಗೆ ಕಣ್ಣೀರು ತಡೆಯಲಾಗಲಿಲ್ಲ. ನನ್ನಂಥ ಸೌಂದರ್ಯದ ಶಾಪವನ್ನು ಬೇರೆ ಯಾವ ಹೆಣ್ಣಿಗೂ ಕೊಡದಿರುವಂತೆ ಪ್ರಾರ್ಥಿಸಿ ಆಕೆ ಹೊಸ ಜೀವನವನ್ನು ಪ್ರಾರಂಭಿಸಿದಳು...


ಸೌಂದರ್ಯದ ಶಾಪ : Curse of Beauty : Short Stories in Kannada


ಈ ಅಂಕಣ  (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು  ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Shareಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. 
ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Short Stories in Kannada ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Short Stories in Kannada Reviewed by Director Satishkumar on September 03, 2019 Rating: 4.5
Powered by Blogger.