ಭ್ರೂಣವಾಗಿರುವಾಗಲೇ ನನ್ನ ಕೊಲ್ಲಲೆತ್ನಿಸಿದರು
ಆದರೆ ಹೇಗೋ ದೈವಬಲದಿ ನಾ ಬದುಕಿ ಬಂದೆ.
ನನ್ನ ಮೇಲೆ ಎಲ್ಲರಿಗೂ ತಾತ್ಸಾರ,
ಹೆಣ್ಣು ಮಗು ಹುಣ್ಣೆಂಬ ಲೆಕ್ಕಾಚಾರ...
ಬೀದಿಯಲ್ಲಿ ಬಿದ್ದು ಬೆಳೆದೆ
ವಿಧಿಯನ್ನು ಗೆದ್ದು ಓದಿದೆ
ಕಾಮುಕರ ಕಣ್ತಪ್ಪಿಸಿ ಓಡಾಡಿದೆ
ಹಗಲೊತ್ತಿನಲ್ಲೆ ಕತ್ತಲನ್ನು ಕಂಡೆ...
ಶಾಲೆಯಲ್ಲಿ ಗುರುವಿನ ಕಣ್ಣು
ಆಶ್ರಮದಲ್ಲಿ ಪ್ರಭುವಿನ ಕಣ್ಣು
ನನ್ನ ಸೌಂದರ್ಯವೇ ನನಗೆ ಶಾಪ
ಯಾರ ಮೇಲೆ ತೀರಿಸಿಕೊಳ್ಳಲಿ ನನ್ನ ಕೋಪ ??
ಆವತ್ತು ನನ್ನ ಕೂಗಿಗೆ ಬೆಲೆಯಿರಲಿಲ್ಲ
ನನ್ನ ಕೊರಗಿಗೆ ಎಲ್ಲೆಯಿರಲಿಲ್ಲ
ಕಾಮದ ಬೇಗೆಗೆ ನನ್ನ ದೇಹ ದಹಿಸಿದರೂ
ಕಾಮುಕರ ಕಾಮದಾಹ ತೀರಲಿಲ್ಲ.
ಬದುಕುವ ಆಸೆಯಿದ್ದರೂ
ನನ್ನನ್ನು ಬದುಕಲು ಬಿಡಲಿಲ್ಲ
ನನಗಾದ ದ್ರೋಹಕ್ಕೆ ಪರಿಹಾರವಿಲ್ಲ
ನನಗೆ ನಿಮ್ಮ ಕ್ಯಾಂಡಲ್ ಮತ್ತು
ತೋರಿಕೆಯ ಮೊಸಳೆ ಕಣ್ಣೀರು ಬೇಕಿಲ್ಲ...
ಹೆಣ್ಣನ್ನು ಬರೀ ಕಾಮದ ಕಣ್ಣಿಂದ ಕಾಣ್ತಿರಲ್ಲ,
ಪ್ರೇಮದ ಕಣ್ಣಿಂದಲೂ ಕಾಣಬಹುದಲ್ಲ?
ನನ್ನಾತ್ಮಕ್ಕೆ ಶಾಂತಿ ಸಿಗುತ್ತಿಲ್ಲವಲ್ಲ?
ನಾ ಅಳಿದರೂ ನನ್ನ ಸೋದರಿಯರಿಗೆ
ಸುಭದ್ರ ರಕ್ಷಣೆ ಯಾಕಿಲ್ಲ?
ಹೆಣ್ಣಾಗಿ ಹುಟ್ಟಿದ್ದು ತಪ್ಪಾ?
ಅಥವಾ ಕುರುಡು ಕಾನೂನಿರುವ
ದೇಶದಲ್ಲಿ ಹುಟ್ಟಿದ್ದು ತಪ್ಪಾ?
ಇಲ್ಲವೇ ನನ್ನ ಸೌಂದರ್ಯವೇ
ನನಗೆ ಶಾಪವೇ ?????