ಕಾಮುಕರಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು,
ಪ್ರತಿಕ್ಷಣ ಅವಳು ಕಷ್ಟಪಡುತ್ತಿದ್ದಾಳೆ.
ಕಳ್ಳನೋಟಗಳನ್ನು ನೇರವಾಗಿ ಖಂಡಿಸಲಾಗದೆ
ಒಳಗೊಳಗೆ ಕೊರಗುತ್ತಿದ್ದಾಳೆ.
ಕಾಮದ ಕಣ್ಣುಗಳಿಗೆ
ಖಾರದ ಪುಡಿ ಎರೆಚಲು ಕಾಯುತ್ತಿದ್ದಾಳೆ...
ಕಳ್ಳನೋಟಗಳ ಕರಾಳ ನೆನಪುಗಳು
ಕನಸಾಗಿ ಅವಳನ್ನು ಕಾಡುತ್ತಿವೆ.
ನಿದ್ದೆಯಲ್ಲಿಯೂ ಹೆದರಿ
ಅವಳು ಬೆವರುತ್ತಿದ್ದಾಳೆ.
"ತನಗೆ ರಕ್ಷಣೆ ಎಲ್ಲಿದೆ ?"
ಎಂದು ಕನವರಿಸುತ್ತಿದ್ದಾಳೆ....
ಪ್ರತಿದಿನ ಪ್ರತಿಕ್ಷಣ ಅವಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾಳೆ. ಪ್ರತಿಯೊಂದು ಸ್ಥಳದಲ್ಲಿಯೂ ಅವಳು ಕಿರುಕುಳವನ್ನು ಎದುರಿಸುತ್ತಿದ್ದಾಳೆ. ಕೆಟ್ಟ ಕಣ್ಣುಗಳಿಂದ ನಿರ್ಮಾಣವಾದ ಉಸಿರುಗಟ್ಟಿಸುವ ವಾತಾವರಣ ಅವಳ ನಿದ್ದೆಗೆಡಿಸುತ್ತಿದೆ. ಅವಳಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ. ಅವಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವಳಿಗೆ ಬದುಕಲು ನಿರ್ಭಯವಾದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಗಳಲ್ಲಿ ಒಂದಾಗಿದೆ. ಜಗತ್ತು ಬದಲಾಗಬೇಕಾದರೆ ಬದಲಾವಣೆ ಮೊದಲು ನಮ್ಮಿಂದಲೇ ಶುರುವಾಗಬೇಕು. ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು. ಕಾಮದ ಕಳ್ಳನೋಟಗಳಿಗೆ ಕಡಿವಾಣ ಹಾಕಬೇಕು. ಯಾರೋ ಒಂದಿಬ್ಬರು ಮಾಡುವ ಕೆಟ್ಟ ಕೆಲಸಗಳಿಗೆ ಈಡೀ ಪುರುಷ ಕುಲವೇ ತಲೆ ತಗ್ಗಿಸುವಂತಾಗಿದೆ. ನಾವು ಬದಲಾಗೋಣ, ಕೆಟ್ಟವರನ್ನು ಬದಲಾಯಿಸಲು ಸಾಧ್ಯವಿಲ್ಲವಾದರೆ, ಅವರಿಂದ ಒಳ್ಳೆಯವರನ್ನು ಸಾಧ್ಯವಾದಷ್ಟು ಕಾಪಾಡೋಣ. ಎಲ್ಲರನ್ನೂ ಗೌರವಿಸಿ. ಎಲ್ಲರನ್ನೂ ರಕ್ಷಿಸಿ...