ಹೀರ್-ರಾಂಜಾ ಪ್ರೇಮಕಥೆ - Love Story of Heer Ranja in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹೀರ್-ರಾಂಜಾ ಪ್ರೇಮಕಥೆ - Love Story of Heer Ranja in Kannada

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                                  ಜಗತ್ತಿನ ದುರಂತ ಪ್ರೇಮಕಥೆಗಳಲ್ಲಿ ಹೀರ್-ರಾಂಜಾ ಪ್ರೇಮಕಥೆಯು ಒಂದಾಗಿದೆ. ಆದರೂ ಕಥೆ ಇಂಟರೆಸ್ಟಿಂಗ್ ಆಗಿದೆ ಓದಿ. ಪಾಕಿಸ್ತಾನ ಪಂಜಾಬನ ಚೆನಾಬ್ ನದಿ ಪಕ್ಕದಲ್ಲಿ ತಖ್ತ ಹಜಾರಾ ಎಂಬ ಸುಂದರವಾದ ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಧೀಡೊ ರಾಂಜಾ ಎಂಬ ಆಲಸಿ ಯುವಕನಿದ್ದನು. ಆತ ಜಾಟ್ ಬುಡಕಟ್ಟಿನ ರಾಂಜಾ ಜನಾಂಗಕ್ಕೆ ಸೇರಿದವನಾಗಿದ್ದನು. ಆತನ ಹೆಸರು ಧೀಡೊ ಆಗಿದ್ದರೂ ಎಲ್ಲರೂ ಅವನನ್ನು ಬರೀ ರಾಂಜಾ ಎಂದೇ ಕರೆಯುತ್ತಿದ್ದರು. ಅವನು ತನ್ನ ತಂದೆತಾಯಿಗಳಿಗೆ ನಾಲ್ಕನೆಯ ಹಾಗೂ ಕಿರಿಯ ಮಗನಾಗಿದ್ದನು. ಚಿಕ್ಕವನೆಂಬ ಕಾರಣಕ್ಕೆ ರಾಂಜಾ ತನ್ನ ತಂದೆಗೆ ಬಹಳಷ್ಟು ಅಚ್ಚುಮೆಚ್ಚಾಗಿದ್ದನು. ರಾಂಜಾ ತನ್ನ ತಂದೆಗೆ ಅತ್ಯಂತ ಮುದ್ದಿನ ಮಗನಾಗಿದ್ದರಿಂದ ಆತ ತನ್ನ ಉಳಿದ ಸೋದರರಂತೆ ಗದ್ದೆಯಲ್ಲಿ ದುಡಿಯುತ್ತಿರಲಿಲ್ಲ. ಆತ ಕೊಳಲು ನುಡಿಸುತ್ತಾ ಮನಬಂದಂತೆ ಅಲೆಯುತ್ತಾ ವಿಲಾಸಿ ಜೀವನ ನಡೆಸುತ್ತಿದ್ದನು. ಮನೆಯಲ್ಲಿನ ಬಡತನವನ್ನು ಹೋಗಲಾಡಿಸಲು ಮೈಮುರಿದು ದುಡಿಯುವ ಬದಲು ಕೊಳಲು ನುಡಿಸುತ್ತಾ ಊರತುಂಬ ಅಲೆಯುತ್ತಿದ್ದನು. ಆದರೆ ತನ್ನ ತಂದೆಯ ನಿಧನದ ನಂತರ ರಾಂಜಾನ ಜೀವನ ಸಂಕಷ್ಟಕ್ಕೆ ಸಿಲುಕಿತು. ಏನು ಕೆಲಸ ಮಾಡಲ್ಲ ಎಂಬ ಕಾರಣಕ್ಕೆ ಅವನ ಅತ್ತಿಗೆಯರು ಅವನಿಗೆ ಪ್ರತಿದಿನ ಊಟಕ್ಕೆ ಬಡಿಸುವಾಗ ನಿಂದಿಸುತ್ತಿದ್ದರು. ಕೆಲವು ಸಲ ಊಟ ನೀಡಲು ನಿರಾಕರಿಸುತ್ತಿದ್ದರು. ಅಲ್ಲದೆ ಅವನ ಸೋದರರು ಸಹ ಅವನೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಅವರ ಕಾಟಕ್ಕೆ ಬೇಸತ್ತು ರಾಂಜಾ ಮನೆ ಬಿಟ್ಟು ಓಡಿ ಹೋದನು. ಕೊಳಲು ನುಡಿಸುತ್ತಾ ದಾರಿ ಕಂಡ ಕಡೆಗೆ ಪ್ರಯಾಣ ಬೆಳೆಸಿದನು.

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                     ರಾಂಜಾ ಜನ ಕೊಟ್ಟ ಭಿಕ್ಷೆಯನ್ನು ತಿಂದು ಕೊಳಲು ನುಡಿಸುತ್ತಾ, ಊರುರು ಅಲೆಯುತ್ತಾ ಪಾಕಿಸ್ತಾನ ಪಂಜಾಬನ ಜಾಂಗ್ ಎಂಬ ಹಳ್ಳಿಗೆ ಬಂದನು. ಅದು ಹೀರಳ ಊರಾಗಿತ್ತು. ಆ ಅಪರಿಚಿತ ಊರಲ್ಲಿ ರಾಂಜಾಗೆ ಯಾರು ಕರುಣೆ ತೋರಿಸಲಿಲ್ಲ. ಅದಕ್ಕಾಗಿ ಆತ ರಾತ್ರಿ ಮಸೀದಿಯಲ್ಲಿ ಆಶ್ರಯ ಪಡೆದನು ಮತ್ತು ಕೊಳಲನ್ನು ನುಡಿಸಲು ಪ್ರಾರಂಭಿಸಿದನು. ಆಗ ಕೊಳಲು ನಾದ ಇಸ್ಲಾಂಗೆ ಸಂಬಂಧಪಟ್ಟಿದ್ದಲ್ಲ, ಅದನ್ನು ನುಡಿಸದಿರು ಎಂದು ಮಸೀದಿಯ ಮೌಲ್ವಿ ಹೇಳಿದನು. ಆಗ ರಾಂಜಾ ಅವನಿಗೆ "ನೀವು ಮಾಡುತ್ತಿರುವ ಅಕ್ರಮಗಳೆಲ್ಲವು ನನಗೆ ಗೊತ್ತು..." ಎಂದೇಳಿ ಆ ಮೌಲ್ವಿಯ ಬಾಯ್ಮುಚ್ಚಿಸಿ ಕೊಳಲು ನುಡಿಸಿದನು. ಮರುದಿನ ಮಸೀದಿಯನ್ನು ಬಿಟ್ಟು ಊರೊಳಗೆ ಹೋಗಿ ಕೊಳಲು ನುಡಿಸಲು ಪ್ರಾರಂಭಿಸಿದನು. ಅವನ ಕೊಳಲ ನಾದವನ್ನು ಮೆಚ್ಚಿ ಹೀರಳ ತಂದೆ ಅವನಿಗೆ ತಮ್ಮ ದನಗಳನ್ನು ಮೇಯಿಸುವ ಕೆಲಸ ಕೊಟ್ಟರು. ಹೀರ್ ಸಿಯಾಲ ಬುಡಕಟ್ಟು ಜನಾಂಗದ ಶ್ರೀಮಂತ ಕುಟುಂಬದ ಮನೆ ಮಗಳಾಗಿದ್ದಳು. ಅವಳ ಹೆಸರೇ ಹೇಳುವಂತೆ ಅವಳು ವಜ್ರದಂತೆ ಹೊಳೆಯುವ ಮೈಬಣ್ಣವನ್ನು ಹಾಗೂ ಆಯಸ್ಕಾಂತದಂತೆ ಸೆಳೆಯುವ ಸೌಂದರ್ಯವನ್ನು ಹೊಂದಿದ್ದಳು. ಅವಳ ಮತ್ತು ರಾಂಜಾನ ಮಧ್ಯೆ ಯಾವುದೇ ಸಾಮ್ಯತೆಯಿರಲಿಲ್ಲ. ಆದರೂ ಸಹ ಅವಳು ರಾಂಜಾನ ಪ್ರೇಮದಲ್ಲಿ ಸಿಲುಕಿದಳು. ಅವನ ಕೊಳಲ ನಾದಕ್ಕೆ, ವಿಚಿತ್ರ ಮಾತುಗಳಿಗೆ ಹಾಗೂ ಉದ್ದನೆಯ ಗುಂಗುರು ಕೂದಲುಗಳಿಗೆ ಮನಸೋತು ಹೀರ ರಾಂಜಾನನ್ನು ಮನಸಾರೆ ಪ್ರೀತಿಸಲು ಪ್ರಾರಂಭಿಸಿದಳು. ರಾಂಜಾ ದನ ಮೇಯಿಸುತ್ತಾ ಯಾವುದೋ ಒಂದು ಗದ್ದೆಯಲ್ಲಿ ಕೊಳಲು ನುಡಿಸುತ್ತಾ ಕೂಡುತ್ತಿದ್ದನು. ಹೀರ್ ಎಲ್ಲರ ಕಣ್ತಪ್ಪಿಸಿ ಅವನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದಳು. 

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                      ಹೀರ್ ಹಾಗೂ ರಾಂಜಾರ ಪ್ರೇಮದ ಕಣ್ಣಾಮುಚ್ಚಾಲೆ ಆಟಗಳು, ಗುಪ್ತ ಭೇಟಿಗಳು ಕೆಲವು ವರ್ಷಗಳ ಕಾಲ ನಡೆದವು. ಆದರೆ ಒಂದಿನ ಹೀರ್ ಹಾಗೂ ರಾಂಜಾ ಜೊತೆಯಲ್ಲಿರುವಾಗ ಅವಳ ಚಿಕ್ಕಪ್ಪ ಕೈಡೋ ಕೈಗೆ ಸಿಕ್ಕಿಬಿದ್ದರು. ಕೈಡೋಗೆ ಹೀರಳ ಮೇಲೆ ತುಂಬಾ ಹೊಟ್ಟೆ ಕಿಚ್ಚಿತ್ತು. ಅದಕ್ಕಾಗಿ ಆತ ಅವಳ ಪ್ರೇಮಕಥೆಯನ್ನು ಅವಳ ತಂದೆತಾಯಿಗಳಾದ ಚುಚಕ್ ಮತ್ತು ಮಲ್ಕಿಗೆ ಹೇಳಿ ದೊಡ್ಡ ರಾದ್ಧಾಂತವನ್ನು ಸೃಷ್ಟಿಸಿದನು. ಹೀರಳ ತಂದೆ ರಾಂಜಾನನ್ನು ಹೊಡೆದು ಕೆಲಸದಿಂದ ತೆಗೆದಾಕಿದರು ಮತ್ತು ಹೀರಳನ್ನು ಅವನಿಂದ ದೂರ ಮಾಡಿ ಅವನೊಂದಿಗೆ ಸೇರದಂತೆ ಗೃಹಬಂಧನದಲ್ಲಿಟ್ಟರು. ಹೀರಳ ಮನಸ್ಸು ರಾಂಜಾನನ್ನು ನೋಡಲು, ಅವನೊಂದಿಗೆ ಸೇರಲು ಹಾತೊರೆಯುತ್ತಿತ್ತು. ಆದರೆ ಅವಳ ತಂದೆತಾಯಿಗಳು, ಅವಳ ಚಿಕ್ಕಪ್ಪ ಕೈಡೋ ಹಾಗೂ ಊರಿನ ಮೌಲ್ವಿ ಅವಳನ್ನು ಬೇರೆಯವನೊಂದಿಗೆ ಮದುವೆ ಮಾಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು. ಸೈದಾ ಖೇರಾ ಎಂಬುವವನ್ನು ಮದುವೆಯಾಗುವಂತೆ ಅವಳನ್ನು ಒತ್ತಾಯಿಸಿದರು. ಆದರೆ ಹೀರ್ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಆಗ ಎಲ್ಲರೂ ಸೇರಿ ಅವಳನ್ನು ಹೆದರಿಸಿ ಬೆದರಿಸಿ ಸೈದಾ ಖೇರಾನೊಂದಿಗೆ ಅವಳ ಮದುವೆ ಮಾಡಿದರು. ಸೈದಾ ಖೇರನನ್ನು ಮದುವೆಯಾಗಿ ಎದೆತುಂಬ ನೋವು ತುಂಬಿಕೊಂಡು ಹೀರ್ ಬೇರೆ ಊರಿಗೆ ಹೋದಳು.

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                    ಹೀರ್ ಸೈದಾ ಖೇರಾನನ್ನು ಮದುವೆಯಾಗಿ ಯಾವ ಊರಿಗೆ ಹೋದಳೆಂಬುದು ರಾಂಜಾನಿಗೆ ಗೊತ್ತಾಗಲಿಲ್ಲ. ಆತ ಅವಳಿಲ್ಲದ ಜೀವನವನ್ನು ಕಲ್ಪಿಸಿಕೊಂಡು ಅರೆಹುಚ್ಚನಾದನು. ಮುರಿದ ಮನಸ್ಸಿನಿಂದ ಕೊಳಲನ್ನು ನುಡಿಸುತ್ತಾ ಊರುರು ಅಲೆಯುಲು ಪ್ರಾರಂಭಿಸಿದನು. ಆದರೆ ಅವನಿಗೆ ಯಾವ ಊರಲ್ಲೂ ಹೀರಳ ಸುಳಿವು ಸಿಗಲಿಲ್ಲ. ಅದಕ್ಕಾಗಿ ಆತ ಊರು ಬಿಟ್ಟು ಕಾಡು ಸೇರಿದನು. ಅಂದರೆ ಪರ್ವತ ಗುಡ್ಡಗಳಲ್ಲಿ ಅಲೆಯಲು ಪ್ರಾರಂಭಿಸಿದನು. ಹೀಗೆ ಅಲೆಯುತ್ತಿರುವಾಗ ಒಂದಿನ ಅವನಿಗೆ ಟಿಲ್ಲಾ ಜೋಗಿಯಾನನಲ್ಲಿ (ತಪಸ್ಸಿಗಳ ಬೆಟ್ಟದಲ್ಲಿ) ಮಹಾನ್ ಸಂನ್ಯಾಸಿ ಜೋಗಿ ಗೋರಖನಾಥರು ಭೇಟಿಯಾದರು. ಆತ ಅವರ ತತ್ವಾದರ್ಶಗಳಿಗೆ ಆಕರ್ಷಿತನಾಗಿ ಅವರ ಕಾನ್ಫಟಾ ಪಂಥವನ್ನು ಸೇರಿಕೊಂಡನು. ಅವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದುಕೊಂಡು ತಾನು ಜೋಗಿಯಾದನು. 

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                ರಾಂಜಾ ಜೋಗಿಯಾದ ನಂತರ ಕಾನ್ಫಟಾ ಪಂಥದ ಪ್ರಸಾರ ಮಾಡುತ್ತಾ ಊರುರು ಅಲೆದು ಭಿಕ್ಷೆ ಬೇಡಿಕೊಂಡು ಬದುಕಲು ಪ್ರಾರಂಭಿಸಿದನು. ಹೀಗೇ ಸಾಗುತ್ತಿರಬೇಕಾದರೆ ಆತ  ಒಂದಿನ ಹೀರಳ ಊರಿಗೆ ಬರುತ್ತಾನೆ. ಅಲ್ಲಿ ಆತ ಹೀರಳನ್ನು ಭೇಟಿಯಾಗುತ್ತಾನೆ. ಮತ್ತೆ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತದೆ. ರಾಂಜಾ ಒಂದಿನ ಭಿಕ್ಷೆ ಬೇಡುವುದಕ್ಕಾಗಿ ಒಂದು ಮನೆಯ ಬಾಗಿಲನ್ನು ತಟ್ಟುತ್ತಾನೆ. ಆಗ ಭಿಕ್ಷೆ ನೀಡಲು ಬಂದ ಯುವತಿಯೊಬ್ಬಳು ರಾಂಜಾನನ್ನು ಗುರ್ತಿಸುತ್ತಾಳೆ. ಆ ಯುವತಿ ಹೀರಳ ನಾದಿನಿಯಾಗಿರುತ್ತಾಳೆ. ಅಂದರೆ ಅವಳ ಗಂಡ ಸೈದಾ ಖೇರಾನ ತಂಗಿ ಸಹತಿಯಾಗಿರುತ್ತಾಳೆ. ಅವಳಿಗೆ ಹೀರಳ ಪ್ರೇಮಕಥೆ ಗೊತ್ತಿರುತ್ತದೆ. ಆಕೆ ಸೈದಾನ ಬಲವಂತದ ಮದುವೆಗೆ ವಿರುದ್ಧವಾಗಿರುತ್ತಾಳೆ. ಹೀರ ಬೇರೆಯವನನ್ನು ಇಷ್ಟಪಡುತ್ತಿದ್ದಾಳೆ ಎಂಬುದು ಗೊತ್ತಾದ ನಂತರವೂ ಅವಳನ್ನು ಮದುವೆಯಾದ ತನ್ನ ಅಣ್ಣನ ಮೇಲೆ ಅವಳಿಗೆ ಬೇಜಾರಿರುತ್ತದೆ. ಅದಕ್ಕಾಗಿ ಸಹತಿ ಹೀರ್ ಹಾಗೂ ರಾಂಜಾರಿಗೆ ಮನೆ ಬಿಟ್ಟು ದೂರ ಓಡಿ ಹೋಗಲು ಸಹಾಯ ಮಾಡುತ್ತಾಳೆ. ಹೀರ್ ಹಾಗೂ ರಾಂಜಾ ಅಲ್ಲಿಂದ ಓಡಿ ಹೋಗುತ್ತಾರೆ. 

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                  ಗಂಡನ ಮನೆಯಿಂದ ಹೀರ್ ರಾಂಜಾನೊಂದಿಗೆ ಸುರಕ್ಷಿತವಾಗಿ ಓಡಿ ಹೋಗುತ್ತಾಳೆ. ಆದರೆ ಅವರಿಬ್ಬರೂ ರಾತ್ರಿ ಆ ಊರಿನ ರಾಜನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ರಾಜ ಅವರಿಬ್ಬರನ್ನು ಬಹಳಷ್ಟು ವಿಚಾರಣೆಗೆ ಒಳಪಡಿಸುತ್ತಾನೆ. ನೀವು ನಿಜವಾಗಿಯೂ ಪ್ರೇಮಿಗಳೆಂದು ಹೇಗೆ ನಂಬುವುದು? ಎಂದು ಪ್ರಶ್ನಿಸುತ್ತಾನೆ. ಅವರಿಬ್ಬರ ಬಳಿ ತಾವು ಪ್ರೇಮಿಗಳು ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಾಧಾರಗಳಿರಲಿಲ್ಲ. ಆಗ ಹೀರ್ ತಮ್ಮ ಪ್ರೇಮದ ಸಾಕ್ಷಿಯಾಗಿ ಉರಿಯುತ್ತಿರುವ ಬೆಂಕಿಯ ಮೇಲೆ ಕೈಯಿಡುತ್ತಾಳೆ. ರಾಜನಿಗೆ ಅವಳ ಮಾತಿನ ಮೇಲೆ ನಂಬಿಕೆ ಬರುತ್ತದೆ. ಆತ ಅವರಿಬ್ಬರನ್ನು ಬಿಟ್ಟು ಬಿಡುತ್ತಾನೆ. 

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

             ರಾಜನಿಂದ ಬಿಡುಗಡೆಯಾದ ನಂತರ ಹೀರ್ ರಾಂಜಾನೊಂದಿಗೆ ತನ್ನ ತವರು ಮನೆಗೆ ಹೋಗುತ್ತಾಳೆ. ತಾನು ಗಂಡನ ಮನೆಯಿಂದ ಓಡಿ ಬಂದಿರುವ ವಿಷಯ ತಿಳಿಸಿ ನಾನು ರಾಂಜಾನೊಂದಿಗೆ ಮದುವೆಯಾಗುವೆ ಎಂದು ಹಠ ಹಿಡಿಯುತ್ತಾಳೆ. ಅವಳ ಮನೆಯವರಿಗೆ ಸದ್ಯಕ್ಕೆ ಅವಳ ಖುಷಿಗಿಂತ ಅವರ ಮನೆ ಮರ್ಯಾದೆ ಮುಖ್ಯವಾಗಿರುತ್ತದೆ. ಅದಕ್ಕಾಗಿ ಅವರು ಹೀರಳಿಗೆ "ನಾವು ನಿಮ್ಮಿಬ್ಬರ ಮದುವೆಗೆ ಒಪ್ಪಿದ್ದೇವೆ" ಎಂದೇಳಿ ಅವಳಿಗೆ ನಂಬಿಕೆ ದ್ರೋಹ ಮಾಡುತ್ತಾರೆ. ಅವಳನ್ನು ಹಾಗೂ ರಾಂಜಾನನ್ನು ರಹಸ್ಯವಾಗಿ ಕೊಲ್ಲಲು ಸಂಚು ರೂಪಿಸಲು ಪ್ರಾರಂಭಿಸುತ್ತಾರೆ. ಹೀರಳ ಚಿಕ್ಕಪ್ಪ ಕೈಡೋನಿಗೆ ಅವಳ ಮರುಮದುವೆ ಇಷ್ಟವಿರುವುದಿಲ್ಲ. ಆತ ಅವಳ ಮನೆಯಲ್ಲಿರುವ ಹಿತಶತ್ರುವಾಗಿರುತ್ತಾನೆ. ಯಾವಾಗಲೂ ಶಕುನಿಯಂತೆ ಸಲಹೆಗಳನ್ನು ಕೊಟ್ಟು ಬೆನ್ನಿಗೆ ಚೂರಿ ಹಾಕುತ್ತಿರುತ್ತಾನೆ. ಈಗಾತ ಹೀರಳ ರಹಸ್ಯ ಕೊಲೆಗೆ ಯೋಜನೆಯನ್ನು ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಹೀರ ಹಾಗೂ ರಾಂಜಾರ ಮದುವೆಯ ದಿನವೇ ಅವರಿಬ್ಬರನ್ನು ಕೊಲ್ಲುವುದು ಕೈಡೋವಿನ ಯೋಜನೆಯಾಗಿರುತ್ತದೆ. 

ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada

                  ಮದುವೆಯ ದಿನ ಹೀರ್ ತನ್ನ ಕೋಣೆಯಲ್ಲಿ ಅಲಂಕಾರ ಮಾಡಿಕೊಳ್ಳುತ್ತಿರುತ್ತಾಳೆ. ಆಗ ಕೈಡೋ ಅವಳಿಷ್ಟದ ಲಡ್ಡುವಿನಲ್ಲಿ ವಿಷ ಬೆರೆಸಿ ಅವಳಿಗೆ ಕಳುಹಿಸಿ ಕೊಡುತ್ತಾನೆ. ಈ ಸಂಚು ರಾಂಜಾನಿಗೆ ಹೇಗೋ ಗೊತ್ತಾಗುತ್ತದೆ. ಆತ ಓಡೋಡಿ ಬರುವಷ್ಟರಲ್ಲಿ ಹೀರ್ ಆ ವಿಷಯುಕ್ತ ಲಡ್ಡುಗಳನ್ನು ಸೇವಿಸಿ ರಕ್ತಕಾರಿಕೊಂಡು ಪ್ರಾಣ ಬಿಡುತ್ತಾಳೆ. ತನ್ನ ಪ್ರೇಯಸಿ ತನ್ನ ಕಣ್ಮುಂದೆಯೆ ಸಾಯುವುದನ್ನು ನೋಡಿ ರಾಂಜಾ ಸಹ ಆ ವಿಷಯುಕ್ತ ಲಡ್ಡುಗಳನ್ನು ಸೇವಿಸಿ ಪ್ರಾಣಬಿಡುತ್ತಾನೆ. ಹೀರಳೊಂದಿಗೆ ಒಂದಾಗಿ ಸಂತೋಷವಾಗಿ ಬಾಳಬೇಕೆಂದಿದ್ದ ರಾಂಜಾ ಸಾವಿನಲ್ಲಿ ಅವಳೊಂದಿಗೆ ಸೇರಿಕೊಳ್ಳುತ್ತಾನೆ. ಈ ರೀತಿ ಹೀರ್ ರಾಂಜಾರ ಪ್ರೇಮಕಥೆ ದು:ಖಾಂತ್ಯವಾಗುತ್ತದೆ. ನಂತರ ಅವರಿಬ್ಬರನ್ನು ಹೀರಳ ಹುಟ್ಟೂರಾದ ಜಾಂಗನಲ್ಲಿ ಸಮಾಧಿ ಮಾಡಲಾಗುತ್ತದೆ. ಈಗಲೂ ಅಲ್ಲಿ ಹೃದಯ ಮುರಿದ ಪ್ರೇಮಿಗಳು ಭೇಟಿ ಕೊಡುತ್ತಾರೆ. ನೀವು ಇದೇ ತರಹದ ಆಸಕ್ತಿದಾಯಕ ಪ್ರೇಮಕಥೆಗಳನ್ನು ಓದಲು www.Skkannada.comಗೆ ಭೇಟಿ ಕೊಡಿ. ಈ ಪ್ರೇಮಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಮತ್ತು ಈ ಕಥೆಯನ್ನು ಶೇರ್ ಮಾಡಿ.... 

ಕನ್ನಡ ಕಥೆ ಪುಸ್ತಕಗಳು - Kannada Story Books


ಹೀರ್-ರಾಂಜಾ ಪ್ರೇಮಕಥೆ - Love Story of Heer- Ranja in Kannada


Blogger ನಿಂದ ಸಾಮರ್ಥ್ಯಹೊಂದಿದೆ.