ಬಲಿ ಪ್ರತಿಪದ ಅಥವಾ ಬಲಿ ಪಾಡ್ಯಮಿ ದೀಪಾವಳಿಯ ನಾಲ್ಕನೇಯ ದಿನವಾಗಿದೆ. ಈ ದಿನವನ್ನು ಬಲಿ ಚರ್ಕವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಭಕ್ತ ಪ್ರಹ್ಲಾದನ ಮೊಮ್ಮಗ ಹಾಗೂ ವಿರೋಚನನ ಮಗನಾದ ಮಹಾಬಲಿಯು ಅತ್ಯಂತ ಹೆಸರುವಾಸಿಯಾದ ಚಕ್ರವರ್ತಿಯಾಗಿದ್ದನು. ಪ್ರಜೆಗಳು ಅವನನ್ನು ಪ್ರೀತಿಯಿಂದ ಬಲಿ ಚಕ್ರವರ್ತಿ ಎಂದು ಕರೆಯುತ್ತಿದ್ದರು. ಆತ ಅಸುರನಾಗಿದ್ದರೂ ಸಹ ದಯಾಳುವಾಗಿದ್ದನು, ಮಹಾನ ದಾನಿಯಾಗಿದ್ದನು. ತನ್ನ ಅಜ್ಜ ಭಕ್ತ ಪ್ರಹ್ಲಾದನಂತೆ ಅವನು ಸಹ ವಿಷ್ಣುವಿನ ಭಕ್ತನಾಗಿದ್ದನು. ಪ್ರಹ್ಲಾದನ ಮಾರ್ಗದರ್ಶನದಲ್ಲಿ ಸಕಲ ವೇದ ಶಾಸ್ತ್ರಗಳನ್ನು ಕಲಿತು ಮಹಾನ ಜ್ಞಾನಿ ಹಾಗೂ ಮಹಾನ ಪರಾಕ್ರಮಿ ರಾಜನಾಗಿದ್ದನು. ಅವನು ತನ್ನ ಪ್ರಜೆಗಳನ್ನು ಬಹಳಷ್ಟು ಪ್ರೀತಿಯಿಂದ ಕಾಣುತ್ತಿದ್ದನು. ಅವರಿಗೆ ದೊಡ್ಡ ಮಟ್ಟದಲ್ಲಿ ದಾನ ಧರ್ಮಗಳನ್ನು ಮಾಡುತ್ತಿದ್ದನು. ಪ್ರಜೆಗಳಿಗೆ ಒಳ್ಳೇ ಆಡಳಿತ ನೀಡಿದ್ದನು. ಅವನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲ ಸುಖ, ಶಾಂತಿ, ನೆಮ್ಮದಿಯಿಂದ ಇದ್ದರು. ಪ್ರಜೆಗಳೆಲ್ಲ ಹಣ ಆಸ್ತಿ ಅಂತಸ್ತಿನೊಂದಿಗೆ ಶ್ರೀಮಂತರಾಗಿದ್ದರು. ಹೀಗಾಗಿ ಪ್ರಜೆಗಳೆಲ್ಲ ದೇವರ ಬದಲಾಗಿ ಬಲಿ ಚಕ್ರವರ್ತಿಯನ್ನು ಪೂಜಿಸಲು ಪ್ರಾರಂಭಿಸಿದರು.
ಮೊದಲೇ ಹೇಳಿದಂತೆ ಬಲಿ ಚಕ್ರವರ್ತಿ ಬಹಳಷ್ಟು ಪ್ರಬಲ ಹಾಗೂ ಪರಾಕ್ರಮಿಶಾಲಿ ಅಸುರ ರಾಜನಾಗಿದ್ದನು. ಅವನು ಯುದ್ಧ ಮಾಡಿ ಸ್ವರ್ಗ, ಭೂಮಿ ಹಾಗೂ ಪಾತಾಳ ಸೇರಿದಂತೆ ಮೂರು ಲೋಕಗಳನ್ನು ಗೆದ್ದನು. ನಂತರ ಸ್ವರ್ಗ ಲೋಕದ ರಾಜಧಾನಿ ಅಮರಾವತಿಯನ್ನು ಆಕ್ರಮಿಸಿಕೊಂಡು ಇಂದ್ರನನ್ನು ಸ್ವರ್ಗದಿಂದ ಪದಚ್ಯುತಗೊಳಿಸಿದನು. ಬಲಿ ಚಕ್ರವರ್ತಿಯ ಬಳಿ ಅಮೃತವಿತ್ತು. ಹೀಗಾಗಿ ಆತ ಅಮರನಾಗಿದ್ದನು. ಅವನಿಗೆ ಸಾವಿರಲಿಲ್ಲ. ದೇವತೆಗಳು ಯುದ್ಧದಲ್ಲಿ ತಮ್ಮ ಪರ ವಹಿಸಿ ಬಲಿಯನ್ನು ಕೊಲ್ಲುವಂತೆ ವಿಷ್ಣುವಿಗೆ ಕೇಳಿಕೊಂಡರು. ಆದರೆ ವಿಷ್ಣು ತನ್ನ ಭಕ್ತನನ್ನು ಕೊಲ್ಲಲು ಮನಸ್ಸಾಗದೆ ಯುದ್ಧತಂತ್ರವನ್ನೇ ಬದಲಿಸಿ ಸುಮ್ಮನಾದನು.
ಮೂರು ಲೋಕಗಳನ್ನು ಗೆದ್ದು ವಿಜಯಶಾಲಿಯಾದ ನಂತರ ಬಲಿ ತನ್ನ ಗೆಲುವನ್ನು ಸಂಭ್ರಮಿಸಲು ಹಾಗೂ ಪ್ರಜೆಗಳಿಗೆ ಉಡುಗೊರೆ ನೀಡಲು ತನ್ನ ಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಅಶ್ವಮೇಧಯಾಗ ಮಾಡಲು ಆರಂಭಿಸಿದನು. ಆಗ ಮಹಾವಿಷ್ಣು ವಾಮನ ಅವತಾರ ತಾಳಿ ಒಬ್ಬ ಕುಬ್ಜ ಬ್ರಾಹ್ಮಣನ ವೇಷದಲ್ಲಿ ಬಲಿಯ ಯಜ್ಞಶಾಲೆಗೆ ಹೋದನು. ಹೋಗಿ ಬಲಿಗೆ ಮೂರು ಹೆಜ್ಜೆಗಳ ಜಾಗವನ್ನು ದಾನವಾಗಿ ಕೊಡುವಂತೆ ಕೇಳಿದನು. ಬಲಿ ಚಕ್ರವರ್ತಿ ಮೊದಲೇ ದಾನದಲ್ಲಿ ಎತ್ತಿದ ಕೈಯಾಗಿದ್ದನು. ಆತ ಮೂರು ಹೆಜ್ಜೆಗಳ ಜಾಗವನ್ನು ವಾಮನನಿಗೆ ದಾನವಾಗಿ ಕೊಡಲು ಒಪ್ಪಿದನು. ಆಗ ಶುಕ್ರಾಚಾರ್ಯರು ಅವನಿಗೆ "ಬಂದಿರುವುದು ವಾಮನನಲ್ಲ, ಸಾಕ್ಷಾತ ಮಹಾವಿಷ್ಣು. ನಿನ್ನ ಮಾತನ್ನು ಹಿಂತೆಗೆದುಕೊ, ಇದರಲ್ಲಿ ಏನೋ ಸಂಚಿದೆ" ಎಂದು ಎಚ್ಚರಿಸಿದರು. ಆದರೂ ಸಹ ಬಲಿ ಚಕ್ರವರ್ತಿ ತನ್ನ ಮಾತಿಗೆ ಬದ್ದನಾಗಿ ನಿಂತನು ಹಾಗೂ ವಾಮನನಿಗೆ ಮೂರು ಹೆಜ್ಜೆಗಳ ಜಮೀನನ್ನು ದಾನವಾಗಿ ನೀಡಿರುವೆ ಎಂದನು. ಕೂಡಲೇ ಮಹಾವಿಷ್ಣು ವಾಮನ ಅವತಾರ ಬಿಟ್ಟು ತನ್ನ ತ್ರಿವಿಕ್ರಮ ಅವತಾರ ತಾಳಿ ಮುಗಿಲೆತ್ತರಕ್ಕೆ ಬೆಳೆದು ನಿಂತನು. ಮಹಾವಿಷ್ಣು ತನ್ನ ಮೊದಲ ಹೆಜ್ಜೆಯನ್ನು ಸ್ವರ್ಗದ ಮೇಲಿಟ್ಟನು, ಎರಡನೇ ಹೆಜ್ಜೆಯನ್ನು ಭೂಮಿಯ ಮೇಲಿಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ? ಎಂದು ಕೇಳಿದಾಗ. ಆಗ ಬಲಿ ತನ್ನ ತಲೆ ಬಾಗಿಸಿದನು. ಆಗ ಮಹಾವಿಷ್ಣು ಬಲಿಯ ತಲೆಯ ಮೇಲೆ ಅವನ ಮೂರನೇ ಹೆಜ್ಜೆಯನ್ನು ಇಟ್ಟನು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿದನು. ನಂತರ ಅವನನ್ನು ವೈಕುಂಠಕ್ಕೆ ಕರೆಯಿಸಿಕೊಂಡನು.
ವಾಮನ ಅವತಾರದಲ್ಲಿದ್ದ ಮಹಾವಿಷ್ಣು ಬಲಿಗೆ ಮುಂದಿನ ಮನ್ವಂತರದಲ್ಲಿ ಇಂದ್ರನ ಪಟ್ಟ ಪಡೆಯುವ ವರ ನೀಡಿದನು. ಜೊತೆಗೆ ಸುಗ್ಗಿ ಕಾಲದ ಸಮಯದಲ್ಲಿ ಪ್ರಜೆಗಳ ಖುಷಿಯನ್ನು ನೋಡಲು ಪ್ರತಿ ವರ್ಷ ಭೂಮಿಗೆ ಬರುವ ಅವಕಾಶವನ್ನು ನೀಡಿದನು. ಹೀಗಾಗಿ ಬಲಿ ವರ್ಷದಲ್ಲಿ ಎರಡು ಸಲ ಭೂಮಿಗೆ ಬರುತ್ತಾನೆ. ಒಮ್ಮೆ ದೀಪಾವಳಿಗೆ ಬಂದರೆ ಎರಡನೇ ಸಲ ಸಂಕ್ರಾಂತಿಗೆ ಅಂದರೆ ಓನಂ ಹಬ್ಬಕ್ಕೆ ಬರುತ್ತಾನೆ. ಅವನ ನೆನಪಿಗಾಗಿ ನಾವು ದೀಪಾವಳಿಯಲ್ಲಿ ಬಲಿ ಪಾಡ್ಯಮಿಯನ್ನು ಆಚರಿಸುತ್ತೇವೆ. ಇದೀಷ್ಟು ಬಲಿ ಪಾಡ್ಯಮಿಯ ಹಿಂದಿರುವ ಪೌರಾಣಿಕ ಕಥೆ. ಈ ಕಥೆಯನ್ನು ನಿಮ್ಮ ಪ್ರೀತಿಪಾತ್ರರೊಡನೆ ತಪ್ಪದೇ ಶೇರ್ ಮಾಡಿ. ಧನ್ಯವಾದಗಳು....