
ಭಾರತ ಬ್ರಿಟಿಷರಿಂದ ಸ್ವತಂತ್ರವಾಗಿದೆ ಎಂಬುದು ಎಷ್ಟು ನಿಜವೋ ಭಾರತದ ಬಡವರಿಗೆ ಇನ್ನೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ಕೂಡ ಅಷ್ಟೇ ನಿಜ. ನಮ್ಮ ದೇಶದ ಬಡವರಿಗೆ ಶೋಷಣೆಯಿಂದ, ದಬ್ಬಾಳಿಕೆಯಿಂದ, ಹಸಿವಿನಿಂದ, ಬಡತನದಿಂದ, ಅನ್ಯಾಯದಿಂದ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಏಕೆಂದರೆ ಕೆಲ ಕೊಳಕು ದರೋಡೆಕೋರ ಶ್ರೀಮಂತರು, ರಾಜಕಾರಣಿಗಳು, ಮತಾಂಧರು ಬಡವರಿಗೆ ಸ್ವಾತಂತ್ರ್ಯ ಮತ್ತು ನ್ಯಾಯ ಸಿಗದಂತೆ ತಮ್ಮದೇ ಆದ ಒಂದು ಭದ್ರ ಜಾಲವನ್ನು ನಿರ್ಮಿಸಿಕೊಂಡು ದೇಶದ ಅಧಿಕಾರವನ್ನು ಹಿಂದೆ ಕುಂತು ಕಂಟ್ರೋಲ ಮಾಡಿ ತಮ್ಮ ಅಂಧಾ ದರ್ಬಾರ ನಡೆಸುತ್ತಿದ್ದಾರೆ. ದೇಶದ ಆಸ್ತಿಯನ್ನು ಹಾಡಹಗಲೇ ಲೂಟಿ ಮಾಡಿ ವಿದೇಶದ ಬ್ಯಾಂಕುಗಳಲ್ಲಿಟ್ಟು ಮಜಾ ಮಾಡುತ್ತಿದ್ದಾರೆ. ಇವರ ಮೋಜು ಮಸ್ತಿಗೆ ಬಡವರ ಸಂಸಾರಗಳು ಬೀದಿಪಾಲಾಗುತ್ತಿವೆ. ಎಷ್ಟೋ ಅಮಾಯಕ ಹುಡುಗಿಯರ ಮಾನಹಾನಿಯಾದರೂ ನಮ್ಮ ಕಾನೂನು ಕುರುಡಾಗಿದೆ. ಏಕೆಂದರೆ ಈ ಕೊಳಕು ರಾಕ್ಷಸ ಮನಸ್ಥಿತಿಯ ಗೋಮುಖ ಹಂದಿಗಳಿಗೆ ಎಳ್ಳಷ್ಟು ಕಾನೂನಿನ ಭಯವಿಲ್ಲ. ಯಾವಾಗ ಇವರಿಗೆ ಕಾನೂನಿನ ಭಯ ಹುಟ್ಟುತ್ತೋ, ದುಡ್ಡಿದ್ದರೂ ನಾವು ತಪ್ಪು ಮಾಡಿ ಜೀವಂತವಾಗಿ ಇರಲಾರೆವು ಎಂಬುದು ಅರಿವಾಗುತ್ತೋ ಅವತ್ತು ನಮ್ಮ ಭಾರತದಲ್ಲಿ ಅಕ್ರಮಗಳು, ಅತ್ಯಾಚಾರಗಳು ನಿಲ್ಲುತ್ತವೆ. ಪ್ರತಿ ಅಕ್ರಮ ಹಾಗೂ ಅತ್ಯಾಚಾರದ ಸುದ್ದಿ ಕಿವಿಗೆ ಬಿದ್ದಾಗ ನನ್ನ ರಕ್ತ ಕುದಿಯಲು ಪ್ರಾರಂಭಿಸುತ್ತದೆ. ತಲೆಯಲ್ಲಿ ಏನೋನೋ ವಿಚಾರಗಳು ಓಡಾಡುತ್ತವೆ. ನಾನು ಓದಿದ ಹಳೇ ಹಿಸ್ಟರಿ ಬುಕಗಳಲ್ಲಿನ ಕೆಟ್ಟ ಘಟನೆಗಳು, ದುಷ್ಟ ಆಚರಣೆಗಳು ಕಣ್ಮುಂದೆ ಬಂದು ಹೋಗುತ್ತವೆ. ಇದೇ ರೀತಿ ನೆನಪಾದ ಅಂಥದ್ದೇ ಒಂದು ಕೆಟ್ಟ ಘಟನೆಯೆಂದರೆ ಸ್ತನ ತೆರಿಗೆ ಹಾಗೂ ನಂಗೇಲಿಯ ಕಥೆ.
ಕೇರಳದಲ್ಲಿ ತಿರುವಾಂಕೂರ ಸಂಸ್ಥಾನದ ಆಡಳಿತ ಕಾಲದಲ್ಲಿ ಕೆಳವರ್ಗದ ಮಹಿಳೆಯರಿಂದ ಹಾಗೂ ದಲಿತ ಮಹಿಳೆಯವರಿಂದ ಸ್ತನ ತೆರಿಗೆ ವಸೂಲಿ ಮಾಡುವ ದರಿದ್ರ ಪದ್ಧತಿಯಿತ್ತು. ಕೆಳವರ್ಗದ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಸ್ತನಗಳನ್ನು ಮುಚ್ಚಿಕೊಂಡು ತಿರುಗಾಡಬೇಕೆಂದರೆ ಅದಕ್ಕೆ ತೆರಿಗೆ (ಟ್ಯಾಕ್ಸ) ಕಟ್ಟಬೇಕಾಗುತ್ತಿತ್ತು. ತೆರಿಗೆ ಕಟ್ಟಲಾಗದಿದ್ದರೆ ಸ್ತನಗಳನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ತಿರುವಾಂಕೂರಿನ ಕಲೆಕ್ಟರಗಳು ಮನೆ ಮನೆಗೆ ತೆರಳಿ ಬಲವಂತವಾಗಿ ಸ್ತನ ತೆರಿಗೆ ವಸೂಲಿ ಮಾಡುತ್ತಿದ್ದರು. ದಲಿತ ಮಹಿಳೆಯರು ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಅವರಿಂದ ಸ್ತನ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಅವರ ಸ್ತನಗಳ ಗಾತ್ರಕ್ಕನುಸಾರವಾಗಿ ತೆರಿಗೆ ವಿಧಿಸುತ್ತಿದ್ದರು. ಇದರ ನೆಪದಲ್ಲಿ ಅವರನ್ನು ಶೋಷಿಸುತ್ತಿದ್ದರು. ಬ್ರಾಹ್ಮಣರು ಮೇಲ್ಜಾತಿಯವರು ಶ್ರೇಷ್ಠ ಎಂಬುದನ್ನು ಸಾರಲು ಹಾಗೂ ಮೇಲ್ಜಾತಿ ಕೆಳಜಾತಿಯವರ ನಡುವೆ ಅಂತರ ಕಾಯ್ದುಕೊಳ್ಳಲು ಅಲ್ಲಿನ ರಾಜನೇ ಈ ದರಿದ್ರ ಕಾನೂನನ್ನು ಕೆಳವರ್ಗದವರ ಮೇಲೆ ಹೇರಿದ್ದನು. ಮಹಿಳೆಯರಿಂದ ಸ್ತನ ತೆರಿಗೆ ವಸೂಲಿ ಮಾಡಿದರೆ, ಪುರುಷರಿಂದ ತಲೆ ತೆರಿಗೆ ವಸೂಲಿ ಮಾಡಲಾಗುತ್ತಿತ್ತು.

ಕೆಳವರ್ಗದ ಮಹಿಳೆಯರಿಂದ ಸ್ತನ ತೆರಿಗೆ ವಸೂಲಿ ಮಾಡುವುದು ಈಡೀ ಮಾನವ ಕುಲವೇ ನಾಚಿ ತಲೆ ತಗ್ಗಿಸುವಂಥ ಹೇಯ ಅಮಾನವೀಯ ಕೃತ್ಯವಾಗಿತ್ತು. ಇದರ ವಿರುದ್ಧ ಚೆರಥಾಲಾ ಎಂಬ ಗ್ರಾಮದ ನಂಗೇಲಿ ಎಂಬ ವೀರವನಿತೆ ವಿಭಿನ್ನವಾಗಿ ಪ್ರತಿಭಟಿಸಿದಳು. ಆಕೆ ಸ್ತನ ತೆರಿಗೆಯನ್ನು ವಿರೋಧಿಸಿ ತನ್ನ ಸ್ತನಗಳನ್ನೇ ಕತ್ತರಿಸಿ ಕೊಟ್ಟಳು. ಸ್ತನ ತೆರಿಗೆ ವಸೂಲಿ ಮಾಡಲು ಕಲೆಕ್ಟರಗಳು ಅವಳ ಮನೆಗೆ ಬಂದು ಅವಳಿಗೆ ಹಿಂಸೆ ಕೊಡಲು ಪ್ರಾರಂಭಿಸಿದರು. ಆಗವಳು ಅವರ ದಬ್ಬಾಳಿಕೆಯನ್ನು ವಿರೋಧಿಸಿ ತನ್ನ ಎರಡು ಸ್ತನಗಳನ್ನು ಕತ್ತರಿಸಿ ಅವುಗಳನ್ನು ಒಂದು ಎಲೆಯಲ್ಲಿ ಹಾಕಿ ಆ ಕಲೆಕ್ಟರಗಳಿಗೆ ಕೊಟ್ಟಳು. ತಕ್ಷಣವೇ ಅವಳು ರಕ್ತಸ್ರಾವದಿಂದ ಸಾವನ್ನಪ್ಪಿದಳು. ನಂತರ ಮನೆಗೆ ಬಂದ ಅವಳ ಗಂಡ ಚಿರುಕಂದನ ಅವಳ ದುಸ್ಥಿತಿ ನೋಡಿ ಎದೆ ಬಡಿದುಕೊಂಡು ರೋಧಿಸಿದನು. ಅವನಿಗೆ ಅವಳ ದುರಂತ ಅಂತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಆತ ಅವಳ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸತ್ತನು. ನಂಗೇಲಿಯ ಸಾವು ಸ್ತನ ತೆರಿಗೆಯ ವಿರುದ್ಧ ದೊಡ್ಡ ಹೋರಾಟಕ್ಕೆ ಪ್ರೇರಣೆ ನೀಡಿತು.

ಸ್ತನ ತೆರಿಗೆ ವಿರುದ್ಧವಾಗಿ ಹಲವಾರು ದಂಗೆಗಳು ಶುರುವಾದವು. ಬಹಳಷ್ಟು ಕೆಳವರ್ಗದ ಜನ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರವಾದರು. ಏಕೆಂದರೆ ಅಲ್ಲಿ ಅವರು ಯಾವುದೇ ತೆರಿಗೆ ಕೊಡದೆ ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಬಹುದಿತ್ತು. ಮತಾಂತರವಾಗಲು ಇಷ್ಟವಿಲ್ಲದ ಜನ ತಿರುವಾಂಕೂರು ಸಂಸ್ಥಾನದ ವಿರುದ್ಧ ತಿರುಗಿ ಬಿದ್ದರು. ಮಹಿಳೆಯರು ಯಾವುದೇ ತೆರಿಗೆ ಕೊಡದೆ ತಮ್ಮ ಸ್ತನಗಳನ್ನು ಮುಚ್ಚಿಕೊಂಡು ತಿರುಗಲು ಪ್ರಾರಂಭಿಸಿದರು. ಇದರಿಂದ ತಿರುವಾಂಕೂರಿನ ಟ್ಯಾಕ್ಸ ಕಲೆಕ್ಟರಗಳ ಈಗೋ ಹರ್ಟಾಯಿತು. ಆಗವರು ಇಬ್ಬರು ಕೆಳವರ್ಗದ ಮಹಿಳೆಯರನ್ನು ಮರಕ್ಕೆ ಕಟ್ಟಾಗಿ ಸಾರ್ವಜನಿಕವಾಗಿ ಅವರ ಬಟ್ಟೆ ಬಿಚ್ಚಾಕಿ ಅವರ ಮಾನ ಹಾನಿ ಮಾಡಿದರು. ಇದರಿಂದ ಕೆಳವರ್ಗದವರ ಕೋಪ ಉಗ್ರ ಸ್ವರೂಪ ಪಡೆದುಕೊಂಡಿತು. ಕೆಳವರ್ಗದ ಜನ ಮೇಲ್ವರ್ಗದ ಜನರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಅವರ ಅಂಗಡಿಗಳನ್ನು ಲೂಟಿ ಮಾಡಿದರು. ಇದರಿಂದ ಎಚ್ಚೆತ್ತ ಮದ್ರಾಸ್ ಗವರ್ನರ್ ತಿರುವಾಂಕೂರು ರಾಜನ ಮೇಲೆ ಸ್ತನ ತೆರಿಗೆ ನಿಷೇಧಿಸುವಂತೆ ಒತ್ತಡ ಹೇರಿದನು. ಅವನ ಒತ್ತಡದಿಂದಾಗಿ ಸ್ತನ ತೆರಿಗೆ ನಿಷೇಧವಾಯಿತು. ಕೆಳವರ್ಗದ ಮಹಿಳೆಯರಿಗೆ ಸ್ತನಗಳನ್ನು ಮುಚ್ಚಿಕೊಂಡು ಓಡಾಡುವ ಅಧಿಕಾರ ಸಿಕ್ಕಿತು.

ಸ್ತನ ತೆರಿಗೆ ಒಂದೇ ಅಲ್ಲ ಇನ್ನೂ ಇಂಥಹ ಎಷ್ಟೋ ಅಮಾನವೀಯ ಕೃತ್ಯಗಳಾಗಿವೆ. ಪುರಾಣ ಕಾಲದಿಂದಲೂ ಕೆಲವೊಂದಿಷ್ಟು ಕೀಚಕರು ಮಾತೆಯರ ಮೇಲೆ ಅತ್ಯಾಚಾರವನ್ನು ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಶಾಶ್ವತ ಕೊನೆ ಯಾವಾಗ ಎಂಬ ನೇರ ಪ್ರಶ್ನೆ ಪ್ರತಿಕ್ಷಣ ನಿಷ್ಟ ಗಂಡಸರನ್ನು ತಲೆ ಕೆಳಗಾಗಿ ನಿಲ್ಲುವಂತೆ ಮಾಡುತ್ತಿದೆ. ಏಕೆಂದರೆ ಕೆಲವೊಂದಿಷ್ಟು ಕಚಡಾ ಶಂಢರು ಮಾಡುವ ಅತ್ಯಾಚಾರಗಳಿಂದಾಗಿ ಈಡೀ ಪುರುಷ ಕುಲ ತಲೆ ತಗ್ಗಿಸುವಂತಾಗಿದೆ. ನನಗೆ ಏನು ಮಾಡಲಾಗುತ್ತಿಲ್ಲ ಎಂಬ ನೋವು ಪ್ರತಿಕ್ಷಣ ಕಾಡುತ್ತೆ. ನಮ್ಮ ದೇಶದಲ್ಲಿ ಕಠಿಣ ಕಾನೂನುಗಳು ಬಂದರೆ ನಮ್ಮ ಮಾತೆಯರಿಗೆ ಖಂಡಿತ ಸೇಫ್ ಫೀಲಾಗುತ್ತೆ. ಆದರೆ ಆ ಕಾನೂನುಗಳು ಜಾರಿಯಾಗದಂತೆ, ಜಾರಿಯಾದರೂ ಅನುಷ್ಠಾನಕ್ಕೆ ಬರದಂತೆ ನಮ್ಮ ಸರ್ಕಾರಗಳೇ ಸಂಚು ರೂಪಿಸಿ ಕುತಂತ್ರ ಮಾಡುತ್ತಿವೆ. ಎಲ್ಲ ಪೊಲಿಟಿಕಲ್ ಪಾರ್ಟಿಗಳಲ್ಲಿ 70%ಕ್ಕಿಂತಲೂ ಹೆಚ್ಚಾಗಿ ಕ್ರಿಮಿನಲಗಳು, ರೆಪಿಸ್ಟಗಳು, ರೌಡಿಗಳು, ಭ್ರಷ್ಟಾಚಾರಿಗಳೇ ಇದಾರೆ. ಅದಕ್ಕಾಗಿಯೇ ಅವರು ಅಕ್ರಮ ಹಾಗೂ ಅತ್ಯಾಚಾರಗಳನ್ನು ತಡೆಗಟ್ಟಲು ಕಠಿಣ ಕಾನೂನನ್ನು ಜಾರಿಗೊಳಿಸಲು ಬಿಡಲ್ಲ. ಬಿಟ್ಟರೇ ಅವರೇ ಮೊದಲು ಗಲ್ಲಿಗೇರುತ್ತಾರೆ.

ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನು ಧ್ವನಿ ಎತ್ತುತ್ತಿರುವೆ. ನೀವು ಧ್ವನಿ ಎತ್ತಿ. ಒಂದೈದು ಸಾವಿರ ಕಚಡಾ ರಾಜಕಾರಣಿಗಳು 130 ಕೋಟಿ ಜನರಿಗೆ ತೊಂದರೆ ಮಾಡುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಒಂದ್ಸಲ ಗರ್ಜಿಸಿದರೆ ಸಾಕು ಇವರೆಲ್ಲ ಹ್ರದಯಾಘಾತದಿಂದ ಸಾಯುತ್ತಾರೆ. ನಾನು ನನ್ನ ದಾರಿಯಲ್ಲಿ ಪ್ರತಿಭಟಿಸುತ್ತಿರುವೆ. ನನಗೆ ಏನಾದರೂ ಸಲಹೆ ಕೊಡಬೇಕೆಂದರೆ ನೀವು ನನಗೆ ಇನಸ್ಟಾಗ್ರಾಮಲ್ಲಿ ಡೈರೆಕ್ಟ ಮೆಸೆಜ ಮಾಡಬಹುದು. ಧನ್ಯವಾದಗಳು.