ದೀಪಗಳ ಹಬ್ಬ ದೀಪಾವಳಿಯೊಂದಿಗೆ ಬಹಳಷ್ಟು ಸಾಂಪ್ರದಾಯಿಕ ಕಥೆಗಳು ಸೇರಿಕೊಂಡಿವೆ. ಅದರಲ್ಲಿ ಮುಖ್ಯವಾಗಿ 14 ವರ್ಷ ವನವಾಸದ ನಂತರ ಮರಳಿ ಅಯೋಧ್ಯೆಗೆ ಶ್ರೀರಾಮನ ಆಗಮನದ ಕಥೆ ದೀಪಾವಳಿಯ ಆಚರಣೆಗೆ ಪ್ರಮುಖ ಕಾರಣವಾಗಿದೆ.
ಕೈಕೆ ದಶರಥನಿಗೆ ಕೇಳಿದ ಕುಟೀಲ ವರದಿಂದಾಗಿ ರಾಮ ತಂದೆಯ ವಚನ ಪಾಲಿಸಲು 14 ವರ್ಷ ವನವಾಸಕ್ಕೆ ಹೋದನು. ಅವನೊಂದಿಗೆ ಸೀತೆ ಹಾಗೂ ಲಕ್ಷ್ಮಣರು ಸಹ ವನವಾಸಕ್ಕೆ ಹೋದರು. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದಲ್ಲಿರುವಾಗ ಒಂದಿನ ಶೂರ್ಪನಖಿ ಎಂಬ ರಾಕ್ಷಸಿ ಶ್ರೀರಾಮನನ್ನು ನೋಡಿ ಆಕರ್ಷಿತಳಾದಳು. ಒಂದು ಸುಂದರ ಕನ್ಯೆಯ ರೂಪ ಧರಿಸಿ ತನ್ನನ್ನು ಮದುವೆಯಾಗುವಂತೆ ಶ್ರೀರಾಮನನ್ನು ಕೇಳಿಕೊಂಡಳು. ಆಗ ರಾಮ "ನನಗೆ ಈಗಾಗಲೇ ಮದುವೆಯಾಗಿದೆ, ನಾನು ಏಕಪತ್ನಿ ವೃತಸ್ಥನಾಗಿರುವೆ, ನನ್ನ ತಮ್ಮ ಲಕ್ಷ್ಮಣ ನನಗಿಂತಲೂ ಸುಂದರವಾಗಿದ್ದಾನೆ, ನೀನು ಬೇಕಾದರೆ ಅವನಿಗೆ ಮದುವೆಯಾಗಲು ಕೇಳಬಹುದು" ಎಂದೇಳಿ ಅವಳಿಂದ ಜಾಣತನದಿಂದ ಜಾರಿಕೊಂಡನು. ನಂತರ ಆಕೆ ಲಕ್ಷ್ಮಣನನ್ನು ಮದುವೆಯಾಗುವಂತೆ ಪೀಡಿಸಿದಳು. ಆದರೆ ಲಕ್ಷ್ಮಣ ನೇರವಾಗಿ ಅವಳ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದನು. ಇದರಿಂದ ಕೋಪಗೊಂಡ ಶೂರ್ಖನಖಿ ತನ್ನ ನಿಜ ರೂಪದಲ್ಲಿ ಪ್ರತ್ಯಕ್ಷಳಾಗಿ ಸೀತೆಯನ್ನು ಕೊಲ್ಲಲು ಪ್ರಯತ್ನಿಸಿದಳು. ಆಗ ಲಕ್ಷ್ಮಣ ಕೆರಳಿ ಕೆಂಡಾಮಂಡಲವಾಗಿ ಅವಳ ಕಿವಿ ಹಾಗೂ ಮೂಗನ್ನು ಕತ್ತರಿಸಿದನು.
ತನ್ನ ರೂಪ ವಿರೂಪವಾದ ದು:ಖದಲ್ಲಿ ಶೂರ್ಪನಖಿ ತನ್ನ ಅಣ್ಣ ಲಂಕಾಧಿಪತಿ ರಾವಣನಿಗೆ ರಾಮ, ಸೀತೆ ಹಾಗೂ ಲಕ್ಷ್ಮಣರ ಬಗ್ಗೆ ಹೇಳಿದಳು. ತನಗಾದ ಅವಮಾನಕ್ಕೆ ಅವರಿಗೆ ತಕ್ಕ ಶಾಸ್ತಿ ಮಾಡಲೇಬೇಕೆಂದು ಒತ್ತಾಯಿಸಿದಳು. ಆಗ ರಾವಣ ತನ್ನ ತಂಗಿಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮಾರೀಚ ಎಂಬ ರಾಕ್ಷಸನನ್ನು ಚಿನ್ನದ ಜಿಂಕೆಯ ರೂಪದಲ್ಲಿ ರಾಮನ ಕುಟೀರಕ್ಕೆ ಕಳುಹಿಸಿದನು. ಆಗ ಸೀತೆ ಆ ಮಾಯಾ ಜಿಂಕೆಯನ್ನು ನೋಡಿ ಆಕರ್ಷಿತಳಾದನು. ಸೀತೆ ಇಷ್ಟಪಟ್ಟ ಆ ಚಿನ್ನದ ಜಿಂಕೆಯನ್ನು ಹಿಡಿದು ತರಲು ರಾಮ ಅದನ್ನು ಬೆನ್ನಟ್ಟಿ ಹೋದನು.
ಬಹಳ ಸಮಯವಾದರೂ ಅಣ್ಣ ಶ್ರೀರಾಮ ಬರದಿರುವುದನ್ನು ಕಂಡು ಲಕ್ಷ್ಮಣನು ಸಹ ಆ ಜಿಂಕೆಯ ಹುಡುಕಾಟದಲ್ಲಿ ಹೋದ ರಾಮನನ್ನು ಹುಡುಕುತ್ತಾ ಹೋದನು. ಅಷ್ಟರಲ್ಲಿ ರಾವಣ ಭಿಕ್ಷುಕನ ವೇಷದಲ್ಲಿ ಬಂದು ಕುಟಿಲತೆಯಿಂದ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋದನು. ಇದಾದ ನಂತರ ಮನೆಗೆ ಮರಳಿ ಬಂದ ಶ್ರೀರಾಮ ಲಕ್ಷ್ಮಣರು ಸೀತೆಯಿಲ್ಲದಿರುವುದನ್ನು ಕಂಡು ಗಾಬರಿಯಾದರು. ರಾಮ ದು:ಖ ತಾಳಲಾರದೆ ಕಣ್ಣೀರಾಕಿದನು. ನಂತರ ಅವರಿಗೆ ಜಟಾಯುವಿನಿಂದ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗಿರುವುದು ಗೊತ್ತಾಗುತ್ತದೆ. ಶ್ರೀರಾಮ ರಾವಣನ ಲಂಕೆಯನ್ನು ಹುಡುಕುತ್ತಾ ಮುನ್ನಡೆಯುತ್ತಾನೆ. ಅವನಿಗೆ ವಾನರ ಸೇನೆಯ ಸಹಾಯ ಹಾಗೂ ಹನುಮಂತನ ಭುಜಬಲ ಸಿಗುತ್ತದೆ. ಆಗ ರಾಮ ಸಮುದ್ರಕ್ಕೆ ಸೇತುವೆ ನಿರ್ಮಿಸಿ ಲಂಕೆಗೆ ತೆರಳಿ ರಾವಣನೊಂದಿಗೆ ಯುದ್ಧ ಮಾಡಿ ಅವನನ್ನು ಕೊಂದು ಸೀತಾ ಮಾತೆಯನ್ನು ಸೇರುತ್ತಾನೆ.
ರಾವಣನ ಅಂತ್ಯವಾಗುವಷ್ಟರಲ್ಲಿ ಶ್ರೀರಾಮನ 14 ವರ್ಷದ ವನವಾಸದ ಅವಧಿ ಮುಕ್ತಾಯವಾಗುತ್ತದೆ. ಆಗ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ಅಯೋಧ್ಯೆಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ರಾವಣನನ್ನು ಸಂಹರಿಸಿ 14 ವರ್ಷ ವನವಾಸ ಮುಗಿಸಿ ಶ್ರೀರಾಮ ಸೀತಾ ಮಾತೆಯೊಂದಿಗೆ ಅಯೋಧ್ಯೆಗೆ ಬರುತ್ತಿದ್ದಾನೆ ಎಂಬ ಸುದ್ದಿ ಕೇಳಿ ಅಯೋಧ್ಯೆಯ ಪ್ರಜೆಗಳೆಲ್ಲ ಹಬ್ಬದ ತಯಾರಿಯಲ್ಲಿ ತೊಡಗಿದರು. ಅಯೋಧ್ಯ ನಗರವನ್ನು ಮಧುವಣಗಿತ್ತಿಯಂತೆ ಶೃಂಗರಿಸಿದರು. ಶ್ರೀರಾಮ ಎಲ್ಲ ಕಷ್ಟಗಳನ್ನು ಗೆದ್ದು ವನವಾಸ ಮುಗಿಸಿ ಸೀತೆ ಹಾಗೂ ಲಕ್ಷ್ಮಣನೊಂದಿಗೆ ಕಾರ್ತಿಕ ಅಮವಾಸ್ಯೆಯ ದಿನ ಅಯೋಧ್ಯೆಗೆ ಮರಳಿ ಬಂದನು. ಅಮವಾಸ್ಯೆಯ ಕತ್ತಲು ಆವರಿಸಿತ್ತು. ತಮ್ಮ ಪ್ರಿಯ ರಾಜ ಶ್ರೀರಾಮ ಬಂದ ಖುಷಿಯಲ್ಲಿ ಪ್ರಜೆಗಳೆಲ್ಲ ಮನೆಮನೆಗಳಲ್ಲಿ ಬೀದಿ ಬೀದಿಗಳಲ್ಲಿ ತುಪ್ಪದ ದೀಪ ಹಚ್ಚಿ ಸಂಭ್ರಮಿಸಿದರು. ಶ್ರೀರಾಮನ ಆಗಮನಕ್ಕೆ ಅರಮನೆ ಬಣ್ಣಬಣ್ಣದ ದೀಪಗಳಿಂದ ಅಲಂಕೃತಗೊಂಡಿತ್ತು. ಲಕ್ಷಾಂತರ ದೀಪಗಳ ಬೆಳಕಿಗೆ ಅಮವಾಸ್ಯೆಯ ಕಗ್ಗತ್ತಲು ಮಾಯವಾಯಿತು. ಅಯೋಧ್ಯೆಯಲ್ಲಿ ಖುಷಿಯ ಸಂಭ್ರಮ ಮುಗಿಲು ಮುಟ್ಟಿತು. ಜನರೆಲ್ಲ ಪಟಾಕಿ ಸಿಡಿಸಿ ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದರು.
ಅವತ್ತು ಶ್ರೀರಾಮ ಎಲ್ಲ ಕಷ್ಟಗಳನ್ನು ಗೆದ್ದು ಮನೆಗೆ ಮರಳಿ ಬಂದಿದ್ದನು. ಅವನ ಬದುಕಲ್ಲಿನ ಎಲ್ಲ ಕಷ್ಟಗಳು ದೂರಾಗಿದ್ದವು. ಅದೇ ರೀತಿ ಎಲ್ಲರ ಬಾಳಲ್ಲಿನ ಅಜ್ಞಾನ, ಅಂಧಕಾರ, ಅಹಂಕಾರ ಮಾಯವಾಗಿ ವಿದ್ಯೆ, ಬುದ್ಧಿ, ಆಯಸ್ಸು, ಆರೋಗ್ಯ, ಅಂತಸ್ತಿನ ಬೆಳಕು ಮೂಡಲಿ ಎಂಬ ಕಾರಣಕ್ಕಾಗಿ ಅವತ್ತಿನಿಂದ ನಾವು ಪ್ರತಿ ವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಇದೀಷ್ಟು ದೀಪಾವಳಿಗೆ ಕಾರಣವಾದ ಪೌರಾಣಿಕ ಕಥೆ. ನೀವು ಸಹ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಿ. ಜೊತೆಗೆ ಈ ದೀಪಾವಳಿಗೆ ಕಾರಣವಾದ ಈ ಕಥೆಯನ್ನು ಎಲ್ಲರೊಂದಿಗೆ ತಪ್ಪದೇ ಶೇರ್ ಮಾಡಿ. ಧನ್ಯವಾದಗಳು ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು....