
ಕನಕದಾಸರು ಓರ್ವ ಕೀರ್ತನೆಕಾರರಾಗಿ, ಕವಿಯಾಗಿ, ಕರ್ನಾಟಕ ಸಂಗೀತಕಾರರಾಗಿ, ಹರಿದಾಸ ಪಂಥದ ಪ್ರಚಾರಕರಾಗಿ ಹೆಸರುವಾಸಿಯಾಗಿದ್ದಾರೆ. ಇವರು ವ್ಯಾಸರಾಯರ ಶಿಷ್ಯರು, ಪುರಂದರದಾಸರ ಸಮಕಾಲೀನರವರು.
ಕನಕದಾಸರ ಜನನ ಈಗೀನ ಹಾವೇರಿ ಜಿಲ್ಲೆಯ ಬಂಕಾಪುರ ಸಮೀಪದ ಬಾಡ ಗ್ರಾಮದಲ್ಲಾಯಿತು. ಇವರ ತಂದೆ ಬೀರಪ್ಪ, ತಾಯಿ ಬಚ್ಚಮ್ಮ. ಇವರು ಹಾಲು ಮತಕ್ಕೆ ಸೇರಿದವರು. ಅಂದರೆ ಇವರು ಜಾತಿಯಿಂದ ಕುರುಬರಾಗಿದ್ದರು. ಇವರ ಮಡದಿಯ ಹೆಸರು ಮುಕುತಿ. ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯದೈವ. ಕನಕದಾಸರ ನಿಜವಾದ ಹೆಸರು ತಿಮ್ಮಪ್ಪನಾಯಕವಾಗಿತ್ತು. ಇವರು ಬಂಕಾಪುರದ ಕೋಟೆಯ ಮುಖ್ಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಆಗ ಬಂಕಾಪುರ ವಿಜಯನಗರ ಸಾಮ್ರಾಜ್ಯದ ಒಂದು ಮುಖ್ಯ ಪಟ್ಟಣವಾಗಿತ್ತು.
ಒಂದಿನ ತಿಮ್ಮಪ್ಪನಾಯಕನಿಗೆ ಒಂದು ಕೆರೆಯ ಜೀರ್ಣೋದ್ಧಾರದ ಕೆಲಸವನ್ನು ವಹಿಸಲಾಗಿತ್ತು. ಆಗ ನೆಲ ಅಗೆಯುವಾಗ ತಿಮ್ಮಪ್ಪನಾಯಕನಿಗೆ ಭಾರೀ ಪ್ರಮಾಣದಲ್ಲಿ ಬಂಗಾರ ಸಿಕ್ಕಿತು. ಆಗ ಜನ ತಿಮ್ಮಪ್ಪನಾಯಕನಿಗೆ ಕನಕ ನಾಯಕ ಎಂದು ಕರೆಯಲು ಪ್ರಾರಂಭಿಸಿದರು. ಕನಕ ಎಂದರೆ ಬಂಗಾರ ಎಂದರ್ಥ. ಒಮ್ಮೆ ಕನಕನಾಯಕನಿಗೆ ಒಂದು ಯುದ್ಧದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಎದುರಾಯಿತು. ಆವಾಗಿನ ಕಾಲದಲ್ಲಿ ಯುದ್ಧಗಳು ಸಾಮಾನ್ಯವಾಗಿದ್ದವು. ಕೋಟೆಯ ಮುಖ್ಯ ಕಾವಲುಗಾರನಾಗಿರುವುದರಿಂದ ಶತ್ರುಗಳ ಕಣ್ಣು ಅವರ ಮೇಲೆಯೇ ನೆಟ್ಟಿತ್ತು. ಆ ಯುದ್ಧದಲ್ಲಿ ಕನಕನಾಯಕನಿಗೆ ದೊಡ್ಡ ಪೆಟ್ಟು ಬಿದ್ದರೂ ಸಹ ಆತ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದನು. ಅವನಿಗೆ ಇದು ತನ್ನ ಆರಾಧ್ಯದೈವ ಕಾಗಿನೆಲೆಯ ಆದಿಕೇಶವನ ಆಶೀರ್ವಾದದಂತೆ ತೋರಿತು. ಅವತ್ತೆ ಆತ ಕೋಟೆ ಕಾವಲಿನ ಕೆಲಸವನ್ನು ಬಿಟ್ಟು ಹರಿದಾಸ ಪಂಥ ಸೇರಿಕೊಂಡನು. ಅವತ್ತಿನಿಂದ ಕನಕನಾಯಕ ಕನಕದಾಸರಾಗಿ ಬದಲಾದನು.

ಕನಕದಾಸರು ದಾಸ ಪಂಥದ ಮುಖ್ಯರಾಗಿದ್ದ ವ್ಯಾಸರಾಯರ ಶಿಷ್ಯತ್ವವನ್ನು ಪಡೆದುಕೊಂಡರು. ಒಂದಿನ ವ್ಯಾಸರಾಯರು ತಮ್ಮ ಶಿಷ್ಯರಿಗೆ "ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಲು ಅರ್ಹರಾಗಿದ್ದೀರಿ?" ಎಂದು ಕೇಳಿದರು. ಆಗ ಕನಕದಾಸರು "ನಾನು" ಹೋದರೆ ನಾನು ಹೋಗಬಲ್ಲೆ... ಎಂದು ಉತ್ತರಿಸಿ ತಮ್ಮ ಗುರುಗಳ ಮೆಚ್ಚುಗೆಯನ್ನು ಗಳಿಸಿದರು. ಮನುಷ್ಯನಲ್ಲಿರುವ "ನಾನು" ಎಂಬ ಅಹಂನ್ನು ಬಿಟ್ಟರೆ ಯಾರು ಬೇಕಾದರೂ ಮೋಕ್ಷಕ್ಕೆ ಹೋಗಬಲ್ಲರು ಎಂಬುದು ಅವರ ಅಭಿಮತವಾಗಿತ್ತು.
ತಮ್ಮ ಗುರುಗಳಾದ ವ್ಯಾಸರಾಯರ ಸಲಹೆಯ ಮೇರೆಗೆ ಕನಕದಾಸರು ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ಹೋದರು. ಆದರೆ ಅವರು ಕೆಳ ಜಾತಿಯವರು ಎಂಬ ಕಾರಣಕ್ಕೆ ಅಲ್ಲಿದ್ದ ಬ್ರಾಹ್ಮಣರು ಅವರನ್ನು ದೇವಸ್ಥಾನದ ಒಳಗೆ ಪ್ರವೇಶಿಸದಂತೆ ತಡೆದರು. ಆಗ ಕನಕದಾಸರು ದೇವಸ್ಥಾನದ ಹಿಂದುಗಡೆ ನಿಂತು ಕೃಷ್ಣನ ಭಜನೆ ಮಾಡಲು ಪ್ರಾರಂಭಿಸಿದರು. ಆಗ ಅವರ ಭಕ್ತಿಗೆ ಮೆಚ್ಚಿ ಸ್ವತಃ ಶ್ರೀಕೃಷ್ಣ ಪರಮಾತ್ಮ ಗೋಡೆ ಒಡೆದು ಕನಕದಾಸರಿಗೆ ದರುಶನ ಕೊಟ್ಟನು. ಆಗ ಒಡೆದ ದೇವಸ್ಥಾನದ ಗೋಡೆ ಈಗ ಕನಕನ ಕಿಂಡಿ ಎಂದು ಹೆಸರುವಾಸಿಯಾಗಿದೆ. ಈಗಲೂ ಸಹ ಉಡುಪಿಯ ಶ್ರೀಕೃಷ್ಣನ ದೇವಸ್ಥಾನದಲ್ಲಿ ಎಲ್ಲರಿಗೂ ಕನಕನ ಕಿಂಡಿಯಿಂದಲೇ ದರುಶನ ಭಾಗ್ಯವಿದೆ.
ಕನಕದಾಸರು ಹರಿದಾಸ ಪರಂಪರೆಯನ್ನು ಕರುನಾಡಿನಾದ್ಯಂತ ಪಸರಿಸಿದರು. ತಮ್ಮ ಕೀರ್ತನೆಗಳಲ್ಲಿ ಜಾತಿವಾದವನ್ನು, ವರ್ಣಭೇದವನ್ನು, ಮೂಢನಂಬಿಕೆಗಳನ್ನು ಕಟುವಾಗಿ ಖಂಡಿಸಿದರು. ನಳಚರಿತ್ರೆ, ಹರಿ ಭಕ್ತಿಸಾರ, ನರಸಿಂಹಸ್ತವ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಇವು ಕನಕದಾಸರ ಹೆಸರಾಂತ ಕೃತಿಗಳಾಗಿವೆ. ಕನಕದಾಸರ ಕೊನೆಯ ದಿನಗಳ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಅವರು ತಮ್ಮ ಕೊನೆಯ ದಿನಗಳನ್ನು ತಮ್ಮ ಆರಾಧ್ಯದೈವ ಕಾಗಿನೆಲೆ ಆದಿಕೇಶವನ ಸನ್ನಿಧಿಯಲ್ಲಿ ಕಳೆದರು. ಒಂದಿನ ಆದಿಕೇಶವನ ದರ್ಶನಕ್ಕೆ ಗುಡಿಯಲ್ಲಿ ಹೋಗಿ ಕನಕದಾಸರು ಬಾಗಿಲನ್ನು ಮುಚ್ಚಿಕೊಂಡರು. ಆಮೇಲೆ ಎಷ್ಟು ಸಮಯವಾದರೂ ಅವರು ಬಾಗಿಲನ್ನು ತೆಗೆಯಲೇ ಇಲ್ಲ. ಕೊನೆಗೆ ಪೂಜಾರಿ ಬಲವಂತವಾಗಿ ಬಾಗಿಲನ್ನು ಮುರಿದು ದೇವಸ್ಥಾನದೊಳಗೆ ಪ್ರವೇಶ ಮಾಡಿದನು. ಅಲ್ಲಿ ಅವನಿಗೆ ಕನಕದಾಸರು ಸಿಗಲಿಲ್ಲ. ಬದಲಾಗಿ ಆದಿಕೇಶವನ ಪಾದದ ಬಳಿ ಕನಕದಾಸರ ಪುಟ್ಟ ಮೂರ್ತಿ ಸಿಕ್ಕಿತು. ಕನಕದಾಸರು ಆದಿಕೇಶವನಲ್ಲಿ ಲೀನರಾದರು ಎಂಬ ಪ್ರತೀತಿಯಿದೆ. ಇದೀಷ್ಟು ಕನಕದಾಸರ ಜೀವನಕಥೆ. ಇದು ನಿಮಗೆ ಇಷ್ಟವಾಗಿದ್ದರೆ ಈ ಕಥೆಯನ್ನು ಲೈಕ ಮಾಡಿ, ಶೇರ್ ಮಾಡಿ, ಕಮೆಂಟ ಮಾಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು....
