ತಾಯಿಗೆ ಭಾರವಾಗಿ
ಮಡಿಲಿಂದ ಕೆಳಗೆ ಬಿದ್ದೆ,
ತಂದೆಗೆ ಬೇಡವಾಗಿ
ಮನೆಯಿಂದ ಬೀದಿಗೆ ಬಿದ್ದೆ...
ಭ್ರೂಣವಾಗಿರುವಾಗಲೇ ಕೊಲ್ಲಲೆತ್ನಿಸಿದರು,
ಆದರೆ ಆ ಪಾಪಿ ದೇವರು ನನ್ನ ಬದುಕಿಸಿದನು.
ಹುಟ್ಟಿದ ಮೇಲೆ ಎಲ್ಲರಿಗೂ ನನ್ನ ಮೇಲೆ ತಾತ್ಸಾರ,
ಹೆಣ್ಣು ಮಗು ಹುಣ್ಣೆಂಬ ಮತ್ಸರ...
ಬೀದಿಯಲ್ಲಿ ಬಿದ್ದು ಬೆಳೆದೆ
ವಿಧಿಯಲ್ಲಿ ಗೆದ್ದು ಓದಿದೆ
ಕಾಮುಕರಿಂದ ತಪ್ಪಿಸಿಕೊಳ್ಳಲು ಪರದಾಡಿದೆ,
ಕಾಮಲೋಕದಲ್ಲಿ ಸಿಲುಕಿ ನರಳಾಡಿದೆ...
ಶಾಲೆಯಲ್ಲಿ ಗುರುವಿನ ಕಾಮದ ಕಣ್ಣು
ಆಶ್ರಮದಲ್ಲಿ ಪ್ರಭುವಿನ ಮೋಹದ ಹುಣ್ಣು
ನನ್ನ ಸೌಂದರ್ಯವೇ ಎನಗೆ ಶಾಪ
ಯಾರ ಮೇಲೆ ತೀರಿಸಿಕೊಳ್ಳಲಿ ನನ್ನ ಕೋಪ...?
ನನ್ನ ಕೂಗಿಗೆ ಬೆಲೆಯಿರಲಿಲ್ಲ
ನನ್ನ ಕೊರಗಿಗೆ ಎಲ್ಲೆಯಿರಲಿಲ್ಲ
ಕಾಮದ ಬೇಗೆಗೆ ನನ್ನ ದೇಹ ದಹಿಸಿದರೂ
ಕಾಮುಕರ ಕಾಮದಾಹ ತೀರಲಿಲ್ಲ...
ಬದುಕುವ ಆಸೆ ಬಹಳಷ್ಟಿದ್ದರೂ
ಈ ಕಾಮುಕರು ನನ್ನನ್ನು ಬದುಕಲು ಬಿಡಲಿಲ್ಲ,
ನನಗಾದ ದ್ರೋಹಕ್ಕೆ ಪರಿಹಾರವಿನ್ನೂ ಸಿಕ್ಕಿಲ್ಲ
ಸಿಗುವ ಭರವಸೆಯೂ ನನಗಿಲ್ಲ
ನಿಮ್ಮ ತೋರಿಕೆಯ ಕಂಬನಿ, ಕ್ಯಾಂಡಲ ಬೆಳಕು ನನಗೆ ಬೇಕಿಲ್ಲ...
ನನ್ನನ್ನು ಬರೀ ಕಾಮದ ಕಣ್ಣಿನಿಂದ ಕಾಣ್ತಿರಲ್ಲ,
ನನ್ನನ್ನು ಪ್ರೇಮದ ಕಣ್ಣಿಂದಲೂ ಕಾಣಬಹುದಲ್ಲ?
ನನ್ನಾತ್ಮಕ್ಕೆ ಶಾಂತಿ ಸಿಗುತ್ತಿಲ್ಲವಲ್ಲ
ನಾ ಅಳಿದರೂ ನನ್ನ ಸೋದರಿಯರಿಗೂ ರಕ್ಷಣೆ ಸಿಗುತ್ತಿಲ್ಲವಲ್ಲ...
ನನ್ನನ್ನು, ನನ್ನಾಸೆಗಳನ್ನು ಕಾಮದಾಹದಲ್ಲಿ ನುಂಗಿ ಬಿಟ್ಟಿರಲ್ಲ,
ಆ ಕುರುಡು ದೇವ ನನ್ನನ್ನು ನಾನು ಕಣ್ಣು ಬಿಡುವ
ಮುನ್ನವೇ ಸಾಯಿಸಿದ್ದರೇ ಎಷ್ಟೋ ಚೆನ್ನಾಗಿತ್ತಲ್ಲ?
ನನ್ನ ಕಣ್ಣೀರು ಯಾರಿಗೂ ಕಾಣ್ತಿಲ್ಲವಲ್ಲ?
ನನ್ನ ಕೀರುಚಾಟದ ಕೂಗು ಯಾಕೆ ಯಾರಿಗೂ ಕೇಳಿಸುತ್ತಿಲ್ಲ....???