ತುಳಸಿ ವಿವಾಹ ಕಥೆ - Tulasi Vivah Story in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ತುಳಸಿ ವಿವಾಹ ಕಥೆ - Tulasi Vivah Story in Kannada

ತುಳಸಿ ವಿವಾಹ ಕಥೆ - Tulasi Vivah Story in Kannada

                       ತುಳಸಿ ವಿವಾಹವೂ ವಿಷ್ಣು ಹಾಗೂ ತುಳಸಿಯ ಸಾಂಕೇತಿಕ ವಿವಾಹವಾಗಿದೆ. ತುಳಸಿ ವಿವಾಹವನ್ನು ಪ್ರತಿವರ್ಷ ಪ್ರಬೋಧಿನಿ ಏಕಾದಶಿ ಹಾಗೂ ಕಾರ್ತಿಕ ಹುಣ್ಣಿಮೆ ನಡುವೆ ಯಾವಾಗ ಬೇಕಾದರೂ ಆಚರಿಸಲಾಗುತ್ತದೆ. ತುಳಸಿ ವಿವಾಹ ಮಾನ್ಸೂನ್ ಸೀಜನಿನ ಅಂತ್ಯವನ್ನು ಹಾಗೂ ಮದುವೆ ಸೀಜನಿನ ಆರಂಭವನ್ನು ಸೂಚಿಸುತ್ತದೆ. ಈ ತುಳಸಿ ವಿವಾಹದ ಹಿಂದೆಯೂ ಒಂದು ರೋಚಕ ಪೌರಾಣಿಕ ಕಥೆಯಿದೆ. ಅದು ಇಂತಿದೆ. 

                 ತುಳಸಿಯನ್ನು ದೇವತೆಯೆಂದು ಪೂಜಿಸಲಾಗುತ್ತದೆ. ಅವಳನ್ನು ಮಹಾವಿಷ್ಣುವಿನ ಸಾಂಕೇತಿಕ ಮಡದಿಯೆಂದು ಒಪ್ಪಿಕೊಳ್ಳಲಾಗಿದೆ. ಅದಕ್ಕಾಗಿ ತುಳಸಿಗೆ ವಿಷ್ಣು ಪ್ರಿಯ ಎಂತಲೂ ಕರೆಯುತ್ತಾರೆ. ತುಳಸಿ ವಿವಾಹದ ಹಿನ್ನೆಲೆ ಹಾಗೂ ಕಥಾವಸ್ತುವಿನ ಬಗ್ಗೆ ಪದ್ಮ ಪುರಾಣದಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. 

              ಪುರಾಣ ಕಾಲದಲ್ಲಿ ಮಥುರಾ ಪಟ್ಟಣವನ್ನು ದೈತ್ಯ ರಾಜ ಕಲನೇಮಿ ಆಳುತ್ತಿದ್ದನು. ಅವನ ಮಗಳು ವೃಂದಾ (ಬೃಂದಾ) ಮಹಾನ ದೈವಭಕ್ತೆಯಾಗಿದ್ದಳು. ಅವಳು ಅಸುರರ ರಾಜ ಜಲಂಧರನನ್ನು ಮದುವೆಯಾದಳು. ವೃಂದಾ ಧರ್ಮಿಷ್ಟಳಾಗಿದ್ದಳು ಹಾಗೂ ಮಹಾವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಅವಳ ಪಾವಿತ್ರ್ಯತೆ ಹಾಗೂ ದೈವಭಕ್ತಿಯ ಸಾತ್ವಿಕ ಶಕ್ತಿಯಿಂದ ಅವಳ ಗಂಡ ಜಲಂಧರ ಬಹಳಷ್ಟು ಶಕ್ತಿಯಾಗಿದ್ದನು. ಅವನ ಶಕ್ತಿ ವೃಂದಾ ಪತಿನಿಷ್ಟೆಯ ಸಂಕಲ್ಪದಲ್ಲಿತ್ತು. ಅವಳ ಸಂಕಲ್ಪ ಪವಿತ್ರವಾಗಿತ್ತು, ಅಜೇಯವಾಗಿತ್ತು. ಹೀಗಾಗಿ ಜಲಂಧರನು ಸಹ ಅಜೇಯನಾಗಿದ್ದನು. 

ತುಳಸಿ ವಿವಾಹ ಕಥೆ - Tulasi Vivah Story in Kannada

            ಜಲಂಧರನು ದೇವಲೋಕವನ್ನು ಗೆಲ್ಲುವ ಉದ್ದೇಶದಿಂದ ದೇವತೆಗಳ ಮೇಲೆ ಯುದ್ಧ ಸಾರಿದನು. ಅವನ ಮಡದಿ ವೃಂದಾ ಪತಿನಿಷ್ಟೆಯ ಸಂಕಲ್ಪವೊತ್ತು ಪೂಜೆಗೆ ಕುಳಿತಳು. ದೇವತೆಗಳಿಗೂ ಜಲಂಧರನನ್ನು ಎದುರಿಸುವುದು ಅಸಾಧ್ಯವಾಗಿತ್ತು. ವೃಂದಾಳ ಪತಿನಿಷ್ಟೆ ಹೆಚ್ಚಾದಷ್ಟು ಜಲಂಧರನ ಶಕ್ತಿ ಹೆಚ್ಚಾಗುತ್ತಿತ್ತು. ಆತ ಯುದ್ಧದಿಂದ ವಿಜಯಶಾಲಿಯಾಗಿ ಮರಳಿ ಬರುವ ತನಕ ಸಂಕಲ್ಪ ಸಾಧಿಸುವುದಾಗಿ ಆಕೆ ಗಂಡನಿಗೆ ಮಾತು ಕೊಟ್ಟಿದ್ದಳು‌. ಹೀಗಾಗಿ ಜಲಂಧರ ದೇವತೆಗಳ ಮೇಲೆ ವಿಜಯ ಸಾಧಿಸುತ್ತಾ ಮುನ್ನಡೆದನು. 

              ದೇವತೆಗಳೆಲ್ಲ ಜಲಂಧರನಿಂದ ಹೇಗಾದರೂ ಮಾಡಿ ತಮ್ಮನ್ನು ಕಾಪಾಡುವಂತೆ ಮಹಾವಿಷ್ಣುವಿನ ಬಳಿ ಕೇಳಿಕೊಂಡರು. ಆಗ ಮಹಾವಿಷ್ಣು ಬೇರೆ ದಾರಿಯಿಲ್ಲದೆ ತನ್ನ ಭಕ್ತೆಗೆ ಘೋರ ಮೋಸ ಮಾಡಿದನು. ತಾನೇ ಜಲಂಧರನ ಕಪಟ ವೇಷ ಧರಿಸಿ ವೃಂದಾಳ‌ ಮುಂದೆ ಪ್ರತ್ಯಕ್ಷವಾದನು. ಮಾರುವೇಷದಲ್ಲಿ ಬಂದ ವಿಷ್ಣುವನ್ನು ಗುರ್ತಿಸುವಲ್ಲಿ ಆಕೆ ವಿಫಲಳಾದಳು. ಆಕೆ ತನ್ನ ಗಂಡ ಯುದ್ಧದಿಂದ ಮರಳಿ ಬಂದನೆಂದು ತಿಳಿದು ಮಾರುವೇಷದಲ್ಲಿದ್ದ ವಿಷ್ಣುವಿನ ಪಾದವನ್ನು ಸ್ಪರ್ಶಿಸಿದಳು. ಅವನನ್ನು ಪ್ರೀತಿಯಿಂದ ನೋಡಿದಳು. ಇದರಿಂದ ಅವಳ ಪತಿನಿಷ್ಟೆಯ ಸಂಕಲ್ಪ ಅಪವಿತ್ರವಾಯಿತು. ಯುದ್ಧದಲ್ಲಿ ಅವಳ ಗಂಡನ ಶಕ್ತಿ ಕಡಿಮೆಯಾಯಿತು. ಇದೇ ಅವಕಾಶವನ್ನು ಬಳಸಿಕೊಂಡು ಶಿವ ಜಲಂಧರನನ್ನು ತ್ರಿಶೂಲದಿಂದ ಚುಚ್ಚಿ ಸಾಯಿಸಿದನು. ಅವನ ತಲೆಯನ್ನು ಕತ್ತರಿಸಿ ಭೂಮಿಯೆಡೆಗೆ ಬೀಸಾಕಿದನು. ಅವನ ತಲೆ ವೃಂದಾಳ ಪಾದದ ಬಳಿ ಬಂದು ಬಿದ್ದಾಗ ಅವಳಿಗೆ ತನ್ನ ಸಂಕಲ್ಪ ಅಪವಿತ್ರವಾಗಿದ್ದು ಅರಿವಾಯಿತು. ತಾನು ಮೋಸ ಹೋಗಿರುವುದು ಗೊತ್ತಾಯಿತು. 

                ತಾನು ಪೂಜಿಸಿದ ದೇವರೆ ತನಗೆ ಮೋಸ ಮಾಡಿದನೆಂದು ವೃಂದಾ ಕೋಪಗೊಂಡಳು‌‌. ಅದೇ ಕೋಪದಲ್ಲಿ ಆಕೆ ಮಹಾವಿಷ್ಣುವಿಗೆ ಕಲ್ಲಾಗುವಂತೆ ಶಾಪ ನೀಡಿದಳು. ಆಗ ವಿಷ್ಣು ಸಾಲಿಗ್ರಾಮವೆಂಬ ಕಲ್ಲಾದನು. ನಂತರ ಆಕೆ ಅವನಿಗೆ "ನೀನು ನಿನ್ನ ಪತ್ನಿಯ ವಿರಹ ವೇದನೆಯನ್ನು ಅನುಭವಿಸಿವಂತಾಗಲಿ..." ಎಂದು ಶಪಿಸಿದಳು. ನಂತರ ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ತನ್ನನ್ನು ತಾನು ಅಗ್ನಿಗೆ ಆಹುತಿ ಮಾಡಿಕೊಂಡು ಸಮುದ್ರದಲ್ಲಿ ಮುಳುಗಿದಳು. ಆಗ ಅವಳ‌ ಶಾಪದಿಂದ ಮಹಾವಿಷ್ಣುವನ್ನು ಕಾಪಾಡಲು ದೇವತೆಗಳೆಲ್ಲ ಸೇರಿ ಅವಳ ಆತ್ಮವನ್ನು ಒಂದು ಸಸ್ಯಕ್ಕೆ ವರ್ಗಾಯಿಸಿದರು. ಅದಕ್ಕೆ ತುಳಸಿ ಎಂದು ಹೆಸರಿಟ್ಟರು. ನಂತರ ಪ್ರಬೋಧಿನಿ ಏಕಾದಶಿಯಂದು ಸಾಲಿಗ್ರಾಮದ ರೂಪದಲ್ಲಿರುವ ವಿಷ್ಣುವಿಗೂ ಹಾಗೂ ತುಳಸಿಗೂ ಸಾಂಕೇತಿಕ ವಿವಾಹ ಮಾಡಿದರು.‌ ಇದರಿಂದ ವಿಷ್ಣುವಿಗೆ ಸಿಕ್ಕ ಶಾಪದ‌ ಪ್ರಮಾಣ ಸ್ವಲ್ಪ ಕಡಿಮೆಯಾಯಿತು. ಆದರೂ ಸಹ ವಿಷ್ಣು ರಾಮನ ಅವತಾರದಲ್ಲಿ ತನ್ನ ಪತ್ನಿ ಸೀತೆಯಿಂದ ಹಾಗೂ ಕೃಷ್ಣನ ಅವತಾರದಲ್ಲಿ ತನ್ನ ಪ್ರೇಯಸಿ ರಾಧೆಯಿಂದ ವಿರಹ ವೇದನೆಯನ್ನು ಅನುಭವಿಸಿದನು. 

ತುಳಸಿ ವಿವಾಹ ಕಥೆ - Tulasi Vivah Story in Kannada

                    ವಿಷ್ಣು ಹಾಗೂ ತುಳಸಿಯ ವಿವಾಹದ ಸವಿ ನೆನಪಿಗಾಗಿ ಪ್ರತಿ ವರ್ಷ ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಇಲ್ಲಿಂದ ಹಿಂದೂ ವಿವಾಹಗಳು ಆರಂಭವಾಗುತ್ತವೆ. ಇದೀಷ್ಟು ತುಳಸಿ ವಿವಾಹದ ಕಥೆ. ಇದನ್ನು ತಪ್ಪದೇ ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ. ಧನ್ಯವಾದಗಳು....

ತುಳಸಿ ವಿವಾಹ ಕಥೆ - Tulasi Vivah Story in Kannada
Blogger ನಿಂದ ಸಾಮರ್ಥ್ಯಹೊಂದಿದೆ.