ಶಿವನ ಮಡದಿ ಸತಿಯ ತಾಮಸ ಕಳೆಯಾದ ಮಾಯೆ ಭೂಮಿಗೆ ಬಂದು ಶಿವನ ಸಾತ್ವಿಕ ಕಳೆಯಾದ ಅಲ್ಲಮನನ್ನು ತನ್ನ ಮೋಹ ಮಾಯೆಯಲ್ಲಿ ಬಂಧಿಸಲು ವಿಫಲಳಾದಳು. ಆಗ ಸತಿ ಶಿವನ ಸಲಹೆಯ ಮೇರೆಗೆ ಮೋಕ್ಷ ಜ್ಞಾನವನ್ನು ಪಡೆಯಲು ತನ್ನ ಸಾತ್ವಿಕ ಕಳೆಯನ್ನು ಭೂಮಿಗೆ ಕಳುಹಿಸಿದಳು. ಆ ಸಾತ್ವಿಕ ಕಳೆಯಿಂದಲೇ ಉಡುತಡಿಯಲ್ಲಿ ನಿರ್ಮಲ ಶೆಟ್ಟಿ ಹಾಗೂ ಸುಮತಿಯರ ಮಗಳಾಗಿ ಅಕ್ಕ ಮಹಾದೇವಿ ಜನಿಸಿದಳು. ಬಾಲ್ಯದಿಂದಲೇ ಮಹಾದೇವಿ ಶಿವಕಳೆಯಿಂದ ಹಾಗೂ ರೂಪ ಲಾವಣ್ಯದಿಂದ ಕಂಗೊಳಿಸುತ್ತಿದ್ದಳು. ತನ್ನ ಆರಾಧ್ಯದೈವ ಶ್ರೀಶೈಲದ ಮಲ್ಲಿಕಾರ್ಜುನನನ್ನು ಪ್ರತಿಕ್ಷಣ ಆರಾಧಿಸುತ್ತಿದ್ದಳು. ಶಿವನನ್ನೇ ತನ್ನ ಗಂಡನೆಂದು ನಂಬಿದ್ದಳು.

ಮಹಾದೇವಿಯ ಪವಿತ್ರ ಸೌಂದರ್ಯದಿಂದ ಆಕರ್ಷಿತನಾಗಿ ಉಡುತಡಿ ಪಟ್ಟಣದ ಜೈನ ರಾಜ ಕೌಶಿಕ ಅವಳನ್ನು ಮದುವೆಯಾಗಲು ಬಯಸಿದನು. ಅದಕ್ಕಾಗಿ ಸಂಬಂಧ ಬೆಳೆಸಲು ಹೆಗ್ಗಡತಿಯರನ್ನು ಕಳುಹಿಸಿದನು. ಅವನಿಗೆ ತಮ್ಮ ಮಗಳನ್ನು ಕೊಡುವುದು ನಿರ್ಮಲ ಶೆಟ್ಟಿ ಹಾಗೂ ಸುಮತಿಯರಿಗೆ ಇಷ್ಟವಿರಲಿಲ್ಲ. ಆದರೆ ಹೆಗ್ಗಡತಿಯರು ರಾಜನ ಆಸೆಯನ್ನು ಈಡೇರಿಸದಿದ್ದರೆ ಅವನ ವಿರೋಧದಿಂದ ನಿಮಗೆ ಅಪಾಯ ಉಂಟಾಗುವುದು ಎಂದು ಹೆದರಿಸಿದರು. ಆಗ ನಿರ್ಮಲ ಶೆಟ್ಟಿ ಹಾಗೂ ಸುಮತಿಯರು ಮದುವೆಯ ನಿರ್ಧಾರವನ್ನು ತಮ್ಮ ಮಗಳು ಮಹಾದೇವಿಯ ಇಚ್ಛೆಗೆ ಬಿಟ್ಟರು. ಮಹಾದೇವಿಗೆ ಕೌಶಿಕನ ದುರಾಸೆ ಅರ್ಥವಾಗಿತ್ತು. ಅದಕ್ಕಾಗಿ ಆಕೆ ಮೂರು ಷರತ್ತಿನ ಅನುಸಾರವಾಗಿ ಮದುವೆಯಾಗಲು ಒಪ್ಪಿದಳು. ದೈಹಿಕ ಸಂಬಂಧ ಬೆಳೆಸದಿರುವುದು, ಸದಾ ಶಿವ ಪೂಜೆಯನ್ನು ಮಾಡುವ ಸ್ವಾತಂತ್ರ್ಯ ಹಾಗೂ ಶಿವ ಭಕ್ತರ, ಜ್ಞಾನಿಗಳ ಜೊತೆಗೆ ಮಾತಾಡುವ ಸ್ವಾತಂತ್ರ್ಯ, ಇವೇ ಆ ಮೂರು ಷರತ್ತುಗಳಾಗಿದ್ದವು. ಆದರೆ ಕೌಶಿಕ ರಾಜ ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೇಗಾದರೂ ಮದುವೆಯಾದರೆ ಸಾಕೆಂದು ಆತುರದಲ್ಲಿ ಅವಳನ್ನು ಮದುವೆಯಾಗಿ ಅವಳನ್ನು ಅರಮನೆಗೆ ಕರೆದುಕೊಂಡು ಹೋದನು.

ಅರಮನೆಗೆ ಹೋದ ನಂತರವೂ ಮಹಾದೇವಿ ಸದಾಕಾಲ ಶಿವನ ಪೂಜೆಯಲ್ಲಿ ಕಾಲ ಕಳೆಯತೊಡಗಿದಳು. ಆದರೆ ಕೌಶಿಕನಿಗೆ ಇದು ಸರಿ ಬರಲಿಲ್ಲ. ಆತ ಮಹಾದೇವಿಗೆ ಪೂಜೆ ನಿಲ್ಲಿಸಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಒತ್ತಾಯಿಸಿದನು. ಈ ರೀತಿ ಮಾಡಿ ಆತ ಮಹಾದೇವಿಯ ಷರತ್ತುಗಳನ್ನು ಮುರಿದನು. ಹೀಗಾಗಿ ಆಕೆ ಅವನನ್ನು ಪರಿ ತ್ಯಜಿಸಿದಳು. ತನ್ನ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನನನ್ನು ಮಾನಸಿಕವಾಗಿ ಮದುವೆಯಾದಳು. ಆಭರಣಗಳ ಸಮೇತ ಉಟ್ಟ ಬಟ್ಟೆಯನ್ನು ಸಹ ಅರಮನೆಯಲ್ಲಿಯೇ ಬೀಸಾಕಿ ನಗ್ನಳಾಗಿ ಮಹಾದೇವಿ ಶಿವನ ಹುಡುಕಾಟದಲ್ಲಿ ಹೊರ ನಡೆದಳು. ಅವಳಿಗೆ ಭೂತ ಹಿಡಿದುಕೊಂಡಿದೆ ಎಂದು ಕೌಶಿಕ ರಾಜ ಅವಳನ್ನು ಮರೆತು ಬಿಟ್ಟನು.

ಮಹಾದೇವಿ ತನ್ನ ತನು ಮನಗಳನ್ನೆಲ್ಲ ಶ್ರೀಶೈಲದ ಮಲ್ಲಿಕಾರ್ಜುನನಿಗೆ ಅರ್ಪಿಸಿದಳು. ಅವಳು ತನ್ನ ಬಟ್ಟೆಗಳನ್ನು ಸಹ ತ್ಯಾಗ ಮಾಡಿದಳು. ಆದರೆ ಶಿವನ ಕೃಪೆಯಿಂದಾಗಿ ಅವಳ ದೇಹವೆಲ್ಲ ರೋಮಗಳಿಂದ ಮುಚ್ಚಲ್ಪಟ್ಟಿತು. ರೋಮಗಳೇ ಆಕೆಯ ಬಟ್ಟೆಯಾದವು. ಶಿವನ ಹುಡುಕಾಟದಲ್ಲಿ ಆಕೆ ಮಾನವ ಸಂಬಂಧಗಳನ್ನೆಲ್ಲ ಕಡಿದುಕೊಂಡು ಕಾಡು ಸೇರಿದಳು. ಕಾಡು, ನದಿ, ಬೆಟ್ಟ, ಕೊಳ್ಳ, ಜಲಪಾತ, ಪ್ರಾಣಿ, ಪಕ್ಷಿಗಳ ಜೊತೆಗೆ ಗೆಳೆತನ ಮಾಡಿದಳು. ಶ್ರೀಶೈಲದ ಹಾದಿ ಹಿಡಿದು ಶಿವನನ್ನು ಹುಡುಕುತ್ತಾ ಹೊರಟಳು.

ದಾರಿ ಮಧ್ಯೆಯಲ್ಲಿ ಮಹಾದೇವಿ ಕಲ್ಯಾಣಕ್ಕೆ ತಲುಪಿದಳು. ಅನುಭವ ಮಂಟಪಕ್ಕೆ ಭೇಟಿ ನೀಡಿದಳು. ಆಗ ಅಲ್ಲಮಪ್ರಭು ಅವಳನ್ನು ಪರೀಕ್ಷಿಸಿದನು. ಅಲ್ಲಮಪ್ರಭು ಅವಳಿಗೆ "ನೀನು ಈ ರೀತಿ ನಗ್ನಳಾಗಿ ಬಂದರೇ ನಮ್ಮ ಶಿವಶರಣರು ನಿನ್ನೆಡೆಗೆ ಆಕರ್ಷಿತರಾಗುವುದಿಲ್ಲವೇ?" ಎಂದು ಕೇಳಿದನು. ಆಗ ಮಹಾದೇವಿ ಶಾಂತಚಿತ್ತದಿಂದ "ನಾನು ನನ್ನ ತನು ಮನವನ್ನು ಶಿವನಿಗೆ ಅರ್ಪಿಸಿರುವಾಗ ಶರಣರು ನನ್ನೆಡೆಗೆ ಆಕರ್ಷಿತರಾಗುವುದೇಕೆ? ಅದು ಅವರ ತಪ್ಪೇ ಹೊರತು ನನ್ನದಲ್ಲ..." ಎಂದುತ್ತರಿಸಿ ಮಹಾದೇವಿ ಅಲ್ಲಮಪ್ರಭುವಿನ ಪರೀಕ್ಷೆಯಲ್ಲಿ ಗೆದ್ದಳು. ಮಹಾದೇವಿಯ ಮನಸ್ಸು ನಿರ್ಮಲವಾಗಿತ್ತು. ಅಲ್ಲದೇ ಅವಳು ಜ್ಞಾನದಲ್ಲಿ ಶಿವಶರಣರಿಗಿಂತ ದೊಡ್ಡವಳಾಗಿದ್ದಳು. ಹೀಗಾಗಿ ಅಲ್ಲಮಪ್ರಭು, ಬಸವಣ್ಣ ಸೇರಿ ಎಲ್ಲ ಶಿವ ಶರಣರು ಮಹಾದೇವಿಗೆ ಅಕ್ಕ ಮಹಾದೇವಿ ಎಂದು ಕರೆಯಲು ಪ್ರಾರಂಭಿಸಿದರು. ಅಕ್ಕ ಮಹಾದೇವಿ ಸ್ವಲ್ಪ ಸಮಯದ ತನಕ ಅನುಭವ ಮಂಟಪದಲ್ಲಿದ್ದುಕೊಂಡು ಮತ್ತೆ ಶ್ರೀಶೈಲದ ದಾರಿ ಹಿಡಿದಳು.

ಅಕ್ಕ ಮಹಾದೇವಿ ಶಿವನ ಮೇಲೆ ಕವನಗಳನ್ನು ಹಾಡುತ್ತಾ, ವಚನಗಳ ಮೂಲಕ ಶಿವಲೀಲೆಯನ್ನು ಸಾರುತ್ತಾ ಶ್ರೀಶೈಲವನ್ನು ತಲುಪಿದಳು. ಅಕ್ಕ ಮಹಾದೇವಿ ಕನ್ನಡದ ಮೊದಲ ಕವಯತ್ರಿ ಹಾಗೂ ವಚನಗಾರ್ತಿಯಾಗಿರುವಳು. ಮಂತ್ರಗೋಪ್ಯ ಹಾಗೂ ಯೋಗಾಂಗ ತ್ರಿವಿಧಿ ಅಕ್ಕ ಮಹಾದೇವಿಯ ಪುಸ್ತಕಗಳಾಗಿವೆ. ಅಕ್ಕ ಮಹಾದೇವಿ ಶ್ರೀಶೈಲದ ಕದಳಿ ವನದಲ್ಲಿ ಶಿವನ ಆರಾಧನೆಯಲ್ಲಿ ಹಲವಾರು ವರ್ಷಗಳನ್ನು ಕಳೆದಳು. ಕೊನೆಗೆ ತನ್ನ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಲೀನನಾದಳು. ಇದೀಷ್ಟು ಅಕ್ಕ ಮಹಾದೇವಿಯ ಜೀವನ ಕಥೆ. ಈ ಕಥೆಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ....