
ಒಂದಿನ ಯುವರಾಜ ಬೇಟೆಯಾಡುತ್ತಾ ಒಂದು ನದಿಯ ತೀರವನ್ನು ತಲುಪಿದನು. ನದಿಯಲ್ಲಿ ಕೈಕಾಲು ಮುಖ ತೊಳೆದುಕೊಂಡು ಮರಳಿ ಬರುವಾಗ ಆತ ನದಿ ದಡದಲ್ಲಿ ಧ್ಯಾನಮಗ್ನಳಾಗಿ ಕುಳಿತಿದ್ದ ಓರ್ವ ಸುಂದರ ಯುವತಿಯನ್ನು ನೋಡಿದನು. ಆಕೆಯ ಸುತ್ತಮುತ್ತ ಸೈನಿಕರು ಕಾವಲಿಗೆ ನಿಂತಿದ್ದರು. ಅದನ್ನು ನೋಡಿ ಯುವರಾಜನಿಗೆ ಅವಳು ಯಾವುದೋ ರಾಜವಂಶದ ಕನ್ಯೆಯಾಗಿದ್ದಾಳೆ ಎಂಬುದು ಖಾತ್ರಿಯಾಯಿತು. ಆತ ಮದುವೆಯಾಗುವುದಕ್ಕಾಗಿ ಒಬ್ಬಳು ಸುಂದರ, ಸುಗುಣ, ಸುಶೀಲ, ದೈವಭಕ್ತೆಯಾದ ಕನ್ಯೆಯ ಹುಡುಕಾಟದಲ್ಲಿದ್ದನು. ಈಗ ಈ ರಾಜಕನ್ಯೆಯನ್ನು ನೋಡಿ ಮನಸೋತನು. ಮದುವೆಯಾದರೆ ಅವಳನ್ನೇ ಅಂತಾ ಅವಳನ್ನು ಹಿಂಬಾಲಿಸಿದನು.
ಧ್ಯಾನ ಪೂಜೆ ಮುಗಿದ ನಂತರ ಆ ರಾಜಕನ್ಯೆ ತನ್ನ ಸಖಿಯರೊಂದಿಗೆ ವನದಲ್ಲಿ ಹಣ್ಣು ಹಂಪಲುಗಳನ್ನು ಹುಡುಕುತ್ತಾ ಹೊರಟಳು. ಯುವರಾಜ ಅವಳನ್ನು ಗುಟ್ಟಾಗಿ ಹಿಂಬಾಲಿಸಿದನು. ಅವಳ ಕೊಲ್ಲುವ ಕಣ್ಣೋಟ, ಕಾಡುವ ಮೈಮಾಟ, ಸುಂದರ ಕೇಶರಾಶಿ, ಮೈಮರೆಸುವ ಮುಗುಳ್ನಗೆ, ಕಾಂತಿಯುತ ಮುಖ, ಅರೆಬರೆ ಮುಚ್ಚಿದೆದೆ ನೋಡಿ ಆಕರ್ಷಿತನಾಗಿ ಯುವರಾಜ ಅವಳನ್ನು ಮದುವೆಯಾಗುವಂತೆ ಕೇಳಿಕೊಂಡನು. ಆದರೆ ಆಕೆ ಅವನ ಮದುಗೆ ಪ್ರಸ್ತಾಪವನ್ನು ಮುಖದ ಮೇಲೆ ತಿರಸ್ಕರಿಸಿ ಅರಮನೆಗೆ ಹೋದಳು. ಅವಳು ಸಹ ಮದುವೆಯಾಗುವುದಕ್ಕಾಗಿ ಒಳ್ಳೆ ಹುಡುಗನ ಹುಡುಕಾಟದಲ್ಲಿದ್ದಳು. ವೇದ ಶಾಸ್ತ್ರ ಪುರಾಣಗಳನ್ನು ಓದಿಕೊಂಡಿದ್ದಳು. ಅವಳಿಗೆ ಮನಸ್ಸಿನಿಂದ ಸುಂದರವಾಗಿರುವ ಹುಡುಗ ಬೇಕಿದ್ದನು. ಹೀಗಾಗಿ ಆಕೆ ಅವಳ ಸೌಂದರ್ಯ ನೋಡಿ ಬರುವ ರಾಜರನ್ನು ಎಡಗಾಲಿನಿಂದ ಒದ್ದು ಕಳುಹಿಸುತ್ತಿದ್ದಳು. ಆದರೆ ಈ ಯುವರಾಜ ದಿನಾ ಅವಳ ಹಿಂದೆ ಬಿದ್ದು ಅವನನ್ನು ಮದುವೆಯಾಗುವಂತೆ ಪದೇಪದೇ ಬೇಡಿಕೊಂಡನು. ಅದಕ್ಕಾಕೆ ನಾಳೆ ಬೆಳಿಗ್ಗೆ ಅರಮನೆಗೆ ಬಂದು ಮಾತಾಡುವಂತೆ ಹೇಳಿ ಹೋದಳು.

ಯುವರಾಜ ನಾಳೆ ಆ ಸುಂದರ ರಾಜಕನ್ಯೆಯನ್ನು ಭೇಟಿಯಾಗುವ ಆಸೆಯಲ್ಲಿ ರಾತ್ರಿಯೆಲ್ಲ ನಿದ್ದೆ ಮಾಡದೆ ಒದ್ದಾಡಿದನು. ಅವಳನ್ನು ಕಲ್ಪಿಸಿಕೊಂಡು ಸಾಕಷ್ಟು ಕನಸು ಕಂಡನು. ಮರುದಿನ ಬೇಗನೆದ್ದು ಸ್ನಾನ ಮಾಡಿ ಆ ರಾಜಕನ್ಯೆಯನ್ನು ಭೇಟಿಯಾಗಲು ಅವಳ ಖಾಸಗಿ ಅರಮನೆಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿದ್ದಂತೆಯೇ ಓರ್ವ ಸಖಿ ಅವನನ್ನು ಆದರದಿಂದ ಬರಮಾಡಿಕೊಂಡು ಉಚಿತವಾಗಿ ಸತ್ಕರಿಸಿದಳು. ಆದರೆ ಯುವರಾಜನ ಮನಸ್ಸು ಆ ರಾಜಕನ್ಯೆಯನ್ನು ನೋಡಲು ತವಕಿಸುತ್ತಿತ್ತು. ತಕ್ಷಣವೇ ಆತ "ಯುವರಾಣಿ ಎಲ್ಲಿ?" ಅಂತಾ ಕೇಳಿದನು. ಆಗ ಸಖಿ ಅವನನ್ನು ಅವಳ ಖಾಸಗಿ ಕೋಣೆಗೆ ಕರೆದುಕೊಂಡು ಹೋದಳು. ಯುವರಾಣಿ ಮಂಚದ ಮೇಲೆ ಮಲಗಿದ್ದಾಳೆ ಮಾತಾಡಿಸಿ ಅಂತೇಳಿ ಸಖಿ ಬಾಗಿಲಾಕಿಕೊಂಡು ಹೊರ ಹೋದಳು.

ಯುವರಾಜ ಮಲಗಿದ್ದ ಯುವರಾಣಿಯನ್ನು ಮಾತಾಡಿಸಿದನು. ಆಕೆ ಮುಖದ ಮೇಲಿನ ಬಟ್ಟೆಯನ್ನು ತೆಗೆದಾಗ ಅವಳನ್ನು ನೋಡಿ ಬೆಚ್ಚಿ ಬಿದ್ದನು. ಏಕೆಂದರೆ ಸುಂದರ ಯುವರಾಣಿಯ ಮುಖ ಪೂರ್ತಿಯಾಗಿ ಕಪ್ಪಾಗಿತ್ತು. ಆಗ ಯುವರಾಣಿ "ಯಾಕೆ ಯುವರಾಜ ನನ್ನ ಮುಖ ಇಷ್ಡವಾಗಲಿಲ್ಲವೇ? ಈಗ ನನ್ನನ್ನು ಮದುವೆಯಾಗುವೆಯಾ?" ಎಂದು ಕೇಳಿದಳು. ಆಗಾತ "ಯುವರಾಣಿ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ನಿನ್ನ ಮುಖಕ್ಕೆ ಏನಾಯಿತು?" ಎಂದು ಕೇಳಿದನು. ಆಗ ಯುವರಾಣಿ "ಏನೋ ಕಾಯಿಲೆ ಬಂದಿದೆ, ಇದು ವಾಸಿಯಾಗಲ್ಲ ಅಂತಾ ವೈದ್ಯರು ಹೇಳಿ ಹೋಗಿದ್ದಾರೆ. ಈ ಮುಖ ಹೊತ್ತುಕೊಂಡು ಅವಮಾನದಿಂದ ಬದುಕುವುದಕ್ಕಿಂತ ಸಾಯುವುದೇ ಲೇಸು" ಎಂದು ಬೇಸರದಿಂದ ನುಡಿದಳು. ಆಗ ಯುವರಾಜ ಅವಳ ಮುಂದೆ ಮಂಡಿಯೂರಿ ಕುಳಿತುಕೊಂಡು ಅವಳ ಕೈಹಿಡಿದು "ಯುವರಾಣಿ ನಿಜವಾದ ಸೌಂದರ್ಯ ಮನಸ್ಸಲ್ಲಿದೆ. ಸೌಂದರ್ಯ ಶಾಶ್ವತವಲ್ಲ, ನಿನ್ನ ಮುಖ ಕಪ್ಪಾಗಿದ್ದಕ್ಕೆ ಯಾಕೆ ಸಾಯಬೇಕು? ನಿನ್ನನ್ನು ನಾನು ಮದುವೆಯಾಗುವೆ, ನನ್ನನ್ನು ಮದುವೆಯಾಗು" ಎಂದೇಳಿ ಅವಳ ಕಾಲಿಗೆ ಬಿದ್ದು ಬೇಡಿಕೊಂಡನು. ಆಗ ಯುವರಾಣಿ ಅವನನ್ನು ಮೇಲಕ್ಕೆತ್ತಿ ಅಪ್ಪಿಕೊಂಡು ಅವನ ಕಿವಿಯಲ್ಲಿ "ನೀನು ನಾನಿಟ್ಟ ಸೌಂದರ್ಯ ಪರೀಕ್ಷೆಯಲ್ಲಿ ಗೆದ್ದಿರುವೆ, ನಾನು ನಿನ್ನನ್ನು ಖಂಡಿತವಾಗಿ ಮದುವೆಯಾಗುವೆ, ಚಿಂತಿಸದಿರು..." ಎಂದು ಸಾವಕಾಶವಾಗಿ ಪಿಸುಗುಟ್ಟಿದಳು. ಅವಳ ಮಾತನ್ನು ಕೇಳಿ ಯುವರಾಜ ಸ್ವಲ್ಪ ಅಚ್ಚರಿ ಸ್ವಲ್ಪ ಖುಷಿಯಾದನು.

ಅಷ್ಟರಲ್ಲಿ ಯುವರಾಣಿ ತನ್ನ ಮುಖವನ್ನು ತೊಳೆದುಕೊಂಡಳು. ಹುಣ್ಣಿಮೆ ಚಂದಿರನಂತೆ ಹೊಳೆಯುವ ಅವಳ ಮುದ್ದಾದ ಮುಖ ನೋಡಿ ಮತ್ತೆ ಮನಸೋತು ನಿಯಂತ್ರಣ ಕಳೆದುಕೊಂಡನು. ಅವಳನ್ನು ಒಮ್ಮೇಲೆ ಸೊಂಟ ಬಳಸಿ ಅಪ್ಪಿಕೊಂಡು ಮಂಚದ ಮೇಲೆ ಬಿದ್ದನು. ಅವಳನ್ನು ಚುಂಬಿಸಲು ಮುಂದಾದನು. ತಕ್ಷಣವೇ ಯುವರಾಣಿ ಆ... ಎಂದು ಕೀರುಚಿ ತನ್ನ ಸೊಂಟದಲ್ಲಿನ ಚೂರಿಯನ್ನು ತೆಗೆದು ಯುವರಾಜನ ತುಟಿಗಳ ಮೇಲೆ ಹಿಡಿದಳು. ಅವನ ಎರಡು ಕೈಗಳು ಅವಳ ಸೊಂಟದ ಮೇಲಿದ್ದವು, ಆತ ಅವಳ ಮೇಲೆ ಮಲಗಿದ್ದನು. ಅವರಿಬ್ಬರ ಕಣ್ಣುಗಳು ಪ್ರೇಮ ಯುದ್ಧ ಮಾಡಲು ಸಜ್ಜಾಗುತ್ತಿದ್ದವು. ಅಷ್ಟರಲ್ಲಿ ಯುವರಾಣಿಯ ಅಂಗರಕ್ಷಕಿಯರು ಬಂದು ಯುವರಾಜನನ್ನು ಬಂಧಿಸಿ ಗೋಡೆಗೆ ಒರಗಿಸಿ ನಿಲ್ಲಿಸಿದರು. ಯುವರಾಣಿ ತನ್ನ ಅಂಗರಕ್ಷಕಿಯರಿಗೆ ಸನ್ನೆ ಮಾಡಿ ಹೊರ ಕಳುಹಿಸಿದಳು. ನಂತರ ಯುವರಾಜನ ಕೈಕಟ್ಟುಗಳನ್ನು ಬಿಚ್ಚಿ ಅವನಿಗೆ ಬಿಸಿ ಮುತ್ತನ್ನು ನೀಡಿ ಅವಳ ತಂದೆಯೊಂದಿಗೆ ಮದುವೆ ಮಾತುಕತೆ ಮುಂದುವರೆಸಲು ಹೇಳಿದಳು. ಯುವರಾಜ ಅವಳ ತಂದೆಯ ಮನವೊಲಿಸಿ ಅವಳನ್ನು ಮದುವೆಯಾಗಿ ತನ್ನ ಅರಮನೆಗೆ ಕರೆದುಕೊಂಡು ಬಂದನು. ಯುವರಾಣಿ ಮೊದಲ ರಾತ್ರಿಯಲ್ಲಿ ನಾಚಿಕೆಯನ್ನು ಹೂವುಗಳಿಗೆ ದಾನ ಮಾಡಿ ತನ್ನ ಮನಸ್ಸು ಗೆದ್ದ ಯುವರಾಜನನ್ನು ಸಂಪೂರ್ಣವಾಗಿ ಸಂತೃಪ್ತಪಡಿಸಿದಳು. ಸೌಂದರ್ಯ ನೋಡದೆ ಮದುವೆಯಾಗಿ ಸೌಂದರ್ಯ ಪರೀಕ್ಷೆ ಗೆದ್ದವನಿಗೆ ತನ್ನ ಸೌಂದರ್ಯವನ್ನೇ ಉಡುಗೊರೆಯಾಗಿ ಸಮರ್ಪಿಸಿದಳು. ಅವನಿಗೆ ತನ್ನ ತನು ಮನ ಧನವನ್ನೆಲ್ಲ ಸಮರ್ಪಿಸಿ ಅವನೊಂದಿಗೆ ಸುಖವಾಗಿ ಸಂಸಾರ ಮಾಡಿದಳು....