
ಗುರುಗಳು ತಮ್ಮ ಶಿಷ್ಯರಿಗೆಲ್ಲ ಆರು ತಿಂಗಳು ಕಠಿಣ ಬ್ರಹ್ಮಚರ್ಯ ವೃತವನ್ನು ಪಾಲಿಸಿ ಅವರನ್ನು ಪರಿಶುದ್ಧ ಬ್ರಹ್ಮಚಾರಿಗಳನ್ನಾಗಿ ಪರಿವರ್ತಿಸಿದ್ದರು. ಈಗ ಅವರನ್ನು ನಾಲ್ಕು ದಿಕ್ಕುಗಳಲ್ಲಿ ಸಮಾಜೋಧ್ಧಾರಕ್ಕಾಗಿ ಕಳುಹಿಸುವ ತಯಾರಿಯಲ್ಲಿ ಗುರುಗಳಿದ್ದರು. ಆಗವರು ಕೊನೆಯ ಪಾಠವಾಗಿ "ಶಿಷ್ಯರೇ, ನೀವು ಶ್ರದ್ಧೆಯಿಂದ ಬ್ರಹ್ಮಚರ್ಯ ಪಾಲಿಸಿ ನಿಜವಾದ ಬ್ರಹ್ಮಚಾರಿಗಳಾಗಿರುವಿರಿ, ಆದರೂ ಸಹ ಕಾಡಿನಿಂದ ನಾಡಿಗೆ ಹೋದಾಗ ಸ್ತ್ರೀಯರಿಂದ ಸಾಧ್ಯವಾದಷ್ಟು ದೂರವಿರಿ, ಅವರ ನೆರಳನ್ನು ಸಹ ಸೋಕದಿರಿ, ಅವರೊಂದಿಗೆ ಜಾಸ್ತಿ ಮಾತನಾಡದಿರಿ. ಏಕೆಂದರೆ ಮಾಯೆಯನ್ನು ಗೆಲ್ಲಲು ಯಾರಿಗೂ ಸುಲಭದಿಂದ ಸಾಧ್ಯವಿಲ್ಲ..." ಎಂದೇಳಿದರು. ಆಗ ಅವರ ಶಿಷ್ಯರಲ್ಲೊಬ್ಬ "ಗುರುಗಳೆ ನಾನು ಕಠಿಣ ಬ್ರಹ್ಮಚರ್ಯ ಪಾಲಿಸಿರುವೆ, ಯಾವ ಸ್ತ್ರೀಯಿಂದಲೂ ನಾನು ವಿಚಲಿತನಾಗಲಾರೆ, ಮಾಯೆ ನನ್ನನ್ನು ಸೋಲಿಸಲಾರಳು" ಎಂದು ಗರ್ವದಿಂದ ನುಡಿದನು. ಆಗ ಗುರುಗಳು ನಗುತ್ತಾ "ನೋಡೋಣಾ, ನಾನು ಕಾಶಿಗೆ ಹೋಗಿ ಮೂರು ದಿನದಲ್ಲಿ ಬರುವೆ, ಆನಂತರ ನೀವು ಹೊರಡುವಿರಿ" ಎಂದೇಳಿ ಹೋದರು.

ಗುರುಗಳು ಹೋದ ನಂತರ ಗರ್ವದಿಂದ ಮಾತಾಡಿದ ಶಿಷ್ಯ ಎಲ್ಲರಿಗಿಂತ ನಾನೇ ಶ್ರೇಷ್ಠ, ನಾನು ನಿಜವಾದ ಬ್ರಹ್ಮಚಾರಿ ಎಂದೆಲ್ಲ ಹೇಳಿ ಉಳಿದ ಸಹಪಾಠಿಗಳ ಮುಂದೆ ದೊಡ್ಡ ದೊಡ್ಡ ಬಡಾಯಿಗಳನ್ನು ಕೊಚ್ಚಿಕೊಂಡನು. ಮರುದಿನ ಸಂಜೆ ಆತ ನದಿ ಸ್ನಾನ ಮಾಡಿ ಬರುವಾಗ ಒಂದು ಮರದ ಕೆಳಗೆ ಒಬ್ಬಳು ಸುಂದರ ಯುವತಿ ನಿಂತಿರುವುದನ್ನು ನೋಡಿದನು. ಸಂಜೆಯಾಗಿತ್ತು, ಮೋಡಗಳು ಸೂರ್ಯನನ್ನು ಕಟ್ಟಿ ಹಾಕಿದ್ದವು. ಅಚಾನಕ್ಕಾಗಿ ಜೋರಾಗಿ ಮಳೆ ಬಂತು. ಅಲ್ಲಿ ಮರದ ಕೆಳಗೆ ನಿಂತಿದ್ದ ಯುವತಿ ಸಂಪೂರ್ಣವಾಗಿ ಮಳೆಯಲ್ಲಿ ನೆನೆದಳು. ಮಳೆ ನೀರಿನಿಂದ ನೆನೆದ ಶ್ವೇತ ಬಟ್ಟೆಯಲ್ಲಿ ಅವಳ ದೇಹದ ಸೌಂದರ್ಯ ಅರೆ ಪಾರದರ್ಶಕವಾಗಿ ಕಾಣಿಸುತ್ತಿತ್ತು. ಬ್ರಹ್ಮಚಾರಿಗೆ ಅವಳ ಮೇಲೆ ಕನಿಕರ ಮೂಡಿತು. ಆತ ಅವಳ ಸಮೀಪಕ್ಕೆ ಹೋಗಿ ಮಾತನಾಡಿಸಿದನು.

ಬ್ರಹ್ಮಚಾರಿ : ನಮ್ಮ ಆಶ್ರಮ ಇಲ್ಲೇ ಸಮೀಪದಲ್ಲಿದೆ, ನೀನು ಇವತ್ತು ನಮ್ಮ ಆಶ್ರಮದಲ್ಲಿ ಇರಬಹುದು, ಕತ್ತಲಾಗಿದೆ...
ಯುವತಿ : ನಿಮ್ಮ ಆಶ್ರಮದಲ್ಲಿ ಯಾರು ಯಾರು ಇರುವಿರಿ? ಅಲ್ಲಿ ಯಾರಾದರೂ ಬೇರೆ ಯುವತಿಯರು ಇದ್ದಾರಾ?
ಬ್ರಹ್ಮಚಾರಿ : ಬೇರೆ ಯಾವ ಯುವತಿಯರು ಇಲ್ಲ. ಎಲ್ಲ ಬ್ರಹ್ಮಚಾರಿಗಳೇ ಇದ್ದಾರೆ, ಹೆದರುವ ಅವಶ್ಯಕತೆ ಇಲ್ಲ...
ಯುವತಿ : ವಯಸ್ಸಿಗೆ ಬಂದ ಯುವತಿ ಅಪರಿಚಿತ ಪುರುಷರೊಡನೆ ರಾತ್ರಿ ಒಂಟಿಯಾಗಿ ಇರುವುದು ಸುರಕ್ಷಿತವಲ್ಲ, ನೀವು ಹೋಗಿ ನಾನು ಇಲ್ಲೇ ಇರುವೆ, ನಾಳೆ ಬೆಳಿಗ್ಗೆ ಹೋಗುವೆ...
ಆ ಯುವತಿ ಬ್ರಹ್ಮಚಾರಿಗೆ ನೇರವಾಗಿ ಬರಲ್ಲ ಅಂತೇಳಿದರೂ ಬ್ರಹ್ಮಚಾರಿ "ನೀನು ಹೆದರುವ ಅವಶ್ಯಕತೆ ಇಲ್ಲ. ನಾನು ನಿಜವಾದ ಬ್ರಹ್ಮಚಾರಿಯಾಗಿರುವೆ, ನೀನು ಚಿಂತಿಸುವ ಅವಶ್ಯಕತೆ ಇಲ್ಲ, ನಿನ್ನ ಶೀಲಕ್ಕೆ ನಾನು ಪ್ರಮಾಣ ಕೊಡುವೆ, ನೀನು ನನ್ನ ಖಾಸಗಿ ಗುಡಿಸಿಲಿನಲ್ಲಿ ಇರಬಹುದು..." ಎಂದೆಲ್ಲ ಹೇಳಿ ಅವಳನ್ನು ತನ್ನ ಗುಡಿಸಲಿಗೆ ಕರೆದುಕೊಂಡು ಬಂದನು. ಕರೆದುಕೊಂಡು ಬರುವಾಗ ಅವನ ಮನಸ್ಸಲ್ಲಿ ಅವಳ ಮೇಲೆ ಯಾವುದೇ ಕೆಟ್ಟ ವಿಚಾರಗಳಿರಲಿಲ್ಲ. ರಾತ್ರಿ ಆಕೆಗೆ ಭೋಜನ ಕೊಟ್ಟು ತಾನು ಸೇವಿಸಿದ ನಂತರ ಬ್ರಹ್ಮಚಾರಿ ಅವಳಿಗೆ ಗುಡಿಸಿಲಿನಲ್ಲಿ ಒಬ್ಬಳೇ ಮಲಗಲು ಹೇಳಿ ತಾನು ಹೊರಗಡೆ ಮಲಗಿದನು.

ಆ ಯುವತಿ ಗುಡಿಸಿಲಿನ ಒಳಗೆ ಮಂಚದ ಮೇಲೆ ನಿಶ್ಚಿಂತೆಯಿಂದ ಮಲಗಿದಳು. ಆದರೆ ಬ್ರಹ್ಮಚಾರಿ ನಿದ್ದೆ ಬರದೇ ಹೊರಗಡೆ ಚಾಪೆ ಮೇಲೆ ಉರುಳಾಡಿ ಒದ್ದಾಡಿದನು. ಅವನ ಮನಸ್ಸಿನ ಹತೋಟಿ ತಪ್ಪಿ ಹೋಗಿತ್ತು. ಆತ ಅವಳನ್ನು ಮನಸ್ಸಲ್ಲಿ ಆಶ್ಲೀಲವಾಗಿ ಕಲ್ಪಿಸಿಕೊಂಡನು. ಅವನ ಮನಸ್ಸು ಸಂಪೂರ್ಣವಾಗಿ ವಿಕಾರವಾಯಿತು. ಆತ ಕಣ್ಮುಚ್ಚಿದಾಗ ಬರೀ ಅವನಿಗೆ ಅವಳ ಸುಂದರ ಶರೀರ ಹಾಗೂ ಗುಪ್ತ ಅಂಗಗಳು ಕಾಣಿಸಿದವು. ಆತ ತಕ್ಷಣವೇ ನೆಪ ಮಾಡಿ ಒಳಗೆ ಹೋದನು. ಆತ ಚಾಪೆ ಸುತ್ತಿಕೊಂಡು ಬಾಗಿಲ ಬಡಿದನು. ಆ ಯುವತಿ ಬಾಗಿಲನ್ನು ತೆಗೆದಳು. ಆಗಾತ ಅವಳಿಗೆ "ಹೊರಗಡೆ ಬಹಳಷ್ಟು ಚಳಿಯಿದೆ, ನನಗೆ ಸಹಿಸಲು ಆಗುತ್ತಿಲ್ಲ..." ಎಂದೇಳಿದನು. ಆಗಾಕೆ ಬೇರೆ ದಾರಿಯಿಲ್ಲದೆ ಅವನಿಗೆ ಒಳಗಡೆ ಮಲಗಲು ಅನುಮತಿ ಕೊಟ್ಟಳು. ಆತ ಅವಳ ಮಂಚದ ಪಕ್ಕ ಚಾಪೆ ಹಾಸಿ ನೆಲದ ಮೇಲೆ ಮಲಗಿಕೊಂಡನು. ಆ ಯುವತಿ ಮಂಚದ ಮೇಲೆ ಮೊದಲಿನಂತೆ ಆರಾಮಾಗಿ ಮಲಗಿದಳು.

ಕಳ್ಳ ಬ್ರಹ್ಮಚಾರಿಯ ಮನಸ್ಸು ಸಂಪೂರ್ಣವಾಗಿ ಮಲಿನವಾಗಿತ್ತು. ಅವನ ಮನಸ್ಸಲ್ಲಿ ಅವಳ ಮೇಲೆ ವಿಪರೀತ ಕಾಮ ಹುಟ್ಟಿಕೊಂಡಿತು. ಪ್ರೇಮಕ್ಕೆ ಜಾಗವೇ ಇರಲಿಲ್ಲ, ಕಾಮದಲೆ ಅವನ ಮೈಮನಸ್ಸಿನ ತುಂಬೆಲ್ಲ ಸುನಾಮಿಯನ್ನು ಎಬ್ಬಿಸಿತ್ತು. ಅವನ ಬ್ರಹ್ಮಚರ್ಯ ಅವಳ ಸೌಂದರ್ಯದ ಶಾಖದ ಎದುರು ಬೆಣ್ಣೆಯಂತೆ ಕರಗಿ ನಾಶವಾಗಿ ಹೋಯಿತು. ಆತ ಅವಳನ್ನೇ ಕಲ್ಪಿಸಿಕೊಳ್ಳುತ್ತಾ ಮಲಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದನು. ಅಷ್ಟರಲ್ಲಿ ಮಂಚದ ಮೇಲೆ ಮಲಗಿದ್ದ ಯುವತಿ ನಿದ್ದೆಯಲ್ಲಿ ಹೊರಳಾಡಿ ಅಂಗಾತ ಮಲಗಿಕೊಂಡಳು. ಅವಳ ಕೈಯಲ್ಲಿನ ಕೈಬಳೆ ಸದ್ದಿಗೆ ಬ್ರಹ್ಮಚಾರಿ ಎದ್ದು ಕುಂತನು. ಸಾಹಸ ಮಾಡಿ ಅವಳ ಸಮೀಪ ಹೋದನು. ಅವಳ ಮೈಮೇಲಿನ ನೆನೆದ ಬಟ್ಟೆ ಇನ್ನೂ ಸಂಪೂರ್ಣವಾಗಿ ಆರಿರಲಿಲ್ಲ. ಅವು ಅವಳ ಮೈಗೆ ಬಿಗಿಯಾಗಿ ಅಂಟಿಕೊಂಡಿದ್ದವು. ಅವಳ ತಲೆ ಗೂದಲುಗಳು ಗುಡಿಸಲಿನ ಸಂದಿಯಿಂದ ಬರುತ್ತಿದ್ದ ತಂಗಾಳಿಗೆ ಮೆಲ್ಲನೆ ಹಾರಾಡುತ್ತಿದ್ದವು. ಅವಳ ಎದೆ ಮೇಲಿನ ಬಟ್ಟೆ ಸ್ವಲ್ಪ ಪಕ್ಕಕ್ಕೆ ಸರಿದಿತ್ತು. ಅವಳ ಸೊಂಟದ ಸೊಬಗು, ನಾಭಿಯ ಅರ್ಧಚಂದ್ರ ಅರೆಬರೆಯಾಗಿ ಕಾಣಿಸುತ್ತಿತ್ತು. ಅವಳ ಸೌಂದರ್ಯ ಹಾಗೂ ಅವಳ ಮುಖದಲ್ಲಿನ ಕಾಂತಿ ಅವನ ಮನಸ್ಸಿನ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸಿತು.

ಬ್ರಹ್ಮಚಾರಿ ಒಮ್ಮೇಲೆ ಅವಳ ಮೇಲೆ ಬಿದ್ದು ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡನು. ಅವಳಿಗೆ ಚುಂಬಿಸಬೇಕು ಎನ್ನುವಷ್ಟರಲ್ಲಿ ಆ ಯುವತಿ ಅವನ ತೋಳುಗಳಿಂದ ಒಮ್ಮೇಲೆ ಮಾಯವಾದಳು. ಆತ ಅಚ್ಚರಿಯಿಂದ ಅವಳನ್ನು ಸುತ್ತಮುತ್ತ ಹುಡುಕಿದನು. ಕೊನೆಗೆ ಬೇಸರಿಸಿಕೊಂಡು ಕೂಗಿ ನೆಲಕ್ಕೆ ಕುಸಿದು ಕುಂತನು. ಅಷ್ಟರಲ್ಲಿ ಒಮ್ಮೇಲೆ ಅವನ ಮುಂದೆ ಅವನ ಗುರುಗಳು ಪ್ರತ್ಯಕ್ಷವಾದರು. ಅವನಿಗೆ ಅವನ ತಪ್ಪು ಸರಿಯಾಗಿ ಅರ್ಥವಾಗಿತ್ತು. ಅದಕ್ಕೆ ಆತ ನೇರವಾಗಿ ಗುರುಗಳ ಕಾಲಿಗೆ ಅಡ್ಡ ಬಿದ್ದು ಕ್ಷಮೆ ಕೇಳಿ ಕಾಪಾಡುವಂತೆ ಬೇಡಿಕೊಂಡನು. ಅವನ ಗರ್ವಭಂಗ ಮಾಡಲು ಗುರುಗಳೇ ಈ ರೀತಿಯ ಮಾಯಾಜಾಲವನ್ನು ರಚಿಸಿದ್ದರು. ಗುರುಗಳು ಅವನನ್ನು ಕ್ಷಮಿಸಿ ಮತ್ತೆ ಆರು ತಿಂಗಳು ಬ್ರಹ್ಮಚರ್ಯ ಪಾಲಿಸುವಂತೆ ಹೇಳಿ ಕಠಿಣ ವಿಧಿವಿಧಾನಗಳನ್ನು ನೀಡಿದರು. ಮಿಕ್ಕ ಶಿಷ್ಯರು ಮರುದಿನ ಸಮಾಜೋಧ್ಧಾರಕ್ಕಾಗಿ ನಾಡಿಗೆ ಹೋದರು. ಕಳ್ಳ ಬ್ರಹ್ಮಚಾರಿ ಕಾಡಲ್ಲೇ ತಪಸ್ಸು ಮಾಡುತ್ತಾ ಕುಂತನು. ಜೊತೆಗೆ ಕಾಮದಿಂದ ಸಾಧನೆಯ ಸರ್ವನಾಶವಾಗುತ್ತದೆ ಎಂಬುದನ್ನು ನಮಗೆಲ್ಲ ಕಲಿಸಿ ಹೋದನು...