ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

                                   ಹೇಗೆ ಸೂರ್ಯ ಚಂದ್ರರು ಅಚಲರಾಗಿದ್ದಾರೋ ಅದೇ ರೀತಿ ಸ್ವಾಮಿ ವಿವೇಕಾನಂದರ ನೆನಪುಗಳು, ಉಪದೇಶಗಳು ನಮ್ಮ ಮನಸ್ಸಿನಲ್ಲಿ ಅಚಲವಾಗಿ ಬೇರೂರಿ ನಿಶ್ಚಲ ಸ್ವರೂಪ ಪಡೆದುಕೊಂಡು ಹಚ್ಚ ಹಸಿರಾಗಿ ಉಳಿದಿವೆ. ಸ್ವಾಮಿ ವಿವೇಕಾನಂದರ ಕಂಚಿನ ಕಂಠದಿಂದ ಹೊರಹೊಮ್ಮಿದ ಪ್ರೇರಕ ನುಡಿಗಳು ಯುವಕರ ಮನಸ್ಸನ್ನು ಕೆರಳಿಸಿ ಅವರಲ್ಲಿ ಆತ್ಮವಿಶ್ವಾಸ, ಸ್ಪೂರ್ತಿ ಹಾಗೂ ಧೈರ್ಯ ಸಾಹಸಗಳನ್ನು ಬಿತ್ತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುವಂತೆ ಮಾಡುತ್ತವೆ. ಪ್ರೀತಿ ಅನುಕಂಪಗಳನ್ನು ಅವರೆದೆಯಲ್ಲಿ ತುಂಬಿ ಅವರು ಭವ್ಯ ಬದುಕನ್ನು ನಡೆಸುವಂತೆ ಮಾಡುತ್ತವೆ. ಜೀವನದಲ್ಲಿ ಎದುರಾಗುವ ಸಂದಿಗ್ಧ ಹಾಗೂ ಸಂಕಟಮಯ ಸನ್ನಿವೇಶಗಳನ್ನು ಎದುರಿಸಲು ಮಾರ್ಗದರ್ಶನವನ್ನು ನೀಡುತ್ತವೆ. ನೇತಾಜಿ ಸುಭಾಷಚಂದ್ರ ಬೋಸ, ಭಗತಸಿಂಗ, ಗಾಂಧೀಜಿ, ಲಾಲ ಬಹಾದ್ದೂರ ಶಾಸ್ತ್ರಿ, ನಿಕೋಲಾ ಟೆಸ್ಲಾ, ಎಪಿಜೆ ಅಬ್ದುಲ ಕಲಾಂರಂಥ ಮಹಾನ ಸಾಧಕರಿಗೆ ಸ್ವಾಮಿ ‌ವಿವೇಕಾನಂದರು ಸ್ಪೂರ್ತಿಯಾಗಿದ್ದರು. ಅಂತಹ ಮಹಾನ ವ್ಯಕ್ತಿತ್ವವನ್ನು ಅರಿಯುವ ಕಿರುಸಾಹಸ ಇಲ್ಲಿದೆ. 

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

                             ತಮ್ಮ ಪೂರ್ವಾಶ್ರಮದ ದಿನಗಳಲ್ಲಿ ನರೇನ ಅಥವಾ ನರೇಂದ್ರನಾಥ ಎಂದು ಕರೆಯಲ್ಪಡುತ್ತಿದ್ದ ಸ್ವಾಮಿ ವಿವೇಕಾನಂದರು 1863ನೇ ಇಸ್ವಿಯ ಜನೇವರಿ 12ರ ಸೋಮವಾರದಂದು ಕಾಶಿ ವಿಶ್ವೇಶ್ವರನ ಅನುಗ್ರಹದಿಂದಾಗಿ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿಗಳಿಗೆ ವರಪುತ್ರರಾಗಿ ಕಲ್ಕತ್ತಾದಲ್ಲಿ ಜನಿಸಿದರು. ವಿಶ್ವನಾಥ ದತ್ತರು ಕಲ್ಕತ್ತಾ ಹೈಕೋರ್ಟನಲ್ಲಿ ವಕೀಲರಾಗಿದ್ದರೆ ಭುವನೇಶ್ವರಿದೇವಿ ಅಪಾರ ದೈವಭಕ್ತೆಯುಳ್ಳ ಗೃಹಿಣಿಯಾಗಿದ್ದರು. 

                     ಬಾಲ್ಯದಲ್ಲಿ ನರೇಂದ್ರನಾಥ ಬಹಳಷ್ಟು ತುಂಟನಾಗಿದ್ದನು. ಮೈತುಂಬ ಭಸ್ಮ ಹಚ್ಚಿಕೊಂಡು ಶಿವನಂತೆ ನಾಟಕ ಮಾಡುತ್ತಿದ್ದನು. ಅವರ ಮನೆಗೆ ಯಾರಾದರೂ ಭಿಕ್ಷುಕರು ಬಂದರೆ ನರೇನ ಕಣ್ಣಿಗೆ ಕಾಣಿಸಿದ್ದನ್ನೆಲ್ಲ ಕೈಗೆ ಸಿಕ್ಕಿದ್ದನ್ನೆಲ್ಲ ಭಿಕ್ಷುಕರಿಗೆ ದಾನವಾಗಿ ಕೊಟ್ಟು ಬಿಡುತ್ತಿದ್ದನು‌. ಹೀಗಾಗಿ ಅವರ ತಾಯಿ ಅವನನ್ನು ಭಿಕ್ಷುಕರು ಬಂದಾಗ ರೂಮಲ್ಲಿ ಕೂಡಿ ಹಾಕುತ್ತಿದ್ದರು. ಆದರೂ ನರೇನ ಕಿಟಕಿದಿಂದ ಭಿಕ್ಷುಕರಿಗೆ ಏನಾದರೂ ಒಂದನ್ನು ಕೊಡುತ್ತಿದ್ದನು. ನರೇನ ಈ ತರಹದ ಹಲವಾರು ತುಂಟತನಗಳನ್ನು ಮಾಡುತ್ತಿದ್ದನು‌. ಅವರ ತಾಯಿ ಅವನನ್ನು ಹರಕೆ ಹೊತ್ತುಕೊಂಡು ಹೆತ್ತಿದ್ದರು. ಆದರೆ ಅವನ ತುಂಟತನವನ್ನು ತಾಳಲಾರದೇ "ನಾನು ಶಿವನಿಗೆ ಮಗನನ್ನು ಕೊಡು ಅಂತಾ ಕೇಳಿದರೆ, ಆತ ಅವನ ದೈತ್ಯನನ್ನು ಕಳುಹಿಸಿದ್ದಾನೆ" ಅಂತಾ ಬೈಯ್ಯುತ್ತಿದ್ದರು. 

                             ದತ್ತ ಕುಟುಂಬವು ಶ್ರೀಮಂತಿಕೆ ಮತ್ತು  ಗೌರವ ಪ್ರತಿಷ್ಟೆಗಳನ್ನು ಗಳಿಸಿದ್ದು ಔದಾರ್ಯ, ಪಾಂಡಿತ್ಯ ಮತ್ತು ತೀವ್ರ ಸ್ವಾತಂತ್ರ್ಯ ಪ್ರಿಯತೆಗೆ ಹೆಸರುವಾಸಿಯಾಗಿತ್ತು. ನರೇಂದ್ರನ ತಾತನಾದ ದುರ್ಗಾಚರಣದತ್ತರು ಪರ್ಶಿಯನ್ ಹಾಗೂ ಸಂಸ್ಕೃತ ಭಾಷೆಗಳನ್ನು ಕರಗತ ಮಾಡಿಕೊಂಡಿದ್ದರು. ಆದರೆ ತಮ್ಮ ಮಗ ವಿಶ್ವನಾಥ ದತ್ತ ಜನಿಸಿದ ನಂತರ ಲೌಕಿಕ ಜಗತ್ತಿನ ಜೀವನ ಪರಿತ್ಯಜಿಸಿ 25ನೇ ವಯಸ್ಸಿನಲ್ಲಿ ಸಂನ್ಯಾಸಿಯಾದರು. ದುರ್ಗಾಚರಣರ ಈ ನಿರ್ಧಾರವೇ ಮೊಮ್ಮಗ ನರೇಂದ್ರನಲ್ಲಿ ಆಧ್ಯಾತ್ಮದಲ್ಲಿ ಒಲುಮೆ ಮೂಡಲು ಪ್ರಚೋದನಕಾರಿಯಾಯಿತು. 

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

‌                          ನರೇಂದ್ರನ ತಂದೆ ವಿಶ್ವನಾಥ ದತ್ತರು ಕಲ್ಕತ್ತಾ ಹೈಕೋರ್ಟಿನಲ್ಲಿ ಸರ್ಕಾರಿ ವಕೀಲರಾಗಿದ್ದರು. ಅವರಿಗೆ ಬಡ ಜನರಲ್ಲಿ ಅಪಾರ ಸಹಾನುಭೂತಿಯಿತ್ತು. ಅವನ ತಾಯಿ ಭುವನೇಶ್ವರಿ ದೇವಿಯವರು ರಾಜಕುಟುಂಬದ ಸುಸಂಸ್ಕೃತ ಹೆಣ್ಣಾಗಿದ್ದರು. ದಿನಾಲು ನರೇಂದ್ರನಿಗೆ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳ ರೋಚಕ ಕಥೆಗಳನ್ನು ಹೇಳುತ್ತಿದ್ದರು. ಹೀಗಾಗಿ ನರೇಂದ್ರ ರಾಮಾಯಣ ಹಾಗೂ ಮಹಾಭಾರತಗಳನ್ನು ಓದಿ ಸುಲಭವಾಗಿ ಅರ್ಥ ಮಾಡಿಕೊಂಡನು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನರೇಂದ್ರನ ಕೀರ್ತಿ ವಿಜಯಯಾತ್ರೆ ಬಾಲ್ಯದಿಂದಲೇ ಪ್ರಾರಂಭವಾಯಿತು. 

                    ಬಾಲ್ಯದಲ್ಲಿ ನರೇಂದ್ರ ಎಷ್ಟು ತುಂಟನಾಗಿದ್ದನೋ ಅಷ್ಟೇ ಜಾಣನಾಗಿದ್ದನು. ವಿನೋದ ಉಲ್ಲಾಸಗಳಲ್ಲಿ ಕಾಲ‌ ಕಳೆಯುತ್ತಿದ್ದನು. ಜೊತೆಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದನು. ರಾಮ ಸೀತೆ ಮತ್ತು ಶಿವನ ಪ್ರತಿಮೆಗಳನ್ನು ಪೂಜಿಸುವುದು, ಧ್ಯಾನಿಸುವುದು ಅವನಿಗೊಂದು ಆಟವಾಗಿತ್ತು. ಅವನ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆಗಳು ಅವನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದವು. ಧೈರ್ಯ, ಬಡವರ ಬಗ್ಗೆ ಕನಿಕರ, ಸಂನ್ಯಾಸಿಗಳನ್ನು ಕಂಡರೆ ಅಪಾರ ಆಕರ್ಷಣೆ ಮುಂತಾದ ಸತ್ವಶಾಲಿ ಸದ್ಗುಣಗಳು ಬಾಲ್ಯದಲ್ಲೇ ನರೇಂದ್ರನಲ್ಲಿ ರಾರಾಜಿಸುತ್ತಿದ್ದವು.

                           ನರೇಂದ್ರನನ್ನು 7ನೇ ವಯಸ್ಸಿಗೆ ಕಲ್ಕತ್ತಾದ ಮೆಟ್ರೊಪಾಲಿಟನ್ ಶಾಲೆಗೆ ದಾಖಲಿಸಲಾಯಿತು. ತುಂಟ ಬಾಲಕ ನರೇಂದ್ರ ಆಟೋಟಗಳಲ್ಲಿ, ವಿದ್ಯಾಭ್ಯಾಸದಲ್ಲಿ, ಸಂಗೀತದಲ್ಲಿ ಸರಿಸಮನಾಗಿ ಭಾಗವಹಿಸಿ ಆಲರೌಂಡರ ಎಂಬ ಪಟ್ಟ ಗಿಟ್ಟಿಸಿಕೊಂಡನು‌. ನರೇನ ಎಂಟ್ರನ್ಸ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಜನರಲ ಅಸೆಂಬ್ಲಿ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡನು. ಬಿ.ಎ. ಓದುವಾಗ ನರೇಂದ್ರನ ಪಾಂಡಿತ್ಯಕ್ಕೆ ಎಲ್ಲರೂ ಬೆರಗಾಗಿದ್ದರು. ತತ್ವಶಾಸ್ತ್ರದ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯರಾದ ಪ್ರೋಫೆಸರ ಡಬ್ಲು.ಡಬ್ಲು. ಹೇಸ್ಟಿಯವರು ನರೇಂದ್ರನಿಗೆ "ನಾನು ಈ ಜಗತ್ತಿನಾದ್ಯಂತ ಸಂಚರಿಸಿದ್ದೇನೆ, ಆದರೆ ನರೇಂದ್ರನಂಥ ಮೇಧಾವಿಯನ್ನು ಕಂಡಿಲ್ಲ, ಮುಂದೆ ಕಾಣುವುದು ಇಲ್ಲ" ಎಂದು ಹೊಗಳಿ ಶ್ರೀರಾಮಕೃಷ್ಣ ಪರಮಹಂಸರನ್ನು ಕಾಣಲು ಸಲಹೆ ನೀಡಿದರು. 

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

                               ಪ್ರೋಫೆಸರ ಹೇಸ್ಟಿಯವರ ಸಲಹೆಯ ಮೇರೆಗೆ ಕಲ್ಕತ್ತಾದ ಹೂಗ್ಲಿ ನದಿ ದಡದ ಕಾಳಿ ದೇವಸ್ಥಾನದಲ್ಲಿ ಆಧ್ಯಾತ್ಮಿಕ ಹಾಗೂ ತತ್ವಶಾಸ್ತ್ರದ ಗಣಿಯಾದ ಶ್ರೀರಾಮಕೃಷ್ಣ ಪರಮಹಂಸರನ್ನು ನರೇಂದ್ರನಾಥ ಭೇಟಿಯಾದನು‌. ಆಗ ಆತ ಅವರಿಗೆ "ನೀವು ದೇವರನ್ನು ನೋಡಿರುವಿರಾ?" ಎಂದಾಗ ರಾಮಕೃಷ್ಣರು "ಹೌದು ನಾನು ನೋಡಿರುವೆ, ಬೇಕಾದರೆ ನಿನಗೂ ಸಹ ದೇವರನ್ನು ತೋರಿಸಬಲ್ಲೆ" ಎಂದು ಉತ್ತರಿಸಿದರು. ರಾಮಕೃಷ್ಣರ ಉತ್ತರದಿಂದ ದಂಗಾದ ನರೇಂದ್ರನಾಥ ಕೆಲವು ಕ್ಷಣಗಳ ತನಕ ಅವರನ್ನೇ ದಿಟ್ಟಿಸಿಕೊಂಡು ನೋಡಿ ಕ್ರಮೇಣವಾಗಿ ಶಾಂತವಾಗಿ ಬಿಟ್ಟನು. ನಂತರ ನರೇನ ರಾಮಕೃಷ್ಣರು ಕರೆದಾಗ ಹಾಡು ಹಾಡಲು, ಸಂಗೀತ ನುಡಿಸಲು ಹೋಗುತ್ತಿದ್ದನು‌. ಇದರಿಂದ ಅವರಿಬ್ಬರ ಒಡನಾಟ ಹೆಚ್ಚಾಯಿತು. ಅವರು ನರೇಂದ್ರನಿಗೆ ಸಂನ್ಯಾಸ ತೆಗೆದುಕೊಳ್ಳಲು ಹೇಳಿದಾಗ ಅವನ ಮನ ಇಕ್ಕಟ್ಟಿಗೆ ಸಿಲುಕಿತು.

                          ಈ ಮಧ್ಯೆ ನರೇಂದ್ರನಾಥನ ತಂದೆ ವಿಶ್ವನಾಥರ ನಿಧನವಾಯಿತು. ತಂದೆಯ ನಿಧನದ ನಂತರ ಭಯಂಕರ ಬಡತನದ ಛಾಯೆ ಅವರ ಕುಟುಂಬವನ್ನು ಆವರಿಸಿತು. ನರೇನ ನೌಕರಿಯ ಹುಡುಕಾಟದಲ್ಲಿ ಬರಿಗಾಲಲ್ಲಿ ಕಲ್ಕತ್ತಾವೆಲ್ಲ ಸುತ್ತಿದನು. ಕೆಲವು ಸಲ ಆತ ತರುವ ಆಹಾರ ಸಾಮಾನುಗಳು ಮನೆ ಮಂದಿಗೆಲ್ಲ ಸಾಕಾಗುತ್ತಿರಲಿಲ್ಲ. ಆತ ಎಷ್ಟೋ ಸಲ ಉಪವಾಸ ಮಲಗಿಕೊಳ್ಳುತ್ತಿದ್ದನು. ಅವನಿಗೆ ದೇವರ ಮೇಲೆ ಅಚಲ ನಂಬಿಕೆಯಿತ್ತು. ನೌಕರಿಗಾಗಿ ದಿನಾ ಆತ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. ಆಗ ಅವನ ತಾಯಿ "ಬಾಲ್ಯದಿಂದಲೂ ಆ ದೇವರಿಗಾಗಿ ಅಳುತ್ತಿರುವೆಯಲ್ಲ ಸಿಕ್ಕನೆ ನಿನಗಾತ? ಅವನು ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ತಾನಾ?" ಎಂದು ಬೈಯ್ಯುತ್ತಿದ್ದರು. ಇದರಿಂದ ನರೇನನಿಗೆ ದೇವರನ್ನು ನೋಡುವ ಹಂಬಲ ಹೆಚ್ಚಾಯಿತು. ಕೊನೆಗೆ ನರೇನ್ ಕಾಳಿಮಾತೆಯನ್ನು ಪ್ರತ್ಯಕ್ಷವಾಗಿ ನೋಡಿದನು‌. ಆದರೆ ನರೇನನಿಗೆ ಹಣವನ್ನು ಕೇಳಲು ನಾಲಿಗೆ ಬರಲಿಲ್ಲ. ಆತ ಹಣವೊಂದನ್ನು ಬಿಟ್ಟು ಕಾಳಿಮಾತೆಗೆ ಎಲ್ಲವನ್ನೂ ಕೇಳಿದನು‌. ಆದರೆ ಅವನಿಂದ ಕಾಳಿಮಾತೆಯತ್ರ ಹಣವನ್ನು ಕೇಳಲಾಗಲಿಲ್ಲ‌. ಕಾಳಿಮಾತೆಯ ಕೃಪೆ ಹಾಗೂ ಅವರಿವರ ಅಲ್ಪಸ್ವಲ್ಪ ಸಹಾಯದಿಂದ ನರೇನನ ಬಡತನ ಸ್ವಲ್ಪ ದೂರವಾಯಿತು. ನರೇನ ಮತ್ತೆ ರಾಮಕೃಷ್ಣರ ಆಶ್ರಮದತ್ತ ಮುಖ ಮಾಡಿದನು. 

                                           ಒಂದು ಕಡೆ ತಾಯಿ ಇನ್ನೊಂದು ಕಡೆ ಗುರುವಿನ ಇಕ್ಕಟ್ಟಿನ ನಡುವೆಯೇ ನರೇಂದ್ರನಾಥ ಶ್ರೀರಾಮಕೃಷ್ಣರನ್ನು ತನ್ನ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿದನು. ಆ ಸಮಯದಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಮಹಾಮಾರಿ ಕ್ಯಾನ್ಸರನಿಂದ ಬಳಲುತ್ತಿದ್ದರು. ನರೇನ ಗುರುವಿನ ಆರೈಕೆಗಾಗಿ ತನ್ನದೆಲ್ಲವನ್ನು ತ್ಯಜಿಸಿ ತನ್ನ ಗೆಳೆಯರೊಂದಿಗೆ ಕಾಳಿ ದೇವಸ್ಥಾನದ ಪಕ್ಕದಲ್ಲಿದ್ದ ಮಠದಲ್ಲಿ ಆಶ್ರಮವಾಸಿಯಾದನು. ಇದಾದ ಸ್ವಲ್ಪ ದಿನಗಳಲ್ಲಿಯೇ ಶ್ರೀರಾಮಕೃಷ್ಣ ಪರಮಹಂಸರ ಬಯಕೆಯಂತೆ ಸಂನ್ಯಾಸವನ್ನು ಸ್ವೀಕರಿಸಿದನು‌. ಈಗ ನರೇಂದ್ರನಾಥ ಸ್ವಾಮಿ ವಿವೇಕಾನಂದನಾಗಿ ಬದಲಾದನು. 

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

                              ಸ್ವಲ್ಪ ದಿನಗಳಲ್ಲೇ ಸ್ವಾಮಿ ವಿವೇಕಾನಂದರ ಗುರು ಶ್ರೀರಾಮಕೃಷ್ಣ ಪರಮಹಂಸರ ನಿಧನವಾಯಿತು. ಕೆಲ ದಿನಗಳ ತನಕ ಅವರು ಸ್ವಲ್ಪ ಅಲೆಮಾರಿಯಾದರು. ಅದಾದ ನಂತರ ಬಾರಾನಗರದಲ್ಲಿ ಒಂದು ಚಿಕ್ಕ ಮಠವನ್ನು ಸ್ಥಾಪಿಸಿ ಅದನ್ನು ಆಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತಿಸಿದರು. ಅಲ್ಲಿಂದಲೇ ತಮ್ಮ ಉಪದೇಶವನ್ನು ಪ್ರಾರಂಭಿಸಿದರು. "Awake Arise and Stop not till the Goal is reached" ಎಂದೇಳಿ ಭಾರತದ ಯುವಕರನ್ನು ಬಡಿದೆಬ್ಬಿಸಿದರು. 12 ವರ್ಷ ಭಾರತದಾದ್ಯಂತ ಸಂಚರಿಸಿ ರಾಷ್ಟ್ರಜಾಗೃತಿಯನ್ನು ಮೂಡಿಸಿದರು‌. ಭಾರತ ದೇಶ ಸ್ವಾಮಿ ವಿವೇಕಾನಂದರ ಶ್ರೇಷ್ಠ ಪ್ರೇಮವಾಗಿತ್ತು. ದೇಶ ಪತನವಾಗುತ್ತಿರುವುದು ಅವರ ದೊಡ್ಡ ದು:ಖವಾಗಿತ್ತು. ಎಲ್ಲಿ ತನಕ ಭಾರತದ ಜನ ಸ್ಪಿರುಚವಲಿ ಎಚ್ಚರವಾಗಲ್ಲವೋ ಅಲ್ಲಿ ತನಕ ಅವರು ಮುಂದೆ ಬರಲ್ಲ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಭಾರತದಿಂದ ಅವರಿಗೆ ಸಹಾಯ ಹಾಗೂ ಸಮರ್ಥನೆ ಬೇಕಾಗಿತ್ತು. ಆದರೆ ಅದವರಿಗೆ ಸಿಗಲಿಲ್ಲ. ಹೀಗಾಗಿ ಅವರು ವಿದೇಶದತ್ತ ಮುಖ ಮಾಡಿದರು. ಆದರೆ ಅಲ್ಲಿಯೂ ಏನು ಸಿಗಲಿಲ್ಲ‌. ಏಕೆಂದರೆ ಅವರು ಚಿಕ್ಯಾಗೋಗೆ ಹೋದಾಗ ಅಲ್ಲಿದ್ದ ಭಾಷಣ ಮಾಡಿಸುವ ಸಂಸ್ಥೆಗಳು ಅವರಿಂದ ಭಾಷಣ ಮಾಡಿಸಿ ತಾವು ಹಣ ಮಾಡಿಕೊಂಡವು‌. ಅವರಿಗೆ ಬರೀ 200 ಡಾಲರಗಳನ್ನಷ್ಟೇ ನೀಡಿದವು‌. ಹಣದ ಕೊರತೆ ಅವರನ್ನು ಬಹಳಷ್ಟು ಕಾಡಿತು. ಭಾರತದ ಕೆಲವು ಮಿಷನರಿ ಪತ್ರಿಕೆಗಳು ಅವರ ಬಗ್ಗೆ ಕೇವಲವಾಗಿ ಬರೆದವು‌. 

                            ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ಶ್ರೀ ರಾಮಕೃಷ್ಣರ ಬಯಕೆಯನ್ನು ಈಡೇರಿಸುವುದಕ್ಕಾಗಿ 1893ರಲ್ಲಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. ಅಲ್ಲಿ ಅವರು ಭಾರತದ ಸನಾತನ ಹಿಂದೂ ಧರ್ಮ, ವೇದ ಹಾಗೂ ಯೋಗವನ್ನು ಪಾಶ್ಚಾತ್ಯ ದೇಶಗಳಿಗೆ ಪರಿಚಯಿಸಿದರು. ಸಾಗರದಾಚೆ ಹಿಂದೂ ಧರ್ಮವನ್ನು ಪ್ರಚಾರ ಮಾಡಿದ ಮೊದಲ ವ್ಯಕ್ತಿ ಅವರಾಗಿದ್ದಾರೆ‌. ವಿದೇಶಿಗರಿಗೆ ನಮ್ಮ ರಾಷ್ಟ್ರದ ಶ್ರೇಷ್ಠತೆಯ ಬಗ್ಗೆ ತಿಳಿಸಿಕೊಟ್ಟರು. ಭಾರತದ ಮಣ್ಣೇ ನನಗೆ ಪವಿತ್ರ, ಅದರ ಗಾಳಿಯೇ ನನಗೆ ಪವಿತ್ರ, ಅದೇ ನನ್ನ ತೀರ್ಥಕ್ಷೇತ್ರ, ಮಾತ್ರಭೂಮಿಯಾದ ಭಾರತವೇ ನನ್ನ ದೇವರು ಎಂದೇಳಿದರು‌. ತಮ್ಮ ಭಾಷಣದಲ್ಲಿ ವಿದೇಶಿಯರನ್ನು "ಅಮೇರಿಕಾದ ನನ್ನ ಸಹೋದರ ಸಹೋದರಿಯರೇ..." ಎಂದು ಸಂಭೋದಿಸುವ ಮೂಲಕ ಅಲ್ಲಿ ನೆರೆದಿದ್ದ ಏಳು ಸಹಸ್ರ ಜನರಿಂದ ಚಪ್ಪಾಳೆಯ ಸುರಿಮಳೆ ಗೈಯ್ಯಿಸಿಕೊಂಡರು. ಈ‌ ಮೂಲಕ ಇಡೀ ಜಗತ್ತಿಗೆ ವಿಶ್ವ ಸಹೋದರತೆ, ಮತ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಾರಿ ಹೇಳಿದರು‌. 

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada

                      ನ್ಯೂಯಾರ್ಕ್ ಹೆರಾಲ್ಡ್ ಸ್ವಾಮಿ ವಿವೇಕಾನಂದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಅವರು ಸುಂಟರಗಾಳಿಯ ಹಿಂದೂ ಎಂದೇ ಹೆಸರಾದರು. ನ್ಯೂಯಾರ್ಕನಲ್ಲಿ ವೇದಾಂತ ಸಮಾಜ ಸ್ಥಾಪಿಸಿದರು. ಪ್ಯಾರಿಸ್ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. ಭಾರತಕ್ಕೆ ಮರಳಿ ಬಂದಾಗ "Youngers are the pillars of the nation" ಎಂದೇಳಿದರು. 

                      ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣರ ಸಂದೇಶವನ್ನು ಪ್ರಚಾರ ಮಾಡಲು 1897ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ ರಾಮಕೃಷ್ಣ ಮಿಷನನ್ನು ಪ್ರಾರಂಭಿಸಿದರು. ನಂತರ ದೇಶ ವಿದೇಶಗಳಲ್ಲಿ ಇದರ ನೂರಾರು ಶಾಖೆಗಳು ಆರಂಭವಾದವು‌. ವಿವೇಕಾನಂದರು ಯುವಕರೇ ದೇಶದ ನಿಜವಾದ ಸಂಪತ್ತು ಎಂದರು. ಏಳಿ ಎದ್ದೇಳಿ ಎಚ್ಚರಾಗಿ ಗುರಿ ಮುಟ್ಟುವ ತನಕ ‌ನಿಲ್ಲದಿರಿ ಎಂದು ಕರೆ ನೀಡಿದರು. ಯುವಕರು ಅನಕ್ಷರತೆ, ಅನಾಚಾರ, ಬಡತನ ಮೊದಲಾದವುಗಳನ್ನು ನಿವಾರಿಸಲು ಪಣತೊಡಬೇಕೆಂದು ಕರೆ ನೀಡಿದರು. ಮೊದಲು ವಿದ್ಯೆ ಕಲಿಯಬೇಕು, ರಾಷ್ಟ್ರದ ಅಭಿವೃದ್ಧಿಗೆ ಬೇಕಾದ ಶಾಂತಿ, ಧೈರ್ಯ, ಶಕ್ತಿ, ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಭಾರತದ ಪ್ರಗತಿಗೆ ಸದಾ ಕ್ರಿಯಾಶೀಲರಾಗಿರಬೇಕೆಂದರು. 

                             ಭಾರತದ ಯುವಕರನ್ನು ಮೋಟಿವೇಟ ಮಾಡುತ್ತಾ ಸಾಗಿದ್ದ ಸ್ವಾಮಿ ವಿವೇಕಾನಂದರು ಜುಲೈ 4, 1902ರಂದು ಕಲ್ಕತ್ತಾದ ಬೇಲೂರ ಮಠದಲ್ಲಿ ‌ಧ್ಯಾನ ಮಾಡುತ್ತಾ ಕೊನೆಯುಸಿರೆಳೆದರು‌‌. ಅವರನ್ನು ಭಾರತೀಯ ಆಧ್ಯಾತ್ಮ ಪಿತಾಮಹ, ವೇದಾಂತ ಕೇಸರಿ ಎಂದು ಗುರುತಿಸಲಾಗಿದೆ. ಅವರ ಜನ್ಮವನ್ನು ರಾಷ್ಟ್ರೀಯ ಯುವದಿನವೆಂದು ಆಚರಿಸಲಾಗುತ್ತದೆ. ವಿವೇಕಾನಂದರ ಮಾತುಗಳು ಇಂದಿಗೂ ಲಕ್ಷಾಂತರ ಯುವಕರಿಗೆ ಸರಿದಾರಿಯಲ್ಲಿ ಸಾಗಲು ದಾರಿ ತೋರಿಸುತ್ತಿವೆ...

ಸ್ವಾಮಿ ವಿವೇಕಾನಂದರ ಜೀವನ ಕಥೆ - Life Story of Swami Vivekananda in Kannada
Blogger ನಿಂದ ಸಾಮರ್ಥ್ಯಹೊಂದಿದೆ.