ಮೋಳೆ ಓಘಸಿದ್ದೇಶ್ವರರ ಕಥೆ - Siddheshwar Temple Mole - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮೋಳೆ ಓಘಸಿದ್ದೇಶ್ವರರ ಕಥೆ - Siddheshwar Temple Mole

                                     ಮೋಳೆ ಓಘಸಿದ್ದೇಶ್ವರರ ಕಥೆ - Siddheshwar Temple Mole

                             ಹಾಯ್ ಫ್ರೆಂಡ್ಸ್, ನಾನು ನಿಮ್ಮ ಮಾಯಾ. ನಿನ್ನೆ ನಾನು ನನ್ನ ಯೂಟ್ಯೂಬ್ ಚಾನೆಲಗಾಗಿ Vlog ವಿಡಿಯೋ ಮಾಡುವುದಕ್ಕಾಗಿ ಮೋಳೆ ಗ್ರಾಮದ ಓಘಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಈ ಮೋಳೆ ಗ್ರಾಮಕ್ಕೆ ಹೊನ್ನ ಮೋಳೆ ಅಂತಲೂ ಕರೆಯುತ್ತಾರೆ. ಈ ಗ್ರಾಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ಸೇರುತ್ತದೆ. ಈ ಗ್ರಾಮದಲ್ಲಿರುವ ಓಘಸಿದ್ದೇಶ್ವರ ದೇವರ ಬಗ್ಗೆ ನನಗೆ ದೊರೆತ ಕೆಲವು ಮಾಹಿತಿಗಳನ್ನು ನಾನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ.  Please Like 👍 ಮಾಡಿ ಮತ್ತು ಸಪೋರ್ಟ್ ಮಾಡಿ. Vlog ವಿಡಿಯೋದ ಲಿಂಕ್ ಇಂತಿದೆ - https://youtu.be/RRlGHDLqNys     

                               ಶ್ರೀ ಅಮೋಘ ಸಿದ್ದರು ಶಿವನ ಅತಿ ಪ್ರೀತಿಯ ಭಕ್ತರು. ಒಂದು ದಿನ ನಾರದ ಮುನಿಗಳು "ಶಿವನ ಪ್ರಿಯ ಭಕ್ತ ಅಮೋಘ ಸಿದ್ದರು" ಎಂದು ದೇವಿ ಪಾರ್ವತಿಗೆ ಹೇಳುತ್ತಾರೆ. ಆವಾಗ ದೇವಿ ಪಾರ್ವತಿ ಇದನ್ನು ಒಪ್ಪಿಕೊಳ್ಳುವುದಿಲ್ಲ. ಶಿವನ ಮುಂದೆ ದೇವಿ ಪಾರ್ವತಿ "ನಾನು ಅಮೋಘ ಸಿದ್ದರನ್ನು ಪರೀಕ್ಷಿಸಬೇಕು, ಪರೀಕ್ಷಿಸಿ ಆಮೇಲೆ ಒಪ್ಪಿಕೊಳ್ಳುತ್ತೇನೆ..." ಎಂದು ಹೇಳುತ್ತಾರೆ. ಆವಾಗ ಶಿವನು "ಧಾರಾಳವಾಗಿ ಪರೀಕ್ಷಿಸು" ಎಂದು ಹೇಳಿದನು. ಆಗ ದೇವಿ ಪಾರ್ವತಿ ಅಮೋಘ ಸಿದ್ದರನ್ನು ಪರೀಕ್ಷಿಸುತ್ತಾರೆ. ದೇವಿ ಪಾರ್ವತಿ ತೆಗೆದುಕೊಂಡ ಎಲ್ಲ ಪರೀಕ್ಷೆಗಳಲ್ಲಿ ಶ್ರೀ ಅಮೋಘ ಸಿದ್ದರು ಗೆಲ್ಲುತ್ತಾರೆ, ಜೊತೆಗೆ ದೇವಿ ಪಾರ್ವತಿ ಕೂಡ "ಶಿವನ ಅತಿ ಪ್ರಿಯವಾದ ಭಕ್ತ ಶ್ರೀ ಅಮೋಘ ಸಿದ್ದ" ಎಂದು ಒಪ್ಪಿಕೊಳ್ಳುತ್ತಾರೆ.

            ಶಿವ ಪಾರ್ವತಿ ಇಬ್ಬರು ಅಮೋಘ ಸಿದ್ಧರನ್ನು ಆಶೀರ್ವದಿಸಿ "ಭೂಲೋಕಕ್ಕೆ ಹೋಗಿ ಜನರನ್ನು ಉದ್ದಾರ ಮಾಡು" ಎಂದು ಹೇಳಿ ಕಳುಹಿಸುತ್ತಾರೆ. ಆವಾಗಿನಿಂದ ಭೂಮಿಯ ಮೇಲೆ ಸಾಕಷ್ಟು ಪವಾಡಗಳು ನಡೆಯುತ್ತಿವೆ. ಪವಾಡ ಪುರುಷ ಶ್ರೀ ಅಮೋಘ ಸಿದ್ದರ ಮಗನಾದ ಬೀಳ್ಯಾನ ಸಿದ್ಧರ ಮಗ ಈ ಶ್ರೀ ಓಘಸಿದ್ದೇಶ್ವರ. ಓಘಸಿದ್ದೇಶ್ವರರ ಮೂಲವೇ ಅಮೋಘ ಸಿದ್ದರ ವಂಶವಾಗಿದೆ. 

                    ಒಮ್ಮೆ ಅಮೋಘ ಸಿದ್ದರು ತನ್ನ ಎಲ್ಲಾ ಮಕ್ಕಳು ಮತ್ತು ಮೊಮ್ಮಕಳ್ಳನ್ನು ಕರೆದು ಒಂದು ಸೂಚನೆಯನ್ನು ಕೊಡುತ್ತಾರೆ. ಎಲ್ಲರೂ ಲೋಕ ಕಲ್ಯಾಣಕ್ಕಾಗಿ ಒಂದೊಂದು ಊರಿಗೆ ಹೋಗಬೇಕು. ನೀವೆಲ್ಲರೂ ಹೋಗುವಾಗ ನಾನು ಎಲ್ಲರಿಗೂ ಒಂದೊಂದು ವಸ್ತುಗಳನ್ನು ಕೊಡುತ್ತೇನೆ ಎಂದು ಹೇಳುತ್ತಾರೆ. ನಾನು ಕೊಡುವ ವಸ್ತುಗಳಲ್ಲಿ ಶಕ್ತಿಯಿದೆ ನೀವು ಆ ಶಕ್ತಿಯಿಂದ ಜನರನ್ನು ಉದ್ದಾರ ಮಾಡಿ ಎಂದು ಹೇಳುತ್ತಾರೆ. ಆದರೆ ಅವರು ಬೆತ್ತವನ್ನು ನೀಡುವಾಗ ಒಂದು ಷರತ್ತನ್ನು ಹಾಕುತ್ತಾರೆ. ಅದೇನೆಂದರೆ ಯಾರು ಈ ಬೆತ್ತವನ್ನು ತೆಗೆದುಕೊಳ್ಳುತ್ತಾರೋ ಅವರಿಗೆ ಮಕ್ಕಳಾಗಲ್ಲ ಅಂತ ಹೇಳಿದಾಗ ಯಾರು ಕೂಡ ಆ ಬೆತ್ತವನ್ನು ತೆಗೆದುಕೊಳ್ಳುವುದಿಲ್ಲ ಆವಾಗ ಓಘಸಿದ್ದೇಶ್ವರರು ನಾನು ಆ ಬೆತ್ತವನ್ನು ತೆಗೆದುಕೊಳ್ಳುತ್ತೇನೆ ನನಗೆ ಬೆತ್ತವನ್ನು ಕೊಡಿ ಅಂತಾ ಹೇಳುತ್ತಾರೆ. ಆವಾಗ ಅಮೋಘ ಸಿದ್ಧರು ನಿನ್ನ ಮಡದಿಯನ್ನು ಕೇಳಿ ಆ ಮೇಲೆ ಬೆತ್ತವನ್ನು ತಗೋ ಎಂದು ಹೇಳುತ್ತಾರೆ ಇಲ್ಲಾ ನನಗೆ ಆ ಬೆತ್ತವನ್ನು ಕೊಡಿ ನನಗೆ ಮಕ್ಕಳಿಗಿಂತ ಜನರ ಉದ್ಧಾರವೇ ಮುಖ್ಯ ಎಂದು ಹೇಳಿ ಬೆತ್ತವನ್ನು ಪಡೆದುಕೊಳ್ಳುತ್ತಾರೆ. ಆವಾಗ ಅಮೋಘ ಸಿದ್ದರು ನೀನು ಉಪ್ಪಾರ ಅಂದರೆ ಈಗಿನ ಮೋಳೆ ಗ್ರಾಮಕ್ಕೆ ಹೋಗಿ ಜನರ ಉದ್ದಾರ ಮಾಡು ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಓಘಸಿದ್ದೇಶ್ವರರು ಮೋಳೆ ಗ್ರಾಮಕ್ಕೆ ಬಂದು ತಮ್ಮ ಪವಾಡವನ್ನು ಮಾಡುವಾಗ ಮಣ್ಣನ್ನು ಹಿಡಿದು ಹೊನ್ನು ಮಾಡುತ್ತಾರೆ. ಆವಾಗಿನಿಂದ ಜನ ಮೊಳೆ ಗ್ರಾಮಕ್ಕೆ ಹೊನ್ನ ಮೋಳೆ ಎಂದು ಕರೆಯಲು ಪ್ರಾರಂಭಿಸಿದರು. 

                   ಕಾಲ ಸರಿದಂತೆ ಓಘಸಿದ್ದೇಶ್ವರರ ಹೆಂಡತಿ ಯಾವಾಗಲೂ ಚಿಂತೆಯಲ್ಲಿ ಮಗ್ನರಾಗುತ್ತಿದ್ದರು. ಆವಾಗ ಓಘಸಿದ್ದೇಶ್ವರರು ತಮ್ಮ ಮಡದಿಗೆ ಏನಾಯಿತು ಎಂದು ಕೇಳಿದರು. ಆಗಾಕೆ ನನಗೆ ಮಕ್ಕಳು ಬೇಕು ಅಂದಾಗ ಓಘಸಿದ್ದೇಶ್ವರರು ಇಲ್ಲಾ ನಾನು ಬೆತ್ತ ಪಡೆದಿದ್ದೇನೆ ಆದಕಾರಣ ನಮಗೆ ಮಕ್ಕಳು ಆಗಲ್ಲ ಅಂದಾಗ ಅವರ ಹೆಂಡತಿ ಹಠ ಹಿಡಿಯುತ್ತಾಳೆ. ಆವಾಗ ಓಘಸಿದ್ದೇಶ್ವರರು ನನ್ನ ಅಣ್ಣನಿಗೆ ನಾಲ್ಕು ಜನ ಮಕ್ಕಳಿದ್ದಾರೆ, ಅದರಲ್ಲಿ ಒಬ್ಬರನ್ನು ಕರೆದುಕೊಂಡು ಬರೋಣ ಎಂದು ಹೇಳಿದಾಗ ಆಕೆ ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ.

                     ಓಘಸಿದ್ದೇಶ್ವರರು ತಮ್ಮ ಅಣ್ಣನಾದ ಇಂದಪೂರದ ಬಳ್ಳೊಗಸಿದ್ದರ ಹತ್ರಾ ಹೋಗಿ ಮಗುವನ್ನು ಕೇಳಿದಾಗ ಆವಾಗ ಬಳ್ಳೊಗಸಿದ್ದರು ಇಲ್ಲಾ ನಾನು ನನ್ನ ಮಗನನ್ನು ಕೊಡುವುದಿಲ್ಲ ಅಂತಾ ಹೇಳುತ್ತಾರೆ. ಆವಾಗ  ಓಘಸಿದ್ದೇಶ್ವರರಿಗೆ ದುಃಖದಲ್ಲಿ ಏನ್ ಮಾಡಬೇಕು ಅಂತಾ ಗೊತ್ತಾಗದೆ ಮನೆ ಹೊರಗೆ ಆಡುತ್ತಿದ್ದ ಚಿಕ್ಕ ಮಗುವನ್ನು ತೆಗೆದುಕೊಂಡು ಓಡಿ ಬರುತ್ತಾರೆ. ಆದರೆ ಆ ಮಗುವಿನ ತಂದೆ ತಾಯಿ ನೋಡಿ ಮಗನನ್ನು ಕೊಡು ಅಂತಾ ಓಘಸಿದ್ದೇಶ್ವರರ ಬೆನ್ನು ಹತ್ತುತ್ತಾರೆ. ಓಘಸಿದ್ದೇಶ್ವರರು ಅವರ ಮಾತುಗಳನ್ನು ಲೆಕ್ಕಿಸದೆ ಹಾಗೆಯೇ ಓಡೋಡಿ ಬಂದು ಐನಾಪೂರ ಹತ್ತಿರ ಬಂದಾಗ ಮಗುವಿನ ತಂದೆತಾಯಿಗಳು ಇನ್ನೇನು ಮಗನನ್ನು ಕಿತ್ತುಕೊಳ್ಳಬೇಕು ಅನ್ನುವಷ್ಟರಲ್ಲಿ ಓಘಸಿದ್ದೇಶ್ವರರು ಆ ಮಗುವನ್ನು ಕೆರೆಯಲ್ಲಿ ಎಸೆದು ಬಿಡುತ್ತಾರೆ.

                   ಆಗ ಗಂಡ ಹೆಂಡತಿ ತುಂಬಾ ದುಃಖ ಪಡುತ್ತಾರೆ. ಆವಾಗ ಓಘಸಿದ್ದೇಶ್ವರರು ಆ ಮಗು ಯಾರ ಹತ್ತಿರ ಬರಬೇಕು ಎಂದು ಹೇಳುತ್ತದೆಯೋ ಅವರಿಗೆ ಆ ಮಗು ಸೇರುತ್ತದೆ ಎಂದು ಹೇಳುತ್ತಾರೆ. ಆವಾಗ ಓಘಸಿದ್ದೇಶ್ವರರ ಅಣ್ಣನು ಮೂರು ಸಲ ಸಿದ್ಧ, ಸಿದ್ಧ, ಸಿದ್ಧ ಎಂದು ಕರೆದರೂ ಆ ಮಗು ಬರಲೇ ಇಲ್ಲ. ನಂತರ ಓಘಸಿದ್ದೇಶ್ವರರು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಕೆರೆಯಲ್ಲಿ ಎಸೆದು ನೀನು ನಿಜವಾಗಿಯೂ ನನ್ನ ಪ್ರೀತಿಯ ಮಗ ಆಗಿದ್ದರೆ ಮೇಲೇ ಬಾ ಎಂದು ಹೇಳಿದಾಗ ಆಗ ಆ ಮಗು ಬೆತ್ತವನ್ನು ಹಿಡಿದು ಓಘಸಿದ್ದೇಶ್ವರರ ಹತ್ತಿರ ಬಂದಿತು. ಆಗ ಅವರು ಖುಷಿಯಿಂದ ಆ ಮಗುವನ್ನು ಮುದ್ದಾಡಿ ಕೆರೆಸಿದ್ದ ಅಂತಾ ನಾಮಕರಣ ಮಾಡುತ್ತಾರೆ.

                  ಓಘಸಿದ್ದೇಶ್ವರರು ಕೆರೆಸಿದ್ದನಿಗೆ  ನೀನು ಐನಾಪೂರ ಗ್ರಾಮದಲ್ಲಿ ನೆಲೆಸಿ ಜನರ ಉದ್ದಾರ ಮಾಡು ಯಾವತ್ತು ಈ ಗ್ರಾಮದ ಗಡಿಯನ್ನು ದಾಟಬೇಡಾ ಎಂದು ಹೇಳುತ್ತಾರೆ. ಹಾಗೆಯೇ ನಾನು ಇದೇ ದಿನ ಪ್ರತಿವರ್ಷ ನಿನಗೆ ಬಂದು ಭೇಟಿ ಆಗುತ್ತೇನೆ ಎಂದು ಹೇಳಿದರು. ಅವಾಗಿನಿಂದ ಇಲ್ಲಿಯವರೆಗೆ ಸಂಕ್ರಾತಿಯ ದಿನ ಮೋಳೆ ಗ್ರಾಮದಲ್ಲಿರುವ ಓಘಸಿದ್ದೇಶ್ವರರು ಐನಾಪೂರಕ್ಕೆ ಹೋಗಿ ಬರುತ್ತಾರೆ. ಈಗ ಐನಾಪೂರದಲ್ಲಿ ಕೆರೆಸಿದ್ದರ ದೊಡ್ಡ ದೇವಸ್ಥಾನವಿದೆ. 

                        ಈಗ ಓಘಸಿದ್ದೇಶ್ವರರು ನಂಬಿ ಬಂದ ಭಕ್ತರಿಗೆ ಬೇಡಿದ ವರವನ್ನು ನೀಡುತ್ತಾ ಮೋಳೆ ಗ್ರಾಮದ ಒಡೆಯನಾಗಿ ನೆಲೆಸಿದ್ದಾರೆ. ಪ್ರತಿ ವರ್ಷ ಯುಗಾದಿ ದಿನದಂದು ಮೂರು ಕವಲಗಳನ್ನು ಹಚ್ಚುತ್ತಾರೆ. ಹಿಂಗಾರಿ, ಮುಂಗಾರಿ ಮತ್ತು ಊರು ಕಾಯುವುದು. ಇಲ್ಲಿಯವರೆಗೂ ಏನು ದೇವರು ಕವಲಿನ ರೂಪದಲ್ಲಿ ಹೇಳುತ್ತಾರೋ ಅದರ ಪ್ರಕಾರವೇ ನಡೆಯುತ್ತಾ ಬಂದಿದೆ. Friends ಇದಿಷ್ಟು ಮೋಳೆ ಓಘಸಿದ್ದೇಶ್ವರರ ಕಥೆ. ಈ ಮಾಹಿತಿಯನ್ನು ಒದಗಿಸಿದ ಗ್ರಾಮ ನಿವಾಸಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾಗಿರುವ ಶ್ರೀಯುತ ಬಸವರಾಜ ತೇಲಿಯವರಿಗೆ ಮಾಯಾಶ್ರೀ ಮಾಳಿ ತಂಡದಿಂದ ಧನ್ಯವಾದಗಳು.🙏🙏 ಫ್ರೆಂಡ್ಸ್ ನಿಮ್ಮ ಊರಲ್ಲಿ ಇದೆ ತರಹದ ಯಾವುದಾದರೂ ಐತಿಹಾಸಿಕ ಅಥವಾ ಪೌರಾಣಿಕ ದೇವಸ್ಥಾನಗಳಿದ್ದರೆ ನನಗೆ ಇನ್ಸ್ಟಾಗ್ರಾಮಲ್ಲಿ ತಿಳಿಸಿ, ನಾನು ನಮ್ಮ ತಂಡದೊಂದಿಗೆ ಬಂದು ಭೇಟಿ ನೀಡುತ್ತೇನೆ.  ಮತ್ತೆ ಸಿಗೋಣಾ ಧನ್ಯವಾದಗಳು🙏🙏... 

ಮೋಳೆ ಓಘಸಿದ್ದೇಶ್ವರರ ಕಥೆ - Siddheshwar Temple Mole

Blogger ನಿಂದ ಸಾಮರ್ಥ್ಯಹೊಂದಿದೆ.