ನಾನು ನಮ್ಮ ಕಂಪನಿಯ ರೋರಿಂಗ ಇಂಡಿಯಾ ಟ್ಯೂರಿಸಮ್ ಪ್ರೊಜೆಕ್ಟಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಶೂಟಿಂಗ್ ಮಾಡ್ತಿದ್ದೆ. ಆವಾಗ ನನಗೆ ಕವಟೆ ಮಹಂಕಾಳ - ತಾಸಗಾಂವ ಹೈವೇ ಪಕ್ಕದಲ್ಲಿ ಒಂದು ವಿಚಿತ್ರ ಕಲ್ಲುಗಳ ಚಕ್ರವ್ಯೂಹ ಕಾಣಿಸಿತು. ನಾನು ಕುತೂಹಲ ಕೆರಳಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅದನ್ನು ನೋಡಲು ಹೋದೆ. ಮೊದಲು ಇದನ್ನು ನೋಡಿದಾಗ ನನಗೂ ಆಶ್ಚರ್ಯವಾಯಿತು. ಇದು ಏನು ಅಂತಾ ತಿಳಿಯದಾಯಿತು. ಈ ಕಲ್ಲುಗಳ ಚಕ್ರವ್ಯೂಹದ ರಹಸ್ಯವೇನು? ಎಂಬ ಚಿಂತೆಯಲ್ಲಿ ನಾನು ಬಿದ್ದೆ. ಕೊನೆಗೆ ಏನು ತಿಳಿಯದೆ ಸ್ಥಳಿಯರನ್ನು ವಿಚಾರಿಸಿದೆ ಆವಾಗ ನನಗೆ ಇದು ಕುಲವಂತಿನಿಯ ಚಕ್ರವ್ಯೂಹ ಅಂತಾ ಗೊತ್ತಾಯಿತು.

ಸುಮಾರು 200 - 300 ವರ್ಷಗಳ ಹಿಂದೆ ಕುಲವಂತಿನಿ ಎಂಬ ನರ್ತಕಿ ಇದ್ದಳು. ಆಕೆಗೆ ಕಲಾವಂತಿನಿ ಅಂತಲೂ ಕರೆಯುತ್ತಿದ್ದರು. ಆಕೆ ತನ್ನ ಕಲೆಯನ್ನು ಆರಾಧಿಸುತ್ತಿದ್ದಳು, ನಾಟ್ಯವನ್ನು ಪ್ರೀತಿಸುತ್ತಿದ್ದಳು. ಅವಳಿಗೆ ಹಣ ಒಡವೆ ಅಂತಸ್ತು ಅಧಿಕಾರಗಳ ವ್ಯಾಮೋಹವಿರಲಿಲ್ಲ. ಕುಲವಂತಿನಿ ಬಹಳಷ್ಟು ಸುಂದರವಾಗಿದ್ದಳು. ಅವಳನ್ನು ನೋಡಿ ಗಂಡಸರು ಹುಚ್ಚರಾಗುವಷ್ಟು ಮತ್ತೆ ಹೆಣ್ಮಕ್ಕಳು ಹೊಟ್ಟೆಕಿಚ್ಚು ಪಡುವಷ್ಟು ಸೌಂದರ್ಯ ಅವಳಲ್ಲಿ ತುಂಬಿ ತುಳುಕುತ್ತಿತ್ತು.

ಕುಲವಂತಿನಿ ಊರೂರು ಪ್ರಯಾಣ ಮಾಡಿ ತನ್ನ ನಾಟ್ಯ ಕಲೆಯನ್ನು ಪ್ರದರ್ಶಿಸಿ ಜನರನ್ನು ರಂಜಿಸಿ ಅದರಿಂದ ಬಂದ ಹಣದಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಆವಾಗಿನ ಕಾಲದ ಜನರಿಗೆ ಈವಾಗಿನಂತೆ ಮೊಬೈಲ್ ಇಂಟರ್ನೆಟ್ ಸಿನಿಮಾ ಟಿವಿ ವಾಟ್ಸಾಪ ಯೂಟ್ಯೂಬನಂಥ ಯಾವುದೇ ಮನರಂಜನೆಗಳು ಇರಲಿಲ್ಲ. ಹೀಗಾಗಿ ಆವಾಗಿನ ಜನ ನಾಟ್ಯ ಪ್ರದರ್ಶನ ನಾಟಕ ಪ್ರದರ್ಶನಗಳಿಗೆ ಜಾತ್ರೆಯಂತೆ ಸೇರುತ್ತಿದ್ದರು. ಕುಲವಂತಿನಿಯ ನಾಟ್ಯವನ್ನು ನೋಡಲು ಸಾವಿರಾರು ಜನ ಸೇರುತ್ತಿದ್ದರು. ಜೊತೆಗೆ ಅವಳ ಸೌಂದರ್ಯದ ಚರ್ಚೆ ನಾಲ್ಕು ದಿಕ್ಕುಗಳಲ್ಲಿ ಹಬ್ಬಿತ್ತು.

ಕುಲವಂತಿನಿಯ ಸೌಂದರ್ಯದ ಪ್ರಶಂಸೆ ಒಬ್ಬ ರಾಜನ ಕಿವಿಗೂ ಕೂಡ ಬಿತ್ತು. ಆವಾಗ ಆತ ತನ್ನ ಅರಮನೆಯಲ್ಲಿ ಅವಳನ್ನು ನಾಟ್ಯ ಪ್ರದರ್ಶನ ಮಾಡಲು ಆಹ್ವಾನಿಸುತ್ತಾನೆ. ರಾಜನ ಆಹ್ವಾನದಂತೆ ಕುಲವಂತಿನಿ ಅರಮನೆಯ ಬಂದು ತನ್ನ ನಾಟ್ಯ ಕಲೆಯನ್ನು ಪ್ರದರ್ಶಿಸುತ್ತಾಳೆ. ಅವಳ ನಾಟ್ಯ ಕಲೆಗೆ ಮನಸೋತು ಜನರೆಲ್ಲ ಚಪ್ಪಾಳೆಯ ಸುರಿಮಳೆಗೈಯ್ಯುತ್ತಾರೆ. ಆದರೆ ರಾಜ ಮಾತ್ರ ಕುಲವಂತಿನಿಯ ಸೌಂದರ್ಯಕ್ಕೆ ಸೋತು ಬಿಡುತ್ತಾನೆ. ಅವಳ ಸೌಂದರ್ಯವನ್ನು ನೋಡಿ ಹುಚ್ಚನಾಗುತ್ತಾನೆ. ಯೌವ್ವನ ಪ್ರಾಯದ ಅವಿವಾಹಿತ ತರುಣಿ ಕುಲವಂತಿನಿಯಲ್ಲಿ ಸೌಂದರ್ಯ ತುಂಬಿ ತುಳುಕುತ್ತಿರುತ್ತದೆ. ಅವಳ ಹಾರಾಡುವ ಕೂದಲು, ನೀಳ ಎತ್ತರ, ಉದ್ದ ಮೂಗು, ಬಟ್ಟಲು ಕಣ್ಣುಗಳು, ಮುದ್ದಾದ ಮುಖ, ಬಳ್ಳಿಯಂತೆ ಬಳಕುವ ನಡು, ಕೆಂಪು ತುಟಿಗಳಲ್ಲಿನ ಮಾದಕ ನಗು, ಬೆಣ್ಣೆಯಂಥ ಕೊಮಲತೆ, ಹಾಲಿನಂಥ ಮೈಬಣ್ಣ, ಅರೆಬರೆ ಮುಚ್ಚಿದ ಎದೆಗೂಡನ್ನು ನೋಡಿ ರಾಜನ ಮನಸ್ಸು ನಿಯಂತ್ರಣ ತಪ್ಪಿ ಹೋಗುತ್ತದೆ. ರಾಜ ಅವಳಿಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆದರೆ ಕುಲವಂತಿನಿ ಅವನಾಸೆಯನ್ನು ನಯವಾಗಿ ತಿರಸ್ಕರಿಸಿ ಅಲ್ಲಿಂದ ಹೊರಟು ಹೋಗುತ್ತಾಳೆ.

ರಾಜ ಕುಲವಂತಿನಿಯ ಸೌಂದರ್ಯಕ್ಕೆ ಸಂಪೂರ್ಣವಾಗಿ ಮಾರು ಹೋಗಿರುತ್ತಾನೆ. ಆತ ಅವಳನ್ನು ಹಿಂಬಾಲಿಸಿ ಹೋಗುತ್ತಾನೆ. ಅವಳ ದಾರಿಯನ್ನು ಅಡ್ಡಗಟ್ಟಿ ಅವನನ್ನು ಮದುವೆಯಾಗುವಂತೆ ಪೀಡಿಸುತ್ತಾನೆ. ಆಗ ಕುಲವಂತಿನಿ ಅಲ್ಲಿದ್ದ ಕಲ್ಲುಗಳನ್ನೆಲ್ಲ ಒಂದೆಡೆಗೆ ಸೇರಿಸಿ ಒಂದು ಚಕ್ರವ್ಯೂಹವನ್ನು ತಯಾರಿಸುತ್ತಾಳೆ. ಆನಂತರ ರಾಜನಿಗೆ ನೀನು ನನ್ನ ಚಕ್ರವ್ಯೂಹವನ್ನು ಭೇದಿಸಿದರೆ ಮಾತ್ರ ನಿನ್ನನ್ನು ಮದುವೆಯಾಗುವೆ ಎಂಬ ಷರತ್ತನ್ನು ಹಾಕುತ್ತಾಳೆ. ಒಂದು ಕಡೆಯಿಂದ ಈ ಕಲ್ಲಿನ ಚಕ್ರವ್ಯೂಹದೊಳಗೆ ಪ್ರವೇಶಿಸಿ ಇನ್ನೊಂದು ಕಡೆಯಿಂದ ಹೊರಬರಬೇಕಾಗಿರುತ್ತದೆ. ಹಿಂದೆಜ್ಜೆ ಇಡೊವಂತಿರಲಿಲ್ಲ. ರಾಜ ಈ ಚಕ್ರವ್ಯೂಹವನ್ನು ಭೇದಿಸಲು ಪ್ರಯತ್ನಿಸುತ್ತಾನೆ. ಆದರೆ ಆತ ವಿಫಲನಾಗುತ್ತಾನೆ. ಆದರೆ ಸೋಲನ್ನು ಒಪ್ಪಿಕೊಳ್ಳಲ್ಲ.

ಕುಲವಂತಿನಿಯ ಸೌಂದರ್ಯಕ್ಕೆ ಹುಚ್ಚನಾದ ರಾಜ ಅವಳನ್ನು ಪಡೆಯುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ರಾಜ ಮತ್ತೆ ಮತ್ತೆ ಅವಳ ಚಕ್ರವ್ಯೂಹವನ್ನು ಭೇದಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಪದೇಪದೇ ವಿಫಲನಾಗುತ್ತಾನೆ. ಆಕ್ರೋಶಕ್ಕೆ ಒಳಗಾಗುತ್ತಾನೆ. ಅವನ ನಿಯತ್ತು ಕೆಟ್ಟು ತನ್ನನ್ನು ಬಂಧಿಸಿ ಅರಮನೆಗೆ ಕೊಂಡೊಯ್ದು ಬಲವಂತವಾಗಿ ಮದುವೆಯಾಗಬಹುದು ಎಂಬ ಭಯದಲ್ಲಿ ಕುಲವಂತಿನಿ ಅಲ್ಲಿಂದ ದೂರ ಹೊರಟು ಹೋಗುತ್ತಾಳೆ. ರಾಜ ನೂರಾರು ಸಲ ಅವಳ ಆ ಚಕ್ರವ್ಯೂಹವನ್ನು ಭೇದಿಸಲು ಪ್ರಯತ್ನಿಸಿ ಸೋತು ಅರಮನೆಗೆ ಹಿಂದಿರುತ್ತಾನೆ. ಅವಳನ್ನು ಹುಡುಕಿ ತರಲು ತನ್ನ ಸೈನಿಕರಿಗೆ ಆದೇಶಿಸುತ್ತಾನೆ. ಆದರೆ ಆಕೆ ಅವಳ ಕೈಗೂ ಸಹ ಸಿಗುವುದಿಲ್ಲ. ಕುಲವಂತಿನಿ ಮುಂದೆ ಎಲ್ಲಿಗೆ ಹೋದಳು ಮತ್ತು ಏನಾಯಿತು ಎಂದು ಯಾರಿಗೂ ತಿಳಿದಿಲ್ಲ.

ಕುಲವಂತಿನಿ ಒಂದು ಸ್ವತಂತ್ರ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಕನಸಲ್ಲಿ ರಾಜನ ಮದುವೆಯ ಕೋರಿಕೆ ತಿರಸ್ಕರಿಸಿ ಹೋಗಿ ತನ್ನ ಹೆಸರಿಗಿರುವ ಅರ್ಥದ ಗೌರವವನ್ನು ಅಜರಾಮಾರವಾಗಿಸುತ್ತಾಳೆ. ಕುಲವಂತಿನಿ ಎಂದರೆ ಒಳ್ಳೇ ಕುಲದ ಪವಿತ್ರ ಚಾರಿತ್ರ್ಯದ ಹೆಣ್ಣು ಎಂದರ್ಥ. ಅವಳು ನಿರ್ಮಿಸಿದ ಕಲ್ಲಿನ ಚಕ್ರವ್ಯೂಹ ಈಗ ಕುಲವಂತಿನಿ ಕೋಡ್ಯಾಚ್ ಮಾಳ ಅಂತಾ ಹೆಸರುವಾಸಿಯಾಗಿದೆ. ಮರಾಠಿಯಲ್ಲಿ ಕೋಡ್ಯಾಚ್ ಮಾಳ ಅಂದರೆ ಚಕ್ರವ್ಯೂಹ ಎಂದರ್ಥ. ಇದು ತಾಸಗಾಂವ ಸಿಟಿಯಿಂದ 18KM ದೂರದಲ್ಲಿರುವ ಯೋಗೆವಾಡಿ ಎಂಬ ಗ್ರಾಮದ ಹತ್ತಿರವಿದೆ. ನೀವು Ball in a Maze ಗೇಮನ್ನು ಆಡಿದ್ದರೆ ನೀವು ಕೂಡ ಇದನ್ನು ಸುಲಭವಾಗಿ ಭೇದಿಸಬಹುದು. ಇದರಲ್ಲಿ ಅಂಥ ಕಠಿಣತೆ ಏನಿಲ್ಲ. ಇದೊಂದು ದಂತಕಥೆಯಾಗಿದೆ. ಸದ್ಯಕ್ಕೆ ಯಾರು ಬೇಕಾದರೂ ಈ ಕಲ್ಲಿನ ಚಕ್ರವ್ಯೂಹವನ್ನು ಸುಲಭವಾಗಿ ಭೇದಿಸಬಹುದು. ಈ ತರಹದ ಕಲ್ಲಿನ ಚಕ್ರವ್ಯೂಹಗಳು ಮಹಾರಾಷ್ಟ್ರದ ಬಹಳಷ್ಟು ಹಳ್ಳಿಗಳಲ್ಲಿ ನೋಡಲು ಸಿಗುತ್ತವೆ. ಇದೊಂದು ಫನ್ ಆಗಿದೆ ಅಷ್ಟೇ.

ಈ ದಂತ ಕಥೆಯ ಜೊತೆಗೆ ಈ ಕುಲವಂತಿನಿ ಚಕ್ರವ್ಯೂಹಕ್ಕೆ ಕೆಲವೊಂದಿಷ್ಟು ಸುಳ್ಳು ಕಥೆಗಳು ಕೂಡ ಅಂಟಿಕೊಂಡಿವೆ. ಕೆಲವೊಂದಿಷ್ಟು ಜನ ಈ ಕಲ್ಲುಗಳ ಕೆಳಗೆ ಅಪಾರ ಪ್ರಮಾಣದ ನಿಧಿ ಇದೆ ಅಂತಾರೆ. ಯಾರಾದರೂ ಈ ಚಕ್ರವ್ಯೂಹವನ್ನು ಭೇದಿಸದೆ ಹೊರಬಂದರೆ ಅವರಿಗೆ ದುರಾದೃಷ್ಟ ಸುತ್ತಿಕೊಳ್ಳುತ್ತೆ ಅಂತಾ ಹೆದರಿಸುತ್ತಾರೆ. ಯಾರು ಇದನ್ನು ಯಶಸ್ವಿಯಾಗಿ ಭೇದಿಸಿ ಹೊರಬರುತ್ತಾರೋ ಅವರ ಅದೃಷ್ಟದ ಬಾಗಿಲು ತೆರೆಯುತ್ತೆ, ಅವರಿಗೆ ಸುಂದರವಾಗಿರುವ ಹೆಂಡತಿ ಸಿಗ್ತಾಳೆ ಎಂಬ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಾರೆ. ಇನ್ನೂ ಕೆಲವು ನಕಲಿ ಬಾಬಾಗಳು ಇದನ್ನು ಮಾಟ ಮಂತ್ರ ತಂತ್ರ ಪ್ರಯೋಗದ ಅಡ್ಡ ಮಾಡಿಕೊಂಡಿದ್ದಾರೆ. ಪಡ್ಡೆ ಹುಡುಗರು ಇದನ್ನು ಇಸ್ಪೀಟ ಹಾಗೂ ದುಶ್ಚಟಗಳ ತಾಣ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಅಂಧಭಕ್ತರು ಈ ಕಲ್ಲುಗಳಿಗೆ ಅರಿಶಿಣ ಕುಂಕುಮ ಹಚ್ಚಿ ದೇವರ ಉಗಮವನ್ನು ಸಹ ಮಾಡಿ ಬಿಟ್ಟಿದ್ದಾರೆ. ಅದೇನೆ ಇರಲಿ ಕುಲವಂತಿನಿಯ ಚಕ್ರವ್ಯೂಹ ಒಂದು ಕುತೂಹಲ ಕೆರಳಿಸುವ ಸ್ಥಳವಂತು ಆಗಿದೆ. ನೀವು ಜಸ್ಟ ಫನಗಾಗಿ ಇಲ್ಲಿಗೆ ಹೋಗಿ ನೋಡಬಹುದು. ಮೂಢನಂಬಿಕೆಗೆ ಅಥವಾ ಕಟ್ಟುಕಥೆಗಳಿಗೆ ಬಲಿಯಾಗಬೇಡಿ....
