ತೆನಾಲಿ ರಾಮಕೃಷ್ಣ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಗ್ರಾಮದವನು. ಅವನು ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ರಾಮಯ್ಯರನ್ನು ಕಳೆದುಕೊಂಡು ತಾಯಿ ಲಕ್ಷಮ್ಮರೊಂದಿಗೆ ತಾಯಿಯ ತವರೂರಾದ ತೆನಾಲಿಯಲ್ಲಿ ವಾಸಿಸುತ್ತಿದ್ದನು. ಅವನು ಶೈವನಾಗಿದ್ದರಿಂದ ಯಾವ ವೈಷ್ಣವ ವಿದ್ವಾಂಸನು ಸಹ ಅವನಿಗೆ ಶಿಕ್ಷಣವನ್ನು ನೀಡಲು ಮುಂದೆ ಬರಲಿಲ್ಲ. ರಾಮಕೃಷ್ಣನಲ್ಲಿ ಕಲಿಯುವ ಹಂಬಲವಿತ್ತು. ಆದರೆ ಅವನಿಗೆ ಕಲಿಸಲು ಗುರುಗಳು ಮುಂದಾಗಲಿಲ್ಲ. ಹೀಗಾಗಿ ವಿದ್ಯಾನುಗ್ರಹಕ್ಕಾಗಿ ಆತ ತನ್ನ ಕುಲದೇವತೆ ಕಾಳಿ ಮಾತೆಯನ್ನು ಪೂಜಿಸಲು ಪ್ರಾರಂಭಿಸಿದನು.
ಪ್ರತಿದಿನ ರಾಮಕೃಷ್ಣ ಬೆಳಿಗ್ಗೆ ಬೇಗನೆದ್ದು ಕಾಳಿಕಾ ದೇವಿ ದೇವಸ್ಥಾನದ ಪಕ್ಕದಲ್ಲಿದ್ದ ಕೊಳದಲ್ಲಿ ಸ್ನಾನ ಮಾಡಿ ಶುಚಿಯಾಗಿ ಸ್ವಚ್ಛ ಮನಸ್ಸಿನಿಂದ ದೇವಿಯ ದರ್ಶನ ಪಡೆಯುತ್ತಿದ್ದನು. ದೇವಿಯ ದರ್ಶನದಿಂದ ಅವನ ಮುಖದಲ್ಲಿನ ತೇಜಸ್ಸು ಇಮ್ಮಡಿಯಾಗುತ್ತಿತ್ತು. ಪ್ರತಿನಿತ್ಯ ದೇವಸ್ಥಾನಕ್ಕೆ ತೆರಳಿ ದೇವಿಯ ದರುಶನವನ್ನು ಪಡೆದುಕೊಳ್ಳುವುದು ರಾಮಕೃಷ್ಣನ ದಿನಚರಿಯಾಗಿತ್ತು. ಒಂದಿನ ಅವನಿಗೊಬ್ಬ ಸಾಧು ಸಿಕ್ಕನು.
ಸಾಧು : ಮಗು ನೀನು ಪ್ರತಿನಿತ್ಯ ಕಾಳಿಮಾತೆಯ ದರ್ಶನಕ್ಕೆ ಬರುತ್ತಿರುವೆಯಾ?
ರಾಮಕೃಷ್ಣ : ಹೌದು ಪೂಜ್ಯರೇ. ನಾನು ದಿನಾಲು ತಪ್ಪದೆ ತಾಯಿಯ ದರ್ಶನಕ್ಕೆ ಬರುತ್ತಿರುವೆ.
ಸಾಧು : ನಿನಗೆ ಕಾಳಿಮಾತೆಯಲ್ಲಿ ಅಷ್ಟೊಂದು ಭಕ್ತಿಯೇ?
ರಾಮಕೃಷ್ಣ : ಜಗದ ರಕ್ಷಕಿಯಾದ ಕಾಳಿಮಾತೆ ನನ್ನನ್ನು ರಕ್ಷಿಸುತ್ತಾ ಬಂದಿದ್ದಾಳೆ. ಹೀಗಿರುವಾಗ ಅವಳ ಮೇಲೆ ಭಕ್ತಿ ಇರದಿರುವುದೇ?
ಸಾಧು : ಮಗು ನೀನು ಅವಳನ್ನು ನೋಡಿರುವೆಯಾ?
ರಾಮಕೃಷ್ಣ : ಇಲ್ಲ ಪೂಜ್ಯರೇ. ಅವಳನ್ನು ನೋಡುವ ಭಾಗ್ಯ ನನ್ನ ಕಣ್ಣುಗಳಿಗೆ ಇಲ್ಲವೆನಿಸುತ್ತದೆ...
ಸಾಧು : ಹಾಗೇನ್ನದಿರು ಮಗು. ನೀನು ಅವಳ ಭಕ್ತ. ನಿನಗಾಗಿ ಅವಳು ಪ್ರತ್ಯಕ್ಷಳಾಗುತ್ತಾಳೆ. ನೀನೊಂದು ರಾತ್ರಿ ಕಾಳಿಮಾತೆಯ ಎದುರಲ್ಲಿ ಕುಳಿತು ಆರು ಕೋಟಿ ಸಲ ಅವಳನ್ನು ಭಕ್ತಿಭಾವದಿಂದ ಜಪಿಸು. ಆಗ ಕಾಳಿಮಾತೆ ನಿನ್ನೆದುರು ಪ್ರತ್ಯಕ್ಷಳಾಗುತ್ತಾಳೆ. ಅವಳನ್ನು ನೋಡಿ ಹೆದರದಿರು. ಏಕೆಂದರೆ ಅವಳಿಗೆ ಸಾವಿರ ಮುಖಗಳಿವೆ. ಅವಳ ಕೈಗಳಲ್ಲಿ ನೂರಾರು ಆಯುಧಗಳಿರುತ್ತವೆ. ಅರ್ಥವಾಯಿತೇ ಮಗು?
ರಾಮಕೃಷ್ಣ : ಆಯ್ತು ಪೂಜ್ಯರೇ. ಕಾಳಿಮಾತೆಯನ್ನು ನಾನು ದಿನನಿತ್ಯ ಪೂಜಿಸುತ್ತಾ ಬಂದಿರುವೆ. ನಾನು ಖಂಡಿತ ಹೆದರುವುದಿಲ್ಲ.
ಸಾಧು : ಹಾಗಾದರೆ ಮಗು ನೀನು ಕಾಳಿಮಾತೆಯ ದರ್ಶನ ಭಾಗ್ಯದಿಂದ ಪುನೀತನಾಗುತ್ತಿಯ. ತಪ್ಪದೆ ಅವಳ ಬಳಿ ಒಂದು ಒಳ್ಳೆಯ ವರವನ್ನು ಕೇಳಿಕೋ...
ಇಷ್ಟು ಹೇಳಿ ಸಾಧು ಹೊರಟು ಹೋದನು. ಅವನ ನಿರ್ಗಮನದ ನಂತರ ರಾಮಕೃಷ್ಣನಿಗೆ ಕಾಳಿಮಾತೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಹಂಬಲ ಹೆಚ್ಚಾಯಿತು. ಅವತ್ತಿನ ರಾತ್ರಿ ಆತ ಮನೆಗೆ ಹೋಗದೆ ಗರ್ಭಗುಡಿಯಲ್ಲಿದ್ದ ಕಾಳಿಮಾತೆಯ ದಿವ್ಯ ಮೂರ್ತಿಯ ಎದುರು ಕಾಳಿಮಾತೆಯನ್ನು ಭಕ್ತಿಯಿಂದ ಜಪಿಸಲು ಪ್ರಾರಂಭಿಸಿದನು. ಆತ ನಿರ್ಮಲ ಮನಸ್ಸಿನಿಂದ ಕಾಳಿಮಾತೆಯನ್ನು ಧ್ಯಾನಿಸುವುದರಲ್ಲಿ ಮಗ್ನನಾದನು. ಕತ್ತಲು ಕಳೆದು ಬೆಳಗಾಗಿದ್ದು ಅವನ ಅರಿವಿಗೆ ಬರಲೇ ಇಲ್ಲ. ಆತ ಭಕ್ತಿಯಲ್ಲಿ ಅಷ್ಟೊಂದು ಭಾವಪರವಶನಾಗಿದ್ದನು. ಬೆಳಗಾಗುವುದರಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದವಾಯಿತು. ದೇವಸ್ಥಾನದಲ್ಲಿದ್ದ ಘಂಟೆ, ಜಾಗಟೆಗಳು ತನ್ನಿಂದ ತಾನಾಗಿಯೇ ಬಾರಿಸಲು ಶುರುವಾದವು. ರಾಮಕೃಷ್ಣನನ್ನು ಯಾರೋ ಕೂಗಿ ಕರೆದಂತಾಯಿತು. ಆತ ಕಣ್ಬಿಟ್ಟು ನೋಡಿದಾಗ ಅವನಿಗೆ ಅಚ್ಚರಿ ಕಾದಿತ್ತು. ಸಾಧು ಹೇಳಿದಂತೆ ಸಾವಿರ ತಲೆಗಳುಳ್ಳ ಕಾಳಿಮಾತೆ ರೌದ್ರಾವತಾರದಲ್ಲಿ ಅವನೆದುರು ಪ್ರತ್ಯಕ್ಷಳಾಗಿದ್ದಳು. ಅವಳ ಕಂಗಳಲ್ಲಿ ಕೆಂಡದಂಥ ಕೋಪವಿತ್ತು. ಆದರೆ ರಾಮಕೃಷ್ಣ ಅವಳ ದಿವ್ಯ ಸ್ವರೂಪಕ್ಕೆ ಕಿಂಚಿತ್ತೂ ಹೆದರಲಿಲ್ಲ. ಅದರ ಬದಲಾಗಿ ಗಟ್ಟಿಯಾಗಿ ನಕ್ಕನು.
ಕಾಳಿಮಾತೆ : ರಾಮಕೃಷ್ಣ ಏನಿದು ನಿನ್ನ ಉದ್ಧಟತನ? ನಿನಗೆ ಸ್ವಲ್ಪವೂ ಭಯ ಭಕ್ತಿ ಇಲ್ಲವೇ?
ರಾಮಕೃಷ್ಣ : ಅಮ್ಮ ನಿನ್ನ ಮೇಲೆ ಭಕ್ತಿಯಿಲ್ಲದೆ, ನಿನ್ನನ್ನು ಭಜಿಸದೆ ನಾನು ಬದುಕಲು ಸಾಧ್ಯವೇ? ತಾಯಿ ನನಗೆ ನಿನ್ನ ಮೇಲೆ ಅಪಾರ ಭಕ್ತಿಯಿದೆ. ಆದರೆ ಎಳ್ಳಷ್ಟು ಭಯವಿಲ್ಲ...
ಕಾಳಿಮಾತೆ : ಏನು ಭಯವಿಲ್ಲವೇ? ಅದಕ್ಕೆ ನಕ್ಕೆಯಾ ನೀನು?
ರಾಮಕೃಷ್ಣ : (ಮತ್ತೆಮತ್ತೆ ನಗುತ್ತಾ) ಅಮ್ಮ ನಾನು ನಕ್ಕಿದ್ದು ನಿನ್ನ ನೋಡಿಯಲ್ಲ, ನಿನ್ನ ಕೈಗಳನ್ನು ನೋಡಿ...
ಕಾಳಿಮಾತೆ : ಏನು ನನ್ನ ಕೈಗಳನ್ನು ನೋಡಿ ನಗುತ್ತಿರುವೆಯಾ? ಏನಾಗಿದೆ ಅವುಗಳಿಗೆ?
ರಾಮಕೃಷ್ಣ : ತಾಯಿ ನಿನಗೆ ಸಾವಿರ ತಲೆಗಳಿದ್ದರೂ ಕೈಗಳು ಮಾತ್ರ ಎರಡೇ ಇವೆ. ಕೇವಲ ಒಂದು ತಲೆ ಇರುವ ನಾವೇ ನೆಗಡಿಯಾದಾಗ ಮೂಗನ್ನು ತೀಡಿತೀಡಿ ಸೋತು ಸುಣ್ಣವಾಗುತ್ತೇವೆ. ಆದರೆ ಸಾವಿರ ತಲೆಗಳಿರುವ ನೀನು, ಸಾವಿರ ಮೂಗುಗಳನ್ನು ಎರಡೇ ಕೈಗಳಿಂದ ಹೇಗೆ ಸಂಭಾಳಿಸುತ್ತಿಯಾ ಎಂಬುದನ್ನು ನೆನೆಸಿಕೊಂಡು ನಗು ಬಂತು ತಾಯಿ...
ಹೀಗೇಳಿ ರಾಮಕೃಷ್ಣ ಮತ್ತೆ ಜೋರಾಗಿ ನಕ್ಕನು. ಅವನ ಹಾಸ್ಯಪ್ರಜ್ಞೆಗೆ ಮನಸೋತು ಕಾಳಿಮಾತೆಯು ನಕ್ಕಳು.
ಕಾಳಿಮಾತೆ : ರಾಮಕೃಷ್ಣ ನೀನು ಎಲ್ಲರನ್ನು ನಗಿಸಲೇಂದೆ ಜನಿಸಿ ಬಂದಿರುವೆ. ನಿನ್ನ ಧೈರ್ಯ ಹಾಗೂ ಭಕ್ತಿಗಳೆರಡಕ್ಕು ನಾನು ಪ್ರಸನ್ನಳಾಗಿರುವೆ. ನೀನು ಸಾಮಾನ್ಯನಲ್ಲ. ಅದಕ್ಕಾಗಿ ನಾನು ನಿನಗೆ ಪ್ರೀತಿಯಿಂದ ಪರಮ ಶ್ರೇಷ್ಠವಾದ ವರವೊಂದನ್ನು ನೀಡುತ್ತಿರುವೆ. ನೀನು ಇನ್ಮುಂದೆ ಹೀಗೆಯೇ ಎಲ್ಲರನ್ನು ನಗಿಸುತ್ತಾ ವಿಕಟಕವಿ ಎಂದು ಪ್ರಸಿದ್ದನಾಗುವೆ. ನಿನ್ನ ಹಾಸ್ಯ ಕಲೆಯನ್ನು ನೊಂದ ಹೃದಯಗಳನ್ನು ನಗಿಸುವುದಕ್ಕಾಗಿ ಬಳಸಿಕೊಂಡು ಲೋಕಪ್ರಿಯನಾಗು. ಈಗಲೇ ನೀನು ಭವ್ಯವಾದ ವಿಜಯನಗರದ ಸಾಮ್ರಾಟ ಶ್ರೀಕೃಷ್ಣ ದೇವರಾಯನ ಆಸ್ಥಾನವನ್ನು ಸೇರಿಕೋ. ನಿನಗೆ ಶುಭವಾಗುವುದು ಎಂದು ಹಾರೈಸಿ ಕಾಳಿಮಾತೆ ಅದೃಶ್ಯಳಾದಳು.
ಕಾಳಿಮಾತೆಯ ಅನುಗ್ರಹದಿಂದ ಪುನೀತನಾದ ರಾಮಕೃಷ್ಣ ಖುಷಿಯಿಂದ ಶ್ರೀಕೃಷ್ಣ ದೇವರಾಯನ ಆಸ್ಥಾನದ ದಾರಿ ಹಿಡಿದು ಹೊರಟನು.... To be Continued...