ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada - tenali rama stories in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada - tenali rama stories in kannada

ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada

                         ಒಮ್ಮೆ ವಿಜಯನಗರದ ಪ್ರಖ್ಯಾತ ವ್ಯಾಪಾರಿ ಒಂದು ಒಂಟೆಯನ್ನು ಬಾಡಿಗೆ ತೆಗೆದುಕೊಂಡು ದೂರದ ಊರಿಗೆ ವ್ಯಾಪಾರಕ್ಕೆ ಹೋಗಿದ್ದನು. ಆ ಒಂಟೆಯ ಜೊತೆಗೆ ಅದರ ಮಾಲೀಕನು ಸಹ ಬಂದಿದ್ದನು. ಒಂದು ತಿಂಗಳ ನಂತರ ವ್ಯಾಪಾರಿ ಭರ್ಜರಿಯಾಗಿ ತನ್ನ ವ್ಯಾಪಾರವನ್ನು ಮುಗಿಸಿ ವಿಜಯನಗರಕ್ಕೆ ಮರಳಿ ಬಂದನು. ವ್ಯಾಪಾರಿ ತುಂಬಾ ಪ್ರಾಮಾಣಿಕನಾಗಿದ್ದನು. ಅವನ ಪ್ರಾಮಾಣಿಕತೆಯಿಂದಲೇ ಆತ ಲಕ್ಷ್ಮೀದೇವಿಯ ಕೃಪೆಗೆ ಪಾತ್ರನಾಗಿದ್ದನು. ವ್ಯಾಪಾರ ಮುಗಿಸಿ ಮನೆಗೆ ಬಂದ ವ್ಯಾಪಾರಿ ಒಂಟೆಯ ಮಾಲೀಕನಿಗೆ ಬಾಡಿಗೆಯನ್ನು ಕೊಡಲು ಹೋದನು. ಆದರೆ ಒಂಟೆಯ ಮಾಲೀಕ ಈಗ ಮುಂಚೆ ಹೇಳಿದ್ದಕ್ಕಿಂತ ದುಪ್ಪಟ್ಟು ಹಣವನ್ನು ಕೇಳತೊಡಗಿದನು. ಆಗ ವ್ಯಾಪಾರಿಗೂ ಹಾಗೂ ಒಂಟೆಯ ಮಾಲಿಕನಿಗೂ ಒಂದು ದೊಡ್ಡ ವಾಗ್ವಾದವಾಯಿತು. ವ್ಯಾಪಾರಕ್ಕೆಂದು ಹೋದಾಗ ವ್ಯಾಪಾರಿ ತನ್ನೆಲ್ಲ ಸರಕುಗಳನ್ನು ಒಂಟೆಯ ಮೇಲೆ ಹೇರಿದ್ದನು. ಅದಕ್ಕಾಗಿ ಒಂದು ಪಟ್ಟು ಬಾಡಿಗೆಯನ್ನು ಕೊಡಬೇಕು. ದಾರಿಮಧ್ಯೆದಲ್ಲಿ ಬಿಸಿಲಿನ ಬೇಗೆ ತಾಳಲಾರದೆ ವ್ಯಾಪಾರಿ ಒಂಟೆಯ ನೆರಳಿನಲ್ಲಿ ವಿಶ್ರಮಿಸುತ್ತಿದ್ದನು. ಅದಕ್ಕಾಗಿ ಇನ್ನೊಂದು ಪಟ್ಟು ಬಾಡಿಗೆ ಕೊಡಬೇಕು. ಈ ರೀತಿ ವ್ಯಾಪಾರಿ ತನಗೆ ಮುಂಚೆ ಹೇಳಿದ್ದಕ್ಕಿಂತ ಎರಡು ಪಟ್ಟು ಬಾಡಿಗೆ ಕೊಡಬೇಕು ಎಂಬುದು ಒಂಟೆಯ ಮಾಲೀಕನ ವಾದವಾಗಿತ್ತು. ಅವನ ಹುಚ್ಚು ವಾದ ವಿವಾದವಾಗಿ ನ್ಯಾಯಕ್ಕಾಗಿ ಶ್ರೀಕೃಷ್ಣ ದೇವರಾಯನ ಆಸ್ಥಾನವನ್ನು ಪ್ರವೇಶಿಸಿತು.

ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada

                               ವ್ಯಾಪಾರಿ ಮತ್ತು ಒಂಟೆ ಮಾಲೀಕರಿಬ್ಬರ ದೂರುಗಳನ್ನು ಆಲಿಸಿದ ಶ್ರೀಕೃಷ್ಣ ದೇವರಾಯನಿಗೆ ಹೇಗೆ ಈ ವಿಷಯವನ್ನು ಪರಿಹರಿಸಬೇಕು ಎಂಬುದು ತೋಚದಾಯಿತು. ಅದಕ್ಕಾಗಿ ಆತ ಈ ವಿವಾದವನ್ನು ಬಗೆಹರಿಸಲು ತನ್ನ ಆಸ್ಥಾನದ ಅಷ್ಟ ದಿಗ್ಜಗರಲ್ಲಿ ಒಬ್ಬರಾದ ವಿಕಟಕವಿ ತೆನಾಲಿ ರಾಮಕೃಷ್ಣನಿಗೆ ಹೇಳಿದನು. ರಾಮಕೃಷ್ಣ ತನ್ನದೇ ಆತ ರೀತಿಯಲ್ಲಿ ವಿಚಾರಣೆಯನ್ನು ಆರಂಭಿಸಿದನು. ರಾಮಕೃಷ್ಣ ಒಮ್ಮೆ ವ್ಯಾಪಾರಿ ಮತ್ತು ಒಂಟೆ ಮಾಲೀಕರ ಕಡೆಗೆ ತೀಕ್ಷ್ಣವಾಗಿ ನೋಡಿದನು.

ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada

ವ್ಯಾಪಾರಿ : ಪ್ರಭು, ನಾನು ಒಂಟೆಯ ಮಾಲೀಕನಿಂದ ಮೋಸ ಹೋಗಿರುವೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ.

ತೆನಾಲಿ ರಾಮಕೃಷ್ಣ : ಸುಮ್ಮನಿರಯ್ಯ ನೀನು, ಸುಮ್ಮನೆ ಗೋಳಾಡಬೇಡ. ಮೊದಲು ನಾನು ಒಂಟೆಯ ಮಾಲೀಕನನ್ನು ವಿಚಾರಿಸಬೇಕು. (ಒಂಟೆಯ ಮಾಲೀಕನ ಕಡೆಗೆ ನೋಡುತ್ತಾ) ಎಲ್ಲಿದೆಯಯ್ಯ ನೀನು ಬಾಡಿಗೆಗೆ ಕೊಟ್ಟ ಒಂಟೆ?

ಒಂಟೆಯ ಮಾಲೀಕ : ಪ್ರಭು ಬಾಡಿಗೆ ಕೊಟ್ಟ ಒಂಟೆಯನ್ನು ಅರಮನೆಯ ಆಚೆ ತಂದು ನಿಲ್ಲಿಸಿರುವೆ...

ರಾಮಕೃಷ್ಣ : ಸರಿ ಒಳ್ಳೆಯದಾಯಿತು. ನೀನು  ಒಂಟೆಯನ್ನು ವ್ಯಾಪಾರಿಗೆ ಬಾಡಿಗೆ ನೀಡಿದ್ದೆ ಎಂಬುದನ್ನು ಸಾಬೀತುಪಡಿಸಲು ಅದನ್ನು ಸಭೆಗೆ ಕರೆತಂದಿರುವೆ.

(ನೋಡಲು ವಿಚಿತ್ರವಾಗಿ ಕಾಣುತ್ತಿದ್ದ ರಾಮಕೃಷ್ಣನನ್ನು ನೋಡಿ ಅವನನ್ನು ಅರೆಹುಚ್ಚನೆಂದು ಭಾವಿಸಿ ಒಂಟೆಯ ಮಾಲೀಕ ತನಗೆ ಎರಡು ಪಟ್ಟು ಬಾಡಿಗೆ ಬರುವುದು ಖಚಿತವೆಂದು ಒಳಗೊಳಗೆ ಹಿಗ್ಗಿದನು.)

ರಾಮಕೃಷ್ಣ : (ವ್ಯಾಪಾರಿಗೆ) ಮೊದಲು ಒಂಟೆಯನ್ನು ಮಾತ್ರ ಬಾಡಿಗೆ ಪಡೆದಿದ್ದೆ. ಅದೇ ರೀತಿ ಬಾಡಿಗೆ ನೀಡಲು ಒಪ್ಪಿಕೊಂಡಿದ್ದೆ. ಆದರೆ ನಂತರ ಬಿಸಿಲಿನ ಬೇಗೆ ತಾಳಲಾರದೆ ನೀನು ಅದರ ನೆರಳಿನಡಿಯಲ್ಲಿ ಸಾಕಷ್ಟು ಸಲ ವಿಶ್ರಾಂತಿ ಪಡೆದಿರುವೆ. ಇದು ನಿಜವೇ?

ವ್ಯಾಪಾರಿ : ಹೌದು ಪ್ರಭು...

ರಾಮಕೃಷ್ಣ : ಹಾಗಾದರೆ ನೀನು ನೆರಳಿನ ಬಾಡಿಗೆಯನ್ನು ಸಹ ಕಟ್ಟಬೇಕಲ್ಲವೇ?

ರಾಮಕೃಷ್ಣನ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬುದು ತೋಚದೆ ವ್ಯಾಪಾರಿ ತಲೆ ತಗ್ಗಿಸಿ ಸುಮ್ಮನೆ ನಿಂತನು. ಆದರೆ ಒಂಟೆಯ ಮಾಲೀಕ ತನಗೆ ಎರಡು ಪಟ್ಟು ಬಾಡಿಗೆ ಸಿಗುವುದೆಂದು ಬೀಗುತ್ತಿದ್ದನು. ಆಗ ರಾಮಕೃಷ್ಣ ಅವನ ಮೋಸವನ್ನು ಬಯಲಿಗೆಳೆದು ಅವನ ಸೊಕ್ಕನ್ನು ಮುರಿದನು.

ರಾಮಕೃಷ್ಣ : ಒಂಟೆಯನ್ನು ಎಲ್ಲಿ ಕಟ್ಟಿರುವೆ?

ಒಂಟೆಯ ಮಾಲೀಕ : ಅರಮನೆಯ ಹೊರಗಿನ ಉದ್ಯಾನದಲ್ಲಿ ಪ್ರಭು.

ರಾಮಕೃಷ್ಣ : ಸರಿಸರಿ ಹಾಗೆಯೇ ಅದೇ ಸ್ಥಳದಲ್ಲಿ ಆ ಒಂಟೆಯ ನೆರಳನ್ನು ಸಹ ತಂದು ಕಟ್ಟಿಬಿಡು.

                                            ರಾಮಕೃಷ್ಣನ ಈ ಮಾತಿಗೆ ಒಂಟೆಯ ಮಾಲೀಕ ತಬ್ಬಿಬ್ಬಾಗಿ ಬೆವರಲು ಪ್ರಾರಂಭಿಸಿದನು. ಆಗ ಕೋಪದಿಂದ ರಾಮಕೃಷ್ಣ ಒಂಟೆಯ ಮಾಲೀಕನಿಗೆ "ಸುಮ್ಮನೆ ನಿಲ್ಲಬೇಡ. ಬೇಗನೆ ಹೋಗಿ ಒಂಟೆಯ ನೆರಳನ್ನು ತಂದು ಕಟ್ಟಿ ನಿನ್ನ ಬಾಡಿಗೆಯನ್ನು ತೆಗೆದುಕೊಂಡು ಹೋಗು. ಸುಮ್ಮನೆ ಸಮಯವನ್ನು ವ್ಯರ್ಥ ಮಾಡಬೇಡ..." ಎಂದು ಗದರಿದನು. ಒಂಟೆಯ ನೆರಳನ್ನು ತಂದು ಕಟ್ಟಲು ಸಾಧ್ಯವಿಲ್ಲ ಎಂಬುದು ಅರಿವಾದಾಗ ಮಾಲೀಕ ನಡಗಲು ಪ್ರಾರಂಭಿಸಿದನು. ರಾಮಕೃಷ್ಣ ಮತ್ತೊಮ್ಮೆ ಗದರಿದಾಗ ಒಂಟೆಯ ಮಾಲೀಕ ತಾನು ಮಾಡಿದ ಮೋಸವನ್ನು ಒಪ್ಪಿಕೊಂಡು ಕ್ಷಮೆ ಕೇಳಿದನು. ಆಗ ರಾಮಕೃಷ್ಣ ಅವನಿಗೆ ಅರ್ಥವಿರದ ನೆರಳಿನ ಬಾಡಿಗೆಯನ್ನು ಕೇಳಿ ವ್ಯಾಪಾರಿಗೆ ಕಿರುಕುಳ ಕೊಟ್ಟಿದ್ದಕ್ಕಾಗಿ, ರಾಜಸಭೆಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಿದನು. ಈ ರೀತಿ ರಾಮಕೃಷ್ಣ ಒಂಟೆಯ ಮಾಲೀಕನ ಸೊಕ್ಕನ್ನು ಮುರಿದು ವ್ಯಾಪಾರಿಗೆ ನ್ಯಾಯವನ್ನು ಕೊಡಿಸಿದನು. ರಾಮಕೃಷ್ಣನ ವಿವೇಚನಾತ್ಮಕ ನ್ಯಾಯ ತೀರ್ಮಾನಕ್ಕೆ ಶ್ರೀಕೃಷ್ಣ ದೇವರಾಯ ಮನಸೋತು ಅವನಿಗೆ ಬಂಗಾರದ ಹಾರವನ್ನು ಕಾಣಿಕೆಯಾಗಿ ನೀಡಿದನು...To be Continued...

Click Here To Read Next Part ⇩⇩



ನೆರಳಿನ ಬಾಡಿಗೆ : ತೆನಾಲಿ ರಾಮಕೃಷ್ಣನ.ಹಾಸ್ಯಕಥೆಗಳು - Stories of Tenali Ramakrishna in Kannada
Blogger ನಿಂದ ಸಾಮರ್ಥ್ಯಹೊಂದಿದೆ.